‘ಜಲಪಾತ’ ಕೃತಿ ಪರಿಚಯ : ವಾಣಿ ಭಟ್

“ಜಲಪಾತ” ನಾನು ನಂಬಿದ ಆದರ್ಶಗಳ ಇನ್ನೊಂದು ಮುಖವನ್ನು ತೋರಿಸಿಕೊಟ್ಟ ಕಾದಂಬರಿ. “ಕುಟುಂಬ ಯೋಜನೆ” ಪ್ರಕೃತಿಗೆ ವಿರುದ್ಧ(?!) ಎಂಬ ಯೋಚನೆಯೇ ನನಗೆ ಹೊಸತು!! ಒಂದರ್ಥದಲ್ಲಿ ಆಘಾತ ನೀಡಿತು. ಖ್ಯಾತ ಕಾದಂಬರಿಕಾರರಾದ ಎಸ್.ಎಲ್. ಭೈರಪ್ಪ ಅವರ ಜಲಪಾತ ಕೃತಿಯ ಕುರಿತು ವಾಣಿ ಭಟ್ ಅವರ ಅಭಿಪ್ರಾಯವನ್ನು ತಪ್ಪದೆ ಮುಂದೆ ಓದಿ…

ಪುಸ್ತಕ : ಜಲಪಾತ
ಲೇಖಕರು: ಎಸ್.ಎಲ್. ಭೈರಪ್ಪ

ನಾನು ಮೊದಲ ಬಾರಿ ಪುಸ್ತಕ ಅವಲೋಕನದ ಅಭಿಯಾನದಲ್ಲಿ ಪಾಲ್ಗೊಂಡದ್ದು ಕೂಡ “ಜಲಪಾತ” ಕಾದಂಬರಿಯ ಪರಿಚಯ ಬರೆಯುವ ಮೂಲಕ. ಆ ಪುಸ್ತಕ ಓದುವಾಗ ಹುಟ್ಟಿದ ಭಾವಗಳನ್ನು ಹಂಚಿಕೊಳ್ಳಬೇಕೆಂಬ ಭಾವ ಅಷ್ಟಿತ್ತು. ಅದು ಈಗಲೂ ಇದೆ. ಹಳೆಯ ಪುಸ್ತಕವಾದರೂ ಇಂದಿಗೂ ಪ್ರಸ್ತುತವಾದ ಚರ್ಚೆಯ ಕಾರಣ ಈ ಪುಸ್ತಕ ಆಯ್ದುಕೊಂಡೆ.
ದಿವಂಗತ ಎಸ್. ಎಲ್. ಭೈರಪ್ಪನವರ ಕಾದಂಬರಿಗಳ ವಿಶೇಷತೆಯೆಂದರೆ ಓದುಗರನ್ನು ಚಿಂತನೆಗೆ ಹಚ್ಚುವುದು. ಓದುವಾಗ ಮನರಂಜಿಸಿದಷ್ಟೇ ಓದಿನ ನಂತರವೂ ಕಾಡುವುದು. ಗಡಿಬಿಡಿಯಲ್ಲಿ ಓದಿ ಮುಗಿಸುವ ಕಾದಂಬರಿಗಳಲ್ಲ ಅವು. ನಿಧಾನಕ್ಕೆ ಪಾತ್ರಗಳ ಭಾವಪ್ರಪಂಚಕ್ಕಿಳಿದು, ಅದರಂತೆ ಯೋಚಿಸಲು ಸಾಧ್ಯವಾದರಷ್ಟೇ ಕಾದಂಬರಿ ಮನಸ್ಸಿಗಿಳಿಯುವುದು. “ಮಗು ಹೆರುವಾಗ ತಾಯೊಬ್ಬಳು ಅನುಭವಿಸುವ ವೇದನೆಯನ್ನು ಭೈರಪ್ಪನವರು ಜಲಪಾತದಲ್ಲಿ ಚೆನ್ನಾಗಿ ಚಿತ್ರಿಸಿದ್ದಾರೆ” ಎಂದು ಅಮ್ಮ ಹೇಳಿದ್ದರಿಂದ ಓದತೊಡಗಿದ್ದೆ. ಓದಿದ್ದನ್ನೆಲ್ಲ ಅರ್ಥೈಸಿಕೊಳ್ಳುವ ಜೀವನಾನುಭವ ಆಗ ಇರಲಿಲ್ಲ. ನನ್ನನ್ನು ಬಹುವಾಗಿ ಚಿಂತನೆಗೆ ಹಚ್ಚಿದ ಕಾದಂಬರಿ “ಜಲಪಾತ”. ಗಾತ್ರದಲ್ಲಿ ಚಿಕ್ಕದಿದ್ದರೂ ಇದರಲ್ಲಿ ಚರ್ಚಿಸಿದ ವಿಷಯಗಳು ಜಲಪಾತದಂತೆ ಅನೂಹ್ಯ ಎಂದು ನನ್ನ ಅನಿಸಿಕೆ. ಸಂಕ್ಷೇಪವಾಗಿ ಸಂಗೀತದ ಚರ್ಚೆ ಬರುತ್ತದಾದರೂ ನನಗೆ ಸಂಗೀತದ ಜ್ಞಾನ ಇಲ್ಲದ ಕಾರಣ ಅದು ತಲೆಗೆ ಹೋಗಲಿಲ್ಲ.

