ಬಾನಿನಗಲ ಮೇಘದಲ್ಲೂ ಹಾನಿಗೊಳಿಸೋ ಸುಳಿಯಿದೆ…ಕವಿ ಅನಂತ ನಾಯಕ ಅವರ ಲೇಖನಿಯಲ್ಲಿ ಮೂಡಿದ ಕವಿತೆಯನ್ನು ತಪ್ಪದೆ ಮುಂದೆ ಓದಿ…
ನೀತಿ ನಡತೆ ಬದಿಯಲಿಟ್ಟು
ಭೀತಿ ತುಂಬಲಾಗಿದೆ |
ಪ್ರೀತಿಯಲ್ಲೂ ಕುಟಿಲವಿದ್ದು
ಧಾತುವಿನಲೆ ಕೊಳಕಿದೆ ||೧||
ಬಾನಿನಗಲ ಮೇಘದಲ್ಲೂ
ಹಾನಿಗೊಳಿಸೋ ಸುಳಿಯಿದೆ |
ಗಾನತನನ ಖಗಗಳೆಲ್ಲ
ಮೌನಮೊಗವ ಹೊತ್ತಿವೆ ||೨||
ಬೀಸಿ ಬಂದ ಮರುತದಲ್ಲೂ
ಘಾಸಿಗೊಳಿಪ ಬಿಸಿಯಿದೆ |
ತಾಸಿಗೊಮ್ಮೆ ನೆರಗು ಬದಲು
ಹೇಸಿ ಸರಕು ಹಳಸಿದೆ ||೩||
ಅರಳು ಕುಡಿಗೆ ನೆರಳನೀವ
ಕರುಳಕೊಂಡಿ ಕಳಚಿದೆ |
ತರುಗಳಲ್ಲಿ ಕಸುವುಯಿರದೆ
ಬಿರಿದು ಕರಕಲಾಗಿವೆ ||೪||
ಬೆಸೆವ ಮನವ ಹೊಸಕಿಹಾಕಿ
ಎಸೆವ ಛಲವು ನಿಲ್ಲಲಿ |
ಹಸನ ತಂಪು ಎಲರಿನಿಂದ
ವ್ಯಸನಭಾವ ಅಳಿಯಲಿ ||೫||
- ಅನಂತ ನಾಯಕ
