ಕನ್ಯೆಯ ಹುಡುಕಾಟ – ದೇವರಾಜಚಾರ್



ಸಾಂಪ್ರದಾಯಿಕ ಮದುವೆಯಲ್ಲಿ ಹುಡುಗಿ ನೋಡವ ಪದ್ಧತಿಯೂ ಒಂದು. ಹುಡುಗನ್ನಲ್ಲಿರುವ ಆಸೆಗಳು, ಹುಡುಗಿಯ ನಾಚಿಕೆ , ಗುರುಹಿರಿಯರ ಆಶೀರ್ವಾದದಿಂದಾದ  ಸಾಂಪ್ರದಾಯಿಕ ಮದುವೆಯ ನೆನಪನ್ನು ಈ ‘ಕನ್ಯೆಯ ಹುಡುಕಾಟ’ ಲೇಖನ ಮಾಡಿಕೊಂಡುತ್ತದೆ. ದೇವರಾಜ ಚಾರ್ ಅವರ ಈ ಲೇಖನ ಸಾಂಪ್ರದಾಯಿಕ ಮದುವೆಯನ್ನು ಮತ್ತೆ ನೆನಪಿಸುತ್ತದೆ. ಮುಂದೆ ಓದಿ…

ಓದು ಮುಗಿದು ನೌಕರಿ ಸಿಕ್ಕು ಒಂದೆರಡು ವರ್ಷಗಳು ಕಳೆದ ನಂತರ , ಮಗನಿಗೆ ಕನ್ಯೆಯ ಹುಡುಕಾಟ ಸಾಮಾನ್ಯ. ಅದರಲ್ಲೂ ಸರಕಾರಿ ನೌಕರಿಯಲ್ಲಿದ್ದು, ಯಾವುದೇ ಅಡೆ ತಡೆಗಳಿಲ್ಲದಿದ್ದರೆ, ಮಗನಿಗೆ ಇಪ್ಪತ್ತೆಂಟು ವರ್ಷಗಳು ಆಯಿತೆಂದರೆ, ತಂದೆ ತಾಯಿ ಮಗನ ಮದುವೆ ಮಾಡಲು ಉತ್ಸುಕರಾಗುತ್ತಾರೆ.

ಸುಮಾರು ನಲವತ್ತೆರಡು ವರ್ಷಗಳ ಹಿಂದಿನ ಮಾತು. ರಾಜುವಿನ ತಂದೆ ತಾಯಿಗಳು ಮದುವೆ ವಿಷಯವನ್ನು ಪ್ರಸ್ತಾಪಿಸುತ್ತಾರೆ. ಅವನು ಮೌನವಾಗಿದ್ದನ್ನು ನೋಡಿ, ವಿಷಯ ಮುಂದೆ ಸಾಗಬಹುದು ಎಂದು ಅರ್ಥ ಮಾಡಿಕೊಳ್ಳುತ್ತಾರೆ. ಅದರಂತೆ ಸಾಂಪ್ರಾದಾಯಿಕವಾಗಿ ಒಂದು #ಕನ್ಯೆಯನ್ನು ನೋಡಿ ಅವರಿಗೆ ಇಷ್ಟವಾದ ಮೇಲೆ ಮಗನಿಗೆ ಬಂದು ನೋಡಲು ಹೇಳುತ್ತಾರೆ. ಅವನು ಸುಮಾರು ೫೦೦ ಕಿಲೋ ಮೀಟರ್ ದೂರದಲ್ಲಿ ಉದ್ಯೋಗದಲ್ಲಿರುತ್ತಾನೆ. ಆದರೆ ಕನ್ಯೆಗಾಗಿ ಬಿಡುವು ಮಾಡಿಕೊಂಡು ಊರಿಗೆ ಬಂದು ಕನ್ಯೆಯನ್ನು ನೋಡುತ್ತಾನೆ. ಆ ಕನ್ಯೆ ರಾಜು ಮನಸ್ಸಿಗೆ ಹಿಡಿಸಲಿಲ್ಲ ಎಂದು ಮನೆಯಲ್ಲಿ ತಿಳಿಸುತ್ತಾನೆ.

ರಾಜುವಿಗೆ ಈ ರೀತಿ ಹುಡುಗಿಯನ್ನು ನೋಡುವುದು, ಇಷ್ಟವಾಗದಿದ್ದಾಗ ಬೇಡವೆನ್ನುವುದು ಇಷ್ಟವಿರಲಿಲ್ಲ, ಅದರ ಬದಲು ಹುಡುಗಿಗೆ ತಿಳಿಯದಂತೆ ಯಾವುದಾದರೂ ಸಮಾರಂಭದಲ್ಲಿ ನೋಡಿದರೆ ಒಳ್ಳೆಯದು ಎಂದು ಬಯಸಿದ, ಆದರೆ ಅದು ಸಾಧ್ಯವಾಗಿರಲಿಲ್ಲ.

ಹಳ್ಳಿಯಲ್ಲಿ ಬೆಳೆದ ಹುಡುಗಿಯರಲ್ಲಿ ನಾಚಿಕೆ, ಸಂಪ್ರದಾಯಸ್ಥರು, ಗುರುಹಿರಿಯರೆಂದರೆ ಗೌರವ ಇರುತ್ತದೆ ಎಂದು ಅರಿತಿದ್ದ ರಾಜುವಿಗೆ ಹಳ್ಳಿಯ ಹುಡುಗಿಯೇ ಬೇಕಿತ್ತು. ಹಾಗಾಗಿ ಹಳ್ಳಿಯಲ್ಲಿರುವವರು, ಶಿಕ್ಷಕರ ಕುಟುಂಬದಲ್ಲಿರುವ ಕನ್ಯೆಗೆ ಹೆಚ್ಚಿನ ಪ್ರಾಶಸ್ತ್ಯ ಕೊಡಿ ಎಂದು ತನ್ನ ತಂದೆ ತಾಯಿಗಳಿಗೆ ತಿಳಿಸಿದ್ದ. ಅದರಂತೆ ಅವರು ಹುಡುಕಾಟದಲ್ಲಿ ತೊಡಗಿಸಿಕೊಂಡಿದ್ದರು. ಅವರು ಬಯಸಿದಂತೆ ಒಂದು ಹಳ್ಳಿಯಲ್ಲಿ ಮಾಸ್ತರ ಮಗಳಿರುವುದು ಸಂಬಂಧಿಕರಿಂದ ತಿಳಿಯಿತು. ಹುಡುಗಿಯನ್ನು ನೋಡಿಕೊಂಡು ಬಂದು, ರಾಜುವಿಗೆ ಪತ್ರ ಬರೆದರು ‘ನಮಗೆ ಇಷ್ಟವಾಗಿದೆ, ನೀನು ಬಂದು ಒಮ್ಮೆ ನೋಡು’. ರಾಜುವಿಗೆ ಸಂತೋಷವಾಯಿತು. “ರೋಗಿ ಬಯಸಿದ್ದೂ ಹಾಲು ಅನ್ನ , ಡಾಕ್ಟರ್ ಹೇಳಿದ್ದು ಹಾಲು ಅನ್ನ” ಎನ್ನುವ ಗಾದೆಯನ್ನು ನೆನಪಿಸಿಕೊಂಡ. ತಡಮಾಡದೆ ಊರಿಗೆ ಹೊರಡುವ ತಯಾರಿ ಮಾಡಿಕೊಂಡ. ಬಯಸಿದ್ದೆ ಸಿಕ್ಕಿದೆ ಎನ್ನುವ ಖುಷಿ ಒಂದೆಡೆ, ಮತ್ತೊಂದು ಕಡೆ ‘ಅಲ್ಲಿ ವಾತಾವರಣ ಹೇಗೋ ಏನೋ, ಇಷ್ಟು ದೂರಕ್ಕೆ ಮಗಳನ್ನು ಕೊಡುತ್ತಾರೋ ಇಲ್ಲವೋ? ಎನ್ನುವ ಆತಂಕ . ಈ ಮಧ್ಯೆ ಕನ್ಯಾಪಿತೃಗಳು ಹುಡುಗನ ಮನೆಗೆ ಭೇಟಿಕೊಟ್ಟು, ಅವರಿಗೂ ಸಮಾಧಾನವಾಗಿರುವ ವಿಷಯ ತಿಳಿದು ಬಂತು .

ಇವೆಲ್ಲಾ ಶುಭ ಸೂಚಕವೆಂದು ತಿಳಿದು, ರಜಾ ಹಾಕಿ, ತನ್ನ ಊರಿಗೆ ಹೊರಟೇ ಬಿಟ್ಟ ರಾಜು. ಊರಿನಲ್ಲಿ ಸಮಾಲೋಚಿಸಿ, ಆವಾಗ ಹೆಚ್ಚಿನ ಮನೆಗಳಲ್ಲಿ ಫೋನ್ ಸೌಕರ್ಯವಿರದ ಕಾರಣ ಒಂದು ದಿನಾಂಕ ಗೊತ್ತುಪಡಿಸಿ ಕನ್ಯೆಯ ಮನೆಗೆ ತಾವು ಕನ್ಯೆ ನೋಡಲು ಬರುವುದಾಗಿ ಸಂದೇಶ ಕಳುಹಿಸುತ್ತಾರೆ. ರಾಜುವಿನ ಜೊತೆ ಸೋದರ ಮಾವ ಹೊರಡಲು ಸಿದ್ದನಾದ.

ತನ್ನ ಊರಿನಿಂದ ಕನ್ಯೆಯ ಊರು ಸುಮಾರು ಎಪ್ಪತ್ತು ಕಿಲೋ ಮೀಟರ್ ಅಂತರದಲ್ಲಿತ್ತು. ಆ ಊರಿಗೆ ಬಸ್ ಸೌಕರ್ಯವಿರಲಿಲ್ಲ. ಹತ್ತಿರದ ಬಸ್ಸು ನಿಲ್ದಾಣ ಸುಮಾರು ೩  ಕಿಲೋ ಮೀಟರ್ ಅಂತರದಲ್ಲಿತ್ತು. ಎರಡು ಬಸ್ಸು ಹಿಡಿದು ಹೋಗಬೇಕಿತ್ತು. ಆ ದಿನ ಇಬ್ಬರೂ ಬಸ್ಸಿನಲ್ಲಿ ಹೊರಟು ಕನ್ಯೆಯ ಊರಿನ ಹತ್ತಿರದ ಪಟ್ಟಣಕ್ಕೆ ತಲುಪಿದರು. ಅಲ್ಲಿಂದ ಟ್ಯಾಕ್ಸಿ ಹಿಡಿದುಕನ್ಯೆಯ ಊರಿನತ್ತ ಹೊರಟರು. ದಾರಿಯಲ್ಲಿ ಟ್ಯಾಕ್ಸಿ ಡ್ರೈವರ್ ‘ಏನ್ಸಾರ್ ಹುಡುಗಿಗಾಗಿ ಇಷ್ಟು ದೂರ ಅದೂ ಹಳ್ಳಿಗೆ ಬರಬೇಕಾ?. ನಿಮ್ಮ ಊರ್ ಕಡೆ ಸಿಕ್ಕಿಲ್ವಾ’ ಅಂದ. ರಾಜುವಿಗೆ ಸಿಟ್ಟು ಬಂದಿತ್ತಾದರೂ, ಕನ್ಯೆ ನೋಡುವಾಗ ಜಗಳಬೇಡ ಎಂದು ಸುಮ್ಮನಾದ.

