ತೋರಣಗಲ್ಲು (ಚಾರಿತ್ರಿಕ ಅಧ್ಯಯನ) ಕೃತಿ ಪರಿಚಯ

ಲೇಖಕರಾದ ಅಬ್ದುಲ್ ಹೈ ತೋರಣಗಲ್ಲು ಅವರು ತನ್ನ ಸ್ವಂತ ಊರಾದ ತೋರಣಗಲ್ಲು ಗ್ರಾಮದ ಸಮಗ್ರ ಇತಿಹಾಸವನ್ನು ತೋರಣಗಲ್ಲು (ಚಾರಿತ್ರಿಕ ಅಧ್ಯಯನ) ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಈ ಕೃತಿಯ ಕುರಿತು  ಓಂಕಾರ ಪಾಟೀಲ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಪುಸ್ತಕ: ತೋರಣಗಲ್ಲು (ಚಾರಿತ್ರಿಕ ಅಧ್ಯಯನ)
ಲೇಖಕರು: ಅಬ್ದುಲ್ ಹೈ ತೋರಣಗಲ್ಲು
ಪ್ರಕಾಶಕರು: ಕಾವ್ಯ ಮನೆ ಪ್ರಕಾಶನ, ಕಲಬುರಗಿ
ಬೆಲೆ: ರೂ. ೨೦೦.

ಊರೆಂದರೆ ಮನೆಗಳ ಗೊಂಪೆಯಲ್ಲ, ಮನುಷ್ಯರ ಮನಗಳ ಇರುವಿಕೆ, ಜೀವಭಾವಗಳ ವಿಹಂಗಮ ನೋಟ ಎಂದು ಹೇಳುವ ಲೇಖಕ ಅಬ್ದುಲ್ ಹೈ ತೋರಣಗಲ್ಲು ಅವರು ತನ್ನ ಸ್ವಂತ ಊರಾದ ತೋರಣಗಲ್ಲು ಗ್ರಾಮದ ಸಮಗ್ರ ಇತಿಹಾಸವನ್ನು ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಇದು ಕೇವಲ ಒಂದು ಊರಿನ ಚರಿತ್ರೆಯಲ್ಲ, ಪ್ರತಿಯೊಬ್ಬ ಓದುಗನಿಗೂ ಬೆರಗು ಹುಟ್ಟಿಸುವ ಮತ್ತು ಹೊಸ ಸಂಶೋಧಕರಿಗೆ ಮಾರ್ಗದರ್ಶಿಯಾಗಬಲ್ಲ ದಾಖಲೆ ಕೃತಿಯಾಗಿದೆ.

“ದೊಡ್ಡ ಬದುಕು ಬದುಕದವನು ದೊಡ್ಡ ಸಾಹಿತಿಯಾಗಲಾರ” ಎಂಬ ಕುವೆಂಪು ಅವರ ಮಾತು ಇಲ್ಲಿ ಅಕ್ಷರಶಃ ಸತ್ಯವಾಗಿದೆ. ಸಾಹಿತಿಯಾದವನು ತಾನು ಹುಟ್ಟಿ ಬೆಳೆದ ಊರು, ಅಲ್ಲಿನ ಬಾಲ್ಯ, ಬೆಟ್ಟ-ಗುಡ್ಡ, ಹಳ್ಳ-ಕೊಳ್ಳಗಳ ಜೊತೆಗಿನ ಅವಿನಾಭಾವ ಸಂಬಂಧವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಆ ಅನುಭವಗಳೇ ಮುಂದೆ ಅಕ್ಷರ ರೂಪದಲ್ಲಿ ಹೊರಬರುತ್ತವೆ. ಲೇಖಕರು ಅದನ್ನೇ ಮಾಡಿದ್ದಾರೆ.

ಈ ಕೃತಿಯಲ್ಲಿ ಗ್ರಾಮದ ಸಂಸ್ಕೃತಿ ಮತ್ತು ಸಂಡೂರಿನ ಹಸಿರೀಕರಣವನ್ನು ಎರಡು ಗುಬ್ಬಚ್ಚಿಗಳ ಮೂಲಕ ರೂಪಕವಾಗಿ ನಿರೂಪಿಸುವ ಶೈಲಿ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರನ್ನೂ ಓದಿಸಿಕೊಳ್ಳುತ್ತದೆ.

ಯಾವುದೇ ಚರಿತ್ರೆಯನ್ನು ಕೆದಕಿದಾಗ ಅದಕ್ಕೊಂದು ಇತಿಹಾಸ ಇರುತ್ತದೆ. ಲೇಖಕರು ತೋರಣಗಲ್ಲಿನ ಮೂಲ ಹೆಸರು ‘ತೊಗಲಗಲ್ಲೆ’ ಅಥವಾ ‘ತೊಗಲುಗಲ್ಲು’ ಎಂದಿತ್ತು ಎಂದು ಗುರುತಿಸುತ್ತಾರೆ. ಮುಂದೆ ವಿಜಯನಗರ ಸಾಮ್ರಾಜ್ಯಕ್ಕೆ ಬರುವ ಯಾತ್ರಿಕರನ್ನು ಸ್ವಾಗತಿಸಲು ಅಲ್ಲಿನ ಬೃಹತ್ ಕಲ್ಲುಗಳಿಗೆ ತೋರಣ ಕಟ್ಟುತ್ತಿದ್ದ ಕಾರಣ ‘ತೋರಣಗಲ್ಲು’ ಎಂಬ ಹೆಸರು ಬಂದಿದೆ ಎಂಬ ಪ್ರತೀತಿಯನ್ನು ದಾಖಲಿಸುವ ಮೂಲಕ ಊರಿನ ನಾಮಕರಣದ ಕುತೂಹಲವನ್ನು ಬಿಚ್ಚಿಡುತ್ತಾರೆ.

ಕೃತಿಯಲ್ಲಿ ಲೇಖಕರು ಕೇವಲ ಇತಿಹಾಸಕ್ಕೆ ಸೀಮಿತವಾಗದೆ, ತೋರಣಗಲ್ಲು ಗ್ರಾಮದ ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಮತ್ತು ರಾಜಕೀಯ ಬೆಳವಣಿಗೆಯ ಮೇಲೆ ಬೆಳಕು ಚೆಲ್ಲಿದ್ದಾರೆ. ಶಂಕರಲಿಂಗನ ಜಾತ್ರೆ, ಹಿಂದೂ – ಮುಸ್ಲಿಂ ಭಾವೈಕ್ಯತೆಯ ಪ್ರತೀಕವಾದ ಮೊಹರಂ ಆಚರಣೆ, ಜನರ ಸೌಹಾರ್ದತೆಯನ್ನು ಬಹಳ ಚಾತುರ್ಯದಿಂದ ಹಿಡಿದಿಟ್ಟಿದ್ದಾರೆ.

ಪ್ಲೇಗ್ ಹಾವಳಿಯಿಂದಾದ ಸಾವು – ನೋವುಗಳು, ಜನರು ಜೀವ ಕೈಯಲ್ಲಿ ಹಿಡಿದು ಬೇರೆ ಊರುಗಳಿಗೆ ವಲಸೆ ಹೋದ ದುರಂತ, ಊರಿನ ಪರಿಸರ, ಸಾಹಿತ್ಯ, ವೈದ್ಯಕೀಯ, ವಿಜ್ಞಾನ, ತಂತ್ರಜ್ಞಾನ, ಕ್ರೀಡೆ, ಸಿನಿಮಾ ಕ್ಷೇತ್ರದಲ್ಲಿ ಸಾಧನೆಗೈದವರ ವ್ಯಕ್ತಿ ಚಿತ್ರಣ, ಯುಗಾದಿ, ಗೌರಿಹಬ್ಬ, ಪುರಾಣ – ಕೀರ್ತನೆ – ಭಜನೆ, ಬಕ್ರೀದ್ ಹಬ್ಬಗಳಲ್ಲಿ ಹಿಂದೂ – ಮುಸ್ಲಿಂ ಬಾಂಧವರು ತೋರುವ ಭ್ರಾತೃತ್ವ – ಎಲ್ಲವನ್ನೂ ದಾಖಲಿಸಿದ್ದಾರೆ. ಜೊತೆಗೆ ದೇವದಾಸಿ ಪದ್ಧತಿಯಂತಹ ಅನಿಷ್ಟ ಇಂದಿಗೂ ಜಾರಿಯಲ್ಲಿರುವುದನ್ನು ಕಂಡು ಹೆಣ್ಣುಮಕ್ಕಳ ಮೇಲಿನ ಶೋಷಣೆಯ ಬಗ್ಗೆ ನೋವಿನಿಂದ ಬರೆದಿರುವುದು ಕೃತಿಯ ಪ್ರಬುದ್ಧತೆಯನ್ನು ತೋರಿಸುತ್ತದೆ.

ಒಟ್ಟಾರೆಯಾಗಿ ಹೇಳುವುದಾದರೆ, ಅಬ್ದುಲ್ ಹೈ ತೋರಣಗಲ್ಲು ಅವರು ತಮ್ಮ ಊರಿನ ಕುರಿತು ಹಿರಿಯರ ಮಾರ್ಗದರ್ಶನ, ಮಾಹಿತಿಯೊಂದಿಗೆ ಸಮಗ್ರ ಅಧ್ಯಯನ ನಡೆಸಿ, ತೋರಣಗಲ್ಲಿನ ಇತಿಹಾಸ ಶಾಶ್ವತವಾಗಿ ಉಳಿಯುವಂತೆ ಓದುಗ ಲೋಕಕ್ಕೆ ನೀಡಿರುವುದು ಒಂದು ಮಹತ್ವದ ದಾಖಲೆಯೇ ಸರಿ. ಅವರ ಲೇಖನಿಯಿಂದ ಇನ್ನಷ್ಟು ಸಮಾಜಮುಖಿ ಕೃತಿಗಳು ಹೊರಬರಲಿ ಎಂದು ಹಾರೈಸುತ್ತೇನೆ.


  •  ಓಂಕಾರ ಪಾಟೀಲ – ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್, ಕಾರ್ಯದರ್ಶಿಗಳು, ಬೀದರ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading