ಅವಳು ಪ್ರೀತಿಸಿದ ಹುಡುಗ ಸಿಗದಿದ್ದರೂ ತನ್ನನ್ನು ಪ್ರೀತಿ ಮಾಡುವ ಹುಡುಗನನ್ನು ಮದುವೆ ಮಾಡಿಕೊಂಡು ಹೊಸ ಜೀವನಕ್ಕೆ ಕಾಲಿಟ್ಟಳು ಸುರೇಖಾ. ಕಥೆಗಾರರಾದ ಚಂಪಾ ಚಿನಿವಾರ್ ಅವರ ‘ಮೇಘ ಮಾಲೆ’ ಕಥಾಸಂಕಲನದಲ್ಲಿನ ಮೊದಲ ಕತೆ ‘ಯಾವ ಹೂವು ಯಾರ ಮುಡಿಗೋ’ ತಪ್ಪದೆ ಮುಂದೆ ಓದಿ…
‘ಅಕ್ಕಾ, ಬಾಸ್ ಆಸ್ಪತ್ರೆ ಸೇರಿದ್ದಾರೆ. ಈಗಲೋ ಆಗಲೋ ಜೀವ ಹೋಗುವಂತಿದೆ ಎಂದು ಕರೆ ಬಂದಿತ್ತು’ ಬೆಳಿಗ್ಗೆ ಸುರೇಖಳಿಗೆ ದಂಗು ಬಡಿದ ಹಾಗಾಯಿತು. ‘ನಿಜ ಹೇಳ್ತಿದೀರ ನೀವು?’ ಎಂದು ಗದ್ಗದ ಕಂಠದಲ್ಲಿ ಕೇಳಿದಳು. ಹೌದಕ್ಕಾ ಎಂದು ಕಾಲ್ ಡಿಸ್ಕನೆಕ್ಟ್ ಆಯಿತು. ಸುರೇಖ ಬಹಳ ದುಃಖಪಟ್ಟಳು. ಬಿಕ್ಕಿ ಬಿಕ್ಕಿ ಅಳತೊಡಗಿದಳು. ಅವಳನ್ನು ಸಮಾಧಾನ ಪಡಿಸಲು ಯಾರೂ ಜೊತೆಯಲ್ಲಿರಲಿಲ್ಲ. ಅತ್ತಳು ಅತ್ತಳು ಅಷ್ಟೆ, ದಿಕ್ಕೇ ತೋಚದಾಯಿತು ಅವಳಿಗೆ.
ಅನಾಥೆಯಾದ ಸುರೇಖ ಬೆಳಿಗ್ಗೆ ತರಕಾರಿ ತೆಗೆದುಕೊಂಡು, ಪಕ್ಕದಲ್ಲಿಯೇ ಇದ್ದ ಟೀ ಅಂಗಡಿಗೆ ಹೋಗಿ ಟೀ ಕುಡಿದು ಬರುವ ಅಭ್ಯಾಸ ದಿನ ನಡೆಯುತಿತ್ತು. ಒಬ್ಬಳಿಗೆ ಮನೆಯಲ್ಲಿ ಟೀ ಮಾಡಲು ಬೇಸರಿಸಿಕೊಂಡು ಹೊರಗಡೆ ಕುಡಿದು ಬರುತಿದ್ದಳು. ಬಿ ಕಾಮ್ ಪದವೀಧರೆಯಾದ ಸುರೇಖಾ ಕಾರ್ ಶೋ ರೂಮ್ ನಲ್ಲಿ ಅಕೌಂಟ್ಸ್ ನೋಡಿಕೊಂಡು ಜೀವನ ನಡೆಸುತಿದ್ದಳು. ಅವಳ ಖರ್ಚು ವೆಚ್ಚಕ್ಕೆ ಏನೂ ಕೊರತೆ ಇರಲಿಲ್ಲ. ಇರಲು ಒಂದು ಸ್ವಂತ ಮನೆ ಇತ್ತು, ಇವಳಿಗೆ ಒಂದು ರೂಮು ಸಾಕೆಂದು ಮನೆಯ ಹೊರಗಡೆ ಇದ್ದ ಮತ್ತೊಂದು ರೂಮನ್ನು ಒಬ್ಬಳು ಟೈಲರ್ ಗೆ ಬಾಡಿಗೆ ಕೊಟ್ಟಿದ್ದಳು. ರೂಮಿನ ಬಾಡಿಗೆ ಹಾಗು ಬರುವ ಸಂಬಳ ಅವಳ ಜೀವನ ನಡೆಸಿಕೊಂಡು ಹೋಗುತಿತ್ತು.
ಇವಳು ಪ್ರತಿದಿನ ಹೋಗುವ ಅದೇ ಟೀ ಅಂಗಡಿಯಲ್ಲಿ ನೋಡಲು ಸ್ವಲ್ಪ ಒರಟು ಸ್ವಭಾವದಂತೆ ಕಾಣುವ ಒಬ್ಬ ವ್ಯಕ್ತಿ ಮತ್ತೊಬ್ಬನ ಜೊತೆ ನಿಂತು ಸಿಗರೇಟ್ ಸೇದಿ ಟೀ ಕುಡಿದು ಅಲ್ಲೇ ಇದ್ದ ಕಲ್ಲು ಬೆಂಚಿನ ಮೇಲೆ ಕುಳಿತುಕೊಂಡು ಅಂದಿನ ದಿನಪತ್ರಿಕೆಯ ಓದುವ ಹವ್ಯಾಸ ಇಟ್ಟಿಕೊಂಡಿದ್ದನು. ಇದನ್ನು ಸುರೇಖಾ ದಿನಾ ಗಮನಿಸುತ್ತಾ ಅವನ ಬಗ್ಗೆ ಕುತೂಹಲ ಇಟ್ಟುಕೊಂಡಿದ್ದಳು.
