ಲೇಖನ್ ನಾಗರಾಜ್ ಎಂಬುದಾಗಿ ಕಾವ್ಯನಾಮ ಇಟ್ಟಕೊಂಡ ನಾಗರಾಜ್ ಉದಯೋನ್ಮಖ ಲೇಖಕರು. ಟಿವಿ ಧಾರಾವಾಹಿಗಳಿಗೆ ಸಂಭಾಷಣೆ ಬರೆಯುತ್ತಿರುವ ಇವರು ಭವಿಷತ್ತಿನ ಭರವಸೆಯ ಲೇಖಕರಾಗಿದ್ದು, ಅವರ ಸಾಧನೆಯ ಕುರಿತು ಲೇಖಕರಾದ ಗಣಪತಿ ಹೆಗಡೆ ಕಪ್ಪೆಕೆರೆ ಅವರು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ನಮ್ಮ ಊರಿನಲ್ಲಿ ಸೀತು ಎಂಬ ಈಡಿಗ ಸಮುದಾಯಕ್ಕೆ ಸೇರಿದ ಮಹಿಳೆ ಇದ್ದಾಳೆ. ನನ್ನಮ್ಮನ ಕ್ಲೋಸ್ ಫ್ರೆಂಡ್. ದುರಾದೃಷ್ಟವಶಾತ್ ಸೀತು ಚಿಕ್ಕ ವಯಸ್ಸಿನಲ್ಲೇ ವಿಧವೆಯಾದವಳು. ಇಬ್ಬರು ಗಂಡುಮಕ್ಕಳನ್ನು ಬದುಕಿನಲ್ಲಿ ಹೋರಾಟದಿಂದ ದೊಡ್ಡವರನ್ನಾಗಿಸಿದ್ದಾಳೆ. ಆಕೆಯ ಗಂಡ ಊರಿನ ಯಕ್ಷಗಾನದಲ್ಲಿ ವೇಷ ಮಾಡುತ್ತಿದ್ದನಂತೆ. (ನಾವು ಈ ಊರಿಗೆ ಬರುವ ಮುನ್ನವೇ ಆತ ಅಸುನೀಗಿದ್ದ). ಆತನ ಕಲಾಪ್ರೀತಿ ಇಬ್ಬರು ಮಕ್ಕಳಲ್ಲೂ ಮುಂದುವರೆದಿದೆ.
ಹಿರಿಯವ ನರಸಿಂಹ. ಈತ ಸಾಮಾಜಿಕ ನಾಟಕಗಳನ್ನು ಬರೆದ ಅನುಭವ ಉಳ್ಳವ. ಸಾಮಾಜಿಕವಾಗಿ ತೊಡಗಿಸಿಕೊಂಡವ. ಕಿರಿಯವ ನಾಗರಾಜ. ಈತ ಲೇಖನ್ ನಾಗರಾಜ್ ಎಂಬುದಾಗಿ ಕಾವ್ಯನಾಮ ಇಟ್ಟುಕೊಂಡಿದ್ದಾನೆ. ರಜಿಯಾ ರಾಮ್ ಮುಂತಾದ ಟಿವಿ ಧಾರಾವಾಹಿಗಳಿಗೆ ಸಂಭಾಷಣೆ ಬರೆದವ. ಕೆಲವು ಸಮಯದ ಹಿಂದೆ ನಮ್ಮ ಊರಿನ ಶಾಲಾ ವಾರ್ಷಿಕೋತ್ಸವದಲ್ಲಿ ಈತನನ್ನು ಸನ್ಮಾನಿಸಲಾಗಿದೆ. ಲೇಖನ್ ನಾಗರಾಜ್ ನನ್ನ ತಂದೆಯವರ ಕುರಿತು ಅಪಾರ ಗೌರವ ಉಳ್ಳವ. ಪುರಾಣ, ಕಾವ್ಯಗಳ ಕುರಿತು ಏನೇ ಮಾಹಿತಿ ಬೇಕಿದ್ದರೂ ನನ್ನ ತಂದೆಯವರನ್ನು (ದಿವಂಗತ ಕಪ್ಪೆಕೆರೆ ಮಹಾದೇವ ಹೆಗಡೆ – ಯಕ್ಷಗಾನ ಕಲಾವಿದರು) ಸಂಪರ್ಕಿಸುತ್ತಿದ್ದ. ಈತ ತನ್ನ ಬರವಣಿಗೆಯ ಪ್ರಾರಂಭಿಕ ದಿನಗಳಲ್ಲೇ ನನ್ನ ತಂದೆಯವರ ಸಂದರ್ಶನ ಮಾಡಿದ್ದು , ಅದು ‘ಆಕೃತಿ ಕನ್ನಡ’ದಲ್ಲಿ ಪ್ರಕಟವಾಗಿದೆ. ಪುರಾಣ ಪುರುಷರ ಬದುಕನ್ನು ಆಧಾರವಾಗುಳ್ಳ ಸಂಭಾಷಣೆಗಳು ಹೆಚ್ಚು ಆಳ(depth) ಹೊಂದಿರುತ್ತವೆ ಎಂಬುದನ್ನು ಕಂಡುಕೊಂಡಿದ್ದಾನೆ. ಹಾಗೆಯೇ ಯೂಥ್ಸಗೆ ಪ್ರಿಯವಾಗುವ ಪಂಚಿಂಗ್ ಡೈಲಾಗ್ಸ್ ಸಹ ಬರೆದಿದ್ದಾನೆ.

ಕೆಲವು ಸಿನಿಮಾಗಳಿಗೂ ಸಂಭಾಷಣೆ ಬರೆದು, ಒಂದೊಳ್ಳೆ ಬ್ರೇಕ್ ಗಾಗಿ ಹೋರಾಡುತ್ತಿದ್ದಾನೆ. ಈಗಲೂ ಟಿವಿ ಧಾರಾವಾಹಿಗಳಿಗೆ ಸಂಭಾಷಣೆ ಬರೆಯುತ್ತಿದ್ದಾನೆ. ನೀವೂ ಬರವಣಿಗೆ ಟ್ರೈ ಮಾಡುತ್ತೀರಾ ಎಂದು ನನಗೆ ಟಿವಿ ಧಾರಾವಾಹಿಗಳ ಬರವಣಿಗೆಗೆ ಆಫರ್ ಮಾಡಿದ. ನಾನು ಮೊದಲು ಯಕ್ಷಗಾನದಲ್ಲಿ ಮುಂದುವರಿಯುವ ಎಂದು ಸುಮ್ಮನಾದೆ. ಈತನಿಗೆ ಟಿವಿ ಧಾರಾವಾಹಿಗಳಿಗೆ ಸಂಬಂಧಿಸಿದ ಅವಾರ್ಡ್ಗಳೂ ಸಹ ಸಂದಿವೆ. ಉದಯೋನ್ಮುಖ ಪ್ರತಿಭೆ.
ಲೇಖನ್ ನಾಗರಾಜ್ ಸಾಧನೆಯ ಹಾದಿ ಸುಗಮವಾಗಿ ಸಾಗಲಿ ಎಂದು ಹಾರೈಸುತ್ತೇನೆ. ಅಂತೆಯೇ ನರಸಿಂಹನ ಬದುಕು ಸುಖಮಯವಾಗಿ ನಡೆಯಲಿ ಎಂದು ಹಾರೈಸುತ್ತೇನೆ.
- ಗಣಪತಿ ಹೆಗಡೆ ಕಪ್ಪೆಕೆರೆ
