ಕಲಾವಿದ ‘ಕಪ್ಪೆಕೆರೆʼ ಮಹಾದೇವ ಹೆಗಡೆ ಹರಡಸೆ ಸಂದರ್ಶನ



ಯಕ್ಷಗಾನ ಕಲಾವಿದರಾದ ‘ಕಪ್ಪೆಕೆರೆʼ ಮಹಾದೇವ ಹೆಗಡೆ ಹರಡಸೆ ಅವರ ಸಾಧನೆಯ ಕುರಿತು ಆಕೃತಿಕನ್ನಡದಲ್ಲಿ ಲೇಖನ್ ನಾಗರಾಜ್ ಅವರು ಸಂದರ್ಶನ ಮಾಡಿದ್ದರು, ಅವರೊಂದಿಗೆ ಮಾತು …
ದೇವಾನು ದೇವತೆಗಳ ಪೌರಣಿಕ, ಪುರಾಣ ಪ್ರಸಿದ್ಧ ಕಥೆಗಳನ್ನ ನಟನೆ ಮೂಲಕ ರಂಗದಮೇಲೆ ತೋರಿಸಿ ಕೊಟ್ಟಂತಹ ಮೊದಲ ಅಭಿನಯ ಕಲೆ “ಯಕ್ಷಗಾನ ಕಲೆ”. ಒಂದು ಕಾಲದಲ್ಲಿ ʼಯಕ್ಷಗಾನʼ ಎನ್ನುವುದು ಎಲ್ಲಾ ದೃಶ್ಯ ಮಾಧ್ಯಮಗಳಿಗಿಂತ ದೊಡ್ಡ ಹಾಗೂ ನೈಜ ಮಾಧ್ಯಮವಾಗಿತ್ತು. ಇದರಲ್ಲಿ ಕಲಾ ಜೀವನ ಕಂಡವರು ಬಹಳಷ್ಟು ಮಂದಿ ಇದ್ದಾರೆ.ಅಭಿಮಾನ ಗಳಿಸಿ ಹೆಸರು ಉಳಿಸಿಕೊಂಡಂತಹ ಕಲಾವಿದರು ತುಂಬಾ ಜನ ಇದ್ದಾರೆ. ಇದನ್ನು ʼಸುಂದರ ಕರಾವಳಿಯ ಅಚ್ಚು-ಮೆಚ್ಚಿನ ಸಾಂಸ್ಕೃತಿಕ ಕಲೆʼಯೆಂದೆ ಕರೆಯುತ್ತಾರೆ. ಕರಾವಳಿಯ ಭಾಗಗಳಿಗೆ ಹೋದರೆ ಬಹಳಷ್ಟು ಹಿರಿಯ ಯಕ್ಷಗಾನ ಕಲಾವಿದರು ನಮ್ಮ ಕಣ್ಣಿಗೆ ಕಾಣ ಸಿಗುತ್ತಾರೆ. ಅಂತಹವರಲ್ಲೊಬ್ಬರಾದ ಅಪರೂಪದ ಕಲಾವಿದರು ‘ಕಪ್ಪೆಕೆರೆʼ #ಮಹಾದೇವ_ಹೆಗಡೆ_ಹರಡಸೆ. ನಮ್ಮ ʼಆಕೃತಿ ಕನ್ನಡ” ಬಳಗದಿಂದ ಅವರ ಒಂದು ಸುಂದರ ಸಂದರ್ಶನ.

(ಮಹಾದೇವ ಹೆಗಡೆ ಅವರೊಂದಿಗಿನ ಸಂದರ್ಶನದಲ್ಲಿ ಆಕೃತಿಕನ್ನಡದ ಲೇಖಕ ಲೇಖನ್ ನಾಗರಾಜ್ )

ಲೇಖನ್ ನಾಗರಾಜ್: ನಮಸ್ತೆ ಮಹಾದೇವ ಹೆಗಡೆಯವರೆ, ನಮ್ಮ “ಆಕೃತಿ ಕನ್ನಡ”ದ ನಿಮ್ಮ ಸಂದರ್ಶನಕ್ಕೆ ಅವಕಾಶ ಮಾಡಿ ಕೊಟ್ಟಿದಕ್ಕೆ ತುಂಬಾ ಧನ್ಯವಾದಗಳು. ಮೊದಲನೆಯದಾಗಿ ನಿಮ್ಮ ಬಾಲ್ಯ ಹಾಗೂ ನಿಮ್ಮ ತಂದೆ ತಾಯಿಗಳ ಬಗ್ಗೆ ಒಂದು ಕಿರು ಪರಿಚಯ ಹೇಳಿ…..?

ಮಹಾದೇವ ಹೆಗಡೆ:
ನಮಸ್ಕಾರ, ನನ್ನ ಹೆಸರು ಮಹಾದೇವ ಹಗಡೆ. ನಾನು ೧೯೪೯ ಜನವರಿ ೬ ಕ್ಕೆ ಹೊನ್ನಾವರದ ಕಪ್ಪೆಕೆರೆಯಲ್ಲಿ ಹುಟ್ಟಿದ್ದು. ನಮ್ಮ ತಂದೆ ಈಶ್ವರ್‌ ಹೆಗಡೆ, ತಾಯಿ ಗೋಪಮ್ಮ. ೮ ಜನ ಮಕ್ಕಳಲ್ಲಿ ಒಂದು ಹೆಣ್ಣು ೭ಗಂಡು.ಅದರಲ್ಲಿ ೫ ನೇ ಯವನಾಗಿ ನಾನು ಹುಟ್ಟಿದ್ದು. ಆವತ್ತು ತುಂಬಾ ಬಡತನ ಪರಿಸ್ಥಿತಿ ಎಲ್ಲರಿಗೂ ಗೊತ್ತಿರುವಂತದೆ ಅದು. ಬಸ್‌ ಸೌಕರ್ಯ, ವಾಹನ ಸೌಕರ್ಯವಾಗಲಿ ಇಂದಿನ ಥರ ಮನೆ ಬಾಗಿಲಿಗೆ ಬರೊ ಹಾಗೆ ಇರ್ಲಿಲ್ಲ. ನಮ್ಮ ತಂದೆ ತಾಯಿ ಇರೊ ಚಿಕ್ಕ ಜಮೀನನಲ್ಲೆ ನಮ್ಮೆಲ್ಲರ ಜೀವನ ನೋಡಿಕೊಳ್ಳುತ್ತಿದ್ರು.

ಲೇಖನ್ ನಾಗರಾಜ್: ನಿಮ್ಮ ಅಂದಿನ ದಿನಗಳ ಬಗ್ಗೆ ಹೇಳಿ….?

ಮಹಾದೇವ ಹೆಗಡೆ : ಅಂದಿನ ದಿನಗಳಲ್ಲಿ ನಮ್‌ ಸಂಸಾರ ದೊಡ್ಡದಾಗಿದ್ರಿಂದ ಆದಾಯವು ಹೇಳುವಷ್ಟು ಬರ್ತಾ ಇರ್ಲಿಲ್ಲ. ಒಬ್ರಿಗೆ ಒಂದೊತ್ತು ಊಟ ಸಿಕಿದ್ರೆ, ಮತ್ತೊಬ್ರಿಗೆ ಇನ್ನೊಂದು ಹೊತ್ತು ಊಟ ಹೀಗಿತ್ತು ಅಂದಿನ ನಮ್ಮ ಜೀವನ. ನಾನು ಹತ್ತನೆ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿ ಅರ್ಧಕ್ಕೆ ನಿಲ್ಲಿಸಿದೆ.

ಲೇಖನ್ ನಾಗರಾಜ್: ಯಕ್ಷ ಗಾನದ ಮೇಲೆ ನಿಮಗೆ ಆಸಕ್ತಿ ಬಂದಿದ್ದು ಹೇಗೆ…..?

ಮಹಾದೇವ ಹೆಗಡೆ: ಯಕ್ಷಗಾನದಮೇಲೆ ನಮ್ಗೆ ಮೊದಲಿಂದಲೂ ಒಂಥರಾ ಆಸಕ್ತಿ ಇತ್ತು. ಯಾಕಂದ್ರೆ “ಶ್ರೀ ಕ್ಷೇತ್ರ ಇಡುಗುಂಜಿ ಯಕ್ಷಗಾನ” ಮೇಳದವ್ರು ನಮ್ಮನೆ ಮುಂದಿನ ಬಯಲಲ್ಲಿ ಪ್ರತಿವರ್ಷ ಯಕ್ಷಗಾನ ಮಾಡೋಕೆ ಬರ್ತಾ ಇದ್ರು, ಟೆಂಟ್‌ ಹಾಕ್ತಿದ್ರು. ಆಗ ಅದನ್ನ ನೋಡಿ ನೋಡಿ, ನಾವು ಬೆಳೀತಾ ಬೆಳೀತಾ #ಯಕ್ಷಗಾನ_ಕಲೆ ಮೇಲೆ ವಿಶೇಷವಾದ ಆಸಕ್ತಿ ನಮ್‌ ಮನ್ಸಲ್ಲಿ ಬಂತು. ನಮ್‌ ಅಣ್ಣ ಸುಭ್ರಾಯ್‌ ಭಾಗವತ್ ಕೂಡ ಯಕ್ಷಗಾನದಲ್ಲಿ ಭಾಗವತಿಗೆ ಮಾಡುತ್ತಿದ್ದರು. ಅದನ್ನು ನೋಡಲು ನಾನು ಸಹ ಅವರೊಂದಿಗೆ ಹೋಗುತ್ತಿದ್ದೆ.

ಲೇಖನ್ ನಾಗರಾಜ್ : ನಿಮ್ಗೆ ತಿಳಿದಿರೊ ಪ್ರಕಾರ ಅಂದಿನ ಕಾಲದಲ್ಲಿ ಯಕ್ಷಗಾನ ಕಲೆ ಯಾವ ಥರ ಹೆಸರುವಾಸಿಯಾಗಿತ್ತು….?

ಮಹಾದೇವ ಹೆಗಡೆ: ಆಗ ನಾವ್‌ ಚಿಕ್ಕವರು, ಅಂದಿನ ದಿನಗಳಲ್ಲಿ ನಮಗೆ ತಿಳಿದ ಮಟ್ಟಿಗೆ ಯಕ್ಷಗಾನವೆ ಒಂದು ಮುಖ್ಯ ದೃಶ್ಯ ಮಾಧ್ಯಮ. ನಮ್‌ ಹಳ್ಳಿ ಕಡೆ ಟಿ.ವಿ ಮಾಧ್ಯಮ, ನಾಟಕಗಳು ತುಂಬಾ ಕಡಿಮೆಯಾಗಿತ್ತು. ಶ್ರವಣ ಮಾಧ್ಯಮವಾಗಿ ಹೆಚ್ಚಾಗಿ ರೇಡಿಯೊ ಕಾಲವಾಗಿತ್ತು. ಕಪ್ಪು ಬಿಳುಪಿನ ಕಾಲ ಅದು. ಯಾವುದೇ ಹೊರಗಿನ ವಿಷಯವನ್ನಾದ್ರು ರೇಡಿಯೊದಲ್ಲೆ ಕೇಳಿ ತಿಳಿದುಕೊಳ್ಳಬೇಕಾಗಿತ್ತು. ಆ ಸಮಯದಲ್ಲಿ ಯಕ್ಷಗಾನವೆಂಬುದು ಅಭಿನಯ ಹಾಗೂ ಮನರಂಜನೆ ಜೊತೆಗೆ ಉತ್ತಮ ಪ್ರಚಾರ ದೃಶ್ಯ ಮಾಧ್ಯಮವಾಗಿ ಜನರ ಮನ್ಸನ್ನ ಗೆದ್ದಿತ್ತು.

This slideshow requires JavaScript.

ಲೇಖನ್ ನಾಗರಾಜ್: ಈ ರಂಗಕ್ಕೆ ನೀವು ಎಷ್ಟನೆ ವಯ್ಯಸ್ಸಿಗೆ ಹೆಜ್ಜೆ ಇಟ್ಟಿದ್ದು. ಹಾಗೂ ಈ ರಂಗದಲ್ಲಿ ನೀವು ಮಾಡಿದ ಮೊದಲ ಪಾತ್ರ ಮತ್ತು ಆ ಪಾತ್ರದ ಬಗ್ಗೆ ಜನಾಭಿಪ್ರಾಯ ಹೇಗಿತ್ತು…..?

ಮಹಾದೇವ ಹೆಗಡೆ : ನಾನು ಸುಮಾರು ೧೪ -೧೫ ನೇ ವಯಸ್ಸಲ್ಲಿ. ನಮ್‌ ಊರಿಂದ ೧೫ ಕಿ.ಮೀ ದೂರದಲ್ಲಿ ʼಗುಂಡಬಾಳʼ ಅಂತಾ ಇದೆ. ಅಲ್ಲಿ ಪ್ರತಿ ವರ್ಷ ಇಂದಿಗೂ ಸಹ ಸತತ ೬ತಿಂಗಳುಗಳ ಕಾಲ ಯಕ್ಷಗಾನ ದಿನನಿತ್ಯ ನಿರಂತರವಾಗಿ, ಹರಕೆ ಆಟ ನಡಿತಾ ಇರುತ್ತದೆ. ಅದಕ್ಕೆ ಗುಂಡಬಾಳ ಕ್ಷೇತ್ರವನ್ನ ಭಾರತದಲ್ಲೆ “ಯಕ್ಷಗಾನ ಕಾಶಿ” ಅಂತಾ ಕರೆಯುತ್ತಾರೆ. ಬಹಳಷ್ಟು ಕಲಾವಿದರನ್ನ ಕೊಟ್ಟಂತಹ ರಂಗಸ್ಥಳ ಅದು. ಅಲ್ಲಿ ನಮ್‌ ಅಣ್ಣ ಸುಭ್ರಾಯ ಭಾಗವತರಾಗಿದ್ರು. ಆಗ ವಾಹನ ಸೌಕರ್ಯ ಇಲ್ಲದ ಕಾರಣ ೧೫ ಕೀ.ಮೀ ನಡೆದೆ ಹೋಗ್ಬೆಕಿತ್ತು. ನಾನು ಅವರೊಟ್ಟಿಗೆ ದಿನವೂ ಹೋಗಿ ಅಲ್ಲಿ ಸಣ್ಣ ಸಣ್ಣ ವೇಷ ಮಾಡ್ತಿದ್ದೆ. ನಂತರ ನಾನು ಮುಖ್ಯ ವೇಷಧಾರಿಯಾಗಿ ಮಾಡಿದ್ದು ನಮ್‌ ಊರಲ್ಲಿ. ಒಮ್ಮೆ ನಮ್‌

ಊರಿನವರೆಲ್ಲಾ ಸೇರಿ ʼ#ರತಿ_ಕಲ್ಯಾಣʼ ಯಕ್ಷಗಾನ ಮಾಡಿದ್ರು. ಆವತ್ತು ಏನಾಯ್ತು ಅಂದ್ರೆ. ಅದರಲ್ಲಿ ದ್ರೌಪದಿ ಸ್ತ್ರೀ ವೇಷ ಪಾತ್ರಧಾರಿ ಬರ್ಲೆ ಇಲ್ಲಾ. ಆಗ ಊರಿನವರೆಲ್ಲಾ ಸೇರಿ ನಂಗೆ ಹಟ ಹಿಡಿದ್ರು. ಇದು ಊರಿನ ಗೌರವದ ವಿಚಾರ ಯಕ್ಷಗಾನ ನಿಂತ್ರೆ ನಮ್‌ ಮರ್ಯಾದೆ ಹೋದ ಹಾಗೆ ಹೇಗಾದ್ರೂ, ಸರಿ ಈ ಪಾತ್ರ ನೀನೆ ಮಾಡ್ಬೇಕು ಅಂತಾ ಹೇಳಿದ್ರು. ಆಗ ನಾನು ʼರತಿ ಕಲ್ಯಾಣʼ ಕಥೆ ನಂಗೆ ಗೊತ್ತಿದ್ರಿಂದ, ಊರಿನ ಮರ್ಯಾದೆ ಪ್ರಶ್ನೆ ಕೂಡ ಹೌದು. ಅದಕ್ಕೆ ಒಪ್ಕೊಂಡೆ, ಸ್ತ್ರೀ ವೇಷಕ್ಕೆ ಬಣ್ಣವೂ ಹಚ್ಚಿದೆ. ನನ್ನ ದ್ರೌಪದಿ ಪಾತ್ರ ನೋಡಿದಂತ ನಮ್‌ ಜನರಿಂದ ನಾನು ಪಾತ್ರ ಮಾಡೋದಕ್ಕೆ ಸರಿಯಾಗಿದೀನಿ, ಪೌರಾಣಿಕ ಪಾತ್ರಕ್ಕೆ ಜೀವ ತುಂಬ ಬಲ್ಲ ಇವನು ಅಂತಾ ಅಭಿಪ್ರಾಯ ಬಂತು. ಅದು ನಂಗೆ ತುಂಬಾ ಖುಷಿಯಾಯ್ತು.

ಲೇಖನ್ ನಾಗರಾಜ್ : ರತಿ ಕಲ್ಯಾಣದ ನಂತರ ನಿಮ್ಮ ಯಕ್ಷಗಾನ ಪ್ರಯಾಣ ಪಾತ್ರಗಳು ಹೇಗಿತ್ತು.

