‘ಚಕ್ಕುಲಿ ಅಜ್ಜಿ’ ಸಣ್ಣಕತೆ

ಚಕ್ಕುಲಿ ಅಜ್ಜಿಗೆ ಹತ್ತಿರದ ಸಂಬಂಧಿಕರು ಯಾರು ಇಲ್ಲವೇ? ಒಬ್ಬರೇ ಯಾಕಿರತ್ತಾರೆ? ಅಜ್ಜಿಗೆ ಮಕ್ಕಳಿಲ್ಲವೇ? ಹಲವಾರು ಯೋಚನೆ ರೋಹಿಣಿಗಿತ್ತು. ಮನಸಾರೆ ಅಜ್ಜಿಯನ್ನು ಪ್ರೀತಿಸುತ್ತಿದ್ದ ರೋಹಿಣಿಗೆ ಅಜ್ಜಿ ಕಾಣೆಯಾದಾಗ ಏನಾಯಿತು ಕತೆಗಾರ್ತಿ ಅರುಣಾ ಜಿ ಭಟ್ ಅವರ ಸಣ್ಣಕತೆಯನ್ನು ತಪ್ಪದೆ ಮುಂದೆ ಓದಿ…

ಎರಡು ದಿವಸಗಳಿಂದ ಮಗ “ಚಕ್ಕುಲಿ ಮಾಡಮ್ಮಾ…ಪ್ಲೀಸ್… ನಾನು ಹೆಲ್ಪ್ ಮಾಡುವೆ. ಚಂದವಾಗಿ ಚಕ್ಕುಲಿ ಒತ್ತಿ ಕೊಡುವೆ” ಎನ್ನುತ್ತಿದ್ದುದರಿಂದ ರೋಹಿಣಿ ಚಕ್ಕುಲಿ ಮಾಡಿದ್ದಳು. ಮಗ ರೋಹಿತ್ ಹೇಳಿದಂತೆ ಸಹಾಯವೂ ಮಾಡಿದ್ದ.

ಚಕ್ಕುಲಿಗಳನ್ನು ಡಬ್ಬದಲ್ಲಿ ತುಂಬಿಸಿ ಆದ ಮೇಲೆ ಒಂದು ಚಕ್ಕುಲಿ ಮುರಿದು ಬಾಯಿಗೆ ಹಾಕಿ ಕೊಂಡಳು. ಬಲು ಮೃದು. ಪರಿಮಳ.

“ಅಬ್ಬಾ… ಅಷ್ಟು ಕಷ್ಟ ಪಟ್ಟಿದ್ದು ಸಾರ್ಥಕವಾಯ್ತು. ಬಲು ರುಚಿ” ಅಂದುಕೊಂಡಳು ರೋಹಿಣಿ.

ಪತಿ ರಾಜೀವನು ಮಕ್ಕಳು ಅದಾಗಲೇ “ಫಸ್ಟ್ ಕ್ಲಾಸ್” ಎಂದು ಸರ್ಟಿಫಿಕೇಟ್ ಕೊಟ್ಟಿದ್ದರು. ಆದರೂ ಮಾಡಿದವರ ಮನಸು, ಬಾಯಿ ಒಪ್ಪಿದರೆ ಸಮಾಧಾನ ಎನ್ನುವುದು ರೋಹಿಣಿಯ ಅಭಿಪ್ರಾಯ.

ಒಂದು ತುಂಡು ಚಕ್ಕುಲಿ ಪುನಃ ಬಾಯಿಗೆ ಹಾಕಿದಾಗ ಥಟ್ಟನೆ ರೋಹಿಣಿಗೆ ಹೈಸ್ಕೂಲ್ ಗೆ ಹೋಗುತ್ತಿದ್ದ ದಿನಗಳು ನೆನಪಾದವು. ಚಕ್ಕುಲಿಯಂತೆ ಸುರುಳಿ ಸುತ್ತಿದ್ದ ನೆನಪಿನ ಸುರುಳಿ ಮೆಲ್ಲ ಮೆಲ್ಲನೆ ಬಿಡಿಸಿತು.

ರೋಹಿಣಿಯ ಬಾಲ್ಯ ಹಳ್ಳಿಯಲ್ಲಿ ಕಳೆದಿತ್ತು. ಶಾಲೆಗೆ ಹೋಗಲು ಆರು ಮೈಲಿ ನಡೆದು ಹೋಗಬೇಕು. ಏಳೆಂಟು ಗೆಳತಿಯರು ಇರುವ ಒಂದು ಗುಂಪು. ದಿನವೂ ಅಲ್ಲಲ್ಲಿ ಜೊತೆ ಸೇರಿ ಶಾಲೆಗೆ ಪಯಣ. ಸದಾ ಚುರುಕಾಗಿರುವ ಮಾತು ಮಾತಿಗೂ ಗೆಳತಿಯರನ್ನು ನಗಿಸುವ ರೋಹಿಣಿ ಆ ಗುಂಪಿನ ನಾಯಕಿ. ಸ್ವಲ್ಪ ಧೈರ್ಯವೂ ಜಾಸ್ತಿ.ಗೆಳತಿಯರಿಗಿಂತ ಅಷ್ಟೇ. ಕೆಲವು ತೀರ್ಮಾನ ತೆಗೆದು ಕೊಳ್ಳುವುದು ರೋಹಿಣಿಯೇ. ಉಳಿದವರು “ಆಯ್ತು ಮಾರಾಯ್ತಿ” ಎನ್ನುವರು.

ಒಂದು ದಿನ ಸೋಮವಾರ ನೀಲಿ ಲಂಗ ಬಿಳಿ ರವಿಕೆ ಧರಿಸಿದ ಗೆಳತಿಯರು ಎಂದಿನಂತೆ ನಗು,ಮಾತುಗಳ ಗೌಜಿಯಲ್ಲಿ ನಡೆದು ಬರುತ್ತಿದ್ದರು. ಗುಡ್ಡದ ಹಾದಿ ಮುಗಿದು ಡಾಮಾರು ರಸ್ತೆಗೆ ಸೇರುವ ತಗ್ಗಿನ ಜಾಗದಲ್ಲಿ ಒಂದು ಮನೆ ಪ್ರತ್ಯಕ್ಷವಾವಿತ್ತು. ಮನೆಯೆಂದರೆ ಮನೆಯಂತಿರಲಿಲ್ಲ. ಒಂದು ನೀಲಿ ಬಣ್ಣದ ಟರ್ಪಾಲ್ ಹೊದೆಸಿತ್ತು. ಮಾಡಿಗೆ. ಸುತ್ತಲೂ ಸಂಗೀಸಿನ (ಟoಗೀಸಿನ) ಗೋಣಿ ಕಟ್ಟಿತ್ತು. ಬಾಗಿಲಿನ ಜಾಗಕ್ಕೆ ದೊಡ್ಡ “ಅರೆ ಮಡಲನ್ನು (ತಾಳೆ ಗರಿ) ಮುಚ್ಚಲಾಗಿತ್ತು.

“ಅಲ್ನೋಡಿ …ಅಲ್ನೋಡಿ” ರೋಹಿಣಿಯ ಅಚ್ಚರಿಯ ಧ್ವನಿ ಕೇಳಿ ಎಲ್ಲ ಗೆಳತಿಯರ ನೋಟ ಆ ಕಡೆಗೆ.

“ಈಗ ಹೋಗಿ ನೋಡಿದರೆ ಲೇಟ್ ಆಗುತ್ತೆ. ಸಂಜೆ ಬರುವಾಗ ನೋಡುವನಾ ?” ರೋಹಿಣಿ ಹೇಳಿದಾಗ “ಹಾಗೇ ಮಾಡುವ” ಒಕ್ಕೊರಲ ದನಿ. ರೋಹಿಣಿಗೆ ಶಾಲೆಯಲ್ಲಿ ಪಾಠ ಕೇಳುವಾಗಲೂ ಆ ಟರ್ಪಾಲ್ ಮನೆಯೇ ಕಾಣುತ್ತಿತ್ತು.

“ಯಾರಿರ ಬಹುದು? ಶನಿವಾರ ಇರದಿದ್ದ ಮನೆ ಸೋಮವಾರ ಹೇಗೆ ಬಂತು?” ಇದೇ ಯೋಚನೆ. ಕುತೂಹಲ ಜಾಸ್ತಿ ರೋಹಿಣಿಗೆ ಎಲ್ಲದರಲ್ಲೂ. ಯೋಚನೆಯೂ ಹೆಚ್ಚು.

ಸಂಜೆ ಶಾಲೆ ಬಿಟ್ಟ ಕೂಡಲೇ ಓಟ. ಎಂದಿಗಿಂತ ಹೆಚ್ಚಿನ ವೇಗ. ಎಲ್ಲರೂ ಒಟ್ಟಿಗೆ ಓಡುವಾಗ ಖಾಕಿ ಚೀಲದೊಳಗಿನ ಖಾಲಿ ಬುತ್ತಿಯ ಒಂದೇ ರೀತಿಯ ಸದ್ದುತಾಳ ಹಾಕಿದಂತೆ ಕೇಳಿಸುತ್ತಿತ್ತು. ಎಲ್ಲರ ಕಾಲುಗಳಲ್ಲಿಯೂ ಇರುವ ಸ್ಲಿಪ್ಪರ್ (ಚಪ್ಪಲಿ)ಚಟ್ ಪಟ್ ಸದ್ದು ಜೊತೆಗೆ. ಮಗುವನ್ನು ಎತ್ತಿಕೊಂಡ ಹಾಗೆ ಕೈಯಲ್ಲಿ ಕೊಕ್ಕೆ ಕಾಲಿನ ಉದ್ದಾ ಕೊಡೆ.

ಟರ್ಪಾಲು ಹೊದೆಸಿದ ಮನೆ ಸಮೀಪಿಸಿದಾಗ ಓಟ ನಿಲ್ಲಿಸಿದರು. ಮೆಲ್ಲನೆ ನಡಿಗೆ.

“ಹೋಗುವನಾ…ಆ ಬಾಗಿಲ ಹತ್ರ?” ರೋಹಿಣಿಯ ಪ್ರಶ್ನೆಗೆ ಉತ್ತರವಿಲ್ಲ.

“ಹೆದ್ರಿಕೆ ಆಗುತ್ತೆ ರೋಹಿ. ಯಾರಾದ್ರೂ ಕಳ್ಳರು ಆಗಿದ್ರೆ…ಅಲ್ಲಿರುವವರು.ನಂಗೆ ಹೆದ್ರಿಕೆ ಮಾರಾಯ್ತಿ” ಎಂದು ಗೆಳತಿ ಶಾಂತಿ ಹೇಳಿದಾಗ ರೋಹಿಣಿ ಒಂದು ನಿಮಿಷ ಯೋಚಿಸಿದಳು.

“ನೀವಿಲ್ಲೆ ನಿಲ್ಲಿ ಆಯ್ತಾ. ನಾನು ಮೆಲ್ಲಗೆ ಹೋಗಿ ನೋಡ್ತೇನೆ. ಸದ್ದು ಮಾಡೋದೇ ಇಲ್ಲ” ಎನ್ನುತ್ತಾ ಕಳ್ಳ ಹೆಜ್ಜೆಯಿಟ್ಟು ನಡೆದಳು.

ಅರೆ ಮಡಲಿನ ಸಂದಿಯಲ್ಲಿ ಕಳ್ಳಿಯಂತೆ ಇಣುಕಿದಳು. ಉಹುಂ..ಯಾರೂ ಕಾಣಲಿಲ್ಲ. ಒಂದು ಸುತ್ತಿಟ್ಟ ಚಾಪೆ. ದಿಂಬಿನ ಬದಲಿಗೆ ಒಂದು ಗೋಣಿಯ ಕಟ್ಟು. ಅದರ ಬಳಿಯಲ್ಲಿ ಒಂದು ಗಟ್ಟಿ ದಂಟು. (ಊರು ಗೋಲು) ಸೀಮೆ ಎಣ್ಣೆ ಸ್ಟೌ. ಅಲ್ಯೂಮಿನಿಯಂ ಪಾತ್ರೆಗಳು. ಎರಡು ಬುಡ್ಡಿ ದೀಪ. ಒಂದು ಪೊರಕೆ. ಆಚೆ ಮೂಲೆಯಲ್ಲಿ ಗಣಪತಿ ದೇವರ ಫೋಟೋ. ಇಷ್ಟು ಕಾಣಿಸಿತು.

ಈಚೆ ಬದಿಯಲ್ಲಿ ಏನೋ ಕಾಣಿಸಿತು. ಸ್ಪಷ್ಟವಾಗಿ ಕಾಣಿಸುತ್ತಿಲ್ಲವೆಂದು ಕೈಯನ್ನು ಆ ಮಡಲಿನ ಮೇಲಿಟ್ಟು ಸ್ವಲ್ಪ ಬಾಗಿ ನೋಡಿದಳು. ಕೈ ಇಟ್ಟಾಗ ಆ ಮಡಲು ಬರ ಬರ ಸದ್ದಾಯಿತು.

“ಯಾರದು? ಏನುಂಟು ಇಲ್ಲಿ ಅಂತ ಅಲ್ಲಿ ಇಣುಕುವುದು? ಏನ್ ಬೇಕು?” ಕೋಪ ಬೆರೆತ ಕಠಿಣ ಧ್ವನಿ ಕೇಳಿದಾಗ ರೋಹಿಣಿ ಗಾಬರಿಯಿಂದ ಅಲ್ಲಿಂದ ಕಾಲ್ಕಿತ್ತಳು. ಮಿಂಚಿನ ವೇಗದಲ್ಲಿ. ಅವಳ ಓಟ ಕಂಡು ಗೆಳತಿಯರು ಭಯದಿಂದ ಓಡ ತೊಡಗಿದ್ದರು. “ಏಯ್ ನಿಲ್ಲಿ ಬಿಟ್ಟೋಡಬೇಡಿ” ರೋಹಿಣಿ ಕಿರುಚಿದರೂ ಕೇಳಿಸದವರಂತೆ ಓಟ.

ಹೇಗೋ ಅವರ ಜೊತೆ ಸೇರಿದಳು ರೋಹಿಣಿ.

“ಅಲ್ಲಿ ಯಾರೋ ಇದ್ದಾರೆ . ಹೆಂಗಸಿನ ಸ್ವರ ಕೇಳಿದೆ. ನನ್ನನ್ನು ಬೈದ್ರು. ಜೋರಿದ್ದಾರೆ … ಯಬ್ಬೋ” ಸಾವಧಾನವಾಗಿ ಉಸಿರು ಎಳೆದುಕೊಂಡು ರೋಹಿಣಿ ಹೇಳುವಾಗ ಗೆಳತಿಯರ ಮುಖಗಳಲ್ಲಿ ಭಯದ ಛಾಯೆ.

“ನಾಳೆ ಒಟ್ಟಿಗೆ ಹೋಗಿ ನೋಡುವ. ಎಂತಾ ಮಾಡ್ತಾರೆ ನೋಡ್ಬೇಕು. ನಾವೆಂತ ಅವರಿಗೆ ಉಪದ್ರ ಕೊಡಲು ಹೋಗೋದಲ್ಲವಲ್ಲ” ರೋಹಿಣಿ ಗಂಭೀರವಾಗಿ ಹೇಳಿದಾಗ ಒಪ್ಪಿದರು ಗೆಳತಿಯರು.

“ನಾಳೆ ಸ್ವಲ್ಪ ಬೇಗ ಹೊರಡುವ ಬೆಳಿಗ್ಗೆ. ಯಾವಾಗಿನ ಹೊತ್ತಿಗೆ ಹೊರಟರೆ ಶಾಲೆ ತಲುಪುವಾಗ ಪ್ರಾರ್ಥನೆ ಮುಗಿದೀತು. ಹೇಳಿದ ಹೊತ್ತಿಗೆ ಸಿಗದೇ ಇದ್ದರೆ ಸೊಪ್ಪಿನ ಗುರ್ತ ಹಾಕಿ ಹೋಗುವುದೇ. ಕಾಯ್ಲಿಕ್ಕೆ ಇಲ್ಲ ಯಾರನ್ನು” ಎಚ್ಚರಿಸಿದಳು ರೋಹಿಣಿ.

ಮರುದಿನ ಎಂದಿಗಿಂತ ಬೇಗ ಹೊರಟರು. ಎಲ್ಲರಿಗೂ ಆ ಟರ್ಪಾಲ್ ಮನೆಯಲ್ಲಿರೋದು ಯಾರೆಂದು ತಿಳಿಯುವ ಕಾತರ ಕುತೂಹಲ. ಒಳಗೊಳಗೇ ಮನದಲ್ಲಿ ಭಯ. ಡಾಮಾರು ರಸ್ತೆಗೆ ದಾಟುವ ಜಾಗ ತಲುಪಿದರು.

“ಹುಲಿ ಕರು” ಆಟವಾಡುವಾಗ ಕೈ ಕೈ ಹಿಡಿವ ಹಾಗೇ ಒಬ್ಬರ ಕೈ ಇನ್ನೊಬ್ಬರು ಹಿಡಿದು ಕೊಂಡು ಆ ಮನೆಯತ್ತ ಹೆಜ್ಜೆ ಹಾಕಿದರು. ಸದ್ದೇ ಮಾಡದೇ. ದಾರಿ ಬದಿಯಲ್ಲಿ ಕಳಚಿಟ್ಟ ಚಪ್ಪಲಿಗಳು ಸಪ್ಪೆ ಮುಖ ಮಾಡಿ ತೆಪ್ಪಗಿದ್ದವು.

ಅರೆ ಮಡಲು ಸ್ವಲ್ಪ ಓರೆ ಮಾಡಿತ್ತು. ಬಾಗಿಲು ಅರ್ಧ ತೆರೆದ ಹಾಗೇ. ರೋಹಿಣಿ ಗೆಳತಿಯ ಕೈ ಬಿಡಿಸಿಕೊಂಡು ಹೋಗಿ…ಮನೆಯೊಳಗೆ ಇಣುಕಿ ನೋಡಿದಳು.

ಒಳಗೆ ಬರ್ ರ್ ಸದ್ದು ಮಾಡುತ್ತಾ ಸ್ಟೌ ಉರಿಯುತ್ತಿತ್ತು. ಹಳೆಯ ಬಾಣಲೆಯಲ್ಲಿ ಚಕ್ಕುಲಿ ಬೇಯುತ್ತಿತ್ತು. ಅದರ ಪರಿಮಳ ಅಲ್ಲೆಲ್ಲ ಹರಡಿತ್ತು.

ಬಿಳಿ ತಲೆಗೂದಲಿನ ಬಿಗಿದ ಜುಟ್ಟು. ಅದರಲೊoದು ಹಳದಿ ಕರವೀರದ ಹೂವು. ಕುತ್ತಿಗೆಯಲಿ ಕಪ್ಪು ಬಣ್ಣದ ನೂಲು. ಅದಕೊಂದು ಹಳದಿ ಪದಕ. ಪ್ಲಾಸ್ಟಿಕ್ ನ ಹಾಗಿತ್ತು. ಅತಿ ದೊಡ್ಡ ಕುಂಕುಮದ ಬೊಟ್ಟು. ವಿಚಿತ್ರ ಬಣ್ಣದ ಸೀರೆ. ಸ್ವಲ್ಪವೂ ಮ್ಯಾಚ್ ಆಗದ ಬಣ್ಣದ ರವಿಕೆ ಧರಿಸಿದ ಒಬ್ಬ ಅಜ್ಜಿ ಚಕ್ಕುಲಿ ಬೇಯಿಸುತ್ತಿದ್ದರು.

ರೋಹಿಣಿಗೆ ಕಥೆಗಳಲ್ಲಿ ಓದಿದ ಮಾಟಗಾತಿ ಅಜ್ಜಿಯನ್ನೇ ನೆನಪಾಯಿತು. ಗೆಳತಿಯರು ಭಯದಿoದ ಮುಖ ಮುಖ ನೋಡಿದರು. ರೋಹಿಣಿ ಮೆಲ್ಲನೆ ಉಹ್ಹುo…ಉಹ್ಹುo ಎಂದು ಕೆಮ್ಮು ಬಂದಂತೆ ಸ್ವರ ಮಾಡಿದಳು.

ಅಜ್ಜಿ ಥಟ್ಟನೆ ಎದ್ದು … ಪಕ್ಕದಲ್ಲಿದ್ದ ಉದ್ದನೆಯ ಕೋಲು ಕೈಯಲ್ಲಿ ಹಿಡಿದು ಬಂದಳು.

“ಏಯ್  ಮಕ್ಕಳಾ… ಎಂತಾ ಆಗ್ಬೇಕು ನಿಮಗೆ. ಇಲ್ಲಿ ಎಂತ ವೇಷ ಕಟ್ಟಿ ಕುಣಿಯುತ್ತಿರುವೆನೇನು ನಾನು? ಎಂತ ಉಂಟು ಹಾಗೆ ಕದ್ದು ನೋಡ್ಲಿಕ್ಕೆ?” ಅಜ್ಜಿಯ ಒರಟು ಮಾತಿನ ಪ್ರವಾಹ.

“ಅಜ್ಜಿ… ನೀರು ನೀರು ಬೇಕಿತ್ತು” ರೋಹಿಣಿ ಭಯ ಅದುಮಿಟ್ಟು ಕೇಳಿದಳು.

“ಅದಕ್ಕೆ ಇಷ್ಟು ಸರ್ಕಸ್ ಎಂತದಕೆ. ಕೇಳೋದಲ್ಲವಾ” ಎನ್ನುತ್ತಾ ಅಜ್ಜಿ ಅಲ್ಲಿದ್ದ ಪ್ಲಾಸ್ಟಿಕ್ಕಿನ ಪುಟ್ಟ ಕೊಡದಿಂದ ಒಂದು ಲೋಟ ನೀರು ಕೊಟ್ಟಳು.

ಅದು ಕುಪ್ಪಿಯ ಲೋಟ. (ಗ್ಲಾಸ್) “ನನ್ನತ್ರ ಒಂದೇ ಲೋಟ ಇರೋದು.ಒಬ್ಬೊಬ್ಬರೇ ಕುಡಿಯಿರಿ. ನೀರು ಚೆಲ್ಲಿದ್ರೆ ತಲೆಗೆ ಕುಟ್ಟಿ ಹಾಕ್ತೇನೆ. ನಾನು ಪೈಗಳ ಬಾವಿಯಿಂದ ನೀರು ಸೇದಿ ತಂದದ್ದು. ಸಂಜೆ ವರೆಗೂ ಬರಬೇಕು” ಗೊಣಗಿದಳು ಅಜ್ಜಿ.

ಆ ಗ್ಲಾಸಿನಲ್ಲಿ ಎಂಜಲಾಗದ ಹಾಗೆ ಎತ್ತರಕ್ಕೆ ಕುಡಿಯುವಾಗ ಚೆಲ್ಲಿತು. ಒಂದು ಲೋಟ ನೀರು ಎಲ್ಲರಿಗೂ ಸಾಕಾಗಿತ್ತು.

“ಅಜ್ಜಿ ನಾವು ಶಾಲೆಗೆ ಹೋಗ್ತೇವೆ ” ಎoದಾಗ ಅಜ್ಜಿ ನಾಲ್ಕು ಚಕ್ಕುಲಿ ರೋಹಿಣಿಯ ಕೈಗೆ ಕೊಟ್ಟಳು.

“ಇಷ್ಟೇ ಇರೋದು. ಹಂಚಿ ತಿನ್ನಿ. ಲಡಾಯಿ ಮಾಡ್ಬೇಡಿ… ನಾನು ಮಾರಾಟಕ್ಕೆ ಮಾಡಿದ್ದು. ಅಂಗಡಿಗಿಂತ ಕಡಿಮೆ ರೇಟ್ ನಂದು” ಎಂದಳು ಅಜ್ಜಿ.

ಎಲ್ಲರೂ ಒಟ್ಟಾಗಿ “ಆಯ್ತಜ್ಜಿ” ಎಂದರು.

ರೋಹಿಣಿ ಚಕ್ಕುಲಿ ಹಂಚಿದಳು. “ರೋಹಿ. ಆ ಅಜ್ಜಿ ರಕ್ಕಸಿ ಅಜ್ಜಿಯ ಹಾಗಿದ್ದಾರೆ. ಈ ಚಕ್ಕುಲಿ ಹೇಗೆ ತಿನ್ನೋದೆ? ವಿಷ ಹಾಕಿದ್ರೆ?” ಎಂದಳು ಗೆಳತಿ ಶಾಂತಿ. “ಇಷ್ಟು ಪರಿಮಳದ ಚಕ್ಕುಲಿ. ಆಸೆ ಆಗ್ತಿದೆ. ಹೆದರಿಸ ಬೇಡಾ ಮಾರಾಯ್ತಿ” ಎನ್ನುತ್ತಾ ರೋಹಿಣಿ ಧೈರ್ಯದಿಂದ ಚಕ್ಕುಲಿ ತಿಂದಳು. ಆಹಾಹಾ ಎಷ್ಟು ರುಚಿ. ಎಲ್ಲರಿಗೂ ಇನ್ನೂ ಬೇಕು ಎನಿಸಿತ್ತು.

ಹೀಗೆ ಪರಿಚಯವಾದ ಅಜ್ಜಿ “ಚಕ್ಕುಲಿ ಅಜ್ಜಿ” ಆದರು.

ಎರಡು ಹೊತ್ತೂ ಮಕ್ಕಳ ಗುಂಪು ಬರುವ ಸಮಯಕ್ಕೆ ಸರಿಯಾಗಿ ಅಜ್ಜಿ ಮನೆಯೆದುರು ನಿಲ್ಲುತ್ತಿದ್ದಳು.

“ಕಾಪಿಗೆಂತದ್ದು ಮಕ್ಕಳೇ…ಬುತ್ತಿಗೆ ಎಂತಾ ಮಕ್ಕಳೇ” ಎಂದು ಪ್ರಶ್ನೆ. ಮಕ್ಕಳು ಅಜ್ಜಿ ಮಾಡಿದ ಚಕ್ಕುಲಿಯನ್ನು ದುಡ್ಡು ಕೊಟ್ಟು ತೆಗೆದು ಕೊಳ್ಳಲು ಆರಂಭಿಸಿದ್ದರು.

“ಆರು ಕಟ್ಟ ಬೇಕೋ? ಹನ್ನೆರಡೋ?” ಅಜ್ಜಿಯ ಪ್ರಶ್ನೆ. ಅಜ್ಜಿಯೇ ಲೆಕ್ಕ ಮಾಡಿ ಒಂದು ಕವರಿನಲ್ಲಿ ಹಾಕಿ, ಮೇಣದ ಬತ್ತಿಯನ್ನು ಉರಿಸುತ್ತಿದ್ದರು. ಆ ಕವರನ್ನು ಒಡ್ಡಿ ,ಕರಗಿದ ಕವರ್ ಅಂಟಿಸಿ ಕೊಡುತ್ತಿದ್ದಳು.

“ಅಜ್ಜಿಗೆ ಬೇಕಾದವರು ಯಾರೂ ಇಲ್ಲವೇ..ಒಬ್ಬರೇ ಯಾಕಿರ್ತಾರೆ? ಅಜ್ಜಿಯ ಮಕ್ಕಳೆಲ್ಲಿ” ಹಲವಾರು ಯೋಚನೆ ರೋಹಿಣಿಗೆ.

ಕೇಳಲು ಧೈರ್ಯ ಬರುತ್ತಿರಲಿಲ್ಲ. ಮಾವಿನ ಹಣ್ಣು, ಪಪ್ಪಾಯಿ ಹಣ್ಣು ತುಂಬಾ ಇರುವಾಗ ರೋಹಿಣಿ ಅಜ್ಜಿಗೆ ತಂದು ಕೊಡುತ್ತಿದ್ದಳು. ಇಷ್ಟಗಲ ಬಾಯಿ ತೆರೆದು ಅಜ್ಜಿಗೆ ಖುಷಿಯ ನಗು. ಆ ಅಜ್ಜಿಗೆ ರೋಹಿಣಿಯ ಮೇಲೆ ವಿಶೇಷ ಮಮತೆ. ಹೆಚ್ಚು ಮಾತನಾಡಿಸುವುದು ಅವಳನ್ನೇ. ಅಜ್ಜಿ,ಮಕ್ಕಳ ನಡುವೆ ವಾತ್ಸಲ್ಯದ ಕೊಂಡಿ ಬೆಸೆದು ಏಳೆಂಟು ತಿಂಗಳಾಗಿತ್ತು.

ಮೂರು ದಿವಸ ಶಾಲೆಗೆ ರಜೆ ಇತ್ತು. ಅಜ್ಜಿಗೂ ಹೇಳಿದ್ದರು.

“ಛೇ ಛೇ…ಈ ಅಜ್ಜಿಗೆ ಉದಾಸೀನ ಆದೀತು ಮಕ್ಕಳೇ. ಮೂರು ದಿವಸ ಯಾರ ಹತ್ರ ಮಾತನಾಡಲಿ?” ಎಂದಿದ್ದಳು ಅಜ್ಜಿ.

ಮೂರು ದಿವಸದ ರಜೆ ಮುಗಿದು ಶಾಲೆಗೆ. ಅಜ್ಜಿಯ ಮನೆ ಸಮೀಪಿಸಿದಂತೆ ಓಟ.

” ಪಾಪದ ಚಕ್ಕುಲಿ ಅಜ್ಜಿ. ಐದು ನಿಮಿಷ ಮಾತನಾಡಿಯೇ ಹೋಗುವ” ಎನ್ನುತ್ತಲೇ ಓಡಿದರು.

ಆ ಜಾಗ ತಲುಪಿದಾಗ ಅಚ್ಚರಿ ಕಾದಿತ್ತು. ಅಲ್ಲಿ ಅಜ್ಜಿಯೂ ಇಲ್ಲ! ನೀಲಿ ಟರ್ಪಾಲಿನ ಮನೆಯೂ ಇಲ್ಲ?

“ಯೋ ದೇವರೇ,ಚಕ್ಕುಲಿ ಅಜ್ಜಿ ಎಲ್ಲಿ?” ಒಕ್ಕೊರಲ ದನಿ.

“ಅಜ್ಜಿ…ಓ ಅಜ್ಜಿ..ಕೂ…ಕೂ…ಕೂ…” ಎಂದರು ಒಟ್ಟಾಗಿ. ಉತ್ತರವಿಲ್ಲ.

ಬೀಡಿಯ ಎಲೆ ತುಂಬಿಸಿದ ದೊಡ್ಡ ಚೀಲ ಕೈಯಲ್ಲಿ ಹಿಡಿದುಕೊಂಡು ಪೂವಪ್ಪಜ್ಜ ಬರುತ್ತಿದ್ದರು.

“ಏಯ್ ಮಕ್ಕಳೇ…ಹೋಗಿ ಹೋಗಿ ಶಾಲೆಗೆ. ಆ ಅಜ್ಜಿ ಇಲ್ಲ. ಮಾತಾಡದೆ ಹೋಗಿ. ಪೋಲಿಸ್ ಬರ್ತಾರೆ ಈಗ” ಎಂದಾಗ ಏನು ಹೇಳಲು ತೋಚದೆ ಮಂಕಾದರು. ತಲೆ ತಗ್ಗಿಸಿ ಶಾಲೆಯತ್ತ ಹೆಜ್ಜೆ.

ಶಾಲೆಯಲ್ಲಿ ಗುಸು ಗುಸು…ಪಿಸು ಪಿಸು ಮಾತು.

“ಚಕ್ಕುಲಿ ಅಜ್ಜಿಯನ್ನು ಯಾರೋ ಕುತ್ತಿಗೆ ಹಿಚುಕಿ ಸಾಯಿಸಿದ್ದರಂತೆ. ಚಕ್ಕುಲಿ ಮಾರಾಟ ಮಾಡಿ ಬಂದ ದುಡ್ಡೇಲ್ಲ ಕದ್ದರಂತೆ. ಪೊಲೀಸ್ ಬಂದಿದ್ದರಂತೆ. ಆ ಅಜ್ಜಿಯ ಶವ ಪರೀಕ್ಷೆ ಮಾಡಲು ತಲೆ ಒಡೆದಿದ್ದಾರಂತೆ. (ಪೋಸ್ಟ್ ಮಾರ್ಟಮ್) ಆ ಅಜ್ಜಿಯ ಸಬಂಧಿಕರೆ ಕೊಂದರಂತೆ” ಓ ದೇವರೇ ಸುದ್ದಿಯೇ ಸುದ್ದಿ. ಯಾವುದು ಸತ್ಯ ಯಾವುದು ಸುಳ್ಳು?

ಅಜ್ಜಿಯನ್ನು ಮನಸಾರೆ ಪ್ರೀತಿಸಿದ ರೋಹಿಣಿಗೆ ಅಳು ತಡೆಯಲು ಆಗಲಿಲ್ಲ. ಜೊತೆಗೆ ಗೆಳತಿಯರ ಕಂಗಳು ಒದ್ದೆ. ಮತ್ತೆಂದೂ ಆ ಅಜ್ಜಿಯ ವಿಷಯ ಗೊತ್ತಾಗಲೇ ಇಲ್ಲ. ಆ ಜಾಗದ ಹತ್ತಿರ ಹೋಗುವಾಗಲೆಲ್ಲ ಚಕ್ಕುಲಿ ಅಜ್ಜಿಯ ರೂಪ ಕಂಡ ಭಾವ. ನೂರಾರು ಪ್ರಶ್ನೆಗಳನ್ನ ಮನದಲಿ ಉಳಿಸಿ. ಅಷ್ಟು ಸ್ವಾಭಿಮಾನದಿಂದ ಬದುಕುತಿದ್ದರೂ ದಾರುಣವಾಗಿ ಗತಿಸಿದ ಅಜ್ಜಿಯನ್ನು ಮರೆಯಲಾಗಲೇ ಇಲ್ಲ.

“ಟಪ್” ಸದ್ದಿಗೆ ರೋಹಿಣಿ ನೆನಪಿನ ಲೋಕದಿಂದ ವಾಸ್ತವಕ್ಕೆ ಬಂದಳು. ಕೈಯಲ್ಲಿದ್ದ ಚಕ್ಕುಲಿ ನೆಲಕ್ಕೆ ಬಿದ್ದು.. ಪುಡಿ ಪುಡಿಯಾಗಿತ್ತು. ಅಲ್ಲಲ್ಲಿ ಹರಡಿತ್ತು. ಮುದುಡಿ ಮಲಗಿದ್ದ ಮುದ್ದು ಬೆಕ್ಕು “ಮುನ್ನಿ” ಮೀಯಾoವ್” ಎನ್ನುತ್ರ ಓಡಿ ಬಂತು. ತನಗೆ ಹಾಕಿದ ಚಕ್ಕುಲಿಯೆಂದು ತಿನ್ನ ತೊಡಗಿತು. ಹಗುರವಿದ್ದ ಚಕ್ಕುಲಿಯ ಡಬ್ಬವನ್ನು ಭಾರವಾದ ಮನಸ್ಸಿನಿಂದ ಹಿಡಿದು ಕೊಂಡು ರೋಹಿಣಿ ಒಳಗೆ ಹೋದಳು.

( ಮುಗಿಯಿತು)


  • ಅರುಣಾ ಜಿ ಭಟ್ – ಬದಿಕೋಡಿ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading