ಬೆಕ್ಕು ‘ಮಿಯಾವ್’ ಎಂದ ಸದ್ದು ಕೇಳಿದಂತಾಗಿ ಎದ್ದು ಹೋಗಿ ಕಿಟ್ಟು-ಪುಟ್ಟು ಬಂದಿರಬಹುದೆಂದು ಬಾಗಿಲು ತೆರೆದು ನೋಡುತ್ತಿದ್ದೆವು. ಆ ಬೆಕ್ಕಿನ ಮರಿ ತುಂಬಾ ಮುದ್ದಾಗಿತ್ತು. ಆ ಮುದ್ದು ಬೆಕ್ಕಿನ ಮರಿಯನ್ನು ನೋಡಿ ಅದರ ಚೆಲುವಿಗೆ ಮತ್ತು ಮುಗ್ಧತೆಯಿತ್ತು. ಅಂಕಣಕಾರ್ತಿ ಕೆ.ಸಿ. ರತ್ನಶ್ರೀ ಶ್ರೀಧರ್ ಅವರ ಹಂಚಿಕೊಂಡಿದ್ದಾರೆ. ತಪ್ಪದೆ ಓದಿ ಅವರ ‘ಮೂಕ ಜಗತ್ತಿನ ಸುತ್ತ ನಮ್ಮ ಜಗತ್ತು’ ಅಂಕಣ…
ಈಗ ಕಿಟ್ಟು-ಪುಟ್ಟುವಿನ ತಿರುಗಾಟ ಅನಿಯಮಿತವಾಗಿ ನಡೆದಿತ್ತು. ಯಾವಾಗಲೋ ಆಚೆ ಹೋಗುವುದು, ನೆನಪಾದಾಗ ಮನೆಗೆ ಬರುವುದು. ಕೆಲವೊಂದು ದಿನ ರಾತ್ರಿ ಕಳೆದು ಬೆಳಗಿನ ಜಾವ ಬರುವುದು ಅಥವಾ ಒಂದು ದಿನ ಬಿಟ್ಟು ಮನೆಗೆ ಬರುವುದು ಮಾಡುತ್ತಿದ್ದವು. ಅದೊಂದು ದಿನ ಕಿಟ್ಟು ಆಚೆ ಹೋದವನು ಮೂರು ದಿನವಾದರೂ ಮನೆಗೆ ಬರಲಿಲ್ಲ. ಆ ನಂತರ ಒಬ್ಬನೇ ಮನೆಯಲ್ಲಿದ್ದ ಪುಟ್ಟು ಹೊರಗೆ ಹೋದವನು ಒಂದು ವಾರದವರೆಗೂ ಮನೆಗೆ ಬರಲೇ ಇಲ್ಲ. ಕಿಟ್ಟು ಪುಟ್ಟು ಇಬ್ಬರೂ ಇಲ್ಲದ ಮನೆ ಬಿಕೋ ಎನ್ನುತ್ತಿತ್ತು.
ಹೀಗೆಯೇ ಇನ್ನೊಂದು ವಾರ ಕಳೆಯಿತು. ಅದೆಷ್ಟೋ ಬಾರಿ ರಾತ್ರಿ ಮಲಗಿದ್ದಾಗ, ಬೆಕ್ಕು ‘ಮಿಯಾವ್’ ಎಂದ ಸದ್ದು ಕೇಳಿದಂತಾಗಿ ಎದ್ದು ಹೋಗಿ ಕಿಟ್ಟು-ಪುಟ್ಟು ಬಂದಿರಬಹುದೆಂದು ಬಾಗಿಲು ತೆರೆದು ನೋಡುತ್ತಿದ್ದೆವು. ನಂತರ ಎಲ್ಲೋ ಭ್ರಮೆ ಇರಬೇಕು ಎಂದು ಸುಮ್ಮನಾಗುವುದು ನಡದೇ ಇತ್ತು. ಹಗಲು ಹೊತ್ತಿನಲ್ಲೂ ಮನೆಯಾಚೆ ಹೋದಾಗಲೆಲ್ಲಾ ಎಲ್ಲಾ ಕಡೆ ನಮ್ಮ ಕಣ್ಣುಗಳು ಕಿಟ್ಟು-ಪುಟ್ಟವನ್ನು ಹುಡುಕುತ್ತಿದ್ದವು. ಅವುಗಳು ಮಾತ್ರ ಎಲ್ಲೂ ಕಾಣಿಸುತ್ತಿರಲಿಲ್ಲ. ಹೀಗೆಯೇ ಕಿಟ್ಟು ಪುಟ್ಟು ಮನೆಯಿಂದ ಹೋಗಿ 15 ದಿನಗಳೇ ಕಳೆದು ಹೋಗಿದ್ದವು.
ಈ ಮಧ್ಯೆ, ನಮ್ಮ ಸಂಬಂಧಿಕರ ಮನೆಯಲ್ಲಿ ಅವರ ಮಗ, ಅವರ ಕಾಲೇಜಿನಲ್ಲಿದ್ದ ಬೆಕ್ಕಿನ ಮರಿಯನ್ನು ತಂದಿರುವುದಾಗಿ ತಿಳಿಸಿದರು. ಮತ್ತು “ನಮ್ಮ ಮನೆಯಲ್ಲಿ ಯಾರಿಗೂ ಬೆಕ್ಕು ಇಷ್ಟ ಇಲ್ಲ. ಅದು ಕಾಲೊರೆಸುವ ಮ್ಯಾಟ್ ಗಳ ಮೇಲೆಲ್ಲಾ ಉಚ್ಚೆ ಮಾಡುತ್ತೆ. ನಮಗಂತೂ ಅದನ್ನು ಆಚೆ ಹಾಕಿದರೆ ಸಾಕಾಗಿದೆ. ನಿಮಗೆ ಹೇಗಿದ್ರು ಬೆಕ್ಕು ಇಷ್ಟ ಅಲ್ವಾ? ನೀವೇ ತೆಗೆದುಕೊಂಡು ಹೋಗಿ” ಎಂದು ಪದೇಪದೇ ಫೋನ್ ಮಾಡ್ತಾ ಇದ್ರು. ಒಂದು ದಿನ ನಾನು ಅವರ ಮನೆಗೆ ಹೋದಾಗ ಆ ಮುದ್ದು ಬೆಕ್ಕಿನ ಮರಿಯನ್ನು ನೋಡಿ ಅದರ ಚೆಲುವಿಗೆ ಸೋತು ಹೋಗಿದ್ದೆ.

ಫೋಟೋ ಕೃಪೆ : ಅಂತರ್ಜಾಲ
ಮನೆಗೆ ಬಂದವಳು, “ಆ ಬೆಕ್ಕಿನ ಮರಿ ತುಂಬಾ ಮುದ್ದಾಗಿದೆ. ಅದನ್ನು ನಮ್ಮನೆಗೆ ತರೋಣರೀ. ಹೇಗಿದ್ರೂ ಕಿಟ್ಟು-ಪುಟ್ಟು ಎರಡು ವಾರಗಳಿಂದ ಮನೆಗೆ ಬಂದಿಲ್ಲ. ಮುಂದೆ ಕೂಡ ಮನೆಗೆ ಬರ್ತಾವೋ ಇಲ್ಲವೊ ಗೊತ್ತಿಲ್ಲ” ಎಂದು ನನ್ನವರಲ್ಲಿ ಅವಲತ್ತುಕೊಂಡೆ. ಮಗ ಕೂಡ ಮೈಸೂರಿನಿಂದ ಫೋನ್ ಮಾಡಿ, ಆ ಬೆಕ್ಕಿನ ಮರಿಯನ್ನು ಮನೆಗೆ ತರಲು ಒತ್ತಾಯಿಸುತ್ತಿದ್ದ. ಮತ್ತೆರಡು ದಿನದಲ್ಲಿ ಅವರ ಮನೆಗೆ ಹೋಗಿದ್ದ ನನ್ನ ಪತಿ, ಆ ಮುದ್ದು ಬೆಕ್ಕಿನ ಮರಿಯನ್ನು ನೋಡಿ ಅದರ ಚೆಲುವಿಗೆ ಮತ್ತು ಮುಗ್ಧತೆಗೆ ಮನಸೋತು ಕಾರಿನಲ್ಲಿ ಕರೆದುಕೊಂಡು ಬಂದರು.
ಬೆನ್ನಿನ ಮೇಲೆ ಅಲ್ಲಲ್ಲಿ ಕಂದು ಮಚ್ಚೆ ಇರುವ ಅಚ್ಚ ಬಿಳಿ ಮೈಬಣ್ಣದ, ಮೈತುಂಬ ಸೊಂಪಾಗಿ ಬೆಳೆದ ದಟ್ಟ ಕೂದಲಿನ, ಬುಡದಿಂದ ತುದಿಯವರೆಗೂ ದಪ್ಪವಾಗಿರುವ ‘ಬುಷಿ’ ಬಾಲದ ‘ಏಜಿಯನ್’ ಜಾತಿಯ ಮುದ್ದು ಮರಿ ನಮ್ಮನೆಗೆ ಬಂದ. ಇವನನ್ನು ಬಿಳಿ ಪುಟ್ಟ, ಚಿಕ್ಕ ಪುಟ್ಟ, ಮುದ್ದು ಪುಟ್ಟ ಅಂತ ಕರೆದೆವು. (ಅದೇ ಹೆಸರೇ ಅವನಿಗೆ ಪರ್ಮನೆಂಟ್ ಆಯ್ತು) ಅವನಿಗಾಗಿ ಒಂದು ರಟ್ಟಿನ ಬಾಕ್ಸಲ್ಲಿ ಮನೆ ತರ ಮಾಡಿ, ಬಾಕ್ಸಿನ ಒಳಹೋಗಲು ಮತ್ತು ಹೊರಬರಲು ಮಧ್ಯದಲ್ಲಿ ದೊಡ್ಡ ಒಂದು ರಂದ್ರ ಮಾಡಿಟ್ಟೆವು. ಅದರೊಳಗೆ ಹೋಗಿ ಬಂದನಾದರೂ ರಾತ್ರಿ ಅದರಲ್ಲಿ ಮಲಗಲಿಲ್ಲ. ನಮ್ಮ ಕಾಲ ಬಳಿಯೇ ಬಂದು ಮಲಗಿದ.
ಮಾರನೇ ದಿನ ಬೆಳಿಗ್ಗೆಯೇ ನಮ್ಮ ಸಂಬಂಧಿಕರ ಮನೆಯವರು ಫೋನ್ ಮಾಡಿ, “ಬೆಕ್ಕನ್ನ ಕಳಿಸಿದ್ಮೇಲೆ ನಮ್ಮನೇಲಿ ಯಾರೂ ಊಟ ಮಾಡಲಿಲ್ಲ. ಮಗ ರಾತ್ರಿ ನಿದ್ದೆನೂ ಮಾಡಿಲ್ಲ. ಇವನು ತುಂಬಾ ಹಚ್ಚಿಕೊಂಡಿದ್ದಾನೆ” ಅಂದ್ರು. ಅವರ ಉತ್ಪ್ರೇಕ್ಷಯ ಮಾತುಗಳು ನನಗೆ ಮೊದಲೇ ಗೊತ್ತಿತ್ತು. ಹಾಗಾಗಿ, ತಕ್ಷಣವೇ ನಾನು “ಹೌದುರೀ…. ನಿಮ್ಮ ಸಂಕಟ ನನಗೆ ಅರ್ಥ ಆಗುತ್ತೆ. ಬೇಜಾರು ಮಾಡ್ಕೋಬೇಡಿ, ಸಾಯಂಕಾಲ ನಿಮ್ಮ ಮಗ ಕಾಲೇಜಿನಿಂದ ಬರುವಾಗ ನಮ್ಮ ಮನೆಯ ಮೂಲಕವೇ ಬಂದು ಹೋಗಲು ತಿಳಿಸಿ. ಬೆಕ್ಕನ್ನು ಅವನ ಜೊತೆ ಕಳಿಸ್ತೀನಿ” ಅಂದೆ. ನನ್ನ ಮಾತಿಗೆ ಆ ಕಡೆಯಿಂದ ಉತ್ತರವೇ ಇಲ್ಲ. ಬೇರೇನೋ ವಿಷಯಾಂತರ ಮಾಡಿ ಫೋನ್ ಇಟ್ಟರು. ನಂತರ ಅವರಿಂದ 15 ದಿನಗಳವರೆಗೂ ಯಾವ ಫೋನೂ ಬರಲಿಲ್ಲ. ಮುದ್ದು ಪುಟ್ಟ ನಮ್ಮನೆಯಲ್ಲೇ ಉಳಿದ.
ನಮ್ಮ ಮನೆಗೆ ಬಂದು ಎರಡು ದಿನದಲ್ಲಿ ಅವನಿಗೆ ಶೌಚಾಲಯ ಬಳಸುವುದನ್ನು ಕಲಿಸಿದೆ. ಬೆಳಿಗ್ಗೆ ಎದ್ದ ಕೂಡಲೇ ಶೌಚಕ್ಕೆ ಹೋಗೋದಕ್ಕೆ ಕೆಲವೊಮ್ಮೆ ಹಠ ಮಾಡ್ತಾ ಇದ್ದ. ಆಗ ಅವನನ್ನು ಅಲ್ಲೇ ಬಿಟ್ಟು ಬಾಗಿಲು ಮುಚ್ಚಿ, ಅವನು ಮುಗಿಸುವವರೆಗೂ ಬಾಗಿಲು ತೆಗೆಯುತ್ತಿರಲಿಲ್ಲ. ಅವನು ಹಠಮಾರನಾದರೆ ನಾನು ಮೊಂಡುಹಠಕ್ಕೆ ಬಿದ್ದು ಕಲಿಸಿದೆ. ಮೊದಲಿಗೆ ಹಠ ಮಾಡಿದನಾದರೂ ಆಮೇಲೆ ತುಂಬಾ ಚೆನ್ನಾಗಿ ಶೌಚಾಲಯ ಬಳಸುವುದನ್ನು ಅಭ್ಯಾಸ ಮಾಡಿಕೊಂಡ.
ಒಂದು ಶೌಚಾಲಯದ ಬಾಗಿಲ ಬೋಲ್ಟ್ ಹಾಕುತ್ತಿರಲಿಲ್ಲ. ಅವನಿಗೆ ಬೇಕೆಂದಾಗ ಬಾಗಿಲು ತಳ್ಳಿಕೊಂಡು ಹೋಗುತ್ತಿದ್ದ. ಅವನು ಒಳಗೆ ಕೂತಿದ್ದಾಗ ಬಾಗಿಲಿಂದ ಹೊರಗೆ ಯಾರಾದರೂ ಓಡಾಡಿದರೆ ಸಾಕು ಅವನಿಗೆ ಎಲ್ಲಿಲ್ಲದ ಕೋಪ ಬರುತ್ತಿತ್ತು. ಮುಖವನ್ನು ಸಿಂಡರಿಸಿಕೊಂಡು ಜೋರಾಗಿ ‘ವ್ಯಂಯ್’ ಎಂದು ಬೈಯುತ್ತಿದ್ದ.
ಬಿಳಿ ಪುಟ್ಟ ತುಂಬಾ ಫ್ರೆಂಡ್ಲಿ ಬೆಕ್ಕು. ಇವನಿಗೆ ಮನುಷ್ಯರನ್ನು ಕಂಡರೆ ಭಯವೇ ಇರಲಿಲ್ಲ. ಯಾರು ಕರೆದರೂ ಹತ್ತಿರ ಬರ್ತಾ ಇದ್ದ. ಮುದ್ದು ಮಾಡಿಸ್ಕೊಳ್ತಾ ಇದ್ದ. ಮನೆಗೆ ಯಾರೇ ಹೊಸಬರು ಬಂದರೂ ಅವರ ಪಕ್ಕ ಹೋಗಿ ಕೂರುತ್ತಿದ್ದ. ನಾಯಿಗಳ ಬಗ್ಗೆಯೂ ಅವನಿಗೆ ಭಯ ಇರಲಿಲ್ಲ. ಹಾಗಾಗಿ, ಈ ಬಿಳಿ ಪುಟ್ಟನನ್ನು ಮಾತ್ರ ಹೊರಗೆ ಬಿಡಲೇಬಾರದು ಎಂದು ಮೊದಲೇ ನಿರ್ಧರಿಸಿದ್ದೆವು.
ಆಗ ನಮ್ಮ ಮಗ ಮೈಸೂರಿನ ಇನ್ಫೋಸಿಸ್ ನಲ್ಲಿದ್ದ. ವಾರದ ಕೊನೆಗೆ ಬೆಂಗಳೂರಿನ ಮನೆಗೆ ಬಂದಾಗ, ಪುಟ್ಟನನ್ನು ತನ್ನ ಬಳಿ ಮಲಗಿಸಿಕೊಳ್ಳುವ ಆಸೆಯಿಂದ ಹರಸಾಹಸ ಮಾಡುತ್ತಿದ್ದ. ಆದರೆ, ಈ ಮುದ್ದು ಪುಟ್ಟನಿಗೆ ಅದು ಇಷ್ಟ ಆಗ್ತಾ ಇರ್ಲಿಲ್ಲ. ಯಾವುದೇ ಒತ್ತಾಯಕ್ಕೂ ಮುದ್ದು ಪುಟ್ಟ ಬಗ್ಗುತ್ತಿರಲಿಲ್ಲ. ಅವನಿಗೆ ಇಷ್ಟ ಆದ್ರೆ ಮಾತ್ರ ಅವನೇ ಬಂದು ನಮ್ಮ ಬಳಿ ಮಲಗುತ್ತಿದ್ದ. ನಾವಾಗಿ ಒತ್ತಾಯಿಸಿದರೆ ಬಿಲ್ಕುಲ್ ಮಲಗುತ್ತಿರಲಿಲ್ಲ. ಅವನಿಗೆ ಇಷ್ಟವಿಲ್ಲದ ಕೆಲಸ ಮಾಡಿದರೆ ಅವನಿಗೆ ತಕ್ಷಣವೇ ಮೂಗಿನ ಮೇಲೇ ಕೋಪ ಬರುತ್ತಿತ್ತು. ಮುಖದಲ್ಲಿ ಭಾವನೆಗಳನ್ನು ಬಹಳ ಚೆನ್ನಾಗಿ ವ್ಯಕ್ತಪಡಿಸುತ್ತಿದ್ದ.

ಫೋಟೋ ಕೃಪೆ : ಅಂತರ್ಜಾಲ
ಮುದ್ದು ಪುಟ್ಟ ನಮ್ಮನೆಗೆ ಬಂದು ಸುಮಾರು ಒಂದು ತಿಂಗಳಾಗಿತ್ತು. ಅದೊಂದು ಭಾನುವಾರ ಮಧ್ಯಾಹ್ನ ಕಿಟ್ಟುನ ತಮ್ಮ ಪುಟ್ಟುವಿನ ಮಧುರ ಧ್ವನಿ ಕೇಳಿಸಿತು.
ತಕ್ಷಣವೇ ನಾನು ಮತ್ತು ಮಗ ಮನೆಯ ಆಚೆ ಓಡಿ ಬಂದು ಎಲ್ಲಾ ಕಡೆ ಹುಡುಕಾಡತೊಡಗಿದೆವು. “ಬಾ ಪುಟ್ಟು ಎಲ್ಲಿದ್ದೀಯ ಬಾರೋ, ಬಾರೋ ಕಂದ” ಎಂದು ಕೂಗಿದೆ. ನಮ್ಮ ಪಕ್ಕದ ಮನೆಯ ಹಿಂಭಾಗದ ಮನೆಯ ಸೂರಿನ ಒಳಗಿನಿಂದ ಪುಟ್ಟನ ಮಧುರ ಧ್ವನಿ ಮಾರ್ಧನಿಸಿತು. ಅಲ್ಲಿ ಹೋಗಿ ನೋಡಿದಾಗ ಹಿಂಬದಿಯ ಶೀಟಿನ ಸಂಧಿಯೊಳಗೆ ದೊಡ್ಡ ಪುಟ್ಟ ಕುಳಿತಿರುವುದು ಕಂಡಿತು.
“ಇಳಿದು ಬಾರೋ” ಎಂದರೆ ಬರುತ್ತಿಲ್ಲ. ಕೊನೆಗೆ ನಮ್ಮ ಮಗ ಕಷ್ಟಪಟ್ಟು ಹಿಂಬದಿಯ ಕಾಂಪೌಂಡ್ ಮೇಲೆ ಹತ್ತಿ ನಿಂತು ಪುಟ್ಟನನ್ನು ಎತ್ತಿಕೊಳ್ಳಲು ಹೋದರೆ, ಹೆದರಿಕೊಂಡು ಇನ್ನಷ್ಟು ಹಿಂದಕ್ಕೆ ಸರಿದು ಮುದುರಿಕೊಳ್ಳುತ್ತಿದ್ದ. ಗೋಡೆಗೆ ಕೈ ತರಚಿಸಿಕೊಂಡು, ಪುಟ್ಟನಿಂದ ಪರಚಿಸಿಕೊಂಡರೂ ಬಿಡದೆ ದೊಡ್ಡ ಪುಟ್ಟನನ್ನ ಕಡೆಗೂ ಇಳಿಸುವಲ್ಲಿ ಸಫಲನಾದ. ಕೆಳಗೆ ನಿಂತ ನಾನು ಮಗನ ಕೈಯಿಂದ ಪುಟ್ಟನನ್ನು ಎತ್ತಿಕೊಂಡೆ. ಗಪ್ಪೆಂದು ಮೋರಿ ವಾಸನೆ ಮೂಗಿಗೆ ಬಡಿಯಿತು. ಪುಟ್ಟನ ಮೈಯಲ್ಲ ಕೊಳಕಾಗಿತ್ತು. ಮನೆ ಒಳಗೆ ಎತ್ತಿಕೊಂಡು ಬಂದು ಮೊದಲು ಅವನಿಗೆ ಕುಡಿಯಲು ಹಾಲು ಕೊಟ್ಟು, ನಂತರ ಸ್ನಾನ ಮಾಡಿಸಿದೆ.
ಇಷ್ಟೆಲ್ಲಾ ಪ್ರಹಸನ ನಡೆಯುವಾಗ ಚಿಕ್ಕ ಮರಿ ಮುದ್ದು ಪುಟ್ಟನನ್ನು ಮೇಲಿನ ಮಗನ ರೂಮಿನಲ್ಲಿ ಬಿಟ್ಟಿದ್ದೆವು. ಅಪರಿಚಿತ ಮರಿಯನ್ನು ನೋಡಿ ದೊಡ್ಡ ಪುಟ್ಟು ಕಚ್ಚಾಡಬಹುದು ಎಂಬ ಎಚ್ಚರಿಕೆಯಿಂದ ಸದ್ಯಕ್ಕೆ ಅವುಗಳನ್ನು ಮುಖಾಮುಖಿಯಾಗಿಸುವುದು ಬೇಡ ಎಂದು ನಿರ್ಧರಿಸಿದೆವು. ದೊಡ್ಡಪುಟ್ಟವಿನ ಮೈದಾಡವಿ ಮುದ್ದು ಮಾಡುತ್ತಾ ಸಮಾಧಾನಿಸಿದ ಮೇಲೆ ಅವನ ಭಯ ಸ್ವಲ್ಪ ಕಡಿಮೆಯಾಯಿತು. ನಂತರ ಊಟ ಮಾಡಿ ಮಲಗಿದ. ಮನೆ ಬಿಟ್ಟು ಹೋಗಿದ್ದ ದೊಡ್ಡಪುಟ್ಟು ಮತ್ತೆ ತಿರುಗಿ ಬಂದಿದ್ದು ನಮ್ಮೆಲ್ಲರಿಗೂ ಹರ್ಷ ತಂದಿತ್ತು.
ಅಂದು ಸಂಜೆ ನಾನು ಮತ್ತು ಮಗ ಸೇರಿಕೊಂಡು ಮುದ್ದು ಪುಟ್ಟ ಮತ್ತು ದೊಡ್ಡಪುಟ್ಟುವನ್ನು ಬೇರೆ ಬೇರೆಯಾಗಿ ಎತ್ತಿಕೊಂಡು ಪರಸ್ಪರ ಪರಿಚಯಿಸಿದೆವು. ಸ್ವಲ್ಪ ಹೊತ್ತು ದಿಟ್ಟಿಸಿ ನೋಡಿದ ಎರಡು ಬೆಕ್ಕುಗಳು ಸ್ನೇಹವನ್ನು ಒಪ್ಪಿಕೊಂಡವು. ನಾವು ಸಮಾಧಾನದ ನಿಟ್ಟುಸಿರು ಬಿಟ್ಟೆವು.
ಮುಂದುವರೆಯುವುದು…
ತಪ್ಪದೆ ಓದಿ, ಹಿಂದಿನ ಸಂಚಿಕೆಗಳು :
- ಮೂಕ ಜಗತ್ತಿನ ಸುತ್ತ ನಮ್ಮ ಜಗತ್ತು – (ಭಾಗ-೧)
- ಮೂಕ ಜಗತ್ತಿನ ಸುತ್ತ ನಮ್ಮ ಜಗತ್ತು – (ಭಾಗ-೨)
- ಮೂಕ ಜಗತ್ತಿನ ಸುತ್ತ ನಮ್ಮ ಜಗತ್ತು – (ಭಾಗ-೩)
- ಮೂಕ ಜಗತ್ತಿನ ಸುತ್ತ ನಮ್ಮ ಜಗತ್ತು – (ಭಾಗ-೪)
- ಮೂಕ ಜಗತ್ತಿನ ಸುತ್ತ ನಮ್ಮ ಜಗತ್ತು – (ಭಾಗ-೫)
- ಮೂಕ ಜಗತ್ತಿನ ಸುತ್ತ ನಮ್ಮ ಜಗತ್ತು – (ಭಾಗ-೬)
- ಮೂಕ ಜಗತ್ತಿನ ಸುತ್ತ ನಮ್ಮ ಜಗತ್ತು – (ಭಾಗ-೭)
- ಮೂಕ ಜಗತ್ತಿನ ಸುತ್ತ ನಮ್ಮ ಜಗತ್ತು – (ಭಾಗ-೮)
- ಮೂಕ ಜಗತ್ತಿನ ಸುತ್ತ ನಮ್ಮ ಜಗತ್ತು – (ಭಾಗ-೯)
- ಮೂಕ ಜಗತ್ತಿನ ಸುತ್ತ ನಮ್ಮ ಜಗತ್ತು – (ಭಾಗ-೧೦)
- ಕೆ ಸಿ ರತ್ನಶ್ರೀ ಶ್ರೀಧರ್