ಮಹಾದೇವ ಹೆಗಡೆ: ಅದಾದ ನಂತರ ಅಲ್ಲಲ್ಲಿ ಯಕ್ಷಗಾನಕ್ಕೆ ನನ್ನನ್ನ ಕರೆಯೋಕೆ ಶುರು ಮಾಡಿದ್ರು. ನನ್ನ ಎರಡನೇ ಪಾತ್ರ ಶ್ರೀಕೃಷ್ಣ ವೇಷಧಾರಿಯಾಗಿ ಮಾಡಿದೆ. ಅದು ತುಂಬಾ ಹೆಸರುವಾಸಿಯಾಯ್ತು. ನಂತರ ಎಲ್ಲಾ ಕಡೆ ಕರೆಯೋಕೆ ಶುರು ಮಾಡಿದ್ರು, ನಾನು ಹೋಗೊಕೆ ಶುರು ಮಾಡಿದೆ. ನನ್ಗೆ ಆದಾಯ ಅಂತಾ ಏನು ಇರ್ಲಿಲ್ಲಾ ಆದ್ರೆ, ಅವಕಾಶಗಳು ತುಂಬಾ ಸಿಕ್ತು. ಆಮೇಲೆ ನಾನು ಮೊದಲು ಬಣ್ಣ ಹಚ್ಚಿದ “ ಶ್ರೀ ಮುಖ್ಯಪ್ರಾಣ ಯಕ್ಷಗಾನ ಮಂಡಳಿ ಗುಂಡಬಾಳ ಯಕ್ಷಮೇಳ”ಕ್ಕೆ ಸೇರ್ಕೊಂಡೆ. ಅಲ್ಲಿ ದಿನ ನಿತ್ಯವೂ ಯಕ್ಷಭ್ಯಾಸ, ಕಥಾಭಾಗ, ಹಾವಾ-ಭಾವ, ನವರಸ ಎಲ್ಲವನ್ನೂ ತಿಳಿದುಕೊಂಡೆ. ಚಿಟ್ಟಾಣಿ ರಾಮಚಂದ್ರ ಹೆಗಡೆ, ಚಂದ್ರಹಾಸ್‌ ಹುಡುಗೋಡ್‌, ವಿಷ್ಣು ಭಟ್‌, ರಾಮಚಂದ್ರ ಯಾಜಿ ತುಂಬಾ ಜನ ಕಲಾವಿದರೊಟ್ಟಿಗೆ ಅಭಿನಯ ಮಾಡಿದೆ. ರಾತ್ರಿಯೆಲ್ಲಾ ಯಕ್ಷಗಾನ, ಹಗಲಲ್ಲಿ ನೃತ್ಯಾಭ್ಯಾಸ ಮಾಡ್ತಿದ್ದೆ. ೫  ವರ್ಷಗಳ ಕಾಲ ಅಲ್ಲಿ ಕಲಿತು. ನಂತರ #ಅಮೃತೇಶ್ವರಿ_ಯಕ್ಷಗಾನ_ಮಂಡಳಿ,ದಕ್ಷಿಣ ಕನ್ನಡ ಮೇಳಕ್ಕೆ ಸೇರ್ಕೊಂಡೆ. ಅದಾದ ಮೇಲೆ ಕಮಲಶೀಲೆ ಮೇಳ, ಪೆರ್ಡೂರ್‌ ಮೇಳಕ್ಕೆ ಸೇರಿದೆ. ಅಲ್ಲಿಂದ ಯಕ್ಷಗಾನವನ್ನ ನನ್ನ ಜೀವನದ ಒಂದು ಅಂಗವನ್ನಾಗಿ ಮಾಡ್ಕೊಂಡೆ.



ಲೇಖನ್: ನಿಮ್ಮ ಮುಂದಿನ ಯಕ್ಷಗಾನ ಜೀವನ ಹೇಗಿತ್ತು..?

ಮಹಾದೇವ ಹೆಗಡೆ: ನಂತರ ದಕ್ಷಿಣ ಕನ್ನಡದ ಮೇಳದಲ್ಲಿ ಸುಮಾರು ೧೦ ವರ್ಷಗಳ ಕಾಲ ಇದ್ದೆ. ಅಲ್ಲಿ ಶ್ರೀ ರಾಮಾಂಜನೇಯ, ಶನೀಶ್ವರ ಮಹಾತ್ಮೆ, ಚಂದ್ರಾವಳಿ ವಿಲಾಸ, ಶೂದ್ರ ತಪಸ್ವಿನಿ ಹೀಗೆ ಬಹಳಷ್ಟು ಯಕ್ಷಗಾನಗಳಲ್ಲಿ ಅಭಿನಯಿಸಿದೆ. ಒಳ್ಳೇಯ ಹೆಸರು ಬಂತು, ಜನ ನನ್ನ ಗುರುತಿಸಲು ಶುರು ಮಾಡಿದರು. ನನ್ನ ಕುಟುಂಬಕ್ಕೆ ನನ್ನಿಂದ ಸ್ವಲ್ಪ ಆದಾಯವು ಬರಲು ಶುರುವಾಯ್ತು. ಆಮೇಲೆ ನಾನು ಚಿಕ್ಕವನಿರುವಾಗ ನಮ್ಮ ಬಯಲಲ್ಲಿ ಯಕ್ಷಗಾನ ನೋಡಿದಂತಹ “ಶ್ರೀ ಮಹಾ ಗಣಪತಿ ಇಡುಗುಂಜಿ” ಮೇಳಕ್ಕೆ ಸದಸ್ಯನಾಗಿ ಸೇರಿದೆ. ಅಲ್ಲಿ ಶಂಭು ಹೆಗಡೆ (ಪರ್ವ ಚಿತ್ರದಲ್ಲಿ ವಿಷ್ಣುವರ್ಧನ್‌ ರವರ ತಂದೆಯಾಗಿ ಅಭಿನಯಿಸಿದ್ದಾರೆ.) ಅವರೊಂದಿಗೆ ಮುಖ್ಯಪಾತ್ರಗಳಲ್ಲಿ ಅಭಿನಯದೊಂದಿಗೆ, ಯಕ್ಷಗಾನ ಮಂಡಳಿ ಕೆಲವು ಜವಬ್ದಾರಿಗಳನ್ನು ನಾನೆ ನಿಭಾಯಿಸಲು ಶುರು ಮಾಡಿದೆ.

ಲೇಖನ್ ನಾಗರಾಜ್ : ನಿಮ್ಮ ಹಾಗೂ ಶಂಭು ಹೆಗಡೆಯವರ ಒಡನಾಟ ಹೇಗಿತ್ತು…?