“ಜಲಪಾತ” ನಾನು ನಂಬಿದ ಆದರ್ಶಗಳ ಇನ್ನೊಂದು ಮುಖವನ್ನು ತೋರಿಸಿಕೊಟ್ಟ ಕಾದಂಬರಿ. “ಕುಟುಂಬ ಯೋಜನೆ” ಪ್ರಕೃತಿಗೆ ವಿರುದ್ಧ(?!) ಎಂಬ ಯೋಚನೆಯೇ ನನಗೆ ಹೊಸತು!! ಒಂದರ್ಥದಲ್ಲಿ ಆಘಾತ ನೀಡಿತು. ಕುಟುಂಬ ಯೋಜನೆಗಳು ಪ್ರಚಲಿತವಾಗುವ ಮುನ್ನ ಜನರ ಮನಸ್ಸಿನ ತಾಕಲಾಟ ಈ ಕಾದಂಬರಿಯ ವಸ್ತು ಎಂದು ಭಾವಿಸಿದ್ದೆ. ಏಕೆಂದರೆ, ಒಂದು ದಂಪತಿಗೆ ಸರ್ವೇಸಾಮಾನ್ಯವಾಗಿ ಎರಡೇ ಮಕ್ಕಳಿರುತ್ತಿದ್ದ ಕಾಲಘಟ್ಟದಲ್ಲಿ ನಾನು ಬೆಳೆದದ್ದು. ‘ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಪಡೆವವರಿಂದಲೇ ಜನಸಂಖ್ಯಾಸ್ಪೋಟ’ ಎಂದು ಅಪ್ರಬುದ್ಧವಾಗಿ ನಂಬಿಕೊಂಡಿದ್ದೆ. ಕಾದಂಬರಿಯ ನಾಯಕ ಶ್ರೀಪತಿಯ ಆಲೋಚನೆಗಳು ನನ್ನ ನಂಬಿಕೆಗಳನ್ನು ಪ್ರಶ್ನಿಸತೊಡಗಿದ್ದವು.

