ಲೇಖಕರಾದ ಶ್ವೇತಾ ಭಿಡೆ ಅವರು ಬರೆದಿರುವ “ನಿತ್ಯ ಚೈತನ್ಯಕ್ಕೆ ಸರಳ ಸೂತ್ರಗಳು” ಕೃತಿಯು ತನ್ನ ಹೆಸರಿಗೆ ತಕ್ಕಂತೆಯೇ ಅತ್ಯಂತ ಸರಳವಾಗಿ ಮತ್ತು ಸುಂದರವಾಗಿ ಮೂಡಿಬಂದಿದೆ. ಈ ಕೃತಿಯ ಕುರಿತು ಲೇಖಕರಾದ ಚೇತನ ಭಾರ್ಗವ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ : ನಿತ್ಯ ಚೈತನ್ಯಕ್ಕೆ ಸರಳ ಸೂತ್ರಗಳು
ಲೇಖಕರು : ಶ್ವೇತಾ ಭಿಡೆ
ಪ್ರಕಾಶಕರು : ಸಾವಣ್ಣ ಎಂಟರ್ಪ್ರೈಸಸ್
ಮುದ್ರಣ : ಜುಲೈ 2026
ಪುಟಗಳು : 120
ಬೆಲೆ : 180 ರೂಪಾಯಿ
ಬದುಕನ್ನು ಹಸನಾಗಿಸುವ ಕೈಪಿಡಿ – ‘ನಿತ್ಯ ಚೈತನ್ಯಕ್ಕೆ ಸರಳ ಸೂತ್ರಗಳು’
ಸದಾ ಉತ್ಸಾಹ ಹಾಗೂ ಉಲ್ಲಾಸದಿಂದ ಕೆಲಸಗಳನ್ನು, ಸಂಬಂಧಗಳನ್ನು ಯಶಸ್ವಿಯಾಗಿ ನಿಭಾಯಿಸಿ, ದೇಹ ಮತ್ತು ಮನಸ್ಸನ್ನು ಪ್ರಫುಲ್ಲವಾಗಿರಿಸಿಕೊಳ್ಳುವ ಬಯಕೆ ನಮ್ಮೆಲ್ಲರಲ್ಲೂ ಇರುತ್ತದೆ. ಆದರೆ, ದಿನನಿತ್ಯದ ಜಂಜಾಟ, ಅಸಮರ್ಪಕ ಆಹಾರ ಕ್ರಮ, ಜವಾಬ್ದಾರಿಗಳು, ಒತ್ತಡದ ಬದುಕು, ಕೈಕೊಡುವ ಆರೋಗ್ಯ, ಮಾನಸಿಕ ಹಾಗೂ ದೈಹಿಕ ಸಮಸ್ಯೆಗಳು, ಕೀಳರಿಮೆ, ಆಲಸ್ಯ, ಸಿನಿಕತನ—ಹೀಗೆ ಹತ್ತು ಹಲವು ವಿಧಗಳಲ್ಲಿ ನಾವು ಬಳಲುವುದೇ ಹೆಚ್ಚು. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಮೊಬೈಲ್ ಹಾಗೂ ಡಿಜಿಟಲ್ ವ್ಯಸನ ನಮ್ಮ ನೆಮ್ಮದಿಯನ್ನು ಬಹುಪಾಲು ಹಾಳುಮಾಡುತ್ತಿರುವುದು ಸುಳ್ಳಲ್ಲ.

ಈ ಎಲ್ಲಾ ಸಮಸ್ಯೆಗಳನ್ನು ಸೂಕ್ಷ್ಮವಾಗಿ ಗಮನದಲ್ಲಿಟ್ಟುಕೊಂಡು, ಪ್ರತಿಯೊಬ್ಬರಿಗೂ ಅನ್ವಯವಾಗುವಂತೆ ಈ ಪುಸ್ತಕವನ್ನು ರಚಿಸಲಾಗಿದೆ. ಇಲ್ಲಿ ವಿಶೇಷವಾಗಿ ಉಲ್ಲೇಖಿಸಲೇಬೇಕಾದ ಪ್ರಮುಖ ಅಂಶವೆಂದರೆ, ಕೃತಿಯಲ್ಲಿ ಬಳಕೆಯಾಗಿರುವ ಸರಳ ಭಾಷೆಯ ಮಹತ್ವ. ಎಷ್ಟೇ ಗಹನವಾದ, ಮನೋವೈಜ್ಞಾನಿಕವಾದ ಅಥವಾ ಆರೋಗ್ಯಕ್ಕೆ ಸಂಬಂಧಿಸಿದ ವಿಚಾರಗಳಿದ್ದರೂ, ಅದನ್ನು ಯಾವುದೇ ಕ್ಲಿಷ್ಟತೆಯಿಲ್ಲದೆ, ಜನಸಾಮಾನ್ಯರಿಗೆ ನೇರವಾಗಿ ನಾಟುವಂತಹ ಆಪ್ತ ಶೈಲಿಯಲ್ಲಿ ಕಟ್ಟಿಕೊಟ್ಟಿರುವುದು ಈ ಕೃತಿಯ ಬಹುದೊಡ್ಡ ಹೆಗ್ಗಳಿಕೆ. ಇದೇ ಕಾರಣಕ್ಕೆ ಇದೊಂದು ಪುಟ್ಟ ಆರೋಗ್ಯ ಕೈಪಿಡಿಯಂತೆಯೇ ಓದುಗರಿಗೆ ಆಪ್ತವಾಗುತ್ತದೆ.
ಲೇಖಕಿಯು ನಮ್ಮೆಲ್ಲರಲ್ಲಿ ಅಡಗಿರುವ ಚೈತನ್ಯವನ್ನು ಮಾನಸಿಕ, ಭಾವನಾತ್ಮಕ ಹಾಗೂ ಅಂತಃಶಕ್ತಿ ಎಂಬ ವಿಭಾಗಗಳಲ್ಲಿ ತೂಗಿ, ಪ್ರತಿಯೊಂದಕ್ಕೂ ತಕ್ಕನಾದ ವಿಚಾರ, ವಿವರಣೆ ಹಾಗೂ ಅಭ್ಯಾಸಗಳನ್ನು ನೀಡಿದ್ದಾರೆ. ನೀರು, ಆಹಾರ, ವ್ಯಾಯಾಮ, ನಿದ್ರೆಯಂತಹ, ನಾವು ತಿಳಿದೂ ಅಲಕ್ಷಿಸುವ ಮೂಲಭೂತ ವಿಚಾರಗಳನ್ನೇ, ಹತ್ತಿರ ಕುಳಿತು ತಲೆ ಸವರಿ ಬುದ್ಧಿಹೇಳುವ ಅಕ್ಕನ ಕಾಳಜಿಯೊಂದಿಗೆ ಲೇಖಕಿ ವಿವರಿಸಿರುವ ಪರಿ ನಿಜಕ್ಕೂ ಅದ್ಭುತ.
ಮಾನಸಿಕ ಕ್ಷೋಭೆಯನ್ನು ಕಳೆಯುವ ನಿಟ್ಟಿನಲ್ಲಿ, ಮುಖ್ಯವಾಗಿ ಮೊಬೈಲ್ ಗೀಳಿನಿಂದ ಹೊರಬಂದು, ಅದನ್ನು ಕೇವಲ ಒಂದು ಸಂವಹನ ಸಾಧನವನ್ನಾಗಿ ಮಾತ್ರ ನೋಡುವಂತಹ ಮನೋನಿಗ್ರಹವನ್ನು ರೂಢಿಸಿಕೊಳ್ಳಲು ಲೇಖಕಿ ನಮ್ಮನ್ನು ಅಣಿಗೊಳಿಸುತ್ತಾರೆ. ಪ್ರತಿಯೊಂದು ವಿಚಾರಕ್ಕೂ ಕೇವಲ ನಾಲ್ಕು ಸಾಲುಗಳಲ್ಲಿ ನಾವು ದಿನನಿತ್ಯ ಕೈಗೊಳ್ಳಬಹುದಾದ ಅಭ್ಯಾಸಗಳನ್ನು ನೀಡಲಾಗಿದ್ದು, ಇವುಗಳನ್ನು ಮಕ್ಕಳೂ ಕೂಡ ಓದಿ, ಅತ್ಯಂತ ಸುಲಭವಾಗಿ ಪಾಲಿಸುವಂತಿದೆ.

ಭಾವನೆಗಳು ಮತ್ತು ಸಂಬಂಧಗಳ ನಿರ್ವಹಣೆ, ನಗುವಿನ ಮಹತ್ವ, ಕೃತಜ್ಞತೆಯ ಮನಸ್ಥಿತಿ ತರುವ ಸಕಾರಾತ್ಮಕ ಬದಲಾವಣೆಗಳ ಬಗ್ಗೆ ಕೃತಿಯಲ್ಲಿ ಸುಂದರವಾದ ವಿವರಣೆಯಿದೆ. ಹಾಗೆಯೇ, ಸ್ವಯಂಶಕ್ತಿಯ ಕುರಿತಾಗಿ ಅವರು ಹೇಳುವ ವಿಚಾರಗಳು ನೂರಕ್ಕೆ ನೂರು ಸತ್ಯ. ಒಳ್ಳೆಯ ಹವ್ಯಾಸಗಳನ್ನು ಬೆಳೆಸಿಕೊಳ್ಳುವುದು, ಬಿಡುವು ಮಾಡಿಕೊಂಡು ಸರಿಯಾದ ವಿಶ್ರಾಂತಿ ಪಡೆಯುವುದು, ಬೆಟ್ಟ-ಗುಡ್ಡ, ಹಸಿರು ಪ್ರದೇಶಗಳ ಚಾರಣ ಮಾಡುವುದು, ಕೊನೆಗೆ ಕನಿಷ್ಠಪಕ್ಷ ಮರ-ಗಿಡಗಳೆಡೆಗೆ ದೃಷ್ಟಿ ಹಾಯಿಸುವ ಪುಟ್ಟ ಕ್ರಿಯೆಯೂ ಕೂಡ ನಮ್ಮ ಅಂತಃಶಕ್ತಿಯನ್ನು ಹೆಚ್ಚಿಸಿ, ಸ್ವಯಂಶಕ್ತಿಯನ್ನು ಪ್ರೇರೇಪಿಸುತ್ತದೆ ಎನ್ನುವ ವಿಚಾರಗಳು ಪ್ರತಿಯೊಬ್ಬರೂ ಮನನ ಮಾಡಿಕೊಳ್ಳಬೇಕಾದ ಸತ್ಯ.
‘ಮಾಮ್ಸ್ ಪ್ರೆಸೊ (Momspresso) ಮೂಲಕ ಎಲ್ಲರಿಗೂ ಚಿರಪರಿಚಿತರಾಗಿ, ಸಾಹಿತ್ಯ ಸೇವೆಯಲ್ಲಿ ಅವಿರತವಾಗಿ ತೊಡಗಿಸಿಕೊಂಡಿರುವ ಶ್ವೇತಾ ಭಿಡೆ ಅವರಿಂದ ಹೀಗೆಯೇ ನಿರಂತರವಾಗಿ ಇಂತಹ ಮೌಲ್ಯಯುತ ಕೃತಿಗಳು ಮೂಡಿಬರಲಿ. ಪ್ರತಿಯೊಬ್ಬ ಓದುಗರ ಗ್ರಂಥಾಲಯದಲ್ಲೂ ಇರಬೇಕಾದ ಈ ಹೊತ್ತಗೆಯು, ಎಲ್ಲರ ಮನ-ಮಸ್ತಕಗಳಲ್ಲಿ ನವಚೈತನ್ಯವನ್ನು ತುಂಬಲಿ ಎಂದು ಆಶಿಸುತ್ತೇನೆ. ಈ ಚಂದದ ಕೃತಿಯನ್ನು ರಚಿಸಿದ ಲೇಖಕಿಯವರಿಗೆ ಹಾರ್ದಿಕ ಅಭಿನಂದನೆಗಳು ಹಾಗೂ ಇದನ್ನು ಅಚ್ಚುಕಟ್ಟಾಗಿ ಹೊರತಂದ ‘ಸಾವಣ್ಣ ಪ್ರಕಾಶನ’ಕ್ಕೆ ಅನಂತ ಧನ್ಯವಾದಗಳು
- ಚೇತನ ಭಾರ್ಗವ – ಲೇಖಕರು, ವಿಮರ್ಶಕರು, ಬೆಂಗಳೂರು.
