ಅಂಗೈಯಲ್ಲಿ ಪ್ರಪಂಚ (ಭಾಗ- ೨೯)

ಶಾಲಾ ವಾಹನಗಳಲ್ಲಿ ಬರುವ ಮಕ್ಕಳನ್ನು ಜೋಪಾನವಾಗಿ ಹತ್ತಿಸಿ, ಕಿಟಕಿಯಲ್ಲಿ ಕೈ, ತಲೆ ಹೊರಹಾಕದಂತೆ, ಜಗಳವಾಡದಂತೆ ನೋಡಿಕೊಳ್ಳುವುದರಿಂದ ಹಿಡಿದು ಅವರವರ ಮನೆಯ ಬಳಿ ಇಳಿಸಿ, ಪೋಷಕರಿಗೆ ಮಕ್ಕಳನ್ನು ಒಪ್ಪಿಸುವ ತನಕ ಅವರ ಜವಾಬ್ದಾರಿ ಮುಂದುವರಿಯುತ್ತದೆ. ಅಂಕಣಕಾರ್ತಿ ಮಂಗಳ ಎಂ ನಾಡಿಗ್ ಅವರ ‘ಅಂಗೈಯಲ್ಲಿ ಪ್ರಪಂಚ’ ಅಂಕಣದಲ್ಲಿ ‘ಆಯಮ್ಮನೆಂಬ ಅಮ್ಮ’ ತಪ್ಪದೆ ಮುಂದೆ ಓದಿ…

ಎರಡನೇ ತರಗತಿಯ ಆ ಮಗುವಿಗೆ ಅವಸರವಾಗಿ, ವಾಶ್ ರೂಮ್ಗೆ ಹೋಗುವಷ್ಟು ಸಮಯ ತಾಳಲಾಗದೇ ಬಟ್ಟೆಗೆಲ್ಲಾ ಆಗಿತ್ತು. ಆಗಷ್ಟೇ ಊಟಕ್ಕೆಂದು ಹೊರಟಿದ್ದ ಆಯಮ್ಮ ಆ ಮಗುವಿನ ಬಟ್ಟೆ ತೆಗೆದು ತೊಳೆಸಿ, ಒರೆಸಿ ಶಾಲೆಯಲ್ಲಿದ್ದ  ಬೇರೆ ಸಮವಸ್ತ್ರ ಹಾಕಿ ತರಗತಿಗೆ ಬಿಟ್ಟು ಬಂದಿದ್ದರು.

ಬಿದ್ದು ಗಾಯವಾಗಿ ಅಳುತ್ತಿದ್ದ ಮಗುವನ್ನು ವೆಲ್ನೆಸ್ ರೂಮಿಗೆ ಕರೆದೊಯ್ದು ಬ್ಯಾಂಡೇಜ್ ಮಾಡಿಸಿ, ಅಮ್ಮನಂತೆ ಸಂತೈಸಿ ಮತ್ತೆ ಆ ಮಗು ತರಗತಿಯಲ್ಲಿ ಹೊಂದಿಕೊಳ್ಳುವಂತೆ ಮಾಡಿದ್ದೂ ಆಯಮ್ಮನೇ.

ಪ್ರಿ-ನರ್ಸರಿಯಿಂದ ಎರಡನೇ ತರಗತಿಯವರೆಗಿನ ಮಕ್ಕಳಿಗೆ ಆಯಮ್ಮನೇ ಎಲ್ಲಾ. ಕೆಲವೊಮ್ಮೆ ಶಿಕ್ಷಕರ ಮಾತನ್ನು ಕೇಳದ ಮಕ್ಕಳು ಆಯಮ್ಮನ ಮಾತನ್ನು ಕೇಳಿದ್ದೂ ಇದೆ. ಈ ಮಕ್ಕಳು ತಮಗೆ ಏನು ಅನಿಸಿದರೂ ಹೋಗಿ ಆಯಮ್ಮನ ಬಳಿ ನಿಸ್ಸಂಕೋಚವಾಗಿ ಹೇಳಿಕೊಳ್ಳುತ್ತಾರೆ.

ಆ ಮಕ್ಕಳಿಗೂ ಆಯಮ್ಮನೆಂದರೆ ಶಾಲೆಯಲ್ಲಿರುವ ಅಷ್ಟೊತ್ತೂ ಅಮ್ಮನಂತೆಯೇ. ಮನೆಯಲ್ಲಿ ಅಮ್ಮ ಜೋಪಾನ ಮಾಡಿದ ಹಾಗೆ ತರಗತಿಯಲ್ಲಿ ಆಯಮ್ಮ ಬೇಕು. ತಮ್ಮ ಮಕ್ಕಳಂತೆ ಮುದ್ದಿಸಿ ಸೇವೆ ಮಾಡುವ ಆಯಮ್ಮ, ಮಕ್ಕಳಿಗೆ ಬೈಯ್ಯ ಬೇಕಾದ ಸಂದರ್ಭ ಬಂದರೆ ತುಸು ಗದರುವುದೂ ಉಂಟು. ಆದರೂ ಮಕ್ಕಳು ಮತ್ತೆ ಆಯಮ್ಮನ ಬಳಿಗೆ ಖುಷಿಯಿಂದಲೇ ಹೋಗುತ್ತಾರೆ.

ಫೋಟೋ ಕೃಪೆ : ಅಂತರ್ಜಾಲ

ವಾಶ್ ರೂಮಿಗೆ ಕರೆದುಕೊಂಡು ಹೋಗಿ ಬರುವುದರಿಂದ ಹಿಡಿದು ಸಮಾಧಾನ ಮಾಡಿ ತಿನ್ನಿಸುವುದರವರೆಗೂ ಎಲ್ಲಾ ಜವಾಬ್ದಾರಿಯನ್ನು ನಿಭಾಯಿಸುತ್ತಾರೆ. ಬೇರೆ ಬೇರೆ ಭಾಷೆಯ ಮಾತನಾಡುವ ಮಕ್ಕಳು ಇದ್ದರೂ ಅವರ ಮನದಿಂಗಿತವನ್ನು ಅರ್ಥ ಮಾಡಿಕೊಂಡು ಅವರಿಗೆ ಬೇಕಾದ್ದನ್ನು ಮಾಡುತ್ತಾರೆ.

ಕೆಲವು ಮಕ್ಕಳು ಸರತಿ ಸಾಲಿನಲ್ಲಿ ಹೋಗುವಾಗ ತಮ್ಮ ಸಾಲು ಬಿಟ್ಟು ಬೇರೆ ಸಾಲಿಗೆ ಹೋಗಿ ಸೇರಿಕೊಳ್ಳುವುದೂ ಇದೆ. ಇವೆಲ್ಲವನ್ನೂ ಗಮನಿಸಿ ಆ ಮಕ್ಕಳನ್ನು ಕರೆತಂದು ಮತ್ತೆ ಅವರ ತರಗತಿಗೆ ಬಿಡುವುದೂ ಆಯಮ್ಮನೇ. ವಾಶ್ ರೂಂ ಮುಂತಾದ ಕಡೆಗಳಲ್ಲಿ ಸ್ವಿಚ್ ಬೋರ್ಡ್ಗಳನ್ನು ಮಕ್ಕಳು ಮುಟ್ಟದಂತೆ ಜಾಗ್ರತೆ ವಹಿಸುತ್ತಾರೆ. ಏಕೆಂದರೆ, ಕೆಲವು ತುಂಟಾಟದ ಮಕ್ಕಳು ಒದ್ದೆ ಕೈಯ್ಯಲ್ಲಿ ಸ್ವಿಚ್ ಬೋರ್ಡ್ ಮುಟ್ಟಿ ಅನಾಹುತವಾಗುವ ಸಂಭವವಿರುತ್ತದೆ. ಯಾವ ಮಕ್ಕಳು ಹೇಗೆಂಬ ಅರಿವು ಇವರಿಗೆ ಚೆನ್ನಾಗಿರುತ್ತದೆ. ಹಾಗಾಗಿ ತರಲೆ ಮಾಡುವ ಮಕ್ಕಳ ಬಗ್ಗೆ ಹೆಚ್ಚಿನ ಗಮನ ವಹಿಸುತ್ತಾರೆ.

ಮಕ್ಕಳ ಬಿಚ್ಚಿದ ಶೂಲೇಸ್ ಕಟ್ಟುವುದರಿಂದ ಹಿಡಿದು ಮೂಗು ಸ್ವಚ್ಛ ಮಾಡುವವರೆಗೂ ನಿಸ್ವಾರ್ಥ ಸೇವೆ ಇವರದು. ನಿಜ ಇದೆಲ್ಲಾ ಅವರ ಕೆಲಸವೇ ಆಗಿರಬಹುದು. ಆದರೆ ನಿಷ್ಕಲ್ಮಶ ಮನಸ್ಸಿನಿಂದ, ಅಸಹ್ಯ ಪಟ್ಟುಕೊಳ್ಳದೇ ತಾಯಿಯಂತೆ ಮಾಡುವ ಇವರ ಸೇವೆಗೆ ಬೆಲೆ ಕಟ್ಟಲಾಗುವುದಿಲ್ಲ. ಅಂತೆಯೇ ಈ ವಯಸ್ಸಿನ ಎಲ್ಲಾ ಮಕ್ಕಳಿಗೂ ಇಂತಹ ಯಾವುದೇ ಅಗತ್ಯಗಳಿದ್ದರೂ ತಕ್ಷಣಕ್ಕೆ ನೆನಪಾಗುವುದೂ ಆಯಮ್ಮನೇ. ಸ್ವಲ್ಪ ನೀರು ಚೆಲ್ಲಿದರೂ ಆಯಮ್ಮನ ಕರೀತೀನಿ ಅಂತ ಹೇಳಿ ಶಿಕ್ಷಕರ ಉತ್ತರಕ್ಕೂ ಕಾಯದೇ ಮಕ್ಕಳೇ ಓಡುತ್ತಾರೆ. ಅದೇ ಮನೆಯಲ್ಲಾದರೆ ತಕ್ಷಣ ಹೇಳುವುದು ಅಮ್ಮನಿಗೆ. ಹಾಗಾಗೇ ಆಯಮ್ಮನೆಂದರೆ ಮಕ್ಕಳಿಗೆ ಶಾಲೆಯಲ್ಲಿ ಅಮ್ಮನಂತೆಯೇ. ಮಕ್ಕಳು ತುಂಬಾ ಇಷ್ಟಪಡುವುದೂ ಆಯಮ್ಮನನ್ನೇ. ಅಂತೆಯೇ ಅವರೂ ಸಹ ಮಕ್ಕಳನ್ನು ಅಷ್ಟೇ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ.

ಮಕ್ಕಳ ಕಳೆದು ಹೋಗಿರುವ/ಬೀಳಿಸಿಕೊಂಡ ಪೆನ್ಸಿಲ್, ರಬ್ಬರ್ ಮುಂತಾದ ವಸ್ತುಗಳನ್ನು ಹುಡುಕಿ ಕೊಡುವುದೂ ಆಯಮ್ಮನೇ. ಮಕ್ಕಳ ಬೇಕು, ಬೇಡಗಳನ್ನು ಗಮನಿಸಿ ಆಯಾ ತರಗತಿಗಳಿಗೆ ಡಸ್ಟ್ ಬಿನ್ನಿಂದ ಹಿಡಿದು ಎಲ್ಲವನ್ನೂ ಪೂರೈಸುವುದು, ಸ್ವಚ್ಛಗೊಳಿಸುವುದು ಆಯಮ್ಮನೇ. ಕೆಲವೊಮ್ಮೆ ಎರಡೆರಡು ಬಾರಿ ಡಸ್ಟ್ ಬಿನ್ ಕವರ್ ಚೇಂಜ್ ಮಾಡುವುದೂ ಇದೆ. ಕಾರಣ ಮಕ್ಕಳು ತಿನ್ನದೇ ಉಳಿಸಿದ ಆಹಾರ ಪದಾರ್ಥಗಳು, ಆರ್ಟ್ ಮತ್ತು ಕ್ರಾಫ್ಟ್ ನ ಕ್ಲಾಸ್ ಇರುವ ದಿನಗಳಲ್ಲಿ ಪೆನ್ಸಿಲ್ ಶಾರ್ಪ್ ಮಾಡಿದ್ದ ಕಸ, ಕಟ್ ಮಾಡಿದ ಕಲರ್ ಪೇಪರ್ಗಳು, ಖಾಲಿಯಾದ ಗಮ್ ಬಾಟಲ್ ಇತ್ಯಾದಿಗಳಿಂದ ಡಸ್ಟ್ ಬಿನ್ ತುಂಬಿ ಹೋಗಿರುತ್ತದೆ.

ಶಾಲಾ ವಾಹನಗಳಲ್ಲಿ ಬರುವ ಮಕ್ಕಳನ್ನು ಜೋಪಾನವಾಗಿ ಹತ್ತಿಸಿ, ಕಿಟಕಿಯಲ್ಲಿ ಕೈ, ತಲೆ ಹೊರಹಾಕದಂತೆ, ಜಗಳವಾಡದಂತೆ ನೋಡಿಕೊಳ್ಳುವುದರಿಂದ ಹಿಡಿದು ಅವರವರ ಮನೆಯ ಬಳಿ ಇಳಿಸಿ, ಪೋಷಕರಿಗೆ ಮಕ್ಕಳನ್ನು ಒಪ್ಪಿಸುವ ತನಕ ಅವರ ಜವಾಬ್ದಾರಿ ಮುಂದುವರಿಯುತ್ತದೆ.

ಇದೆಲ್ಲದಕ್ಕೆ ಅಪವಾದವೆಂಬಂತೆ ಅಲ್ಲಲ್ಲಿ ಆಯಮ್ಮಗಳು ಮಕ್ಕಳ ಕಡೆ ಸರಿಯಾಗಿ ಗಮನ ಕೊಡದಿರುವುದು, ಹೊಡೆಯುವುದು, ಬೈಯ್ಯುವುದು ಮಾಡಿದ ಘಟನೆಗಳು ಆಗಾಗ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿರುತ್ತವೆ. ನಿಜ, ಇದು ಸುದ್ದಿಯಾಗಲೂ ಬೇಕು. ಏಕೆಂದರೆ, ಅವರು ಹೊಣೆ ಹೊತ್ತಿರುವುದು ಏನೂ ಅರಿಯದ ಕಂದಮ್ಮಗಳದ್ದು. ಆಡಳಿತ ಮಂಡಳಿಯವರೂ ಇಂತಹವರನ್ನು ಗಮನಿಸಿ ಕ್ರಮ ಕೈಗೊಳ್ಳಬೇಕು. ಇಂತಹ ಮನಸ್ಥಿತಿಯವರು ತಮ್ಮ ಅಗತ್ಯಕ್ಕಾಗಿ ಈ ತರದ ಕೆಲಸಗಳಿಗೆ ಬರದೇ ಇರುವುದೇ ಒಳ್ಳೆಯದು.

ಬಿಸಿಯಾದ ಕಾಫಿ/ಟೀ ತೆಗೆದುಕೊಂಡು ಹೋಗುವಾಗ ಮಕ್ಕಳು ಗಮನಿಸದೇ ಓಡಿಬಂದು ಇವರ ಮೈಮೇಲೆ ಚೆಲ್ಲಿದ್ದೂ ಇದೆ. ಅತ್ತು ರಂಪ ಮಾಡುತ್ತಿರುವ ಮಕ್ಕಳನ್ನು ಸಮಾಧಾನ ಮಾಡಲು ಹೋದಾಗ ಗಿಬರಿದ್ದೂ ಇದೆ. ಏನಾದರೂ ತಾಳ್ಮೆ ಕಳೆದುಕೊಳ್ಳದೇ ಮಕ್ಕಳಲ್ಲಿ ಒಂದಾಗಿ ಬದುಕುತ್ತಿರುವ ಇವರ ಸೇವೆಯೂ ಅನುಪಮ. ಇಂತಹವರ ಸೇವೆಯೂ ಶಿಕ್ಷಣ ಸಂಸ್ಥೆಗಳಲ್ಲಿ ಬಹಳ ಅಗತ್ಯ. ಈಗೀಗ ಹಲವು ಶಿಕ್ಷಣ ಸಂಸ್ಥೆಗಳಲ್ಲಿ ಆಯಮ್ಮ ಎನ್ನುವ ಬದಲು ಆಂಟಿ ಎಂಬ ಪದ ಚಾಲ್ತಿಯಲ್ಲಿದೆ. ಇವರ ಸೇವೆಗೂ ಸಲ್ಲಬೇಕಾದ ಗೌರವ, ಮನ್ನಣೆ ಸಲ್ಲಲಿ ಎಂಬ ಆಶಯದೊಂದಿಗೆ.


  • ಮಂಗಳ ಎಂ ನಾಡಿಗ್ – ಅಂಕಣಕಾರ್ತಿ, ಬೆಂಗಳೂರು.

 

 

 

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading