ನಿನ್ನ ದಾರಿಯಲ್ಲಿ ನನ್ನ ನೆರಳು – (ಭಾಗ – ೧)

ನೀನು ತೋರಿಸಿದ ಆ ಕೃತಕ ಪ್ರೀತಿಯ ನಾಟಕವನ್ನು ನಿಜವೆಂದು ನಂಬಿ, ನನ್ನ ಇಡೀ ಜಗತ್ತನ್ನೇ ನಿನ್ನ ಕಾಲ ಬುಡಕ್ಕೆ ತಂದಿಟ್ಟೆನಲ್ಲಾ, ಅದು ನನ್ನ ಮೂರ್ಖತನವಾ? ಪತ್ರಕರ್ತರಾದ ಡಾ.ನಂದುಪೂಜಾರಿ ಅವರ ‘ನಿನ್ನ ದಾರಿಯಲ್ಲಿ ನನ್ನ ನೆರಳು’ ಅಂಕಣದಲ್ಲಿ ಮತ್ಲಬ್ ಕಿ ದುನಿಯಾ ತಪ್ಪದೆ ಮುಂದೆ ಓದಿ….

ಇವತ್ತು ನನ್ನ ಒಂಟಿ ಕೋಣೆಯ ಕಿಟಕಿಯ ಹೊರಗೆ ಕತ್ತಲು ಆವರಿಸಿಕೊಳ್ಳುತ್ತಿದೆ. ಆದರೆ ಆ ಕತ್ತಲಿಗಿಂತ ದಟ್ಟವಾದ ಶೂನ್ಯವೊಂದು ನನ್ನ ಎದೆಯೊಳಗೆ ಬಂದು ಕುಳಿತಿದೆ. ನಿನ್ನನ್ನು ನನ್ನ ಬದುಕಿನ ಪರಮ ಸತ್ಯ, ನನ್ನ ಉಸಿರಿನ ಕೊನೆಯ ತಂಗಾಳಿ ಅಂತ ನಂಬಿದ್ದೆನಲ್ಲಾ ಸಖಿ, ಅದಕ್ಕಿಂತ ದೊಡ್ಡ ಬ್ಲಂಡರ್ ನಾನು ನನ್ನ ಇಡೀ ಲೈಫಲ್ಲಿ ಬೇರೆ ಯಾವುದೂ ಮಾಡಿರಲಿಲ್ಲ. ಇವತ್ತು ಹಳೇ ನೆನಪುಗಳ ಪುಟವನ್ನು ತಿರುವಿ ಹಾಕುತ್ತಿದ್ದರೆ ಎದೆಯೊಳಗಿಂದ ರಕ್ತ ಒಸರಿದಂತಾಗುತ್ತದೆ. ನಾನೇನು ಅಂಥಾ ಮಹಾಪರಾಧ ಮಾಡಿದ್ದೆ? ಪ್ರಾಣಕ್ಕಿಂತ ಹೆಚ್ಚಾಗಿ ನಿನ್ನನ್ನು ಆರಾಧಿಸಿದ್ದು ನಾನು ಮಾಡಿದ ತಪ್ಪಾ? ಅಥವಾ ನೀನು ತೋರಿಸಿದ ಆ ಕೃತಕ ಪ್ರೀತಿಯ ನಾಟಕವನ್ನು ನಿಜವೆಂದು ನಂಬಿ, ನನ್ನ ಇಡೀ ಜಗತ್ತನ್ನೇ ನಿನ್ನ ಕಾಲ ಬುಡಕ್ಕೆ ತಂದಿಟ್ಟೆನಲ್ಲಾ, ಅದು ನನ್ನ ಮೂರ್ಖತನವಾ? ಜಸ್ಟ್ ಟೆಲ್ ಮಿ ಸಖಿ, ವಾಟ್ ಇಸ್ ದಿಸ್ ನಾನ್ಸೆನ್ಸ್?

​ಒಂದು ಹೆಣ್ಣು ತಾನು ಪ್ರೀತಿಸಿದ ಗಂಡಸನ್ನು ದೇವರೆಂದು ಭಾವಿಸುವುದನ್ನು ನೋಡಿದ್ದೇನೆ. ಆದರೆ ಅದೇ ಹೆಣ್ಣು ಅದೇ ಗಂಡನ ನಂಬಿಕೆಯನ್ನು ಇಷ್ಟು ಕ್ರೂರವಾಗಿ ಬಲಿಗೊಡಬಲ್ಲಳು ಎಂಬುದನ್ನು ನಿನ್ನನ್ನು ನೋಡುವವರೆಗೂ ನಾನು ನಂಬುತ್ತಿರಲಿಲ್ಲ. ನಿನಗೆ ಅವನ ಮೇಲೆ ಒಲವಿತ್ತು ಅಂತಾದರೆ, ಅವನ ಜೊತೆಗಿನ ಬದುಕೇ ನಿನಗೆ ಸ್ವರ್ಗ ಅನಿಸುತ್ತಿತ್ತು ಅಂತಾದರೆ, ನೇರವಾಗಿ ಬಂದು ನನ್ನ ಕಣ್ಣಿಗೆ ಕಣ್ಣಿಟ್ಟು ಹೇಳಬೇಕಿತ್ತು. “ನೋಡು, ನನಗವನೇ ಇಷ್ಟ, ನಿನ್ನ ಜೊತೆ ನಟಿಸಲು ನನ್ನಿಂದ ಸಾಧ್ಯವಿಲ್ಲ” ಅಂತ ಒಂದೇ ಒಂದು ಮಾತು ಬಾಯಿ ಬಿಟ್ಟು ಹೇಳಿದ್ದರೂ ನಾನು ನಿನ್ನನ್ನು ಗೌರವದಿಂದಲೇ ಬಿಟ್ಟುಕೊಡುತ್ತಿದ್ದೆ. ನಿನಗೆ ಗೊತ್ತಿಲ್ಲ ಸಖಿ, ಪ್ರೀತಿಸಿದ ಜೀವದ ಖುಷಿಗಾಗಿ ತನ್ನದೇ ಎದೆಯನ್ನು ಸೀಳಿ ಪ್ರೀತಿಯನ್ನು ತ್ಯಾಗ ಮಾಡುವ ಗಂಡಸುತನ ಈ ಎದೆಯಲ್ಲಿತ್ತು. ನಾನೇ ಮುಂದೆ ನಿಂತು, ಬೇಕಿದ್ದರೆ ಅವನ ಕೈ ಹಿಡಿದು ಬೇಡಿಕೊಂಡಾದರೂ ನಿನ್ನನ್ನು ಅವನ ಜೊತೆ ಒಂದುಗೂಡಿಸಿ, ನಿನ್ನ ಕಣ್ಣಲ್ಲಿ ಸಂತೋಷ ನೋಡಿ ನಾನು ದೂರ ಸರಿಯುತ್ತಿದ್ದೆ.

​ಆದರೆ ನೀನು ಮಾಡಿದ್ದಾದರೂ ಏನು…?

​ಒಂದೆಡೆ ನನ್ನ ಹೆಗಲ ಮೇಲೆ ತಲೆಯಿಟ್ಟು ಜನ್ಮಜನ್ಮದ ಅನುಬಂಧದ ಮಾತಾಡುತ್ತಿದ್ದೆ. “ನೀನಿಲ್ಲದೆ ನಾನು ಬದುಕಲಾರೆ” ಎಂದು ನನ್ನ ಎದೆಬಡಿತವನ್ನು ಜೋರು ಮಾಡುತ್ತಿದ್ದೆ. ಆದರೆ ಅದೇ ಹೊತ್ತಿನಲ್ಲಿ, ನನ್ನ ಕಣ್ಣಿಗೆ ಮಣ್ಣೆರಚಿ ಅವನ ಜೊತೆ ಕಣ್ಣಾಮುಚ್ಚಾಲೆ ಆಡುತ್ತಿದ್ದೆ. ನನ್ನ ನಂಬಿಕೆಯ ಬೆನ್ನಿಗೆ ಆ ನಯವಂಚಕತನದ ಚೂರಿಯನ್ನು ಇಷ್ಟು ಆಳವಾಗಿ ಇಳಿಸಿಬಿಟ್ಟೆಯಲ್ಲಾ, ಆ ಕತ್ತಲ ರಾತ್ರಿಯ ಕ್ಷಣದಲ್ಲಿ ನಿನಗೆ ನಿನ್ನ ಆತ್ಮಸಾಕ್ಷಿ ಒಂದೇ ಒಂದು ಬಾರಿ ಯೂ ಚುಚ್ಚಲಿಲ್ಲವಾ? ಇಂಥಾ ನಮಕ್ ಹಾರಾಮ್ ಬುದ್ಧಿ ನಿನಗೆ ಎಲ್ಲಿಂದ ಬಂತು ಸಖಿ? ನಿನ್ನ ಈ ದ್ರೋಹದ ಪ್ರೀತಿಗಿಂತ, ಆ ಸ್ಮಶಾನದ ಒಂಟಿತನ ಎಷ್ಟೋ ಮೇಲು ಅನಿಸಿಬಿಡುತ್ತದೆ.

​ಯಾರನ್ನು ನಾವು ಅತಿಯಾಗಿ ಹಚ್ಚಿಕೊಳ್ಳುತ್ತೇವೆಯೋ, ಅವರೇ ನಮ್ಮ ಬದುಕಿನ ಅತಿ ದೊಡ್ಡ ದೌರ್ಬಲ್ಯವಾಗಿ ಬಿಡುತ್ತಾರೆ. ಇವತ್ತು ಇಡೀ ಜಗತ್ತಿನ ಮುಂದೆ ನಾನು ಅಪರಾಧಿಯಂತೆ ನಿಂತಿದ್ದೇನೆ. ಪ್ರೀತಿಯಲ್ಲಿ ಸೋತವನನ್ನು ಈ ಸಮಾಜ ಯಾವ ಕಣ್ಣಿನಿಂದ ನೋಡುತ್ತದೆ ಎಂಬುದು ನನಗೆ ಗೊತ್ತು. ಆದರೆ ನಾನು ಸೋತಿದ್ದು ಪ್ರೀತಿಯಲ್ಲಲ್ಲ ಸಖಿ, ನಿನ್ನ ಮುಖವಾಡವನ್ನು ಗುರುತಿಸುವಲ್ಲಿ ನಾನು ಸೋತುಬಿಟ್ಟೆ.

​ಇಷ್ಟೆಲ್ಲಾ ದ್ರೋಹ ಮಾಡಿ, ನನ್ನ ಬದುಕನ್ನು ಬೀದಿಗೆ ತಂದು ನೀನು ಗೆದ್ದುಬಿಟ್ಟೆ ಅಂದುಕೊಂಡಿದ್ದೀಯಾ? ಡೆಫಿನೆಟ್ಲಿ ನಾಟ್. ನೀನು ಸೋತು ಸುಣ್ಣವಾಗಿದ್ದೀಯಾ. ಒಬ್ಬ ನಿಷ್ಕಲ್ಮಷವಾಗಿ ಪ್ರೀತಿಸುವ, ನಿನಗಾಗಿ ತನ್ನ ಸರ್ವಸ್ವವನ್ನೂ ತ್ಯಾಗ ಮಾಡಲು ಸಿದ್ಧನಿದ್ದ ಗಂಡಸಿನ ಹೃದಯವನ್ನು ಕಳೆದುಕೊಂಡು ನೀನು ಇವತ್ತು ಭಾವನೆಗಳ ಭಿಕ್ಷುಕಿಯಾಗಿದ್ದೀಯಾ. ಬೆನ್ನಿಗೆ ಬಿದ್ದ ಆ ಚೂರಿಯ ನೋವನ್ನು ತಡ್ಕೊಂಡು, ಪ್ರತಿ ಕ್ಷಣವೂ ನರಕಯಾತನೆ ಅನುಭವಿಸುತ್ತಾ ನಾನು ಇವತ್ತಿಗೂ ಉಸಿರಾಡುತ್ತಿದ್ದೇನಲ್ಲಾ, ಅದೇ ನಾನು ಮಾಡಿದ ತಪ್ಪು.

​ಆ ಚೂರಿಯನ್ನು ನೀನು ಹಾಗೆ ಬೆನ್ನಿಗೆ ಹಾಕಿ ನನ್ನನ್ನು ಜೀವಚ್ಛವ ಮಾಡುವ ಬದಲು, ನೇರವಾಗಿ ನನ್ನ ಎದೆಯ ಭಾಗಕ್ಕೇ ಇಳಿಸಿಬಿಡಬೇಕಿತ್ತು. ಆಗ ಈ ಜೀವ ಒಂದೇ ಬಾರಿ ಉಸಿರು ಚೆಲ್ಲಿ ಶಾಂತವಾಗಿಬಿಡುತ್ತಿತ್ತು. ಈ ವಂಚನೆಯ ಬದುಕಿನ ಘೋರ ನಿರಾಸೆ, ನಿನ್ನಂಥಾ ಒಬ್ಬ ನಯವಂಚಕಿಯ ಮುಖ ನೋಡುವ ದುಸ್ಥಿತಿಯಾದರೂ ತಪ್ಪಿಹೋಗುತ್ತಿತ್ತು!

​ನೆನಪಿಟ್ಟುಕೋ ಸಖಿ, ಕಾಲ ಎಲ್ಲದಕ್ಕೂ ಉತ್ತರ ಕೊಡುತ್ತದೆ. ಇವತ್ತು ನನ್ನನ್ನು ಅನಾಥನನ್ನಾಗಿ ಮಾಡಿ, ನನ್ನ ಪವಿತ್ರವಾದ ಪ್ರೀತಿಯನ್ನು ಹರಾಜು ಹಾಕಿ ನೀನು ಮತ್ತೊಬ್ಬನ ಹೆಗಲ ಮೇಲೆ ಕೈಹಾಕಿ ನಗುತ್ತಿರಬಹುದು. ಆದರೆ ನೆನಪಿರಲಿ, ಲೈಫ್ ಈಸ್ ಎ ಸರ್ಕಲ್. ಮತ್ತೊಬ್ಬನ ಕಣ್ಣಲ್ಲಿ ರಕ್ತದ ಕಣ್ಣೀರು ತರಿಸಿ ಕಟ್ಟಿದ ಯಾವುದೇ ಅರಮನೆಯೂ ಇತಿಹಾಸದಲ್ಲಿ ಸುಖವಾಗಿ ಬಾಳಿದ್ದಿಲ್ಲ. ಇವತ್ತು ನೀನು ಬಿತ್ತಿದ ವಂಚನೆಯ ವಿಷದ ಬೆಳೆ, ನಾಳೆ ನಿನ್ನನ್ನೇ ಸುಟ್ಟು ಬೂದಿ ಮಾಡದೇ ಬಿಡುವುದಿಲ್ಲ.

​ಇನ್ಮೇಲೆ ನಿನ್ನ ದಾರಿಯಲ್ಲಿ ನನ್ನ ನೆರಳು ಕೂಡ ಬೀಳುವುದಿಲ್ಲ. ನೀನು ಕೊಟ್ಟ ಈ ಶಾಪದಂಥ ಒಂಟಿತನ ಮತ್ತು ನಿರಾಸೆಯನ್ನು ನಾನೇ ಹಾಲಿನಂತೆ ಕುಡಿದು ಬದುಕುತ್ತೇನೆ. ಹೊಸ ಬದುಕಿನತ್ತ ಹೆಜ್ಜೆ ಇಡುತ್ತಿರುವ ನಿನಗೆ ನನ್ನದೊಂದೇ ಕೊನೆಯ ಮಾತು—ನನ್ನ ಬೆನ್ನಿಗೆ ಚೂರಿ ಹಾಕಿದ ನಿನ್ನ ಆ ನಯನಾಜೂಕಿನ ಕೈಗಳು, ನಾಳೆ ಮತ್ತೊಬ್ಬನ ಕೈ ಹಿಡಿದಾಗ ನಡುಗದೇ ಇರಲಿ ಅಷ್ಟೇ.


  •  ಡಾ.ನಂದುಪೂಜಾರಿ – ಪತ್ರಕರ್ತರು ಹಾಗೂ ಅಂಕಣಕಾರರು, ಸಿದ್ದಾಪುರ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading