ನನ್ನ (ನಮ್ಮ) ಕೊಳ್ಳುಬಾಕತನ

ದಿನಸಿ ಶಾಪಿಂಗ್ ಅಂತ ಹೋಗಿ ಏನೆಲ್ಲ ಶಾಪಿಂಗ್ ಆಯ್ತು ಅಂತ ಲೇಖಕರು ಹಾಸ್ಯಾತ್ಮಕವಾಗಿ ಎಲ್ಲರ ಜೀವನದ ಕತೆ – ವ್ಯಥೆಯನ್ನು ಓದುಗರ ಮುಂದೆ ತೆರೆದಿಟ್ಟಿದ್ದಾರೆ. ತಪ್ಪದೆ ಮುಂದೆ ಓದಿ…

“ರೀ, ತಾರೀಖು ಹದಿನೈದು ಆಯಿತು, ಮನೆ ಸಾಮಾನು ತರುವುದು ಯಾವಾಗ?’ ಎಂದು ಮನದನ್ನೆ ಹೇಳಿದಾಗ ‘ನಡಿ, ಹೋಗೋಣ. ಸಾಮಾನಿನ ಪಟ್ಟಿ ಆಗಿದೆಯಾ?’ ಎನ್ನುತ್ತಾ ದಿನ ಪತ್ರಿಕೆ ಮಡಿಸಿಟ್ಟು ಹೊರಡಲು ತಯಾರಿ ನಡೆಸಿದೆ. ಹೌದು, ಒಂದನೇಯ ತಾರೀಖು ಅಂಗಡಿಗೆ ಹೋಗಿ ಸಾಮಾನುಗಳನ್ನು ತರುವುದು ಬಿಟ್ಟು ತುಂಬ ವರ್ಷಗಳೇ ಆಯಿತು. ಈಗ ನಿವೃತ್ತಿ ಆದ ಮೇಲಂತೂ ಎರಡನೇಯ ವಾರದ ಮಧ್ಯದ ದಿನ ಬೆಳಿಗ್ಗೆ ಹನ್ನೊಂದು ಗಂಟೆಗೆ ಯಾವುದಾದರೂ ಮಾಲ್ಗೆ ಹೋದರೆ ಸ್ವಲ್ಪ ಕೈಕಾಲು ಆಡಿಸಲು ಜಾಗ ಇರುತ್ತದೆ. ಹಾಗಾಗಿ ಹದಿನೈದನೇ ತಾರೀಖು ನಮಗೆ ಒಂದನೇಯ ತಾರೀಖಿನ ತರಹವೇ ಆಗಿದೆ.

ಕಾರು ಲೆವೆಲ್ ಒಂದರಲ್ಲಿ ಪಾರ್ಕ್ ಮಾಡಿ, ಆ ಕಾರಿನ ಹತ್ತಿರ ಇರುವ ಕಂಬದ ಮೇಲಿರುವ ನಂಬರ್ ನನ್ನ ಚತುರವಾಣಿಯಲ್ಲಿ ಸೆರೆ ಹಿಡಿದು ಕೊಂಡು, ದೊಡ್ಡ ಮಾಲ್ ಪ್ರವೇಶವಾಯಿತು. ವಾಪಾಸು ಬಂದಾಗ ಜಾಗ ಹುಡುಕಲು ಇದು ಸಹಾಯ ಮಾಡುತ್ತೆ. ಒಳಗಿರುವ ತಣ್ಣನೇ ವಾತಾವರಣ ಈಗ ಬಿಸಿಲಿನ ಕಾಲವೆಂದು ಮನಸ್ಸಿನಿಂದ ಮರೆಮಾಡಿತು.

ಸಾಮಾನಿನ ಪಟ್ಟಿ ನೋಡಿದೆ. ಅಕ್ಕಿ, ಬೇಳೆಗಳು… ನಿತ್ಯ ಉಪಯೋಗಿಸುವ ಸಾಮಾನುಗಳೇ. ಹೊಸದೇನು ಇರಲಿಲ್ಲ. ತಳ್ಳುವ ಗಾಡಿಯಲ್ಲಿ ಬಾಗಿಲು ಬಳಿ ತನ್ನ ಕಂಠ ಬಿಗಿಸಿಕೊಂಡು ಬಂದ ಎರಡು ಚೀಲಗಳನ್ನು ಇಟ್ಟು ತಳ್ಳಿಕೊಂಡು ಹೊರಟೆವು.

ಫೋಟೋ ಕೃಪೆ : ಅಂತರ್ಜಾಲ

ಪ್ರವೇಶ ದ್ವಾರದ ಬಳಿಯಲ್ಲಿಯೇ ಇರುವುದು ತರಹಾವರಿ ಬಟ್ಟೆಗಳನ್ನು ನೇತು ಹಾಕಿರುವ ಜಾಗ. ಸಾಮಾನಿನ ಪಟ್ಟಿ ನೋಡಿದೆ. ಬಟ್ಟೆಗಳ ವಿಷಯ ಅದರಲ್ಲಿ ಇರಲಿಲ್ಲ. ಗಾಡಿ ತಳ್ಳುತ್ತಾ ಮುಂದೆ ನಡೆಯುವಾಗ ಅಲ್ಲೆ ಪಕ್ಕದಲ್ಲಿದ್ದ ಸುಂದರವಾದ ಚೂಡಿದಾರವೊಂದು ಗಮನ ಸೆಳೆಯಿತು. ನನ್ನ ಮನೆಯವರ ಮುಖ ನೋಡಿದೆ. ಅವಳ ಮುಖವೂ ಅಲ್ಲೆ ಇತ್ತು! ಗಾಡಿ ಆ ಚೂಡಿಧಾರ ನೇತುಹಾಕಿದ್ದ ಕಂಬಿಯ ಹತ್ತಿರ ನಿಂತಿತು. ‘ಚೆನ್ನಾಗಿದೆಯಲ್ಲ! ಥೇಟ್ ಹುಣ್ಣಿಮೆಯ ಚಂದ್ರ ಹುಟ್ಟುವಾಗಿನ ಬಣ್ಣ, ಅಲ್ಲವೇ’ ಎಂದೆ. ಅವಳ ಕಣ್ಣುಗಳು ಹುಣ್ಣಿಮೆಯ ಚಂದಿರನ ತರಹವೇ ಅರಳಿತ್ತು. ‘ನವ್ಯಂಗೆ (ಮಗಳು) ಎಕ್ಸೆಎಲ್ ಬೇಡ, ಎಮ್ ಸಾಕು, ಕಾಲೇಜಿಗೆ ಹಾಕಿಕೊಂಡು ಹೋಗಲು ಚೆನ್ನಾಗಿದೆ’ ಎಂದಳು. ಇಬ್ಬರಿಗೂ ಇಷ್ಟವಾದ ಮೇಲೆ ತೆಗೆದುಕೊಳ್ಳುವ ನಿರ್ಧಾರ ಸುಲಭವಾಯಿತು. ‘ಒಂದಕ್ಕೆ ೭೫೦, ಬೈ ಟೂ, ಒನ್ ಫ್ರೀ’ ಎನ್ನುವ ಬೋರ್ಡ್ ನೋಡಿ, ‘ನೀನು ಒಂದು ತಗೋ, ಚೆನ್ನಾಗಿದೆ’ ಎಂದೆ. ಮೂರು ಸೆಟ್ ಚೂಡಿದಾರುಗಳು ಗಾಡಿ ಏರಿಕೊಂಡು ಕುಳಿತವು. ಗಾಡಿ ಮುಂದಕ್ಕೆ ಚಲಿಸಿತು.

ತರಹವಾರಿ ಬೆಡ್ ಶೀಟ್ ಗಳನ್ನು ಜೋಡಿಸಿ ಇಟ್ಟಿದ್ದು ಕಾಣಿಸಿತು. ಡಬಲ್ ಸೈಜ್ ಬೆಡ್ ಶೀಟ್ ತೆಗೆದುಕೊಂಡರೆ ಎರಡು ದಿಂಬಿನ ಕವರ್ ಫ್ರೀ. ಮದುವೆ ಆದಾಗ ಸಿಂಗಲ್ ಕಾಟ್ ನಿಂದ ಡಬಲ್ ಕಾಟ್ ಗೆ ಬಡ್ತಿ ಸಿಕ್ಕು ಮೊದಲಬಾರಿಗೆ ಮಾವ ಕೊಟ್ಟ ಸೊಲ್ಲಾಪುರದ ಡಬಲ್ ಸೈಜ್ ಬೆಡ್ ಶೀಟ್ ನಾವು ಉಪಯೋಗಿಸಿದ್ದು! ಈಗಲೂ ಗಟ್ಟಿ ಇರುವ ಅದು, ನನ್ನಾಕೆಯ ರೇಷ್ಮೆ ಸೀರೆಯನ್ನು ತನ್ನ ಒಡಲಿನಲ್ಲಿ ತುಂಬಿಕೊಂಡು ಅಲ್ಮೇರಾದಲ್ಲಿ ಇದೆ. ‘ಮುಂದಿನ ತಿಂಗಳು ಅಮೇರಿಕಾದಿಂದ ಮಗ, ಸೊಸೆ ಬರುತ್ತಾರೆ, ಹೊಸ ಬೆಡ್ ಶೀಟ್ ಇದ್ದರೆ ಒಳ್ಳೆಯದು ಅಲ್ಲವಾ? ಆರು ತಿಂಗಳ ಹಿಂದೆ ಅರಮನೆ ಎಕ್ಸಿಬಿಷನ್ನಲ್ಲಿ ತಂದಿದ್ದೆಲ್ಲಾ ಮಾಸಿಕೊಂಡಿವೆ’ ಎಂದೆ. ನನ್ನಾಕೆ ‘ಹೌದು,ರೀ!’ ಎಂದಾಗ ಅವರಿಗೆ ಇಷ್ಟವಾಗುವ ಗುಲಾಬಿ ಚಿತ್ರಗಳಿರುವ ಬೆಡ್ ಶೀಟ್ ತಳ್ಳುವ ಗಾಡಿಯಲ್ಲಿ ಸೇರಿಕೊಂಡಿತು.

ಆ ಕಡೆ, ಈ ಕಡೆ ಓಡಾಡುವ ಜನರು ಜಾಸ್ತಿ ಆಯಿತು. ಪಕ್ಕದಲ್ಲಿ ಇದ್ದ ಕಾಫೀ ಕೌಂಟರ್ ನಲ್ಲಿ ಎರಡು ಕಾಫೀ ತೆಗೆದುಕೊಂಡು ಬಂದೆ. ಹೌದು, ನಾವಿಬ್ಬರೂ ಹೀಗೆ ಕಾಫೀ ಕುಡಿಯುವುದು ಸಾಮಾನ್ಯ. ‘ಚೆನ್ನಾಗಿದೆಯಲ್ಲವೇ ಕಾಫೀ, ಚಿಕ್ಕಮಗಳೂರು ಕಾಫೀ ಅಂತೆ. ಪೌಡರ್ ಕೂಡ ಇದೆಯಂತೆ, ಬೇಕಾ?’ ಎಂದೆ. ‘ಹೌದೂ ರೀ, ಒಂದು ಕಾಲ್ ಕೆ.ಜಿ. ಪ್ಯಾಕೆಟ್ ತೆಗದುಕೋಬಹುದು, ನೋಡಿ’ ಎಂದಳಾಕೆ. ಕಾಫೀ ಪೌಡರ್ ಗಾಡಿ ಸೇರಿತು.

ಆ ಕಡೆ ಕೊನೆಯಲ್ಲಿ ಕಿವಿ ಓಲೆ, ಸರಗಳು, ಕ್ಲಿಪ್ಗಳು….ಓ! ಎಷ್ಟು ತರಾಹವರಿ ಇದೆ. ನನ್ನ ಮಗಳಿಗೆ ಕಿವಿಗೆ ಹಾಕುವ ಡ್ರಾಪ್ಸ್ ಇಷ್ಟ! ಅವಳ ಅಮ್ಮನ ತರಹವೇ. ಈಗೀನ ಕಾಲದ ಫ್ಯಾಷನ್ ಆದ ಆಟಿಂಕ್ ಆಭರಣಗಳ ಡಿಸೈನ್ ಇರುವ ನಾಲ್ಕು ಸೆಟ್ ಗಾಡಿ ಏರಿದವು.

ಅಲ್ಲಿಂದ ಮುಂದೆ ಇದ್ದಿದ್ದೇ ಗಂಡಸರ ಬಟ್ಟೆಗಳು. ನನ್ನ ಮನೆಯವರ ಕಣ್ಣು ಅಲ್ಲಿರುವ ನೀಲಿ ಬಣ್ಣದ ಟೀ ಶರ್ಟ ಮೇಲೆ ಬಿದ್ದಿತು. ಬೆಳಿಗ್ಗೆ ಟಿ.ವಿ.ಯಲ್ಲಿ ಭವಿಷ್ಯ ಹೇಳುವವರು ನನ್ನ ರಾಶಿಯವರು ನೀಲಿ ಬಣ್ಣದ ಬಟ್ಟೆ ಧರಿಸಿದರೆ ಒಳ್ಳೆಯದು ಎಂದು ಹೇಳಿದ್ದು ಅದಕ್ಕೆ ಮುಖ್ಯ ಕಾರಣ. ಒಂದಕ್ಕೆ ೪೦೦ ರೂಗಳು. ಸಾವಿರಕ್ಕೆ ಮೂರು ಎಂಬ ಆಫರ್ ಇರುವಾಗ ಒಂದು ತೆಗೆದುಕೊಳ್ಳಲು ಆಗುವುದೇ? ನೀಲಿಯ ಜೊತೆಗೆ ಕಂದು ಮತ್ತು ಬಿಳಿ ಟೀ ಶರ್ಟ್ಗಳು ಗಾಡಿಗೆ ಸೇರಿದವು.

ಫೋಟೋ ಕೃಪೆ : ಅಂತರ್ಜಾಲ

ಅದರ ಮುಂದಿನ ಸಾಲಿನಲ್ಲೇ ಚಪ್ಪಲಿಗಳು. ಕಳೆದ ಒಂದು ವಾರದಿಂದ ಹಳೇ ಚಪ್ಪಲಿಯನ್ನೇ ಹಾಕಿಕೊಳ್ಳುತ್ತಿದ್ದೆ. ಇದಕ್ಕೆ ಮುಖ್ಯ ಕಾರಣ ಹೊಸ ಚಪ್ಪಲಿ ಕಳೆದ ವಾರ ದೇವಸ್ಥಾನಕ್ಕೆ ಹೋಗಿದ್ದಾಗ ಕಳುವಾಗಿತ್ತು. “ರ್ರೀ, ನಿಮ್ಮ ಹಳೆ ಚಪ್ಪಲಿ ನೋಡಲು ಆಗಲ್ಲ. ಚಪ್ಪಲಿ ತೊಗೊಳ್ಳಿ” ಅಂದಾಗ ನನಗೂ ಸರಿ ಅನಿಸಿತು. ಆದರೆ ತುಂಬ ಹುಡುಕಾಡಿ ಆಯ್ಕೆ ಮಾಡಿದ ಚಪ್ಪಲಿಗೆ ೮೫೦ರೂ. ಒಂದು ಸಾವಿರದ ವ್ಯಾಪಾರ ಮಾಡಿದರೆ ೨೫೦ರೂ ರಿಯಾಯಿತಿ ದೊರೆಯುತ್ತಿತ್ತು. ಸರಿ ೨೦೦ರೂ ಕೊಟ್ಟು ತೆಗೆದುಕೊಂಡ ಒಂದು ಹವಾಯಿ ಚಪ್ಪಲಿ ಕೂಡ ಗಾಡಿ ಸೇರಿತು.

“ರ್ರೀ, ಮುಂದುಗಡೆ ನೋಡಿ, ಬಿಲ್ ಮಾಡಿಸುವ ಬಳಿ ಕ್ಯೂ ಜಾಸ್ತಿ ಆಗುತ್ತೆ. ಆಗಲೇ ಎರಡು ಗಂಟೆ ಆಗುತ್ತಾ ಬಂತು. ಅಕ್ಕಿ, ಬೇಳೆ ಎಲ್ಲಾ ಮನೆ ಹತ್ತಿರ ತೆಗೆದುಕೊಂಡರೆ ಆಯ್ತು. ಈಗ ಬಿಲ್ ಮಾಡಿಸಿ, ಹಾಗೆ ಮೇಲುಗಡೆ ಕೃಷ್ಣ ಭವನದಲ್ಲಿ ದೋಸೆ ತಿಂದುಕೊಂಡು ಹೋಗೋಣ” ಎಂದಾಗ ಮರು ಮಾತಿಲ್ಲದೇ ಒಪ್ಪಿಕೊಂಡೆ. ಹಾಗೆ ಬಿಲ್ ಮಾಡಿಸುವಾಗ ಎದುರುಗಡೆ ಮನೆ ಮಗು ಬಂದಾಗ ಕೊಡಲು ಆಗುತ್ತೇ ಎಂದು ಅಲ್ಲೇ ಕೌಂಟರ್ ಬಳಿ ಇಟ್ಟಿದ್ದ ಎರಡು ಕಿಂಡರ್ ಜಾಯ್ ಗಾಡಿಗೆ ಸೇರಿಸಿದೆ.


  • ಎನ್.ವಿ.ರಘುರಾಂ – ಕೆಪಿಸಿಎಲ್ ನಿವೃತ್ತ ಅಧಿಕಾರಿ, ಲೇಖಕರು, ಬೆಂಗಳೂರು.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW