ಮಕ್ಕಳ ಮೇಲೆ, ಮನೆಯಲ್ಲಿನ ಇತರ ಸದಸ್ಯರ ಮೇಲೆ ಪ್ರತಿಯೊಂದು ವಿಷಯಕ್ಕೂ ನಮ್ಮ ಭಾವನೆಗಳನ್ನು ಹೇರಿ ಹಾಗೇ ಇರು, ಹೀಗೇ ಇರು ಎಂದರೆ ಅದು ಅವರಿಗೆ ಟಾರ್ಚರ್ ಎನಿಸಲು ಶುರುವಾಗುತ್ತದೆ. ಆಗ ಅವರು ನಮ್ಮ ಹತ್ತಿರ ಬರುವುದನ್ನೇ ಕಡಿಮೆ ಮಾಡುತ್ತಾರೆ. ಅಂಕಣಕಾರ್ತಿ ಮಂಗಳ ಎಂ ನಾಡಿಗ್ ಅವರ ‘ಅಂಗೈಯಲ್ಲಿ ಪ್ರಪಂಚ’ ಅಂಕಣದಲ್ಲಿ ‘ಜೀವನದಲ್ಲಿ ಶಿಸ್ತು’ ತಪ್ಪದೆ ಮುಂದೆ ಓದಿ…
ರೋಹಿಣಿ ತನ್ನ ಮಕ್ಕಳೊಡನೆ ಹೊರಗೆ ಹೋದಾಗ ಮಕ್ಕಳು ತಿಂದ ಚಾಕಲೇಟ್ ಕಾಗದವನ್ನು ತನ್ನ ವ್ಯಾನಿಟಿ ಬ್ಯಾಗಿನಲ್ಲಿ ಇಟ್ಟುಕೊಂಡು ಬಂದು ಮನೆಯಲ್ಲಿ ಡಸ್ಟ್ ಬಿನ್ ಗೆ ಹಾಕುತ್ತಿದ್ದಳು. ಇದರಿಂದ ಅವಳ ಮಕ್ಕಳೂ ಸಹ ಇದೇ ಅಭ್ಯಾಸವನ್ನು ರೂಢಿಸಿಕೊಂಡರು. ಹೊರಗೆಲ್ಲಾದರೂ ತಿಂದರೆ ವೇಸ್ಟ್ ನ್ನು ಅಲ್ಲೇ ಇರುವ ಡಸ್ಟ್ ಬಿನ್ಗೆ ಹಾಕುವುದು, ಕಾರಲ್ಲಿ, ಆಟೋದಲ್ಲಿ ಕುಳಿತು ತಿಂದರೆ ಖಾಲಿಯಾದ ಪ್ಯಾಕ್ಗಳನ್ನು ಮನೆಗೆ ತಂದು ಡಸ್ಟ್ ಬಿನ್ಗೆ ಹಾಕುವುದು ಆ ಮಕ್ಕಳು ಅವಳ ಅಮ್ಮನಿಂದ ಕಲಿತ ಅಭ್ಯಾಸ ಅಥವಾ ಶಿಸ್ತು ಎನ್ನಬಹುದು. ಇದಕ್ಕೇ ಹೇಳುವುದು ಮಕ್ಕಳು ಹೇಳಿದಂತೆ ಮಾಡುವುದಕ್ಕಿಂತ ದೊಡ್ಡವರ ನಡತೆಯನ್ನು ಅನುಸರಿಸುತ್ತಾರೆ ಎಂದು. ಬಸ್ಸಿನಲ್ಲಿ ಚಾಕೋಲೇಟ್, ಬಿಸ್ಕತ್, ಇನ್ನು ಮುಂತಾದ ತಿನಿಸುಗಳನ್ನು ತಿಂದು ಅವುಗಳ ಪ್ಯಾಕ್ಗಳನ್ನು ಕಿಟಕಿಯಿಂದ ಗಾಳಿಯಲ್ಲಿ ತೇಲಿ ಬಿಡುವವರನ್ನೂ, ಮುದ್ದೆಮಾಡಿ ಎಸೆಯುವವರನ್ನೂ, ಹಣ್ಣಿನ ಸಿಪ್ಪೆಯನ್ನು ರಸ್ತೆಗೆ ಎಸೆಯುವವರನ್ನು ನೋಡುತ್ತಲೇ ಇರುತ್ತೇವೆ. ರಸ್ತೆಯಲ್ಲಿ ಎಲ್ಲೆಂದರಲ್ಲಿ ಉಗುಳುವುದು, ತಿಂದು, ಕುಡಿದು ಖಾಲಿಯಾದ ಪ್ಯಾಕ್ಗಳನ್ನು ಅಲ್ಲಲ್ಲೇ ಬಿಸ್ಹಾಕಿ ಬರುವುದು ಇವೆಲ್ಲಾ ಒಳ್ಳೆಯ ನಾಗರಿಕರ ಲಕ್ಷಣ ಎನಿಸುವುದಿಲ್ಲ. ಒಳ್ಳೆಯ ನಾಗರಿಕರು ಎನಿಸಿಕೊಳ್ಳಲು ಶಿಸ್ತು ಸಹ ಮುಖ್ಯವಾಗುತ್ತದೆ.
ಚಿಕ್ಕ ಮಕ್ಕಳಿದ್ದಾಗಿನಿಂದಲೇ ಊಟ ಚೆಲ್ಲಬಾರದೆಂದು ಹೇಳಿಕೊಡಬೇಕು. ಒಂದು ವಯಸ್ಸಿನ ನಂತರ ಅದರ ಮಹತ್ವ, ಅದರ ಹಿಂದಿನ ಶ್ರಮ, ಅರ್ಧಂಬರ್ಧ ತಿಂದು ಬಿಟ್ಟರೆ ಮತ್ತೆ ಯಾರಿಗೂ ತಿನ್ನಲು ಆಗುವುದಿಲ್ಲ, ಪಾತ್ರೆಯಲ್ಲಿದ್ದರೆ ಹಸಿದವರಿಗೆ ಆಗುತ್ತದೆ ಎಂದು ತಿಳಿಸಿ ಹೇಳಬೇಕು. ಈ ರೀತಿಯ ಶಿಸ್ತನ್ನು ಚಿಕ್ಕವಯಸ್ಸಿನಿಂದಲೇ ಕಲಿಸುವುದು ಒಳ್ಳೆಯದು.
ಜೀವನದಲ್ಲಿ ಶಿಸ್ತು ಬಹಳ ಮುಖ್ಯ. ಆದರೆ ಶಿಸ್ತೇ ಜೀವನವಾಗಬಾರದು. ಮಕ್ಕಳನ್ನು ಬೆಳೆಸುವಾಗ ಕೆಲವೊಂದು ವಿಷಯದಲ್ಲಿ ಶಿಸ್ತನ್ನು ಕಲಿಸಬೇಕು. ಇಲ್ಲದಿದ್ದರೆ ಮುಂದೆ ಅವರು ಬೇರೆಯವರಿಂದ ಹೇಳಿಸಿಕೊಳ್ಳುವಂತಾಗುತ್ತದೆ. ಅವರ ಪುಸ್ತಕಗಳನ್ನು ಸರಿಯಾಗಿ ಜೋಡಿಸಿ ಇಟ್ಟುಕೊಳ್ಳುವುದು, ಶಾಲೆಯಿಂದ ಮನೆಗೆ ಬಂದ ತಕ್ಷಣ ಶೂಗಳನ್ನು ಇಡಬೇಕಾದ ಜಾಗದಲ್ಲಿ ಇಡುವುದು, ಸಾಕ್ಸ್ ಗಳನ್ನು ಒಗೆಯಲು ಹಾಕುವುದು, ಕೈಕಾಲುಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳುವುದು, ಸಮವಸ್ತ್ರ ಬದಲಾಯಿಸುವುದು, ಊಟವಾದ ನಂತರ ತಿಂದ ತಟ್ಟೆಯನ್ನು ಅಲ್ಲಿಯೇ ಬಿಡದೇ ತೊಳೆದಿಡುವುದು ಇಲ್ಲವೆಂದರೆ ತೊಳೆಯುವ ಜಾಗಕ್ಕಾದರೂ ಹಾಕುವುದು. ದೊಡ್ಡವರೂ ಅಷ್ಟೇ, ಮನೆಯನ್ನು ಶುಚಿಯಾಗಿ ಇಟ್ಟುಕೊಳ್ಳುವುದು. ಆಯಾ ವಸ್ತುಗಳನ್ನು ಅದರದೇ ಜಾಗಕ್ಕೆ ಇಡುವುದು. ಇದರಿಂದ ಮನೆಯೂ ನೋಡಲು ಚೆನ್ನಾಗಿರುತ್ತದೆ, ಖಾಯಿಲೆಗಳೂ ಬರುವುದಿಲ್ಲ.

ಫೋಟೋ ಕೃಪೆ : ಅಂತರ್ಜಾಲ
ಬಟ್ಟೆ : ನಾವು ತೊಡುವ ಬಟ್ಟೆ ಶುಭ್ರವಾಗಿದ್ದಾಗ ನಮ್ಮ ಮನಸ್ಸಿಗೂ ಒಂದು ತರದ ಹೊಸತನ (freshness) ಉಂಟಾಗುತ್ತದೆ. ಇಸ್ತ್ರಿ ಮಾಡಿ ಧರಿಸಿದರಂತೂ ನೋಡಲು ಆನಂದದಾಯಕವಾಗಿರುತ್ತದೆ. ಆಯಾ ಸ್ಥಳಗಳಿಗೆ, ಹುದ್ದೆಗೆ ತಕ್ಕಂತೆ ಬಟ್ಟೆಗಳನ್ನು ಧರಿಸುವುದು ವ್ಯಕ್ತಿಯ ವ್ಯಕ್ತಿತ್ವಕ್ಕೊಂದು ಹಿಡಿದ ಕೈಗನ್ನಡಿಯಂತೆ. ಇಂಟರ್ವ್ಯೂಗಳಿಗೆ ಹೋದಾಗ ಇವರ ವೇಷ-ಭೂಷಣ, ಹಾವ-ಭಾವ, ಮಾತುಕತೆ, ಕುಳಿತುಕೊಳ್ಳುವ ಭಂಗಿ, ಇವೆಲ್ಲವುಗಳಿಂದಲೇ ಈ ವ್ಯಕ್ತಿ ಹೇಗೆ ಎಂದು ನಿರ್ಧರಿಸಿಬಿಡುತ್ತಾರೆ. ಹಾಗಾಗಿ ಶಿಸ್ತು ಎನ್ನುವುದು ಜೀವನದ ಪ್ರತಿ ಹಂತದಲ್ಲೂ ನಮ್ಮ ಏಳಿಗೆಗೆ ಬಹಳ ಮುಖ್ಯವಾಗುತ್ತದೆ.
ಶಿಸ್ತು ಎನ್ನುವ ಪದ ಕೇಳಿದರೇನೇ ಒಂದು ತರಹ ಕಟ್ಟಿ ಹಾಕಿದ ಹಾಗೆ ಅನ್ನಿಸುತ್ತದೆ. ಏಕೆಂದರೆ, ಮನೆಯಲ್ಲಿ/ಶಾಲೆಯಲ್ಲಿ/ ಆಫೀಸಿನಲ್ಲಿ ಎಲ್ಲಾ ಕಡೆಯೂ ಅವರ ತಂದೆ ತುಂಬಾ ಸ್ಟ್ರಿಕ್ಟ್ ಅಂತೆ, ಆ ಟೀಚರ್ ತುಂಬಾ ಸ್ಟ್ರಿಕ್ಟ್ ಅಂತೆ, ಆ ಬಾಸ್ ತುಂಬಾ ಸ್ಟ್ರಿಕ್ಟ್ ಅಂತೆ ಅನ್ನುವ ಪದವೇ ಅಲ್ಲಿಯ ವಾತಾವರಣದ ಬಿಗು ಎಷ್ಟು ಎಂಬುದನ್ನು ತೋರಿಸುತ್ತದೆ. ಶಿಸ್ತು ಎನ್ನುವುದು ನಮ್ಮ ಬದುಕಿನ ರೀತಿಗೆ, ನಾವು ಮಾಡುವ ಕೆಲಸ-ಕಾರ್ಯಗಳ ಯಶಸ್ಸಿಗೆ ನಾವು ಹಾಕಿಕೊಳ್ಳುವ ಒಂದಷ್ಟು ನಿಯಮಗಳು ಎಂದರೆ ತಪ್ಪಲ್ಲ. ಆದರೆ ನಮಗೆ ಸರಿ ಎನಿಸಿದ ನಿಯಮಗಳು ಬೇರೆಯವರಿಗೂ ಸರಿ ಎನಿಸಬೇಕು ಅಂತೇನಿಲ್ಲ. ಅವರ ಬದುಕಿನ ರೀತಿಯೇ ಬೇರೆ ಇರಬಹುದು. ಹಾಗಾಗಿ ನಾವು ನಮ್ಮ ಭಾವನೆಗಳನ್ನು