ಅಂಗೈಯಲ್ಲಿ ಪ್ರಪಂಚ (ಭಾಗ- ೩೪)

ಒತ್ತಡ ಎನ್ನುವುದು ಒಬ್ಬ ವ್ಯಕ್ತಿಗೆ ಯಾವುದಾದರೂ ವಿಷಯ, ಸಂದರ್ಭಗಳು ಅವನ ಯೋಗ್ಯತೆಗೆ ಸವಾಲಾಗಿ ಕಂಡುಬಂದಾಗ ಅವನು ನೀಡುವ ಪ್ರತಿಕ್ರಿಯೆಯಾಗಿದೆ. ಅಂಕಣಕಾರ್ತಿ ಮಂಗಳ ಎಂ ನಾಡಿಗ್ ಅವರ ‘ಅಂಗೈಯಲ್ಲಿ ಪ್ರಪಂಚ’ ಅಂಕಣದಲ್ಲಿ ‘ಒತ್ತಡ’ ತಪ್ಪದೆ ಮುಂದೆ ಓದಿ…

ಅಂದು ಸುರೇಶ ಆಫೀಸ್ ಗೆ ಹೊರಟಾಗಲೇ ತಡವಾಗಿತ್ತು. ಮಧ್ಯದಲ್ಲಿ ಉಂಟಾಗಿದ್ದ ಟ್ರಾಫಿಕ್ ಜಾಮ್ ಅವನನ್ನು ಇನ್ನೂ ಒತ್ತಡಕ್ಕೆ ಒಳಪಡಿಸಿತ್ತು. ಅದರಿಂದ ಅವನು ಆಗಾಗ ಜೋರಾಗಿ ಹಾರ್ನ್ ಮಾಡುತ್ತಾ ತನ್ನ ಅಸಮಾಧಾನವನ್ನು ಹೊರಹಾಕುತ್ತಿದ್ದ. ಒಂದೆರಡು ಬಾರಿ ಸಿಟ್ಟು, ಅಸಹಾಯಕತೆಯಿಂದ ಸ್ಟೇರಿಂಗ್ ಗೆ ಕೈಯ್ಯನ್ನು ಗುದ್ದಿಕೊಂಡು ನೋವು ಮಾಡಿಕೊಂಡದ್ದೂ ಆಯ್ತು. ಅಂತೂ ಟ್ರಾಫಿಕ್ ಕ್ಲಿಯರ್ ಆಗಿ ಆಫೀಸ್ ತಲುಪುವ ವೇಳೆಗೆ ಇಪ್ಪತ್ತು ನಿಮಿಷ ತಡವಾಗಿತ್ತು. ಆಗಿದ್ದ ಒತ್ತಡದಲ್ಲಿ ಯಾರೊಂದಿಗೂ ಸರಿಯಾಗಿ ಬೆರೆಯಲಾಗದೆ, ಕೆಲಸವನ್ನೂ ಸಮಾಧಾನ ಚಿತ್ತದಿಂದ ಮಾಡಲಾಗದೆ ಇಡೀ ದಿನ ನೆಮ್ಮದಿಯಿಲ್ಲದೇ ಕಳೆದಿದ್ದ. ಇದು ಸುರೇಶನೊಬ್ಬನ ಕಥೆಯಲ್ಲ. ಪ್ರತೀ ದಿನ ಒಂದಲ್ಲ ಒಂದು ಕಾರಣದಿಂದ ಒತ್ತಡಕ್ಕೆ ಒಳಗಾಗಿ ಮಾನಸಿಕವಾಗಿ ತೊಂದರೆ ಅನುಭವಿಸುವವರು ಬಹಳ ಮಂದಿ. ಹಾಗಾದ್ರೆ ಈ ಒತ್ತಡ ಅಂದ್ರೆ ಏನು ಅಂತ ಮೊದಲು ನೋಡೋಣ.

ಒತ್ತಡ ಎನ್ನುವುದು ಒಬ್ಬ ವ್ಯಕ್ತಿಗೆ ಯಾವುದಾದರೂ ವಿಷಯ, ಸಂದರ್ಭಗಳು ಅವನ ಯೋಗ್ಯತೆಗೆ ಸವಾಲಾಗಿ ಕಂಡುಬಂದಾಗ ಅವನು ನೀಡುವ ಪ್ರತಿಕ್ರಿಯೆಯಾಗಿದೆ. ಕೆನೇಡಿಯನ್ (Canadian) ಮನೋವಿಜ್ಞಾನಿ ಹ್ಯಾನ್ಸ್ ಸೆಲೀ (Hans Selye)ಅವರ ಪ್ರಕಾರ ಒತ್ತಡಗಳಲ್ಲಿ ಎರಡು ವಿಧ.

1)Eustress
2)Destress

Eustress: ಉದಾಹರಣೆ : ಮದುವೆ,ಮಗು ಹುಟ್ಟುವ ಸಂದರ್ಭ, ಪದವೀಧರರಾಗುವ ಸಂದರ್ಭ ಇತ್ಯಾದಿ. ಇಂತಹ ಒಳ್ಳೆಯ ಸಂದರ್ಭಗಳಲ್ಲಿ ಇರುವ ಒತ್ತಡವನ್ನು Eustress ಎನ್ನುವರು. Destress: ಉದಾಹರಣೆ: ಸಾವು, ವಿಚ್ಛೇದನ, ಸೋಲು, ಕೆಲಸ ಕಳೆದುಕೊಂಡ ಸಂದರ್ಭಗಳಲ್ಲಿ ಉಂಟಾಗುವ ಒತ್ತಡ. ಈ ಎರಡೂ ರೀತಿಯ ಒತ್ತಡಗಳು ಮನುಷ್ಯನ ದೇಹ ಹಾಗೂ ಮನಸ್ಸು ಎರಡಕ್ಕೂ ಒಳ್ಳೆಯದಲ್ಲ. ಅದರಲ್ಲೂ ಡಿಸ್ಟ್ರೆಸ್ ಇನ್ನೂ ಹೆಚ್ಚಿನ ಹಾನಿ ಮಾಡುತ್ತದೆ.

ಒತ್ತಡಕ್ಕೆ ಉದಾಹರಣೆ : ಪ್ರಾಜೆಕ್ಟ್ ಅಸೈನ್ಮೆಂಟ್ ಪೂರ್ತಿಗೊಳಿಸುವ ಡೆಡ್ಲೈನ್, ಪರೀಕ್ಷೆ ಸಮಯ , ಫ್ಯಾಮಿಲಿ ಪ್ರಾಬ್ಲಮ್ಸ್, ಇವುಗಳಲ್ಲಿ ಉಂಟಾಗುವ ಒತ್ತಡವನ್ನು ನಾವು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಿದರೆ ಈ ಒತ್ತಡಗಳಿಂದ ಹೊರಬರಬಹುದು. ಒಂದು ವೇಳೆ ಸರಿಯಾದ ರೀತಿಯಲ್ಲಿ ನಿಭಾಯಿಸದಿದ್ದರೆ ಉದಾಹರಣೆಗೆ , ಮೊದಲು ಓದದೇ ಕೊನೇ ಕ್ಷಣದಲ್ಲಿ ಒತ್ತಡಕ್ಕೆ ಒಳಗಾಗಿ ಓದಲು ಹೋಗಿ ನಿದ್ದೆಬಿಟ್ಟು ಮರುದಿನದ ಪರೀಕ್ಷೆಗೆ ಆರೋಗ್ಯ ಸಮಸ್ಯೆ ಉಂಟಾದರೆ , ಅಲ್ಲಿಯೂ ಉತ್ತಮ ಅಂಕಗಳನ್ನು ಗಳಿಸಲು ಸಾಧ್ಯವಾಗುವುದಿಲ್ಲ.

ನಮ್ಮ ಮನಸ್ಸಿನ ಭಾವನೆಗೆ ಅನುಗುಣವಾಗಿ ಬಾಹ್ಯ ವಾತಾವರಣದ ಪರಿಸ್ಥಿತಿಯಿಂದಲೂ ಒತ್ತಡ ಉಂಟಾಗುತ್ತದೆ. ಉದಾಹರಣೆ : ಟ್ರಾಫಿಕ್ ಜಾಮ್, ಗಾಡಿ ಕೆಟ್ಟುಹೋಗುವುದು, ಅನಿರೀಕ್ಷಿತ ಘಟನೆಯಿಂದ ಒತ್ತಡ, ಜನರ ಗುಂಪು, ಗದ್ದಲ, ಗಲಾಟೆ, ಹವಾಮಾನ ವೈಪರೀತ್ಯದಿಂದ ಉಂಟಾಗುವ ಒತ್ತಡ ಉದಾಹರಣೆ: ನೆರೆಹಾವಳಿ, ಭೂಕಂಪ, ಸುನಾಮಿ, ಇತ್ಯಾದಿ. ಆರೋಗ್ಯ ಸರಿಯಿಲ್ಲದಾಗ ಅಂದರೆ ಹೃದಯ ಖಾಯಿಲೆ, ನಿದ್ರಾಹೀನತೆ ಇವುಗಳಿಂದಲೂ ಒತ್ತಡ ಉಂಟಾಗುತ್ತದೆ. ಇರುವ ಒಂದಿಷ್ಟು ಕಮಿಟ್ಮೆಂಟ್ಗಳು, ಆರ್ಥಿಕ ಪರಿಸ್ಥಿತಿ, ಎಲ್ಲವೂ ಒತ್ತಡಕ್ಕೆ ಕಾರಣವಾಗುತ್ತದೆ.

ವೈಯಕ್ತಿಕ: ಜೀವನದಲ್ಲಿ ಅಂದುಕೊಂಡಿದ್ದು ಮಾಡಲಾಗದೆ ಇದ್ದಾಗ ಉಂಟಾಗುವ ಒತ್ತಡಗಳು.

ಉದಾಹರಣೆ : ಎಲ್ಲಿಗೋ ಹೋಗಬೇಕೆಂದುಕೊಂಡು ಆಗದೇ ಇದ್ದಾಗ.
ಸೋಶಿಯಲ್  ಉದಾಹರಣೆ : ವೃತ್ತಿಯಲ್ಲಿನ ಒತ್ತಡ, ಸಂಬಂಧಗಳಿಂದ ಉಂಟಾಗುವ ಒತ್ತಡ. ಇದೆಲ್ಲದರ ಬಗ್ಗೆ ಏಕೆ ಎಚ್ಚರಿಕೆ ವಹಿಸಬೇಕೆಂದರೆ ಇವು ನಮ್ಮ ದೇಹ ಮತ್ತು ಮನಸ್ಸನ್ನು ಹಾಳುಗೆಡವುತ್ತದೆ.

ಮನಸ್ಥಿತಿಯಿಂದ ಉಂಟಾಗುವ ಒತ್ತಡದಲ್ಲಿ ಮೂರು ವಿಧಗಳಿವೆ.

ಏನಾದರೂ ಮಾಡಲು ಹೋಗಿ ಅದಕ್ಕೆ ಅಡ್ಡಿಯಾಗಿ ಮಾಡಲಾಗದೆ ಇದ್ದಾಗ ಉಂಟಾಗುವ ಒತ್ತಡ. ಕೆಲವು ಸಂದರ್ಭಗಳಲ್ಲಿ ಏನು ಮಾಡಬೇಕೆಂದು ತಿಳಿಯದಿರುವುದೂ ಸಹ ಒಂದು ರೀತಿಯ ಒತ್ತಡ ಉಂಟು ಮಾಡುತ್ತದೆ.(ಏಕೆಂದರೆ ನಮ್ಮ ಗುರಿಯ ಬಗ್ಗೆ ನಮಗೇ ಸ್ಪಷ್ಟತೆ ಇರುವುದಿಲ್ಲ)

ಅವಸರದಲ್ಲಿ ಆಫೀಸ್ಗೆ ಹೋಗಬೇಕಾದಾಗ ಟ್ರಾಫಿಕ್ ಜಾಮ್ ಆದಾಗ ಉಂಟಾಗುವ ಒತ್ತಡ, ಬೇಕಾದ ಸಮಯಕ್ಕೆ ಸಿಗದ ನೆಟ್ವರ್ಕ್ ,ಇದೆಲ್ಲಾ ನಮ್ಮನ್ನು ಒತ್ತಡಕ್ಕೆ ಒಳಗಾಗಿಸಿ ಕೋಪ ತರಿಸುತ್ತದೆ.

ಯಾರಾದರೂ ನಿಧನರಾದಾಗ ಉಂಟಾಗುವ ಒತ್ತಡ, ಯಾವುದಾದರೂ ವಿಷಯದಲ್ಲಿ ಸಾಧಿಸಲು ಸಾಧ್ಯವಾಗದೇ ಇದ್ದಾಗ (failure) ನಮ್ಮನ್ನು ನಾವೇ ಯೋಗ್ಯತೆ ಇಲ್ಲದವರು ಅಂದುಕೊಂಡು ಮಾಡಿಕೊಳ್ಳುವ ಒತ್ತಡ.

1) Approach Approach Conflict: ಎರಡು , ಮೂರು ಗುರಿಗಳಿದ್ದಾಗ ಯಾವುದಕ್ಕೆ ಹೋಗಬೇಕೆಂದು ತಿಳಿಯದೆ ಆಗುವ ಒತ್ತಡ. ಉದಾಹರಣೆ : ಡ್ಯಾನ್ಸ್ , ಎಜುಕೇಶನ್ ಎರಡರ ಆಯ್ಕೆ, ಈಗಲೇ ಕೆಲಸ ಅಥವಾ ಮುಂದಿನ ವಿದ್ಯಾಭ್ಯಾಸದ ಆಯ್ಕೆ , ಇತ್ಯಾದಿ.

ಇದೂ ಸಹ ಮನುಷ್ಯರು ಮತ್ತು ಪರಿಸರ ಎರಡರಿಂದಲೂ ಆಗಬಹುದಾದಂಥ ಒತ್ತಡ. ಇರುವ ಎರಡು ಗುರಿಗಳೂ ಮುಖ್ಯವಾಗಿದ್ದಾಗ ಆಯ್ಕೆಯಲ್ಲಿ ಆಗುವ ಗೊಂದಲ ಉಂಟು ಮಾಡುವ ಒತ್ತಡ. ಉದಾಹರಣೆ: ಎರಡು ಕಾಲೇಜ್ ಗಳ ಆಯ್ಕೆ, ಒಂದು ಮಗುವಿನ ಎದುರು ಚಾಕಲೇಟ್, ಸ್ಟ್ರಾಬರಿ ಐಸ್ ಕ್ರೀಮ್ ಇಟ್ಟು ಯಾವುದು ಬೇಕೆಂದು ಕೇಳಿದಾಗ ಅದು ಎರಡೂ ಬೇಕೆನ್ನುತ್ತದೆ.ಒಮ್ಮೆ ಅದನ್ನು ಮತ್ತೊಮ್ಮೆ ಇದನ್ನು. ಆ ರೀತಿಯ ಗೊಂದಲ ಉಂಟು ಮಾಡುವ ಒತ್ತಡ.

