ದಿನನಿತ್ಯ ಬದುಕಿನಲ್ಲಿ ಒಬ್ಬರಿಂದ ಒಬ್ಬರು ಕಲಿಯುವುದು ಸಾಕಷ್ಟಿದೆ, ಪಾರ್ಲರ್ ನಲ್ಲಿ ನಡೆದ ಘಟನೆಯನ್ನು ನಿಮ್ಮ ಮುಂದೆ ಕತೆಯನ್ನು ಮುಂದೆ ಹಂಚಿಕೊಂಡಿದ್ದೇನೆ, ತಪ್ಪದೆ ಮುಂದೆ ಓದಿ…
ತುಂಬಾ ದಿನದಿಂದ ನನ್ನ ಕೂದಲು ಬಾಯಿ ಬಿಡ್ಕೊಂಡಿದ್ದರಿಂದ ಸರಿ ಇದ್ಕೊಂದು ಪಾರ್ಲರ್ ಟಚ್ ಕೊಡಸೋಣ ಅಂತ ಪಾರ್ಲರ್ ಹೋಗಿದ್ದೆ. ಪಾರ್ಲರ್ ಒಳಗೆ ಹೋಗ್ತಿದ್ದ ಹಾಗೆ ಸಣ್ಣ ಕಣ್ಣಿನ ಹುಡುಗ ಹಿಂದಿಯಲ್ಲಿ “ಏನ್ ಬೇಕಿತ್ತು, ಮೇಡಂ” ಅಂದ. ಇಯಮ್ಮನಿಗೆ ದೊಡ್ಡ ಬಜೆಟ್ ಹಾಕೋಣ ಅಂತ ಹೊಂಚು ಹಾಕ್ತಿದ್ದ ಅನಸುತ್ತೆ ಸೀದಾ ಕರಕೊಂಡು ಹೋಗಿ ಸೀಟ್ ಮೇಲೆ ನಗುತ್ತಾ ಕೂರಿಸಿದ. ನಾನು ಕೂತೆ.
“ನೋಡಪ್ಪಾ ನನಗೆ ಕೂದಲು ಕತ್ತರಿಸಬೇಕು. ಹಾಗಂತ ಪೂರ್ತಿ ತಗದೀಯಾ, ಕಾಲೇಜ್ ದಿನಗಳಲ್ಲಿ ಇರದೆ ಇರೋ ಪ್ರಪೋಸಲ್ ಗಳು ಈಗ ಬರತ್ತಿದ್ದಾವೆ, ಹುಷಾರಾಗಿ ನೋಡಿ ಕತ್ತರಿ ಹಾಕು ” ಅಂತ ಹೇಳಿ ನಕ್ಕೆ. ಹುಡುಗ ಚುರುಕಾಗಿದ್ದ ” ಮೇಡಂ, ಒಳ್ಳೆ ತಮಾಷೆ ಮಾಡ್ತೀರಾ”ನಗುತ್ತಾ ಕುತ್ತಿಗೆಗೆ ಕಪ್ಪು ಬಟ್ಟೆ ಸುತ್ತಿದ. “ಕೂದಲಿಗೆ ಕತ್ತರಿ ಹಾಕಿದ್ಮೇಲೆ ಒಮ್ಮೆ ತೋರಸು” ಅಂತ ದೊಡ್ಡ ಕಣ್ಣಲ್ಲಿ ಕನ್ನಡಿಯಲ್ಲಿ ನೋಡ್ತಾ ಹೇಳಿದೆ. ಸರಿಯಾದ ಸಮಯಕ್ಕೆ ಪಾರ್ಲರ್ ಗೆ ಒಂದು ಹುಡುಗ ಬಂದ,” ಮೇಡಂ, ಆ ಹುಡುಗನಿಗೆ ಫೇಶಿಲ್ ಮಾಡ್ಬೇಕಂತೆ, ಅರ್ಜೆಂಟ್ ಇದೆ ಅಂತೆ, ನೀವು ಹುಂ ಅಂದ್ರೆ ಹೋಗಿ ಮಾಡಿ ಬರ್ಲಾ”… ಅಳುಕಿನಿಂದ ಕೇಳಿದ.
ಪಾರ್ಲರ್ ಹುಡುಗನ ಡಿಮ್ಯಾಂಡ್ ನೋಡಿ ಒಳ್ಳೆ ಕೈ ಇರಬೇಕು ಎಲ್ಲರಿಗೂ ಇವನೇ ಬೇಕೆಂದು ಅರ್ಥ ಮಾಡಿಕೊಂಡು “ಆಯ್ತು ಮಾಡಿ ಪರವಾಗಿಲ್ಲ” ಎಂದು ತಲೆಯಾಡಿಸಿದ. ನಾನು ಪಾರ್ಲರ್ ಹುಡುಗ ಹೋದ ಕಡೆ ನೋಡಿದೆ. ಹುಡುಗನಿಗೆ ಮುಖಕ್ಕೆಲ್ಲ ಕ್ರೀಮ್ ಹಾಕಿ ಅದೇನೋ ಮಾಡುತ್ತಿದ್ದ. ನನ್ನ ಅಮ್ಮ ಫೇರ್ ಅಂಡ್ ಲವ್ಲಿ ಅಂಬಾಸಿಡರ್ ತರ ನನ್ನ ಹಿಂದಿಂದೆ ಬೆಳ್ಳಗೆ ಆಗ್ತೀಯಾ.. ಇದನ್ನ ಹಚ್ಚು ಅಂದ್ರು ನಾನು ಹಚ್ಚುತ್ತಿರಲಿಲ್ಲ. ಈಗ ಹುಡುಗೀರು, ಹುಡುಗುರು ಸೌಂದರ್ಯ ಪ್ರಿಯರಾಗಿದ್ದಾರೆ ಅಲ್ವಾ, ಅವನತ್ತ ನೋಡಿ ಬ್ಯಾಗ್ ನಲ್ಲಿದ್ದ ಕತೆ ಪುಸ್ತಕ ತಗದು ಓದೋಕೆ ಕೂತೆ. ಅಷ್ಟೋತ್ತಿಗೆ ಕಸ ಗೂಡಿಸುತ್ತಿದ್ದ ಹೆಣ್ಣುಮಗಳೊಬ್ಬಳು ಹತ್ತಿರ ಬಂದು “ಅಕ್ಕ, ನೀವು ಕನ್ನಡದವರಾ?…ಅವರ ಜೊತೆ ಹಿಂದೀಲಿ ಮಾತಾಡೋದು ನೋಡಿ ಹಿಂದಿಯವರು ಅನ್ಕೊಂಡೆ” ಅಂತ ಮಾತಿಗಿಳಿದಳು. “ಅಕ್ಕ, ಏನೇ ಹೇಳಿ… ನಮ್ಮ ಕನ್ನಡದ ಹುಡುಗುರು ಕೆಲಸ ಮಾಡೋಲ್ಲ. ನೋಡಿ, ಈ ಪಾರ್ಲರ್ ನಲ್ಲಿ ಎಲ್ಲ ಹಿಂದಿ ಹುಡುಗುರೆ ಇರೋದು. ಎಷ್ಟೋ ದೂರದಿಂದ ಮನೆ, ಕುಟುಂಬ ಬಿಟ್ಟು ದುಡಿಯೋಕೆ ಬರತ್ತಾರೆ. ಕಷ್ಟ ಪಟ್ಟು ದುಡೀತಾರೆ ಅಕ್ಕ ” ಅವಳ ಮಾತಿನಲ್ಲಿ ಕನ್ನಡದ ಹುಡುಗರ ಬಗ್ಗೆ ನೋವಿತ್ತು. “ಅಕ್ಕ, ನನ್ನ ಮಗನಿಗೆ ಇಪ್ಪತ್ತೈದು ವರ್ಷ. ಹೊರಗೆ ಹೋಗಿ ದುಡಿ ಅಂದ್ರೆ ಬೈಕ್ ಕೊಡಸು, ಸುಗ್ಗಿ ಡೆಲಿವರಿ ಬಾಯ್ ಆಗ್ತೀನಿ ಅಂದ. ಆಯ್ತು, ಅಂತ ಕೊಡಸಿದ್ರೆ ಬೈಕ್ ನಲ್ಲಿ ಹುಡುಗಿ ಕೊಡಸ್ಕೊಂಡು ಓಡಾಸ್ತಿದ್ದಾನೆ, ತಿಂಗಳ EMI ನಾನೇ ಕಟ್ಟತ್ತಿದ್ದೀನಿ” ಹೆತ್ತ ಕರಳಿನ ಸಂಕಟ ಹಂಚಿಕೊಂಡಳು. ಅವಳ ಮಾತಿನಲ್ಲಿ ವಯಸ್ಸಿಗೆ ಬಂದ ಮಗ ದುಡಿತಿಲ್ಲ ಎನ್ನುವ ಸಂಕಟವೂ ಇತ್ತು. ಪಾರ್ಲರ್ ಹುಡುಗ ಫೇಶಿಲ್ ಕೆಲಸ ಮುಗಿಸಿ “ಸಾರೀ ಮೇಡಂಜೀ… ಕಟಿಂಗ್ ಶುರು ಮಾಡ್ಲಾ” ಅನ್ನುತ್ತಾ ಗಡಿಬಿಡಿಯಲ್ಲಿ ಕೂದಲಿಗೆ ಕತ್ತರಿ ಹಾಕಿದ. ಅವನ ಮುಖವನ್ನು ಕನ್ನಡಿಯಲ್ಲಿ ನೋಡುತ್ತ “ತಮ್ಮ, ಯಾವ ಊರು ನಿಮ್ಮದು”, ನಮ್ಮಿಬ್ಬರ ಮಾತು ಶುರುವಾಯಿತು. “ಮೇಡಂ, ಡಾರ್ಜಲಿಂಗ್ “…ಎಂದು ಹೇಳಿ ಮುಗುಳ್ನಕ್ಕ. ಅಷ್ಟು ದೂರದಿಂದ ಬಂದ್ಯಾ , ಅಪ್ಪ ಅಮ್ಮನ ನೆನಪು ಬರೋಲ್ವಾ? ಬೆಂಗಳೂರಿಗೆ ಬಂದ್ಮೇಲೆ ಎಷ್ಟು ಬಾರಿ ಊರಿಗೆ ಹೋಗಿದ್ಯಾ?.” ಅಂತ ಕೇಳಿದೆ. “ಮೇಡಂ ವರ್ಷಕ್ಕೆ ಒಂದು ಸಲ ಹೋಗ್ತೀನಿ. ಒಂದು ವಾರ ಅಪ್ಪ ಅಮ್ಮನ ಜೊತೆಗೆ ಇರತೀನಿ, ಆಮೇಲೆ ದುಡಿಮೆಯತ್ತ ಮುಖ ಮಾಡ್ತೀನಿ”.ಈ ಮಾತು ಕೇಳಿದಾಗ ಅಚ್ಚರಿಯಾಯಿತು. ಭಾಷೆ ಬಾರದ ಊರು, ಗೊತ್ತಿಲ್ಲದ ಜನರ ಮಧ್ಯೆ ಬದುಕು ಕಟ್ಟಿಕೊಂಡು ನಗುತ್ತಾ ಬಾಳುತ್ತಿರುವ ಅವನ ಮುಖ ನೋಡಿ, ಮದುವೆ ಆದ್ರೂ ಅಪ್ಪ ಅಮ್ಮನ ಮನೆ ಪಕ್ಕದಲ್ಲೇ ಇರಬೇಕು, ಹಬ್ಬ ಹರಿದಿನ ಬಂದ್ರೆ ನೆಂಟರ ಮನೆಯಲ್ಲಿ ಕೂತು ಹರಟೆ ಹೊಡಿಬೇಕು, ಬಾಯಿ ರುಚಿಗೆ ಹೊಟ್ಟೆ ತುಂಬಿದ್ರೂ ಎಲ್ಲಾನೂ ತಿನ್ಬೇಕು ಎನ್ನುವ ಆಸೆ ಬುರುಕ ನಮ್ಮ ಬದುಕಿನ ಬಗ್ಗೆ ನಾಚಿಕೆಯಾಯಿತು.
ಕುತೂಹಲಕ್ಕೆ “ಅಡುಗೆ ಹೊರಗಡೆಯಿಂದ ತಂದು ತಿಂತೀರಾ ” ಅಂತ ಕೊನೆಯದಾಗಿ ಪ್ರಶ್ನಿಸಿದೆ. ಅವನು “ಇಲ್ಲಾ ಮೇಡಂ, ಹೊರಗಡೆ ಊಟ ದಿನ ತಿಂದ್ರೆ ಹೊಟ್ಟೆ ಅಷ್ಟೇ, ಮನೆಯಲ್ಲಿಯೇ ಮಾಡ್ಕೋತೀವಿ”. ಅಲ್ಲಿಗೆ ಮತ್ತೊಂದು ಪ್ರಶ್ನೆ ಕೇಳಿದೆ “ಏನೇನು ಮಾಡ್ಕೋತೀರಾ?”.. ನಮ್ಮ ತರ ದಿನಕ್ಕೊಂದು ರಾಗಿ ಮುದ್ದೆ, ರೊಟ್ಟಿ, ಚಪಾತಿ, ಪನೀರ್ ಪಲ್ಯ, ದೋಸೆ, ಇಡ್ಲಿ,ಪಡ್ಡು ಅಂತೆಲ್ಲ ಹೇಳ್ತಾನೆ ಅನ್ಕೊಂಡೆ ಆದ್ರೆ ಅವನು ಹೇಳಿದ್ದು ಆಲೂಗಡ್ಡೆ, ಈರುಳ್ಳಿ ಸುತ್ತ ಅಡುಗೆಗಳು. ಆಲೂಗಡ್ಡೆ ಪಲ್ಯ ಜೊತೆಗೆ ಚಪಾತಿ, ಆಲೂಗಡ್ಡೆ ಈರುಳ್ಳಿ ಸಾಂಬಾರ್ ಜೊತೆಗೆ ಅನ್ನ ಮಾಡ್ಕೊಂಡ್ರೆ ಸ್ವರ್ಗ ಮೇಡಂ ಅಂದಾಗ. ಅವರ ಬದುಕಿನ ಮುಂದೆ ನಮ್ಮ ಬದುಕು ಇಷಾರಾಮಿ ಅನಿಸಿತು.
ಅವರೇನು ಡಯಟ್ ಮಾಡೋಲ್ಲ, ವರ್ಕ್ ಔಟ್ ಮಾಡೋಲ್ಲ, ನೂರಾ ಎಂಟು ಯೋಚ್ನೆ ಇಲ್ಲಾ. ಇರೋ ನಾಲ್ಕೈ ನಾಲ್ಕು ಪದಾರ್ಥದಲ್ಲಿ ಒಳ್ಳೆ ಅಡುಗೆ ಮಾಡಿ ನೆಮ್ಮದಿಯಿಂದ ಊಟ ಮಾಡ್ತಾರೆ. ಇದರಲ್ಲಿ ಎಷ್ಟು ಕ್ಯಾಲರಿ ಇದೆ, ಇದನ್ನ ತಿಂದ್ರೆ ದಪ್ಪ ಆಗ್ತೀನಿ ಅಂತ ಚಿಂತೆ ಮಾಡೋಲ್ಲ. ಹತ್ತನೇ ತರಗತಿ ಆಗ್ತಿದ್ದ ಹಾಗೆ ಊರು ಬಿಟ್ಟು ದುಡಿಯೋಕೆ ಹೋಗ್ತಾರೆ. ಸಿಕ್ಕಿದ ಕೆಲಸವನ್ನು ಕಲ್ತು, ಕಷ್ಟ ಪಟ್ಟು ದುಡೀತಾರೆ ಮತ್ತು ಮಾಲಕರ ಪ್ರೀತಿಗೆ ಪಾತ್ರರಾಗ್ತಾರೆ. ದೊಡ್ಡ ದೊಡ್ಡ ಕನಸ್ಸಿನ ಹಿಂದೆ ಓಡದೆ ಕಣ್ತುಂಬ ನಿದ್ದೆ ಮಾಡ್ತಾರೆ. ನಿಮಗೆ ಯಾವ ಊರು ಇಷ್ಟ ಅಂದ್ರೆ ಅಪ್ಪಿ ತಪ್ಪಿ ಬೆಂಗಳೂರು ಅನ್ನೋಲ್ಲ. ನಮ್ಮೂರು ನಮಗೆ ಮೇಲು ಅಂತಾರೆ. ಎಷ್ಟು ಸರಳ ಬದುಕಲ್ವ ಅನಿಸಿತು. ಕಸಗೂಡಿಸಿ ಹೊರಟು ನಿಂತ ಆ ಹೆಂಗಸು “ಅಕ್ಕ ಬರತ್ತೀನಿ,
ಪ್ರೀತಿಯಿಂದ ಮಾತಾಡ್ತೀರಾ ನಿಮ್ಮ ಜೊತೆಗೆ ಮಾತಾಡಿ ಸಂತೋಷ ಆಯ್ತು. ಬರಲಿ ಅಕ್ಕ… ಅಂತ ಹೇಳಿ ಹೊರಟು ಹೋದಳು.
ನನ್ನ ಕಣ್ಮುಂದೆ ಕನ್ನಡತಿಯ ಬದುಕು ಮತ್ತು ದೂರದ ಹಿಂದಿಯವನ ಬದುಕು ಎರಡು ಬದುಕಿನ ಉದಾಹರಣೆಗಳಿದ್ದವು.
- ಶಾಲಿನಿ ಹೂಲಿ ಪ್ರದೀಪ್ – ಆಕೃತಿಕನ್ನಡ ಸಂಪಾದಕಿ, ಬೆಂಗಳೂರು.
