ಹೊಸ ಭಾಷ್ಯ ಹೊಸೆದ ಸಾಧಕಿ

ಕಾಂತಾವರ ಕನ್ನಡ ಸಂಘದಿಂದ ಪ್ರಕಟಿತ ಮತ್ತು ಸುಧೀಶ್ ಅವರ ಜೀವನ ಪ್ರೀತಿಗೆ ಹೊಸ ಭಾಷ್ಯ ಹೊಸೆದ ಸಾಧಕಿ ‘ಜ್ಯೋತಿ ಗುರು ಪ್ರಸಾದ್’ ಅವರ ಕುರಿತಾದ ಕೃತಿಯ ಕುರಿತು ರಘುನಾಥ್ ಕೃಷ್ಣಮಾಚಾರ್ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಪುಸ್ತಕ : ಜ್ಯೋತಿ ಗುರು ಪ್ರಸಾದ್
ಲೇಖಕರು :  ಸುಧೀಶ್

ಸಾಮಾನ್ಯವಾಗಿ ದಕ್ಷಿಣ ಕನ್ನಡದವರನ್ನು ಮಾತ್ರ ತಮ್ಮ ಕಾಂತಾವರ ಮಾಲಿಕೆಯಲ್ಲಿ ಪುಸ್ತಕ ರೂಪದಲ್ಲಿ ಪರಿಚಯಿಸುವ ಇದೊಂದು ಹೊಸ ಸೇರ್ಪಡೆ. ಏಕೆಂದರೆ ಇವರು ದಕ್ಷಿಣ ಕನ್ನಡದವರಲ್ಲ. ಟಿ. ನರಸೀಪುರದವರು. ವೈವಾಹಿಕ ಜೀವನಕ್ಕೆ ಕಾಲಿಟ್ಟ ಕೂಡಲೇ ಅಲ್ಲಿಗೆ ಅದರಲ್ಲೂ ಪ್ರಸಿದ್ದವಾದ ಬಾಹುಬಲಿ ನೆಲೆಸಿದ ಕಾರ್ಕಳಕ್ಕೆ ಹೋಗಿ ನೆಲೆಸಿದರು. ಆಗಿನಿಂದಲೂ ಅವರಿಗೂ ಕಾರ್ಕಳಕ್ಕೂ ಅಂಟಿದ ನಂಟು. ಅದನ್ನೇ ತಮ್ಮ ಕಳೆದ ಮೂರುವರೆ ದಶಕಗಳಿಗೂ ಮಿಕ್ಕು ಕಾರ್ಯಕ್ಷೇತ್ರವನ್ನಾಗಿ ಮಾಡಿ ಕೊಂಡು ತಾವು ಬೆಳೆದು ತಮ್ಮ ಶಿಷ್ಯಕೋಟಿಯನ್ನು ಬೆಳೆಸಿದವರು. ಹಾಗೆ ಇವರ ಮಾರ್ಗದರ್ಶನದಲ್ಲಿ ಬೆಳೆದವರೇ ಅವರನ್ನು ಕುರಿತು ಈ ಪುಸ್ತಕ ಬರೆದಿರುವುದು ಔಚಿತ್ಯ ಪೂರ್ಣವಾಗಿದೆ. ಮತ್ತು ಇದನ್ನು ಬಿಡುಗಡೆ ಮಾಡಿದವರು ನನ್ನ ಅನುಗಾಲದ ಕನ್ನಡ ವಿಶ್ವವಿದ್ಯಾಲಯದಲ್ಲಿ ನಮ್ಮ ಕುಲಸಚಿವರಾಗಿ ನಿವೃತ್ತಿ ಹೊಂದಿರುವ ಗೆಳೆಯರಾದ ಡಾ.ಸುಬ್ಬಣ್ಣ ರೈ .

ಟಿ.ನರಸೀಪುರದಲ್ಲಿ ತಮ್ಮ ಪ್ರೌಢ ವಿದ್ಯಾಭ್ಯಾಸ ಮುಗಿಸಿದ ಇವರು ಮೈಸೂರು ವಿಶ್ವವಿದ್ಯಾಲಯದಿಂದ ಖಾಸಗಿಯಾಗಿ ಕನ್ನಡ ಮತ್ತು ಇಂಗ್ಲಿಷ್ ನಲ್ಲಿ ಸ್ನಾತಕೋತ್ತರ ಪದವಿಗಳನ್ನು ಗಳಿಸಿದ ಇವರು ಅಧ್ಯಯನ ಅಧ್ಯಾಪನದಲ್ಲಿ ತೊಡಗಿದರು. ನೂರಾರು ವಿದ್ಯಾರ್ಥಿಗಳಿಗೆ ವಿವಿಧ ಕಾಲೇಜುಗಳಲ್ಲಿ ಕನ್ನಡದ ದೀಕ್ಷೆಯನ್ನು ಕೊಟ್ಟ ಯಶೋಗಾಥೆ ಇವರದು.

ಸೃಜನಶೀಲ ಲೇಖಕಿಯಾದ ಇವರ ಬರಹಗಳು ಹಲವು ಪ್ರಕಾರಗಳಲ್ಲಿ ಮೈದಳೆದಿವೆ. ಅವನ್ನು ಪ್ರಮುಖವಾಗಿ ಕಾವ್ಯ ಮತ್ತು ಗದ್ಯ ಪ್ರಕಾರಗಳೆಂದು ಕರೆಯಬಹುದು. ಕಾವ್ಯದಲ್ಲಿ ಇವರ ವರನಂದಿ(ಮೇಲುಕೋಟೆಯಲ್ಲಿ ಇರುವ ಬೀಬಿ ನಾಚ್ಚಿಯಾರ್ ) ಮತ್ತು ಜಟಾಯು ಪಕ್ಷಿ ಕವನ ಸಂಕಲನಗಳು ಜನಪ್ರಿಯತೆ ಪಡೆದಿವೆ. ಸಾಮಾನ್ಯವಾಗಿ ಪುರಾಣದ ಪ್ರಮುಖ ಪಾತ್ರಗಳಿಗೆ ಮಾತ್ರ ಸೀಮಿತವಾದರೆ, ಸೀತೆಗಾಗಿ ರಾವಣನ ಜೊತೆಗೆ ಹೋರಾಟ ಮಾಡಿದ ಜಟಾಯು ಪಕ್ಷಿಯನ್ನು ಕುರಿತು ನನಗೆ ತಿಳಿದಂತೆ ಇವರೊಬ್ಬರೆ ಕವನ ಬರೆದಿರುವುದು ಇವರ ಅನನ್ಯತೆಗೆ ಸಾಕ್ಷಿ. ಇದು ಲೇಖಕಿಯ ಹೋರಾಟ ಪ್ರವೃತ್ತಿಯನ್ನು ಸಾಂಕೇತಿಕವಾಗಿ ಪ್ರತಿನಿಧಿಸುತ್ತದೆ. ಆದ್ದರಿಂದಲೇ ಇದಕ್ಕೆ ಮುದ್ದಣ ಕಾವ್ಯ ಪ್ರಶಸ್ತಿ ಕೂಡಾ ಲಭ್ಯವಾಗಿದೆ.

ಇವರ ಕಣ್ಣ ಭಾಷೆ ಕನ್ನಡ ವರ್ಣಮಾಲೆಯನ್ನು ಆಧರಿಸಿ ಬರೆದ ವಿಶಿಷ್ಟ ಗದ್ಯ ಕೃತಿ. ಅದನ್ನು ಕುರಿತು ಪ್ರತ್ಯೇಕವಾಗಿ ಬರೆದಿರುವೆ.ಅವರ ಆಕಾಶವಾಣಿ ಚಿತ್ರಗೀತೆಗಳ ಪ್ರೇಮ ‘ಮನಸು ಸುಸ್ವರ ‘ ಅವರ ಜೀವಪರ ಚಿಂತನೆಗೆ ಸಾಕ್ಷಿ. ಅದರಲ್ಲಿ ಧರ್ಮ ಅರ್ಥ ಕಾಮ ಮೋಕ್ಷ ಮೌಲ್ಯಗಳನ್ನು ಕುರಿತು ಮುನ್ನುಡಿ ಬರೆದಿರುವ ಹಂಸಲೇಖ ಗುರುತಿಸಿದ್ದಾರೆ.

ಇದಲ್ಲದೆ ಅವರ ಪ್ರೀತಿಯೊಂದೆ ಕೃತಿ ಅವರ ಜೀವನ ವಿನ್ಯಾಸದೊಂದಿಗೆ ಬೆರೆತು ಹೋದ ಬಗೆಯನ್ನು ಅನಾವರಣಗೊಳಿಸುತ್ತದೆ. ವಾರ್ತಾ ಭಾರತಿಗೆ ಬರೆದ ಅಂಕಣಗಳು ಅವರ ವೈವಿಧ್ಯಮಯ ಆಸಕ್ತಿಗೆ ಸಾಕ್ಷಿ ನುಡಿಯುತ್ತವೆ.

ಅವರ ಮೇಲೆ ದಟ್ಟ ಪ್ರಭಾವವನ್ನು ಬೀರಿದ ಲೇಖಕರು ಅಬ್ದುಲ್ ರಶೀದ್, ಅನಂತಮೂರ್ತಿ, ಕೆ.ವಿ ತಿರುಮಲೇಶ್, ಜಯಂತ ಕಾಯ್ಕಿಣಿ, ವೈದೇಹಿ ಮುಂತಾದವರು. ಪಂಪನ ಪ್ರಸಿದ್ಧ ಹೇಳಿಕೆ ” ಮನಷ್ಯ ಜಾತಿ ತಾನೊಂದೇ ವಲಂ” ತಪ್ಪಾಗಿ ‘ಮಾನವ ಜಾತಿ ತಾನೊಂದೇ ವಲಂ” ಎಂದು ಉಲ್ಲೇಖಿಸಿರುವುದು ಇದರ ಪ್ರಧಾನ ಮಿತಿಯಾಗಿದೆ.

ಅವರ ಎರಡನೇ ಮಗ ಪೂರ್ಣ ಬಾಲ್ಯದಲ್ಲೆ ತೀರಿಕೊಂಡರು. ಅವನ ಪ್ರತಿಭೆ ಪೂರ್ಣನ ಗರಿಗಳ ಮೂಲಕ ಶಾಶ್ವತವಾಗಿದ್ದು ಅದನ್ನು ಕುರಿತು ಜಯಂತ ಕಾಯ್ಕಿಣಿ ಬರೆದಿದ್ದಾರೆ. ಅವರ ಇನ್ನೊಬ್ಬ ಮಗ ಗೌತಮ್ ಇಂಗ್ಲೀಷ್ ಅಧ್ಯಾಪಕರಾಗಿ ಕನ್ನಡದಲ್ಲಿ ಕಥಾಸಂಕಲನವನ್ನು ಪ್ರಕಟಿಸಿದ್ದಾರೆ. ಅವರು ಕುವೆಂಪು ಭಾಷಾ ಭಾರತಿಗಾಗಿ ಅನುವಾದ ಮಾಡಿ ಪ್ರಕಟಿಸಿದ ದಾಸ್ತೋವಸ್ಕಿ ಟಿಪ್ಪಣಿಗಳ ಕುರಿತು ಬರೆದ ಭಾಗ್ಯ ನನ್ನದು.

ಕಳೆದ ವರ್ಷ ಚಂದನ ವಾಹಿನಿಯಲ್ಲಿ ತಮ್ಮ ಸಂದರ್ಶನದ ಸಂದರ್ಭದಲ್ಲಿ ಬೆಂಗಳೂರಿಗೆ ಬಂದಾಗ ನಮ್ಮ ಮನೆಗೆ ಕೂಡಾ ಬಂದು ನಮ್ಮ ಅಲ್ಪ ಆತಿಥ್ಯವನ್ನು ಸ್ವೀಕರಿಸಿದ ಜ್ಯೋತಿ ಚಂದನದಲ್ಲಿ ನನ್ನ ಸಂಗಾತಿಯ ಹೆಸರು ಹೇಳಿ ಈ ವರ್ಷ ಅಲ್ಲಿ ಸಂದರ್ಶನಕ್ಕೆ ಕಾರಣಕರ್ತರಾದರು. ಈ ವರ್ಷದ ಗೋವಿಂದ ಪೈ ಸಂಶೋಧನಾ ಕೇಂದ್ರ ನೀಡುವ ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿಗೆ ಪಾತ್ರರಾದ ನನ್ನ ಸಂಗಾತಿ ಗಿರಿಜಾ ಶಾಸ್ತ್ರಿ ಅವರು, ಅದನ್ನು ಸ್ವೀಕರಿಸಲು ಉಡುಪಿಯ ಎಂ ಜಿ ಎಂ ಕಾಲೇಜಿಗೆ ಹೋದಾಗ ನಮ್ಮ ಜೊತೆ ಗೂಡಿ ಸಂಭ್ರಮಿಸಿದರಲ್ಲದೆ , ನಾವು ಅವರ ಮನೆಗೆ ಹೋದಾಗ ನನ್ನ ಸಂಗಾತಿ ಮತ್ತು ಗೆಳತಿ ಸರಸ್ವತಿಕುಮಾರಿ ಅವರಿಗೆ ಉಡುಗೊರೆ ಕೊಟ್ಟು ತಮ್ಮ ಔದಾರ್ಯ ಮೆರೆದರು. ಇದು ಯಾವ ಜನ್ಮದ ಮೈತ್ರಿ.

ಇಂತಹ ಮಾನವೀಯತೆಯ ಸಾಕಾರ ಮೂರ್ತಿ ಕವಿ, ಲೇಖಕಿಯ ಕುರಿತು ಈ ಪುಸ್ತಕ ರಚಿಸಿದ ಅವರ ಶಿಷ್ಯ ಸುಧೀಶ್ ಅವರಿಗೂ ಮತ್ತು ತಮ್ಮ ಕಾಂತಾವರ ಕನ್ನಡ ಸಂಘದ ಮಾಲಿಕೆಯಲ್ಲಿ ಪ್ರಕಟಿಸಿದ ನಾ. ಮೊಗಸಾಲೆ ಅವರಿಗೆ ಅಭಿನಂದನೆಗಳು.


  • ರಘುನಾಥ್ ಕೃಷ್ಣಮಾಚಾರ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW