ಕೀರ್ತನಕಾರ ಭದ್ರಾಚಲ ರಾಮದಾಸ

ಭದ್ರಾಚಲ ರಾಮದಾಸರದು ಸಂಗೀತ ಕ್ಷೇತ್ರದಲ್ಲಿ ಬಹಳ ದೊಡ್ಡ ಹೆಸರು. ಪ್ರಸಿದ್ಧ ವಾಗ್ಗೇಯಕಾರರಾದ ಇವರ ಕಾಲ ೧೬೨೦-೧೬೮೮. ಇವರ ಮೂಲ ಹೆಸರು ಕಂಚರ್ಲ ಗೋಪಣ್ಣ. ಭದ್ರಾಚಲ ರಾಮದಾಸರ ಕುರಿತು ಹಿರಿಯ ಲೇಖಕರಾದ ಡಾ. ಗಿರಿಜಾ ಶಾಸ್ತ್ರಿ ಅವರು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

“ಪಲುಕೇ ಬಂಗಾರಮಾಯಿನಾ ಕೋದಂಡ ಪಾಣಿ” ಆನಂದಭೈರವಿ ರಾಗದ ಈ ಕೀರ್ತನೆಯನ್ನು ಬಾಲ್ಯದಿಂದಲೂ ಕೇಳುತ್ತಾ ಬಂದವಳು ನಾನು. ಆಗ ಇದನ್ನು ಹೆಚ್ಚಾಗಿ ಬಾಲಮುರಳಿಯವರ ಕಂಠದಲ್ಲೇ ಕೇಳಿದ್ದು. ಮಾತೇ ಬಂಗರವಾದ ಈ ಕೃತಿಯನ್ನು ಈಗ ರಾಹುಲ್ ವೆಲ್ಲಾಳ ಮತ್ತು ಸೂರ್ಯಗಾಯತ್ರಿಯಂತಹ ಉದಯೋನ್ಮುಖರೂ ಅದ್ಭುತವಾಗಿ ಹಾಡುತ್ತಾರೆ.

ಈ ಕೃತಿ ನನಗೆ ಕಣ್ಣೆದುರು ಬಂದದ್ದು, ನಾನು ಅವಾಕ್ಕಾದದ್ದು ಹೈದರಾಬಾದಿನಿಂದ ಭದ್ರಾಚಲಕ್ಕೆ ಹೋಗುವ ದಾರಿಯಲ್ಲಿ. ರಾಮದಾಸರ ಕೀರ್ತನೆಗಳನ್ನು ಹಾಕಿ ಎಂದು ನಾನು ಚಾಲಕನಿಗೆ ಹೇಳಿದೆ. ಆಗ ಮೊದಲಿಗೆ ಶುರುವಾದ್ದೇ “ಪಲುಕೇ ಬಂಗಾರಮಾಯಿನಾ” ಅರೆ! ಎಷ್ಟು ಪರಿಚಿತವಾದ ಈ ಕೀರ್ತನೆ ಭದ್ರಾಚಲ ರಾಮದಾಸರದ್ದೆಂದು ಗೊತ್ತೇ ಇರಲಿಲ್ಲವಲ್ಲ? ಅದರ ಹಿಂದೆಯೇ “ಈ ತೀರಗುನನಿ ದಯಚೂಚದವೋ ಇನವಂಶೋತ್ತಮ ರಾಮಾ”, “ಎಂತರುಚೀರ ನೀನಾಮಮು ಏಮಿ ರುಚಿರಾ”, “ಶುದ್ಧ ಬ್ರಹ್ಮ ಪರಾತ್ಪರ ರಾಮ” ಮುಂತಾದ ಕೀರ್ತನೆಗಳು ಒಂದಾದಮೇಲೆ ಒಂದರಂತೆ ಹಿಂಬಾಲಿಸಿದವು. ಎಲ್ಲಾ ಹಾಡುಗಳೂ ನನ್ನ ಬಾಲ್ಯಕ್ಕೆ ಲಗ್ಗೆ ಹಾಕಿದವು.

ಹೈದರಾಬಾದಿನ ಸುಸಜ್ಜಿತ ರಸ್ತೆಯ ಮೇಲೆ, ಸೊಸೆ ರೇಖಾ ( ರಘುವಿನ ಅಕ್ಕನ ಮಗಳು) ನಮ್ಮ ಪ್ರಯಾಣಕ್ಕೆ ಅಣಿಮಾಡಿಕೊಟ್ಟ ಸುಖಾಸೀನ ಕಾರು ವೇಗವಾಗಿ ಓಡುತ್ತಿತ್ತು ಹಿನ್ನೆಲೆಗೆ ರಾಮದಾಸರ ಹಾಡು. ಓಹ್! ಆದರೆ ಅವು ಎಸ್.ಪಿ.ಬಿ ಯವರ ಕಂಠದಲ್ಲಿ ಫಿಲ್ಮೀ ಶೈಲಿಗೆ ಅಳವಡಿಸಿದ ಹಾಡುಗಳಾಗಿದ್ದವು.

ಅಪ್ಪಟ ಶಾಸ್ತ್ರೀಯ ಶೈಲಿಯಲ್ಲಿದ್ದಿದರೆ ಅದರ ಸುಖವೇ ಬೇರೆಯದಾಗುತ್ತಿತ್ತು. ಆಗ ಸ್ವರ್ಗವೇ ಧರೆಗಿಳಿದಂತೆ! ಆದರೆ ಚಾಲಕನ ರುಚಿಯನ್ನೂ ಗಮನಿಸಬೇಕಲ್ಲ? ಮುಂದಿನ‌ ಸೀಟಿನಲ್ಲಿ ಕುಳಿತಿದ್ದ ನನ್ನ ಅತ್ತಿಗೆಯವರೂ ( ರಘುನಾಥ್ ಅವರ ಅಕ್ಕ) ಹಾಡುಗಳನ್ನು ಆನಂದಿಸುತ್ತಿದ್ದರು.

ಹೈದರಾಬಾದಿನಿಂದ ಸು. ಆರುಗಂಟೆಗಳ ಕಾಲ ಪ್ರಯಾಣ ಮಾಡಿದನಂತರ ಭದ್ರಾಚಲ ತಲಪಿದೆವು. ಭದ್ರಾಚಲ ರಾಮದಾಸರದು ಸಂಗೀತ ಕ್ಷೇತ್ರದಲ್ಲಿ ಬಹಳ ದೊಡ್ಡ ಹೆಸರು. ಪ್ರಸಿದ್ಧ ವಾಗ್ಗೇಯಕಾರರಾದ ಇವರ ಕಾಲ ೧೬೨೦-೧೬೮೮. ಇವರ ಮೂಲ ಹೆಸರು ಕಂಚರ್ಲ ಗೋಪಣ್ಣ. ರಾಮನ ಪರಮ ಭಕ್ತರಾದ ಇವರು ಹುಟ್ಟಿದ್ದು ಖಮ್ಮಮ್‌ ಜಿಲ್ಲೆಯ ನೆಲಕೊಂಡನಪಲ್ಲಿಯಲ್ಲಿ ಎಂದು ವಿಕಿಪೀಡಿಯಾ ಹೇಳುತ್ತದೆ.

ತ್ಯಾಗರಾಜರ ಪರಂಪರೆಯನ್ನೇ ಅನುಸರಿಸಿದ ರಾಮದಾಸರು ಅವರ ವಾರಸುದಾರರಂತೇ ಕಾಣುತ್ತಾರೆ. ಇಬ್ಬರೂ ರಾಮಭಕ್ತರು. ತೆಲಗು ಭಾಷಿಕರು, ಇಬ್ಬರೂ ಸಂಗೀತ ಕ್ಷೇತ್ರದ ಮಹಾನ್‌ ಸಾಧಕರು. ʼಗೋದಾವರಿʼಯನ್ನು ನಾನು ನಾಸಿಕ್‌ ನಲ್ಲಿ ಮಾತ್ರ ಕಂಡವಳು. ಅವಳು ಭದ್ರಾಚಲಕ್ಕೆ ಹರಿದುಬಂದಿದ್ದಾಳೆ! ತ್ರ್ಯಂಬಕೇಶ್ವರದಲ್ಲಿ ಹುಟ್ಟುವ ಗೋದಾವರಿ, ರಾಜಮಂಡ್ರಿಯ ಬಳಿ ಬಂಗಾಳಕೊಲ್ಲಿಯಲ್ಲಿ ಐಕ್ಯವಾಗುತ್ತಾಳೆ. ಪಶ್ಚಿಮದಿಂದ ಪೂರ್ವಾಭಿಮುಖ ಗಮನ- ನಮ್ಮ ದೇಶದ ಹೆಚ್ಚನ ನದಿಗಳ ಹಾಗೆ. ಅವಳ ಹರಿವು ಸು ೧೪೬೫ ಕಿ.ಮೀ. ಅಂತೆ. ಅವಳನ್ನು ದಕ್ಷಿಣದ ಗಂಗೆಯಂತಲೂ ಕರೆಯುತ್ತಾರೆ. ಅಪಾರವಾದ ಅದರ ಪಾತ್ರ, ಎಲ್ಲಿಯೋ ಹುಟ್ಟಿ ಎಲ್ಲಿಗೋ ಸೇರುವ ಅದರ ಹರಿವು ಎಷ್ಟು ವಿಸ್ಮಯಕಾರಿ! ಈ ತೀರದ ಮೇಲೆ ‘ರಾಮದಾಸು’ ಅವರು ಕಟ್ಟಿಸಿದ ಸೀತಾರಾಮಚಂದ್ರ ದೇವಾಲಯವಿದೆ.

ರಾಮದಾಸು ಅವರ ಜೀವನದಲ್ಲಿ ನಡೆದ ಪವಾಡಗಳ ಬಗ್ಗೆ ಅವರ ಭಕ್ತಿಯ ತೀವ್ರತೆಯ ಬಗ್ಗೆ ಅನೇಕ ಕತೆಗಳನ್ನು ನಮ್ಮ ಬಾಲ್ಯದಲ್ಲಿ ಅಪ್ಪ ಬಹಳ ಹೇಳುತ್ತಿದ್ದರು. ಹೈದರಾಬಾದಿನ ಗೋಲ್ಕಂಡದ ಕುತುಬ್‌ ಶಾಹೀ ಸುಲ್ತಾನನ ಬಳಿ ತೆರಿಗೆ ಅಧಿಕಾರಿಯಾಗಿದ್ದ ಅವರ ಸೋದರ ಮಾವನ ಬಳಿಗೆ ಕೆಲಸವನ್ನು ಅರಸಿಕೊಂಡು ಗೋಪಣ್ಣ ಬಂದಾಗ ಭದ್ರಾಚಲದ ತೆರಿಗೆ ಸಂಗ್ರಹ ಕಾರ್ಯವನ್ನು ಅವರಿಗೆ ಕೊಡಲಾಗುತ್ತದೆ. ಅಲ್ಲಿದ್ದ ರಾಮಚಂದ್ರ ದೇವಾಲಯದ ದುಃಸ್ಥಿತಿಯನ್ನು ಕಂಡು ರಾಮಭಕ್ತರಾದ ಗೋಪಣ್ಣನಿಗೆ ಬಹಳ ದುಃಖವಾಗುತ್ತದೆ. ಆಗ ತೆರಿಗೆಯಿಂದ ಸಂಗ್ರಹವಾದ ಹಣವನ್ನು ಉಪಯೋಗಿಸಿಕೊಂಡು ರಾಮಚಂದ್ರದೇವಾಲಯವನ್ನು ಪುನರ್ನಿರ್ಮಾಣ ಮಾಡುತ್ತಾರೆ. ತರತರದ ಆಭರಣಗಳನ್ನು ಮಾಡಿಸುತ್ತಾರೆ. ಈ ಆಭರಣಗಳ ವಿವರ ಅವರ “ಇಕ್ಷಾಕುಕುಲ ತಿಲಕ” ಕೀರ್ತನೆಯಲ್ಲಿ ಬಹಳ ಸುಂದರವಾಗಿ ಮೂಡಿಬಂದಿದೆ. ತೆರಿಗೆಯ ಹಣ ದುರುಪಯೋಗಮಾಡಿಕೊಂಡಿದ್ದರಿಂದ ಸುಲ್ತಾನ ಅವರನ್ನು ಹದಿನಾಲ್ಕು ವರ್ಷಗಳ ಕಾಲ ಜೈಲಿನಲ್ಲಿ ಬಂಧಿಸಿಡುತ್ತಾನೆ. ಈ ಸಂದರ್ಭದಲ್ಲಿ ಸ್ವತಃ ರಾಮಲಕ್ಷ್ಮಣರೇ ಬಂದು ಜೈಲಿನಿಂದ ಇವರನ್ನು ಬಿಡಿಸಿದರು ಎಂಬ ಸ್ವಾರಸ್ಯಕರವಾದ ಕಥೆ ಇದೆ. ಬಿಡುಗಡೆಯ ಪತ್ರಕ್ಕೆ ಸ್ವತಃ ರಾಮ ತನ್ನ ರಾಜಮುದ್ರೆಯನ್ನೇ ರಾಮದಾಸರ ತಂಬುಲದಲ್ಲಿ ಒತ್ತಿಸಿಕೊಂಡು ರಾಜನ ಬಳಿಗೆ ಒಯ್ದನಂತೆ. ಆವೇಳೆಗಾಗಲೇ ಸುಲ್ತಾನನು ರಾಮ ಮುದ್ರೆ ಇರುವ ಅನೇಕ ಚಿನ್ನದ ನಾಣ್ಯಗಳನ್ನು ಕನಸಿನಲ್ಲಿ ಕಂಡಿದ್ದನಂತೆ. ಹೀಗೆ ಅನೇಕ ಕತೆಗಳು ಹರಡಿವೆ.

ರಾಮದಾಸರು ಜೈಲಿನಲ್ಲಿದ್ದಾಗ ರಚಿಸಿದ ಕೀರ್ತನೆಗಳು ʼದಾಶರಥಿ ಶತಕಂ ಮತ್ತು ರಾಮದಾಸ ಕೀರ್ತನೆಗಳುʼ ಎನ್ನುವ ಸಂಗ್ರಹದಲ್ಲಿ ಅಡಗಿವೆ ಎಂದು ಹೇಳಲಾಗುತ್ತದೆ. ಭದ್ರಾಚಲಕ್ಕೆ ೩೫ ಕಿ.ಮೀ ದೂರದಲ್ಲಿ ‘ಪರ್ಣಶಾಲಾ’ ಎನ್ನುವ ಪ್ರದೇಶವಿದೆ. ಅಲ್ಲಿಯೂ ಒಂದು ರಾಮನ ದೇವಾಲಯ. ಸೀತಾರಾಮರು ವನವಾಸದ ಕೆಲದಿನಗಳನ್ನು ಇಲ್ಲಿ ಕಳೆದಿದ್ದರಂತೆ. ಇದು ಮಹಾರಾಷ್ಟ್ರದ ಗಡಿ ಪ್ರದೇಶವಾಗಿರುವುದರಿಂದ ಗೋದಾವರಿ ತಟದಲ್ಲೇ ಬಂದಿರುವ ಸಾಧ್ಯತೆಯೂ ಇದೆ. ದಂಡಕಾರಣ್ಯವೆಂದೂ ಇದನ್ನು ಕರೆಯುತ್ತಾರೆ. ರಾಮಾಯಣ ಕಾಲದ ಭೂಗೋಳ ಹೇಗಿದ್ದಿತೋ ಯಾರಿಗೆ ಗೊತ್ತು?.

ಚಿನ್ನದ ಜಿಂಕೆ, ಪರ್ಣಕುಟಿ, ಸೀತಾ ರಾಮರ ಬೊಂಬೆಗಳು, ಸನ್ಯಾಸಿ ರಾವಣ ಹೀಗೆ ಒಂದು ಕೃತಕ ವಲಯವನ್ನು ಸೃಷ್ಟಿಸಿ ಶೋಧಕರ ಭಾವಕೋಶವನ್ನು ಹಾಳುಮಾಡಿದ್ದಾರೆ. ದೇವಾಲಯದ ಮುಂದೆ ಅಪರಂಪಾರ ಗೋದಾವರಿ ಹರಿಯುತ್ತಿದ್ದಾಳೆ. ನಾವು ಹೋದದ್ದು ಮಳೆಗಾಲವಾದ್ದರಿಂದ ತುಂಬಿ ಹರಿಯುತ್ತಿದ್ದ ನದಿಯೊಳಗೆ ಇಳಿಯಲು ಸಾಧ್ಯವಾಗಲಿಲ್ಲ.
‘ ಇಕ್ಷ್ವಾಕು ಕುಲ ತಿಲಕ’ ಯದುಕುಲಕಾಂಭೋಜಿ ರಾಗದ ʼಇಕ್ಷಾಕು ಕುಲ ತಿಲಕ ಕೀರ್ತನೆಯ ಸಾರಾಂಶ ಹೀಗಿದೆ “ಇಕ್ಷಾಕು ಕುಲವನ್ನು ಎತ್ತಿಹಿಡಿಯಲು (ಸಿಂಗರಿಸಲು) ನಾನು ಏನಲ್ಲ ಮಾಡಿದೆ? ಈಗಲೂ ಮಾತನಾಡದೇ ಏಕೆ ಕುಳಿತಿರುವೆ ಶ್ರೀರಾಮಚಂದ್ರಾ ನನಗಿನ್ನಾರು ಗತಿ ನೀನಲ್ಲದೆ?

ಭರತನಿಗೆ ಪಚ್ಚೆಯ ಪದಕ ಮಾಡಿಸಿದೆ
ಅದಕ್ಕೆ ಹತ್ತು ಸಾವಿರ ವರಹಗಳನ್ನು ವೆಚ್ಚ ಮಾಡಿದೆ
ಶತೃಘ್ನನಿಗೆ ಸೊಂಟದ ಪಟ್ಟಿ ಮಾಡಿಸಿದೆ (ಮೊಲತ್ರಾಡು)
ಅದಕ್ಕೆ ತಗುಲಿದ ವೆಚ್ಚ ಹತ್ತುಸಾವಿರ ವರಹಗಳು
ಲಕ್ಷ್ಮಣನ ಮುತ್ತಿನಹಾರಕ್ಕೆ
ತಗುಲಿದವು ಹತ್ತುಸಾವಿರ ವರಹ

ಸೀತೆಗೆ ಮಾಡಿಸಿದೆ ಹುಣಿಸೆ ಚಿಗುರಿನ ಪದಕ ( ಚಿಂತಾಕು ಪದಕಮು) ಹಾರ ವೆಚ್ಚವಾಯಿತು ವರಹ ಹತ್ತು ಸಾವಿರ ಬಲು ಎಚ್ಚರಿಕೆಯಿಂದ ನಾನು ನಿನಗೆ ಮಾಡಿಸಿದ ಅಪೂರ್ವ ರತ್ನದ ಹಾರ ಧರಿಸಿಕೊಂಡು ನಲಿದಾಡುತ್ತಿದ್ದೀಯಲ್ಲ? ಯಾರಪ್ಪನ ಗಂಟು ಎಂದುಕೊಂಡಿರುವೆ?

ನಿಮ್ಮಪ್ಪ ದಶರಥ ಕೊಟ್ಟನೇ
ನಿಮ್ಮಾವ ಜನಕ ಕಳಿಸಿದನೇ?
ನಾನು ಹೀಗೆ ಬೈಯುತ್ತಿರುವೆನೆಂದು ಬೇಸರಪಡಬೇಡ ರಾಮಾ
ಈ ಹೊಡೆತ (ಜೈಲಿನಲ್ಲಿ) ನೋವು ತಾಳಲಾರದೇ ನಿನ್ನ ಹಳಿಯುತ್ತಿರುವೆ.
ಭಕ್ತ ರಕ್ಷಕನೆಂದೇ ಹೆಸರಾದವನು
ಈ ಭಕ್ತನನೂ ಸಲಹಲಾರೆಯಾ
ಕೃಪಾಳು?

ಒಬ್ಬ ತೆರಿಗೆ ಅಧಿಕಾರಿಯ ರೀತಿಯಲ್ಲಿ ಶ್ರೀರಾಮನಿಗೆ ಲೆಕ್ಕ ಪತ್ರ ಒಪ್ಪಿಸುತ್ತಿದ್ದಾರೆ. ಈ ಅಹವಾಲಿನಲ್ಲಿ “ಅಡ್ಡದಾರಿ ಹಿಡಿದೆ ನಿಜ ಆದರೆ ಅದು ನಿನಗಾಗಿಯೇ, ನಿನ್ನ ಕುಲದ ಮಹಿಮೆಯನ್ನು ಸಾರುವುದಕ್ಕಾಗಿಯೇ ಎಂಬ ಭಾವವಿದೆ. ಮಾಡಿದ ಅಪರಾಧಕ್ಕೆ ಅನುಭವಿಸುವ ದಂಡನೆ, ಯಾತನೆ ಮತ್ತು ಭಕ್ತಿಯ ಔನ್ನತ್ಯ ಎರಡೂ ಇಲ್ಲಿ ಮಿಳಿತವಾಗಿದೆ. “ನಿನ್ನ ಭಕ್ತನಾದುದಕ್ಕೆ ನನಗೆ ಸಿಕ್ಕ ಪ್ರತಿಫಲ ಇದುವೇ ತಾನೇ?” ಎನ್ನುವ ನಿಂದಾಸ್ತುತಿಯೂ ಭಕ್ತಿಸಾಹಿತ್ಯದ ಒಂದು ಲಕ್ಷಣವೇ.

ಸೀತಾರಾಮಚಂದ್ರ ದೇವಾಲಯದಲ್ಲಿ ರಾಮದಾಸರು ಮಾಡಿಸಿಟ್ಟರೆನ್ನಲಾದ ಒಡವೆಗಳನ್ನು ಒಂದು ಸಣ್ಣ ಕೋಣೆಯಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದಾರೆ. ಅದನ್ನು ಅವರು ‘ಮ್ಯೂಸಿಯಮ್’ ಎನ್ನುತ್ತಾರೆ. ಅವರು ರಚಿಸಿದ ಗ್ರಂಥಗಳಾಗಲೀ ಅವರ ಜೀವನದ ಘಟ್ಟಗಳನ್ನು ಹೇಳುವ ಯಾವ ಚಿತ್ರಗಳಾಗಲೀ ಅಲ್ಲಿ ಕಾಣಲು ಸಿಗುವುದಿಲ್ಲ. ಎಲ್ಲ ಕಡೆ ಹಣ ಮಾತನಾಡುವಂತೆ ಇಲ್ಲಿಯೂ ಮಾತನಾಡುತ್ತದೆ. ಆದರೆ ಅಷ್ಟು ದುಬಾರಿಯೇನಲ್ಲ. ಯಾಕೆಂದರೆ ಇದು ಅಂತಹ ದೊಡ್ಡ ದೇವಸ್ಥಾನವಲ್ಲ. ಭದ್ರಾಚಲ ಊರಾಗಲೀ ದೇವಾಲಯವಾಗಲೀ ಅಷ್ಟು ಸ್ವಚ್ಛವಾಗಿಲ್ಲ.
ಪುರಾತನ ವಸ್ತುಗಳ ಸಂಗ್ರಹಮಾಡುವ, ಜತನವಾಗಿ ಕಾಪಾಡುವ ಶಿಸ್ತನ್ನು ನಾವು ಪಾಶ್ಚಾತ್ಯರಿಂದ ಕಲಿಯಬೇಕಾಗಿದೆ.

“ಇಕ್ಷ್ವಾಕು ಕುಲತಿಲಕ” ಬಾಲಮುರಳಿಯವರ ಕಂಠದಲ್ಲಿ

https://youtu.be/20m1myrpvtQ?si=NbWpVPJELGh7un1s


  • ಡಾ. ಗಿರಿಜಾ ಶಾಸ್ತ್ರಿ – ಲೇಖಕರು, ಕವಿಗಳು, ಬೆಂಗಳೂರು.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading