ಲೇಖಕಿ ಧಾರಿಣಿ ಮಾಯಾ ಅವರ ‘ಮೌನದ ಚಿಪ್ಪಿನೊಳಗೆ’ ಅವರ ಕೃತಿಯ ಕುರಿತು ಹಿರಿಯ ಲೇಖಕರಾದ ವಿಜಯೇಂದ್ರ ಪಾಟೀಲ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ : ಮೌನದ ಚಿಪ್ಪಿನೊಳಗೆ (ಲೇಖನಗಳ ಸರಮಾಲೆ)
ಲೇಖಕಿ: ಧಾರಿಣಿ ಮಾಯಾ
ಬೆಲೆ: ೧೭೦.00
ಪುಟ : ೧೪೬
ಪ್ರಕಾಶನ : ಸಾಹಿತ್ಯಲೋಕ ಪಬ್ಲಿಕೇಷನ್ಸ್
ಯುಗಗಳಿಂದಲೂ ಕಾಡುತ್ತಿರುವ ಹೆಣ್ಣು ಮಕ್ಕಳ ಸಮಸ್ಯೆಗಳ ಬಗ್ಗೆ ರಾಮಾಯಣಕ್ಕಿಂತ ಹೆಚ್ಚಿನ ಸಂಖ್ಯೆಯ ಪುಸ್ತಕಗಳು ಬಂದಿವೆ.ಮತ್ತು ಬರುತ್ತಲೂ ಇವೆ.ಇದರ ಅರ್ಥವೇನು? ಬಹುಶಃ ಈ ಸಮಸ್ಯೆ ಪೂರ್ತಿ ಪರಿಹಾರ ಕಂಡಿಲ್ಲ.ಮತ್ತು,ಹೆಣ್ಣುಮಕ್ಕಳು ತಮ್ಮ ಪ್ರಯತ್ನ ಬಿಟ್ಟಿಲ್ಲ.
ಧಾರಿಣಿ ಮಾಯಾ ಹಳೆಯದಕ್ಕೆ ಸೇರಿಕೊಂಡ ಮತ್ತಷ್ಟು ಹೊಸದೆನ್ನಬಹುದಾದ (ಅವೇ) ಸಂಗತಿಗಳನ್ನು ಬೇರೆ ಬೇರೆ ಮಗ್ಗುಲಿನಿಂದ ಸರಣಿಯಾಗಿ ಮನಕ್ಕೆ ಮುಟ್ಟುವಂತೆ ಬರೆಯುವ ಪ್ರಯತ್ನ ಮಾಡಿದ್ದಾರೆ.

ಸೂಕ್ಷ್ಮ ದೇಹ ಮತ್ತು ಮನಸ್ಸುಗಳಿರುವ,ಗಂಡಸರಿಗೆ ಸಮಸಮವಾಗಿ ಬದುಕಬಂದ,ವಿಭಿನ್ನ ಸಾಮರ್ಥ್ಯವಿರುವ,ತೀವ್ರವಾಗಿ ಬದುಕಲಿಚ್ಛಿಸುವ ಹೆಣ್ಣುಗಳು ಕಾರಣವಿಲ್ಲದೆ ಅನುಭವಿಸುವ ಸಾರ್ವತ್ರಿಕ ಹಿನ್ನಡೆಯ ಹಲವಾರು ಚಿತ್ರಣಗಳು, ವಿವರಗಳು, ವಿಶ್ಲೇಷಣೆಗಳು ಇಲ್ಲಿ ಚರ್ಚೆಗೊಳಗಾಗಿವೆ. ಜೊತೆಯಲ್ಲಿಯೇ ಇದ್ದರೂ ಸರಿಸಮ, ಜೊತೆಗಾತಿ ಎಂದು ಪರಿಗಣಿಸದ ಜಗತ್ತಿನ ಬಗ್ಗೆ ತೀವ್ರ ನೋವಿರುವುದನ್ನು ಇಂಥವರ ಪ್ರತಿನಿಧಿಯಾಗಿ ಮಾಯಾ ಇಲ್ಲಿ ಪ್ರಸ್ತುತ ಪಡಿಸುತ್ತಾರೆ.ಈ ನೋವು ಕೊಡುವವರು ಗಂಡಸರು ಮಾತ್ರವಾಗಿರದೆ ಕೆಲವು ಸಾರಿ ಮಕ್ಕಳು,ಜೊತೆಗಿರುವ ಮಹಿಳೆಯರು ಮತ್ತು ತಂದೆ-ತಾಯಿಗಳು ಕೂಡ ಆಗಿರಬಹುದೆಂಬ ನಿಷ್ಪಕ್ಷಪಾತದ ನಿಲುವನ್ನು ಕೂಡ ಲೇಖಕಿ ತಾಳುತ್ತಾರೆ.
‘ನೀವು ವರ್ಕಿಂಗ್ ವುಮನ್ನಾ ಅಥವಾ ಕೇವಲ ಹೌಸ್ ವೈಫಾ!’ ಎಂದು ಕೇಳುವವರಲ್ಲಿ ಲಿಂಗಭೇದದ ಉದ್ದೇಶವಿಲ್ಲ.ಈ ಸಣ್ಣದೆನ್ನಿಸುವ ಪ್ರಶ್ನೆಯ ಹಿಂದಿರುವುದು ಮಾತ್ರ ದೊಡ್ಡ ವಾಸ್ತವದ, ಸೂಕ್ಷ್ಮ ಮನಸ್ಸು ಎದುರಿಸಬೇಕಾದ ಆಘಾತವೇ ಆಗಿದೆ.
ಈ ಲೇಖನಗಳನ್ನೆಲ್ಲ ಓದಿದಾಗ ಹೆಣ್ಣಿನ ಬೇಡಿಕೆಗಳು ತೀರ ತುಟ್ಟಿಯವೇನೂ ಅಲ್ಲ ಎಂದು ಮನಸ್ಸು ಒಪ್ಪಿಕೊಳ್ಳುತ್ತದೆ.ಆದರೆ ಇವುಗಳ ಅನುಷ್ಠಾನಕ್ಕೆ ಬರುವ ಅಡಚಣೆಯಾದರು ಏನು ಎಂಬುದೇ ಹೆಣ್ಣು ಲೋಕದ ಬಲು ದೊಡ್ಡ ಪ್ರಶ್ನೆಯಾಗಿ ಇನ್ನೂ ಉಳಿಯುತ್ತದೆ.
ಹದಿನೈದು ಅಧ್ಯಾಯಗಳನ್ನು ಲೇಖಕಿಯ ಆಲೋಚನೆಯ ಕ್ರಮಕ್ಕನುಸರಿಸಿ ನಾವು ೩-೪ ಅನುಕೂಲಕರ ಭಾಗವಾಗಿಸಿದಾಗ ಇದನ್ನು ಗ್ರಹಿಸುವುದು ಸುಲಭವಾಗಬಹುದು. ಸಂಸಾರವನ್ನು ಒಪ್ಪಮಾಡಿಕೊಂಡು ಬಾಳುವುದರಲ್ಲಿ ಗಂಡಿನ ಕಾರಣದಿಂದ ಉಂಟಾಗುವ ಸಮಸ್ಯೆಗಳನ್ನು ಮೊದಲಿನ ಹತ್ತು ಲೇಖನಗಳು ಚರ್ಚಿಸುತ್ತವೆ.ಇವುಗಳಲ್ಲಿ ದುಡಿತವೂ ಸೇರಿದಂತೆ ಒಂದು ಸಬಲ ವ್ಯಕ್ತಿತ್ವವಾಗಿ ಹೆಣ್ಣನ್ನು ಪರಿಗಣಿಸದ ನೋವಿನ ಸೋದಾಹರಣ ಚಿತ್ರಣಗಳಿವೆ.ಮದುವೆಯೇ ಒಂದು ಕಾರಣವಾಗಿ ತನ್ನ ಸೃಜನಶೀಲತೆ,ಆರ್ಥಿಕ ಸ್ವಾತಂತ್ರ್ಯ,ಸಾಮಾಜಿಕ ಬದುಕು,ಕಲಾತ್ಮಕ ಜಗತ್ತನ್ನೆಲ್ಲ ಕಳೆದುಕೊಂಡು ದುಡಿಯಲು ಸಿಕ್ಕ ಒಂದು ಆಳಿನ ರೀತಿಯಲ್ಲಿ ಬಾಳುವೆ ಮಾಡಬೇಕಾದ ಪರಿಸ್ಥಿತಿಯಲ್ಲಿ ಬಹಳಷ್ಟು ಹೆಣ್ಣು ಮಕ್ಕಳು ನಲುಗುತ್ತಿರುವ ನೋವನ್ನು ಮಾಯಾ ಸಾರುವಂತೆ ಹೇಳುತ್ತಾರೆ. ಸ್ವತಃ ತಮ್ಮನ್ನು ಮನೆಯ ನಾಯಕಿಯೆಂದು ನಂಬಿಸಿಕೊಳ್ಳುತ್ತಾರೆ. ಆದರೂ ಮೂಕಹಕ್ಕಿಯ ಬದುಕಿನ ಕರುಣಾಜನಕ ಅವಸ್ಥೆಯನ್ನು ಅವರು ಮೀರಲಾರರು.ಸಂಸಾರ ರಥದ ಗಾಲಿಗಳಾಗಿ ಬಾಳುವ ಹೆಣ್ಣುಮಕ್ಕಳ ಆಸೆಯನ್ನು ಗಟ್ಟಿಗೊಳಿಸಿಕೊಳ್ಳುತ್ತಲೆ ಸಾಗುತ್ತಾರೆ.ಬಂಧವಿರದ ಬದುಕಿನ ಸುಂದರ ಕನಸನ್ನು ಬಿತ್ತಿಕೊಳ್ಳುತ್ತಾರೆ. ಪರಸ್ಪರರು ಒಂದು ಥ್ಯಾಂಕ್ಸ್ ಹೇಳುವುದರ ಮೂಲಕ,ಸಾರಿ ಹೇಳುವುದರ ಮೂಲಕ ಎಷ್ಟೊಂದು ಹತ್ತಿರ ಬರಬಹುದಲ್ಲ,ಎಂದು ಸಂಸಾರವನ್ನು ಸರಿಗಮ ಆಗಿಸಬಹುದಾದ ಸುಲಭ ದಾರಿ ತೋರಿಸುತ್ತಾರೆ.ಒಂದು ಹೂಗುಚ್ಛ,ಸಣ್ಣ ಉಡುಗೊರೆ,ಒಂದು ಶುಭಾಶಯ ಕೂಡ ಎಲ್ಲರನ್ನು ಎಷ್ಟೆಲ್ಲ ರೀತಿಯಲ್ಲಿ ಹಿಡಿದಿಡುತ್ತದೆಂಬ ನಂಬಿಕೆ ಹುಟ್ಟಿಸುತ್ತಾರೆ.ವಾರಕ್ಕೊಮ್ಮೆಯಾದರು ತನ್ನ ಗಂಡ ಮನೆಕೆಲಸ,ಅಡಿಗೆ ಮಾಡುವ ಸುಂದರ ಕನಸನ್ನು ಕಾಣಬಯಸುತ್ತಾರೆ.

ಮಕ್ಕಳ ಮನಸ್ಥಿತಿ,ಅದೂ ಈ ಕಾಲದ ಮಕ್ಕಳ ಬಗೆಗೆ ತೆಗೆದುಕೊಳ್ಳ ಬೇಕಾದ ವಿಶೇಷ ಎಚ್ಚರಿಕೆ,ಅವರಿಗೆ ನೀಡಬೇಕಾದ ತಿಳುವಳಿಕೆ,ಶಾಲೆಗಳಿಗೆಂದು ಕಾಯದೆ ಮನೆಯಲ್ಲಿಯೇ ನೀಡಬೇಕಾದ ಲೈಂಗಿಕ ಶಿಕ್ಷಣದ ಅನಿವಾರ್ಯತೆಗಳ ಬಗ್ಗೆ ಉದಾಹರಣೆ ಸಹಿತ ವಿವರಿಸುತ್ತಾರೆ.ಹೆಣ್ಣುಮಕ್ಕಳ ಸುರಕ್ಷತೆಯ ಬಗ್ಗೆ,ಅವರ ಶೋಷಣೆಯ ಬಗ್ಗೆ ಪ್ರತ್ಯೇಕ ಲೇಖನಗಳೆ ಇವೆ.ಅದು ಈ ಕಾಲದ ತೀವ್ರ ಅಗತ್ಯ ಎಂಬುದನ್ನು ಗುರುತಿಸುತ್ತಾರೆ.
ಈ ಸಂಕಲನ ಇಷ್ಟವಾಗಲು ಒಂದು ಮಹತ್ವದ ಕಾರಣವೇನೆಂದರೆ ಎಲ್ಲಿಯೂ ಪುರುಷ ದ್ವೇಷ ಸಾರುವ ಭಾವ ಅಥವಾ ಭಾಷೆಯಿಲ್ಲದಿರುವುದು.ಜೊತೆಯಾಗಿ ಇರಲು ಬಂದವರು ಅನುನಯಿಸಿಕೊಂಡು ಸಾಗಬೇಕಾದಾಗ ಬೇಕಾಗುವ ಸೂಚನೆಗಳನ್ನೇ ಇಲ್ಲಿ ಮುಂದುಮಾಡಲಾಗಿದೆಯೇ ಹೊರತು ವಿವಾದಗಳಿಗೆ ಹೆಚ್ಚಿನ ಅವಕಾಶ ಕೊಟ್ಟಿಲ್ಲ.ಪುರುಷರಿಗಾಗಿಯೇ ಇಲ್ಲಿ ನಾಲ್ಕು ಲೇಖನಗಳಿವೆ. ಪುರುಷರು ಸಂಸಾರದಲ್ಲಿ, ಹೆಂಡತಿಯ ಜೊತೆ ಎಷ್ಟು ಚನ್ನಾಗಿ ತೊಡಗಬಹುದೆಂದು, ಬದುಕಬಹುದೆಂಬ ಕೆಲವು ಒಳ್ಳೆಯ ‘ಟಿಪ್ಸ್’ಗಳನ್ನು ಲೇಖನದಲ್ಲಿ ನೀಡಲಾಗಿದೆ. ಅಪ್ಪನ ಬಗೆಗೆ ಸದ್ಭಾವನೆ ಹುಟ್ಟಿಸುವ ಆಪ್ತ ಲೇಖನವೂ ಇದೆ.
ಈ ಎಲ್ಲವುಗಳಿಂದ ಭಿನ್ನವಾಗಿ ನಿಲ್ಲುವ ‘ಒಂಟಿ ಬೆಳ್ಳಕ್ಕಿಯಾಗಿ ಹಾರುವ ವನಿತೆಯರು’ ಮತ್ತು ‘ಹೆಣ್ಮಕ್ಳೇ ಸ್ಟ್ರಾಂಗ್ ಗುರು’ ಎಂಬ ಲೇಖನಗಳೂ ಇದರಲ್ಲಿವೆ. ಒಂಟಿ ಹೆಣ್ಣು ತನ್ನ ಸಂತೋಷ,ಆತ್ಮ ಗೌರವ ಮತ್ತು ವ್ಯಕ್ತಿತ್ವ ದರ್ಶನ,ಜ್ಞಾನ ವರ್ಧನೆ ಮಾಡಿಕೊಳ್ಳಲು ಜಗತ್ತಿನ ಯಾವ ಭಾಗಕ್ಕಾದರು ಪ್ರವಾಸ ಹೋಗುವುದು ಒಂದಾದರೆ ಹೆಣ್ಣು ಮಕ್ಕಳ ಆತ್ಮ ವಿಶ್ವಾಸ ಹೆಚ್ಚಿಸುವುದು ಇನ್ನೊಂದು. ಬಹುಶಃ, ಹೇಳುವಷ್ಟು ಹೇಳಿಯಾದ ಮೇಲೆ,ಕೊನೆಗೆ ಹೆಣ್ಣು ಇಂತಹ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆಂಬ ಸೂಚನೆಯೂ ಇದರಲ್ಲಿ ಇದ್ದಿರಬಹುದು! ಇದಕ್ಕೆ ಪೂರಕವಾಗಿಯೇನೊ ಎಂಬಂತೆ ಇರುವ ಲಹರಿ ಎಂಬ ಎರಡು ಲೇಖನಗಳು ಈ ಪುಸ್ತಕಕ್ಕೆ ಹೊರಗಿನಿಂದ ಅಂಟಿಕೊಂಡ ಲಲಿತ ಪ್ರಬಂಧಗಳಂತೆ ಕಾಣುತ್ತವೆ.
ಈ ಲೇಖನಗಳ ಒಟ್ಟು ಸಾರವನ್ನು ಸ್ತ್ರೀವಾದ ಎಂಬ ಒಂದು ಪದದಲ್ಲಿ ನಾನು ಬಂಧಿಸಲಾರೆ. ಅದರಾಚೆಯ ಹಕ್ಕುಗಳನ್ನಾಗಿಸದ ಹಲವು ಒಲವಿನ ನಡೆಗಳಿವೆ. ಪರಸ್ಪರರು ಪ್ರೀತಿ – ಗೌರವಗಳ ಸಹ ಬಾಳ್ವೆ ನಡೆಸಬೇಕೆಂಬ ಪ್ರಾಮಾಣಿಕ ತುಡಿತವಿದೆ. ವೈಚಾರಿಕತೆಯ ಒಟ್ಟಂದ ಆಧುನಿಕತೆಯನ್ನು ಒಪ್ಪಿದಾಗಲೂ ಮಕ್ಕಳನ್ನು ಬೆಳೆಸುವಂತಹ ಸಂದರ್ಭಗಳಲ್ಲಿ ಕೆಲವು ಕಡೆ ಸುರಕ್ಷಿತ ಎನ್ನಿಸಬಹುದಾದ ‘ಹಳೆಯ ಕಾಲದ’, ‘ಶಿಷ್ಟ ಎನಿಸುವ’ ನಿಲುವನ್ನು ನೆನಪಿಸಿಕೊಳ್ಳುತ್ತದೆ.
ಈ ಪುಸ್ತಕ ಅಥವಾ ಇಂತಹ ಪುಸ್ತಕಗಳಿಗೆ ಒಂದು ಮಿತಿಯೂ ಇರುತ್ತದೆ.ಇಲ್ಲಿಯ ಲೇಖನಗಳು ಮೇಲ್ಮಧ್ಯಮ ವರ್ಗದ ಬದುಕನ್ನೇ ಮುಖ್ಯವಾಗಿಸಿಕೊಂಡು ಬೇರೆಯದರತ್ತ ನೋಡದೆ ಸಾಗುತ್ತವೆ.ಅಶಿಕ್ಷಿತ ಅಥವಾ ಅರೆ ಶಿಕ್ಷಿತ ಸಣ್ಣ ನಗರಗಳ,ಹಳ್ಳಿಗಳ ಹೆಣ್ಣು ಮಕ್ಕಳ ಯೋಚನೆಯನ್ನು ಈ ಲೇಖನಗಳು ಮಾಡುವುದಿಲ್ಲ.ಹೀಗಾಗಿ ಬಲು ದೊಡ್ಡ ಪ್ರಮಾಣದ ಸ್ತ್ರೀ ಲೋಕ ಇದರಾಚೆಯೇ ಉಳಿಯುತ್ತದೆ.
ಈ ಪುಸ್ತಕಕ್ಕಾಗಿ ಧಾರಿಣಿ ಮಾಯಾ ಅವರಿಗೆ ಪ್ರೀತಿಯ ಅಭಿನಂದನೆಗಳು.
(ಹತ್ತು ತಿಂಗಳ ಹಿಂದೆ ಕೊಟ್ಟ ಈ ಪುಸ್ತಕವನ್ನು ಮತ್ತೊಮ್ಮೆ ಓದಿ ಅದರ ಬಗ್ಗೆ ಕೆಲವು ಸಾಲು ಬರೆಯಲು ತಡವಾಯಿತು,ಮಾಯಾ. ಅದಕ್ಕಾಗಿ ದಯವಿಟ್ಟು ಮನ್ನಿಸಿ!)
- ವಿಜಯೇಂದ್ರ ಪಾಟೀಲ – ಬೆಂಗಳೂರು.
