ವಿದೇಶದಲ್ಲಿದ್ದ ಮಗನೊಟ್ಟಿಗಿನ ಪ್ರತಿದಿನದ ಫೋನ್ ಸಂಭಾಷಣೆಯಲ್ಲಿ 99% ಮಾತುಕತೆ ಚಿನ್ನುವನ್ನು ಕುರಿತದ್ದೇ ಆಗಿರುತ್ತಿತ್ತು. ” ಇಂದು ಚಿನ್ನು ಏನು ಮಾಡಿದ, ಏನು ಮಾಡುತ್ತಿದ್ದಾನೆ, ಏನನ್ನು ತಿಂದ, ಹೇಗಿದ್ದಾನೆ, ಅವನ ಮುಂದಿನ ವ್ಯಾಕ್ಸಿನೇಷನ್ ಯಾವಾಗ” ಚಿನ್ನುವಿನೊಡನೆ ಬಾಂಧವ್ಯದ ಕುರಿತು ತಪ್ಪದೆ ಓದಿ, ಲೇಖಕಿ ಕೆ ಸಿ ರತ್ನಶ್ರೀ ಶ್ರೀಧರ್ ಅವರ ‘ಮೂಕ ಜಗತ್ತಿನ ಸುತ್ತ ನಮ್ಮ ಜಗತ್ತು’ ಅಂಕಣ…
ಚಿನ್ನುಗೆ ಸ್ನಾನ ಮಾಡಿಸಿದ ಮೇಲೆ ಮನೆಯ ಮುಂದಿನ ಜಾಗದಲ್ಲಿ ಹೊರಳಾಡಿ ಮೈಯೆಲ್ಲಾ ಮಣ್ಣು ಮಾಡಿಕೊಳ್ಳುವ ಅಭ್ಯಾಸವಿತ್ತು. ಅದನ್ನು ತಪ್ಪಿಸಲು ಸ್ನಾನದ ನಂತರ ಮೈವರೆಸಿ ಸ್ವಲ್ಪ ಹೊತ್ತು ಬಿಸಿಲಿನಲ್ಲಿರಲಿ ಎಂದು ಕಾರ್ ಪಾರ್ಕಿಂಗ್ ಜಾಗದ ಟೈಲ್ಸ್ ನೆಲದ ಮೇಲೆ ಪ್ಲಾಸ್ಟಿಕ್ ಚೇರಿಗೆ ಚಿನ್ನುನ ಕತ್ತಿನ ಬೆಲ್ಟನ್ನು ಸಿಕ್ಕಿಸುತ್ತಿದ್ದೆ. ಅಲ್ಲಿಯೇ ಕುಳಿತು ಬಿಸಿಲು ಕಾಯಿಸುತ್ತಿದ್ದ. ಮೈ ಸಂಪೂರ್ಣ ಒಣಗಿದ ಮೇಲೆ ಪೌಡರ್ ಹಾಕಿ, ಕತ್ತಿನ ಬಿಲ್ಟ್ ಬಿಚ್ಚುತ್ತಿದ್ದೆ.
ಒಮ್ಮೆ ಇಲ್ಲೊಂದು ತಮಾಷೆ ನಡೆಯಿತು. ರಜೆಗೆಂದು ನಮ್ಮ ಮಗ ಮನೆಗೆ ಬಂದಿದ್ದ. ಆ ದಿನ ಅವನೇ ಚಿನ್ನುಗೆ ಸ್ನಾನ ಮಾಡಿಸಿ ಮೈವರೆಸಿದ. ನಾನು ಯಥಾಪ್ರಕಾರ ಕಾರ್ ಪಾರ್ಕಿಂಗ್ ಜಾಗದ ಪ್ಲಾಸ್ಟಿಕ್ ಚೇರಿಗೆ ಚಿನ್ನುನ ಬೆಲ್ಟ್ ಸಿಕ್ಕಿಸಿದೆ. ಇದನ್ನು ನೋಡಿ ಮಗ ನಗುತ್ತಾ “ಏನಮ್ಮ ಪ್ಲಾಸ್ಟಿಕ್ ಚೇರಿಗೆ ಬೆಲ್ಟ್ ಸಿಕ್ಕಿಸಿದ್ದೀಯಲ್ಲಾ! ಚಿನ್ನು ಎಳೆದರೆ ಚೇರು ಬರುವುದಿಲ್ಲವಾ?” ಎಂದ. “ಇಲ್ಲ, ಅವನನ್ನು ನಾನು ಕಟ್ಟಿಹಾಕಿದ್ದೇನೆಂಬ ಭ್ರಮೆಯಲ್ಲಿ ಅವನು ಚೇರನ್ನು ಎಳೆಯುವ ಪ್ರಯತ್ನ ಮಾಡುವುದಿಲ್ಲ” ಎಂದೇ. ಅದೇನನ್ನಿಸಿತೊ ಚಿನ್ನು ಎದ್ದು ಒಂದು ಹೆಜ್ಜೆ ಮುಂದಿಟ್ಟ. ಚೇರು ಸ್ವಲ್ಪ ಮುಂದಕ್ಕೆ ಜರುಗಿ ದಡ ಬಡ ಸದ್ದಾಯಿತು. ಗಾಬರಿಯಾದ ಚಿನ್ನು ಓಡಲಾರಂಭಿಸಿದ. ಅವನ ಹಿಂದೆಯೇ ಚೇರು ಅವನನ್ನು ಬೆನ್ನಟ್ಟಿತು. ಇನ್ನಷ್ಟು ಗಾಬರಿಯಾದ ಚಿನ್ನು ಮತ್ತೂ ಜೋರಾಗಿ ಓಡತೊಡಗಿದ. ಸುಮಾರು ನೂರು ಮೀಟರ್ ದೂರದಲ್ಲಿರುವ ಕಾಂಪೌಂಡ್ ಗೇಟಿನವರೆಗೂ ಓಡಿ ಹೋಗಿ ನಿಂತ. ನಾವಿಬ್ಬರೂ ಬಿದ್ದು ಬಿದ್ದು ನಗುತ್ತಾ ಓಡಿ ಹೋಗಿ ಬೆಲ್ಟ್ ಬಿಚ್ಚಿ ಅವನನ್ನು ಮನೆಯೊಳಗೆ ಕರೆದುಕೊಂಡು ಬಂದೆವು. ಈಗಲೂ ಅದನ್ನು ನೆನೆದರೆ ನಗು ಉಕ್ಕಿ ಬರುತ್ತದೆ.

ಚಿನ್ನುಗೆ ತಿರುಗಾಡಲು ವಾಕಿಂಗ್ ಹೋಗುವುದು ಎಂದರೆ ಬಹಳ ಇಷ್ಟ. (ವಾಕಿಂಗ್ ಹೋದಾಗ ಹೊರಗೆ ಅವನು ಮಲವಿಸರ್ಜನೆ ಮಾಡುತ್ತಿರಲಿಲ್ಲ. ಮನೆಯ ಹಿಂಭಾಗದ ದೂರದ ಕಾಂಪೌಂಡ್ ಮೂಲೆಯಲ್ಲಿರುವ ಮಣ್ಣಿನ ಗುಡ್ಡೆಯ ಪಕ್ಕ ಮಾತ್ರ ಮಾಡುತ್ತಿದ್ದ) ಪ್ರತಿ ದಿನ ಬೆಳಿಗ್ಗೆ ನಮ್ಮ ಸೆಕ್ಯೂರಿಟಿ ಗಾರ್ಡ್ ಚಿನ್ನುನನ್ನು ವಾಕಿಂಗ್ ಕರೆದುಕೊಂಡು ಹೋಗುತ್ತಿದ್ದ. ಸಾಯಂಕಾಲ ಮಾತ್ರ ನನ್ನ ಪತಿ ಆಫೀಸ್ ನಿಂದ ಬರುವುದನ್ನೇ ಕಾಯುತ್ತಿರುತ್ತಿದ್ದ. ಸಂಜೆ ಏಳು ಗಂಟಗೆ ಸರಿಯಾಗಿ ನಮ್ಮೊಂದಿಗೆ ಅವನ ವಾಕಿಂಗ್ ಸಮಯ ನಿಗದಿಯಾಗಿತ್ತು.
ಚಿನ್ನುವನ್ನು ಹೊರಗೆ ಕರೆದೊಯ್ಯುವಾಗ ಮಾತ್ರ ಅವನ್ ಕತ್ತಿಗೆ ಬೆಲ್ಟ್ ಹಾಕುತ್ತಿದ್ದೆವು. ಉಳಿದಂತೆ ದಿನಪೂರ್ತಿ ಮನೆಯ ಕಾಂಪೌಂಡ್ ಒಳಗೆ ಓಡಾಡಿಕೊಂಡಿರುತ್ತಿದ್ದ. ವಾಕಿಂಗ್ ಹೋಗುವ ಸಮಯಕ್ಕೆ ಸರಿಯಾಗಿ ಅವನ ಬೆಲ್ಟನ್ನು ಬಾಯಲ್ಲಿ ಕಚ್ಚಿಕೊಂಡು ಬಂದು ಖುಷಿಯಿಂದ ಕುಣಿದಾಡುತ್ತಾ ಬೆಲ್ಟ್ ಹಾಕಿಸಿಕೊಂಡ ನಂತರ ಅವನೇ ಅದನ್ನು ಬಾಯಲ್ಲಿ ಕಚ್ಚಿ ಹಿಡಿದುಕೊಂಡು ಕಾಂಪೌಂಡ್ ವರೆಗೂ ಓಡುತ್ತಿದ್ದ. ಅಲ್ಲಿಯವರೆಗೂ ನಮ್ಮ ಕೈಗೆ ಬೆಲ್ಟ್ ಕೊಡುತ್ತಲೇ ಇರಲಿಲ್ಲ. ಕಾಂಪೌಂಡ್ ದಾಟಿದ ಮೇಲೆ ನಮ್ಮ ಕೈಗೆ ಬೆಲ್ಟ್ ಕೊಡುತ್ತಿದ್ದ. ನಾವು ಹೋಗುವ ವಾಕಿಂಗ್ ರೂಟ್ ಅವನಿಗೆ ಬಹಳ ಚೆನ್ನಾಗಿ ತಿಳಿದಿತ್ತು. ಯಾವ ಜಾಗದಲ್ಲಿ ವಾಪಸ್ ತಿರುಗಬೇಕೆಂಬುದನ್ನು ಅರಿತಿದ್ದ ಅವನು ಅಲ್ಲಿಂದ ವಾಪಸ್ ತಿರುಗಿ ಮನೆಯ ಕಡೆಗೆ ನಮ್ಮನ್ನು ಅವನೇ ಕರೆದುಕೊಂಡು ಬರುತ್ತಿದ್ದ.
ಕೆಲವು ಭಾನುವಾರಗಳಂದು ಬೆಳಿಗ್ಗೆ ನಾವು ನಮ್ಮ ಮನೆಯಿಂದ ಮೂರು ಕಿಲೋಮೀಟರ್ ದೂರದಲ್ಲಿರುವ ಸಮುದ್ರ ತೀರಕ್ಕೆ ವಾಕಿಂಗ್ ಹೋಗುತ್ತಿದ್ದೆವು. ನಾವು ಬೀಚಿಗೆ ಹೊರಡುವ ಮುನ್ನ ನನ್ನ ಪತಿ ಚಿನ್ನುವನ್ನು ವಾಕಿಂಗ್ ಕರೆದುಕೊಂಡು ಹೋಗಿ ಬರುತ್ತಿದ್ದರು. ನಂತರ ನಾವು ಬೀಚಿಗೆ ಹೋಗಿ ಬರುವವರೆಗೂ ಮನೆಯ ಸುತ್ತ-ಮುತ್ತ ಓಡಾಡಿಕೊಂಡಿರುತ್ತಿದ್ದ.
ಚಿನ್ನುಗೆ ಒಮ್ಮೆ ಬೀಚ್ ತೋರಿಸಬೇಕೆಂದುಕೊಂಡು ಅವನನ್ನು ಕಾರಿನಲ್ಲಿ ಕರೆದುಕೊಂಡು ಹೋದೆವು. ಕಾರಿನಿಂದ ಇಳಿದು ಸಮುದ್ರ ತೀರಕ್ಕೆ ಹೋಗುತ್ತಿದ್ದಂತೆಯೇ ಮೊದಲ ಬಾರಿಗೆ ಸಮುದ್ರದ ಅಗಾಧತೆ ನೋಡಿ ಸಮುದ್ರದ ಅಲೆಗಳ ಬೋರ್ಗರೆವ ಸದ್ದಿಗೆ ಬೆಚ್ಚಿದ ಚಿನ್ನು ಹೆದರಿ ಮುದ್ದೆಯಾದ. ಅವನ ಮೈದಡವಿ, ಧೈರ್ಯ ತುಂಬಿ ನಿಧಾನಕ್ಕೆ ಮರಳಿನ ಮೇಲೆ ನಡೆಸಿಕೊಂಡು ಹೋದೆವು. ಅಲ್ಲಲ್ಲಿ ನಿಂತು ಅಲೆಗಳನ್ನು ತೋರಿಸುತ್ತಾ ಅವನ ಭಯವನ್ನು ಕಡಿಮೆ ಮಾಡಿದೆವಾದರೂ ಅವನ ಕಣ್ಣಲ್ಲಿ ಭಯದ ಛಾಯೆ ಇಣುಕುತ್ತಿತ್ತು. ಅಂದಿನ ನಮ್ಮ ಸಮುದ್ರ ತೀರದ ವಾಕಿಂಗ್ ಮೊಟಕುಗೊಳಿಸಿ ಮನೆಗೆ ವಾಪಸಾದವು.
ಒಂದು ವಾರದ ನಂತರ “ಭಾನುವಾರ ಸಮುದ್ರ ತೀರಕ್ಕೆ ನಾವಿಬ್ಬರೇ ಹೋಗೋಣ ಚಿನ್ನು ಬೇಡ ಅವನು ಹೆದರಿಕೊಳ್ಳುತ್ತಾನೆ” ಎಂದರು ನನ್ನ ಪತಿ.
“ಇನ್ನೊಂದೆರಡು ಬಾರಿ ಸಮುದ್ರ ತೀರಕ್ಕೆ ಕರೆದೊಯ್ದರೆ ಅವನ ಭಯ ಕಡಿಮೆಯಾಗುತ್ತದೆ” ಎಂದ ನಾನು ಚಿನ್ನುವನ್ನು ಹೊರಡಿಸಿದೆ. ಈ ಬಾರಿ ಬೀಚ್ಗೆ ಹೋದಾಗ ಚಿನ್ನುವಿನ ಭಯ ಸ್ವಲ್ಪಮಟ್ಟಿಗೆ ಕಡಿಮೆಯಾಗಿತ್ತು. ಅಲೆಗಳ ಪಕ್ಕದಲ್ಲಿ ಮರಳಿನ ಮೇಲೆ ನಡೆಯುತ್ತಾ ನಮ್ಮೊಂದಿಗೆ ಹೆಜ್ಜೆ ಹಾಕಿದ. ಅಲ್ಲಲ್ಲಿ ನಿಂತು ಅಲೆಗಳನ್ನೇ ದಿಟ್ಟಿಸಿದ. ಬೀಚ್ ವಾಕಿಂಗ್ ಮುಗಿಸುವಷ್ಟರಲ್ಲಿ ಚಿನ್ನು ನಡಿಗೆಯಲ್ಲಿ ಹುರುಪು ಮೂಡಿತು. ಕಣ್ಣಲ್ಲಿ ಖುಷಿಯ ಮಿಂಚು ಕಂಡಿತು.
ಒಂದು ವಾರ ಕಳೆದು ಮತ್ತೆ ಭಾನುವಾರ ಬಂದಿತು. ಅದು ಹೇಗೆ ಭಾನುವಾರ ಎಂದು ಚಿನ್ನುಗೆ ತಿಳಿಯಿತೊ ಗೊತ್ತಿಲ್ಲ. ಬೆಳ್ಳಂಬೆಳಿಗ್ಗೆ ಎದ್ದವನೇ ತನ್ನ ಬಾಯಲ್ಲಿ ಬೆಲ್ಟ್ ಕಚ್ಚಿ ಹಿಡಿದು ಕಾರಿನ ಬಳಿಗೆ ಓಡುವುದು ಮತ್ತೆ ಮನೆ ಒಳಗೆ ಓಡಿ ಬರುವುದು ಓ… ಓ… ಎಂದು ಸದ್ದು ಹೊರಡಿಸುತ್ತಾ ಕುಣಿದಾಡತೊಡಗಿದೆ. ಅವನ ಮೂಕ ಭಾಷೆಯಲ್ಲಿ ಬೀಚಿಗೆ ಹೋಗೋಣ ಎಂದು ಸ್ಪಷ್ಟವಾಗಿ ಹೇಳುತ್ತಿದ್ದ. ಈ ಬಾರಿ ಬೀಚ್ಗೆ ಹೋಗಲು ಕಾತರಿಸಿದ. ಖುಷಿಯಿಂದ ಕುಣಿದಾಡುತ್ತ ಬೀಚಿಗೆ ಬಂದ. ಮರಳಿನಲ್ಲಿ ಓಡಾಡಿದ. ಅಲೆಗಳನ್ನು ನೋಡುತ್ತಾ ವಿರಮಿಸಿದ. ಒಟ್ಟಿನಲ್ಲಿ ಸಂತಸದ ಕ್ಷಣಗಳನ್ನು ಅನುಭವಿಸಿದ. ಅಂದಿನಿಂದ ಭಾನುವಾರದ ಸಮುದ್ರ ತೀರದ ವಾಕಿಂಗ್ಗಾಗಿ ಕಾತರದಿಂದ ಕಾಯುತ್ತಿದ್ದ. ಕೆಲವೊಮ್ಮೆ ನಾನು ಬೆಂಗಳೂರಿಗೆ ಬಂದ ಸಮಯದಲ್ಲಿಯೂ ನನ್ನ ಪತಿ ಚಿನ್ನುವನ್ನು ಸಮುದ್ರ ತೀರಕೆ ಕರೆದೊಯ್ದು ಚಂದ ಚಂದದ ಫೋಟೋಗಳನ್ನು ತೆಗೆದು ನನಗೆ ಮತ್ತು ಮಗನಿಗೆ ಕಳಿಸುತ್ತಿದ್ದರು.
ವಿದೇಶದಲ್ಲಿದ್ದ ಮಗನೊಟ್ಟಿಗಿನ ಪ್ರತಿದಿನದ ಫೋನ್ ಸಂಭಾಷಣೆಯಲ್ಲಿ 99% ಮಾತುಕತೆ ಚಿನ್ನುವನ್ನು ಕುರಿತದ್ದೇ ಆಗಿರುತ್ತಿತ್ತು. “ಇಂದು ಚಿನ್ನು ಏನು ಮಾಡಿದ, ಏನು ಮಾಡುತ್ತಿದ್ದಾನೆ, ಏನನ್ನು ತಿಂದ, ಹೇಗಿದ್ದಾನೆ, ಅವನ ಮುಂದಿನ ವ್ಯಾಕ್ಸಿನೇಷನ್ ಯಾವಾಗ” ಇತ್ಯಾದಿ ಮಗನ ಪ್ರಶ್ನಾವಳಿಗಳಿಗೆ ಉತ್ತರಿಸಬೇಕಿತ್ತು. ಚಿನ್ನವನ್ನು ನೋಡುವ ಸಲುವಾಗಿ ವಾರಕ್ಕೆರಡು ಬಾರಿ ವಿಡಿಯೋ ಕಾಲ್ ತಪ್ಪದೇ ಮಾಡುತ್ತಿದ್ದ. ಅವನು ಚಿನ್ನುವನ್ನು ಮನದಣಿಯೇ ನೋಡುತ್ತಿದ್ದರೆ, ನಾನು ಮಗನನ್ನೇ ಕಣ್ತುಂಬಿ ಕೊಳ್ಳುತ್ತಿದ್ದೆ.
ಒಂದು ಅಥವಾ ಒಂದೂವರೆ ತಿಂಗಳಿಗೊಮ್ಮೆ ಶನಿವಾರ ಬೆಂಗಳೂರಿಗೆ ಬಂದು, ಮತ್ತೆ ಭಾನುವಾರ ರಾತ್ರಿ ಚೆನ್ನೈಗೆ ವಾಪಸ್ ಆಗುವ ಪರಿಪಾಠ ನಮ್ಮದು. ಹೀಗೆ ಬರುವಾಗಲೆಲ್ಲಾ ಚಿನ್ನುವನ್ನು ಅಲ್ಲಿ ಬಿಟ್ಟು ಬರಲು ಬೇಸರವಾದರೂ ಅದು ಅನಿವಾರ್ಯವಾಗಿತ್ತು. ಆದರೆ ನಮ್ಮ ಸೆಕ್ಯೂರಿಟಿ ಗಾರ್ಡ್ಗಳು ನಾವಿಲ್ಲದಿದ್ದ ಸಮಯದಲ್ಲಿ ಅವನನ್ನು ಬಹಳ ಮುಚ್ಚಟೆಯಿಂದ ನೋಡಿಕೊಳ್ಳುತ್ತಿದ್ದರು. ಚಿನ್ನುಗಾಗಿ ಹಾಸ್ಟೆಲ್ ನಿಂದ ಊಟ ತಿಂಡಿಯ ವ್ಯವಸ್ಥೆ ಮಾಡಿರುತ್ತಿದ್ದೆವು. ಆದರೆ, ಯಥೇಚ್ಛ ತರಕಾರಿ ಪಲ್ಯವಿಲ್ಲದ ಹಾಸ್ಟೆಲ್ ಊಟ ತಿಂಡಿ ಅವನಿಗೆ ಅಷ್ಟಾಗಿ ರುಚಿಸುತ್ತಿರಲಿಲ್ಲ. ನಾನು ಊರಿಗೆ ವಾಪಸ್ ಹೋದ ನಂತರವೇ ಭೂರಿ ಭೋಜನ ಅವನಿಗೆ.
ಕಳೆದ ವರ್ಷ ನಾನು ಬೆಂಗಳೂರಿನಲ್ಲಿದ್ದ ಸಮಯ. ನನ್ನವರು ಚೆನ್ನೈನಲ್ಲಿ ಚಿನ್ನುನೊಂದಿಗಿದ್ದರು. ಅಂದು ನನ್ನ ಪತಿ ಶನಿವಾರ ಮುಂಜಾನೆ ಚಿನ್ನುಗೆ ಊಟ ಹಾಕಿ ಬೆಂಗಳೂರಿಗೆ ಹೊರಟಿದ್ದರು. ಸೆಕ್ಯೂರಿಟಿ ಗಾರ್ಡ್ ಚಿನ್ನುವನ್ನು ವಾಕಿಂಗ್ ಕರೆದುಕೊಂಡು ಹೋಗಿ ಬಂದಿದ್ದಾನೆ. ಕಾಂಪೌಂಡ್ ಒಳಗೆ ಬಂದ ಚಿನ್ನು ಮಲಗಿದವನು ಮತ್ತೆ ಮೇಲೇಳಲೇ ಇಲ್ಲ. ನಾನು, ನನ್ನ ಪತಿ ಮತ್ತು ನನ್ನ ಮಗನ ದುಃಖವನ್ನು ತೋಡಿಕೊಳ್ಳಲು ಪದಗಳೇ ಇಲ್ಲವಾದವು. ಅವನನ್ನು ಕಳೆದುಕೊಂಡು ಒಂದು ವರ್ಷದ ಬಳಿಕ ಈಗ ಆ ದುಃಖದ ತೀವ್ರತೆ ಕಡಿಮೆಯಾಗಿದ್ದರೂ, ಅವನ ಅಂದಿನ ಆಟ ಚಿನ್ನಾಟಗಳು ನಾವು ಮೂವರ ಹೃದಯದಲ್ಲೂ ಅಚ್ಚ ಹಸುರಾಗಿವೆ. ನಮ್ಮ ಮುದ್ದಿನ, ಪ್ರೀತಿಯ ಚಿನ್ನು ನಮ್ಮ ಮನೆಯ ಹಿತ್ತಲ ಬಾಳೆ ಮರದ ಬುಡದಲ್ಲಿ ಶಾಶ್ವತವಾಗಿ ಮಲಗಿದ್ದಾನೆ.
(ಸಂಚಿಕೆ ಮುಂದುವರೆಯುವುದು)
ತಪ್ಪದೆ ಓದಿ, ಹಿಂದಿನ ಸಂಚಿಕೆಗಳು :
- ಮೂಕ ಜಗತ್ತಿನ ಸುತ್ತ ನಮ್ಮ ಜಗತ್ತು – (ಭಾಗ-೧)
- ಮೂಕ ಜಗತ್ತಿನ ಸುತ್ತ ನಮ್ಮ ಜಗತ್ತು – (ಭಾಗ-೨)
- ಮೂಕ ಜಗತ್ತಿನ ಸುತ್ತ ನಮ್ಮ ಜಗತ್ತು – (ಭಾಗ-೩)
- ಮೂಕ ಜಗತ್ತಿನ ಸುತ್ತ ನಮ್ಮ ಜಗತ್ತು – (ಭಾಗ-೪)
- ಕೆ.ಸಿ. ರತ್ನಶ್ರೀ ಶ್ರೀಧರ್ – ಚೆನ್ನೈ