ಹೀಗೆ ದಿನಗಳು ಕಳೆದಂತೆ ಒಂದು ದಿನ ಸುರೇಖ ಬರುವ ಸಮಯಕ್ಕೆ ಸರಿಯಾಗಿ ಆ ವ್ಯಕ್ತಿಯೂ ಅಲ್ಲಿ ಇದ್ದ. ಇವಳೂ ಅವನನ್ನು ನೋಡಿದಳು. ಅವನೂ ಇವಳನ್ನು ನೋಡಿದನು. ಇಬ್ಬರ ಮನಸಿನಲ್ಲೂ ತಳಮಳ. ಅವಳು ಟೀ ಕುಡಿದು ಅವನನ್ನು ಒಮ್ಮೆ ನೋಡಿ ಹಿಂತಿರುಗಿದಳು.
ರಾತ್ರಿ ಅವಳಿಗೆ ನಿದ್ದೆ ಇಲ್ಲವೇ ಇಲ್ಲ. ವಯಸಿನಲ್ಲಾಗಲಿ, ವಿದ್ಯೆಯಲ್ಲಾಗಲಿ ಸರಿ ಸಾಟಿಯೇನಲ್ಲ, ಆದರೂ ಮೊದಲ ನೋಟದಲ್ಲೇ ಮನಸಿಗೆ ಹಿಡಿಸಿಬಿಟ್ಟಿದ್ದ. ಅವನ್ಯಾರು, ಹೆಸರೇನು, ಎಲ್ಲಿರುವನು ಹೀಗೆ ಹಲವಾರು ಪ್ರಶ್ನೆಗಳು. ನಿದ್ದೆ ಇಲ್ಲದೆ ಹೊರಳಾಡಿ ಬೆಳಕು ಹರಿಸಿದಳು.
ಅಂದು ಸಹ ಎಂದಿನಂತೆ ತರಕಾರಿ ತೆಗೆದುಕೊಂಡು ಟೀ ಕುಡಿಯಲು ಹೋದಳು, ಸುತ್ತ ಕಣ್ಣಾಡಿಸಿದಳು, ಅವನ ಸುಳಿವಿಲ್ಲ. ಕಹಿ ಮನಸಿನಿಂದ ಮನೆಗೆ ಬಂದಳು. ಶೋ ರೂಂ ಗೆ ಹೋಗಬೇಕಾದರೂ, ಬರಬೇಕಾದರೂ ಅವಳು ಟೀ ಅಂಗಡಿಯ ಮುಂದೆಯೇ ಓಡಾಡಬೇಕಿತ್ತು. ಅಂದಿನಿಂದ ಪ್ರತಿ ದಿನ ಟೀ ಅಂಗಡಿಯ ಮುಂದೆ ಓಡಾಟ ಜಾಸ್ತಿಯಾಯಿತು. ಅವನಿಗಾಗಿಯೇ.

ಮತ್ತೊಂದೆರಡು ದಿನದ ಬಳಿಕ ಕೆಲಸ ಮುಗಿಸಿ ಮನೆಗೆ ಹಿಂತಿರುಗುವಾಗ ಅದೇ ದಾರಿಯಲ್ಲಿ ಬರುವಾಗ ಅವಳ ಕಣ್ಣು ಯಾಂತ್ರಿಕವಾಗಿಯೇ ಟೀ ಅಂಗಡಿ ಕಡೆ ಹೊರಳಿತು. ಅವನು ಅಲ್ಲಿ ನಿಂತಿದ್ದ. ನೋಡಿದಳು, ನಕ್ಕಳು. ಅವನು ಅವಳ ಕಣ್ತಪ್ಪಿಸಿ ಬೇರೆ ಕಡೆ ನೋಡತೊಡಗಿದನು. ಹೋಂಡಾ ಆಕ್ಟಿವ ನಿಲ್ಲಿಸಿ ಟೀ ಕುಡಿಯಲು ನಿಂತಳು. ನೇರವಾಗಿ ಅವನ ಬಳಿ ಹೋಗಿ ನಿಂತಳು. ಅವನು ಕೋಪಗೊಂಡು ದೂರ ಸರಿದ. ಮಾತನಾಡಲು ಪ್ರಯತ್ನ ಪಡಲು ಅವನು ಅಲ್ಲಿಂದ ಬೈಕ್ ಹತ್ತಿ ಹೊರಟು ಬಿಟ್ಟನು.
ನಿರಾಶಳಾಗಿ ಮನೆಗೆ ಹಿಂದಿರುಗಿದಳು. ಮತ್ತೊಂದು ವಾರ ಇವರಿಬ್ಬರ ಭೇಟಿ ಕಣ್ಣಾ ಮುಚ್ಚಾಲೆ ಆಯಿತು. ಹೀಗೆ ಸಮಯ ನೋಡಿಕೊಂಡು ಅವನ ಬಳಿ ಹೋಗಿ ಒಂದು ಚೀಟಿ ಕೊಟ್ಟು, ಇದರಲ್ಲಿ ನನ್ನ ಫೋನ್ ನಂಬರ್ ಇದೆ. ನಾನು ನಿಮ್ಮನ್ನು ತುಂಬಾ ಇಷ್ಟ ಪಡುತಿದ್ದೇನೆ. ನಿಮ್ಮ ಅಭಿಪ್ರಾಯಕ್ಕೆ ಕಾಯ್ತೀನಿ. ನಾಳೆ ನನಗೆ ಕರೆ ಮಾಡಿ ಹೇಳಿ ಎಂದು ಹೊರಟುಹೋದಳು.
ಮಾರನೆ ದಿನ ಬೆಳಿಗ್ಗೆ ಏನೋ ತಳಮಳ ಮನದಲ್ಲಿ, ತಲೆಯಲ್ಲಿ ಹುಚ್ಚು ಕಲ್ಪನೆಗಳು ಕೆಲಸಕ್ಕೆ ಹೊರಟಳು. ಅಲ್ಲೂ ಕೆಲಸ ಮಾಡಲು ಮನಸಿಲ್ಲದೆ ಕೆಲಸ ಮಾಡುತಿದ್ದಳು. ಅವನ ಕರೆಗಾಗಿ ಕಾಯುತಿದ್ದಳು. ಚಡಪಡಿಕೆ, ಕಾತುರ, ಕೋಪ, ಹತಾಷೆ ಒಟ್ಟಿಗೆ ಆಗಿ ಕಣ್ಣಲ್ಲಿ ನೀರು ಬಂದಿತು. ಕಣ್ಣೊರಸಿಕೊಂಡು ಕೆಲಸದ ಕಡೆ ಗಮನ ಹರಿಸಲು ಪ್ರಯತ್ನ ಪಟ್ಟಳು. ಗಮನ ಹರಿಸಲು ಆಗದೆ ಅಲ್ಲಿಯ ಮೆನೇಜರ್ ಗೆ ಹುಷಾರಿಲ್ಲ ಮನೆಗೆ ಹೋಗುತ್ತೇನೆ ಎಂದು ಹೇಳಿ ಮುಂಚಿತವಾಗಿಯೇ ಮನೆಗೆ ಹೊರಟಳು.
ಅದೇ ದಾರಿ, ಟೀ ಅಂಗಡಿಯತ್ತ ನೋಡಿದಳು ಜನರ ಗುಂಪು ಗುಸು ಗುಸು ನೋಡಿ ಏನೋ ಗಲಾಟೆಯಿರಬೇಕೆಂದು ಗಾಡಿ ನಿಲ್ಲಿಸಿ ಟೀ ಕುಡಿಯಲು ಹೋದಳು. ಅಲ್ಲಿ ಜನರ ಮಾತು ಕಿವಿಗೆ ಬಿತ್ತು. ಏನೋ ಗಲಾಟೆ ಮಾಡಿಕೊಂಡಿದಾನೆ ಪೋಲೀಸಿನವರು ಎಳ್ಕೊಂಡು ಹೋಗಿದಾರೆ ಎಂದು ಮಾತನಾಡುತಿದ್ದರು. ಗಾಬರಿ ಇವಳಿಗೆ ಯಾರಿರಬಹುದೆಂದು, ಅಂಗಡಿಯವನನ್ನು ಕೇಳಿದಳು. ಏನು ಗಲಾಟೆ ಎಂದು ಇಲ್ಲಿಬ್ಬರು ದಿನಾ ಟೀ ಕುಡಿಯಲು ಬರುತಿದ್ದರು. ಅವನೊಬ್ಬ ದೊಡ್ಡ ರೌಡಿ, ಯಾವುದೋ ಕೇಸಿನಲ್ಲಿ ಸಿಕ್ಕಿ ಹಾಕಿಕೊಂಡಿದಾನೆ ಎಂದು ಹೇಳಿದಾಗ ನಂಬಲಾಗಲಿಲ್ಲ ಅವಳಿಗೆ.
ಮಾರನೆ ದಿನ ಆಫೀಸಿಗೆ ಹೊರಟಳು. ಅವಳ ಗಾಡಿ ಎಂದಿನಂತೆ ಅದೇ ದಾರಿಯಲ್ಲಿ ಸಾಗಿತು. ಅವಳ ಕಣ್ಣು ಯಾಂತ್ರಿಕವಾಗಿ ಟೀ ಅಂಗಡಿ ಕಡೆ ಹೊರಳಿತು. ಕಣ್ಣರಳಿಸಿ ಆಶ್ಚರ್ಯದಿಂದ ನೋಡಿದಳು. ಅವನು ನಿಂತಿದ್ದ ಅವನೂ ಇವಳ ಕಡೆ ನೋಡಿದ ಇವಳೂ ನೋಡಿದಳು. ಇವಳ ತುಟಿಗಳಲ್ಲಿ ನಗು ಅರಳಿತು. ಅವನು ಸಿಡುಕಿನಿಂದ ಬೇರೆ ಕಡೆ ನೋಟವಿರಿಸಿದ. ಇವಳು ಅಲ್ಲಿಂದ ಹೊರಟು ಬಿಟ್ಟಳು.
ಹೀಗೆ ದಿನಗಳು ಕಳೆಯಿತು ಅವನಿಂದ ಯಾವ ಉತ್ತರ ಬರಲಿಲ್ಲ. ಅವನ ಹೆಸರು ಸಹ ಗೊತ್ತಿಲ್ಲ. ರೌಡಿ ಅಂತ ಎಲ್ಲರೂ ಕರೀತಾರೆ. ಅವನಿಗೊಬ್ಬ ಚೇಲ, ನಕ್ಕಳು ಸುರೇಖ.
ಸಂಜೆ ಮನೆಯಲ್ಲಿ ಟಿವಿ ನೋಡುತ್ತಾ ಕುಳಿತಿದ್ದ ಅವಳಿಗೆ ಒಂದು ಕಾಲ್ ಬಂತು ಹೋಗಿ ಫೋನ್ ಕೈಗೆತ್ತಿಕೊಂಡಳು ಹೊಸ ನಂಬರ್… ಹಲೊ ಎಂದಳು. ಸುರೇಖ ಅವರಾ… ಹು ಹೌದು, ನೀವ್ಯಾರು ಎಂದು ಕೇಳಿದಳು. ಅಕ್ಕಾ ನಾನು ಪರಮಿ ಎಂದ, ಯಾವ ಪರಮಿ ಎಂದು ಕೇಳಿದಳು. ಮಚ್ಚೆ ಸೀನನ ಸಿಸ್ಯ ಅಕ್ಕೋ ಎಂದ.
ಅವಳಿಗೆ ತಕ್ಷಣ ಗೊತ್ತಾಯಿತು. ಮಚ್ಚೆ ಸೀನ ಎಂದರೆ ಅವನೇ ಇರಬೇಕು. ಖುಷಿಯಿಂದ ಹೇಳಿ ಎಂದಳು. ಅಕ್ಕೋ ಅಣ್ಣನ್ನ ನೋಡಾಕೆ ಬರೋದಾಗ್ಲಿ, ಮಾತಾಡ್ಸದಾಗಿ ಮಾಡ್ಬೇಡ್ವಂತೆ, ಯಾರನ್ನಾದ್ರೂ ಮದುವೆ ಮಾಡ್ಕಂಡು ಸುಖವಾಗಿರಲಿ ಅಂತ ಯೋಳೌರೆ ಎಂದ. ಸುರೇಖಗೆ ಕೋಪ, ಅವಮಾನ, ದುಃಖ ಒಟ್ಟಿಗೆ ಆಯ್ತು. ಕಾರಣವೇನು ಕೇಳಿದಳು. ನಂಗೊತ್ತಿಲ್ಲ ಅಕ್ಕೋ ಅಣ್ಣ ಇಷ್ಟೆ ಯೋಳಿದ್ದಿ, ಫೋನ್ ಮಡಗ್ತೀನಿ ಎಂದು ಹೇಳಿದನು.
ಸುರೇಖ… ದುರಹಂಕಾರಿ ಅವನ ಹತ್ತಿರ ಮಾತನಾಡಿಸಿದಾನೆ, ಅವನೇ ಮಾತನಾಡಿದ್ದರೆ ಅವನ ಗಂಟೇನು ಹೋಗುತಿತ್ತು ಎಂದು ಕೋಪದಿಂದ ಸಿಡಿದೆದ್ದಳು.
ಮಾರನೆ ದಿನ ಮತ್ತೆ ಅದೇ ದಾರಿ ಅದೇ ಟೀ ಅಂಗಡಿ. ಅಲ್ಲೇ ಕೂತಿದ್ದ ಮಚ್ಚೆ ಸೀನ, ರೌಡಿ ಹಲ್ಕಚ್ಚಿದಳು. ಗಾಡಿ ನಿಲ್ಲಿಸದೇ ಹೊರಟು ಬಿಟ್ಟಳು. ಅವನು ಅವಳನ್ನು ಕನಿಕರದಿಂದ ನೋಡಿ, ಹುಚ್ಚು ಹುಡುಗಿ ಎಂದು ಕಿರುನಗೆಯಿಂದ ತನ್ನ ತಲೆ ಕೂದಲು ಸವರಿಕೊಂಡನು.
ಮತ್ತೊಂದು ದಿನ ಅದೇ ನಂಬರಿನಿಂದ ಕರೆ ಬಂದಿತು, ರಿಸೀವ್ ಮಾಡಿ ಹಲೋ ಎಂದಳು. ಅಕ್ಕೋ ನಾನು ಪರಮಿ, ಹೇಳಿ ಎಂದಳು. ಮತ್ತೆ ಅಣ್ಣ ಆ ಅದೇನು ಹೇಳಿ ಬೇಗ ಎಂದಳು. ಅಣ್ಣ ಅಂದ್ರು ಅವ್ರುನ್ನ ಮರ್ತು ಬುಡ್ಬೇಕಂತೆ…..ಅವರ ಜೀವನವೇ ಅತಂತ್ರ ಇನ್ನು ನಿಮ್ನ ಲಗ್ನ ಆಗಿ ನಿಮ್ಗೆ ತೊಂದರೆ ಕೊಡೋದು ಬ್ಯಾಡ ಅಂತ, ನಿಮಗಿನ್ನು ಚಿಕ್ಕ ವಯಸ್ಸು ಮದುವೆ ಮಾಡ್ಕಂಡು ಚೆನ್ನಾಗಿರಲಿ ಅಂದ್ರು ಕಣಕ್ಕೋ ಎಂದು ಹೇಳಿ, ನಿಮಗೆ ಹೊಂದುವಂತಹ ಹುಡುಗನ್ನ ನೋಡಿ ನಿಮಗೆ ಭೇಟಿ ಆಗಲು ಹೇಳುತ್ತಾರಂತೆ ತಯಾರಾಗಿರಬೇಕಂತೆ ಎಂದು ಹೇಳಿ ಫೋನ್ ಡಿಸ್ಕನೆಕ್ಟ್ ಮಾಡಿದ.

ಸುರೇಖ….ಏನೂ ಮಾತನಾಡಲು ತೋರದೆ ನಿರಾಸೆಯಿಂದ ‘ಸರಿ’ ಎಂದು ಫೋನ್ ಇಟ್ಟಳು. ಒಂದು ವಾರ ಕಳೆದ ಬಳಿಕ ಸುರೇಖಳಿಗೆ ಮತ್ತೆ ಕರೆ ಬಂತು. ಅಲ್ಲೇ ಅವಳ ಮನೆಯ ಹತ್ತಿರ ಇರುವ ಹೋಟೆಲ್ ಬಳಿ ಬರಲು ಹೇಳಿದ ಅವನ ಶಿಷ್ಯ. ಸುರೇಖ ಅರೆಮನಸಿನಿಂದ ಹೊರಟಳು. ಗೊತ್ತಿತ್ತು ಅವಳಿಗೆ ಬಹುಶಃ ಹುಡುಗನ ನೋಡಲು ಕರೆದಿರಬೇಕೆಂದು ಕರೆಯಲಿ ಅವನ ಮಾತಿಗೆ ಬೆಲೆ ಕೊಟ್ಟು ಹೋಗುತಿದ್ದೇನೆ. ಒಪ್ಪುವುದು ಬಿಡುವುದು ನನಗೆ ಬಿಟ್ಟಿದ್ದು ಎಂದು ಅಂದುಕೊಂಡು ಹೋಟೆಲ್ ಬಳಿ ಬಂದು ಸ್ಕೂಟಿ ನಿಲ್ಲಿಸಿ ಒಳ ಹೋದಳು. ಅಲ್ಲಿ ಯಾರೂ ಕಾಣಲಿಲ್ಲ. ಒಂದು ಟೇಬಲ್ ಬಳಿ ಹೋಗಿ ಕುಳಿತಳು. ಐದು ನಿಮಿಷವಾಗುತಿದ್ದಂತೆ ಕರೆ ಬಂತು. ಅಕ್ಕೋ… ಹುಡುಗ ಬಂದಿದಾನೆ ಮಾತಾಡಿಸಿ ನೀಲಿ ಶರ್ಟ್ ಹಾಕಿ ಇವಾಗ ಒಳ ಬರುತಿದ್ದಾನೆ ಅಣ್ಣ ಮಾತಡಕ್ಕೆ ಹೇಳಿದಾರೆ ಎಂದು ಫೋನ್ ಇಟ್ಟ.
ಅವಳು ನೀಲಿ ಶರ್ಟ್ ಧಾರಿಯವನಿಗೆ ಕೈ ಬೀಸಿ ಕರೆದಳು. ಅವನು ಇವಳ ಬಳಿ ಬಂದು ಹಲೋ ಹೇಳಿ ಅವಳ ಎದುರು ಕುಳಿತನು. ಕಾಫಿ ಆರ್ಡರ್ ಮಾಡಿ ಇಬ್ಬರೂ ಅವರವರ ಬಗ್ಗೆ ಪರಿಚಯ ಮಾಡಿಕೊಂಡರು, ಹರ್ಷ ಅವನ ಹೆಸರು ಒಂದು ಸಣ್ಣ ಪ್ರೈವೇಟ್ ಕಂಪನಿಯಲ್ಲಿ ಕೆಲಸ ಮಾಡುತಿದ್ದು ತಾಯಿ,ಇಬ್ಬರು ತಂಗಿಯರ ಜೊತೆ ಒಂದು ಬಾಡಿಗೆ ಮನೆಯಲ್ಲಿ ವಾಸವಾಗಿದ್ದೇನೆ ಎಂದು ಪರಿಚಯ ಮಾಡಿಕೊಂಡನು.