ಮುಂಬೈ ಮಹಾನಗರಿಯಲ್ಲಿ ಜೀವನ ಕಟ್ಟಿಕೊಂಡ ಮಧ್ಯಮ ವರ್ಗದ ದಂಪತಿ ಶ್ರೀಪತಿ ಹಾಗೂ ವಸುಂಧರಾ (ಭೂದೇವಿ). ಪರಸ್ಪರ ಪ್ರೀತಿ-ನಂಬಿಕೆಗಳಿಂದ ಬೆಸೆದುಕೊಂಡ ಸುಂದರ ದಾಂಪತ್ಯ‌. ಶ್ರೀಪತಿ ಒಬ್ಬ ಚಿತ್ರಕಾರ, ಪ್ರಕೃತಿಯ ಆರಾಧಕ. ದಂಪತಿಗಳೆಂದ ಮೇಲೆ ಮಗುವನ್ನು ಬಯಸುವುದು ಸಹಜ. ಮಕ್ಕಳು ಎಷ್ಟಿರಬೇಕು? ಎಂಬುದು ದಂಪತಿಗಳ ಆರ್ಥಿಕ ಹಾಗೂ ದೈಹಿಕ ಸ್ಥಿತಿಗತಿಗೆ ಸಂಬಂಧಪಟ್ಟ ಆಯ್ಕೆ ಎಂಬುದು ಸಾಮಾನ್ಯ ಚಿಂತನೆ. “ಇಲ್ಲ, ಅದನ್ನು ನಿರ್ಧರಿಸುವ ಹಕ್ಕು ದಂಪತಿಗಳಿಗಿಲ್ಲ! ಹಾಗೆ ಕಟ್ಟಳೆ ವಿಧಿಸುವುದು ಪ್ರಕೃತಿಗೆ ವಿರುದ್ಧ” ಎನ್ನುವ ವಾದ ಶ್ರೀಪತಿಯದ್ದು. ಜಲಪಾತಕ್ಕೆ ಆಣೆಕಟ್ಟು ಹಾಕುವುದು ಪ್ರಕೃತಿಗೆ ವಿರುದ್ಧವಲ್ಲವೇ? ಹರಿವನ್ನು ತಡೆ ಹಿಡಿಯುವುದು ಸೃಷ್ಟಿಗೆ ಮಾನವನೊಡ್ಡುವ ಸವಾಲಲ್ಲವೇ? ಫಲ ಬೇಡವೆಂದರೆ ದಂಪತಿಗಳ ಸಮಾಗಮವೂ ತಪ್ಪಲ್ಲವೇ? ಎಂದೆಲ್ಲ ಶ್ರೀಪತಿಯ ಪಾತ್ರ ಪ್ರಶ್ನಿಸುವಾಗ, ನನ್ನೊಳಗೂ ವಿಚಾರ ಮಂಥನ ಆಗುತ್ತಲಿತ್ತು. “ಛೇ ಛೇ ಕುಟುಂಬ ಯೋಜನೆ ತಪ್ಪಲ್ಲ” ಎಂದು ವಾದಿಸಬೇಕು ಅನಿಸುತ್ತಿತ್ತು.

ಏತನ್ಮಧ್ಯೆ, ಕಾದಂಬರಿಯಲ್ಲಿ ನಾಡಗೌಡರ ಪಾತ್ರ ಎದುರಾಗುತ್ತದೆ. ಸೃಷ್ಟಿ ಮರುಸೃಷ್ಟಿಯ ಚಕ್ರದಲ್ಲಿ ಅನುವಂಶಿಕತೆಯ ಪ್ರವಾಹದ ಬಗ್ಗೆ ಲೇಖಕರಿಲ್ಲಿ ಓದುಗರನ್ನು ಜಿಜ್ಞಾಸೆಗೆ ತಳ್ಳುತ್ತಾರೆ. ಅನುವಂಶಿಕವಾಗಿ ಬರುವ ಸಮಸ್ಯೆಗಳನ್ನು ತಡೆಯಬೇಕೆಂದರೆ, ಅಂತಹ ಸಮಸ್ಯೆ ಇರುವ ಮರುಸೃಷ್ಟಿಯೇ ಆಗಬಾರದೆನ್ನುವ ವಾದ ನಾಡಗೌಡರದ್ದು. ಉತ್ತಮೋತ್ತಮ ತಳಿ ಮಾತ್ರ ಮರುಸೃಷ್ಟಿಯಾಗಬೇಕು ಎಂಬ ಅತಿವೈಜ್ಞಾನಿಕ ಚಿಂತನೆ!! ಅನುವಂಶಿಕವಾಗಿ ತನ್ನಲ್ಲಿರುವ ಕೊರತೆ ಮುಂದಿನ ಪೀಳಿಗೆಗೆ ಬರಬಾರದೆಂದರೆ, ತಾನು ನೈಸರ್ಗಿಕವಾಗಿ ಮಗುವನ್ನು ಪಡೆಯಬಾರದೆಂದು ಒಮ್ಮುಖವಾಗಿ ನಿರ್ಧರಿಸುತ್ತಾರೆ. ಅವರ ಪತ್ನಿಗೆ ಮಗುವನ್ನು ಪಡೆಯುವ ಇಚ್ಛೆಯಿದ್ದ ಕಾರಣ, ಕೃತಕ ಗರ್ಭಧಾರಣೆಯೂ ಆಗುತ್ತದೆ ಎಂದುಕೊಳ್ಳುತ್ತಾರೆ. ಅವರ ಪತ್ನಿ ಸುಬ್ಬುಲಕ್ಷ್ಮಿ ಮುಗ್ಧೆ. ಪತಿಯ ಆಲೋಚನೆಗಳು ಆಕೆಗೆ ಅರ್ಥವಾಗದು. ಮಗುವಿನ ಇಚ್ಛೆ ಇದ್ದರೂ, ಬೇರೊಬ್ಬರ ಅಂಶದಿಂದ ಗರ್ಭಧರಿಸುವುದು ಆಕೆಗೆ ಬೇಕಿಲ್ಲ.

