ಮೂಕ ಜಗತ್ತಿನ ಸುತ್ತ ನಮ್ಮ ಜಗತ್ತು – (ಭಾಗ-೮)

ಮನೆಗೆ ಬಂದ ಮೊದಲ ಬೆಕ್ಕು ಚಿನ್ನುವಿನ ಕುರಿತು ಅಂಕಣಕಾರ್ತಿ ಕೆ.ಸಿ. ರತ್ನಶ್ರೀ ಶ್ರೀಧರ್ ಅವರ ಹಂಚಿಕೊಂಡಿದ್ದಾರೆ. ತಪ್ಪದೆ ಓದಿ ಅವರ ‘ಮೂಕ ಜಗತ್ತಿನ ಸುತ್ತ ನಮ್ಮ ಜಗತ್ತು’ ಅಂಕಣ…

ನಮ್ಮ ಮನೆಯ ರಾಮು ನಾಯಿ ಕಳೆದುಹೋದ ನಂತರ ಮನೆಯಲ್ಲಿ ನಾಯಿ ಸಾಕುವುದು ಬೇಡ ಎನ್ನುವ ತೀರ್ಮಾನಕ್ಕೆ ಬಂದಿದ್ದೆವು. ಬೀದಿ ನಾಯಿಗಳಾದ ಗುಂಡ ಗುಂಡಿಯನ್ನು ನೋಡಿ ಖುಷಿ ಪಡುತ್ತಿದ್ದೆವು. ಏನೇ ಆದರೂ ಯಾವುದೇ ಸಾಕುಪ್ರಾಣಿ ಇಲ್ಲದೇ ಮನೆ ಬಣಗುಡುತ್ತಿತ್ತು. ನಮ್ಮ ಏರಿಯಾದಲ್ಲಿದ್ದ ನಮ್ಮ ಸ್ನೇಹಿತರ ಮನೆಯಲ್ಲಿದ್ದ ಬೆಕ್ಕುಗಳನ್ನು ನೋಡಲು ಆಗಾಗ ಅವರ ಮನೆಗೆ ಹೋಗುತ್ತಿದ್ದೆವು. ಅವರ ಮನೆಯ ಬೆಕ್ಕು ಮೂರು ಮರಿಗಳನ್ನು ಹಾಕಿತ್ತು. ನಮ್ಮ ಮಗನಿಗೆ ಒಂದು ಬೆಕ್ಕಿನ ಮರಿಯನ್ನು ನಮ್ಮ ಮನೆಗೆ ತರುವ ಆಸೆ ಗರಿಗೆದರಿತ್ತು. ನನಗೂ ಬಹಳ ಆಸೆ ಇತ್ತು. ಆದರೆ ನನ್ನ ಪತಿ ಅದಕ್ಕೆ ಒಪ್ಪಿಗೆ ಕೊಡಲಿಲ್ಲ.

ಒಂದು ದಿನ ನಾನು ಮತ್ತು ಮಗ ಬೆಕ್ಕಿನ ಮರಿಗಳನ್ನು ನೋಡಲು ಸ್ನೇಹಿತರ ಮನೆಗೆ ಹೋಗಿದ್ದೆವು. ಅವರು “ಬೆಕ್ಕಿನ ಮರಿಗಳನ್ನು ಯಾರಾದರೂ ಸಾಕುವವರು ನಿಮಗೆ ಗೊತ್ತಿದ್ದರೆ ಹೇಳಿ, ಮರಿಗಳನ್ನು ಕೊಡುತ್ತೇವೆ” ಎಂದರು. ಬೆಕ್ಕು ಸಾಕಬೇಕೆಂಬ ನಮ್ಮ ಮಗನ ಆಸೆ ಚಕ್ಕನೆ ಪುಟ್ಟಿದೆದ್ದಿತು. “ಅಮ್ಮ ಪ್ಲೀಸ್, ನಾವು ಒಂದು ಬೆಕ್ಕಿನ ಮರಿಯನ್ನು ತಗೊಂಡು ಹೋಗೋಣ. ನೀನು ಅಪ್ಪನಿಗೆ ಹೇಳಿ ಒಪ್ಪಿಸು” ಅಂತ ಗೋಗರೆದ. ಅವನ ಆಸೆಗೆ ತಣ್ಣೀರೆರಚಲು ಮನಸ್ಸು ಬಾರದೇ, ಜೊತೆಗೆ ನನ್ನ ಮನದ ಆಸೆಯನ್ನೂ ಹತ್ತಿಕ್ಕಲಾರದೆ ಮಗನಿಗೆ ಒಪ್ಪಿಗೆ ಕೊಟ್ಟೆ. ತಕ್ಷಣವೇ ಮಗ, ಚೂಟಿಯಾಗಿದ್ದ ಒಂದು ಮರಿಯನ್ನು ಖುಷಿಯಿಂದ ಎತ್ತಿಕೊಂಡ.

ಸುಮಾರು ಒಂದೂವರೆ ತಿಂಗಳ ವಯಸ್ಸಿನ ಕಿತ್ತಳೆ ಮಿಶ್ರಿತ ಕಂದು ಬಣ್ಣದ ಜಿಂಜರ್ ಜಾತಿಯ ಬೆಕ್ಕಿನ ಮರಿ ಬಹಳ ಮುದ್ದಾಗಿತ್ತು. ನಮ್ಮ ಮನೆಗೆ ತಂದ ಕೂಡಲೇ ಬಟ್ಟಲಿನಲ್ಲಿ ಸ್ವಲ್ಪ ಹಾಲು ಕೊಟ್ಟರೆ ಖುಷಿಯಿಂದ ಕುಡಿದು, ತನ್ನದೇ ಮನೆ ಎಂಬಂತೆ ಮನೆಯಲ್ಲೆಲ್ಲಾ ಓಡಾಡತೊಡಗಿತು. ನಮಗಂತೂ ಖುಷಿಯೋ ಖುಷಿ. ಅದಕ್ಕೆ ಮಲಗಲು ಒಂದು ರಟ್ಟಿನ ಬಾಕ್ಸ್ ಇಟ್ಟು, ಅದರಲ್ಲಿ ಮೆತ್ತನೆ ಬಟ್ಟೆ ಹಾಸಿದೆ. ಚಿನ್ನದ ಬಣ್ಣದಲ್ಲಿದ್ದ ಅದಕ್ಕೆ ಚಿನ್ನಿ ಅಂತಲೇ ಹೆಸರಿಟ್ಟೆವು. ಇಡೀ ಮನೆಯನ್ನು ಸುತ್ತಾಡಿದ ಚಿನ್ನಿ , ತನ್ನಮ್ಮನನ್ನೂ ನೆನೆಯದೇ ಬಾಕ್ಸಿನಲ್ಲಿ ಮಲಗಿ ನಿದ್ರಿಸಿತು. ಅದರ ಶೌಚಕ್ಕಾಗಿ ಒಂದು ಸಿಮೆಂಟ್ ಕಲೆಸುವ ಕಬ್ಬಿಣದ ಬಾಂಡ್ಲಿಯಲ್ಲಿ ಹೊಟ್ಟು ಮಿಶ್ರಿತ ಮರಳನ್ನು ತುಂಬಿ ಬಾತ್ರೂಮಿನ ಒಂದು ಮೂಲೆಯಲ್ಲಿಟ್ಟೆವು.

ಸಂಜೆ ಮನೆಗೆ ಬಂದ ನನ್ನವರಿಗೆ ಮಗ ಸರ್ಪ್ರೈಸ್ ಕೊಡುವಂತೆ ಮುದ್ದು ಬೆಕ್ಕಿನ ಮರಿಯನ್ನು ಎದೆಗವಚಿಕೊಂಡು ತಂದು ತೋರಿಸಿದ. ತಕ್ಷಣಕ್ಕೆ ಅವರಿಗೆ ಹೇಗೆ ರಿಯಾಕ್ಟ್ ಮಾಡಬೇಕೆಂದೇ ತೋಚಲಿಲ್ಲ. ಮುದ್ದು ಬೆಕ್ಕಿನ ಮರಿಯನ್ನು ನೋಡಿ ಖುಷಿಯಿಂದ ಎತ್ತಿಕೊಂಡು ಮುದ್ದಿಸಿದರು. ಆದರೂ, “ಮನೆಯಲ್ಲಿ ಬೆಕ್ಕು ಸಾಕೋದು ಕಷ್ಟ. ಅವು ಹೊರಗಡೆ ಸುತ್ತಾಡುವ ಪ್ರಾಣಿಗಳು. ಅಕ್ಕ ಪಕ್ಕದ ಮನೆಯವರಿಗೆ ತೊಂದರೆ ಆಗುವ ಸಾಧ್ಯತೆ ಇದೆ. ಜೊತೆಗೆ ನಾವು ಎಲ್ಲಿಯಾದರೂ ಹೊರಗೆ ಹೋಗಬೇಕೆಂದರೆ ಇದನ್ನು ನೋಡಿಕೊಳ್ಳುವವರಿಲ್ಲ ಬೇಡ” ಎಂದರು. “ಹಾಗೇನೂ ಆಗೋದಿಲ್ಲ, ಪಾಪ ಮಗ ತುಂಬಾ ಆಸೆ ಪಡ್ತಾ ಇದ್ದಾನೆ ಇರಲಿ ಬಿಡ್ರಿ. ಒಂದು ವೇಳೆ ನಾವು ಹೊರಗೆಲ್ಲಾದರೂ ಹೋಗಬೇಕಾದ ಸಮಯದಲ್ಲಿ ಅವರ ಮನೆಯಲ್ಲೇ ಬಿಟ್ಟು ಹೋಗೋಣ” ಎಂದು ಇವರನ್ನು ಒಪ್ಪಿಸಿದೆ. ಅಂದಿನಿಂದ ಚಿನ್ನಿ ನಮ್ಮ ಮನೆಯ ಪುಟ್ಟ ಮಗುವೇ ಆಯಿತು.

ಬೆಕ್ಕನ್ನು ಹೇಗೆ ಸಾಕಬೇಕು? ಅವುಗಳ ಆಹಾರ ಹೇಗಿರಬೇಕು? ಎಷ್ಟು ದಿನಕ್ಕೊಮ್ಮೆ ಸ್ನಾನ ಮಾಡಿಸಬೇಕು? ಎಂಬ ಹಲವಾರು ಪ್ರಶ್ನೆಗಳಿಗೆ ನಾನು ಮತ್ತು ಮಗ ಗೂಗಲ್ ಅಣ್ಣನನ್ನು ಕೇಳಿ ತಿಳಿದುಕೊಂಡವು. ಮಾರನೇ ದಿನ ಶಾಂಪು ಹಾಕಿ ಬಿಸಿ ನೀರಲ್ಲಿ ಸ್ನಾನ ಮಾಡಿಸಿದೆ. ಅಂದೇ ಸಂಜೆ ಚಿನ್ನಿ ಯನ್ನು ವೈದ್ಯರ ಬಳಿ ಕರೆದೊಯ್ದೆವು. ಎಲ್ಲಾ ತಪಾಸಣೆ ನಡೆಸಿದ ವೈದ್ಯರು, “ನೀವು ತಿಳಿದಿರುವಂತೆ ಇದು ಹೆಣ್ಣು ಮರಿಯಲ್ಲ. ಇದು ಗಂಡು ಬೆಕ್ಕು ಎಂದು ತಿಳಿಸಿದರು. ಆಗ ಚಿನ್ನಿ ಚಿನ್ನುವಾದ. ವೈದ್ಯರು ಚಿನ್ನು ಆರೋಗ್ಯಪೂರ್ಣವಾಗಿರುವುದಾಗಿ ತಿಳಿಸಿ ಅದಕ್ಕೆ ಕೊಡಬೇಕಾದ ಔಷಧಿಯನ್ನು ಕೊಟ್ಟು, ಹೆಲ್ತ್ ಕಾರ್ಡ್ ನಲ್ಲಿ ನಮೂದಿಸಿದರು.

ಚಿನ್ನು ನಮ್ಮ ಮನೆಗೆ ಬಹಳ ಬೇಗ ಚೆನ್ನಾಗಿ ಹೊಂದಿಕೊಂಡ. ಅವನ ದೈಹಿಕ ಬೆಳವಣಿಗೆ ಕೂಡ ತುಂಬಾ ಚೆನ್ನಾಗಿತ್ತು. ಮೂರು ತಿಂಗಳುಗಳವರೆಗೆ ಅವನನ್ನು ಮನೆಯ ಹೊರಗೆ ಕಳಿಸಲಿಲ್ಲ. ಮನೆಯಲ್ಲಿಯೇ ಆಟ ಆಡಿಸುತ್ತಿದ್ದೆವು. ಅವನಿಗಾಗಿ ಪುಟ್ಟ ಪುಟ್ಟ ಬಾಲು ತಂದು ಕೊಟ್ಟಿದ್ದೆವು. ಸಾಫ್ಟ್ ಬೊಂಬೆಯನ್ನು ಅವನು ಬಹಳ ಇಷ್ಟ ಪಡುತ್ತಿದ್ದ. ಅವನಿಗಿಂತ ತುಸು ದೊಡ್ಡದೇ ಆದ ಹುಲಿಯ ಸಾಫ್ಟ್ ಬೊಂಬೆಯನ್ನು ಎಲ್ಲಿ ಮುಚ್ಚಿಟ್ಟರೂ ಎತ್ತಿಕೊಂಡು ಕಚ್ಚಿ, ಒದೆದು, ಗೊಂಬೆಯ ಕುತ್ತಿಗೆಯನ್ನು ಬಾಯಲ್ಲಿ ಕಚ್ಚಿ ಹಿಡಿದು ಮನೆ ತುಂಬಾ ಓಡಾಡುತ್ತಿದ್ದ. ಕಸ ಗುಡಿಸುವ ಪೊರಕೆ, ನೆಲವರೆಸುವ ಮಾಪು ಎಲ್ಲವೂ ಚಿನ್ನುನ ಆಟದ ವಸ್ತುಗಳೇ ಆಗಿದ್ದವು.

ಮೊದಮೊದಲಿಗೆ ಕಿಟಕಿಯ ಕರ್ಟನ್ಗಳನ್ನು ಎಳೆಯುವುದು, ಸೋಫಾ ಕುಶನ್ ಕೆರೆಯುವುದು, ಮೊಬೈಲ್ ಚಾರ್ಜರ್ ವೈರ್ ಕಚ್ಚುವುದು ಮುಂತಾದ ತರಲೆ ಮಾಡುತ್ತಿದ್ದ ಚಿನ್ನು, ಒಮ್ಮೆ ಗದರಿಸಿ ಹೇಳಿದರೆ ಸಾಕು ಅರ್ಥ ಮಾಡಿಕೊಳ್ಳುತ್ತಿದ್ದ. ಆ ತರ್ಲೆ ಕೆಲಸ ಮತ್ತೆ ತಿರುಗಿ ಮಾಡ್ತಾ ಇರ್ಲಿಲ್ಲ. ಬಹಳ ಬುದ್ಧಿವಂತನಿದ್ದ ಅವನಿಗೆ ಸಮಯ ಕೂಡ ತುಂಬಾ ಚೆನ್ನಾಗಿ ಗೊತ್ತಾಗ್ತಿತ್ತು. ಸಾಯಂಕಾಲ ನಾಲ್ಕು ಗಂಟೆಯಾಗುತ್ತಲೇ ಕಿಟಕಿಯ ಒಳಭಾಗದಲ್ಲಿ ಕೂತು, ನಮ್ಮ ಮಗ ಶಾಲೆಯಿಂದ ಬರುವುದನ್ನೇ ನೋಡುತ್ತಾ ಕಾಯುತ್ತಿದ್ದ. ಮಗ ಮನೆಗೆ ಬರುವುದು ಸ್ವಲ್ಪ ತಡವಾದರೂ ನನ್ನ ಬಳಿ ಬಂದು ಜೋರಾಗಿ ಕೂಗುತ್ತಾ ಚಡಪಡಿಸುತ್ತಿದ್ದ.

ಕಾರಿನಲ್ಲಿ ಓಡಾಡುವುದನ್ನು ಚಿನ್ನು ಬಹಳ ಇಷ್ಟಪಡುತ್ತಿದ್ದ. ಒಮ್ಮೆ ಅವನನ್ನು ಕರೆದುಕೊಂಡು ನಮ್ಮೆಲ್ಲಾ ನೆಂಟರಿಷ್ಟರ ಊರುಗಳಿಗೆ ಹೋಗಿ ಸುಮಾರು 1,200 ಕಿ. ಮೀ. ಪ್ರಯಾಣ ಮಾಡಿ ಬಂದೆವು. ಚಿನ್ನುವನ್ನು ಹೊರಗೆ ಕರೆದೊಯ್ಯುವಾಗ ನಾನೇ ಹೊಲೆದಿದ್ದ ಆರ್ನೆಸ್ ಹಾಕುತ್ತಿದ್ದೆವು. ಅವನಿಗಾಗಿ ಎರಡು ಮೂರು ಅಂಗಿಗಳನ್ನು ಹೊಲೆದಿದ್ದೆ. ಅವನು ಅಂಗಿ ತೊಟ್ಟು ಓಡಾಡುವುದನ್ನು ನೋಡುವುದೇ ಒಂದು ಸೊಗಸು. ಹಗಲು ಹೊತ್ತಿನಲ್ಲಿ ನನ್ನ ಜೊತೆಯೇ ಓಡಾಡಿಕೊಂಡಿರುತ್ತಿದ್ದ ಚಿನ್ನು, ಸಾಯಂಕಾಲ ಮಗ ಶಾಲೆಯಿಂದ ಬಂದೊಡನೆ ಅವನ ಜೊತೆಗೆ ರೂಮು ಸೇರುತ್ತಿದ್ದ. ನನ್ನವರು ಮನೆಗೆ ಬಂದ ನಂತರ ಮತ್ತೆ ಎಲ್ಲರೊಡನೆ ಆಟ, ಆಟ. ಅವನ ಆಟ ನೋಡುತ್ತಾ ನಮಗೂ ಹೊತ್ತು ಹೋದದ್ದೇ ತಿಳಿಯುತ್ತಿರಲಿಲ್ಲ.

ಅವನಿಗೆ ನಾಲ್ಕು ತಿಂಗಳಾಗುವ ಹೊತ್ತಿಗೆ ನಾವು ನೋಡಿಕೊಂಡಿದ್ದೇ, ಮನೆಯ ಮುಂದಿನ ಕಾಂಪೌಂಡ್ ಒಳಗೆ ಸ್ವಲ್ಪ ಹೊತ್ತು ಓಡಾಡಲು ಬಿಡುತ್ತಿದ್ದೆವು. ಒಮ್ಮೆ ಮನೆಯ ಮುಂದಿನ ಗಿಡದ ಬುಡದಲ್ಲಿಂದ ಇಲಿಯನ್ನು ಹಿಡಿದು, ಅದನ್ನು ಮೇಲೆ ಚಿಮ್ಮುವುದು, ಮತ್ತೆ ಕ್ಯಾಚ್ ಹಿಡಿಯುವುದು ಮಾಡುತ್ತಿದ್ದ. ಇಲಿಯನ್ನು ಬಿಡಿಸಿ ಚಿನ್ನುವನ್ನು ಒಳಗೆ ಕರೆತರುವಷ್ಟರಲ್ಲಿ ಸಾಕು ಬೇಕಾಯಿತು. ಇನ್ನೊಮ್ಮೆ ಮನೆಯ ಪಕ್ಕದ ತಂತಿ ಬೇಲಿಯ ಆಚೆ ನಿಂತು ಚಿನ್ನುಗೆ ಬೊಗಳುತ್ತಿದ್ದ ನಾಯಿಯ ಮೂತಿಗೆ (ಎರಡು ಕಾಲಲ್ಲಿ ಎದ್ದು ನಿಂತು) ಎರಡು ಕೈಗಳಿಂದ ಪಟಪಟನೆ ಹೊಡೆದುಬಿಟ್ಟ. ಆ ನಾಯಿ ತನಗೆ ಏನಾಗುತ್ತಿದೆ ಎಂದು ಅರಿಯುವ ಮುನ್ನ ಆ ನಾಯಿಯ ಕೆನ್ನೆಗೆ ಬಾರಿಸಿ ಒಳಗೆ ಓಡಿ ಬಂದಿದ್ದ.

ನಂತರದ ದಿನಗಳಲ್ಲಿ ಆಗಾಗ ಮನೆಯಿಂದ ಆಚೆ ಹೋಗುತ್ತಿದ್ದ ಚಿನ್ನು, ಒಂದೆರಡು ಗಂಟೆ ಸುತ್ತಾಡಿ ಅವನೇ ಮನೆಗೆ ಬರುತ್ತಿದ್ದ. ರಾತ್ರಿ ಹೊತ್ತು ಮಧ್ಯರಾತ್ರಿವರೆಗೂ ನಮ್ಮ ಮಗನ ಜೊತೆಯಲ್ಲಿ ಅವನ ರೂಮಿನಲ್ಲಿ ಮಲಗಿ ಚೆನ್ನಾಗಿ ನಿದ್ದೆ ಮಾಡಿ ನಂತರ ಆಚೆ ಹೋಗುತ್ತಿದ್ದ. ಅವನು ಮನೆ ಆಚೆ ಹೋಗಿ ಬರಲು ಒಂದು ಕಿಟಕಿಯನ್ನು ತೆರೆದು ಬಿಟ್ಟಿದ್ದೆವು. ಅದರ ಮೂಲಕ ಅವನಿಗೆ ಬೇಕೆನಿಸಿದಾಗ ಆಚೆ ಹೋಗಿ ಬರುತ್ತಿದ್ದ. ಪ್ರತಿದಿನ ರಾತ್ರಿ 12 ಗಂಟೆಯ ನಂತರ ಮನೆಯಿಂದ ಆಚೆ ಹೋಗಿ ಬೆಳಗಿನ ಜಾವ ನಾಲ್ಕು ಗಂಟೆ ಒಳಗೆ ವಾಪಸ್ ಬರುತ್ತಿದ್ದ.

ಕಾರಿನಲ್ಲಿ ಪಯಣಿಸುವುದನ್ನು ಇಷ್ಟಪಡುತ್ತಿದ್ದ ಚಿನ್ನು ಕೆಲವೊಮ್ಮೆ ಹಗಲು ಹೊತ್ತಿನಲ್ಲಿ ಬೇಸ್ಮೆಂಟ್ ಕಿಟಕಿಯ ಮೂಲಕ ಒಳಗೆ ಹೋಗಿ ಅಲ್ಲಿ ನಿಲ್ಲಿಸಿದ್ದ ನಮ್ಮ ಕಾರಿನೊಳಗೆ ಹೋಗಿ ಮಲಗುತ್ತಿದ್ದ. ಅವನು ತಾನಾಗಿಯೇ ಆಚೆ ಓಡಾಡಲು ಶುರು ಮಾಡಿದ ಮೇಲೆ ಅವನ ಶೌಚಕ್ಕೆ ಬಾತ್ರೂಮಿನಲ್ಲಿ ಇಟ್ಟಿದ್ದ ಬಾಂಡ್ಲಿಯನ್ನು ತೆಗೆದೆವು. ಅವನು ಮತ್ತೆಂದೂ ಮನೆಯಲ್ಲಿ ಶೌಚವನ್ನು ಮಾಡಲಿಲ್ಲ.

ಕೆಲವೊಮ್ಮೆ ನಾವು ದಿನವಿಡಿ ಎಲ್ಲಿಯಾದರೂ ಹೊರಗೆ ಹೋಗಬೇಕಾದಾಗ, ಅವನ ಊಟದ ಬಟ್ಟಲಿಗೆ ಕ್ಯಾಟ್ ಫುಡ್ ತುಂಬಿಸಿಟ್ಟು ಇನ್ನೊಂದು ಬಟ್ಟಲಿನಲ್ಲಿ ನೀರಿಟ್ಟು ಹೋದರೆ ಅವನಿಗೆ ಎಷ್ಟು ಬೇಕೋ ಅಷ್ಟು ತಿಂದು ಮನೆಯ ಹೊರ ಒಳಗೆ ಓಡಾಡಿಕೊಂಡಿರುತ್ತಿದ್ದ. ನಿದ್ದೆ ಬಂದಾಗ ಸೋಫಾ ಮೇಲೆ ಗಡದ್ದು ನಿದ್ದೆ ಮಾಡುತ್ತಿದ್ದ. ನಾವು ಮನೆಯಲ್ಲಿ ಇಲ್ಲದೇ ಇರುವಾಗಲೂ ಆರಾಮಾಗಿರುವ ಅವನನ್ನು ನೋಡಿದ ಮೇಲೆ ಒಮ್ಮೆ ಮೂರು ದಿನಗಳ ಪ್ರವಾಸ ಹೋಗಿ ಬಂದೆವು. ಮೂರು ದಿನಕ್ಕಾಗುವಷ್ಟು ಬೇರೆ ಬೇರೆ ಬಟ್ಟಲಿನಲ್ಲಿ ಹಾಕಿಟ್ಟಿದ್ದ ಫುಡ್ ತಿಂದು ನೀರು ಕುಡಿದು ಬಿಂದಾಸಾಗಿದ್ದ.

ಪಶು ವೈದ್ಯರು ತಿಳಿಸಿದ್ದ ಇಂಜೆಕ್ಷನ್ ಔಷಧಿಗಳನ್ನು ಕಾಲಕಾಲಕ್ಕೆ ಕೊಡಿಸುತ್ತಿದ್ದೆವು. ಅವರು ತಿಳಿಸಿದಂತೆ ಸರ್ಜರಿ ಕೂಡ ಮಾಡಿಸಿದೆವು. ಬಹಳ ಚೆನ್ನಾಗಿ ಬೆಳೆದಿದ್ದ ಅವನು ಒಂದು ದಿನವೂ ಆರೋಗ್ಯ ಕೆಡಿಸಿಕೊಳ್ಳಲಿಲ್ಲ. ಎತ್ತರ ದಪ್ಪ ಎಲ್ಲವೂ ಭರ್ಜರಿಯಾಗಿ ಬೆಳೆದಿದ್ದ ಚಿನ್ನು ಒಮ್ಮೆ ಇಲಿಯನ್ನು ಬೇಟೆಯಾಡಿ ಮನೆಗೆ ಹೊತ್ತು ತಂದಿದ್ದ. ಸತ್ತಿದ್ದ ಇಲಿಯನ್ನು ಅವನಿಂದ ಬಿಡಿಸಿ ಅದನ್ನು ಪೇಪರಲ್ಲಿ ಸುತ್ತಿ ಸ್ಕೂಟರ್ ನಲ್ಲಿ ಹೋಗಿ ದೂರ ಎಸೆದು ಬಂದಿದ್ದೆ. ಆಮೇಲೆ ಎಂದೂ ಅವನು ಬೇಟೆಯಾಡಿದ ಇಲಿಯನ್ನು ಮನೆಗೆ ತರುತ್ತಿರಲಿಲ್ಲ. ಬುದ್ಧಿವಂತ ಚಿನ್ನು ಬೇಟೆಯಾಡಿ ಹೊರಗೇ ತಿಂದು ಬರುತ್ತಿದ್ದನೇನೊ ಗೊತ್ತಿಲ್ಲ..

ಒಂದೂವರೆ ವರ್ಷ ಬಿಂದಾಸಾಗಿ ಓಡಾಡಿಕೊಂಡಿದ್ದ ಚಿನ್ನು ಅದೊಂದು ದಿನ ರಾತ್ರಿ ಒಂದು ಗಂಟೆಗೆ ಆಚೆ ಹೋದವನು ಬೆಳಗಾದರೂ ಮನೆಗೆ ಬರಲಿಲ್ಲ. ಬೆಳಿಗ್ಗೆ, ಮಧ್ಯಾಹ್ನ, ಸಂಜೆಯ ತನಕ ಅವನ ನಿರೀಕ್ಷೆಯಲ್ಲಿಯೇ ಕಾಲ ಕಳೆದೆ. ಶಾಲೆಯಿಂದ ಬಂದ ಮಗ “ಚಿನ್ನು ಬಂದನಾ?” ಎಂದು ಕೇಳುತ್ತಲೇ ಒಳಗೆ ಬಂದ. ರಾತ್ರಿ ಬರಬಹುದೆಂದು ಕಾದೆವಾದರೂ ಚಿನ್ನು ಮರಳಿ ಬರಲಿಲ್ಲ. ನಮ್ಮ ಏರಿಯಾದ ಸುತ್ತಮುತ್ತಲೆಲ್ಲಾ ಅವನಿಗಾಗಿ ಹುಡುಕಾಡಿದೆವು. ಗೊತ್ತಿದ್ದವರಿಗೆಲ್ಲ ಕೇಳಿದೆವು. ಆದರೆ, ಏನೂ ಪ್ರಯೋಜನವಾಗಲಿಲ್ಲ. ಚಿನ್ನು ಮತ್ತೆಂದೂ ಮರಳಿ ಬರಲಿಲ್ಲ. ಅವನಿಗೆ ಏನಾಯಿತು ಎಂಬುದೂ ತಿಳಿಯಲಿಲ್ಲ. ಅವನ ನೆನಪು ಮತ್ತು ಅವನ ಫೋಟೋ, ವಿಡಿಯೋಗಳು ಮಾತ್ರ ನಮ್ಮಲ್ಲಿ ಉಳಿದಿವೆ.

ಮುಂದಿನ ಸಂಚಿಕೆಯಲ್ಲಿ ಕಿಟ್ಟು ಪುಟ್ಟುವಿನ ಆಗಮನದ ಸಂಗತಿಯನ್ನು ಹಂಚಿಕೊಳ್ಳುವೆ.

ತಪ್ಪದೆ ಓದಿ, ಹಿಂದಿನ ಸಂಚಿಕೆಗಳು :


  • ಕೆ.ಸಿ. ರತ್ನಶ್ರೀ ಶ್ರೀಧರ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW