ಸಶಕ್ತ ಭಾರತ, ಸದೃಢ ಭಾರತ ಕನಸು ನನಸಾಗಲಿ

ಇಂದು ಭಾರತ ಜಗತ್ತಿನ ಅತಿದೊಡ್ಡ ಯುವ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ೧೫ ರಿಂದ ೨೯ ವರ್ಷದೊಳಗಿನ ೩೫ ಕೋಟಿಗಿಂತ ಹೆಚ್ಚು ಯುವಕರಿದ್ದೇವೆ. ಓಂಕಾರ ಪಾಟೀಲ ಅವರ ಈ ಲೇಖನವನ್ನು ತಪ್ಪದೆ ಮುಂದೆ ಓದಿ…

ಕೌಶಲ್ಯವೇ ಇಂದಿನ ಕಾಯಕ, ಯುವಕರೇ ನಾಳಿನ ಭವಿಷ್ಯ 12ನೇ ಶತಮಾನದಲ್ಲಿ ಕಲ್ಯಾಣದ ಅನುಭವ ಮಂಟಪದ ಶರಣರು “ಕಾಯಕವೇ ಕೈಲಾಸ” ಎಂದು ಸಾರಿದರು. ಪ್ರತಿಯೊಬ್ಬನ ದುಡಿಮೆಗೂ ಗೌರವವಿದೆ ಎಂದು ತಿಳಿಸಿದರು. ಅದೇ ರೀತಿ 21ನೇ ಶತಮಾನದ ಸಂದರ್ಭದಲ್ಲಿ ನಾವು “ಕಾಯಕದ ಜೊತೆಗೆ ಕೌಶಲ್ಯದ ಮಹತ್ವ”ವನ್ನು ಅರಿಯ ಬೇಕಾಗಿದೆ. ಕೌಶಲ್ಯಯುಕ್ತ ಯುವಪಡೆಯನ್ನು ಸದೃಢಗೊಳಿಸಿದಾಗ ಮಾತ್ರ ಸಶಕ್ತ ಭಾರತದ ಕನಸು ನನಸಾಗುತ್ತದೆ.

ಇಂದು ಭಾರತ ಜಗತ್ತಿನ ಅತಿದೊಡ್ಡ ಯುವ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ೧೫ ರಿಂದ ೨೯ ವರ್ಷದೊಳಗಿನ ೩೫ ಕೋಟಿಗಿಂತ ಹೆಚ್ಚು ಯುವಕರಿದ್ದೇವೆ. ಇದು ನಮ್ಮ ಜನಸಂಖ್ಯಾ ಲಾಭ.

ಆದರೆ ಈ ಲಾಭದ ನಡುವೆ ಒಂದು ದೊಡ್ಡ ಸವಾಲು ಇದೆ. ನಮ್ಮ ಯುವಕರಲ್ಲಿ ಪ್ರತಿಭೆ ಇದೆ, ಕನಸಿದೆ, ಕೌಶಲ್ಯವಿದೆ. ಆದರೆ ಉದ್ಯೋಗ ಅವಕಾಶದಿಂದ ಅವರು ವಂಚಿತರಾಗುತ್ತಿದ್ದಾರೆ. ವಿಶೇಷವಾಗಿ ಗ್ರಾಮೀಣ ಭಾಗದ ಬಡ ಕುಟುಂಬಗಳ ಕೌಶಲ್ಯಯುಕ್ತ ಪ್ರತಿಭಾವಂತ ಯುವಕರು ಇಂದಿಗೂ ಪರದಾಡುತ್ತಿದ್ದಾರೆ.

ಬೀದರ ಜಿಲ್ಲೆಯ ಒಂದು ಸಣ್ಣ ಹಳ್ಳಿ. ಬಡ ಕುಟುಂಬದ ಪ್ರತಿಭಾವಂತ ಯುವಕ ಮಹೇಶ. ತಂದೆ ಕೂಲಿ ಕಾರ್ಮಿಕ. ಆದರೂ ಮಗನ ಭವಿಷ್ಯ ರೂಪಿಸುವ ಸಲುವಾಗಿ ಕಷ್ಟಪಟ್ಟು ಡಿಪ್ಲೋಮಾ ಇಲೆಕ್ಟ್ರಾನಿಕ್ ಪದವಿಯವರೆಗೆ ಓದಿಸಿದರು. ಮಹೇಶ 10ನೇ ತರಗತಿಯಲ್ಲಿರುವಾಗಲೇ ಮೊಬೈಲ್, ಟಿವಿ ರಿಪೇರಿ ಮಾಡುವ ಕಲೆ ಕಲಿತಿದ್ದ. ಹಾಗಾಗಿ ಇಲೆಕ್ಟ್ರಾನಿಕ್ ವಿಷಯದಲ್ಲಿ ಅಗ್ರಶ್ರೇಣಿಯಲ್ಲಿ ಉತ್ತೀರ್ಣನಾದ. ಆದರೆ ಮುಂದಿನ ಸ್ನಾತಕೋತ್ತರ ಪದವಿಗೆ ಹಣದ ಕೊರತೆಯಿಂದ ಓದನ್ನು ಮೊಟಕುಗೊಳಿಸಿ, ಎಲೆಕ್ಟ್ರಾನಿಕ್ಸ್ ಅಂಗಡಿಯಲ್ಲಿ ಮಾಸಿಕ 8000 ರೂ ಸಂಬಳಕ್ಕೆ ಕೆಲಸಕ್ಕೆ ಸೇರಿಕೊಂಡ. “ಆನೆ ಹೊಟ್ಟೆಗೆ ಆರೆ ಕಾಸಿನ ಮಜ್ಜಿಗೆ” ಎಂಬಂತೆ ಅವನಿಗೆ ಸಿಗುವ ಸಂಬಳ ಅವನ ಖರ್ಚಿಗೂ ಸಾಲಲಿಲ್ಲ.

ಇದು ಕೇವಲ ಒಬ್ಬ ಮಹೇಶನ ಕಥೆಯಲ್ಲ. ಇಂತಹ ಲಕ್ಷಾಂತರ ಮಹೇಶರು ಇಂದು ರಾಜ್ಯದಲ್ಲಿ, ದೇಶದಲ್ಲಿ ನಿರುದ್ಯೋಗಿಯಾಗಿ ಕುಳಿತಿದ್ದಾರೆ. ಇನ್ನು ಕೆಲವರು ಸಿಕ್ಕ ಯಾವುದೇ ಕೆಲಸಕ್ಕೆ “ಸರಿ” ಎಂದು ಜೀವನ ನಡೆಸುತ್ತಿದ್ದಾರೆ. ಅವರ ಕೌಶಲ್ಯಕ್ಕೆ ಸರಿಯಾದ ಬೆಲೆ ಸಿಗುತ್ತಿಲ್ಲ.

ನಿರುದ್ಯೋಗ ಸಮಸ್ಯೆ ಕೇವಲ ಕರ್ನಾಟಕಕ್ಕೆ ಅಥವಾ ಭಾರತಕ್ಕೆ ಮಾತ್ರ ಸೀಮಿತವಲ್ಲ. ಇದು ವಿಶ್ವದ ಎಲ್ಲಾ ದೇಶ, ಎಲ್ಲಾ ಸಮಾಜಕ್ಕೂ ಅನ್ವಯಿಸುವ ಜಾಗತಿಕ ಸವಾಲು.

ಪರಿಹಾರದ ದಾರಿ : 

ಪ್ರತಿಭಾವಂತ ಯುವಕರ ನಿರುದ್ಯೋಗ ಸಮಸ್ಯೆ ನಿವಾರಣೆಯಲ್ಲಿ ರಾಜಕೀಯ ಇಚ್ಛಾಶಕ್ತಿ ಮತ್ತು ಆಡಳಿತ ಸರ್ಕಾರಗಳ ಜವಾಬ್ದಾರಿ ಅತಿಮುಖ್ಯ. ಈ ನಿಟ್ಟಿನಲ್ಲಿ ನನ್ನ ಕೆಲವು ಅನಿಸಿಕೆಗಳು:

೧. ಪ್ರತಿಭಾವಂತ ಯುವಕರಿಗೆ ಉಚಿತ ತರಬೇತಿ ಮತ್ತು 100% ಪ್ಲೇಸ್‌ಮೆಂಟ್ ಗ್ಯಾರಂಟಿ ನೀಡುವ “ಕೌಶಲ್ಯ ಕೇಂದ್ರ”ಗಳನ್ನು ಸ್ಥಾಪಿಸಬೇಕು. ಇದು ಹಳ್ಳಿಯ ಬಾಗಿಲಿಗೆ ಅವಕಾಶ ತರುತ್ತದೆ.

೨.ಸರ್ಕಾರಗಳು ಜಾತಿ ಆಧಾರದಲ್ಲಿ ಅಲ್ಲ, ಕೌಶಲ್ಯ ಆಧಾರದಲ್ಲಿ ಉದ್ಯೋಗ ನೀಡುವ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು.

೩. ಯುವಕ-ಯುವತಿಯರಿಗೆ ಭತ್ಯೆ ನೀಡುವುದನ್ನು ನಿಲ್ಲಿಸಿ, ಅವರಿಗೆ ಸ್ವಂತ ಉದ್ಯೋಗ ಪ್ರಾರಂಭಿಸಲು ಆದ್ಯತೆಯ ಮೇರೆಗೆ ೫ ರಿಂದ ೧೦ ಲಕ್ಷದವರೆಗೆ ಬಡ್ಡಿ ರಹಿತ ಸಾಲ ನೀಡಬೇಕು. ಆಗ ಅವರು ಸ್ವಾಭಿಮಾನದಿಂದ ಬದುಕಬಹುದು.

೪. ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಪ್ರತಿ ಆರು ತಿಂಗಳಿಗೊಮ್ಮೆ ಟಾಟಾ, ಇನ್ಫೋಸಿಸ್ ನಂತಹ ದೊಡ್ಡ ಕಂಪನಿಗಳನ್ನು ಕರೆಸಿ ಬೃಹತ್ ಉದ್ಯೋಗ ಮೇಳ ಏರ್ಪಡಿಸಬೇಕು. ಪ್ರತಿಭಾವಂತ ಯುವಕ-ಯುವತಿಯರಿಗೆ ನೇರವಾಗಿ ಉದ್ಯೋಗ ದೊರೆಯುವಂತೆ ನೋಡಿಕೊಳ್ಳುವುದು ಸರ್ಕಾರ ಮತ್ತು ಉದ್ಯೋಗದಾತರ ಜವಾಬ್ದಾರಿಯಾಗಿದೆ.

ಹಾಗಾಗಿ ಕೌಶಲ್ಯಕ್ಕೆ ಮತ್ತು ಪ್ರತಿಭೆಗೆ ಅವಕಾಶಗಳು ಮುಕ್ತವಾಗಿದ್ದಲ್ಲಿ ಮಾತ್ರ ದೇಶದ ನಿಜವಾದ ಅಭಿವೃದ್ಧಿ ಸಾಧ್ಯ ಅನ್ನುವದನ್ನು ನಮ್ಮನ್ನು ಆಳುವ ಸರ್ಕಾರಗಳು ಯೋಚಿಸಬೇಕಾಗಿದೆ. “ಸಶಕ್ತ ಭಾರತ, ಸದೃಢ ಭಾರತದ ಕನಸು ನನಸು ಮಾಡಬೇಕಾಗಿದೆ.


  • ಓಂಕಾರ ಪಾಟೀಲ –  ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಕಾರ್ಯದರ್ಶಿಗಳು, ಬೀದರ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading