ಪತ್ರಕರ್ತರಾದ ಎ. ಆರ್. ಮಣಿಕಾಂತ್ ಅವರ ‘ಅಮ್ಮ ಹೇಳಿದ ಎಂಟು ಸುಳ್ಳುಗಳು’ ಕೃತಿಯಲ್ಲಿ 35 ಪ್ರೇರಣಾದಾಯಕ ಲೇಖನಗಳನ್ನು ಒಳಗೊಂಡಿದ್ದು, ಈ ಪುಸ್ತಕವು ಬದುಕಿನ ಹಲವು ಮಜಲುಗಳನ್ನು ಪರಿಚಯಿಸುತ್ತದೆ. ಈ ಕೃತಿಯ ಕುರಿತು ಲೇಖಕರಾದ ಚೇತನ ಭಾರ್ಗವ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ: ಅಮ್ಮ ಹೇಳಿದ ಎಂಟು ಸುಳ್ಳುಗಳು
ಲೇಖಕರು: ಎ. ಆರ್. ಮಣಿಕಾಂತ್
ಪ್ರಕಾಶಕರು: ನೀಲಿಮಾ ಪ್ರಕಾಶನ
ಮೊದಲ ಮುದ್ರಣ: ಏಪ್ರಿಲ್ 2009
ನೂರ ತೊಂಬತ್ತನೇ ಮುದ್ರಣ: ಏಪ್ರಿಲ್ 2024
ಪುಟಗಳು: 164
ಬೆಲೆ: 180 ರೂ.
ಪುಸ್ತಕವನ್ನು ಓದಿದರೆ ಜ್ಞಾನಾರ್ಜನೆ ಆಗುತ್ತದೆ. ಆದರೆ ಕೆಲವು ಪುಸ್ತಕವನ್ನು ಓದಿದಾಗ ಅದು ಮನಸ್ಸಿನ ಆಳಕ್ಕೆ ಇಳಿದು ಓದುಗರ ಹೃದಯ ಮುಟ್ಟಿ ಬದುಕಿನ ಮೌಲ್ಯವನ್ನು ನೆನಪಿಸುತ್ತಾ, ಜೀವನದ ದೃಷ್ಟಿಕೋನವನ್ನು ಬದಲಿಸುತ್ತದೆ. ಅಂತಹ ಅಪರೂಪದ ಕೃತಿ ಎ. ಆರ್. ಮಣಿಕಾಂತ್ ರವರ “ಅಮ್ಮ ಹೇಳಿದ ಎಂಟು ಸುಳ್ಳುಗಳು” ಈ ಪುಸ್ತಕ ಕೇವಲ ತಾಯಿಯ ಪ್ರೀತಿ ಮತ್ತು ಮಮತೆಯ ಕುರಿತಾದ ಬರಹಗಳ ಸಂಗ್ರಹವಲ್ಲ. ಇದು ಬದುಕಿನ ನೈಜ ಘಟನೆಗಳು ಮತ್ತು ಜೀವನದ ಮೌಲ್ಯಗಳನ್ನು ತಿಳಿಸುವ, 35 ಪ್ರೇರಣಾದಾಯಕ ಲೇಖನಗಳನ್ನು ಒಳಗೊಂಡ ಸುಂದರವಾದ ಗುಚ್ಛ.
ಈ ಪುಸ್ತಕವು ಬದುಕಿನ ಹಲವು ಮಜಲುಗಳನ್ನು ಪರಿಚಯಿಸುತ್ತದೆ. ಇದರಲ್ಲಿ ಮಾನವೀಯ ಸಂಬಂಧಗಳು, ಸಾಧಕರ ಜೀವನ, ಪ್ರೀತಿ, ಕರುಣೆ ,ತ್ಯಾಗ, ಬದುಕಿನ ಸವಾಲುಗಳನ್ನು ಎದುರಿಸುವ ಛಲ, ಅಂಗ ವೈಕಲ್ಯ ಮೆಟ್ಟಿ ನಿಂತ ಸಾಧಕರ ಆತ್ಮವಿಶ್ವಾಸ, ದೇಶ ಕಾಯುವ ಯೋಧರ ತ್ಯಾಗ, ಪ್ರೀತಿ ಪ್ರೇಮದ ಮಧುರ ಭಾವನೆ ಯನ್ನು ಒಳಗೊಂಡ ಬರಹಗಳು ಕಥೆಯ ರೂಪದಲ್ಲಿದೆ. ಕೆಲವು ಕಥೆಗಳನ್ನು ಓದುವಾಗ ಕಣ್ಣಂಚಿನಲ್ಲಿ ನೀರನ್ನು ತರಿಸಿದರೆ ಇನ್ನೂ ಕೆಲವು, ಬದುಕಿನಲ್ಲಿ ಏನಾದರೂ ಸಾಧಿಸಬೇಕೆನ್ನುವ ಛಲವನ್ನು ಹುಟ್ಟಿಸುತ್ತದೆ.

ಜೀವನದಲ್ಲಿ ಸಾಧನೆ ಮಾಡಬೇಕು ಗೆಲ್ಲಬೇಕು ಎನ್ನುವ ಛಲವಿದ್ದರೆ ಯಾವ ವೈಕಲ್ಯವೂ ಬಾಧಿಸುವುದಿಲ್ಲ ಎನ್ನುವುದಕ್ಕೆ, ಕೈ ಕಾಲುಗಳೇ ಇಲ್ಲದ ಆಸ್ಟ್ರೇಲಿಯದ ನಿಕ್ ಜಿಸಿಕ್ ಹೋರಾಟದ ಬದುಕು, ಕಾಲುಗಳಿಲ್ಲದ ನಾಗನರೇಶ ಕರುತರ ಸಾಫ್ಟ್ವೇರ್ ಇಂಜಿನಿಯರ್ ಆದ ಕಥೆ, ಅಂಧತ್ವಕ್ಕೆ ಸವಾಲು ಹಾಕಿ ಭರತನಾಟ್ಯರ ದೊರೆಯಾದ ಭೂಸೆ ಗೌಡರ ಯಶೋಗಾಥೆ, ಬಡತನದ ಮಧ್ಯೆಯು ಐಎಎಸ್ ಮಾಡಿದ ಗೋವಿಂದ ಜೈ ಸ್ಟಾಲ್ ನ ದಿಗ್ವಿಜಯದ ಚರಿತೆ, ಎರಡು ಕೈಗಳಿಲ್ಲದ ಹುಡುಗಿ ರಾಷ್ಟ್ರೀಯ ಈಜು ಚಾಂಪಿಯನ್ನಾಗಿ, ಕರಾಟೆ ಬ್ಲಾಕ್ ಬೆಲ್ಟ್ ಪಡೆದು, ವಿಮಾನ ಹಾರಿಸಿ, ಕಾಲುಗಳಿಂದಲೇ ವಿಮಾನ ಹಾರಿಸಿದ ಜಗತ್ತಿನ ಮೊಟ್ಟಮೊದಲ ಪೈಲೆಟ್ ಎಂಬ ಖ್ಯಾತಿಗೆ ಪಾತ್ರರಾಗಿ ಸಾಧನೆಗೈದ ನಿದರ್ಶನವೇ ಸಾಕ್ಷಿ.
ಹುಟ್ಟು ಕುರುಡನಾಗಿದ್ದ 25 ವರ್ಷದ ತರುಣನಿಗೆ ಕಣ್ಣಿನ ಆಪರೇಷನ್ ಆದ ನಂತರ, ಹೊರ ಪ್ರಪಂಚವನ್ನು ಅವನು ಸಂತೋಷದಿಂದ, ಆಶ್ಚರ್ಯದಿಂದ, ಕುತೂಹಲ ತುಂಬಿಕೊಂಡು, ರೋಮಾಂಚನಗೊಂಡು ನೋಡುತ್ತಿದ್ದ ರೀತಿ, ಅವನ ವರ್ತನೆಯನ್ನು ತಪ್ಪಾಗಿ ಅರ್ಥೈಸಿಕೊಂಡ ಜನರು ಹೌಹಾರಿದ ಬಗೆ, ಸತ್ಯ ತಿಳಿದ ಮೇಲೆ ಅದೇ ಜನರು ಮರುಕ ಪಡುವ ಕಥೆಯು ಓದುಗನ ಮನಮುಟ್ಟುತ್ತದೆ.
ಭ್ರೂಣ ಹತ್ಯೆ ಮಹಾ ಪಾಪ ಎಂದು ಗೊತ್ತಿದ್ದರೂ ಇಂದಿಗೂ ಹೆಣ್ಣು ಮಗು ಎಂದು ತಿಳಿದೊಡನೆ ಭ್ರೂಣ ಹತ್ಯೆ ನಡೆಯುತ್ತಿರುವುದು ವಿಷಾದನೀಯ ಸಂಗತಿ. ತನ್ನ ತಾಯಿಯ ಒಡದೊಳಗಿಂದಲೇ ಈ ಎಲ್ಲಾ ಘಟನೆಗಳನ್ನು ಗಮನಿಸಿ, ತನ್ನ ತಾಯಿಯ ಅಸಹಾಯಕತೆಗೆ ಮರುಗಿ, ನನ್ನ ಕಣ್ಣೀರು ನಿನಗೆ ಕಾಣಿಸುವುದಿಲ್ಲ, ಎಲ್ಲರಿಗೂ ಕಾಣಿಸುವ ನಿನ್ನ ಕಣ್ಣೀರಿಗೆ ಯಾರೂ ಕರುಗುವುದಿಲ್ಲ ಎನ್ನುತ್ತಾ, ತನ್ನ ಎದುರಿಗೆ ದೇವಲೋಕ, ತನ್ನ ಸುತ್ತ ಅಪ್ಸರೆಯರು ಇದ್ದರೂ ಎಲ್ಲಕ್ಕಿಂತ ಮಿಗಿಲು ತಾಯಿಯ ಮಡಿಲು ಎಂದು ತನ್ನ ಅಳಲನ್ನು ತೋಡಿಕೊಳ್ಳುವ ಕಂದನ ಪತ್ರ ಎಂಬ ಬರಹ ಮನವನ್ನು ಹಿಂಡುತ್ತದೆ.
ಇಡೀ ಭರತ ಖಂಡದ ಚಕ್ರವರ್ತಿ ಆಗಬೇಕೆಂಬ ಆಸೆಯನ್ನು ಹೊಂದಿದ್ದ ಸಾಮ್ರಾಟ್ ಅಶೋಕ ಕಳಂಗದ ರಾಜಕುಮಾರಿ ಅಮಿತಾಳ ಮುಗ್ಧತೆಗೆ ಸೋತು ದೇವನಾಂ ಪ್ರಿಯ, ರಾಜನಾಂ ಪ್ರಿಯ, ಪ್ರಿಯದರ್ಶಿ ಎಂದೆ ಹೆಸರಾದ ಕಥೆ ಓದುವಾಗ ರೋಮಾಂಚನವಾಗುತ್ತದೆ.
ಈ ಪುಸ್ತಕದ ಶೀರ್ಷಿಕೆಯೇ ಅತ್ಯಂತ ವಿಶಿಷ್ಟ ಹಾಗೂ ಕುತೂಹಲಕಾರಿಯಾಗಿದೆ. ಅಮ್ಮ ಹೇಳುವ ಸುಳ್ಳುಗಳ ಹಿಂದೆ ಅಡಗಿರುವುದು ಮಕ್ಕಳ ಮೇಲಿನ ಅಪಾರ ಪ್ರೀತಿ, ಕಾಳಜಿ ಮತ್ತು ತ್ಯಾಗ. ಮಕ್ಕಳ ಹೊಟ್ಟೆ ತುಂಬಿಸಲು ತನ್ನ ಹಸಿವನ್ನೇ ಮರೆಮಾಚುವ ತಾಯಿಯ ಮಮತೆ, ಮಕ್ಕಳ ಸಂತೋಷದಲ್ಲೇ ತನ್ನ ಸಂತೋಷವನ್ನು ಕಾಣುವ ಅಮ್ಮನ ನಿಸ್ವಾರ್ಥ ಮನೋಭಾವ ಓದುಗರ ಮನಸ್ಸನ್ನು ಭಾವುಕಗೊಳಿಸುತ್ತದೆ.

ಲೇಖಕರ ಸರಳವಾದ ಭಾಷೆ, ಮನಮುಟ್ಟುವ ನಿರೂಪಣೆಯು ಓದುಗರ ಮನಸ್ಸನ್ನು ತಲುಪುತ್ತದೆ. ಇಲ್ಲಿ ಮಾನವೀಯ ಸಂಬಂಧಗಳು, ಕೌಟುಂಬಿಕ ಮೌಲ್ಯಗಳು, ಪ್ರೀತಿ, ಕರುಣೆ, ಸಹಾನುಭೂತಿ ಮತ್ತು ಬದುಕಿನ ಸತ್ಯಗಳು ಸುಂದರವಾಗಿ ಅಭಿವ್ಯಕ್ತವಾಗಿದೆ. ಇದರಲ್ಲಿ ಬರುವ ಪ್ರತಿಯೊಂದು ಪ್ರಸಂಗವೂ ಓದುಗರನ್ನು ಕ್ಷಣಕಾಲ ನಿಲ್ಲಿಸಿ ಯೋಚಿಸುವಂತೆ ಮಾಡುತ್ತದೆ. ಬದುಕಿನಲ್ಲಿ ಎದುರಾಗುವ ನೋವು, ಅವಮಾನ, ಸೋಲು, ಸಂಕಷ್ಟಗಳ ನಡುವೆಯೂ ಭರವಸೆಯನ್ನು ಕಳೆದುಕೊಳ್ಳಬಾರದು ಎಂಬ ಸಂದೇಶವನ್ನು ಸಾರುತ್ತವೆ.
ಘಟನೆಗಳ ಮೂಲಕವೇ ಬದುಕಿನ ಪಾಠಗಳನ್ನು ಮನದಟ್ಟು ಮಾಡಿಸುವಲ್ಲಿ ಲೇಖಕರು ಯಶಸ್ವಿಯಾಗಿದ್ದಾರೆ. ಸೋಲುಗಳು ಅಂತ್ಯವಲ್ಲ, ಅವು ಸಾಧನೆಯ ಮೆಟ್ಟಿಲುಗಳು, ಕೊರತೆಗಳ ಬಗ್ಗೆ ಕೊರಗುವುದಕ್ಕಿಂತ ಇರುವ ಸಾಮರ್ಥ್ಯವನ್ನು ಗುರುತಿಸಿಕೊಂಡು ಮುನ್ನಡೆಯಬೇಕು ಎಂಬ ಸಕಾರಾತ್ಮಕ ಸಂದೇಶವನ್ನು ಸಾರುವುದು ಈ ಕೃತಿಯ ವೈಶಿಷ್ಟ್ಯ ಎಂದು ನನ್ನ ಅನಿಸಿಕೆ. ಈ ಕೃತಿಗೆ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯು ದೊರೆತಿದೆ.
ಓದುಗನ ಮನಸ್ಸಿಗೆ ಸ್ಪರ್ಶಿಸಿ, ಆಲೋಚನೆಗೆ ಹಚ್ಚಿ, ಬದುಕನ್ನು ಪ್ರೀತಿಸುವಂತೆ ಮಾಡುವ ಮತ್ತು ಸಂಬಂಧಗಳ ಬೆಲೆಯನ್ನು ತಿಳಿಸಿ ಕೊಡುವ ಭಾವನಾತ್ಮಕ ಪುಸ್ತಕ ಇದಾಗಿದೆ. ಬದುಕಿನಲ್ಲಿ ಭರವಸೆಯಿಂದ ಮುನ್ನಡೆಯಲು ಪ್ರೇರಣೆ ನೀಡುವ ಈ ಪುಸ್ತಕವನ್ನು ಪ್ರತಿಯೊಬ್ಬರು ಓದಲೇ ಬೇಕು. ಓದಿದ ನಂತರವೂ ಬಹುಕಾಲ ಮನಸ್ಸಿನಲ್ಲಿ ಉಳಿಯುವ ಈ ಕೃತಿಯು ನಿಮ್ಮೆಲ್ಲರ ಗ್ರಂಥಾಲಯದಲ್ಲಿ ಸಂಗ್ರಹವಾಗಲಿ.
- ಚೇತನ ಭಾರ್ಗವ – ಅರಮನೆತೋಟ.
