ಜಿ. ರವಿಕಿರಣ್ ಅವರ ತೆಲಗು ಮೂಲದ ಕೃತಿಯನ್ನು ಕನ್ನಡಕ್ಕೆ ಅನುವಾಡಿಸಿದ್ದಾರೆ ಲೇಖಕರಾದ ಧನಪಾಲ ನಾಗರಾಜಪ್ಪ ಅವರ ‘ಷಹೀನ್’ ಮಕ್ಕಳ ಕಾದಂಬರಿಯ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಕೃತಿಯ ಹೆಸರು : ಷಹೀನ್ (ಕಾದಂಬರಿ)
ತೆಲುಗು ಮೂಲ : ಜಿ. ರವಿಕಿರಣ್
ಅನುವಾದಕರು ಮತ್ತು ಪ್ರಕಾಶಕರು : ಧನಪಾಲ ನಾಗರಾಜಪ್ಪ
ಯುದ್ಧಕ್ಕೆ ಮನುಷ್ಯತ್ವವಿಲ್ಲದ ಸಾವಿರಾರು ಮುಖಗಳು, ಭ್ರಾತೃತ್ವವಿಲ್ಲದ ಅಸಂಖ್ಯ ಬಾಹುಗಳು. ಭಾವ ಬಂಧನಗಳನ್ನು ಮೀರಿ ಸಿಕ್ಕವರನ್ನು ಕೊಲ್ಲುವುದೇ ಯುದ್ಧದ ಧರ್ಮ. ಇಷ್ಟಕ್ಕೂ ಯುದ್ಧಗಳು ನಡೆಯುವ ಕಾರಣಗಳನ್ನು ಹುಡುಕುತ್ತಾ ಹೋದರೆ, ಲಾಭಕೋರತನ, ಸ್ವ ಪ್ರತಿಷ್ಠೆ, ಅಧಿಕಾರ ದಾಹ, ಸರ್ವಾಧಿಕಾರಿ ಮನೋ ಧೋರಣೆ, ಅಜ್ಞಾನದಿಂದ ಕೂಡಿದ ಅಹಂಕಾರ ಎದ್ದು ಕಾಣುತ್ತವೆ. ಜನಸಾಮಾನ್ಯರ ಜೀವನ ಸುಧಾರಣೆಗಾಗಲಿ, ಮೌಲ್ಯಯುತ ಜೀವನ ಕಟ್ಟಿಕೊಡುವುದಕ್ಕಾಗಲಿ ಯಾವ ಯುದ್ಧಗಳು ನಡೆಯುವುದಿಲ್ಲ ಎಂದು ಇತಿಹಾಸ ಸಾವಿರ ಸಲ ಸಾಬೀತುಪಡಿಸಿದೆ. ಇಷ್ಟಾಗಿಯೂ ಆಧುನಿಕ ಪ್ರಪಂಚದಲ್ಲಿಯೂ ಯುದ್ಧಗಳ ಆರ್ಭಟ ಹಿಂದಿನದಿಗಿಂತಲೂ ಹೆಚ್ಚಿದೆ.

ಜನಾಂಗೀಯ ದ್ವೇಷಗಳು ಸಣ್ಣ ಧಾರ್ಮಿಕ ಅಸಹಿಷ್ಣುತೆಗಳು ಅಂತರ್ ಯುದ್ಧಗಳಾಗಿ ಆರಂಭವಾಗಿ, ಬಲಾಢ್ಯ ರಾಷ್ಟ್ರಗಳ ಸ್ವಾರ್ಥ ಮನೋಭಾವದಿಂದ ಜಾಗತಿಕ ಯುದ್ಧಗಳಾಗಿ ಬದಲಾಗಿ, ಸಾವಿರಾರು ಸಾಮಾನ್ಯರ ಸಾವು ನೋವುಗಳಿಗೆ ಕಾರಣವಾಗಿವೆ. ಇವೆಲ್ಲ ಸಾಮಾನ್ಯರ ಅರಿವಿಗೆ ಬರುವ ಮೊದಲೇ ಅವರ ಜೀವನ ಮುಗಿದು ಹೋಗಿರುತ್ತದೆ. ಯಾವ ಯುದ್ಧಗಳಲ್ಲೂ ಜನಸಾಮಾನ್ಯರ ಒಳಿತಿಗಾಗಿ ಪ್ರಾಣ ತ್ಯಾಗ ಮಾಡಿದ ಬಲಾಢ್ಯ ರಾಷ್ಟ್ರಗಳ ನಾಯಕರನ್ನು ನಾವು ನೋಡಿಯೇ ಇಲ್ಲ. ಇಂತಹ ಎಲ್ಲ ಸಂಗತಿಗಳನ್ನು ‘ಷಹೀನ್’ ಮಕ್ಕಳ ಕಾದಂಬರಿ ಅತ್ಯಂತ ಮನೋಜ್ಞವಾಗಿ ಕಟ್ಟಿಕೊಟ್ಟಿದೆ. ಇಲ್ಲಿನ ಮುಖ್ಯ ಪಾತ್ರ ಬಾಲಕಿ ಷಹೀನ್ ಳ ಸಾಹಸದ ಮೂಲಕ ಯುದ್ಧದ ಒಳ ಹೊರಗನ್ನು ಎಳೆ ಎಳೆಯಾಗಿ ಬಿಚ್ಚಿಡಲಾಗಿದೆ. ಷಹೀನ್ ಒಬ್ಬ ಹೆಣ್ಣು ಮಗಳಾಗಿ ಹೇಗೆ ಆತ್ಮ ರಕ್ಷಣೆಯೊಂದಿಗೆ ಇತರರ ರಕ್ಷಣೆಗೂ ಮುಂದಾಗುತ್ತಾಳೆ ಎಂಬುದು ಮಕ್ಕಳಲ್ಲಿ ಸಾಹಸ ಮನೋಭಾವವನ್ನು ಬೆಳೆಸುವಲ್ಲಿ ಪ್ರಭಾವ ಬೀರುತ್ತದೆ. ಇಷ್ಟೇ ಅಲ್ಲದೆ ಇದೇ ಕಥೆಯು ಮಹಿಳೆಯರ ಶಿಕ್ಷಣ ಮತ್ತು ಸ್ವಯಂ ರಕ್ಷಣೆಯ ಮಹತ್ವವನ್ನು ಸಾರುತ್ತದೆ.

ಸಾಮಾನ್ಯರ ಒಗ್ಗಟ್ಟಿನಲ್ಲಿಯೇ ದೇಶದ ಅಭಿವೃದ್ಧಿ ಅಡಗಿದೆ ಎಂಬ ಮಹತ್ವದ ಮೌಲ್ಯವನ್ನು ಕಾದಂಬರಿಕಾರರಾದ ರವಿಕಿರಣ್ ರವರು(ತೆಲುಗು ಮೂಲ) ಸಮರ್ಥವಾಗಿ ಕಟ್ಟಿಕೊಟ್ಟಿದ್ದಾರೆ. ಅಷ್ಟೇ ಸಮರ್ಥವಾಗಿ ಕನ್ನಡಕ್ಕೆ ಅನುವಾದಿಸಿರುವ ಧನಪಾಲ ನಾಗರಾಜಪ್ಪ ಅವರು ಕಥೆಯನ್ನು ಕನ್ನಡದ ಸೊಗಡಿಗೆ ಪ್ರಾದೇಶಿಕತೆಗೆ ಒಗ್ಗಿಸಿದ್ದಾರೆ. ಈ ಕಾದಂಬರಿಯೂ ಮಕ್ಕಳ ಓದಿಗೊಂದು ಮಹತ್ವದ ಸರಕು ಎಂದು ನನಗನಿಸಿದೆ.
- ವಿವೇಕ ಕೆ.ವಿ. ಹೆಗ್ಗೆರೆ, ತುಮಕೂರು