 

ಫೋಟೋ ಕೃಪೆ :Team BHP

ಟ್ಯಾಕ್ಸಿ ಹಳ್ಳಿಗೆ ತಲುಪಿತು. ಅಲ್ಲಿ ವಿಳಾಸ ಕೇಳಿದಾಗ ಅದೇ ಕೊನೆ ಮನೆ… ಮುಂದೆ ಬಾವಿ ಇದೆ… ಅಂದರು. ಟ್ಯಾಕ್ಸಿ ಅಲ್ಲಿಗೆ ಹೋಗಿ ನಿಂತಿತು . ಟ್ಯಾಕ್ಸಿಯಿಂದ ಇಳಿದು ಮನೆ ನೋಡಿದಾಗ, ಮಂಗಳೂರಿನ ಹೆಂಚಿನ ಮನೆ. ಮುಂದೆ ಜಗಲಿ. ಜಗಲಿಯ ಎರಡೂ ಕಡೆ ಸಣ್ಣಕೋಣೆಗಳು ಇದ್ದವು. ಊರಿನವರು ಹೇಳಿದಂತೆ ಮನೆ ಮುಂದೆ ರಾಟೆ ಬಾವಿ .



ಅಷ್ಟರಲ್ಲಿ ಸೈಕಲ್ ನಲ್ಲಿ ಬಂದ ಬಿಳಿ ಪಂಚೆ ತೊಟ್ಟ, ಸಣ್ಣಕ್ಕೆ, ಅಷ್ಟು ಎತ್ತರವಲ್ಲದ ವ್ಯಕ್ತಿಯೊಬ್ಬ ಬಂದು ನಕ್ಕು, ಬರಮಾಡಿಕೊಂಡರು.  ಮನೆ ಒಳಗಡೆ ಹೋದ ಮೇಲೆ ತಿಳಿಯಿತು ಅವರೇ ಹುಡುಗಿ ತಂದೆ ಎಂದು. ಅಲ್ಲೇ ಹತ್ತಿರದಲ್ಲಿದ್ದ ಹಳ್ಳಿಯಲ್ಲಿ ಶಾಲಾ ಅಧ್ಯಾಪಕರಾಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ತಿಳಿಯಿತು. ನಮ್ಮ ಟ್ಯಾಕ್ಸಿ ಆ ಸ್ಕೂಲಿನ ಹತ್ತಿರದಲ್ಲೇ ಪಾಸಾಗಿದ್ದರಿಂದ ಹುಡುಗನೇ ಇರಬೇಕೆಂದು ತಾವೂ ಸಹ ಮನೆ ಕಡೆ ಹೊರಟು ಬಂದಿರುತ್ತಾರೆ. ಮನೆ ಒಳಗಡೆ ಹೋದಾಗ ಅಲ್ಲಿ ಇದ್ದವರನ್ನು ಪರಿಚಯಿಸಿದರು. ಅವರ ಭಾವಮೈದುನ ಸರ್ಕಾರಿ ಉದ್ಯೋಗದಲ್ಲಿರುವವರು ಎಂದು ಪರಿಚಯಿಸಿದರು.( ಅಂದರೆ ಹುಡುಗನ ನೌಕರಿಯ ಬಗ್ಗೆ ವಿಚಾರಿಸಿಕೊಳ್ಳಲು ಕರೆಸಿರಬಹುದೆಂದು ಇವರು ತಿಳಿದುಕೊಂಡರು )

ಕನ್ಯೆ ಎಲ್ಲರಿಗೂ ಟೀ ತಂದುಕೊಟ್ಟಳು. ಹುಡುಗ ಗಮನಿಸಿಕೊಂಡ. ಶರಬತ್ತು ತಂದುಕೊಟ್ಟಾಗ ಹುಡುಗ ತಲೆಯೆತ್ತಿ ನೋಡಿ ಒಳಗೊಳಗೇ ಖುಷಿಗೊಂಡ. ವಿಚಾರ ವಿನಿಮಯವಾಯಿತು. ಹುಡುಗ ಹುಡುಗಿಯನ್ನು ಮಾತನಾಡಿಸಲು ಚಡಪಡಿಸುತ್ತಿದ್ದ. ಅಪ್ಪ ಮೇಷ್ಟ್ರು ಬೇರೆ.

ಫೋಟೋ ಕೃಪೆ : India TV News

ಮನೆಯ ಹಿಂದುಗಡೆ ತೆಂಗಿನ ತೋಟವಿತ್ತು, ಅಲ್ಲಿಗೆ ಕರೆದುಕೊಂಡು ಹೋದರು.ಪರಿಸರ ಚೆನ್ನಾಗಿತ್ತು. ಎಲ್ಲವನ್ನು ನೋಡಿ ರಾಜು ಖುಷಿಗೊಂಡ. ಅಷ್ಟರಲ್ಲಿ ಸಂಜೆಯಾಗುತ್ತಾ ಬಂತು. ರಾಜು ಒಲ್ಲದ ಮನಸ್ಸಿನಿಂದ ಹೋರಾಡಲು ಸಿದ್ದನಾದ. ಮೇಸ್ಟ್ರು, ಇಷ್ಟು ಹೊತ್ತಿನಲ್ಲಿ ಪಟ್ಟಣ ಸೇರುವುದು ಕಷ್ಟ, ಬೆಳಿಗ್ಗೆ ಹೋಗುವಿರಂತೆ ಇರಿ ಎಂದರು.

ಟ್ಯಾಕ್ಸಿ ಬೇರೆ ವಾಪಸ್ ಕಳುಹಿಸಲಾಗಿತ್ತು .ಇಲ್ಲೆ ಉಳಿದರೆ ಏನು ತಿಳಿದುಕೊಳ್ಳುತ್ತಾರೋ ಅನ್ನುವುದು ಒಂದು ಕಡೆ. ಇನ್ನೊಂದು ಕಡೆ, ಉಳಿದರೆ ಇವರ ಬಗ್ಗೆ ಹೆಚ್ಚು ತಿಳಿದು ಕೊಳ್ಳಬಹುದು ಮತ್ತು ಹುಡುಗಿಯನ್ನು ಮಾತನಾಡಿಸಬಹುದು ಎನ್ನುವ ಹತ್ತಾರು ಯೋಚ್ನೆಗಳು ಸುಳಿದಾಡಿದವು. ಆದರೆ ರಾಜುವಿನ ಮನಸ್ಸು ಅಲ್ಲೇ ಉಳಿದುಕೊಳ್ಳಲು ಹಾತೊರೆಯುತ್ತಿತ್ತು. ರಾತ್ರಿ ಆಗ್ತಾ ಇದ್ದ ಹಾಗೆ , ಹುಡುಗಿಯ ಸಂಬಂಧಿಕರೊಬ್ಬರು  ಮನೆಗೆ ಬಂದರು, ಅವರೂ ಸಹ ಉಪಾಧ್ಯಾಯರು. ರಾತ್ರಿಯಿಡಿ ತಮ್ಮ ಮೃದುಮಾತಿನಿಂದ ರಾಜುವನ್ನು ವಿಚಾರಿಸುವುದೇ ಆಯಿತು. ಇತ್ತ ರಾಜುವಿನ ಮಾವ ರಾತ್ರಿ ಊಟಕ್ಕೆ ಕೂತಾಗ ಕನ್ಯೆ ಯನ್ನು ವಿಚಾರಿಸುವುದೇ ಆಯಿತು. ಮಧ್ಯೆ ಮಧ್ಯೆದಲ್ಲಿ ರಾಜುವು ಕೂಡ ಜೊತೆಗೂಡುತ್ತಿದ್ದ. ಖುಷಿಯಿಂದ ರಾತ್ರಿ ಕಳೆದರು .

ಬೆಳಿಗ್ಗೆ ಕನ್ಯೆ ಹೊರಬಂದು ಬಾವಿಯಲ್ಲಿ ಕೊಡವ ಇಳಿಸಿ ನೀರು ಸೇರುವುದನ್ನು ನೋಡಿ ರಾಜು ಮತ್ತಷ್ಟು ಪುಳಕಿತನಾದ . ಬಿಂದಿಗೆಯನ್ನು ಸೊಂಟದಲ್ಲಿಟ್ಟು, ಮನೆಯೊಳಗೆ ಹೊರಟಾಗ ರಾಜುನತ್ತ ನೋಡಲು ಅವಳು ನಾಚಿ ಹೋದಳು. ತಿಂಡಿ ಆದ ನಂತರ ರಾಜು ಮತ್ತು ಅವರ ಮಾವ ಹೊರಟು ನಿಂತರು.  ಆಗ ಹೊರಡುವಾಗ ಕನ್ಯೆಯ ಅಭಿಪ್ರಾಯ ಕೇಳಲು ರಾಜುವಿನ ಸೋದರಮಾವ ಹುಡುಗಿಯನ್ನು ಹೊರಕ್ಕೆ ಕರೆಯುವಂತೆ ಅವರ ತಾಯಿಗೆ ಸೂಚಿಸಿದರು ಹುಡುಗಿ ಬಂದೊಡನೆ “ಏನಮ್ಮ ನಿನ್ನ ಅಭಿಪ್ರಾಯ” ಎಂದು ಕೇಳಲು ಕನ್ಯೆ ನಗುನಗುತ ನಾಚಿಕೊಂಡಳು .

ಹೋಗುವ ದಾರಿಯಲ್ಲಿ ತುಂಬಿದ ಕೆರೆಗಳು ,ಎಲ್ಲ ಕಡೆ ಹಸಿರು ‘ನೋಡಿ ಹುಡುಗ ಮನಸ್ಸು ತುಂಬಿಕೊಳ್ಳುತ್ತಾನೆ .ಬಸ್ ನಿಲ್ದಾಣದವರೆಗೂ ಬಿಡಲು ಬಂದಿದ್ದ ಭಾಮೈದ ಜಮೀನು ತೋರಿಸಿ ಇದು ಅವರದ್ದೇ ಅಂತಾರೆ .ಅಲ್ಲೊಂದು ನೆಲಬಾವಿ. ನೀರು ತುಂಬಿತ್ತು. ಅಲ್ಲಿಂದ ನೀರು ಎತ್ತಿ ಕಾಲುವೆಯಲ್ಲಿ ಬಿಡುತ್ತಿದ್ದರು. ಅಲ್ಲಿಂದ ಸರಾಗವಾಗಿ ಜಮೀನಿನ ಎಲ್ಲಾ ಕಡೆ ಹರಿಯುತ್ತಿತ್ತು .ಹಾಗೆ ಮುಂದೆ ಹೋಗುತ್ತಿರುವಾಗ, ದಾರಿಯಲ್ಲೊಬ್ಬ ಶಿಕ್ಷಕರು ಸಿಕ್ಕಿ, ನಾನು ಅದೇ ಶಾಲೆಯಲ್ಲಿ ಶಿಕ್ಷಕ. ಹುಡುಗಿ ನಮ್ಮ ವಿದ್ಯಾರ್ಥಿ .ಒಳ್ಳೆ ಹುಡುಗಿ ಅಂತ ಶಿಫಾರಸು ಮಾಡುತ್ತಾರೆ .

ಇಷ್ಟೆಲ್ಲಾ ತಿಳಿದ ಮೇಲೂ ಕನ್ಯೆಯನ್ನು ಒಪ್ಪದಿರಲು ಕಾರಣವಿಲ್ಲದೆ ,ಸಂಭ್ರಮದಿಂದ ಊರಿಗೆ ಹೊರಟರು. ಮುಂದೆ ರಾಜುವಿನ ಮದುವೆ ಅದೇ ಕನ್ಯೆಯ ಜೊತೆ ದುಮ್ ದಾಮ್ ಆಯಿತು.


  • ದೇವರಾಜ ಚಾರ್ ಮೈಸೂರು .

5 1 vote
Article Rating

Leave a Reply

1 Comment
Inline Feedbacks
View all comments

[…] ಹುಡುಗಿಯನ್ನು ಹೊರಗಿನವಳು ಎಂದು, ಹುಡುಗ #ವಂಶೋದ್ಧಾರಕನೆಂತಲೂ ಹೇಳಲಾಗುತ್ತದೆ. ಮುಂದೆ ವಂಶ […]

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

1
0
Would love your thoughts, please comment.x
()
x
Aakruti Kannada

FREE
VIEW