ಇನ್ನೊಬ್ಬರ ಮೇಲೆ ಹೇರಬಾರದು. ಆಸೆ-ಆಕಾಂಕ್ಷೆಗಳನ್ನು, ಅತಿಯಾದ ಭಾವುಕತೆಯನ್ನು , ನಡವಳಿಕೆಗಳನ್ನು ತನ್ನ ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ತನಗೆ ತಾನೇ ಮಾಡಿಕೊಂಡು ಅನುಸರಿಸುವ ಶಿಸ್ತು ಎನ್ನಬಹುದು. ಶಿಸ್ತಿನಿಂದ ಅನುಚಿತ ವರ್ತನೆಗೆ ಅವಕಾಶ ಇರುವುದಿಲ್ಲ. ನಾವೇ ಒಂದು ಗೆರೆ ( ಬಾರ್ಡರ್) ಹಾಕಿಕೊಂಡಿರುವುದರಿಂದ ಬೇರೆಯವರೊಂದಿಗಿನ ಮಾತುಕತೆ, ನಡತೆ ಯಾವುದರಲ್ಲೂ ಅತಿರೇಕವಿಲ್ಲದೇ ಒಳ್ಳೆಯ ಗೌರವಾನ್ವಿತ ಬಾಂಧವ್ಯ ಏರ್ಪಡುತ್ತದೆ. ಅಲ್ಲದೇ ಸಮಯಕ್ಕೆ ಸರಿಯಾಗಿ ಕೆಲಸ ಕಾರ್ಯಗಳೂ ಮುಗಿಯುತ್ತವೆ. ಇದರಿಂದ ಒತ್ತಡ ಉಂಟಾಗುವುದು ತಪ್ಪುತ್ತದೆ. ಆರೋಗ್ಯವೂ ಚೆನ್ನಾಗಿರುತ್ತದೆ. ಸದಾ ಚಟುವಟಿಕೆಯಿಂದ ಇರುತ್ತಾರೆ. ಆಲಸ್ಯ ಎನ್ನುವುದು ಹತ್ತಿರವೂ ಸುಳಿಯುವುದಿಲ್ಲ. ಸರ್ವತೋಮುಖವಾಗಿ ಅಭಿವೃದ್ಧಿ ಪಥದತ್ತ ಸಾಗಲು ಇದು ಅನುಕೂಲವಾಗುತ್ತದೆ. ಅದರಿಂದ ಸಮಾಜದಲ್ಲಿ ಗೌರವ ತನ್ನಿಂತಾನೇ ದೊರೆಯುತ್ತದೆ.
ಮುಖ್ಯವಾಗಿ ಶಿಸ್ತು ಪಾಲಿಸಬೇಕಾದದ್ದು ಸಮಯದ ವಿಷಯದಲ್ಲಿ. ಅಂದಿನ ದಿನಚರಿ ಅಂದುಕೊಂಡ ನಿಗದಿತ ಸಮಯಕ್ಕೆ ಶುರುವಾದರೆ ಅಂದಿನ ಕಾರ್ಯಗಳ ನಿರ್ವಹಣೆಯು ಸುಲಭವಾಗಿ ಆಗುತ್ತದೆ. ಕೆಲಸಗಳು ಮುಗಿದು ಮುಂದಿನ ಹಂತಕ್ಕೆ ಹೋಗಲು, ಅಭಿವೃದ್ಧಿಯತ್ತ ಸಾಗಲು ಅನುಕೂಲವಾಗುತ್ತದೆ. ಸಮಯ ಪಾಲನೆ ತಪ್ಪಿದರೆ ಆ ದಿನದ ಶುರುವೇ ಹಾಳಾಗಿ ಮುಂದಿನ ಎಲ್ಲಾ ಕೆಲಸಗಳ ಮೇಲೆ ಅದರ ಪರಿಣಾಮ ಬೀರಿ ಇಡೀ ದಿನ ನೆಮ್ಮದಿಯಿಲ್ಲದೇ ಕಳೆಯುವಂತಾಗುತ್ತದೆ.
ಆದರೆ ಅತಿಯಾದ ಶಿಸ್ತು ಯಾರಿಗಾದರೂ ಹಿಂಸೆಯೆನಿಸುತ್ತದೆ. ಮನೆಯೆಂದ ಮೇಲೆ ಎಲ್ಲರಿಗೂ ಸ್ವಾತಂತ್ರ್ಯ ಬೇಕಾಗುತ್ತದೆ. ಮಕ್ಕಳ ಮೇಲೆ, ಮನೆಯಲ್ಲಿನ ಇತರ ಸದಸ್ಯರ ಮೇಲೆ ಪ್ರತಿಯೊಂದು ವಿಷಯಕ್ಕೂ ನಮ್ಮ ಭಾವನೆಗಳನ್ನು ಹೇರಿ ಹಾಗೇ ಇರು, ಹೀಗೇ ಇರು ಎಂದರೆ ಅದು ಅವರಿಗೆ ಟಾರ್ಚರ್ ಎನಿಸಲು ಶುರುವಾಗುತ್ತದೆ. ಆಗ ಅವರು ನಮ್ಮ ಹತ್ತಿರ ಬರುವುದನ್ನೇ ಕಡಿಮೆ ಮಾಡುತ್ತಾರೆ. ಯಾವ ಭಾವನೆಗಳನ್ನೂ, ನಡೆದ ವಿಷಯಗಳನ್ನೂ ನಮ್ಮೊಂದಿಗೆ ಹಂಚಿಕೊಳ್ಳುವುದಿಲ್ಲ. ಏನಾದರೂ ಸಮಸ್ಯೆ ಆಗಿದ್ದರೂ ಸಹ ಹೇಳಲು ಹಿಂಜರಿಯುತ್ತಾರೆ. ಮಾನಸಿಕವಾಗಿ ಜರ್ಝರಿತರಾಗುತ್ತಾರೆ. ಮನೆಯಲ್ಲಿ ಯಾವಾಗಲೂ ಪ್ರೀತಿಯ ವಾತಾವರಣವಿಲ್ಲದೇ, ಬರೀ ಶಿಸ್ತಿನ ವಾತಾವರಣವಿದ್ದರೆ ಅವರು ಪ್ರೀತಿಯನ್ನು ಹೊರಗಡೆ ಹುಡುಕಿಕೊಂಡು ಹೋಗುತ್ತಾರೆ. ಅದರಿಂದ ಅನೇಕ ತೊಂದರೆಗಳಿಗೆ ಈಡಾಗುತ್ತಾರೆ. ಆದ್ದರಿಂದ ಬೇಕಾದ ವಿಷಯಗಳಲ್ಲಿ ಶಿಸ್ತಿರಲಿ ಜೊತೆಗೆ ಪ್ರೀತಿ ವಿಶ್ವಾಸದ ಬಂಧನವೂ ಇರಲಿ.
- ಕೃಪೆ : ಸುತ್ತ ಮುತ್ತ ಲೇಖನಗಳ ಸಂಕಲನ
- ಹಿಂದಿನ ಸಂಚಿಕೆಗಳು :
- ಅಂಗೈಯಲ್ಲಿ ಪ್ರಪಂಚ (ಭಾಗ-೧)
- ಅಂಗೈಯಲ್ಲಿ ಪ್ರಪಂಚ (ಭಾಗ-೨)
- ಅಂಗೈಯಲ್ಲಿ ಪ್ರಪಂಚ ‘ಗಂಡು ಮಕ್ಕಳ ಮೇಲೆ ಉಂಟಾಗುವ ಲೈಂಗಿಕ ದೌರ್ಜನ್ಯ’ (ಭಾಗ-೩)
- ಅಂಗೈಯಲ್ಲಿ ಪ್ರಪಂಚ ‘ನಾನು… ನಿಮ್ಮ ದಿಂಬು’ (ಭಾಗ-೪)
- ಅಂಗೈಯಲ್ಲಿ ಪ್ರಪಂಚ ‘ಆಡಿಕೊಳ್ಳುವುದು’ (ಭಾಗ- ೫)
- ಅಂಗೈಯಲ್ಲಿ ಪ್ರಪಂಚ ‘ಕ್ರಿಯೆ ಇದ್ದ ಮೇಲೆ ಪ್ರತಿಕ್ರಿಯೆ’ (ಭಾಗ- ೬)
- ಅಂಗೈಯಲ್ಲಿ ಪ್ರಪಂಚ ‘ಹೈಸ್ಕೂಲ್, ಕಾಲೇಜು ಮಕ್ಕಳಲ್ಲಿ ಹೆಚ್ಚುತ್ತಿರುವ ಮಾದಕ ದ್ರವ್ಯಗಳ ವ್ಯಸನ’ (ಭಾಗ- ೭)
- ಅಂಗೈಯಲ್ಲಿ ಪ್ರಪಂಚ ‘ನಾನ್ರೀ ನಿಮ್ ದಾರಿ’ (ಭಾಗ- ೮)
- ಅಂಗೈಯಲ್ಲಿ ಪ್ರಪಂಚ ‘ಸಾಮಾಜಿಕ ಜವಾಬ್ದಾರಿ’ (ಭಾಗ- ೯)
- ಅಂಗೈಯಲ್ಲಿ ಪ್ರಪಂಚ ‘ಹರೆಯ ಉಕ್ಕಿ’ (ಭಾಗ- ೧೦)
- ಅಂಗೈಯಲ್ಲಿ ಪ್ರಪಂಚ ‘ಏನೇನೋ ಅಂದುಕೊಳ್ಳುವ ಮುನ್ನ’ (ಭಾಗ- ೧೧)
- ಅಂಗೈಯಲ್ಲಿ ಪ್ರಪಂಚ ‘ಮಗುವಿನ ಕಾಳಜಿ ಜೊತೆಗೆ ಜಾಗೃತಿ’ (ಭಾಗ- ೧೨)
- ಅಂಗೈಯಲ್ಲಿ ಪ್ರಪಂಚ ‘ವಯಸ್ಸಾದಂತೆ ಜೀವನ ಒಂದು ಬೋನಸ್ ’(ಭಾಗ- ೧೩)
- ಅಂಗೈಯಲ್ಲಿ ಪ್ರಪಂಚ ‘ವೃದ್ಧಾಶ್ರಮ ’ (ಭಾಗ- ೧೪)
- ಅಂಗೈಯಲ್ಲಿ ಪ್ರಪಂಚ ‘ಮಧ್ಯಮ ವರ್ಗದ ಬದುಕು’ (ಭಾಗ- ೧೫)
- ಅಂಗೈಯಲ್ಲಿ ಪ್ರಪಂಚ ‘ಕಣ್ಣೀರು’ (ಭಾಗ- ೧೬)
- ಅಂಗೈಯಲ್ಲಿ ಪ್ರಪಂಚ ‘ನಾನ್ರೀ…ನಿಮ್ ಮನೆ’ (ಭಾಗ- ೧೭)
- ಅಂಗೈಯಲ್ಲಿ ಪ್ರಪಂಚ ‘ರಸ್ತೆಯಲ್ಲಿ ವಾಹನದ ಮೇಲಿರಲಿ ಜವಾಬ್ದಾರಿ’ (ಭಾಗ- ೧೮)
- ಅಂಗೈಯಲ್ಲಿ ಪ್ರಪಂಚ ‘ವಿಘ್ನ ಸಂತೋಷಿಗಳುಶ್ರೀಲಕ್ಷ್ಮಿ ಬಹಳ ಮುದ್ದಾದ ಹುಡುಗಿ’ (ಭಾಗ- ೧೯)
- ಅಂಗೈಯಲ್ಲಿ ಪ್ರಪಂಚ ‘ಮನಸ್ಥಿತಿ’ (ಭಾಗ- ೨೦)
- ಅಂಗೈಯಲ್ಲಿ ಪ್ರಪಂಚ ‘ಮೂಡ್ ಇಲ್ಲ’ (ಭಾಗ- ೨೧)
- ಅಂಗೈಯಲ್ಲಿ ಪ್ರಪಂಚ ‘ಭಾವನಾತ್ಮಕ ಸಂಬಂಧ’ (ಭಾಗ- ೨೨)
- ಅಂಗೈಯಲ್ಲಿ ಪ್ರಪಂಚ ‘ನಗುವಿನ ಮಹತ್ವ’ (ಭಾಗ- ೨೩)
- ಅಂಗೈಯಲ್ಲಿ ಪ್ರಪಂಚ ಅಮ್ಮನೆಂಬ ಅಮೃತ (ಭಾಗ- ೨೪)
- ಅಂಗೈಯಲ್ಲಿ ಪ್ರಪಂಚ ‘ಕಾಡುವ ಶಾಪ’ (ಭಾಗ- ೨೬)
- ಅಂಗೈಯಲ್ಲಿ ಪ್ರಪಂಚ ‘ಇರಲಿ ನಿಮ್ಮ ಸ್ಪಂದನೆ’ (ಭಾಗ- ೨೭)
- ಅಂಗೈಯಲ್ಲಿ ಪ್ರಪಂಚ ‘ಬಾಲ್ಯ ಕಸಿಯುವ ಮುನ್ನ’’ (ಭಾಗ- ೨೮)
- ಅಂಗೈಯಲ್ಲಿ ಪ್ರಪಂಚ ‘ಆಯಮ್ಮನೆಂಬ ಅಮ್ಮ’ (ಭಾಗ- ೨೯)
- ಅಂಗೈಯಲ್ಲಿ ಪ್ರಪಂಚ (ಭಾಗ- ೩೦)
- ಅಂಗೈಯಲ್ಲಿ ಪ್ರಪಂಚ ‘ ಬಫೆ ಸಿಸ್ಟಮ್’ (ಭಾಗ- ೩೧)
- ಅಂಗೈಯಲ್ಲಿ ಪ್ರಪಂಚ ‘ ಸ್ನೇಹ ಸಂಬಂಧ’ (ಭಾಗ- ೩೨)
- ಅಂಗೈಯಲ್ಲಿ ಪ್ರಪಂಚ‘ಮಾತನಾಡುವುದೂ ಒಂದು ಕಲೆ’ (ಭಾಗ- ೩೩)
- ಅಂಗೈಯಲ್ಲಿ ಪ್ರಪಂಚ ‘ನೆರೆಹೊರೆಯ ಸಂಬಂಧ’ (ಭಾಗ- ೩೪)
- ಅಂಗೈಯಲ್ಲಿ ಪ್ರಪಂಚ ‘ಅನ್ನದಾತೋ ಸುಖೀಭವ’ (ಭಾಗ- ೩೫)
- ಅಂಗೈಯಲ್ಲಿ ಪ್ರಪಂಚ ‘ಸಂಬಂಧಗಳಲ್ಲಿ ಬಿರುಕು’ (ಭಾಗ- ೩೬)
- ಅಂಗೈಯಲ್ಲಿ ಪ್ರಪಂಚ ‘ನಾನು ಆಸ್ಪತ್ರೆ’ (ಭಾಗ- ೩೮)
- ಅಂಗೈಯಲ್ಲಿ ಪ್ರಪಂಚ ‘ಮಧ್ಯವರ್ತಿಗಳು’ (ಭಾಗ- ೩೯)
- ಅಂಗೈಯಲ್ಲಿ ಪ್ರಪಂಚ ‘ಸಂಬಂಧ’ (ಭಾಗ- ೪೦)
- ಅಂಗೈಯಲ್ಲಿ ಪ್ರಪಂಚ ‘ನಾನ್ರೀ…ನಿಮ್ ಬೆಂಗ್ಳೂರು’ (ಭಾಗ- ೪೧)
- ಅಂಗೈಯಲ್ಲಿ ಪ್ರಪಂಚ ‘ಮನೆಗೆ ಹೇಳದೆ ಬಂದ ಅತಿಥಿ’ (ಭಾಗ- ೪೩)
- ಅಂಗೈಯಲ್ಲಿ ಪ್ರಪಂಚ ‘ಸಂಬಂಧಗಳಲ್ಲಿ ಸ್ಥಾನಮಾನ’ (ಭಾಗ- ೪೪)
- ಅಂಗೈಯಲ್ಲಿ ಪ್ರಪಂಚ ‘ನಿಮ್ಮ ಪೆನ್ನು’ (ಭಾಗ- ೪೫)
- ಅಂಗೈಯಲ್ಲಿ ಪ್ರಪಂಚ ‘ತಾಯಿ ಮಕ್ಕಳ ಸಂಬಂಧ’ (ಭಾಗ- ೪೬)
- ಅಂಗೈಯಲ್ಲಿ ಪ್ರಪಂಚ ‘ಪರ ವಿರೋಧದ ನಡುವೆಯೂ ಜಟಾಪಟಿಗಳು’ (ಭಾಗ- ೪೭)
- ಹಿಂದಿನ ಸಂಚಿಕೆಗಳು :
- ಮಂಗಳ ಎಂ ನಾಡಿಗ್ – ಅಂಕಣಕಾರ್ತಿ, ಕವಿಗಳು, ಬೆಂಗಳೂರು.