2)Avoidance avoidance conflict: ಇರುವ ಎರಡು ಅವಕಾಶವೂ ಇಷ್ಟವಾಗದೆ ಇದ್ದಾಗ ಉಂಟಾಗುವ ಒತ್ತಡ. ಉದಾಹರಣೆ: ಒಬ್ಬ ವ್ಯಕ್ತಿ ಬೆನ್ನುನೋವಿನಿಂದ ನರಳುತ್ತಿರುವಾಗ ವೈದ್ಯರ ಸಲಹೆ ಆಪರೇಷನ್. ಅದರ ನಂತರ ಸರಿ ಆಗಲೂಬಹುದು ಅಥವಾ ಸ್ಪೈನಲ್ ಕಾರ್ಡ್ ಗೆ ತೊಂದರೆಯಾಗಿ ಮುಂದೆ ನಡೆಯಲಾರದ ಪರಿಸ್ಥಿತಿಗೂ ಹೋಗಬಹುದು. ಇಂತಹ ಸಂದರ್ಭದಲ್ಲಿ ಆಯ್ಕೆ ತುಂಬಾ ಕಷ್ಟ . ಆಪರೇಷನ್ ಮಾಡಿಸಿಕೊಳ್ಳಲು ಹೆದರಿಕೆ, ಮಾಡಿಸಿಕೊಳ್ಳದಿದ್ದರೆ ನೋವು ಅನುಭವಿಸಬೇಕು .ಅತ್ತ ದರಿ ಇತ್ತ ಪುಲಿ ಎಂಬಂಥ ಪರಿಸ್ಥಿತಿ.

3)Approach Avoidance Conflict: ಸಿಕ್ಕಿರುವ ಒಂದು ಒಳ್ಳೆಯ ಅವಕಾಶವನ್ನು ತೆಗೆದುಕೊಳ್ಳಲಾಗದೇ ಇರುವ ಸಂದರ್ಭದಲ್ಲಿ ಉಂಟಾಗುವ ಒತ್ತಡ. ಉದಾಹರಣೆಗೆ: ಹೊಸದಾಗಿ ಮದುವೆಯಾದವರಿಗೆ ಸಿಕ್ಕಿರುವ ಫಾರಿನ್ ಕೆಲಸದ ಪ್ರಮೋಷನ್ ಇತ್ಯಾದಿ.

ಪ್ರೆಷರ್ (ಒತ್ತಡ) :

ಆರಾಮಾಗಿ ಮಾಡಬೇಕಾಗಿರುವ ಕೆಲಸ ನಮ್ಮನ್ನು ಅತೀ ಶೀಘ್ರವಾಗಿ ಮಾಡುವಂತೆ ಆದಾಗ ಆಗುವ ಒತ್ತಡ.
ಮನಸ್ಸಿನ ಒತ್ತಡ : ಒಬ್ಬ ವಿದ್ಯಾರ್ಥಿಗೆ ಟೀಚರ್ ಮತ್ತು ಪೇರೆಂಟ್ಸ್ ಕಡೆಯಿಂದ ನೀನೇ ಟಾಪರ್ ಆಗಬೇಕೆನ್ನುವ ಒತ್ತಡ.

ಪರಿಣಾಮಗಳು

ಭಾವನಾತ್ಮಕ ಪರಿಣಾಮ

1) ಮನಸ್ಸಿನ ಹತೋಟಿ ತಪ್ಪುತ್ತದೆ.( Mood swings) ಉದಾಹರಣೆ: ಒಂದು ಕ್ಷಣ ಸಂತೋಷ, ಇನ್ನೊಂದು ಕ್ಷಣ ದುಃಖ, ಸಿಟ್ಟು ,ಹತಾಶೆ, ಇತ್ಯಾದಿ.
2) ವಿಭಿನ್ನ ವರ್ತನೆ
3)ಆತ್ಮವಿಶ್ವಾಸ ಕಳೆದುಕೊಳ್ಳುವುದು
4) ಕೀಳರಿಮೆ
5)ಒಳ್ಳೆಯ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಾಗದೇ ಇರುವುದು.
6)ವಾದ ವಿವಾದಗಳು
7) ತಪ್ಪು ನಿರ್ಧಾರ ತೆಗೆದುಕೊಂಡಾಗ ಆಗುವ ಜಗಳಗಳು 8)ಸೋಲು, ಅದರಿಂದ ಆರ್ಥಿಕ ಸಮಸ್ಯೆ, ಕೆಲಸ ಕಳೆದುಕೊಳ್ಳುವ ಪರಿಸ್ಥಿತಿ ಬರಬಹುದು.
9) ಆಸಕ್ತಿ ಕಳೆದುಕೊಳ್ಳುವುದು ( ಕೆಲಸದಲ್ಲಿ , ಓದಿನಲ್ಲಿ ಏಕಾಗ್ರತೆ ಇಲ್ಲದಿರುವುದು)
10) ನೆನಪಿನ ಶಕ್ತಿ ಕಡಿಮೆ ಆಗುವುದು.
11) ಹೃದಯದ ಒತ್ತಡ

ಒತ್ತಡದಿಂದ ನಮ್ಮ ವರ್ತನೆಯಲ್ಲಿ ಉಂಟಾಗುವ ಬದಲಾವಣೆಗಳು ( Behavioural)

ಒಳ್ಳೆಯ ಆಹಾರ ತಿನ್ನಬೇಕೆನಿಸುವುದಿಲ್ಲ (ಸತ್ವಯುತ ಆಹಾರ), ಸಿಗರೇಟ್, ಆಲ್ಕೋಹಾಲ್, ಕೆಫೀನ್ ( Caffine) ಜಾಸ್ತಿ ಉಪಯೋಗಿಸುತ್ತಾರೆ. ಮಲಗುವ ಸಮಯ ಇಲ್ಲದಿರುವುದು, ನಿದ್ದೆ ಬಾರದಿರುವುದು, ಮಾಡುವ ಕೆಲಸದ ಫಲಿತಾಂಶದಲ್ಲಿ ಹಿನ್ನಡೆ, ಜೀವನದಲ್ಲಿ ತೃಪ್ತಿ ಇಲ್ಲದಿರುವುದು, ಇತ್ಯಾದಿ.

Burn out (ತಡೆಯಲಾಗದೆ ಹೊರಬರುವುದು): ಭಾವನಾತ್ಮಕವಾಗಿ ಮತ್ತು ದೈಹಿಕವಾಗಿ ಎರಡೂ ರೀತಿಯಲ್ಲಿ ಬಳಲುವುದು ( ಸೋತು ಹೋಗುವುದು). ಹತಾಶೆ ಭಾವನೆ, ದೀರ್ಘಕಾಲದ ಆಯಾಸ, ನಿಶ್ಯಕ್ತಿ ಉಂಟಾಗುವುದು , ಇವೆಲ್ಲ ತಡೆಯಲಾರದ ಒತ್ತಡದಿಂದ ಕಾಣಿಸಿಕೊಳ್ಳುವ ಲಕ್ಷಣಗಳು.

ಪರಿಹಾರ :

ಯೋಗ, ಧ್ಯಾನ, ಪೂರ್ವತಯಾರಿ, ನಾವು ಹೇಗಿದ್ದೇವೋ ಹಾಗೆ ನಮ್ಮನ್ನು ಒಪ್ಪಿಕೊಳ್ಳುವುದು, ಸಲಹೆ ತೆಗೆದುಕೊಳ್ಳುವುದು, ಭಾವನಾತ್ಮಕ ಮತ್ತು ಒಳ್ಳೆಯ ನೀತಿಯ ಸಪೋರ್ಟ್ ತೆಗೆದುಕೊಳ್ಳುವುದು, ಕೆಲವು ಸಂದರ್ಭಗಳನ್ನು ಹಾಸ್ಯವಾಗಿ ಪರಿಗಣಿಸಿ ಸುಮ್ಮನಾಗುವುದು, ಸಮಯದ ನಿರ್ವಹಣೆ, ಕಲ್ಪನೆಯ ಬದುಕಿಗಿಂತ ಜೀವನದಲ್ಲಿ ನಡೆಯುವಂತಹ ಗುರಿ ,ಆಸೆ ಹೊಂದುವುದು ಒಳ್ಳೆಯದು . ಪರಿಸ್ಥಿತಿಗೆ ತಕ್ಕಂತೆ ಯೋಚಿಸುವುದು, ( ಕೆಲವು ಸಂದರ್ಭಗಳಲ್ಲಿ ಪ್ರಾಕ್ಟಿಕಲ್ ಆಗಿ, ರಿಯಲಿಸ್ಟಿಕ್ ಆಗಿರಬೇಕು)ಒಳ್ಳೆ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ಉದಾಹರಣೆಗೆ ಆಹಾರದ ವಿಷಯದಲ್ಲಿ, ಓದು, ಸಂಗೀತ, ಇತ್ಯಾದಿ. ನಮ್ಮ ಬಗ್ಗೆ ನಾವೇ ಎಚ್ಚರಿಕೆ (Care) ವಹಿಸಬೇಕು. ಆಹಾರ ,ನಿದ್ರೆ, ಕೆಲಸ – ಕಾರ್ಯಗಳು, ಇತ್ಯಾದಿ. ಧನಾತ್ಮಕ ವರ್ತನೆ ಮತ್ತು ಆಲೋಚನೆಗಳನ್ನು ಅಳವಡಿಸಿಕೊಳ್ಳಬೇಕು.

ಮುಖ್ಯವಾಗಿ ತಮ್ಮನ್ನು ತಾವು ಹಾಸ್ಯವಾಗಿ ಬಿಂಬಿಸಿಕೊಂಡರೆ ಒಳ್ಳೆಯದು. ಅಂದರೆ, ಸದಾ ಗಂಭೀರವಾಗಿರುವುದರ ಬದಲು ಸ್ವಲ್ಪ ಹಾಸ್ಯಕ್ಕೆ ತೆರೆದುಕೊಳ್ಳುವ ಮನಸ್ಥಿತಿ ಇದ್ದರೆ ಒಳ್ಳೆಯದು. ಆತ್ಮಾವಲೋಕನ ಮಾಡಿಕೊಳ್ಳುವುದು ಒಳ್ಳೆಯದು. ಒತ್ತಡ ಉಂಟಾದಾಗ ನಮಗೆ ಆಗುವ ಅನುಭವಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಂಡು ಮುಂದೆ ಅಂತಹ ಪರಿಸ್ಥಿತಿ ಬಂದಾಗ ಅದನ್ನು ತಡೆಯಲು ಪ್ರಯತ್ನಿಸಬಹುದು. ಉದಾಹರಣೆಗೆ: ಆ ಸಮಯದಲ್ಲಿ ಬಾಯಾರಿಕೆ ಅನಿಸಿದರೆ ನೀರು ಇಟ್ಟುಕೊಳ್ಳುವುದು, ಇತ್ಯಾದಿ .ಒತ್ತಡ ಆದಾಗ ಆ ಸಮಯಕ್ಕೆ ಯಾವುದು ಮುಖ್ಯವೋ ಅದರ ಕಡೆ ಏಕಾಗ್ರತೆ ವಹಿಸಬೇಕು. ಬೇರೆ ವಿಷಯಗಳ ಕಡೆ ಗಮನ ಹರಿಸಬಾರದು.

ಆದಷ್ಟು ಒತ್ತಡ ಮುಕ್ತ ಜೀವನ ಬದುಕೋಣ. ಜೀವನದ ಪ್ರತಿಯೊಂದು ಹಂತದಲ್ಲೂ ಸುಖ, ಸಂತೋಷ , ನೆಮ್ಮದಿ ನಮ್ಮೆಲ್ಲರ ಪಾಲಾಗಲಿ.


  • ಮಂಗಳ ಎಂ ನಾಡಿಗ್ – ಅಂಕಣಕಾರ್ತಿ, ಬೆಂಗಳೂರು.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading