ಎಂಟು ಜ್ಞಾನಪೀಠಗಳ ಕಿರೀಟ ಧರಿಸಿದ ಭಾಷಾ ಸಂಪತ್ತಿನ ಹೆಮ್ಮೆಯ ಕೋಡು ನಮ್ಮದು…ಕೊಡಗಿನ ಕವಿಯತ್ರಿ ಶಿವದೇವಿ ಅವನೀಶಚಂದ್ರ ಅವರ ಲೇಖನಿಯಲ್ಲಿ ಅರಳಿದ ಕನ್ನಡ ಗೀತೆ, ತಪ್ಪದೆ ಮುಂದೆ ಓದಿ…
ಕನ್ನಡವೆಂಬುದು ನನ್ನಯ ಉಸಿರು
ಚೆನ್ನುಡಿಯಿದು ಆಡಲು ಭಾವದೊಸರು
ಲಿಪಿಲಾಲಿತ್ಯದ ಚೆಲುವಿನ ಕುಸುರು
ಜ್ಞಾನ ಧಾರೆ ಹರಿಸಿಹ ನುಡಿನವಿರು
ಅನ್ಯಭಾಷೆಗಳ ಗೆಳತಿ ಇವಳು
ಭಾರತಾಂಬೆಯ ಹಿರಿಮಗಳು
ಕಂಪು ಮಲ್ಲಿಗೆಯ ಸಿರಿ ಮುಗುಳು
ಔದಾರ್ಯದ ಸಿರಿಮಡಿಲು
ಇದು ‘ಕುರಿತೋದದೆಯುಂ ಕಾವ್ಯ
ರಚಿಸುವ’ ಜನಪದರ ಎದೆ ಹಾಡು
ಗಂಧದ ಬೀಡು ಚಿನ್ನದ ನಾಡು
ಕನ್ನೆಲವಿದು ಕರುನಾಡು
ತುಂಗೆ ಕೃಷ್ಣೆಯರ, ಕಾವೇರಿ ಗೋದೆಯರ
ಜಲಸಿಂಚಿತ ಹಸಿರಿನ ನಾಡು
ಹಕ್ಕ ಬುಕ್ಕ ಪುಲಿಕೇಶಿ ವಿಕ್ರಮರ
ಶೌರ್ಯ ಮೆರೆದ ಸಾಮ್ರಾಜ್ಯದ ಬೀಡು
ಕವಿ ಕೋವಿದ ಋಷಿ ಮುನಿ ಸಂತರ
ವಿದ್ವತ್ತಿನ ನೆಲೆವೀಡು
ಕಲ್ಲಿನಲಿ ಕಲೆಯ ವೈಭವ ಮೆರೆಸಿದ
ಚತುರಶಿಲ್ಪಿಗಳ ಹೆಮ್ಮೆಯ ಕರುನಾಡು
ಹಲವು ಭಾಷಿಕರು ಸ್ನೇಹದಿ ಬಾಳುವ
ಸೊಗಸಿನ ಕನ್ನಡ ನಾಡು
ಸಂಗೀತ ನಾಟ್ಯ ಕಲಾವಿದರಿಗಾಶ್ರಯವೀ
ಸಿರಿನಾಡು
ವೀರ ವನಿತೆಯರಾಳಿದ, ಬಳ್ಳದಲಿ
ನವರತ್ನಗಳನಳೆದ ಸಿರಿ ಸಂಪತ್ತಿನ ನಾಡು
ಹೊರನಾಡಿಗರ ಕೈಬೀಸಿ ಕರೆವ
ಬೆರಗಿನ ಸೊಬಗಿನ ಕರುನಾಡು
ಎಂಟು ಜ್ಞಾನಪೀಠಗಳ ಕಿರೀಟ ಧರಿಸಿದ
ಭಾಷಾ ಸಂಪತ್ತಿನ ಹೆಮ್ಮೆಯ ಕೋಡು
ಕಾವ್ಯಗಂಗೆ ನಿರುತ ಹರಿಯುವ
ಪಾವನ ನೆಲವೀ ಚೆಂದದ ನಾಡು
ನನ್ನದಿದು ನನ್ನದು ನನ್ನದಿದು ನನ್ನದು
ನಿತ್ಯ ಆಡುಂಬೊಲವಿದು ನನ್ನ ಬೆಳೆಸಿದ ನಾಡು
ನುಡಿ ಜೇನು ಕುಡಿಸಿದ ತಾಯಿನಾಡು
ನನ್ನ ನಿತ್ಯಸಂಜೀವಿನಿಯೀ ಕನ್ನಡ ನಾಡು….
- ಶಿವದೇವಿ ಅವನೀಶಚಂದ್ರ
