ಮಗಳು ಕೇಳಿದ ಒಂದು ಚಿಕ್ಕ ಗೊಂಬೆಗೆ 600 ರೂ ದುಬಾರಿ ಎನಿಸಿದರೂ ಶ್ರೇಯಾ ಮಗಳಿಗೋಸ್ಕರ ಕೊಂಡುಕೊಂಡಿದ್ದಳು. ಆ ಮಗು ಆ ಗೊಂಬೆಯನ್ನು ಎಷ್ಟು ಹಚ್ಚಿಕೊಂಡಿದ್ದಳೆಂದರೆ ಊಟ, ನಿದ್ದೆ ಎಲ್ಲವೂ ಮೊದಲು ಗೊಂಬೆಗೆ. ಅಂಕಣಕಾರ್ತಿ ಮಂಗಳ ಎಂ ನಾಡಿಗ್ ಅವರ ‘ಅಂಗೈಯಲ್ಲಿ ಪ್ರಪಂಚ’ ಅಂಕಣದಲ್ಲಿ ‘ಭಾವನಾತ್ಮಕ ಸಂಬಂಧ’ ತಪ್ಪದೆ ಮುಂದೆ ಓದಿ…
ಅದೊಂದು ಹಳ್ಳಿಯಲ್ಲಿರುವ ಮನೆ. ಅಲ್ಲಿ ಸಾಕಿದ್ದ ನಾಯಿ ಆ ಮನೆಯ ಯಜಮಾನ ಹೊರಗೆ ಹೊರಟಾಗ ತಾನೂ ಜೊತೆಗೆ ಹೋಗುತ್ತಿತ್ತು. ಅದು ಗದ್ದೆಯಾದರೂ ಸರಿ, ಪೇಟೆಯಾದರೂ ಸರಿ. ಕೆಲವೊಮ್ಮೆ ಪೇಟೆಯಲ್ಲಿ ಬೇರೆ ನಾಯಿಗಳು ಇದರೊಂದಿಗೆ ಜಗಳಕ್ಕೆ ಬಂದಾಗ, ಯಾರಾದರೂ ಕಲ್ಲಿನಲ್ಲಿ ಹೊಡೆದಾಗ ಈ ಯಜಮಾನನಿಗೂ ಸಂಕಟ. ಹಾಗಾಗಿ ಅವನೂ ಕೆಲವೊಮ್ಮೆ ಇದೊಂದು ಎಲ್ಲ್ಹೋದ್ರು ಬರುತ್ತೆ, ಎಷ್ಟ್ ಹೇಳಿದ್ರು ಕೇಳಲ್ಲ ಎಂದು ಬೇಸರಿಸುತ್ತಿದ್ದುದೂ ಉಂಟು. ಆ ದಿನ ಸಿಕ್ಕಾಪಟ್ಟೆ ಮಳೆ. ಪೇಟೆಗೆ ಹೋದ ಯಜಮಾನ ಮಳೆ ಬಿಟ್ಟ ನಂತರ ಮನೆಗೆ ಹೊರಟ. ಎಂದಿನಂತೆ ಜೊತೆಗೆ ಅವನ ನಾಯಿಯೂ ಹಿಂಬಾಲಿಸಿತು. ಮಳೆಯ ಕಾರಣದಿಂದ ಹಳ್ಳ ತುಂಬಿ ಹರಿಯುತ್ತಿತ್ತು. ನಾಯಿ ಮೊದಲು ಹಾರಿ ಹಳ್ಳ ದಾಟಿತು. ಆದರೆ ಮಾಮೂಲಿ ಜಾಗದಲ್ಲಿ ಹಳ್ಳ ದಾಟಲಾಗದೇ ಯಜಮಾನ ಮುಂದೆ ಎಲ್ಲಾದರೂ ದಾಟಬಹುದೇನೋ ಎಂದು ಹಳ್ಳದ ಆ ತುದಿಯಿಂದ ಈ ತುದಿಯವರೆಗೂ ಹೋದ. ನಾಯಿಯೂ ಇನ್ನೊಂದು ದಡದಲ್ಲಿ ಅದೇ ರೀತಿ ಯಜಮಾನನೊಂದಿಗೆ ನಡೆದುಕೊಂಡು ಬಂದಿತು. ಯಜಮಾನ ಹಳ್ಳ ದಾಟಿದ ಮೇಲಷ್ಟೇ ನಾಯಿ ಮನೆಯ ದಾರಿ ಹಿಡಿದದ್ದು. ಎಲ್ಲಿ ಹೊರಟರು ಬರುತ್ತೆ ಎಂದು ಬೇಸರಿಸುತ್ತಿದ್ದ ಯಜಮಾನನಿಗೆ ತನಗೋಸ್ಕರ ಆ ನಾಯಿ ಮಿಡಿದದ್ದು ನೋಡಿ ಪಾಪದ್ದು ಎಂದು ಕಣ್ಣು ತುಂಬಿ ಬಂದಿದ್ದಂತೂ ಸತ್ಯ. ಹೀಗೆ ಸಾಕುಪ್ರಾಣಿಗಳಿಗೂ ಮನುಷ್ಯನಿಗೂ ಭಾವನಾತ್ಮಕವಾಗಿ ಒಂದು ರೀತಿಯ ಸಂಬಂಧ ತನ್ನಿಂದ ತಾನೇ ಬೆಳೆದು ಬಿಟ್ಟಿರುತ್ತದೆ. ಅವುಗಳು ನೋಟ, ನಡವಳಿಕೆಯಲ್ಲಿ ಅದನ್ನು ಪ್ರಚುರಪಡಿಸುತ್ತವೆ. ಮನುಷ್ಯ ಎಷ್ಟು ಅವುಗಳನ್ನು ಪ್ರೀತಿಸುತ್ತಾನೋ ಅವುಗಳೂ ಅಷ್ಟೇ ಹಚ್ಚಿಕೊಂಡಿರುತ್ತವೆ.
ಮಗಳು ಕೇಳಿದ ಒಂದು ಚಿಕ್ಕ ಗೊಂಬೆಗೆ 600 ರೂ ದುಬಾರಿ ಎನಿಸಿದರೂ ಶ್ರೇಯಾ ಮಗಳಿಗೋಸ್ಕರ ಕೊಂಡುಕೊಂಡಿದ್ದಳು. ಆದರೆ ನಂತರದ ದಿನಗಳಲ್ಲಿ ಅವಳಿಗೆ ತಿಳಿದದ್ದು 6,000 ಕೊಟ್ಟು ಬೇರೆ ಏನಾದರೂ ಕೊಡಿಸಿದ್ದರೂ ಮಗಳಿಗೆ ಈ ಖುಷಿ ಸಿಗುತ್ತಿರಲಿಲ್ಲ ಎಂದು. ಆ ಮಗು ಆ ಗೊಂಬೆಯನ್ನು ಎಷ್ಟು ಹಚ್ಚಿಕೊಂಡಿದ್ದಳೆಂದರೆ ಊಟ, ನಿದ್ದೆ ಎಲ್ಲವೂ ಮೊದಲು ಗೊಂಬೆಗೆ. ಶ್ಯಾಂಪೂ ಹಾಕಿ ಪ್ರತಿದಿನ ಗೊಂಬೆಗೆ ಸ್ನಾನ. ತನಗೆ ಅಮ್ಮ ಕಟಿಂಗ್ ಮಾಡಿಸಿದ ದಿನ ಮನೆಗೆ ಬಂದು ಗೊಂಬೆಯ ಕೂದಲನ್ನು ಕಟ್ ಮಾಡಿ ಅದಕ್ಕೆ ಸ್ನಾನವೂ ಆಯಿತು. ಹೋಂ ವರ್ಕ್, ಓದು ಹೀಗೆ ಯಾವಾಗಲೂ ಅದು ಜೊತೆಗಿರಲೇಬೇಕು. ಅದಕ್ಕೆ “ಪುಟ್ಟು” ಎಂದು ಚೆಂದದ ನಾಮಕರಣವೂ ಆಗಿತ್ತು. ದಿನಗಳೆದಂತೆ ಅವಳ ಜೊತೆಗೆ ಮನೆಯವರೆಲ್ಲರಿಗೂ ಆ ಗೊಂಬೆ ಭಾವನಾತ್ಮಕವಾಗಿ ಬೆಸೆದದ್ದೂ ಅಷ್ಟೇ ಸತ್ಯ. ಚಿಕ್ಕ ವಯಸ್ಸಿನಲ್ಲಿ ಜೊತೆಯಾಗಿದ್ದ ಆ ಗೊಂಬೆಯನ್ನು ಅವಳು ಇನ್ನೂ ಜೋಪಾನವಾಗಿ ಎತ್ತಿಟ್ಟಿದ್ದಾಳೆ. ಅದೇ ರೀತಿ ಚಿಕ್ಕಂದಿನಿಂದ ಹತ್ತನೇ ತರಗತಿಯವರೆಗೆ ತಾನು ಉಪಯೋಗಿಸುತ್ತಿದ್ದ ಸಮವಸ್ತ್ರವನ್ನೂ ಸಹ. ಎಲ್ಲವೂ ನನ್ನ ಬಾಲ್ಯದ ನೆನಪಿಗೆ ಬೇಕೆಂದು. ಹೀಗೆ ನಾವು ಉಪಯೋಗಿಸುವ ವಸ್ತುಗಳೊಂದಿಗೆ ನಮಗೇ ಅರಿವಿಲ್ಲದಂತೆ ನಾವು ಭಾವನಾತ್ಮಕವಾಗಿ ಬೆರೆತು ಹೋಗಿರುತ್ತೇವೆ.

ಸಾಕು ಪ್ರಾಣಿಗಳಾದ ನಾಯಿ, ಬೆಕ್ಕು, ಹಸು-ಕರುಗಳು, ಎಮ್ಮೆ , ಮೊಲ, ಪಕ್ಷಿಗಳು, ಕುರಿ, ಕೋಳಿ ಹೀಗೆ ಅವುಗಳಿಗೆ ಎಲ್ಲವೂ ಸಾಕಿದವರೇ. ಅಲ್ಲಿಯ ವಾತಾವರಣವೇ ಅವುಗಳ ಪ್ರಪಂಚ. ನಾಯಿಗಳನ್ನು ಬೇರೆಯವರು ತೆಗೆದುಕೊಂಡು ಹೋದರೂ ಅವುಗಳು ಮತ್ತೆ ಇವರ ಮನೆಯನ್ನು ಹುಡುಕಿಕೊಂಡು ಬಂದ ಉದಾಹರಣೆಗಳು ಬೇಕಾದಷ್ಟಿವೆ. ಅಂತೆಯೇ ಹಲವರು ಗಿಡ ನೆಟ್ಟು ಅವುಗಳಿಗೆ ಹೆಸರಿಟ್ಟು ದಿನನಿತ್ಯ ಅವುಗಳ ಒಡನಾಟದಲ್ಲಿ ಭಾವನಾತ್ಮಕವಾಗಿ ಬೆರೆತು ಹೋಗಿರುತ್ತಾರೆ. ತಮ್ಮ ಮನೆ, ಜಮೀನು, ದನ-ಕರು, ಕೊಟ್ಟಿಗೆ, ನಾಯಿ, ಬೆಕ್ಕು, ಗದ್ದೆ-ತೋಟ, ಹುಟ್ಟಿದ ಊರು, ಅಲ್ಲಿನ ಜನ, ಅವರೊಂದಿಗಿನ ಒಡನಾಟ ಬಿಟ್ಟು ಅನೇಕರು ಬೇರೆಡೆ ಹೋಗಿರಲು ಇಷ್ಟಪಡುವುದಿಲ್ಲ. ಅದೇ ಅವರ ಪ್ರಪಂಚ. ಅಂಥವರು ಬೇರೆಡೆ ಹೋದರೂ ಅಲ್ಲಿ ಅವರಿಗೆ ಬರೀ ಸಪ್ಪೆ ಸಪ್ಪೆ. ತನ್ನದೇ ಆದ ಭಾವನೆಗಳ ಬಂಧದಲ್ಲಿ ಮುಳುಗಿದವರಿಗೆ ಅದೇ ಹೆಚ್ಚು ಆಪ್ತ.
ಹಳೆಯ ವಸ್ತುಗಳು, ಆತ್ಮೀಯರು ನೀಡಿದ ಉಡುಗೊರೆಗಳು, ಮೊದಲ ಸಂಬಳದಲ್ಲಿ ಕೊಂಡು ತಂದ ವಸ್ತು, ಮಂಚ, ಕುರ್ಚಿ, ದಿಂಬು, ಕೆಲವೊಂದು ಪಾತ್ರೆಗಳು, ಬಂದ ಕಾಗದಗಳು, ಗ್ರೀಟಿಂಗ್ ಕಾರ್ಡ್ಗಳು, ಯಾರಾದರೂ ಕೊಟ್ಟಿದ್ದ ಹಣ ಹೀಗೆ ಎಲ್ಲವುದರೊಂದಿಗೆ ಭಾವನಾತ್ಮಕವಾಗಿ ಸಂಬಂಧವನ್ನು ಹೊಂದುವುದರಿಂದ ಅವುಗಳು ಹಳೆಯದಾಗಿ ಹರಿದು ಹೋಗಿದ್ದರೂ, ಉಪಯೋಗಕ್ಕೆ ಬಾರದಿದ್ದರೂ ಜೋಪಾನ ಮಾಡುವುದಂತೂ ಸತ್ಯ. ಆ ವಸ್ತುಗಳನ್ನು ನೋಡಿದಾಗ ಅದನ್ನೊಮ್ಮೆ ನೇವರಿಸಿ, ಸವಿನೆನಪಿಗೆ ಜಾರಿ ಕಳೆಯುವ ಕ್ಷಣಗಳು ಮತ್ತೆ ನಮ್ಮ ಜೀವನದ ಉತ್ಸಾಹವನ್ನು ಹೆಚ್ಚಿಸುವುದೂ ಅಷ್ಟೇ ಸತ್ಯ. ಅದೇ ರೀತಿ ದಿನನಿತ್ಯ ಪೂಜಿಸುವ, ಪ್ರಾರ್ಥಿಸುವ ದೇವರ ವಿಗ್ರಹ, ಫೋಟೋಗಳು ಸಹ ಅರಿಯದಂತೆಯೇ ಅಂತರಾಳದಲ್ಲಿ ನೆಲೆಸಿರುವುದರಿಂದ ಭಾವನಾತ್ಮಕವಾಗಿ ಬಂಧಿಯಾಗಿರುತ್ತೇವೆ.
ಸಾಲುಮರದ ತಿಮ್ಮಕ್ಕನವರ ಗಿಡಮರಗಳ ಮೇಲಿನ ಪ್ರೀತಿ, ಮಕ್ಕಳಂತೆ ಬೆಳೆಸಿದ, ಪೋಷಿಸಿದ ಅವರ ಭಾವನೆಗೆ, ಗಿಡಮರಗಳೊಂದಿಗಿನ ಅವರ ಭಾವನಾತ್ಮಕ ಸಂಬಂಧಕ್ಕೆ ಬೆಲೆ ಕಟ್ಟಲಾದೀತೇ? ಬಹುಶಃ ಸಾಲುಮರದ ತಿಮ್ಮಕ್ಕ ತಮ್ಮ ಬಳಿ ಬಂದಾಗ ಮರಗಿಡಗಳು ಒಮ್ಮೆ ಅಲುಗಾಡಿ ತಣ್ಣನೆಯ ಗಾಳಿಯನ್ನು ತಿಮ್ಮಕ್ಕನಿಗೆ ಸೋಕಿಸದೇ ಇರಲಾರವು. ಹಾಗೇ ತಮ್ಮ ಒಡತಿ ಬಂದಾಗೊಮ್ಮೆ ಮನದಲ್ಲಾದರೂ ಬಾಗದೇ ಇರಲಾರವು.

ಫೋಟೋ ಕೃಪೆ : ಅಂತರ್ಜಾಲ
ಸಾಕಿದ ಪ್ರಾಣಿ, ಪಕ್ಷಿಗಳಿಗೆ ಏನಾದರೂ ತೊಂದರೆಯಾದಾಗ, ಕಾಯಿಲೆ ಬಂದಾಗ, ಅವುಗಳು ಮರಣ ಹೊಂದಿದಾಗ ಸಾಕಿದವರ ಸಂಕಟ ಅಷ್ಟಿಷ್ಟಲ್ಲ. ಅದೇ ರೀತಿ ತಾವಿರುವ ಮನೆಯವರಿಗೆ ಏನಾದರೂ ಆದಾಗ ಮೂಕ ಪ್ರಾಣಿಗಳೂ ನರಳುತ್ತವೆ. ಕಣ್ಣೀರು ಸುರಿಸುತ್ತವೆ. ಊಟ ಬಿಟ್ಟು ತಮ್ಮ ದುಃಖ ತೋರ್ಪಡಿಸುತ್ತವೆ. ಇದಕ್ಕೆ ಕಾರಣ ಅವುಗಳೊಂದಿಗಿನ ಭಾವನಾತ್ಮಕ ಸಂಬಂಧ. ಮನುಷ್ಯರು, ಪ್ರಾಣಿಗಳು, ಜೀವವಿಲ್ಲದಿರುವ ಎಷ್ಟೋ ವಸ್ತುಗಳು, ಸ್ಥಳಗಳು ಹೀಗೆ ನಮ್ಮ ದಿನನಿತ್ಯದ ಬದುಕಲ್ಲಿ ಭಾವನಾತ್ಮಕವಾಗಿ ಎಲ್ಲವೂ ಭಾಗಿ.
ಎಲ್ಲ ಸಂಬಂಧಗಳಿಗೂ ತನ್ನದೇ ಆದ ಸ್ಥಾನಮಾನವಿದೆ. ಬೇರೆಲ್ಲ ಸಂಬಂಧಗಳು ಹುಟ್ಟಿನಿಂದಲೋ, ಬೆಳೆಯುತ್ತಾ ಹೋದಂತೆಯೋ, ಅಪರಿಚಿತರಿಂದ ಪರಿಚಿತರಾಗಿಯೋ, ಕೆಲಸದ ಸ್ಥಳದಲ್ಲಿಯೋ, ಹೀಗೆ ಹೊರಗಿನಿಂದ ಉಂಟಾದರೆ ಭಾವನಾತ್ಮಕ ಸಂಬಂಧ ಮನಸ್ಸಿನಾಳದಿಂದ ಬರುವಂಥದ್ದು. ಎಷ್ಟೇ ಕೊಟ್ಟರೂ ಖರೀದಿಗೆ ಸಿಗುವಂಥದ್ದಲ್ಲ. ಹಾಗಾಗಿ ಅದಕ್ಕೆ ಬೆಲೆಯೂ ಜಾಸ್ತಿ ( ಹಣ ಅಲ್ಲ) ಘಾಸಿಯೂ ಜಾಸ್ತಿ. ನಿಮ್ಮ ನಿಮ್ಮ ಮನದ ಹುಚ್ಚಾಟಗಳಿಗೆ ಯಾರೂ ಇನ್ನೊಬ್ಬರ ಭಾವನೆಗಳೊಂದಿಗೆ ಆಟವಾಡಬೇಡಿ. ಸಕಾರಾತ್ಮಕ ಸ್ಪಂದನೆಯಷ್ಟೇ ಅದರ ಜೀವಾಳ. ಹಾ, ಇನ್ನೊಂದು ವಿಷಯ. ಈ ಸಂಬಂಧ ಎಲ್ಲರಿಗೂ ದಕ್ಕುವಂಥದ್ದಲ್ಲ. ದಕ್ಕಿದವರು ಜೋಪಾನ ಮಾಡಿಕೊಳ್ಳಲಿ ಎಂಬ ಆಶಯದೊಂದಿಗೆ.
- ಕೃಪೆ : ಸುತ್ತ ಮುತ್ತ ಲೇಖನಗಳ ಸಂಕಲನ
- ಹಿಂದಿನ ಸಂಚಿಕೆಗಳು :
- ಅಂಗೈಯಲ್ಲಿ ಪ್ರಪಂಚ (ಭಾಗ-೧)
- ಅಂಗೈಯಲ್ಲಿ ಪ್ರಪಂಚ (ಭಾಗ-೨)
- ಅಂಗೈಯಲ್ಲಿ ಪ್ರಪಂಚ ‘ಗಂಡು ಮಕ್ಕಳ ಮೇಲೆ ಉಂಟಾಗುವ ಲೈಂಗಿಕ ದೌರ್ಜನ್ಯ’ (ಭಾಗ-೩)
- ಅಂಗೈಯಲ್ಲಿ ಪ್ರಪಂಚ ‘ನಾನು… ನಿಮ್ಮ ದಿಂಬು’ (ಭಾಗ-೪)
- ಅಂಗೈಯಲ್ಲಿ ಪ್ರಪಂಚ ‘ಆಡಿಕೊಳ್ಳುವುದು’ (ಭಾಗ- ೫)
- ಅಂಗೈಯಲ್ಲಿ ಪ್ರಪಂಚ ‘ಕ್ರಿಯೆ ಇದ್ದ ಮೇಲೆ ಪ್ರತಿಕ್ರಿಯೆ’ (ಭಾಗ- ೬)
- ಅಂಗೈಯಲ್ಲಿ ಪ್ರಪಂಚ ‘ಹೈಸ್ಕೂಲ್, ಕಾಲೇಜು ಮಕ್ಕಳಲ್ಲಿ ಹೆಚ್ಚುತ್ತಿರುವ ಮಾದಕ ದ್ರವ್ಯಗಳ ವ್ಯಸನ’ (ಭಾಗ- ೭)
- ಅಂಗೈಯಲ್ಲಿ ಪ್ರಪಂಚ ‘ನಾನ್ರೀ ನಿಮ್ ದಾರಿ’ (ಭಾಗ- ೮)
- ಅಂಗೈಯಲ್ಲಿ ಪ್ರಪಂಚ ‘ಸಾಮಾಜಿಕ ಜವಾಬ್ದಾರಿ’ (ಭಾಗ- ೯)
- ಅಂಗೈಯಲ್ಲಿ ಪ್ರಪಂಚ ‘ಹರೆಯ ಉಕ್ಕಿ’ (ಭಾಗ- ೧೦)
- ಅಂಗೈಯಲ್ಲಿ ಪ್ರಪಂಚ ‘ಏನೇನೋ ಅಂದುಕೊಳ್ಳುವ ಮುನ್ನ’ (ಭಾಗ- ೧೧)
- ಅಂಗೈಯಲ್ಲಿ ಪ್ರಪಂಚ ‘ಮಗುವಿನ ಕಾಳಜಿ ಜೊತೆಗೆ ಜಾಗೃತಿ’ (ಭಾಗ- ೧೨)
- ಅಂಗೈಯಲ್ಲಿ ಪ್ರಪಂಚ ‘ವಯಸ್ಸಾದಂತೆ ಜೀವನ ಒಂದು ಬೋನಸ್ ’(ಭಾಗ- ೧೩)
- ಅಂಗೈಯಲ್ಲಿ ಪ್ರಪಂಚ ‘ವೃದ್ಧಾಶ್ರಮ ’ (ಭಾಗ- ೧೪)
- ಅಂಗೈಯಲ್ಲಿ ಪ್ರಪಂಚ ‘ಮಧ್ಯಮ ವರ್ಗದ ಬದುಕು’ (ಭಾಗ- ೧೫)
- ಅಂಗೈಯಲ್ಲಿ ಪ್ರಪಂಚ ‘ಕಣ್ಣೀರು’ (ಭಾಗ- ೧೬)
- ಅಂಗೈಯಲ್ಲಿ ಪ್ರಪಂಚ ‘ನಾನ್ರೀ…ನಿಮ್ ಮನೆ’ (ಭಾಗ- ೧೭)
- ಅಂಗೈಯಲ್ಲಿ ಪ್ರಪಂಚ ‘ರಸ್ತೆಯಲ್ಲಿ ವಾಹನದ ಮೇಲಿರಲಿ ಜವಾಬ್ದಾರಿ’ (ಭಾಗ- ೧೮)
- ಅಂಗೈಯಲ್ಲಿ ಪ್ರಪಂಚ ‘ವಿಘ್ನ ಸಂತೋಷಿಗಳುಶ್ರೀಲಕ್ಷ್ಮಿ ಬಹಳ ಮುದ್ದಾದ ಹುಡುಗಿ’ (ಭಾಗ- ೧೯)
- ಅಂಗೈಯಲ್ಲಿ ಪ್ರಪಂಚ ‘ಮನಸ್ಥಿತಿ’ (ಭಾಗ- ೨೦)
- ಅಂಗೈಯಲ್ಲಿ ಪ್ರಪಂಚ ‘ಮೂಡ್ ಇಲ್ಲ’ (ಭಾಗ- ೨೧)
- ಮಂಗಳ ಎಂ ನಾಡಿಗ್