ಅವನ ನಿರೀಕ್ಷೆಗಳೇನು ಎಂದು ಕೇಳಿದಳು. ಸ್ವಂತ ಮನೆಯಿಲ್ಲ. ಅವಳು ಮದುವೆ ಮಾಡಿಕೊಂಡರೆ ಅವಳನ್ನು ತುಂಬಾ ಚೆನ್ನಾಗಿ ನೋಡಿಕೊಂಡು ಹೋಗುವುದಾಗಿ ಹೇಳಿದನು. ತಾಯಿ ಹಾಗು ತಂಗಿಯರೂ ಸಹ ನನ್ನ ಜೊತೆಯೇ ಇರುತ್ತಾರೆ ಹಾಗು ನಿನಗೂ ಜೀವನ ಕೊಡುತ್ತೇನೆ. ನಮಗೂ ಇರುವುದಕ್ಕೆ ಒಂದು ಮನೆ ಆಗುತ್ತದೆ ಎಂದು ಹೇಳಿದನು. ಹೀಗೆ ಮಾತಮಾಡುತ್ತಾ ಕಾಫಿ ಕುಡಿದು ಮುಗಿಸಿದರು. ಅವಳ ಅಭಿಪ್ರಾಯ ಕೇಳಿದಾಗ, ತಿಳಿಸುವೆ ಎಂದು ವಿದಾಯ ಹೇಳಿ ಹೊರಟಳು.
ಮನೆ ತಲುಪವವರೆಗೂ ಅವನ ಮಾತುಗಳೇ ಕಿವಿಯಲ್ಲಿ ಗುಂಯ್ಗುಡುತಿತ್ತು. ತಾನು ಮದುವೆ ಆಗದೆ ಇಂತಹವರನ್ನು ತೋರಿಸುತ್ತಾರೆ ಎಂದು ಬೈದು ಅವನಿಗೆ ಮೆಸೇಜ್ ಹಾಕಿದಳು, ನನಗೆ ಈ ಹುಡುಗ ಇಷ್ಟವಿಲ್ಲ, ಇನ್ನು ಮುಂದೆ ನೀವು ಯಾವ ಹುಡುಗನನ್ನು ತೋರಿಸಬೇಡಿ ಎಂದು.
ದಿನಗಳು, ತಿಂಗಳುಗಳು ಕಳೆಯಿತು, ಬಹಳ ಯಾಂತ್ರಿಕವಾಗಿ ಜೀವನ ನಡೆಯುತಿತ್ತು. ಅವನು ಇವಳಿಗೆ ಕೊನೆಗೂ ಸಿಗಲೇ ಇಲ್ಲ, ಅಂದಿನಿಂದ ಇಂದಿನವರೆಗೂ ಒಂದೆರಡು ಮಾತು ಸಹ ಆಡಿರಲಿಲ್ಲ. ಈಗ ನೋಡಿದರೆ ಅವರು ಆಸ್ಪತ್ರೆಯಲ್ಲಿದ್ದಾರೆ. ಅಳುತ್ತಲೇ ಆಟೋದವನಿಗೆ ದುಡ್ಡು ಕೊಟ್ಟು ಆಸ್ಪತ್ರೆ ಒಳಗೆ ಹೋದಳು. ಅಲ್ಲೇ ಅವನ ಶಿಷ್ಯ ನಿಂತಿದ್ದ ಇವಳನ್ನು ನೋಡಿ ಬನ್ನಿ ಎಂದು ಕರೆದು ವಾರ್ಡ್ ಒಳಗೆ ಕರೆದುಕೊಂಡು ಹೋದನು.
ಅವನು ಇವಳ ಕಡೆಗೆ ತಿರುಗಿ ಮೆಲುವಾಗಿ ನಕ್ಕನು. ಇವಳಿಗೆ ಅಯ್ಯೋ ಪಾಪ ಎನಿಸಿತು. ತಾನೂ ನಸು ನಕ್ಕು ಅವನ ಬಳಿ ನಿಂತಳು. ಏನೋ ಮಾತನಾಡಲು ಪ್ರಯತ್ನ ಪಟ್ಟನು ಆಗಲಿಲ್ಲ, ಸುರೇಖ….ಆಯಾಸ ಮಾಡ್ಕೋಬೇಡಿ ಮಲಗಿ ಎಂದು ಹೇಳಿ ಅವನ ಕೈ ಹಿಡಿದುಕೊಂಡಳು. ಅವಳ ಕೈ ಮೆಲುವಾಗಿ ಅಮುಕಿ ಕ್ಷಮಿಸು ಎಂದನು. ಸುರೇಖ ಕಣ್ಣುಗಳಲ್ಲಿ ನೀರು ತುಂಬಿಕೊಂಡಳು.
ತಾನೊಬ್ನ ದೊಡ್ಡ ರೌಡಿ, ಗುಂಪುಗಳ ನಡುವಿನ ಗಲಾಟೆಯಲ್ಲಿ ಮಚ್ಚಿನೇಟಿನಿಂದ ಒಂದು ಕಿಡ್ನಿ ಕಳೆದುಕೊಂಡಿದೀನಿ. ಜೊತೆಗೆ ಕುಡಿತದಿಂದ ಲಿವರ್ ಡ್ಯಾಮೇಜ್ ಆಗಿದೆ. ನಿನಗಿಂತ ಹತ್ತು ವರ್ಷ ದೊಡ್ಡವನು, ನಿನಗೆ ಯಾವ ರೀತಿಯೂ ಸಮನಲ್ಲ. ನಾನು ಹಾಗಾಗಿ ನಿನ್ನ ನಿರಾಕರಿಸಿದೆ ಎಂದು ಹೇಳಿ, ನೀನು ಒಂದು ಒಳ್ಳೆ ಹುಡುಗನನ್ನು ನೋಡಿ ಮದುವೆ ಮಾಡಿಕೋ ಎಂದು ಹೇಳಿ ಮಾತು ನಿಲ್ಲಿಸಿದನು. ಇಷ್ಟು ಹೇಳಿದ್ದೇ ತಡ ಎದುರಿಸು ಬಿಡುತಿದ್ದ. ಅಷ್ಟರಲ್ಲಿ ಡಾಕ್ಟರ್ ಪರೀಕ್ಷಿಸಲು ಬಂದರು.
ಸುರೇಖ ಎದ್ದು ನಿಂತಳು. ತುಂಬಾ ದುಃಖದಿಂದ ಅವನನ್ನೇ ನೋಡುತಿದ್ದಳು. ಡಾಕ್ಟರ್ ಪರೀಕ್ಷಿಸಿ ಹೊರಗೆ ಹೋದರು. ಅವನು ಸುರೇಖಳಿಗೆ ಮನೆಗೆ ಹೋಗಲು ತಿಳಿಸಿದನು. ಸುರೇಖ ಆಸ್ಪತ್ರೆಯಿಂದ ಮನೆಗೆ ಬಂದಳು. ಊಟ, ನಿದ್ದೆ ಯಾವುರಲ್ಲೂ ಮನಸಿಲ್ಲ, ಸುಮ್ಮನೆ ಕುಳಿತುಬಿಟ್ಟಳು.
ಮುಂಜಾನೆ ಸುರೇಖಳಿಗೆ ಅರೆ ಮಂಪರು, ಫೋನ್ ರಿಂಗಾಯಿತು, ಭಯದಿಂದಲೇ ರಿಸೀವ್ ಮಾಡಿದಳು, ಅಕ್ಕೋ ಬಾಸ್ ತೀರಿ ಹೋದರು ಎಂದು ಹೇಳಿದನು ಅವನ ಶಿಷ್ಯ, ನಿರೀಕ್ಷಿಸಿದಂತೆ ಬಂದ ಸುದ್ದಿ ಸುರೇಖಳನ್ನು ಘಾಸಿಗೊಳಿಸಿತ್ತು. ತನ್ನೆಲ್ಲಾ ಕನಸು, ಆಸೆ ಆಕಾಂಕ್ಷೆ ಅವನೊಡನೆ ಸುಟ್ಟು ಹೋಯಿತು ಎಂದು ಬಹಳ ದುಃಖ ಪಟ್ಟಳು. ಯಾರು ಹೋದರೂ ಯಾರು ಬಂದರೂ ಜೀವನ ನಿಲ್ಲುವುದಿಲ್ಲ ಎಂದು ನಿಟ್ಟುಸಿರು ಬಿಟ್ಟು ಮುಂದಿನ ಜೀವನ ಅವಳಿಗೆ ಪ್ರಶ್ನೆಯಾಗಿ ಕಾಡತೊಡಗಿತು.
ತಾನು ಮಾಡುವ ಕೆಲಸದಲ್ಲಿಯೇ ಅವನನ್ನು ನೆನಪಿಸಿಕೊಳ್ಳುತ್ತಾ ಕಾಲ ಕಳೆಯತೊಡಗಿದಳು. ದಿನಗಳು, ತಿಂಗಳುಗಳು, ವರ್ಷಗಳು ಕಳೆಯಿತು. ಬದಲಾವಣೆ ಜಗದ ನಿಯಮ ಎಂಬುವಂತೆ ಅವಳಿಗೂ ಒಳ್ಳೆಯ ದಿನಗಳು ಕಾದಿತ್ತು.
ತಾನು ಕೆಲಸ ಮಾಡುವ ಶೋ ರೂಮ್ ಗೆ ಆಗಾಗ ಬರುತಿದ್ದ ಒಬ್ಬ ಮಧ್ಯಮ ವರ್ಗದ ದಿನಸಿ ವ್ಯಾಪಾರಿ ಇವಳನ್ನು ಗಮನಿಸುತ್ತಲೇ ಬಂದಿದ್ದ, ಅವಳ ನಡೆ ನುಡಿ ಬಹುವಾಗಿ ಆಕರ್ಷಿಸಿತ್ತು. ಅವಳ ಬಗ್ಗೆ ಮತ್ತಷ್ಟು ಮಾಹಿತಿ ಶೋ ರೂಂ ಮಾಲೀಕರಿಂದ ಕಲೆ ಹಾಕಿದ್ದ. ಸುರೇಖಳಾ ಪರಿಸ್ಥಿತಿ ಕಂಡು ಅವಳನ್ನು ಮದುವೆ ಆಗಲು ತೀರ್ಮಾನಿಸಿ ಅವಳನ್ನು ಭೇಟಿ ಮಾಡಿ ಮಾತನಾಡಿ ತನ್ನ ಮನದ ಮಾತುಗಳನ್ನು ಅವಳಿಗೆ ತಿಳಿಸಿದನು, ತನ್ನ ಅಂಗಡಿ ಮಾಲೀಕನ ಬಳಿ ಮಾತನಾಡಿ ನಿಮಗೆ ತಿಳಿಸುತ್ತೇನೆಂದು ಹೇಳಿ ತನ್ನ ಕೆಲಸಕ್ಕೆ ಹಿಂತಿರುಗಿದಳು.
ಶೋ ರೂಮ್ ಮಾಲೀಕರು ಸುರೇಖಾಳಿಗೆ, ನೋಡಮ್ಮ ಒಳ್ಳೇ ಹುಡುಗ, ಒಳ್ಳೇ ಮನೆತನ ಒಬ್ಬಳೇ ಎಷ್ಟು ದಿನ ಇರ್ತೀಯ, ಇಂದಿನ ಸಮಾಜದಲ್ಲಿ ಒಂಟಿ ಹೆಣ್ಣು ಬದುಕುವುದು ತುಂಬಾ ಕಷ್ಟ ಒಪ್ಪಿಕೊ ಎಂದು ಹೇಳಿದರು. ಹುಡುಗ ತುಂಬಾ ಒಳ್ಳೆಯವನು ನಾನು ಅವನನ್ನು ಚಿಕ್ಕ ವಯಸಿನಿಂದಲೂ ನೋಡುತ್ತಿರುವೆ, ಅವರ ತಂದೆ ತಾಯಿಗೆ ಮೂರ್ನಾಲ್ಕು ಮಕ್ಕಳಾಗಿ ಹೋಗಿ ಇವನೊಬ್ಬನೇ ಉಳಿದುಕೊಂಡಿದಾನೆ, ಚಿಕ್ಕದಾಗಿ ಒಂದು ಸ್ವಂತ ಮನೆ ಇದೆ. ಮಹಡಿ ಮನೆ ಬಾಡಿಗೆ ಕೊಟ್ಟಿದಾರೆ, ಕೆಳಗೆ ಇವರ ವಾಸ ಹಾಗು ದಿನಸಿ ಅಂಗಡಿಯನ್ನು ಅಲ್ಲಿಯೇ ಗ್ಯಾರೇಜ್ ನಲ್ಲಿ ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡಿದಾನೆ. ಹೊಟ್ಟೆ ಬಟ್ಟೆಗೆ ಏನೂ ತೊಂದರೆ ಇಲ್ಲ ಎಂದು ಹೇಳಿದನು.
ಅವನ ತಂದೆ ತಾಯಿಯೂ ಅಷ್ಟೇ ಸಂಸ್ಕಾರ ಇರುವವರು, ನಿನ್ನ ಜೀವನ ತುಂಬಾ ಸುಂದರವಾಗಿರುತ್ತದೆ ಒಪ್ಪಿಕೊಮ್ಮಾ ಎಂದು ಹೇಳಿದಾಗ, ಸುರೇಖಾ ಎರಡು ದಿನ ಸಮಯ ಕೊಡಿ ಎಂದು ಹೇಳಿ ಮನೆಗೆ ಹೊರಟಳು.
ಎರಡು ದಿನಗಳ ನಂತರ ಅವನು ಬಂದು ಸುರೇಖಾಳ ಬಳಿ ಬಂದು ಏನು ತೀರ್ಮಾನಿಸಿದಿರಿ ಎಂದು ಕೇಳಲು, ನಾನು ಒಪ್ಪಿರುವೆ ಎಂದು ಹೇಳಿದಳು. ನಿಮ್ಮ ಹೆಸರೇನು ಎಂದು ಕೇಳಿದಳು. ‘ಶ್ರೀನಿವಾಸ, ಮನೆಯವರೆಲ್ಲಾ ಸೀನಾ’ ಎಂದು ಕರೆಯುತ್ತಾರೆ ಎಂದನು. ಸೀನಾ ಎಂದು ಮನಸಲ್ಲೇ ಅಂದುಕೊಂಡು ಹೊಸ ಪ್ರೀತಿಯ ಜೊತೆ ಹೆಜ್ಜೆ ಹಾಕಲು ತೀರ್ಮಾನಿಸಿದಳು. ಒಂದು ಪ್ರೀತಿ ಬತ್ತಿಹೋಗಿತ್ತು ಮತ್ತೊಂದು ಪ್ರೀತಿ ಅರಳಿತ್ತು, ಪ್ರೀತಿಯಿಂದ ಪ್ರೀತಿಯೆಡೆಗೆ ಸುರೇಖಾಳ ಜೀವನ ಸಾಗಿತ್ತು.
ರೇಡಿಯೋದಲ್ಲಿ “ಯಾವ ಹೂವು ಯಾರ ಮುಡಿಗೋ” ಹಾಡು ಕೇಳಿಬರುತಿತ್ತು. ಅವಳೂ ಈ ಹಾಡು ಗುನುಗುತ್ತಾ ದೇವರಿಗೆ ಕೃತಜ್ಞತೆ ಅರ್ಪಿಸಿದಳು. ಅವಳು ಪ್ರೀತಿಸಿದ ಹುಡುಗ ಸಿಗದಿದ್ದರೂ ತನ್ನನ್ನು ಪ್ರೀತಿ ಮಾಡುವ ಹುಡುಗನನ್ನು ಮದುವೆ ಮಾಡಿಕೊಂಡು ಹೊಸ ಜೀವನಕ್ಕೆ ಕಾಲಿಟ್ಟಳು.

ಹಿಂದಿನ ಕತೆಗಳು:
- ಚಂಪಾ ಚಿನಿವಾರ್ – ಆಪ್ತ ಸಮಾಲೋಚಕಿ.
