ಹಾಸ್ಟೆಲ್ ಜೀವನದ ವಿಚಿತ್ರ ವಿಸ್ಮಯಗಳು !

ವಿದ್ಯಾರ್ಥಿಗಳು ಒಂದು ತರ ಟೆರಿಟೋರಿಯಲ್ ಪ್ರಾಣಿಗಳಿದ್ದಂತೆ. ತರಗತಿಯಲ್ಲಿ ನಾಯಿ ಮರಿಯ ಹಾಗೆ ಬಾಲ ಮುಚ್ಚಿಕೊಂಡು ಇರುವವರು ಹಾಸ್ಟೆಲ್ಲಿನ ಅವರ ವಲಯಕ್ಕೆ ಬಂದೊಡೆ ಹುಲಿಗಳಾಗಿ ಬಿಡುತ್ತಾರೆ. ಮಕ್ಕಳಿಗೆ ಲೋಕಾನುಭವ ಆಗಬೇಕೆಂದರೆ ಹಾಸ್ಟೆಲ್ ವಾಸಿಯಾಗಲೇಬೇಕು. ಪಶುವೈದ್ಯಕೀಯ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ಎನ್.ಬಿ.ಶ್ರೀಧರ ಅವರು ಬರೆದ ಹಾಸ್ಟೆಲ್ ಜೀವನದ ಹಾಸ್ಯದ ಸಂಗತಿಯನ್ನು ತಪ್ಪದೆ ಮುಂದೆ ಓದಿ…

ವಿದ್ಯಾರ್ಥಿ ಜೀವನದಲ್ಲಿ ಹಾಸ್ಟೆಲ್ ಜೀವನ ಸಹಾ ಒಂದು ಅವಿಭಾಜ್ಯ ಅಂಗ. ಅದು ಎಷ್ಟು ಚೆನ್ನಾಗಿಲ್ಲ ಎಂದರೂ ಸಹ ಅದರ ನೆನಪು ಕೊನೆಯವರೆಗೂ ಇರುವುದು ಬಹಳ ಸಹಜ ಮತ್ತು ಅನಿವಾರ್ಯ. ನಾನು ಪಶುವೈದ್ಯಕೀಯ ಮಹಾವಿದ್ಯಾಲಯ, ಹೆಬ್ಬಾಳ, ಬೆಂಗಳೂರಿನ ಹುಡುಗರ ಹಾಸ್ಟೆಲಿನ ಮುಖ್ಯ ವಾರ್ಡನ್ ಆಗಿ ಕೆಲಸ ನಿರ್ವಹಿಸುವ ಭಾಗ್ಯ ತುಸು ಹೆಚ್ಚು ಅಂದರೆ ೯ ವರ್ಷ ಲಭಿಸಿತ್ತು. ಅದೊಂದು ವಿಸ್ಮಯ ಜೀವಿಗಳ ಅದ್ಭುತ ಜಗತ್ತು. ನಾನಾ ಜಿಲ್ಲೆಗಳು, ನಾನಾ ರಾಜ್ಯಗಳು, ಅನೇಕ ಜಾತಿಯವರು, ಧರ್ಮದವರು, ಬಡವರು, ಶ್ರೀಮಂತರು, ಮಧ್ಯಮ ವರ್ಗದವರು ಒಂದೇ ಸೂರಿನಡಿ ಇರುವ ಒಂದೇ ಸ್ಥಳ ಎಂದರೆ ಹಾಸ್ಟೆಲ್. ವಿದ್ಯಾರ್ಥಿಗಳು ಒಂದು ತರ ಟೆರಿಟೋರಿಯಲ್ ಪ್ರಾಣಿಗಳು. ತರಗತಿಯಲ್ಲಿ ನಾಯಿ ಮರಿಯ ಹಾಗೆ ಬಾಲ ಮುಚ್ಚಿ ಕೊಂಡು ಇರುವವರು ಹಾಸ್ಟೆಲ್ಲಿನ ಅವರ ವಲಯಕ್ಕೆ ಬಂದೊಡೆ ಹುಲಿಗಳಾಗಿ ಬಿಡುತ್ತಾರೆ. ಮಕ್ಕಳನ್ನು ಪಿಜಿಯಲ್ಲಿಟ್ಟು ಓದಿಸುವ ಪರ್ಯಾಯ ವ್ಯವಸ್ಥೆ ಈಗ ಬಂದಿದೆ. ಪಾಲಕರು ಮಕ್ಕಳನ್ನು ಹೂವಿನ ಹಾಗೆ ಬೆಳೆಸಿ ಅವರ ಆತ್ಮ ಸ್ಥೈರ್ಯ ಕುಂದಿಸುತ್ತಾರೆ. ಆದರೆ ಲೋಕಾನುಭವ ಆಗಬೇಕೆಂದರೆ ಹಾಸ್ಟೆಲ್ ವಾಸಿಯಾಗಲೇಬೇಕು. ಅದೊಂದು ಅದ್ಭುತ ಅನುಭವ. ಇಲ್ಲಿ ಕೆಲವೊಂದು ವಿಚಾರಗಳಿವೆ .. ಹಾಗೆ ಸುಮ್ಮನೆ…

  • ಹಾಸ್ಟೆಲ್ ಹುಡುಗರು ಪರೀಕ್ಷೆ ಮುಂದೂಡಬೇಕು ಎಂದರೆ ಎಂಥಹ ಪರಿಯಲ್ಲಿ ಒಗ್ಗಟ್ಟಾಗುತ್ತರೆ ಎಂದರೆ ಸ್ವಾತಂತ್ರ್ಯ ಸಮರಕ್ಕೂ ಸಹ ಇಷ್ಟು ಹೋರಾಟ ನಡೆಸಿರಲಿಕ್ಕಿಲ್ಲ. ಇಲ್ಲಿ ಮರುದಿನದ ಪರೀಕ್ಷೆಯಲ್ಲಿ ಯಾರೂ ಪಾಲ್ಗೊಳ್ಳದೇ ಅದು ಮುಂದಕ್ಕೆ ಹೋಗುವುದೇ ಪರಮ ಗುರಿ. ಒಂದಿಷ್ಟು ಸದಾ ಓದುತ್ತಿರುವ ಹುಡುಗರಿಗೆ ಸಾಮ, ಬೇಧ, ದಂಡ ಇತ್ಯಾದಿ ವಿಧಾನಗಳಲ್ಲಿ ಪ್ರಯತ್ನಿಸಿ ಆತನನ್ನೂ ಪರೀಕ್ಷೆಗೆ ಕೂರದಂತೆ ಮಾಡುವುದರಲ್ಲಿ ಯಶಸ್ವಿಯಾಗಿಯೇ ತೀರುತ್ತಾರೆ. ಇಲ್ಲಿ ಅತ್ಯಂತ ಒಗ್ಗಟ್ಟಿನ ಮಂತ್ರವೇ ಮೇಲುಗೈ ಸಾಧಿಸುತ್ತದೆ.
  • ಹಾಸ್ಟೆಲ್ ಹುಡುಗರು ಊರಿಗೆ ಹೋಗಿ ಬಂದಾಗ ಮಗ ಸಂತಸದಿಂದ ಮೇಯಲಿ ಎಂದು ಆತನ ಅಮ್ಮ ಚಕ್ಕುಲಿ, ಕೋಡುಬಳೆ, ಹುರಿದವಲಕ್ಕಿ, ಮಂಡಕ್ಕಿ, ಉಂಡೆ ಇತ್ಯಾದಿ.
    ನೀಡಿಯೇ ನೀಡುತ್ತಾಳೆ. ಆದರೆ ಇದನ್ನೆಲ್ಲಾ ಮೆಲ್ಲುವ ಯೋಗ ಹುಡುಗರಿಗಿದೆಯೇ? ಖಂಡಿತಾ ಇಲ್ಲ. ಪ್ರತಿಯೊಬ್ಬರ ಅಮ್ಮಂದಿರು ಏನೇನು ತಿಂಡಿ ಕಟ್ಟಿ ಕಳಿಸುತ್ತಾಳೆ ಎಂಬುದರ ಯಾದಿಯೇ ಎಲ್ಲರ ಹತ್ತಿರ ಇರುತ್ತದೆ. ಆತ ರಾತ್ರಿಯಾದ ಮೇಲೆ ಕದ್ದು ಕುರುಂ, ಕುರುಂ ಎಂದು ಮೆಲ್ಲಬೇಕು. ಆತ ಬಂದ ಅಂದ ಎಂದು ಗೊತ್ತಾದ ಕೂಡಲೇ ಹುಡುಗರ ದಂಡು ಆತನ ರೂಮಿಗೆ ನುಗ್ಗಿ ಅವನ ಚೀಲದ ಸಂಪೂರ್ಣ ಶೋಧನೆ ನಡೆಸಿ, ಇದ್ದ ತಿಂಡಿಯನ್ನೆಲ್ಲಾ ಗೆಬರಿ ಕಸ ಹರಡಿ ಹೋದರೆಂದೇ ತಿಳಿಯಬೇಕು. ನೂರಾರು ಹುಡುಗರಿರುವ ಹಾಸ್ಟೆಲ್ಲಿನಲ್ಲಿ ಎಲ್ಲರ ಹೊಟ್ಟೆ ತುಂಬಿಸಲು ಸಾಧ್ಯವೇ?
  • ಒಬ್ಬೊಬ್ಬರ ಓದುವುದರ ವಿಧಾನವೂ ಭಿನ್ನ. ಒಬ್ಬ ರಾತ್ರಿ ಓದುವ ನಿಶಾಚರನಾದರೆ, ಇನ್ನೊಬ್ಬ ಬೆಳಿಗ್ಗೆ 5 ಗಂಟೆಗೆ ಎದ್ದು ಓದುವ ಸಾಧು. ಒಬ್ಬ ನೋಟ್ಸ್ ಬರೆದರೆ ಇನ್ನೊಬ್ಬನಿಗೆ ಆದೇ ನೋಟ್ಸ್ ಬೇಕು. ಕೆಲವೊಮ್ಮೆ ಒಮ್ಮೊಮ್ಮೆ ಒಂದೊಂದು ಪುಟ ಒಬ್ಬೊಬ್ಬರು ಓದುವುದು ಎಂಬ ರಾಜಿ ಬೇರೆ. ಚಂದ ನೋಟ್ಸ್ ಬರೆಯುವವರ ನೋಟ್ಸ್ ಜೆರಾಕ್ಸ್ ಆಗಿ ಅದೇ ತಲತಲಾಂತರಕ್ಕೂ ಸುತ್ತುವರೆಯುವುದು ಹಾಸ್ಟೆಲ್ ಜೀವನದಲ್ಲಿ ಸಾಮಾನ್ಯ.
  • ಹುಡುಗಿಯರ ವಿಷಯದಲ್ಲಿ ಹಾಸ್ಟೆಲ್ ಹುಡುಗರದು ಕಾಡುಪ್ರಾಣಿಗಳ ನ್ಯಾಯ. ಕಾಡಿನ ನ್ಯಾಯದಂತೆ ಬಲವಂತನಿಗೆ ಇಲ್ಲಿ ಜಯ. ಎಲ್ಲರೂ ಒಬ್ಬಳೇ ಹುಡುಗಿಯ ಮೇಲೆ ಲೈನ್ ಹೊಡೆಯುತ್ತಿದ್ದರೆ, ಕೊನೆಗೆ ಅವಳು ಯಾರಿಗೋ ಒಲಿಯುತ್ತಾಳೆ. ನಂತರ ಅವಳು ಎಲ್ಲರಿಗೂ ಸಿಸ್ಟರ್. ಅವರಿಬ್ಬರಿಗೆ ಎಲ್ಲರ ಸಪೋರ್ಟ್ “ಹುಡುಗರು” ಸಿನಿಮಾದ ಹಾಗೆ.