೧೨ನೇ ಶತಮಾನದ ವಿಶ್ವಗುರು ಬಸವಣ್ಣನವರ ಈ ವಚನ ೨೦೨೬ರಲ್ಲೂ ಅಕ್ಷರಶಃ ಸತ್ಯವಾಗಿದೆ ಎಂಬುದಕ್ಕೆ ಮೊನ್ನೆ ಬೆಳಕಿಗೆ ಬಂದ KPSC ಪಶುವೈದ್ಯ ನೇಮಕಾತಿ ಹಗರಣವೇ ಜೀವಂತ ಸಾಕ್ಷಿ. ತಪ್ಪದೆ ಮುಂದೆ ಓದಿ…
“ಕಾಂಚನವೆಂಬ ನಾಯ ನಚ್ಚಿ ನಿಮ್ಮ ನಾನು ಮರೆದೆನಯ್ಯಾ
ಕಾಂಚನಕ್ಕೆ ವೇಳೆಯಲ್ಲದ ಲಿಂಗಕ್ಕೆ ವೇಳೆಯಿಲ್ಲ
ಹಡಿಕೆಗೆ ಮಚ್ಚಿದ ಸೊಣಗ ಅಮೃತದ ರುಚಿಯ ಬಲ್ಲುದೆ
ಕೂಡಲಸಂಗಮದೇವಾ”
ಕಾಂಚನದ ಹಿಂದೆ ಬಿದ್ದ ಲೋಕಸೇವಾ ಆಯೋಗ :
ನಮ್ಮ ರಾಜ್ಯದ ಅತ್ಯುನ್ನತ ನೇಮಕಾತಿ ಸಂಸ್ಥೆ ಕರ್ನಾಟಕ ಲೋಕಸೇವಾ ಆಯೋಗ (KPSC). ಪ್ರತಿಭಾವಂತ ಬಡ ಯುವಕರಿಗೆ ಸರ್ಕಾರಿ ನೌಕರಿ ಕೊಡುವ ದೇವಾಲಯವಿದ್ದಂತೆ. ಆದರೆ ಆ ದೇವಾಲಯವೇ ಇಂದು “ಕರ್ನಾಟಕ ಲಂಚ ಸೇವಾ ಆಯೋಗ”ವಾಗಿ ಮಾರ್ಪಟ್ಟಿದೆ ಎಂಬ ಆರೋಪ ಅತ್ಯಂತ ನೋವಿನ ಸಂಗತಿಯಾಗಿದೆ.
Kpsc ಹಗರಣ ತನಿಖೆಯಲ್ಲಿ ಬಯಲಾದ ಅಂಶಗಳು ಬೆಚ್ಚಿಬೀಳಿಸುವಂತಿವೆ:
೪೦೦ ಪಶುವೈದ್ಯ ಹುದ್ದೆಗಳಿಗೆ ನಡೆದ ಪರೀಕ್ಷೆಯಲ್ಲಿ ಪ್ರತಿ ಹುದ್ದೆಯನ್ನು ೭೦ ರಿಂದ ೮೦ ಲಕ್ಷ ರೂಪಾಯಿಗೆ ಮಾರಾಟ ಮಾಡಲಾಗಿದೆ.ಅಭ್ಯರ್ಥಿಗಳನ್ನು ಬೆಂಗಳೂರು ಹೊರವಲಯದ ರೆಸಾರ್ಟ್‌ಗಳಲ್ಲಿ ಇರಿಸಿ, ಪ್ರಶ್ನೆ ಪತ್ರಿಕೆ ನೀಡಿ, OMR ಶೀಟ್ ತುಂಬುವ ತರಬೇತಿ ಕೊಟ್ಟು, ಪರೀಕ್ಷಾ ಕೇಂದ್ರಕ್ಕೆ ಡ್ರಾಪ್ ಮಾಡಲಾಗಿದೆ. ಪರೀಕ್ಷೆ ಬರೆದಿದ್ದು ಜನವರಿ ೮ ರಂದು, ಫಲಿತಾಂಶ ಬಂದಿದ್ದು ಜುಲೈ ೧೭ ರಂದು. ಫಲಿತಾಂಶ ಬಂದ ಕೂಡಲೇ ೫೦ಕ್ಕೂ ಹೆಚ್ಚು ಅಭ್ಯರ್ಥಿಗಳು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಹಡಿಕೆಗೆ ಮಚ್ಚಿದ ಸೊಣಗ :
ಬಸವಣ್ಣನವರು ಹೇಳಿದ “ಹಡಿಕೆಗೆ ಮಚ್ಚಿದ ಸೊಣಗ” ಎಂದರೆ ಕಸದ ತೊಟ್ಟಿಗೆ, ಹೆಣದ ಬೂದಿಗೆ ಅಂಟಿದ ನಾಯಿ. ಅದಕ್ಕೆ ಅಮೃತದ ರುಚಿ ಗೊತ್ತಾಗುವುದಿಲ್ಲ. ನಮ್ಮ KPSC ಅಧಿಕಾರಿಗಳ ಸ್ಥಿತಿಯೂ ಅದೇ.
KPSC ಅಧ್ಯಕ್ಷರಾಗಿದ್ದ “ಸಾಹುಕಾರ್ ಶಿವಶಂಕರಪ್ಪ” ಅವರನ್ನು ರಾಜ್ಯಪಾಲರೇ ಅಮಾನತು ಮಾಡಿದ್ದಾರೆ. ತಮ್ಮ ಸ್ವಂತ ಮಗಳಿಗೇ ನಕಲಿ ಆದಾಯ ಪ್ರಮಾಣಪತ್ರ ಸೃಷ್ಟಿಸಿ OBC ಕೋಟಾದಲ್ಲಿ Industrial Extension Officer ಹುದ್ದೆ ಕೊಡಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ, ಪರೀಕ್ಷಾ ನಿಯಂತ್ರಕರಾಗಿದ್ದ ೨೦೧೬ನೇ ಬ್ಯಾಚ್‌ನ IAS ಅಧಿಕಾರಿ “ಜ್ಞಾನೇಂದ್ರಕುಮಾರ್ ಗಂಗ್ವಾರ್” ಮತ್ತು ತುಮಕೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ “ಬಸವರಾಜ ಕನ್ನಾಳೆ” ಎಂಬ ಮಧ್ಯವರ್ತಿಯನ್ನು CID ಬಂಧಿಸಿದೆ. ಸರ್ಕಾರ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದೆ.
ಇದನ್ನು ಕಂಡು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಚಾಟಿ ಬಿಸಿದ್ದಾರೆ “ನೀವು ವಂಚನೆ ಮಾಡಿ ಅನರ್ಹರನ್ನು ತರುತ್ತಿದ್ದೀರಿ, ನಾಳಿನ ಆಡಳಿತಗಾರರನ್ನು ನೀವೇ ನೇಮಕ ಮಾಡುತ್ತೀರಿ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
KPSC ಪರೀಕ್ಷೆ ಬರೆಯುವ ಶೇ.೯೦ರಷ್ಟು ಜನ ಬಡ, ರೈತ, ಮಧ್ಯಮ ವರ್ಗದ ಮಕ್ಕಳು. ಎರಡು-ಮೂರು ವರ್ಷಗಳ ಕಾಲ ರೂಮಿನಲ್ಲಿ ಕೂತು, ಊಟ-ನಿದ್ರೆ ಬಿಟ್ಟು ಓದಿದ ಪ್ರತಿಭಾವಂತರು. ಅವರ ಭವಿಷ್ಯವನ್ನು ೮೦ ಲಕ್ಷಕ್ಕೆ ಹರಾಜು ಹಾಕಲಾಗಿದೆ. ಇದು ಕೇವಲ ಹಗರಣವಲ್ಲ, “ಯುವಕರ ಭವಿಷ್ಯದ ಮೇಲೆ ನಡೆದ ಹಗಲು ದರೋಡೆ” ಎನ್ನಬಹುದು.
KPSC ಗೆ ಮತ್ತೆ ಪಾವಿತ್ರ್ಯತೆ ತರಲು ಸರ್ಕಾರ ಮಾಡಬೇಕಾದ ಕರ್ತವ್ಯ:
- ಪರೀಕ್ಷೆಯಿಂದ ನೇಮಕಾತಿವರೆಗೆ ಸಂಪೂರ್ಣ ಪ್ರಕ್ರಿಯೆ ಆನ್‌ಲೈನ್, ಮತ್ತು ಸಿಸಿಟಿವಿ ಕಣ್ಗಾವಲು ಇರಲಿ.
- ಹಗರಣದಲ್ಲಿ ಸಿಕ್ಕಿಬಿದ್ದವರಿಗೆ ಕೇವಲ ಅಮಾನತು ಅಲ್ಲ, ಆಸ್ತಿ ಮುಟ್ಟುಗೋಲು ಮತ್ತು ಜೀವಾವಧಿ ಶಿಕ್ಷೆ ಆಗಬೇಕು, ಆಗ ಮುಂದಿನವರಿಗೆ ಎಚ್ಚರಿಕೆ ಬರುತ್ತದೆ.
- ಅಧಿಕಾರಿಗಳಿಗೆ ತರಬೇತಿ ಅವಧಿಯಲ್ಲೇ ಬಸವಣ್ಣ, ಅಂಬೇಡ್ಕರ್ ಅವರ ನೈತಿಕತೆಯ ಪಾಠಗಳನ್ನು ಕಡ್ಡಾಯ ಮಾಡವುದು ಈ ಸಂಧರ್ಭದಲ್ಲಿ ಅವಶ್ಯವಾಗಿದೆ.
ಹಣ ಬೇಕು, ಅದು ಬದುಕಿಗೆ ಅವಶ್ಯಕ. ಆದರೆ ಹಣವೇ ಬದುಕಲ್ಲ. ನಾಯಿ ಮನೆಯನ್ನು ಕಾಯಬೇಕು, ನಾವೇ ನಾಯಿಯ ಹಿಂದೆ ಹೋಗಬಾರದು. ಹಣ ನಮ್ಮ ಸೇವೆ ಮಾಡಬೇಕು, ನಾವು ಹಣದ ಸೇವಕರಾಗಬಾರದು ಎಂಬ ಬಸವಣ್ಣನವರ ಎಚ್ಚರಿಕೆಯ ಗಂಟೆಯೇ ಈ KPSC ಹಗರಣ.
ಆದ್ದರಿಂದ Kpsc ಸಂಸ್ಥೆಗಳ ಘನತೆ ಉಳಿಯಬೇಕಾದರೆ ಅಧಿಕಾರಿಗಳು ತಮ್ಮ ಕರ್ತವ್ಯನಿಷ್ಠೆ, ಸಮಯಪಾಲನೆ, ಶಿಸ್ತು ಮತ್ತು ನಿಯತ್ತನ್ನು ಪಾಲಿಸಿಕೊಂಡು ಬಂದರೆ ಸಮಾಜದಲ್ಲಿ ಗೌರವ ಹೆಚ್ಚಾಗುವುದಲ್ಲದೆ ಹಳ್ಳಿಯ ಬಡ ಪ್ರತಿಭಾವಂತನೊಬ್ಬ ಪ್ರಾಮಾಣಿಕವಾಗಿ ಓದಿ ಅಧಿಕಾರಿಯಾಗಬಹುದು ಎಂಬ ನಂಬಿಕೆ ಉಳಿಯುತ್ತದೆ.
- ಓಂಕಾರ ಪಾಟೀಲ – ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್, ಕಾರ್ಯದರ್ಶಿಗಳು, ಬೀದರ.
