ವಚನ ಚಿಂತನ (ಭಾಗ-೪)

ಬಸವಣ್ಣನವರ ಬಗ್ಗೆ ಸಿದ್ಧರಾಮ ಶರಣರು ಇಟ್ಟುಕೊಂಡಿದ್ದ ಭಕ್ತಿ , ಗೌರವ ಎದ್ದು ಕಾಣುತ್ತವೆ. ಸಿದ್ಧರಾಮ ಶರಣರು ಈ ವಚನದಲ್ಲಿ ಹೇಳಿದ್ದಾರೆ, ಡಾ.ಯಲ್ಲಪ್ಪ ಮಾಳಪ್ಪ ಯಾಕೊಳ್ಳಿ ಅವರು ‘ಬಸವಾಕ್ಷರತ್ರಯವ ನೆನೆ ನಿತ್ಯ ಪದವು’ದ ವಚನದ ತಾತ್ಪರ್ಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಅರ್ಚಿಸಲು ಬೇಡವದು
ಪೂಜಿಸಲು ಬೇಡ
ನಿತ್ಯ ಜಪ ತಪ ನೇಮ ನಿನಗೆ ಬೇಡ
ಸಚ್ಚಿದಾನಂದ ಗುರು ಕಪಿಲಸಿದ್ಧ ಮಲ್ಲಿಕಾರ್ಜುನನ
ಬಸವಾಕ್ಷರತ್ರಯವ ನೆನೆ ನಿತ್ಯ ಪದವು

ಹನ್ನೆರಡನೆಯ ಶತಮಾನದ ಶರಣರಿಗೆ ಬಸವಣ್ಣನವರು ಮಾರ್ಗದರ್ಶಕರು ಮಾತ್ರವಾಗಿರಲಿಲ್ಲ. ಗುರುವೂ, ದೈವವೂ ಆಗಿದ್ದರು ಎನ್ನುವದಕ್ಕೆ ಮೇಲಿನ ವಚನದಂತಹ ಸಾವಿರ ಸಾವಿರ ವಚನಗಳು ಸಾಕ್ಷಿಯಾಗಿವೆ. ಇಡೀ ಶರಣರ ವಚನಗಳನ್ನು ಗಮನಿಸಿದರೆ ಇಂತಹ ಸಾವಿರಾರು ವಚನಗಳು ದೊರಕುತ್ತವೆ. ಅವನ ಮಹಾ ವ್ಯಕ್ತಿತ್ವವನ್ನು ಸಮೀಪದಿಂದ ಕಂಡ ಅವರು ಅದನ್ನು ಅಕ್ಷರರೂಪಕ್ಕಿಳಿಸಿದ್ದರು.

ಸಿದ್ಧರಾಮ ಶರಣರು ಸೊನ್ನಲಾಪುರದಿಂದ ಅಲ್ಲಮಪ್ರಭುವಿನೊಂದಿಗೆ ಕಲ್ಯಾಣಕ್ಕೆ ಬಂದು ನೆಲೆ ನಿಂತವರು ಎಂಬುದು ಈಗ ಎಲ್ಲರೂ ತಿಳಿದಿರುವ ಇತಿಹಾಸವೇ. ಅಲ್ಲಮ ಇಡೀ ಶರಣ ಸಂಕುಲಕ್ಕೆ ಗುರುವಾಗಿ ಅನುಭವ ಮಂಟಪದ ಹಿರಿತನವನ್ನೊಪ್ಪಿಕೊಂಡರೆ ಸಿದ್ಧರಾಮ ಮಹಾಯೋಗಿಯಾಗಿ ಹೆಸರಾದವನು. ಸೊಡ್ಡಳ ಬಾಚರಸನೆಂಬ ಶರಣ ಸಿದ್ಧರಾಮ ಶಿವಯೋಗಿಯನ್ನು ಕುರಿತು ‘ಯೋಗಿಗಳ ಯೋಗಿ ಶಿವಯೋಗಿ ಸೊಡ್ಡಳ ಸಿದ್ಧರಾಮನೊಬ್ಬನೆ ಯೋಗಿ’ ಎಂದು ಸ್ತುತಿಸಿರುವದೂ ಉಂಟು. ಬಸವಣ್ಣನವರೊಂದಿಗೆ ಎಲ್ಲ ಶರಣರ ಹಾಗೆ ಸಿದ್ಧರಾಮನದು ಗುರು ಶಿಷ್ಯ ಸಂಬAಧವೇ. ಎಲ್ಲ ಶರಣರೂ ಬಸವಣ್ಣನವರ ರಾಜಕೀಯ ಹಿರಿತನಕ್ಕೆ ಮಾತ್ರವಲ್ಲದೇ ಅವರಲ್ಲಿರುವ ಅನುಭಾವಿಕ ಹಿರಿತನಕ್ಕೂ ಅವರನ್ನು ಗುರುವೆಂದು ಸ್ವೀಕರಿಸಿದ್ದರು ಮಾತ್ರವಲ್ಲ, ಬದುಕಿದ್ದಾಗಲೇ ಎಲ್ಲ ಶರಣರಿಗೆ ಬಸವಣ್ಣ ಶ್ರೇಷ್ಠ ಜಂಗಮ ರಾಗಿ ಲಿಂಗಸ್ವರೂಪಿಯಾಗಿ ಕಾಣಿಸಿದ್ದರು.

ಈ ಮೇಲಿನ ವಚನದಲ್ಲಿಯೂ ಬಸವಣ್ಣನವರ ಬಗ್ಗೆ ಸಿದ್ಧರಾಮ ಶರಣರು ಇಟ್ಟುಕೊಂಡಿದ್ದ ಭಕ್ತಿ , ಗೌರವ ಎದ್ದು ಕಾಣುತ್ತವೆ. ಬಸವನೆಂಬ ಹೆಸರು ಆ ಕಾಲದ ಶರಣರಿಗೆ ಹೆಸರಾಗಿ ಕಾಣಿಸದೇ ಬಸವತ್ರಯಾಕ್ಷರ ಮಂತ್ರವಾಗಿ ಕಾಣಿಸಿತ್ತು. ಅದಕ್ಕೆ ಇಲ್ಲಿ ಸಿದ್ಧರಾಮ ತನ್ನ ಭಕ್ತಿಯನ್ನು ಈ ವಚನದ ಮೂಲಕ ಬಿತ್ತರಿಸುತ್ತಾನೆ. ವಯಸ್ಸಿನಿಂದ ಬಸವಣ್ಣನವರು ಸಿದ್ಧರಾಮನಿಗಿಂತ ಹಿರಿಯರಾಗಿದ್ದರು. ಬಸವಣ್ಣನವರ ಅಳಿಯ ಚೆನ್ನಬಸವಣ್ಣನವರೇ ಸಿದ್ಧರಾಮನಿಗೆ ದೀಕ್ಷಾಗುರುಗಳಾಗಿದ್ದರಿಂದ ಇದು ಸ್ಪಷ್ಟವಾಗುತ್ತದೆ. ಹೀಗಾಗಿ ಬಸವಣ್ಣನವರನ್ನು ತನ್ನ ಮಾರ್ಗದರ್ಶಕರು ಎಂದು ಸಿದ್ಧರಾಮ ಕಂಡಿದ್ದರಲ್ಲಿ ಅಚ್ಚರಿಯಿಲ್ಲ. ಬಹುಶ: ವಚನ ರಚನೆಯಲ್ಲಿಯೂ ಬಸವಣ್ಣನವರ ರಚನೆಗಳೇ ಅವನಿಗೆ ಮಾರ್ಗದರ್ಶನ ಮಾಡಿರುವಂತೆ ತೋರುತ್ತದೆ. ಇನ್ನೊಂದು ವಚನದಲ್ಲಿ ಸಿದ್ಧರಾಮನೇ ಸ್ವತ:

ಆದ್ಯರ ವಚನಕ್ಕೆ,
ಅಷ್ಟಾವರಣದ ಸಂಗನಬಸವಯ್ಯನ ವಚನವ ಕೇಳಿ
ಪದ್ಮಿನಿಯಲ್ಲಿ ಬೆರಗಾದ ಕಾಮಿಯಂತೆ,
ಎರೆದು ನಿದ್ರಿಪ ಬಾಲನಂತೆ
ಕಾಯವ ದಣಿಸಿದ ಕೃಷಿವಲನ ನಿದ್ರೆಯಂತೆ
ಪರವಶನಾದೆ ಕಾಣಾ, ಕಪಿಸಿದ್ಧಮಲ್ಲಿಕಾರ್ಜುನ

ಎಂದು ಹೇಳಿರುವದೂ ಉಂಟು. ಈ ವಚನದ ಪ್ರಕಾರ ಸಿದ್ಧರಾÀಮನಿಗೆ ಆದ್ಯರು ಎಂದರೆ ಸಂಗನಬಸವಯ್ಯನವರೇ ಎನ್ನುವದು ಸ್ಪಷ್ಟ. ಆದ್ದರಿಂದ ಅವರ ವಚನಗಳನ್ನೋದಿದ ತಾನು ಪದ್ಮಿನಿಗೆ ಬೆರಗಾದ ಕಾಮಿಯ ಹಾಗೆ, ಎರೆದುಕೊಂಡು ಮಲಗಿದ ಮಗುವಿನ ಹಾಗೆ, ದುಡಿದು ದಣಿದು ಎಲ್ಲ ಮರೆತು ಮಲಗಿದ ಕೃಷಿಕನ ಹಾಗೆ ಮೈಮರೆತಿದ್ದೇನೆ ಎನ್ನುತ್ತಾನೆ. ಬಸವಣ್ಣನವರ ವ್ಯಕ್ತಿತ್ವದ ಆಕರ್ಷಿತನಾಗುವದಕ್ಕೆ ಅವರ ವ್ಯಕ್ತಿತ್ವದಂತೆ ಅವರ ವಚನಗಳೂ ಅವನ ಮೇಲೆ ಪ್ರಭಾವ ಮಾಡಿದ್ದವು ಎನ್ನುವದು ಇಲ್ಲಿ ಸ್ಪಷ್ಟವಾಗುತ್ತದೆ.

ಸ್ವತ: ಯೋಗಿಯಾಗಿ ನಾನಾ ಬಗೆಯ ಆಚರಣೆಗಳನ್ನು ಮಾಡುತ್ತ ಬಂದಿದ್ದ ಸಿದ್ಧರಾಮನೇ ಇಲ್ಲಿ ‘ಅರ್ಚಿಸಲು ಬೇಡವದು ಪೂಜಿಸಲು ಬೇಡ’ ಎನ್ನುತ್ತಿರುವದು ಆತ ಭಕ್ತಿಯ ದಾರಿಯಲ್ಲಿ ಸ್ವತ: ಕಂಡುಕೊAಡ ಸತ್ಯವಾಗಿದೆ. ನಿತ್ಯ ಜಪ ತಪಗಳೂ ಕಂಡುಕೊಳ್ಳದ ಪರಮ ಮುಕ್ತಿ ಮಾರ್ಗವನ್ನು ಬಸವಾಕ್ಷರತ್ರವೆಂಬ ನಮಾಮೃತವು ತಂದು ಕೊಡುತ್ತದೆ ಎಂಬ ಪ್ರಬಲ ನಂಬಿಕೆ ಅವನದಾಗಿದೆ. ಅದಕ್ಕೆ ಬಸವಣ್ಣನವರಿಗೂ ಸಚ್ಚಿದಾನಂದ ಗುರು ಕಪಿಲಸಿದ್ಧ ಮಲ್ಲಿಕಾರ್ಜುನನಿಗೂ ಯಾವುದೆ ಅಂತರ ಕಾಣಿಸುವದಿಲ್ಲ. ಹೀಗಾಗಿ ತನ್ನ ಮನಸ್ಸಿಗೆ ಸಚ್ಚಿದಾನಂದ ಗುರು ‘ಕಪಿಲಸಿದ್ಧ ಮಲ್ಲಿಕಾರ್ಜುನನ ಬಸವಾಕ್ಷರತ್ರಯವ ನೆನೆ ನಿತ್ಯ ಪದವು’ ಎಂದಿದ್ದಾನೆ. ಅಂದರೆ ಆ ಬಸವಾಕ್ಷರತ್ರಯವೇ ನಿತ್ಯ ನೆನೆಯುವ ಪದವೂ ಅಗಿದೆ. ನಾಮಾಮೃತದ ಪರಿಣಾಮವನ್ನು ವಚನ ಸೂಕ್ಷö್ಮವಾಗಿ ನೆನಪಿಸುತ್ತದೆ. ಶಿವನ ನೆನಹು ಬೆರೆಯಲ್ಲ, ಬಸವಣ್ಣನ ಹೆಸರಿನ ನೆನಹು ಬೇರೆಯಲ್ಲ ಕಪಿಲಸಿದ್ಧನ ನೆನಹು ಬೇರೆಯಲ್ಲ ಎನ್ನುವದು ಸಿದ್ಧರಾಮ ಶರಣರ ಸ್ಪಷ್ಟ ನಂಬಿಗೆಯಾಗಿದೆ. ಯಾವ ಬಗೆಯ ಅರ್ಚನೆ ನೇಮಗಳೂ ತಂದುಕೊಡದ ಬಲವನ್ನು ನಾಮಾಮೃತ ತಂದು ಕೊಡುತ್ತದೆ ಎನ್ನುವದು ಶರಣರ ವಚನಗಳಲ್ಲಿ ಚಿತ್ರಿತವಾಗಿದೆ. ಒಂದೆಡೆ ಈ ನಾಮಾಮೃತದ ಮಹಿಮೆಯನ್ನು ಸ್ವತ: ಬಸವಣ್ಣನವರೇ ವಿವರಿಸುತ್ತ “ಎದೆ ಬಿರಿವನ್ನಕ್ಕರ , ಮನ ದಣಿವನ್ನಕ್ಕರ , ನಾಲಗೆ ನಲ ನಲಿದಾಡುವನ್ನಕ್ಕರ ನಿಮ್ಮನಮಾಮೃತವ ತಂದೆರಸು ಕಂಡಯ್ಯ” ಎಂದು ಕೇಳಿಕೊಳ್ಳುವದು ಕಾಣಿಸುತ್ತದೆ.

ಹೀಗಾಗಿ ಸಿದ್ಧರಾಮ ಶರಣರ ಈ ವಚನವೂ ಬಸವ ನಮಾಕ್ಷರತ್ರಯವನ್ನು ಸ್ವತ: ಕಪಿಲಸಿದ್ಧ ಮಲ್ಲಿಕಾರ್ಜುನನೊಂದಿಗೆ ಸಮೀಕರಿಸುತ್ತದೆ. ಬಸವಣ್ಣನವರ ಮೇಲೆ ಸಿದ್ಧರಾಮ ಶರಣರು ಇರಿಸಿಕೊಂಡಿದ್ದ ಭಕ್ತಿ ಗೌರವಕ್ಕೆ ಸಾಕ್ಷಿಯಾದ ಐತಿಹಾಸಿಕ ವಚನವಾಗಿ ತೋರುತ್ತದೆ.


  • ಡಾ.ಯಲ್ಲಪ್ಪ ಮಾಳಪ್ಪ ಯಾಕೊಳ್ಳಿ – ನಿವೃತ್ತ ಪ್ರಾಚಾರ್ಯರು.

Leave a Reply

Home
Search
Menu
Recent
About
×