ಇಲ್ಲಿ ಸಮಾನತೆಗೆ ಬಹಳ ಆಧ್ಯತೆ. ಎಲ್ಲರೂ ಪರೀಕ್ಷೆಯ ಸಮಯದಲ್ಲಿ ಮಾತ್ರ ಓದಬೇಕು. ಯಾರೂ ಜಾಸ್ತಿ ಓದಲೇ ಬಾರದು. ಜಾಸ್ತಿ ಓದುವವರಿಗೆ “ಕುಡುಮಿ” ಎಂದು ಹೆಸರು ಬಿತ್ತು ಎಂದರ್ಥ. ಮತ್ತೊಬ್ಬ ಓದಿ ಬಿಟ್ಟರೆ ನನಗಿಂತಾ ಮುಂದೆ ಬಂದು ಬಿಡುತ್ತಾನೆ ಎಂಬ ಈರ್ಷ್ಯೆ ಅಥವಾ ಅಸೂಯೆ. ಕಾರಣ ಆತನ ಗಮನ ಸೆಳೆದು ಸಿನಿಮಾ, ಪೇಟೆ, ಮಾಲ್ ಸುತ್ತಿಸುವುದೇ ಇತರರ ಗುರಿ. ನಂತರ “ಥ್ರೀ ಈಡಿಯೆಟ್ಸ್” ಚಿತ್ರದಲ್ಲಿ ಸೈಲೆನ್ಸರ್ ಹೇಗೆ ಸೆಕ್ಸಿ ಪುಸ್ತಕಗಳನ್ನು ರೂಮಿನಲ್ಲಿರಿಸಿ ಹುಡುಗರು ಓದದ ಹಾಗೆ ಮಾಡುತ್ತಾನೋ ಹಾಗೆಯೇ ಡಿಸ್ಟಾçಕ್ಟ್ ಮಾಡುವುದು ಪರಮೋದ್ಧೇಶ.
  • ಸಾದು ಸಜ್ಜನರು, ಮೆತ್ತಗೆ ಮಾತನಾಡುವವರು, ಸದಾ ಶಿಕ್ಷಕರಿಗೆ ಗೌರವ ಕೊಡುವವರಿಗೆ “ಗಾಂಧಿ” ಎಂಬ ಹೆಸರು ಖಾಯಂ. ಆತ ಪದವಿ ಮುಗಿಸಿ ಒಳ್ಳೆಯ ಗೌರವಯುತ ಸ್ಥಾನದಲ್ಲಿದ್ದರೂ ಆತನ ಗೆಳೆಯರು ಆತನಿಗೆ ಕರೆಯುವ ಹೆಸರು “ಗಾಂಧಿ” ಎಂದೇ.
  • “ಸೊಳ್ಳೆ” ನೋಟ್ಸ್ ಕೊಡ್ಲೇ ಇಲ್ಲ ಕಣ್ಲಾ. “ಚಿಕ್ಕಂದು” ನೋಟ್ಸ್ ಜೆರಾಕ್ಸ್ ಮಾಡ್ಬೇಕು. “ಚಿಮಣಿ” ಎಕ್ಸಾಂ ನಾಡಿದ್ದು ಇದೆ, ಸಕತ್ ಕಟ್ ನನ್ಮಗ. “ಬೆಂಕಿ” ಎಕ್ಸಾಂ ಈ ಸಲ ಹೊಗೇನೆ. “ಬಕೀಟ್ ಶೀನ” ಈ ಸಲ ಠಫ್ಫಾಗಿ ಪೇಪರ್ ಕೊಡ್ಬಹುದು. ಇವೆಲ್ಲಾ ಹಾಸ್ಟೆಲ್ ಹುಡುಗರ ಸಾಮಾನ್ಯ ಸಂಭಾಷಣೆಗಳು.ಇಲ್ಲಿ “ಸೊಳ್ಳೆ” ಎಂದು ಹೆಸರು ಇಟ್ಟಿದ್ದು ತೆಳ್ಳಗೆ ಬಡಕಲು ಶರೀರದ ಮೇಷ್ಟ್ರಿಗೆ ವಿದ್ಯಾರ್ಥಿಗಳು ಇಟ್ಟ ಹೆಸರು. “ಚಿಮಣಿ” ಅಂದರೆ ಸದಾ ಸಿಗರೇಟು ಸೇದುತ್ತ ಹೊಗೆಯ ಲೋಕದಲ್ಲಿಯೇ ಇರುತ್ತಾ ಚಿಮಣಿ ತರ ಇರುವ ಮೇಷ್ಟ್ರಿಗೆ ಇಡ್ಡ ಅಡ್ಡ ಹೆಸರು. “ಬೆಂಕಿ” ಅಂದರೆ ಸಿಕ್ಕಾ ಪಟ್ಟೆ ಕಟ್ಟುನಿಟ್ಟಾಗಿ ಇರುವ ಮೇಷ್ಟ್ರುಗಳಿಗೆ ಹುಡುಗರು ಇಡುವ ಹೆಸರು. “ಬಕೀಟ್ ಶೀನ” ಎಂದರೆ ಸದಾ ಪ್ರಾಂಶುಪಾಲರ ಸುತ್ತಲೇ ಇರುತ್ತಾ ಅವರು ತುಂಬಾ ಕೆಟ್ಟದಾಗಿ ಭಾಷಣ ಮಾಡಿದರೂ “ಏನ್ಸಾರ್, ಅದೆಂತಾ ಮಾತು, ಅದ್ಭುತ ಸಾರ್, ಅದರಲ್ಲೂ ಆ ಪಂಚಿ೦ಗ್ ಡೈಲಾಗ್ ಹೇಳಿದ್ರಲ್ಲಾ. ಹುಡುಗಿರೆಲ್ಲಾ ಫಿದಾ ಆಗ್ಬಿಟ್ಟು” ಎಂದು ಸದಾ ರೈಲು ಹತ್ತಿಸುವ ಮೇಷ್ಟ್ರಿಗೆ ಇಟ್ಟ ಅಡ್ಡ ಹೆಸರು.
  • ವಿದ್ಯಾರ್ಥಿನಿಲಯದ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ವಂದನಾರ್ಪಣೆ ಒಬ್ಬ ಹುಡುಗನಿಗೆ ನೀಡಿದೆ. ಯಾರು ವೇದಿಕೆಯ ಮೇಲೆ ಇರುತ್ತಾರೆ, ಯಾರಿಗೆ ಯಾರು ಪುಷ್ಪಗುಚ್ಚ ನೀಡಬೇಕು ಎಂದೆಲ್ಲಾ ರಿಹರ್ಸಲ್ ಮಾಡಿಸಿದ್ದೆ. ಆದರೂ ಸಹ ಆತ “ವೇದಿಕೆಯ ಮೇಲಿರುವ “ಬೆಂಕಿ”ಯವರಿಗೆ “ಬಕೆಟ್ ಸರ್”ಯವರು ಪುಷ್ಪಗುಚ್ಚ ನೀಡಿ ಸ್ವಾಗತಿಸಬೇಕು ಎಂದು ಘೋಷಿಸಿಬಿಟ್ಟ. ಹುಡುಗರೆಲ್ಲಾ “ಹೋ” ಎಂದು ಹುಯಿಲುಗೈದರು. ಅಂದರೆ ಅಷ್ಟೊಂದು ಹಾಸು ಹೊಕ್ಕಾಗಿತ್ತು ಆ ಹೆಸರುಗಳು. ಸದಾ ಕೋಪದದವರು “ಬೆಂಕಿ” ಯಾದರೆ “ಬಕೆಟ್” ಎಂದರೇನು ಎಂದು ಹೊಸದಾಗಿ ಹೇಳಬೇಕಿಲ್ಲ. ಒಮ್ಮೆ ಹೆಸರು ಬಿತ್ತೆಂದರೆ ಆತ ರಿಟೈರಾಗಿ, ಶಿವನ ಪಾದ ಸೇರಿದ ನಂತರ ಆ ತಲೆಮಾರಿನ ಹುಡುಗರು ಇರುವವರೆಗೂ ಸಹ ಈ ಹೆಸರುಗಳು ಆಚಾಂದ್ರಾರ್ಕವಾಗಿ ಇರುತ್ತವೆ. ನಂತರ ವಿದ್ಯಾರ್ಥಿಗಳಿಗೆ ಸ್ವಾಗತ ವಂದನಾರ್ಪಣೆ ಮಾಡುವಾಗ ಬಾಯಿ ತಪ್ಪಿ ಅಡ್ಡ ಹೆಸರನ್ನು ಕರೆಯದಂತೆ ಎಚ್ಚರ ವಹಿಸಿದೆ.
  • ಮಹಾ ಬೋರಿಂಗ್ ಪಾಠ ಹೇಳುವ ನಾಗಮ್ಮ ಮೇಡಮ್ಮಿಗೆ “ಬೋರ್ ನಾಗಮ್ಮ”, ಭಾರಿ ಕುಯ್ಯುವ ಮಾಸ್ತರುಗಳಿಗೆ “ಗಿಟಾರ್”, ಪಿಟೀಲು” ಸದಾ ಬೈಯುತ್ತಾ ಇರುವ ಮಾಸ್ತರಿಗೆ “ಉರಿಸಿಂಗ, ಬೆಂಕಿ ಮಾಸ್ತರ್, ಹೊಗೆ, ಯೆಟ್ಟೆ’, ನಿಧಾನವಾಗಿ ಸಾಗಿ ಬರುವ ಮೇಡಮ್ಮುಗಳಿಗೆ “ಆಮೆ”, ವೇಗವಾಗಿ ಬರುವ ಮಾಸ್ಟ್ರಿಗೆ ” ಬಿಎಂಟಿಸಿ ಬಸ್”, ಹೆಲಿಕ್ಯಾಪ್ಟರ್, ಕುಸುಮಾ ಮೇಡಂಗೆ “ಕೋಸು ಮೇಡಂ’ ಹಲ್ಲು ಮುಂದಿರುವ ಮೇಷ್ಟ್ರಿಗೆ “ಜೆಸಿಬಿ” ಅಥವಾ “ತುರೆಮಣೆ” ಎಂತಲೂ ಹಲ್ಲಿರದ ಬೊಚ್ಚುಬಾಯಿ ಮೇಷ್ಟ್ರಿಗೆ ” ಕೂಮ ಅಥವಾ ಹಿಳ್ಳೆ”, ಗಿಡ್ದಗಿರುವ ಮತ್ತು ದಪ್ಪಗಿರುವ ಮೇಡಮ್ಮಿಗೆ “ಪಣಸ್ ಬಾಯಿ ಅಥವಾ ಡುಮ್ಮಿಬಾಯಿ”, ಉದ್ದುದ್ದ ಕೂದಲು ಬಿಟ್ಟ ಮೇಷ್ಟ್ರು ” ಹಿಪ್ಪಿ” ಎಂದು ಕರಸಿಕೊಂಡರೆ ಉದ್ದುದ್ದ ಉಗುರು ಬೆಳೆಸಿಕೊಂಡ ಮೇಷ್ಟಿçಗೆ ಬೀಳುವ ಹೆಸರು “ಸಿಂಹ”.
  • ಮೊದಲ ಸಾಲಿನಲ್ಲಿ ಕುಳಿತ ವಿದ್ಯಾರ್ಥಿಗಳ ಮೇಲೆ ಎಂಜಿಲಿನ ರಸದಾರೆಯನ್ನು ಪ್ರೋಕ್ಷಣೆ ಮಾಡುವವರಿಗೆ “ಸ್ಪ್ರಿಂಕ್ಲರ್”, ಬೆಳ್ಳಗೆ ತೆಳ್ಳಗೆ ರೊಟ್ಟಿಯ ಹಾಗಿರುವ ವಿಜಯಪುರದ ಮೇಷ್ಟ್ರಿಗೆ ” ಕಡಕ್ ರೊಟ್ಟಿ”, ಸದಾ ಜೊತೆಗಿದ್ದು ಚಹಾಕ್ಕೆ ತೆರಳುವವರಿಗೆ “ಟಾಮ್ ಎಂಡ್ ಜೆರ್ರಿ” ಅಥವಾ “ರಾಮ್ ಲಖನ್”, ಹೇಳಿದ ಶಬ್ಧಗಳನ್ನೇ ಪುನ: ಪುನ: ಹೇಳುವವರಿಗೆ “ರಿಪೀಟರ್”, ದಿನಾ ಕೂಲಿಂಗ್ ಗ್ಲಾಸ್ ಹಾಕಿಕೊಂಡು ಬರುವ ಮೇಷ್ಟಿçಗೆ ” ಕರುಣಾನಿಧಿ”, ಸದಾ ಹುಡುಗಿಯರ ಅಂಗಾಂಗ ಪರಿಶೀಲನೆ ಮಾಡುವವರಿಗೆ “ಎಕ್ಸ್ ರೇ”, ಸದಾ ನೀಟಾಗಿ ವೇಷಭೂಷಣ ತೊಡುವವರಿಗೆ “ಕ್ಯಾಡ್ಬರಿಸ್ ಚಾಕಲೇಟ್”, ಮಾತೆತ್ತಿದರೆ ಉರಿದು ಬೀಳುವವರಿಗೆ ” ಸಂಪತ್ತಿಗೆ ಸವಾಲ್” ಅಥವಾ ” ಬೆಂಕಿ”, ಯಾವಾಗಲೂ ಒಂದೇ ಶರ್ಟು ಧರಿಸುವ ಮೇಷ್ಟ್ರಿಗೆ “ರಿಪೀಟರ್”, ಕುಳ್ಳವಾಗಿಗುರುವುದಕ್ಕೆ ” ಗಿಡ್ಡು”, ಕಾಲು ಕುಂಟುವಮೇಷ್ಟ್ರಿಗೆ “ಚೊಟ್ಟ”, ತಲೆ ಕೂದಲಿರದ ಮೇಷ್ಟ್ರಿಗೆ “ಬಾಲ್ಡಿ”, ದಪ್ಪ ಹೊಟ್ಟೆ ಇದ್ದವಂಗೆ “ಡುಮ್ಮ”, ಕಪ್ಪಗೆ ಇರುವನಿಗೆ “ಕರಿಯ”, ಹುಡುಗಿಯರನ್ನು ಮಾತ್ರ “ಜಾಸ್ತಿ” ಮಾತನಾಡಿಸುವ ಮೇಷ್ಟ್ರಿಗೆ “ಜೊಲ್ ಪಾರ್ಟಿ” “ಮೂಗ್ಬೊಟ್ಟು” “ದಾಸವಾಳ”,
  • ಕಡಕ್ ಆಗಿರುವ ಮೇಷ್ಟ್ರಿಗೆ “ಸಡೆ” ಚೊರ್ರೆ” “ಹಿಟ್ಲರ್” ಡಿಕ್ಟೇಟರ್”, ಮುಂಬಲ್ಲು ಇರುವ ಮೇಡಮ್ಮಿಗೆ “ಕೆ ಟಿ ಎಂ ( “ಕಾಯಿ ತುರಿಯೋ ಮಣೆ”), ಗುಂಗುರು ಕೂದಲು ಇರುವವರಿಗೆ “ಸಾಯಿಬಾಬಾ”, ಸುಂದರವಾಗಿರುವವರಿಗೆ “ಕ್ವೀನ್ ಆಫ್ ದ ಕ್ಲಾಸ್”, ನಾಲ್ಕೈದು ಜನ ಹುಡುಗಿಯರ ಹೆಸರು ಒಂದೇ ಇದ್ದರೆ ಕುಳ್ಳಿ ಸುಧಾ, ಡುಮ್ಮಿ ಸುಧಾ, ಕೆಂಡ ಸುಧಾ, ಗೂನಿ ಸುಧಾ” ಕುಳ್ಳಗೆ ಇರುವವರಿಗೆ “ದ್ವಾರಕೀಶ್”, ಏನು ಕೇಳಿದರೂ ಉತ್ತರಿಸುವವರಿಗೆ “ಗೂಗಲ್” ಹೀಗೆ ಹೆಸರಿನ ಉಗಮವಾಗುವುದೇ ಹಾಸ್ಟೆಲ್ಲಿನಲ್ಲಿನ ಚತುರಮತಿಗಳಿಂದ.

ಬಹುಶ: ಕುವೆಂಪು, ನರಸಿಂಹಯ್ಯ, ಕೃಷ್ಣೇಗೌಡ ಇತ್ಯಾದಿ ದಿಗ್ಗಜ ಮೇಷ್ಟ್ರುಗಳಿಗೆ ಆ ಕಾಲದ ಹುಡುಗರು ಅಡ್ಡ ಹೆಸರು ಇಡದೇ ಬಿಟ್ಟಿರಲಿಕ್ಕಿಲ್ಲ. ಹೀಗೆ ಹೇಳುತ್ತಾ ಹೋದರೆ ಇದು ಮುಗಿಯದ ಕಥನ. ನೀವೂ ಒಂದಿಷ್ಟು ಸೇರಿಸಿ ಇದಕ್ಕೆ..


  • ಡಾ.ಎನ್.ಬಿ.ಶ್ರೀಧರ – ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗ, ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW