ನಮ್ಮ ಮನೆಯಲ್ಲಿ ಎರಡು ಅಪ್ಪಟ ಬಿಳಿಯ ಬಣ್ಣದ ಎತ್ತುಗಳನ್ನು ದೂರದ ಊರಿನಿಂದ ಕೊಂಡು ತಂದಿದ್ದರು. ಅಂಕಣಕಾರ್ತಿ ಕೆ.ಸಿ. ರತ್ನಶ್ರೀ ಶ್ರೀಧರ್ ಅವರ ಬಾಲ್ಯದ ನೆನಪುಗಳನ್ನು ಹಂಚಿಕೊಂಡಿದ್ದಾರೆ. ತಪ್ಪದೆ ಓದಿ ಅವರ ‘ಮೂಕ ಜಗತ್ತಿನ ಸುತ್ತ ನಮ್ಮ ಜಗತ್ತು’ ಅಂಕಣ…
ನಮ್ಮದು ಕೃಷಿ ಪ್ರಧಾನ ಹಳ್ಳಿಯಾಗಿತ್ತು. ಊರಿನ ಎಲ್ಲರ ಮನೆಗಳೂ ಕೃಷಿ ಕುಟುಂಬವೇ ಆಗಿದ್ದವು. ನಮ್ಮ ತಂದೆ ಶಿಕ್ಷಕರಾಗಿದ್ದರೂ ಕೂಡ ನಮ್ಮ ಕುಟುಂಬ ಕೂಡ ಕೃಷಿ ಪ್ರಧಾನವಾಗಿತ್ತು. ಹಾಗಾಗಿ ನಮ್ಮ ಮನೆಯಲ್ಲಿದ್ದ ಎತ್ತು, ಹಸು-ಕರು, ನಾಯಿ, ಬೆಕ್ಕುಗಳ ಒಡನಾಟ ನನಗೆ ಬಾಲ್ಯದಿಂದಲೇ ದೊರಕಿತು.
ದನ-ಕರು ನೋಡಿಕೊಳ್ಳುವುದು, ಕೊಟ್ಟಿಗೆ ಕೆಲಸ, ಎತ್ತಿನ ಗಾಡಿ ಓಡಿಸುವುದು ಮತ್ತು ಕೃಷಿ ಕೆಲಸದಲ್ಲಿ ಸಹಾಯಕರಾಗಿ ದುಡಿಯಲು ಸದಾ (ಒಬ್ಬರ ನಂತರ ಒಬ್ಬರು) ಒಬ್ಬ ಅಳು ಮನೆಯಲ್ಲಿರುತ್ತಿದ್ದರು. ಅವರೇ ತಿಮ್ಮಣ್ಣ, ನಿಂಗಣ್ಣ, ಮತ್ತು ಜಯಣ್ಣ. ಅವರ ಹೆಸರುಗಳು ಈಗಲೂ ನನ್ನ ಸ್ಮೃತಿ ಪಟಲದಿಂದ ಅಳಿಸಿಲ್ಲ. ಅವರು ನಮ್ಮ ಮನೆಯ ಸದಸ್ಯರಂತೆಯೇ ಇದ್ದರು. ದನ ಕರುಗಳ ಮೇಲೆ ಅವರಿಗೆ ಅಪಾರ ಪ್ರೀತಿ.
ನಮ್ಮ ಮನೆಯಲ್ಲಿದ್ದ ಭೀಮ ಮತ್ತು ಗುರು ಎಂಬ ಎರಡು ಅಪ್ಪಟ ಬಿಳಿಯ ಬಣ್ಣದ ಎತ್ತುಗಳನ್ನು ಅದೆಲ್ಲಿಂದಲೊ ದೂರದ ಊರಿನಿಂದ ಕೊಂಡು ತಂದಿದ್ದರು. ಬಿಳಿಯ ಬಣ್ಣದ, ಆರು ಅಡಿ ಎತ್ತರದ, ಮುದ್ದು ಮುಖದ, ಸೌಮ್ಯ ಸ್ವಭಾವದ ಆ ಎತ್ತುಗಳು ನೋಡುವವರ ದೃಷ್ಟಿ ತಾಗುವಂತಿದ್ದವು. ದೊಡ್ಡ ಕೊಂಬುಗಳಿದ್ದರೂ ಒಮ್ಮೆಯೂ ಯಾರಿಗೂ ಗುಮ್ಮದ, ಒದೆಯದ, ನಮ್ಮ ಮನೆಯ ಎಲ್ಲಾ ದನ ಕರುಗಳ ಬಗ್ಗೆ ನನಗೆ ಅಪಾರ ಪ್ರೀತಿ ಒಲವು ಇತ್ತು. ಅವುಗಳು ಕೂಡ ತಲೆಯನ್ನು ಕುಣಿಸುವ ಮೂಲಕ ತಮ್ಮ ಪ್ರೀತಿಯನ್ನು ತೋರಿಸುತ್ತಿದ್ದವು. ಮೂಕ ಪ್ರಾಣಿಗಳಾದರೂ ಅವುಗಳಿಗೂ ಭಾವನೆಗಳಿರುತ್ತೆ.

ಫೋಟೋ ಕೃಪೆ : ಅಂತರ್ಜಾಲ
ಒಮ್ಮೆ, ಗೌರಿ ಎಂಬ ಹಸುವಿನ ಕರು ಒಂದು ಸತ್ತು ಹೋಗಿತ್ತು. ಅದನ್ನು ನೆನೆದು ಗೌರಿ ಒಂದು ವಾರ ಹುಲ್ಲು ತಿನ್ನದೇ ಕಣ್ಣಲ್ಲಿ ನೀರು ಸುರಿಸುತ್ತಾ ಸಂಕಟಪಡುತ್ತಿದ್ದ ದೃಶ್ಯ ಈಗಲೂ ನನ್ನ ಮನದಲ್ಲಿ ಅಚ್ಚಳಿಯದೆ ಕುಳಿತಿದೆ.
ಮನೆಯ ಹಿಂಬದಿಯಲ್ಲಿ ಪ್ರತ್ಯೇಕವಾಗಿದ್ದ ದೊಡ್ಡ ಕೊಟ್ಟಿಗೆಯ ಒಂದು ಭಾಗದಲ್ಲಿ ಎರಡು ಹಾಲು ಕೊಡುವ ಹಸುಗಳು, ಎರಡ್ಮೂರು ಮಣಕಗಳು, ಒಂದೆರಡು ಪುಟ್ಟ ಕರುಗಳನ್ನು ಕಟ್ಟಿದರೆ, ಎರಡು ಸಣ್ಣ ಎತ್ತುಗಳು ಮತ್ತು ಎರಡು ದೊಡ್ಡ ಎತ್ತುಗಳನ್ನು ಇನ್ನೊಂದು ಭಾಗದಲ್ಲಿ ಕಟ್ಟುತ್ತಿದ್ದರು. ಎತ್ತುಗಳು ಮತ್ತು ಪುಟ್ಟ ಕರುಗಳನ್ನು ಬಿಟ್ಟು ಉಳಿದ ಎಲ್ಲಾ ದನಗಳು ಊರೊಟ್ಟಿನ ದೊಡ್ಡಿಯ ದನಗಳ ಜೊತೆಯಲ್ಲಿ ಹುಲ್ಲು ಮೇಯಲು ಕಾಡಿಗೆ ಹೋಗುತ್ತಿದ್ದವು.
ಸೋಮವಾರ ಎತ್ತುಗಳಿಗೆ ರಜಾ ದಿನ. ಅಂದು ಅವುಗಳಿಗೆ ಮೈ ತೊಳೆದು ಪೂಜಿಸುವ ರೂಢಿ ಇತ್ತು. ಎತ್ತುಗಳಿಗೆ ಮೈ ತೊಳೆಸಿ ಶೃಂಗರಿಸುವುದೆಂದರೆ ನಮ್ಮ ಆಳುಗಳಿಗೆ ಎಲ್ಲಿಲ್ಲದ ಸಂತಸ. ದೀಪಾವಳಿ, ಸಂಕ್ರಾಂತಿ ಹಬ್ಬಗಳಲ್ಲಂತೂ ಅವುಗಳ ಕೊಂಬುಗಳಿಗೆ ಬಣ್ಣ ಹಚ್ಚಿ, ರಿಬ್ಬನ್ ಟೇಪು, ದಾರದ ಕುಚ್ಚು ಕಟ್ಟಿ, ಹಿತ್ತಾಳೆಯ ಕೋಡಣಸು (ಕೊಂಬಿನ ತುದಿಗೆ ಹಾಕುವ ಅಲಂಕಾರಿಕ ವಸ್ತು) ತೊಡಿಸಿ, ಕುತ್ತಿಗೆಗೆ ಗಂಟೆಯ ಸರವನ್ನು ಕಟ್ಟಿ, ಮೈಮೇಲೆ ಚಿತ್ತಾರದ ಜೂಲು (ಎತ್ತುಗಳ ಮೈ ಮೇಲೆ ಹೊದಿಸುವ ಕಸೂತಿ ಹಾಕಿದ ಚೌಕದ ಬಟ್ಟೆ) ಹೊದಿಸಿ, ಕೊರಳಿಗೆ ಹೂವಿನ ಹಾರ ಹಾಕಿ, ಊರ ಮಧ್ಯದಲ್ಲಿದ್ದ ಲಕ್ಷ್ಮಿ ರಂಗನಾಥ ಸ್ವಾಮಿ ದೇವಸ್ಥಾನದ ಸುತ್ತಲೂ ಮೆರವಣಿಗೆ ಮಾಡುತ್ತಿದ್ದರು. ಮನೆಗೆ ಬಂದ ಮೇಲೆ ಎತ್ತುಗಳಿಗೆ ಪೊರಕ್ಕೆ ಕಡ್ಡಿಯಲ್ಲಿ ದೃಷ್ಟಿ ತೆಗೆದು, ಕೆಂಪು ನೀರು ಮತ್ತು ನಿಂಬೆ ಹಣ್ಣು ನಿವಾಳಿಸಿದ ಮೇಲೆಯೇ ಅವರಿಗೆ ಸಮಾಧಾನ.
ನಮ್ಮ ಮನೆಯಲ್ಲಿ ಕೆಂದ ಮತ್ತು ರಾಜ ಎಂಬ ಎರಡು ನಾಯಿಗಳಿದ್ದವು. ರಾಜ ಭಲೇ ಧೈರ್ಯವಂತ. ರಾಜ ಕಾವಲು ಕಾಯುವುದರಲ್ಲಿ ನಿಶೀಮನಾಗಿದ್ದ. ಒಕ್ಕಲು ಸಮಯದಲ್ಲಿ ಹೊಲ-ಗದ್ದೆಯಲ್ಲಿ ರಾಶಿ ಮಾಡಿದ್ದ ಧಾನ್ಯವನ್ನು ಒಂದು ನರಪಿಳ್ಳೆಯೂ ಹತ್ತಿರ ಬರದಂತೆ ರಾತ್ರಿಯೆಲ್ಲಾ ಕಾವಲು ಕಾಯುತ್ತಿದ್ದ. ಕೆಂದ ನಾಯಿ ಮಾತ್ರ ಪುಕ್ಕಲನಾಗಿದ್ದ ಅವನು ಮನೆಯನ್ನು ಬಿಟ್ಟು ಎಲ್ಲಿಯೂ ಹೋಗುತ್ತಿರಲಿಲ್ಲ. ರಾತ್ರಿ ಹೊತ್ತು ಮನೆಯ ಮುಂಭಾಗದ ಕಟ್ಟೆಯ ಮೇಲೆ ರಾಜ ಮಲಗುತ್ತಿದ್ದ. ಮನೆಯ ಹಿಂಭಾಗದ ಕೊಟ್ಟಿಗೆಯ ಬಳಿ ಕೆಂದ ಮಲಗುತ್ತಿದ್ದ.
ಒಂದು ದಿನ ಸಾಯಂಕಾಲ ಮಳೆಯ ಆರ್ಭಟ ಜೋರಾಗಿತ್ತು. ಮಿಂಚು ಗುಡುಗು ಗಾಳಿಯಿಂದಾಗಿ ಮಳೆಯ ಇರುಚಲು ನೀರು ಮನೆಯ ಮುಂಭಾಗದ ಎತ್ತರವಾದ ಕಟ್ಟೆಯನ್ನು ತೋಯಿಸಿತ್ತು. ನಮ್ಮ ತಂದೆ ರಾಜುವನ್ನು ವರಾಂಡಕ್ಕೆ ಬರುವಂತೆ ಎಷ್ಟೇ ಬಲವಂತದಿಂದ ಎಳೆದರೂ, ಬಿಡಿಸಿಕೊಂಡ ಅವನು ಮನೆಯ ಒಳಗೆ ಕಾಲಿಡದೇ ಕಟ್ಟೆಯ ಮೇಲೆ ನಿಂತು ಮಳೆಯಲ್ಲಿ ನೆನೆಯುತ್ತಿದ್ದ. ಕೆಂದ ಮಾತ್ರ ಮಳೆಗೆ ಹೆದರಿಕೊಂಡು ಒಳಗೆ ಓಡಿ ಬಂದ. ತಕ್ಷಣವೇ ರಾಜ ಹಿಂದಿನಿಂದ ಕೆಂದನ ಬಾಲವನ್ನು ಹಿಡಿದು ಆಚೆಯ ಕಟ್ಟೆಗೆ ಎಳೆದುಕೊಂಡ. ಕೊನೆಗೂ ಒಳಗೆ ಬರಲು ಕೆಂದನಿಗೂ ಬಿಡಲಿಲ್ಲ, ತಾನೂ ವೆರಾಂಡಕ್ಕೆ ಬರಲಿಲ್ಲ.
ಮನೆಯಿಂದ ಯಾರೇ ಹೊರಗೆ ಹೊರಟರೂ ಅವರೊಟ್ಟಿಗೆ ಹೋಗುವುದು ರಾಜನ ಅಭ್ಯಾಸ. ಎತ್ತಿನ ಗಾಡಿ ಹೊಲ ಗದ್ದೆಗಳಿಗೆ ಹೊರಟಿದ್ದು ಕಂಡರೆ ಸಾಕು, ಯಾವುದೋ ಮಾಯದಲ್ಲಿ ತಾನೂ ಹೋಗುತ್ತಿದ್ದ. ನಮ್ಮದು ಸಣ್ಣ ಕಿರಾಣಿ ಅಂಗಡಿ ಇದ್ದುದರಿಂದ ಸಾಮಾನು ತರಲು ನನ್ನ ತಂದೆ ಸೈಕಲ್ ಹತ್ತಿ ಹತ್ತಿರದ ಪೇಟೆಗೆ ಹೋಗುತ್ತಿದ್ದರು. ಅವರು ಹೊರಡುವ ಸೂಚನೆ ಕಂಡರೆ ಸಾಕು ರಾಜ ಬೆನ್ನತ್ತಿ ಬಿಡುತ್ತಿದ್ದ. ಹಾಗಾಗಿ ನನ್ನ ತಂದೆ ಪೇಟೆಗೆ ಹೊರಡುವ ಮುನ್ನ ಮರೆಯದೇ ರಾಜನನ್ನು ಉಪಾಯವಾಗಿ ಕರೆದು ದನದ ಕೊಟ್ಟಿಗೆಯಲ್ಲಿ ಕೂಡಿ ಹಾಕುತ್ತಿದ್ದೆವು. ಅವನ ಈ ಸ್ವಭಾವವೇ ಕೊನೆಯಲ್ಲಿ ಅವನಿಗೆ ಮುಳುವಾಯಿತು.

ಫೋಟೋ ಕೃಪೆ : ಅಂತರ್ಜಾಲ
ಒಮ್ಮೆ ನನ್ನ ತಂದೆಯ ಅಕ್ಕನ ಮಗ ತನ್ನ ಕೃಷಿ ಕೆಲಸದ ಸಹಾಯಕ್ಕೆಂದು ಒಂದು ತಿಂಗಳ ಮಟ್ಟಿಗೆ ನಮ್ಮ ಮನೆಯ ಎತ್ತು ಮತ್ತು ಗಾಡಿಯನ್ನು ಸುಮಾರು 50 ಕಿಲೋಮೀಟರ್ ದೂರವಿರುವ ಅವರ ಊರಿಗೆ ಒಯ್ದರು. ಬೆಳಕು ಹರಿಯುವ ಮುನ್ನ ನಸುಕಿನಲ್ಲಿ ನಮ್ಮ ಮನೆಯಿಂದ ಹೊರಟ ಎತ್ತು ಗಾಡಿಯ ಜೊತೆಗೆ ಹೊರಗೆ ಮಲಗುತ್ತಿದ್ದ ರಾಜ ಕೂಡ ಹೋಗಿಬಿಟ್ಟಿದ್ದ. ನಾವುಗಳು ಅವನನ್ನು ಗಮನಿಸುವಷ್ಟರಲ್ಲಿ ಎರಡು-ಮೂರು ಗಂಟೆಗಳೇ ಕಳೆದಿತ್ತು. ರಾಜ ಎತ್ತಿನ ಗಾಡಿಯೊಟ್ಟಿಗೆ ಹೋಗಿದ್ದಾನೆ ಎಂಬುದು ಮನೆಯವರಿಗೆಲ್ಲ ಗೊತ್ತಾದರೂ ಏನೂ ಮಾಡುವಂತಿರಲಿಲ್ಲ. ವೇಗವಾಗಿ ಹೋಗಿ ತಡೆದು ರಾಜನನ್ನು ವಾಪಸ್ ಕರೆ ತರಲು ಈಗಿನಂತೆ ಆಗ ಯಾರ ಮನೆಯಲ್ಲೂ ಮೋಟರ್ ಸೈಕಲ್ ಆಗಲಿ ಕಾರುಗಳಾಗಲಿ ಇರಲಿಲ್ಲ.
ಅವರ ಊರು ತಲುಪಿದ ಮೇಲೆ ಆ ಅಪರಿಚಿತ ಊರಿನಲ್ಲಿರಲು ರಾಜನಿಗೆ ಸಾಧ್ಯವಾಗಿಲ್ಲ. ಮತ್ತೆ ಅಲ್ಲಿಂದ ವಾಪಸ್ ಹೊರಟಿದ್ದಾನೆ. ಸುಮಾರು 15 ದಿನಗಳ ನಂತರ ಒಂದು ದಿನ ರಾಜ ದಿಢೀರನೆ ನಮ್ಮ ಮನೆಯ ಅಂಗಳದಲ್ಲಿ ಪ್ರತ್ಯಕ್ಷನಾದ. ಆದರೆ ಅವನು ಮೊದಲಿನ ರಾಜನಾಗಿರಲಿಲ್ಲ. ಬರುವ ದಾರಿಯಲ್ಲಿ ಬೇರೆ ನಾಯಿಗಳ ದಾಳಿಗೆ ಒಳಗಾಗಿ ಮೈ ಮೇಲೆ ಅಲ್ಲಲ್ಲಿ ಗಾಯ ಮಾಡಿಕೊಂಡು, ಉಣುಗು ಹತ್ತಿಸಿಕೊಂಡು ಸೊರಗಿ ಸುಣ್ಣವಾಗಿದ್ದ. ಊಟ ನಿದ್ದೆ ಇಲ್ಲದೆ ಬಳಲಿ, 50 ಕಿಲೋಮೀಟರ್ ದೂರ ಕ್ರಮಿಸಿ ವಾಪಸ್ ನಡೆದು ಬರುವಾಗ ಪಾಪ ಆ ಮೂಕ ಜೀವಿಯಾದ ನಮ್ಮ ರಾಜ ಅದೆಷ್ಟು ನೋವು ಸಂಕಟ ಅನುಭವಿಸಿದ್ದನೊ ಗೊತ್ತಿಲ್ಲ. ನಂತರದ ದಿನಗಳಲ್ಲಿ ನಿತ್ರಾಣನಾಗಿದ್ದ ಅವನ ಆರೋಗ್ಯ ದಿನೇ ದಿನೇ ಹದಗೆಟ್ಟಿತು. ವಯಸ್ಸು ಕೂಡ ಹೆಚ್ಚಾಗುತ್ತಿತ್ತು. ಓಡಾಡಲೂ ಕಷ್ಟ ಪಡುತ್ತಿದ್ದ. ಕೊನೆಕೊನೆಗೆ ಊಟ ಬಿಟ್ಟು ಮಲಗಿರುತ್ತಿದ್ದ ಅವನು ಒಂದು ದಿನ ಕಣ್ಮುಚ್ಚಿದ. ನನ್ನ ಮನದಲ್ಲಿ ಇಂದಿಗೂ ಅವನ ಧೈರ್ಯ, ಸ್ವಾಮಿ ನಿಷ್ಠೆ ಮತ್ತು ಪ್ರೀತಿಯ ದೋತಕವಾಗಿ ಉಳಿದಿದ್ದಾನೆ.
ಮುಂದಿನ ಸಂಚಿಕೆಯಲ್ಲಿ ನಮ್ಮ ಮನೆಯ ಮುದ್ದು ಬೆಕ್ಕುಗಳ ಬರಹದೊಂದಿಗೆ ಮತ್ತೆ ಬರುವೆ.
ತಪ್ಪದೆ ಓದಿ, ಹಿಂದಿನ ಸಂಚಿಕೆಗಳು :
- ಮೂಕ ಜಗತ್ತಿನ ಸುತ್ತ ನಮ್ಮ ಜಗತ್ತು – (ಭಾಗ-೧)
- ಮೂಕ ಜಗತ್ತಿನ ಸುತ್ತ ನಮ್ಮ ಜಗತ್ತು – (ಭಾಗ-೨)
- ಮೂಕ ಜಗತ್ತಿನ ಸುತ್ತ ನಮ್ಮ ಜಗತ್ತು – (ಭಾಗ-೩)
- ಮೂಕ ಜಗತ್ತಿನ ಸುತ್ತ ನಮ್ಮ ಜಗತ್ತು – (ಭಾಗ-೪)
- ಮೂಕ ಜಗತ್ತಿನ ಸುತ್ತ ನಮ್ಮ ಜಗತ್ತು – (ಭಾಗ-೫)
- ಮೂಕ ಜಗತ್ತಿನ ಸುತ್ತ ನಮ್ಮ ಜಗತ್ತು – (ಭಾಗ-೬)
- ಕೆ.ಸಿ. ರತ್ನಶ್ರೀ ಶ್ರೀಧರ್