ಮಹಾದೇವ ಹೆಗಡೆ: ನನಗೆ, ಶಂಭು ಹೆಗಡೆಯವರೊಂದಿಗೆ ಉತ್ತಮ ಒಡನಾಟವಿತ್ತು. ಅವರು ನಾನು ಸುಮಾರು 5 ವರ್ಷಗಳ ಕಾಲ ನಮ್ಮ ತಂಡದೊಂದಿಗೆ ದೇಶ ವಿದೇಶಗಳಲೆಲ್ಲಾ ನಮ್ಮ ಯಕ್ಷಗಾನವನ್ನ ಪ್ರದರ್ಶಿಸಿದೆವು. ʼಪಾಪಣ್ಣ ವಿಜಯ, ಶ್ರೀ ಕೃಷ್ಣಜಾಂಬವ, ಸುಧನ್ವಾರ್ಜುನʼದಂತಹ ಆಟಗಳನ್ನು ತುಂಬಾ ಕಡೆ ಪ್ರದರ್ಶನ ಮಾಡಿದ್ರು. ಹಲವು ಪೌರಾಣಿಕ ಪ್ರಸಂಗಗಳನ್ನು ಒಟ್ಟಾಗಿ ಮಾಡಿದೆವು. ನನ್ನ ಮದುವೆಯಾದ ವರ್ಷ ೧೯೮೨ ರಲ್ಲಿ ಬ್ಯಾರನ್‌ ಲ್ಲಿ ನಾವು ಮಾಡಿದಂತಹ “ಕಾರ್ತವೀರ್ಯಾರ್ಜುನ” ಯಕ್ಷಗಾನ ಅಂದಿನ ಕಾಲದಲ್ಲಿ ತುಂಬಾ ಹೆಸರುವಾಸಿಯಾಯ್ತು. ಅಲ್ಲಿ ನಮ್ಮ ಪಾತ್ರಕ್ಕೆ ಉತ್ತಮ ಪ್ರತಿಕ್ರಿಯೆ ಬಂತು. ಅದರಲ್ಲಿ ಅವರು ರಾಮನ ಪಾತ್ರಧಾರಿಯಾಗಿದ್ರೆ, ನಾನು ರಾವಣನ ವೇಷಧಾರಿಯಾಗಿದ್ದೆ. ಜೊತೆಗೆ ʼಸುಧನ್ವಾರ್ಜುನʼದಲ್ಲಿನ ನನ್ನ ಅರ್ಜುನನ ಪಾತ್ರಕ್ಕೆ “ಅಭಿನವ ಅರ್ಜುನ” ಎನ್ನುವಂತಹ ಬಿರುದು ಕೂಡ ಬಂತು. ಅದಾದ್ಮೇಲೆ ನಾನು “ಶ್ರೀ ಶಿರಸಿ ಮಾರಿಕಾಂಬ ಮೇಳ” ನನ್ನ ಅಧ್ಯಕ್ಷತೆಯಲ್ಲೆ ಪ್ರಾರಂಭ ಮಾಡಿದೆ. ಆಗ ನನ್ನ ಮತ್ತು ಶಂಭು ಹೆಗಡೆಯವರ ಮೇಳ ಬೇರೆ ಬೇರೆ ಆಯ್ತು. ಆದರೆ, ಕೊನೆಯವರೆಗೂ ನಮ್ಮಿಬ್ಬರ ಬಾಂಧವ್ಯ, ಒಡನಾಟ ಹಾಗೆಯೆ ಇತ್ತು.

ಲೇಖನ್ ನಾಗರಾಜ್ : ನಿಮ್ಮ ಅಧ್ಯಕ್ಷತೆಯಲ್ಲಿ ಮಾಡಿದಂತಹ ಯಕ್ಷಗಾನ ಅನುಭವ ಹೇಗಿತ್ತು…?

ಮಹಾದೇವ ಹೆಗಡೆ: ನಾನೆ ಮುಖ್ಯಸ್ಥನಾಗಿ 2 ವರ್ಷಗಳ ಕಾಲ ಶಿರಸಿ ಮೇಳವನ್ನ ನಡೆಸಿದೆ.ಸುಮಾರು ೧೨ ವರ್ಷಗಳ ಕಾಲ ತಿರುಗಾಟದಲ್ಲಿದ್ದೆವು. ಅಲ್ಲಿ ಕೂಡ ಪೌರಾಣಿಕ ಪಾತ್ರಗಳನ್ನು ಮಾಡ್ತಿದ್ದೆ. ವಾಲಿ ಸುಗ್ರೀವ ವಧೆ, ದ್ರೌಪದಿ ಕಲ್ಯಾಣ, ಮಾರುತಿ ಪ್ರತಾಪ, ದಕ್ಷಯಜ್ಞದಂತಹ ಆಟಗಳನ್ನು ನಾನೆ ಮಾಡಿಸಿದೆ. ವಾಲಿ ಮೋಕ್ಷ, ಲಂಕಾದಹನ, ಪಟ್ಟಾಭಿಷೇಕದಂತಹ ಪ್ರದರ್ಶನಗಳು ತುಂಬಾ ಹೆಸರನ್ನು ತಂದು ಕೊಟ್ಟಿತು. ನಂತರದ ದಿನಗಳಲ್ಲಿ ನನ್ನ ಮಕ್ಕಳೆಲ್ಲಾ ಬೆಳವಣಿಗೆ ಹಂತಕ್ಕೆ ಬಂದ್ರು. ಆಗ ನಾನು ೧೯೯೮ ರಲ್ಲಿ ನನ್ನ ಯಕ್ಷಗಾನ ಶಾಲೆ ಗುಂಡಬಾಳದ ಹತ್ತಿರ ಮನೆ

ಮಾಡಿದೆ. ಅಲ್ಲಿಂದ ಮತ್ತೆ ಗುಂಡಬಾಳದಲ್ಲೆ ಯಕ್ಷಗಾನ ಮುಂದುವರೆಸಿದೆ. ಆಮೇಲೆ ಮತ್ತೆ ನನಗೆ “ದುರ್ಗಾ ಪರಮೇಶ್ವರಿ ಮೇಳ, ಮಂದಾರ್ತಿ”, ಉಡುಪಿಯಿಂದ ಯಕ್ಷಗಾನಕ್ಕೆ ಕರೆ ಬಂತು. ಅಲ್ಲಿ ನಾನು ೨೦೦೨ ರಿಂದ ೨೦೧೩ ಸುಮಾರು ೧೧ವರ್ಷಗಳ ಕಾಲ ನನ್ನ ಕಲೆಯನ್ನ ಮುಂದುವರೆಸಿದೆ. ಆಮೇಲೆ ನನಗೂ ವಯ್ಯಸ್ಸಾಯ್ತು. ಮಕ್ಕಳೊಂದಿಗೆ ಮನೆಯವರೊಂದಿಗೆ ಕಾಲ ಕಳೆಯುವ ಸಮಯ. ಹಾಗಾಗಿ ಪುನಃ ಊರಿಗೆ ಬಂದೆ. ಆದರೂ ನನ್ನ ಕಲೆಯನ್ನ ಬಿಡಲಿಲ್ಲ. ಯಕ್ಷಗಾನ ಕಲಿಕೆಯಲ್ಲಿ ಆಸಕ್ತಿ ಇರುವವರಿಗೆ ನನ್ನ ಕೈಲ್ಲಾದ ಮಟ್ಟಿಗೆ ಯಕ್ಷಗಾನ ತರಬೇತಿಗಳನ್ನು ಕೊಟ್ಟೆ. ಗುಂಡಬಾಳದಲ್ಲಿ ಒಂದೊಂದು ವಿಶೇಷ ಪಾತ್ರಗಳನ್ನ ಮಾಡ್ತಿದ್ದೆ, ವಿಶೇಷ ಆಹ್ವಾನ ಇದ್ದಾಗ, ಹತ್ತಿರದಲ್ಲೆ ಯಕ್ಷಗಾನಕ್ಕೆ ಹೋಗಿ ಬಣ್ಣ ಹಚ್ಚುತ್ತೇನೆ.

ಲೇಖನ್ ನಾಗರಾಜ್ : ಆಮೇಲೆ ಯಕ್ಷಗಾನದಲ್ಲಿ ನೀವು ಅತೀ ಹೆಚ್ಚಾಗಿ ಮಾಡಿದಂತಹ ಪಾತ್ರ ಯಾವ್ದು..? ಹಾಗೂ ನಿಮಗೆ ಇಷ್ಟವಾದಂತಹ, ಸವಾಲೇನಿಸಿದ ಪಾತ್ರ ಯಾವುದು….?

ಮಹಾದೇವ ಹೆಗಡೆ : ನಾನು ಹೆಚ್ಚಾಗಿ ಮಾಡಿದಂತಹ ಪಾತ್ರಗಳು ಅರ್ಜುನ, ಅದಾದ ನಂತರ ಭೀಮ, ಜಮದಗ್ನಿ, ಸುಗ್ರೀವ, ʼಬ್ರಹ್ಮ ಕಪಾಲʼದಲ್ಲಿನ “ಮಹೋಗೃ” ವಿಶಿಷ್ಟವಾದಂತಹ ಪಾತ್ರ ಅದು. ಆಮೇಲೆ ರಾವಣ, ಅರ್ಜುನ, ಕೀಚಕವಧೆಯಲ್ಲಿ ʼವಲಾಲʼನ ಪಾತ್ರ. ಹೀಗೆ ಹಲವು ಪಾತ್ರಕ್ಕೆ ಬಣ್ಣ ಹಚ್ಚಿದ್ದು ಇದೆ. “ನಿಜ ಹೇಳ್ಬೇಕು ಅಂದ್ರೆ ಕಲಾವಿದನಿಗೆ ಸಿಗುವ ಪಾತ್ರಗಳೆಲ್ಲವು ಇಷ್ಟವಾದ ಪಾತ್ರವೆ, ಸವಾಲಿನ ಪಾತ್ರವೆ ಆಗಿರುತ್ತದೆ. ಒಬ್ಬ ಕಲಾವಿದನಿಗೆ ಪ್ರೇಕ್ಷಕನ ತೃಪ್ತಿಯೆ ಅವನ ತೃಪ್ತಿಯಾಗಿರುತ್ತದೆ. ಕಲಾವಿದ ಆದವ್ನು ಯಾವುದೇ ಪಾತ್ರವನ್ನಾದರು ಇಷ್ಟಪಟ್ಟೆ ಮಾಡ್ಬೇಕು ಆವಾಗ್ಲೆ ಅವ್ನಿಗೆ ಬೆಲೆ. ಯಾವುದೇ ಪಾತ್ರವನ್ನ ಸವಾಲಾಗಿ ಸ್ವೀಕರಿಸಿದಾಗ ಮಾತ್ರ ಆ ಪಾತ್ರಕ್ಕೆ ಜೀವ ತುಂಬೋಕೆ ಸಾಧ್ಯ. ಕಲಾವಿದನ ದೃಷ್ಟಿಲಿ ಪಾತ್ರಗಳಲ್ಲಿ ದೊಡ್ಡ ಸಣ್ಣ ಅಂತಾ ಏನಿಲ್ಲಾ ಎಲ್ಲವನ್ನು ಇಷ್ಟ ಪಡಬೇಕು. ತಾಯಿಗೆ ತನ್ನ ಮಕ್ಕಳು ಹೇಗೊ ಕಲಾವಿದನಿಗೆ ತನ್ನ ಪಾತ್ರಗಳು ಹಾಗೆ ಮುಖ್ಯವಾಗಿರುತ್ತದೆ”. ನನ್ನ ಕಲಾ ಜೀವನದಲ್ಲಿ ನನಗೆ ತುಂಬಾ ಸವಾಲೇನಿಸಿದ ಪಾತ್ರ ಎಂದ್ರೆ ಅದು ಸುಗ್ರೀವ ಅಂತಾ ಹೇಳ್ಬಹುದು. ವಾಲಿ ಮೋಕ್ಷದಲ್ಲಿ ರಾಮ ವಾಲಿ ಯುದ್ಧದಲ್ಲಿ ಸ್ಫರ್ದಾತ್ಮಕ ಪಾತ್ರವಾಗಿತ್ತು. ಆ ಪಾತ್ರ ಮಾಡುವಾಗ ನಾನು ಹೇಗೆ ನಿಭಾಯಿಸಬಲ್ಲೆ ಎನ್ನುವಂತಹ ಕುತೂಹಲ ನನ್ಮೇಲೆ ನನಗೆ ಇತ್ತು. ಕೊನೆಗೆ ಆ ಪಾತ್ರದ ಮೂಲಕವೆ ಕರಾವಳಿ ಭಾಗದ ಜನರು ನನ್ನನ್ನ ಗುರುತಿಸೋಕೆ ಶುರು ಮಾಡಿದ್ರು. ತುಂಬಾ ಸಂತೋಷವಾಯಿತು.



ಲೇಖನ್ ನಾಗರಾಜ್ : ಹೆಗಡೆಯವ್ರೆ ನಿಮ್ಮ ಪ್ರತಿಭೆಗೆ ಸಿಕ್ಕಿದಂತಹ ಪ್ರಶಸ್ತಿಗಳು ಮತ್ತು ನಿಮ್ಮ ಪಾತ್ರಗಳಿಗೆ ಸಿಕ್ಕಿದ ಗೌರವ ಬಿರುದುಗಳು ಹೇಗಿತ್ತು…?

ಮಹಾದೇವ ಹೆಗಡೆ: ಪ್ರಶಸ್ತಿಗಳು ಸಿಕ್ಕಿದೆ ಕೆಲವು ಸಂಘ ಸಂಸ್ಥೆಗಳಿಂದ ಬಂದಿದ್ದು ಇದೆ. ಸರ್ಕಾರದಿಂದ ಬಂದಿದ್ದು ಇದೆ. ಕರ್ನಾಟಕ ಯಕ್ಷಗಾನ ಅಕಾಡೆಮಿಯಿಂದ 2017ರಲ್ಲಿ “ಯಕ್ಷಸಿರಿ” ಪ್ರಶಸ್ತಿ ಬಂದಿದೆ. ಆಮೇಲೆ ಕಲಾಸಂಘದಿಂದ ಯಕ್ಷಗುರು ಪ್ರಶಸ್ತಿ, ಯಕ್ಷರಾಜ ಪ್ರಶಸ್ತಿ, ಯಕ್ಷ ಆನಂದ ಪ್ರಶಸ್ತಿ. ಹೀಗೆ ಪ್ರಶಸ್ತಿಗಳು ಸಿಕ್ಕಿದೆ. ಬ್ಯಾರನ್‌ಲ್ಲಿ ಮಾಡಿದಂತಹ “ಸುಧನ್ವಾರ್ಜುನ” ದಲ್ಲಿ ಅರ್ಜುನ ಪಾತ್ರಕ್ಕೆ “ಅಭಿನವ ಅರ್ಜುನ” ಎನ್ನುವಂತಹ ಬಿರುದು. ರೇಣುಕಾ ಮಹಾತ್ಮೆಯಲ್ಲಿನ ಜಮದಗ್ನಿ ವೇಷಕ್ಕೆ ʼಮಹಾತಪಸ್ವಿ ಜಮದಗ್ನಿʼ, ಆಮೇಲೆ ಯಕ್ಷಾರ್ಜುನ, ಯಕ್ಷ ಸುಗ್ರೀವ, ಭಲೆ ಭೀಮ, ಅನ್ನುವಂತಹ ಬಿರುದುಗಳು ಬಂದಿದೆ.

ಲೇಖನ್ ನಾಗರಾಜ್ : ಹಾಗೆ ಇನ್ನೊಂದು ಪ್ರಶ್ನೆ. ಇಂದು ಕರೋನ ಎನ್ನುವಂತದ್ದು ಯಕ್ಷಗಾನ ರಂಗದ ಮೇಲೆ ಯಾವ ಥರ ಪರಿಣಾಮ ಬೀರಿದೆ….?

ಮಹಾದೇವ ಹೆಗಡೆ: ತುಂಬಾ ಪರಿಣಾಮ ಬೀರಿದೆ, ಯಕ್ಷಗಾನ ರಂಗ ಅಂತಾ ಅಲ್ಲಾ ತುಂಬಾ ರಂಗದ ಮೇಲೆ ಪರಿಣಾಮ ಬೀರಿದೆ. ನಮ್ಮ ಮಲೆನಾಡು,ಕರಾವಳಿ ಭಾಗದ ತುಂಬಾ ಕಲಾವಿದರಿಗೆ ಕಷ್ಟವಾಗಿದೆ. ಆರ್ಥಿಕವಾಗಿ, ಮಾನಸಿಕವಾಗಿ ಕೂಡ ಪರಿಣಾಮ ಬೀರಿದೆ. ಸುಮಾರು ನೂರು ವರ್ಷಗಳಿಂದ ಸತತ 6 ತಿಂಗಳುಗಳ ಕಾಲ ನಿರಂತರವಾಗಿ ಯಕ್ಷಗಾನ ನಡೆಯುತ್ತಿದ್ದ “ಯಕ್ಷಗಾನ ಕಾಶಿ” ಗುಂಡಬಾಳದಲ್ಲಿ ಸಹ ಪ್ರದರ್ಶನವನ್ನ ನಿಲ್ಲಿಸಬೇಕಾಯಿತು. ನಮ್ಮ ಜೀವನದಲ್ಲಿ ಈ ಥರ ಪರಿಸ್ಥಿತಿಯನ್ನ ನೋಡಿದ್ದೆ ಇರ್ಲಿಲ್ಲ. ಪ್ಲೇಗ್‌, ಕಾಲರದಂತಹ ಕಾಯಿಲೆಗಳು ಬಂದಾಗ ಹೀಗೆ ಆಗಿತ್ತು ಅಂತಾ ಕೇಳಿದ್ದು ಇತ್ತು ಅಷ್ಟೆ. ಆದರೆ, ಈಗ ನಾವೆ ಸ್ವತಃ ಅನುಭವಿಸಿದಂತಾಯಿತು. ಆದಷ್ಟು ಬೇಗ ಇದಕ್ಕೆ ಒಂದು ಪರಿಹಾರ ಸಿಕ್ಕಿ, ಮೊದಲಿನಂತಾಗಲಿ. ಕಲಾವಿದರು ಜೀವನದಲ್ಲಿ ಮತ್ತೆ ಹೊಸ ಚೈತನ್ಯ, ಹುರುಪಿನಿಂದ ರಂಗ ಪ್ರವೇಶ ಮಾಡುವಂತಾಗಲಿ. ನಾವು ದೇವರ ಹತ್ತಿರ ಕೇಳುವುದು ಇಷ್ಟೆ.

ಲೇಖನ್ ನಾಗರಾಜ್ : ಆಮೇಲೆ ಇಂದಿನ ಯಕ್ಷಗಾನ ರಂಗ, ಕಲಾವಿದರು, ಪ್ರೇಕ್ಷಕರ ಬಗ್ಗೆ ಏನ್‌ ಹೇಳ್ತಿರಾ….?

ಮಹಾದೇವ ಹೆಗಡೆ: ಇಂದು ಮಾಧ್ಯಮಗಳು ತುಂಬಾ ಬೆಳಿದಿದೆ. ಮನೆ-ಮನೆಯಲ್ಲೂ ಟ.ವಿ ಇದೆ, ಪ್ರತಿಯೊಬ್ರ ಹತ್ರಾನು ಮೊಬೈಲ್‌ ಇದೆ. ಇಂದು ಎಲ್ಲವನ್ನು ಕುಳಿತಲ್ಲಿಯೆ ನೋಡುತ್ತಾರೆ. ಮೊದಲೆಲ್ಲಾ ಪೌರಾಣಿಕ ಪ್ರಸಂಗಗಳು ಹೆಚ್ಚಾಗಿದ್ದವು. ಇಂದು ಅನುವಾದ, ಕಲ್ಪನೆ ಪ್ರಸಂಗಗಳು ಬಂದಿದೆ. ಯಕ್ಷಗಾನ ಪ್ರೇಕ್ಷಕರು ಕಡಿಮೆಯಾಗಿದಾರೆ. ಆದರೂ ಯಕ್ಷಗಾನ ಒಲವು ಇರುವಂತವರು ಅಲ್ಲಲ್ಲಿ ಇದಾರೆ. ಕಲಿಯಬೇಕೆಂಬುವವರು ಸಹ ಇದಾರೆ. ಕರೋನವೆಂಬುವುದು ಹೊಸಬರಿಗೆ ತುಂಬಾ ದುಷ್ಪರಿಣಾಮ ಬೀರಿದೆ. ಇಂದು ಅಭಿನಯ ಶಾಲೆಗಳು ಪ್ರಾರಂಭವಾಗಿದೆ. ಯಕ್ಷಗಾನ ಅಭಿನಯದ ಮೇಲೆ ಒಲವು ಕಡಿಮೆ ಆಗಿದೆ. ಚಲನಚಿತ್ರ, ಮೀಡಿಯಾ ಮೇಲೆ ಒಲವು ಜಾಸ್ತಿಯಾಗಿದೆ. ಆದರೆ, ಯಕ್ಷಗಾನ ಅಭಿನಯ ಕಲಿತವನು ಎಂತಹ ಅಭಿನಯವಾದರು ಮಾಡಬಲ್ಲ ಎನ್ನುವುದನ್ನು ಇಂದಿನ ತುಂಬಾ ಜನ ತಿಳಿದಿಲ್ಲಾ. ಇಂದು ಯಕ್ಷಗಾನ ಒಂದು ʼಸಾಂಸ್ಕೃತಿಕ ಕಲೆಯಾಗಿʼ ಮಾತ್ರ ಉಳಿದಿದೆ. ಇಂದಿನ ಯುವ ಜನಾಂಗ ಯಕ್ಷಗಾನದ ಬಗ್ಗೆ ಒಲವು ಬೆಳಿಸಿಕೊಂಡರೆ, ಯಕ್ಷಗಾನ ರಂಗವನ್ನ ಮತ್ತಷ್ಟು ಬೆಳೆಸಲು ಸಾಧ್ಯವಾಗುತ್ತದೆ.

ಲೇಖನ್ ನಾಗರಾಜ್: ನಮ್ಮ ಕೊನೆಯ ಪ್ರಶ್ನೆ, ನಿಮ್ಮ ಇಂದಿನ ಜೀವನ ಹೇಗಿದೆ…? ನಿಮ್ಮ ಕುಟುಂಬದ ಬಗ್ಗೆ ಹೇಳಿ….?

ಮಹಾದೇವ ಹೆಗಡೆ: ನನ್ನ ಇಂದಿನ ಜೀವನ ಚೆನ್ನಾಗಿದೆ. ಆರ್ಥಿಕವಾಗಿ, ಮಾನಸಿಕವಾಗಿ ಸದೃಢವಾಗಿದ್ದೇನೆ. ಆರೋಗ್ಯದಲ್ಲಿ ಸ್ವಲ್ಪ ಸಮಸ್ಯೆಯಿದೆ. ವಯೋಸಹಜ ಅನಾರೋಗ್ಯ. ಯಕ್ಷಗಾನದಲ್ಲಿ ಇಂದಿಗೂ ನನಗೆ ಅವಕಾಶವಿದೆ, ಕುಣಿಯಲು ಹುಮ್ಮಸಿದೆ ಆದರೆ, ಅನಾರೋಗ್ಯದ ಸಮಸ್ಯೆಯಿಂದ ಕುಣಿಯಲು ಸಾಧ್ಯವಾಗುತ್ತಿಲ್ಲ. 45 ವರ್ಷಗಳ ಕಾಲ ಯಕ್ಷಗಾನದಲ್ಲಿ ಸೇವೆ ಸಲ್ಲಿಸಿದೆ ಎಂಬ ಹೆಮ್ಮೆ ಇದೆ. ನಮ್ಮ ಅಣ್ಣ ಸುಭ್ರಾಯ ಭಾಗವತ್ ಇಂದಿಗೂ ಸಹ ಈ ವಯಸ್ಸಿನಲ್ಲೂ ಗುಂಡಬಾಳದಲ್ಲಿ ಸಮಯ ಸಿಕ್ಕಾಗೆಲ್ಲಾ ಭಾಗವತಿಗೆ ಮಾಡುತ್ತಾರೆ. ನನ್ನ ಮಕ್ಕಳೆಲ್ಲಾ ಒಂದೊಂದು ಕೆಲಸದಲ್ಲಿದ್ದಾರೆ. ಊರಿಗೆ ಬಂದಾಗ ಆವಾಗವಾಗ ಯಕ್ಷಗಾನಗಳಲ್ಲಿ ಭಾಗವಹಿಸುತ್ತಾರೆ. ನಾನೊಬ್ಬ ಕಲಾವಿದ ಎನ್ನುವ ಖುಷಿ ನನ್ನಲ್ಲಿದೆ. ಇಂದು ನನ್ನ ಆದಾಯಕ್ಕಿಂತ, ನನ್ನ ಪಾತ್ರಕ್ಕೆ ಪ್ರೇಕ್ಷಕರು ಕೊಟ್ಟಂತಹ ಚಪ್ಪಾಳೆ, ಅಭಿಮಾನ, ಪ್ರೋತ್ಸಾಹವೆ ನನಗೆ ಹೆಚ್ಚು ಖುಷಿ ಕೊಟ್ಟಿದೆ. ಸರ್ಕಾರದಿಂದಾಗಲಿ, ಜನಗಳಿಂದಾಗಲಿ ಯಾವುದೇ ಧನ ಸಹಾಯವನ್ನು ನಾನು ನಿರೀಕ್ಷೆ ಮಾಡಿಲ್ಲಾ. ಇಂದಿಗೂ ಒಬ್ಬ ಕಲಾವಿದನಾಗಿ ಜನ ನನ್ನ ಗುರುತಿಸಿದರೆ ಅದೇ ನನಗೆ ಸಿಗುವ ಅತ್ಯಂತ ದೊಡ್ಡ ತೃಪ್ತಿ. ಹೀಗೆ ಎಲ್ಲರೊಂದಿಗೂ ನನ್ನ ಜೀವನ ಸಂತೋಷವಾಗಿದೆ.

ನಿಮ್ಮ ಕಲಾಜೀವನದ ಬದುಕು ಇಂದಿನ ಬಹಳಷ್ಟು ಯುವಕರಿಗೆ ಸ್ಫೂರ್ತಿಯಾಗಲಿ. ನಿಮ್ಮ ಜೀವನ ಸಂತೋಷವಾಗಿರಲಿ. ನಮ್ಮ “ಆಕೃತಿ ಕನ್ನಡ” ಬಳಗದಿಂದ ನಿಮಗೂ ನಿಮ್ಮ ಕುಟುಂಬಕ್ಕೂ ಹೃತ್ಪೂರ್ವಕ ವಂದನೆಗಳು.


  • ನಾಗರಾಜ್‌ ಲೇಖನ್‌ (ಯುವ ಬರಹಗಾರರು) ಹರಡಸೆ, ಹೊನ್ನಾವರ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW