ಲೈಂಗಿಕ ಕಿರುಕುಳಕ್ಕೆ ವಯಸ್ಸು, ಲಿಂಗದ ಭೇದವಿಲ್ಲದೇ ಯಾರು ಬೇಕಾದರೂ ಬಲಿಯಾಗಬಹುದು. ಕಿರುಕುಳಕ್ಕೆ ಬಲಿಯಾದವರ ಮನೆಯಲ್ಲಿ ಒಂದು ಭಯ ಕಾಡುತ್ತಲೇ ಇರುತ್ತೆ ಸಮಾಜ ಭಯ, ಸಂಬಂಧಿಕರ ಭಯ. ‘ಗಂಡು ಮಕ್ಕಳ ಮೇಲೆ ಉಂಟಾಗುವ ಲೈಂಗಿಕ ದೌರ್ಜನ್ಯ’ ಈ ವಿಷಯದ ಕುರಿತು ಲೇಖಕಿ ಮಂಗಳ ಎಂ ನಾಡಿಗ್ ಅವರ ‘ಅಂಗೈಯಲ್ಲಿ ಪ್ರಪಂಚ’ ಅಂಕಣದಲ್ಲಿ ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಅದೊಂದು ಹುಡುಗರ ಹಾಸ್ಟೆಲ್. ಆ ವರ್ಷ ಅಲ್ಲಿಗೆ ಬಂದಿದ್ದ ಶರತ್ ಗೆ ತಿಂಗಳಾಗುವಷ್ಟರಲ್ಲಿ ಯಾವಾಗ ಅಲ್ಲಿಂದ ಮನೆಗೆ ಹೋಗುತ್ತೇನೋ ಅನ್ನಿಸಿಬಿಟ್ಟಿತ್ತು. ಎರಡು ವರ್ಷ ದೂರದ ಹಳ್ಳಿಯಿಂದ ಹೈಸ್ಕೂಲು ವಿದ್ಯಾಭ್ಯಾಸ ಮುಗಿಸಿದವನಿಗೆ ಎಸ್ ಎಸ್ ಎಲ್ ಸಿ ಇರುವಾಗ ಪ್ರತಿದಿನ ಬೆಳಿಗ್ಗೆ ಸಂಜೆ ಬಸ್ಸು ಹಿಡಿದು, ಮತ್ತೊಂದಿಷ್ಟು ನಡೆದು ಊರಿಗೆ ಹೋಗಿ ಬರುವುದರಲ್ಲೇ ಇಡೀ ದಿನ ಕಳೆಯುತ್ತದೆ, ಓದಲು ಸಮಯವೇ ಸಿಗುವುದಿಲ್ಲವೆಂಬ ಕಾರಣಕ್ಕೆ ಪಟ್ಟಣದ ಹಾಸ್ಟೆಲಿಗೆ ತಂದು ಸೇರಿಸಿದ್ದರು. ಅವನೂ ನೂರಾರು ಕನಸು ಇಟ್ಟುಕೊಂಡೇ ಬಂದಿದ್ದ. ಆದರೆ ಅಲ್ಲಿ ಆಗಿದ್ದೇನು…?
ಶಾಲೆಯಿರುವಾಗ ಬದುಕಿದೆಯಾ ಬಡಜೀವ ಎಂಬತ್ತಿರುತ್ತಿದ್ದವನು. ಸಂಜೆಯಾದರೆ ನಡುಗಲು ಶುರು ಮಾಡುತ್ತಿದ್ದ. ಮೊದಲಿನಿಂದಲೂ ಆ ರೂಮಲ್ಲಿದ್ದ 5 – 6 ಹುಡುಗರು ನೀಡುವ ಲೈಂಗಿಕ ಕಿರುಕುಳಕ್ಕೆ ಮಾನಸಿಕವಾಗಿ, ದೈಹಿಕವಾಗಿ ಜರ್ಝರಿತನಾಗಿದ್ದ. ಮೊದಮೊದಲಂತೂ ಏನು ನಡೆಯುತ್ತಿದೆ ಎಂಬ ಅರಿವೂ ಆಗದೇ ಗೊಂದಲಕ್ಕೊಳಗಾಗಿದ್ದ. ಏಕೆಂದರೆ, ಇದರ ಬಗ್ಗೆ ಅವನಿಗೆ ಹೆಚ್ಚಿನ ಅರಿವೂ ಇರಲಿಲ್ಲ. ಅಲ್ಲದೇ ಇದ್ಯಾವುದೂ ಅವನಿಗೆ ಬೇಕಿರಲೂ ಇಲ್ಲ. ಅವನ ಗುರಿ ಏನಿದ್ದರೂ ಓದಿನ ಕಡೆಗಷ್ಟೇ. ಆದರೆ ದಿನೇದಿನೇ ಜೊತೆಗಿರುವವರ ದಬ್ಬಾಳಿಕೆ ಜಾಸ್ತಿಯಾಗಿ ಅವರು ಹೇಳಿದಂತೆ ಕೇಳುವ ಪರಿಸ್ಥಿತಿ ಒದಗಿ ಮಾನಸಿಕವಾಗಿ ಕುಗ್ಗಿಹೋಗಿದ್ದ. ರಾತ್ರಿಯೆಲ್ಲಾ ಅಳು. ಬೆಳಗಾದರೆ ಮನಸ್ಸು, ದೇಹ ಎರಡೂ ಸಹಕರಿಸದೇ ಓದುವುದಂತೂ ಕನಸೇ ಎಂಬಂತಾಗಿತ್ತು. ಯಾರಿಗೂ ಹೇಳಬಾರದೆಂಬ ಬೆದರಿಕೆಗೆ ಆಡಲೂ ಆಗದೇ, ಅನುಭವಿಸಲೂ ಆಗದೇ ದಿನಾ ನರಳಾಟ. ಇದೆಲ್ಲದರಿಂದ ಆಗಾಗ ಬರುವ ತಲೆನೋವು, ಜ್ವರ. ಕೊನೆಗೆ ಜ್ವರವೇ ಜಾಸ್ತಿಯಾಗಿ ಮನೆಗೆ ಹೇಳಿಕಳಿಸಿ, ತಂದೆ-ತಾಯಿ ಬಂದಾಗ ಅವರೊಡನೆ ಹೋದವನು ಮತ್ತೆ ಹಾಸ್ಟೆಲ್ ಕಡೆ ತಿರುಗಿ ನೋಡಲಿಲ್ಲ. ಎಲ್ಲಾ ವಿಷಯವನ್ನೂ ಮನೆಯಲ್ಲಿ ಹೇಳಿ, ಹಾಸ್ಟೆಲ್ಗೆ ಹೋಗುವುದಿಲ್ಲವೆಂದು ಅತ್ತು ಹಠ ಹಿಡಿದಾಗ ಅವನ ಸಹಾಯಕ್ಕೆ ಬಂದದ್ದು ಅವನ ಅಕ್ಕ. ಯಾರು ನಂಬಿದರೋ, ಬಿಟ್ಟರೋ. ಮದುವೆಯಾಗಿ ಸಿಟಿಯಲ್ಲಿದ್ದವಳಿಗೆ ಆಗಾಗ ಪೇಪರ್ನಲ್ಲೋ, ಟಿವಿಯಲ್ಲೋ, ಅಕ್ಕಪಕ್ಕದವರಿಂದ ಇಂಥಾ ಸುದ್ದಿ ಕೇಳಿದ್ದವಳು ತಮ್ಮನ ಮಾತನ್ನು ನಂಬಿ ಅವನ ಪರವಾಗಿ ನಿಂತಿದ್ದಳು. ಅವನಿಗೆ ಸಮಾಧಾನ ಹೇಳಿ, ಮನೆಯವರಿಗೆಲ್ಲ ತಿಳಿಹೇಳಿ, ಅವನ ಭವಿಷ್ಯದ ದೃಷ್ಟಿಯಿಂದ ತನ್ನ ಮನೆಗೆ ಕರೆದುಕೊಂಡು ಹೋಗಿ ಅಲ್ಲೇ ಶಾಲೆಗೆ ಸೇರಿಸಿದ್ದಳು.

ಫೋಟೋ ಕೃಪೆ : ಅಂತರ್ಜಾಲ
ಮನೆಯ ಕಷ್ಟಕ್ಕೆ ಓದಲಾಗದೇ ಹೈಸ್ಕೂಲಿನ ಹಂತದಲ್ಲೇ ಹೋಟೆಲ್ನಲ್ಲಿ ಸರ್ವರ್ ಕೆಲಸಕ್ಕೆ ಸೇರಿದ ನಾಗೇಶನಿಗೆ, ಅಲ್ಲಿ ಜೊತೆಯಲ್ಲಿದ್ದವರಿಂದಲೇ ಲೈಂಗಿಕ ಕಿರುಕುಳ ಶುರುವಾಗಿತ್ತು. ಅಲ್ಲೇ ಕೆಲಸ ಮಾಡುತ್ತಿದ್ದ ಮಧ್ಯವಯಸ್ಸಿನ ಪುರುಷರಿಬ್ಬರು ತಮ್ಮ ತೀಟೆಗೆ ಅವನ ದೇಹವನ್ನು ಬಲವಂತವಾಗಿ ಬಳಸಿಕೊಳ್ಳಲು ಪ್ರಾರಂಭಿಸಿದ್ದು ಆ ಎಳೇ ಮನಸ್ಸಿಗೆ ಆದ ದೊಡ್ಡ ಆಘಾತ. ಯಾವುದರ ಅರಿವೂ ಇರದ ಮುಗ್ಧ ಮನಸ್ಸು, ವಯಸ್ಸಿಗೆ ಮೀರಿ ನಡೆದ ದೈಹಿಕ ಚಟುವಟಿಕೆಯಿಂದ ತನಗೇನೋ ಆಗಿದೆ ಎಂದು ಹೆದರಿ ಹೆದರಿ ಕೊನೆಗೆ ಶರಣಾಗಿದ್ದು ಆತ್ಮಹತ್ಯೆಗೆ.
ಪುಢಾರಿಗಳ ಗುಂಪೊಂದು ಕುಡಿದ ಮತ್ತಿನಲ್ಲಿ ನಡೆಸಿದ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಹುಡುಗ ಮನೆಯಲ್ಲಿ ವಿಷಯ ತಿಳಿಸಿದಾಗ ಅವನ ಮನೆಯವರೇ ಸಮಾಜಕ್ಕೆ ಹೆದರಿ ಆ ವಿಷಯ ಹೊರಹೋಗದಂತೆ ಗೌಪ್ಯತೆ ಕಾಪಾಡಿಕೊಂಡಾಗ ಆ ಹುಡುಗನಿಗೆ ಆದ ಆಘಾತ ಅಷ್ಟಿಷ್ಟಲ್ಲ. ಏಕೆಂದರೆ, ತನ್ನ ಮೇಲೆ ದೌರ್ಜನ್ಯ ಎಸಗಿದವರಿಗೆ ಶಿಕ್ಷೆ ಆಗಬೇಕೆಂಬ ಅವನ ನಿಲುವಿಗೆ ಇಲ್ಲಿ ಅವಕಾಶ ಸಿಗದೆ ತನ್ನ ಮನೆಯವರ ವರ್ತನೆಗೆ ಬೇಸತ್ತು ಅವರ ಮೇಲೆ ದ್ವೇಷವನ್ನು ಬೆಳಿಸಿಕೂಂಡ. ಇದರಿಂದ ಎಲ್ಲರೂ ಅನುಭವಿಸಿದ ಕಷ್ಟ ಅಷ್ಟಿಷ್ಟಲ್ಲ. ಕೊನೆಗೆ ಕೌನ್ಸೆಲಿಂಗ್ ನಿಂದ ಇದಕ್ಕೆ ಮುಕ್ತಿ ದೊರಕಿದ್ದು.
ಇವೆಲ್ಲಾ ಕೆಲವು ಉದಾಹರಣೆಗಳಷ್ಟೇ. ಲೈಂಗಿಕ ಕಿರುಕುಳಕ್ಕೆ ವಯಸ್ಸು, ಲಿಂಗದ ಭೇದವಿಲ್ಲದೇ ಯಾರು ಬೇಕಾದರೂ ಬಲಿಯಾಗಬಹುದು. ಹೇಳಿಕೊಂಡರೆ ಎಲ್ಲಿ ಮರ್ಯಾದೆ ಹೋಗುವುದೋ ಎಂಬ ಮನೋಭಾವನೆ, ಗಂಡೆಂಬ ಅಹಂ ಎಲ್ಲವೂ ಇಲ್ಲಿ ಇದನ್ನು ಹೇಳಲು ತಡೆಯೊಡ್ಡುತ್ತದೆ. ಏಕೆಂದರೆ, ಚಿಕ್ಕ ವಯಸ್ಸಿನಿಂದಲೂ ಒಂದು ಗಾಯವಾಗಿ ಅತ್ತರೂ ಸಹ ಅಯ್ಯೋ ನೀನು ಹುಡ್ಗ, ಹಿಂಗೆಲ್ಲಾ ಅಳ್ಬಾರ್ದು ಎಂದು ಹೇಳೀ ಹೇಳೀ ಅವರ ನೋವನ್ನು ಸಹ ಎಲ್ಲರ ಮುಂದೆ ವ್ಯಕ್ತಪಡಿಸಲಾಗದಂತಹ ಸ್ಥಿತಿಗೆ ಅವರನ್ನು ತಂದಿಟ್ಟಿರುತ್ತಾರೆ. ಇದರಿಂದಾಗಿ ಎಲ್ಲರೂ ಇದ್ದೂ ಯಾರ ಬಳಿಯೂ ಹೇಳಿಕೊಳ್ಳಲಾಗದೇ ನೋವು ಅನುಭವಿಸುತ್ತಾರೆ. ಒಂದು ವೇಳೆ ಹೇಳಿಕೊಂಡರೂ, ಗಂಡಸರು ಯಾವಾಗ್ಲೂ ಕಿರುಕುಳ ಕೊಡುವವರು, ಹೆಣ್ಣು ಮಕ್ಕಳು ಯಾವಾಗ್ಲೂ ಕಿರುಕುಳಕ್ಕೆ ಒಳಗಾಗುವವರು ಎಂಬ ಭಾವನೆ ನಮ್ಮ ಸಮಾಜದಲ್ಲಿ ಇರುವುದರಿಂದ ಇವರ ಮಾತನ್ನು ನಂಬುವ ಸಾಧ್ಯತೆಯೂ ಕಡಿಮೆ ಎಂದರೆ ತಪ್ಪಲ್ಲ. ಯಾವಾಗಲೂ ಬರೀ ಹೆಣ್ಣು ಮಕ್ಕಳ ಬಗ್ಗೆಯೇ ಈ ರೀತಿಯ ವಿಷಯಗಳು ಕೇಳಿ ಬರೋದು, ಓದೋದು, ಚರ್ಚೆ ಆಗೋದು ಸಹ. ಹಾಗಾಗಿ ಗಂಡು ಮಕ್ಕಳ ಮೇಲೂ ಲೈಂಗಿಕ ದೌರ್ಜನ್ಯ ಆಗುತ್ತದೆ ಎಂಬ ವಿಷಯವೇ ಈಗಲೂ ಅನೇಕರಿಗೆ ತಿಳಿದಿಲ್ಲ. ಒಂದು ವೇಳೆ ಮನೆಯಲ್ಲಿ ಹೇಳಿದರೂ ಅದನ್ನು ಬೇರೆಯವರಿಗೆ ತಿಳಿಯದಂತೆ ಗುಟ್ಟು ಮಾಡುತ್ತಾರೆ. ಏಕೆಂದರೆ, ಸಮಾಜದಲ್ಲಿ, ಸಂಬಂಧದಲ್ಲಿ ತಿಳಿದರೆ ಮುಂದೆ ಮದುವೆಯಾಗುವಾಗ ಕಷ್ಟ ಎಂಬ ಭಾವನೆ ಒಂದೆಡೆಯಾದರೆ ಇವರ ತಪ್ಪಿಲ್ಲದಿದ್ದರೂ ಸಹ ಇನ್ನು ಮುಂದೆ ಅವರೆಲ್ಲರೂ ಇವರನ್ನು ನೋಡುವ ದೃಷ್ಟಿ ಬದಲಾಗುವುದಂತೂ ಸತ್ಯ.
ಮತ್ತೆ ವಿಷಯಕ್ಕೆ ಬಂದರೆ, ಎಲ್ಲರೂ ಒಂದೇ ರೀತಿಯ ಲೈಂಗಿಕ ಕಿರುಕುಳಕ್ಕೆ ಒಳಗಾಗಿರುವುದಿಲ್ಲ. ಜೊತೆಗೆ ಅದರ ನಂತರದ ದಿನಗಳಲ್ಲಿ ಎಲ್ಲರ ಪ್ರತಿಕ್ರಿಯೆಯೂ ಸಹ ಬೇರೆ ಬೇರೆಯಾಗಿರುತ್ತದೆ. ಸಾಧಾರಣವಾಗಿ ಇಂಥವರಲ್ಲಿ ಕಂಡು ಬರುವ ಅಂಶಗಳೆಂದರೆ :
- ಬೇಡದೇ ಇರೋ ವಯಸ್ಸಿನಲ್ಲಿ, ಅಂದರೆ ಅದರ ಬಗ್ಗೆ ತಿಳುವಳಿಕೆ ಬರುವುದಕ್ಕಿಂತ ಮುಂಚೆಯೇ ಅದಕ್ಕೆ ಒಳಪಡುವುದರಿಂದ ತುಂಬಾ ಹೆದರುತ್ತಾರೆ.
- ಜ್ವರ ಬರುವುದು, ವಿದ್ಯಾರ್ಥಿಗಳಾದರೆ ಶಾಲೆಗೆ ಹೋಗಲು ಹಿಂದೇಟು ಹಾಕುವುದು.
- ಆತಂಕ: ಯಾವಾಗಲೂ ಏನಾಗುತ್ತದೆಯೋ ಎಂಬ ಗಾಬರಿ, ಹೆದರಿಕೆ, ಆತಂಕದಲ್ಲೇ ಇರುತ್ತಾರೆ.
- ಮಾನಸಿಕ ಅಸ್ವಸ್ಥತೆ : ದೌರ್ಜನ್ಯಕ್ಕೆ ಒಳಗಾದ ನಂತರ ಉಂಟಾಗುವ ಒತ್ತಡದ ಪರಿಣಾಮದಿಂದ ಮಾನಸಿಕವಾಗಿ ಅಸ್ವಸ್ಥರಾಗುತ್ತಾರೆ. ಹಿಂದೆ ನಡೆದಿದ್ದನ್ನೇ ಮತ್ತೆ ಮತ್ತೆ ನೆನಪು ಮಾಡಿಕೊಂಡು ಮಾನಸಿಕವಾಗಿ ನೋವು ಅನುಭವಿಸುತ್ತಾರೆ.
- ಆ ಸ್ಥಳದಿಂದ ಅಥವಾ ಆ ಜನರಿಂದ ದೂರವಿರಲು ಬಯಸುತ್ತಾರೆ.
- ಇನ್ನು ಕೆಲವರು ನಡೆದದ್ದನ್ನು ಯಾವ ರೀತಿ ತೆಗೆದುಕೊಳ್ಳಬೇಕೆಂದು ತಿಳಿಯದೇ ಲೈಂಗಿಕ ದೃಷ್ಟಿಕೋನದ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಾರೆ. ಇಲ್ಲಿ ಅವರಿಗೆ ಭಯ, ಮುಂದಿನ ಭವಿಷ್ಯದ ಬಗ್ಗೆ ಆತಂಕ ಇರುತ್ತದೆ.
- ನಡೆದ ಘಟನೆಯಿಂದ ತಮ್ಮ ಪುರುಷತ್ವದ ಬಗ್ಗೆ ನಂಬಿಕೆ ಕಳೆದುಕೊಳ್ಳುತ್ತಾರೆ ಹಾಗೂ ತಮ್ಮ ದೇಹದ ಮೇಲಿನ ಹತೋಟಿಯನ್ನೂ ಸಹ ಕಳೆದುಕೊಳ್ಳುತ್ತಾರೆ.
- ವಿಶ್ರಾಂತಿ ಪಡೆಯಲು ಸಾಧ್ಯವಾಗುವುದಿಲ್ಲ. ನಿದ್ರಾಹೀನತೆ ಮುಂತಾದ ಸಮಸ್ಯೆಗಳೂ ಕಾಡುತ್ತವೆ.
- ಸಂಬಂಧಗಳಿಂದ, ಸ್ನೇಹಿತರ ಒಡನಾಟದಿಂದ ಹೊರಬಂದು ಒಂಟಿಯಾಗಿರಲು ಬಯಸುತ್ತಾರೆ.
- ಮೊದಲೇ ಹೇಳಿದಂತೆ, ಗಂಡು ಎಂಬ ಸಮಾಜದ ಒಂದು ಮನೋಭಾವನೆ ( Stereo types) ಇರುವುದರಿಂದ ಸ್ನೇಹಿತರು, ಸಮಾಜ, ಸಂಬಂಧಿಕರ ಮುಂದೆ ಅವರಿಗೆ ಹೇಳಿಕೊಳ್ಳಲೂ ಆಗುವುದಿಲ್ಲ. ಅದರಲ್ಲೂ ಹೆಂಗಸರಿಂದ ಈ ರೀತಿಯ ಕಿರುಕುಳಕ್ಕೆ ಒಳಗಾದರಂತೂ ಅದನ್ನು ಒಪ್ಪಿಕೊಳ್ಳುವುದೂ ಕೂಡ ಅವರಿಗೆ ಕಷ್ಟವಾಗುತ್ತದೆ.
- ಅದೇ ಕೊರಗಿನಿಂದ ಕೆಲವರು ಜೀವನವೇ ಬೇಡವೆನಿಸಿ ಕೊನೆಗೆ ಆತ್ಮಹತ್ಯೆಯೆಡೆಗೆ ಸಾಗುತ್ತಾರೆ.

ಫೋಟೋ ಕೃಪೆ : ಅಂತರ್ಜಾಲ
ಇದರಿಂದ ಪಾರಾಗಿ ಬಂದವರಿಗೆ ಬೇಕಾದ ಸಹಾಯವೆಂದರೆ :
- ಮೊದಲು ಅವರು ಹೇಳಿದ್ದನ್ನು ಕೇಳಿಸಿಕೊಳ್ಳಬೇಕು. ಏಕೆಂದರೆ, ಅದನ್ನು ಹೇಳಿಕೊಳ್ಳಲು ಮುಂದೆ ಬರುವವರೇ ಕಡಿಮೆ. ಇದಕ್ಕೆ ಕಾರಣ, ಯಾರೂ ನಮ್ಮುನ್ನ ನಂಬಲ್ಲ, ಅರ್ಥಮಾಡಿಕೊಳ್ಳಲ್ಲ ಎನ್ನುವ ಅವರ ಒಳಗಿನ ಮನಸ್ಥಿತಿ.
- ಅವರ ಭಾವನೆಗೆ ಬೆಲೆ ಕೊಡಬೇಕು. ಉದಾಹರಣೆಗೆ, ಆಗಿದ್ದಾಯ್ತು, ಬಿಟ್ಬಿಡು ಎಂದು ಒಂದೇ ಬಾರಿಗೆ ಹೇಳಿ ಅವರನ್ನು ಸುಮ್ಮನಾಗಿಸುವ ಬದಲು ಹೌದು, ನೀನು ತುಂಬಾ ಕಷ್ಟ ಅನುಭವಿಸಿದ್ಯ, ಈಗಷ್ಟೇ ಅದರಿಂದ ಪಾರಾಗಿ ಬಂದಿದ್ಯ, ಇದ್ರಲ್ಲಿ ನಿನ್ನ ತಪ್ಪೇನೂ ಇಲ್ಲ, ನಾನು ನಿನ್ನುನ್ನ ನಂಬ್ತೀನಿ ಎಂದಾಗ ಅವರಿಗೆ, ಇವರು ತಮ್ಮ ಮಾತನ್ನು ಕೇಳಿಸಿಕೊಂಡಿದ್ದಾರೆ, ತಮ್ಮ ನೋವಿಗೆ ಸ್ಪಂದಿಸುತ್ತಿದ್ದಾರೆ ಎಂಬ ಭಾವನೆ ಬರುವುದರ ಜೊತೆಗೆ ಎಲ್ಲವುದನ್ನೂ ಹೇಳಿಕೊಂಡು ಹಗುರಾಗಲು ಪ್ರಯತ್ನಿಸುತ್ತಾರೆ.
- ಅವರ ಬಗ್ಗೆ ನಮಗಿರುವ ಕಾಳಜಿಯನ್ನು ಅರ್ಥ ಮಾಡಿಸಬೇಕು. ನಾ ನಿಂಜೊತೆ ಇದೀನಿ, ಇನ್ಮುಂದೆ ನಾನು ನಿನ್ನ ಕಾಳಜಿ ವಹಿಸ್ತೀನಿ ಎಂದು ಅವರಿಗೆ ಭರವಸೆ ನೀಡಬೇಕು.
- ಲೈಂಗಿಕ ಕಿರುಕುಳ ನಡೆದುದರ ಬಗ್ಗೆ ಇನ್ನೂ ಹೆಚ್ಚು ತಿಳಿದುಕೊಳ್ಳುವ ಆಸಕ್ತಿ ಇದ್ದರೂ ಕೂಡ ಅವರನ್ನು ಕೆದಕೀ ಕೆದಕೀ ಮತ್ತೆಮತ್ತೆ ಅದರ ಬಗ್ಗೆ ಕೇಳಬೇಡಿ. ಒಂದು ವೇಳೆ ಅವರಾಗೇ ಹೇಳಿದರೆ ತಾಳ್ಮೆಯಿಂದ ಪೂರ್ತಿ ಕೇಳಿಸಿಕೊಂಡು ನಂತರ ಅವರಿಗೆ ಸಪೋರ್ಟಿವ್ ಆಗಿರಿ.
- ಅವರಿಗೆ ಬೇಕಾದ ಮಾನಸಿಕ ಅಥವಾ ಆರ್ಥಿಕ ಸಹಾಯ ಮಾಡಿ.
- ಲೈಂಗಿಕ ಕ್ರಿಯೆ ನಡೆದ ಸಮಯದಲ್ಲಿ ಅವರು ಮಾನಸಿಕವಾಗಿ ಅದಕ್ಕೆ ಸಿದ್ಧವಾಗಿಲ್ಲದಿದ್ದರೂ ಅವರ ಶರೀರ ಹತೋಟಿಯಲ್ಲಿಲ್ಲದೇ ನಡೆಯುವ ಪ್ರತಿಕ್ರಿಯೆಯಿಂದ ಅವರು ಕುಗ್ಗಿ ಹೋಗುತ್ತಾರೆ. ಉದಾಹರಣೆಗೆ, ನಾನು ಹೀಗೆ ಮಾಡಿದ್ನಾ? ನನ್ನಿಂದ ಹೀಗಾಯ್ತಾ ಅಂತ. ಆದರೆ ಆ ಸಮಯದಲ್ಲಿ ಏನಾಗುತ್ತಿದೆಯೆಂದು ತಿಳಿಯದೇ ನಡೆಯುವ ಪ್ರಕೃತಿ ಸಹಜಕ್ರಿಯೆ ಅದು. ಇದರಿಂದ ಅವರು ತುಂಬಾ ಬೇಸರಕ್ಕೆ ಒಳಪಟ್ಟಿರುತ್ತಾರೆ. ಆದರೆ ಈ ಸಮಯದಲ್ಲಿ ತಮ್ಮದಲ್ಲದ ತಪ್ಪಿಗೆ ಅವರು ಬೇಸರಕ್ಕೆ ಒಳಪಡಬಾರದೆಂದು ಬೇರೆಯವರು ಅವರಿಗೆ ತಿಳಿಸಿ ಹೇಳಬೇಕು.
- ಮಾನಸಿಕ ಚಿಕಿತ್ಸೆಯ ಅಗತ್ಯ : ನುರಿತ ವೈದ್ಯರನ್ನು ಭೇಟಿಯಾಗಿ ಬೇಕಾದ ಸಲಹೆ, ಸೂಚನೆ ಕೊಡಿಸಿ ಅವರನ್ನು ಮಾನಸಿಕ ಖಿನ್ನತೆಯಿಂದ ಹೊರತರಬೇಕು.
ಹಿಂದಿನ ಸಂಚಿಕೆಗಳು :
- ಮಂಗಳ ಎಂ ನಾಡಿಗ್ – ಗೀತ ರಚನಾಕಾರರು, ಲೇಖಕಿ, ಬೆಂಗಳೂರು.