ಈ ದಂಪತಿಗಳ ತಾಕಲಾಟವನ್ನು ಓದುವಾಗ ನನಗನಿಸಿದ್ದು “ಈ ವಿಜ್ಞಾನಿಗೆ ತನ್ನ ಮಗು ಉತ್ತಮ ತಳಿಯೇ ಆಗಬೇಕು ಎಂಬ ಮೊಂಡು ಹಠವೇಕೆ? ಮುಗ್ಧ ಪತ್ನಿಯ ಮಾತು ಕೇಳಿದರೆ ಏನಾಗಿಬಿಡುತ್ತದೆ? ಯಾವ ತಳಿ ಉತ್ತಮ ಯಾವುದು ಅಯೋಗ್ಯ ಎನ್ನುವುದನ್ನು ನಿರ್ಧರಿಸುವ ಶಕ್ತಿ ನಿಜಕ್ಕೂ ಇವನಿಗಿದೆಯೇ? ಇವನು ವಿಜ್ಞಾನ ಅಂದುಕೊಂಡದ್ದೆಲ್ಲ ಸರಿಯೇ?” ಎಂದು. ಅಲ್ಲಿಗೆ, ಓದುಗಳಾದ ನನ್ನಲ್ಲಿದ್ದ ಇಬ್ಬಂದಿತನ ಹೊರಬಂತಲ್ಲ!! ಅನುವಂಶಿಕತೆಯ ಪ್ರವಾಹವನ್ನು ತಡೆಯಲು ಬಯಸುವುದು ಮೂರ್ಖತನವಾದರೆ ಕುಟುಂಬಯೋಜನೆ ಅದರದ್ದೇ ಮತ್ತೊಂದು ರೂಪವಲ್ಲವೇ? ಅದು ತಪ್ಪಾದರೆ ಇದೂ ತಪ್ಪಲ್ಲವೇ? ಅನ್ನಿಸತೊಡಗಿತು. ಅಷ್ಟರಲ್ಲಿ ಮರುಸೃಷ್ಟಿಯನ್ನೇ ತಡೆಗಟ್ಟುವ ‘ಕುಟುಂಬ ಯೋಜನೆ’ ‘ಸಂತಾನಹರಣ ಚಿಕಿತ್ಸೆ’ ಇತ್ಯಾದಿಗಳು ಪ್ರಕೃತಿಗೆ ವಿರುದ್ಧ ಎಂಬ ಲೇಖಕರ ವಾದ ಅರ್ಥವಾಗತೊಡಗಿತ್ತು.

ಇದೆಲ್ಲಾ ಗೊಂದಲಗಳು ಕಥೆಯ ಮುಖ್ಯ ಪಾತ್ರಗಳಾದ ಶ್ರೀಪತಿ-ವಸುಂಧರಾರ ದಾಂಪತ್ಯದಲ್ಲೂ ಇದ್ದವು. ಸಂತಾನಾಪೇಕ್ಷೆಯಿಲ್ಲದ ಸಮಾಗಮ ಪಾಪಕಾರ್ಯ ಎಂಬ ದೃಷ್ಟಿಯಿಂದ ಈ ದಂಪತಿಗಳು ಬ್ರಹ್ಮಚರ್ಯವನ್ನೂ ಆಚರಿಸುವರು. ಅದರಿಂದ ಇವರಿಬ್ಬರ ನಡುವಿದ್ದ ಸಲುಗೆ ಮಾಯವಾಗಿ, ಸಂಬಂಧ ಮೃದುತ್ವ ಕಳೆದುಕೊಳ್ಳುವುದು. ಇದನ್ನು ತಪ್ಪಿಸಲು, ಪ್ರಕೃತಿಗೆ ಪೂರಕವಾಗಿ ಬದುಕಲು ಹಳ್ಳಿಗೆ ಹೋಗಲು ನಿರ್ಧರಿಸುವರು. ಅಲ್ಲಾಗುವ ಅವಘಡಗಳು, ಬಡತನದ ಹೊಡೆತ ಶ್ರೀಪತಿ ತನ್ನ ನಿರ್ಧಾರ ಬದಲಿಸುವಂತೆ ಮಾಡುವುದು. ಅಲ್ಲಿಗೆ, ವ್ಯವಸ್ಥಿತವಾಗಿ ಜೀವನ ನಿರ್ವಹಿಸಲು ಕುಟುಂಬ ಯೋಜನೆ ಅನಿವಾರ್ಯ ಎಂದು ಭೈರಪ್ಪನವರು ಹೇಳಲಿಚ್ಛಿಸಿದರೆ?? ಗೊತ್ತಿಲ್ಲ. ಆದರೆ, ಅಷ್ಟರಲ್ಲಾಗಲೇ ಸೃಷ್ಟಿ ಮರುಸೃಷ್ಟಿ ಕಾರ್ಯದಲ್ಲಿ ಮಾನವನ ಹಸ್ತಕ್ಷೇಪ ಅತಿಯಾಯ್ತು ಎಂಬುದನ್ನು ಶ್ರೀಪತಿ ಹಾಗೂ ನಾಡಗೌಡರ ಪಾತ್ರಗಳು ನನಗೆ ಅರ್ಥಮಾಡಿಸಿದ್ದವು.

ಈ ಕಥಾವಸ್ತು ಈಗಲೂ ಪ್ರಸ್ತುತ ಅನ್ನುವುದು ವಿಶೇಷವೋ ವಿಪರ್ಯಾಸವೋ ಹೇಳಲಾರೆ. ‘ಮನೆತುಂಬ ಮಕ್ಕಳಿರಲಿ’ ಎನ್ನುವುದು ಎಂದೋ ಹೋಗಿದೆ. ಆಧುನಿಕ ದಂಪತಿಗಳು “ನಾವು ಮಗುವನ್ನೇಕೆ ಪಡೆಯಬೇಕು?” ಎಂದು ಪ್ರಶ್ನಿಸುವ ಕಾಲಘಟ್ಟದಲ್ಲಿ ನಾವಿದ್ದೇವೆ. ವೃದ್ಧರ ಸಂಖ್ಯೆ ಜಾಸ್ತಿಯಾಗಿ, ಮಕ್ಕಳ ಸಂಖ್ಯೆ ಇಳಿಯುತ್ತಿದೆ. ಸಮುದಾಯಗಳು ಕುಗ್ಗುತ್ತಿವೆ. ಮೂರು ಮಕ್ಕಳನ್ನು ಪಡೆದವರಿಗೆ ಬಹುಮಾನ ನೀಡುವುದಾಗಿ ಸರ್ಕಾರಗಳು ಅಧಿಕೃತವಾಗಿ ಘೋಷಿಸತೊಡಗಿವೆ‌. ಅಲ್ಲಿಗೆ “ಜನಸಂಖ್ಯಾಸ್ಫೊಟ” ಎನ್ನುವುದು ಭ್ರಮೆ, ಯುವಜನರೇ ದೇಶದ ನಿಜವಾದ ಸಂಪನ್ಮೂಲ ಎನ್ನುವುದು ಸಾಬೀತಾಯ್ತಲ್ಲ!

ಕುಟುಂಬ ಯೋಜನೆಗಳಿಂದ ಜನರ ಜೀವನಮಟ್ಟ ಸುಧಾರಿಸಿತು ಎನ್ನಬಹುದಾದರೂ, ಆಧುನಿಕ ಜೀವನಶೈಲಿಗೆ ಅದು ಅನಿವಾರ್ಯವೆಂದರೂ, ಕುಸಿಯುತ್ತಿರುವ ಜನಸಂಖ್ಯೆ ದಿಗಿಲು ಹುಟ್ಟಿಸಿದ್ದು ಸುಳ್ಳಲ್ಲವಲ್ಲ! ಇವೆಲ್ಲಾ ಪ್ರಕೃತಿಗೆ ಸವಾಲೊಡ್ಡುವಂತೆ ಬದುಕಿದ್ದರ ದುಷ್ಪರಿಣಾಮ ಇರಬಹುದೇ? ಎಂಬೆಲ್ಲಾ ಪ್ರಶ್ನೆಗಳು ನನ್ನಲ್ಲಿ ಈಗಲೂ ಹುಟ್ಟವಂತೆ ಮಾಡುತ್ತವೆ ಜಲಪಾತ ಕಾದಂಬರಿಯ ಪಾತ್ರಗಳು.


  • ವಾಣಿ ಭಟ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW