ಹೋಂವರ್ಕ್ ಮಾಡದ ಚಿಕ್ಕಮಕ್ಕಳಿಗೆ ನೀಡುವ ದೊಡ್ಡ ಪ್ರಮಾಣದ ಶಿಕ್ಷೆ ಅವರ ಜೀವಕ್ಕೆ ಅಪಾಯ ತರುತ್ತದೆ. ಒಳ್ಳೆ ಶಾಲೆಗಾಗಿ ಸಾಲಸೋಲ ಮಾಡಿ ಲಕ್ಷಾಂತರ ರೂಪಾಯಿ ಸುರಿದು ತಂದೆ-ತಾಯಿ ತಮ್ಮ ಮಕ್ಕಳನ್ನು ಶಾಲೆಗೆ ಕಳಿಸುವುದು ತಮ್ಮ ಮಕ್ಕಳು ವಿದ್ಯಾವಂತರಾಗಲಿ ಎಂದು. ಯಾರದೋ ಅಮಾನವೀಯ ಕೃತ್ಯಕ್ಕೆ ಬಲಿಯಾಗಲಿ ಎಂದಲ್ಲ. ಅಂಕಣಕಾರ್ತಿ ಮಂಗಳ ಎಂ ನಾಡಿಗ್ ಅವರ ‘ಅಂಗೈಯಲ್ಲಿ ಪ್ರಪಂಚ’ ಅಂಕಣದಲ್ಲಿ ‘ಬಾಲ್ಯ ಕಸಿಯುವ ಮುನ್ನ’ ತಪ್ಪದೆ ಮುಂದೆ ಓದಿ…
ಅದೊಂದು ಸುಸಜ್ಜಿತ ಶಾಲೆ. ಎಲ್ಲರೂ ಐಟಿ ಬಿಟಿ ಕಂಪನಿಗಳ ಕಡೆ ಮುಖ ಮಾಡುವ ಈ ಜಮಾನದಲ್ಲಿ ಕ್ಯಾಂಪಸ್ ಸೆಲೆಕ್ಷನ್ ನಲ್ಲಿ ಸಿಕ್ಕಿದ್ದ ಕೆಲಸ ಬಿಟ್ಟು ಬಹಳ ಇಷ್ಟಪಟ್ಟು ಆ ಶಾಲೆಗೆ ಒಬ್ಬರು ಶಿಕ್ಷಕಿಯಾಗಿ ಬಂದಿದ್ದರು.
ಆ ದಿನ ಮೊದಲ ಪೀರಿಯಡ್ ನಲ್ಲೇ ಒಂದು ಮಗು ಬಂದು ಮ್ಯಾಮ್, ನನ್ನ ಬುಕ್ ಮೇಲೆ ನಂತಮ್ಮ ನೀರ್ಚೆಲ್ಬಿಟ್ಟ ಬರ್ದಿದ್ದೆಲ್ಲಾ ಅಳ್ಸ್ ಹೋಗಿದೆ ಎಂದು ತೋರಿಸಿದಾಗ ಆ ಶಿಕ್ಷಕಿ ಇರ್ಲಿ ಬಿಡು ಎಂದರು. ಆ ಮಗು ಮ್ಯಾಮ್, ನಾನು ಮತ್ತೆ ಬರ್ಕೊಂಡು ಬರ್ತೀನಿ ಎಂದಾಗ ಆಯ್ತು ಎಂದ ಆ ಶಿಕ್ಷಕಿಯನ್ನೇ ಬಹಳ ಆಶ್ಚರ್ಯದಿಂದಲೇ ಆ ಮಗು ಕೇಳಿದ್ದು, ಮ್ಯಾಮ್ ನೀವು ನಂಗೆ ಬೈಯ್ಶಲ್ವಾ ಎಂದು. ಇಲ್ಲ, ನಾನ್ಯಾಕ್ ಬೈಯ್ಲೀ ಎಂದ ಶಿಕ್ಷಕಿಯ ಮಾತು ಕೇಳಿ ಆ ಮಗುವಿಗೆ ನಿರಾಳ ಭಾವ. ಆ ಕ್ಷಣ ಆ ಶಿಕ್ಷಕಿಗೆ ಅನಿಸಿದ್ದು, ಪಾಪ ಮಕ್ಳು ಯಾವ್ಯಾವ ವಿಷಯಕ್ಕೆಲ್ಲಾ ಹೆದ್ರುಕೊಳ್ತಾರಲ್ಲ ಎಂದು.
ಇನ್ನೊಂದು ತರಗತಿಯಲ್ಲಿ ಒಂದು ಮಗುವಿನ ಪೆನ್ಸಿಲ್, ರಬ್ಬರ್ ಕಳೆದಿದೆ ಎಂದು ಇಡೀ ತರಗತಿಯನ್ನು ಹುಡುಕಿದ್ದಾಯಿತು. ಎಲ್ಲರನ್ನೂ ಕೇಳಿದ್ದಾಯಿತು. ಎಲ್ಲೂ ಸಿಗದಿದ್ದಾಗ ಆ ಶಿಕ್ಷಕಿ ಎಲ್ಲರೂ ಒಂದ್ಸಲ ನಿಮ್ ನಿಮ್ ಜೇಬ್ ಚೆಕ್ ಮಾಡಿ. ಯಾರಾದ್ರೂ ಅಕಸ್ಮಾತ್ ಮರ್ತು ಜೇಬಲ್ಲಿ ಇಟ್ಟಿರ್ಬೋದು. ನಾನೂ ಚಿಕ್ವಯಸ್ಸಲ್ಲಿ ಮರ್ತು ಜೇಬೊಳ್ಗಡೆ ಇಟ್ಕೊಂಡಿದ್ದೆ ಎಂದಾಗ ಒಂದು ಮಗು ಮೆಲ್ಲನೆ ಜೇಬಿನಿಂದ ತೆಗೆದುಕೊಡ್ತು . ವೆರಿಗುಡ್ ಎಂದು ಆ ಮಗುವಿಗೆ ಹೇಳಿದಾಗ ಅದರ ಖುಷಿ ಹೇಳಲಸಾಧ್ಯ. ಹೀಗೆ ಮತ್ತೊಮ್ಮೆ ಎಲ್ಲೋ ಬಿದ್ದಿದ್ದ ಚಾಕ್ಪೀಸ್ ತುಣುಕನ್ನೂ ಆ ಮಗು ತಂದು ಶಿಕ್ಷಕರಿಗೆ ಒಪ್ಪಿಸಿತ್ತು. ಆಗಲೂ ಬೆನ್ನುತಟ್ಟಿದ ಆ ಶಿಕ್ಷಕರನ್ನು ಕಂಡರೆ ಆ ಮಗುವಿಗೆ ಅಪಾರ ಪ್ರೀತಿ. ಹೀಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಮಕ್ಕಳು ಮಾಡುವ ಚಿಕ್ಕಪುಟ್ಟ ತಪ್ಪುಗಳಿಗೆ ಉಪಾಯದಿಂದ ಅವರನ್ನು ತಿದ್ದುವ ಶಿಕ್ಷಕರು ನಿಜಕ್ಕೂ ಇಂದಿನ ಅಗತ್ಯ. ಅತ್ಯಂತ ಸೂಕ್ಷ್ಮ ಮನಸ್ಸಿನ ಮಕ್ಕಳಿಗೆ ಈ ರೀತಿ ತಿದ್ದಿದಾಗ ಹೌದು, ನಾವು ಒಳ್ಳೆಯ ಕೆಲಸ ಮಾಡಿದರೆ ನಮಗೆ ಪ್ರಶಂಸೆ ಸಿಗುತ್ತದೆ ಎಂಬುದು ಮನದಟ್ಟಾಗುತ್ತದೆ. ಜೊತೆಗೆ ಅದನ್ನು ಹಾಗೇ ಉಳಿಸಿಕೊಳ್ಳಲು ಅವರು ಇಷ್ಟಪಡುವುದರಿಂದ ತಪ್ಪು ಹೆಜ್ಜೆ ಇಡುವುದನ್ನು ತಪ್ಪಿಸಿದಂತಾಗುತ್ತದೆ.
ಇದಕ್ಕೆ ಅಪಚಾರವೆಂಬಂತೆ ಕೆಲವೆಡೆ ಹೋಂವರ್ಕ್ ಮಾಡದ ಚಿಕ್ಕಮಕ್ಕಳಿಗೆ ನೀಡುವ ದೊಡ್ಡ ಪ್ರಮಾಣದ ಶಿಕ್ಷೆ ಅವರ ಜೀವಕ್ಕೂ ಅಪಾಯ ತಂದಿರುವುದಿದೆ. ಅವರ ಎಳೇ ಮನಸ್ಸು ಅಲ್ಲೇ ಕರಟಿ ಹೋಗಿದ್ದೂ ಇದೆ. ಸರ್ಕಾರದ ನಿಯಮಗಳನ್ನೆಲ್ಲಾ ಗಾಳಿಗೆ ತೂರಿ ಈಗಲೂ ಅನೇಕ ಕಡೆ ಮಕ್ಕಳಿಗೆ ಬೇಕಾಬಿಟ್ಟಿ ಶಿಕ್ಷಿಸುವ ಶಿಕ್ಷಕರು, ಅವರ ಘನಂದಾರಿ ಕೆಲಸಗಳು ದಿನಬೆಳಗಾದರೆ ಮಾಧ್ಯಮಗಳ ಮೂಲಕ ನಮ್ಮೆಲ್ಲರ ಗಮನಕ್ಕೆ ಬರುತ್ತಲೇ ಇರುತ್ತವೆ. ಅಷ್ಟಕ್ಕೂ ಮಕ್ಕಳನ್ನು ಶಿಕ್ಷಿಸುವ ಹಕ್ಕನ್ನು ಇವರಿಗೆ ಕೊಟ್ಟವರು ಯಾರು? ಇಂದು ಬರೆಯದಿದ್ದರೆ, ಕಲಿಯದಿದ್ದರೆ ಅನೇಕ ನಾಳೆಗಳ ಅವಕಾಶವಿದೆ. ತಿದ್ದಿ ಹೇಳಲು, ಕಲಿಸಲು ಬೇಕಾದಷ್ಟು ವಿಧಾನಗಳಿವೆ. ಇವೆಲ್ಲಕ್ಕಿಂತ ಹೆಚ್ಚಾಗಿ ಅವರ ಹೆತ್ತವರು ಇದ್ದಾರೆ. ಅಷ್ಟಾಗಿಯೂ ಕಲಿಯದಿದ್ದರೆ ಮುಳುಗಿ ಹೋಗುವಂಥದ್ದು ಏನೂ ಇಲ್ಲ. ಮುಂದೆ ತೆರೆದ ಬದುಕಿನ ದಾರಿ ಬೇಕಾದಷ್ಟಿದೆ.

ಇಂಥದ್ದೇ ಶಾಲೆ ಬೇಕೆಂದು ಸಾಲಸೋಲ ಮಾಡಿ ಲಕ್ಷಾಂತರ ರೂಪಾಯಿ ಸುರಿದು ತಂದೆ-ತಾಯಿ ಮಕ್ಕಳನ್ನು ಶಾಲೆಗೆ ಕಳಿಸುವುದು ತಮ್ಮ ಮಕ್ಕಳು ವಿದ್ಯಾವಂತರಾಗಲಿ ಎಂದು. ಯಾರದೋ ಅಮಾನವೀಯ ಕೃತ್ಯಕ್ಕೆ ಬಲಿಯಾಗಲಿ ಎಂದಲ್ಲ. ಸರ್ಕಾರಿ ಶಾಲೆಯಾಗಲಿ/ಖಾಸಗಿ ಶಾಲೆಯಾಗಲಿ ಅಲ್ಲಿ ಮಕ್ಕಳಿಗೆ ವಿದ್ಯೆ, ಅವರ ಪ್ರತಿಭೆಯ ಅನಾವರಣ, ಒಳ್ಳೆಯ ಸಂಸ್ಕೃತಿ, ಅವರ ಸರ್ವತೋಮುಖ ಅಭಿವೃದ್ಧಿ, ಉತ್ತಮ ನಡತೆ, ಗುರುಹಿರಿಯರಲ್ಲಿ ಗೌರವ, ಜ್ಞಾನಾರ್ಜನೆ ಇಂತಹವುಗಳಿಗೆ ಅವಕಾಶವೇ ಹೊರತು ಆ ಮಕ್ಕಳ ತಪ್ಪುಗಳನ್ನು ವಿಡಿಯೋ ಮಾಡಿ ಹಂಚಲಿಕ್ಕೆ ಯಾವ ಶಿಕ್ಷಕರಿಗೂ ಅಧಿಕಾರವಿಲ್ಲ. ಈಗಂತೂ ಮೊಬೈಲ್ನಿಂದಾಗಿ ಅನೇಕರಿಗೆ ತಾವು ಏನು ಮಾಡುತ್ತಿದ್ದೇವೆಂಬ ಪರಿಜ್ಞಾನವೇ ಇಲ್ಲ. ಶಾಲೆಯಲ್ಲಿ ಪಾಠದ ಅವಧಿಯಲ್ಲಿ ಮೊಬೈಲ್ ಬಳಸುವಂತೆಯೂ ಇಲ್ಲ. ಆದರೂ ಇಂಥದ್ದನ್ನೆಲ್ಲ ಮಾಡಿ ಖುಷಿಪಡುವವರಿಗೇನೂ ಕಮ್ಮಿಯಿಲ್ಲ. ಇವರ ಜೊತೆಗೆ ಕೈಜೋಡಿಸುವ ಇನ್ನೊಂದಷ್ಟು ಜನರು ಅದಕ್ಕೊಂದಷ್ಟು ಲೈಕು, ಕಮೆಂಟು ಹಾಕಿ ಅದನ್ನು ಖುಷಿಯಿಂದ ಶೇರ್ ಮಾಡುತ್ತಾರೆ. ಥೂ, ನಾಚಿಕೆಗೇಡು. ತಮ್ಮ ಮಕ್ಕಳಿಗೇ ಆಗಿದ್ದರೆ ಇದೇ ರೀತಿ ವಿಡಿಯೋ ಮಾಡಿ, ಶೇರ್ ಮಾಡಿ ತಮಾಷೆ ನೋಡುತ್ತಿದ್ದರೇ ? ಇಂಥವರು ಖಂಡಿತಾ ಶಿಕ್ಷಕ ವೃತ್ತಿಗೇ ನಾಲಾಯಕ್ಕು.
ಮಕ್ಕಳ ಭವಿಷ್ಯ ರೂಪಿಸಬೇಕಾದ ಶಿಕ್ಷಕರು ಅವರ ಭವಿಷ್ಯಕ್ಕೆ ಕುತ್ತು ತರಬಾರದು. ಎಷ್ಟೋ ಮಕ್ಕಳ ಜೀವನ ರೂಪಿಸಿದ ಒಳ್ಳೆಯ ಶಿಕ್ಷಕರನ್ನು ಆ ಮಕ್ಕಳು ಇಂದಿಗೂ ನೆನೆಸಿಕೊಳ್ಳುತ್ತಾರೆ. ಕಾಲಿಗೆ ಬೀಳುತ್ತಾರೆ. ಬೆಟ್ಟದಷ್ಟು ಪ್ರೀತಿ, ಅಭಿಮಾನ ತೋರಿಸುತ್ತಾರೆ. ಇಂಥವರ ಮಧ್ಯೆ ಅಲ್ಲಲ್ಲಿ ಕೆಲವರು ಮಾನವೀಯತೆ ಇಲ್ಲದೇ ವರ್ತಿಸುವವರಿದ್ದಾರೆ. ಅಂಥವರಿಗೆ ಒಂದು ಮಾತು. ಶಿಕ್ಷಿಸುವ, ಅವಮಾನಿಸುವ ಮುನ್ನ ಆ ಮಗುವನ್ನು ನಿಮ್ಮ ಮಗುವಿನ ಸ್ಥಾನದಲ್ಲಿ ಕಲ್ಪಿಸಿಕೊಳ್ಳಿ. ಒಮ್ಮೆ ನಿಮ್ಮ ಯೋಚನೆಯಲ್ಲಿ ಆ ಮಗುವಿನ ಹೆತ್ತವರ ಸ್ಥಾನಕ್ಕೆ ಹೋಗಿ ಬನ್ನಿ. ಆಗ ನಿಮ್ಮಲ್ಲಿನ ಸಿಟ್ಟು ಜರ್ರನೇ ಇಳಿದು ಹೋಗುತ್ತದೆ. ಅರಿವಿಲ್ಲದೇ ನಿಮ್ಮಲ್ಲಿನ ತಾಳ್ಮೆ ಜಾಗೃತವಾಗುತ್ತದೆ. ಕ್ಷಣಿಕ ಕೋಪಕ್ಕೆ ಬುದ್ಧಿ ಕೊಟ್ಟು ಮಾಡುವ ಅನಾಹುತಕ್ಕೆ ಮುಂದೆ ಎಂದೂ ಬೆಲೆ ಕಟ್ಟಲಾಗುವುದಿಲ್ಲ. ಎಷ್ಟೇ ಪಶ್ಚಾತ್ತಾಪದ ಕೂಪದಲ್ಲಿ ಬೆಂದರೂ ಅದಕ್ಕೆ ಮುಕ್ತಿಯಿಲ್ಲ.
ಮಕ್ಕಳ ಮನೆಗೆಲ್ಲುವ ಶಿಕ್ಷಕರಾಗಿ ಅವರ ಅಭ್ಯುದಯದಲ್ಲಿ ನಿಮ್ಮ ಪಾಲು ಸಿಹಿ ಹೂರಣವಾಗಿರಲಿ. ಆ ಮಕ್ಕಳ ಜೀವನದಲ್ಲಿ ಶಿಕ್ಷಕರು ಸಿಹಿ ನೆನಪಾಗೇ ಇರಲಿ. ಎಲ್ಲ ಮಕ್ಕಳಿಗೂ ಬಾಲ್ಯವೆಂಬುದು ಬರಡಾಗದಿರಲಿ (Burden ಆಗದಿರಲಿ) ಎಂಬ ಆಶಯದೊಂದಿಗೆ.
- ಕೃಪೆ : ಸುತ್ತ ಮುತ್ತ ಲೇಖನಗಳ ಸಂಕಲನ
-
- ಹಿಂದಿನ ಸಂಚಿಕೆಗಳು :
- ಅಂಗೈಯಲ್ಲಿ ಪ್ರಪಂಚ (ಭಾಗ-೧)
- ಅಂಗೈಯಲ್ಲಿ ಪ್ರಪಂಚ (ಭಾಗ-೨)
- ಅಂಗೈಯಲ್ಲಿ ಪ್ರಪಂಚ ‘ಗಂಡು ಮಕ್ಕಳ ಮೇಲೆ ಉಂಟಾಗುವ ಲೈಂಗಿಕ ದೌರ್ಜನ್ಯ’ (ಭಾಗ-೩)
- ಅಂಗೈಯಲ್ಲಿ ಪ್ರಪಂಚ ‘ನಾನು… ನಿಮ್ಮ ದಿಂಬು’ (ಭಾಗ-೪)
- ಅಂಗೈಯಲ್ಲಿ ಪ್ರಪಂಚ ‘ಆಡಿಕೊಳ್ಳುವುದು’ (ಭಾಗ- ೫)
- ಅಂಗೈಯಲ್ಲಿ ಪ್ರಪಂಚ ‘ಕ್ರಿಯೆ ಇದ್ದ ಮೇಲೆ ಪ್ರತಿಕ್ರಿಯೆ’ (ಭಾಗ- ೬)
- ಅಂಗೈಯಲ್ಲಿ ಪ್ರಪಂಚ ‘ಹೈಸ್ಕೂಲ್, ಕಾಲೇಜು ಮಕ್ಕಳಲ್ಲಿ ಹೆಚ್ಚುತ್ತಿರುವ ಮಾದಕ ದ್ರವ್ಯಗಳ ವ್ಯಸನ’ (ಭಾಗ- ೭)
- ಅಂಗೈಯಲ್ಲಿ ಪ್ರಪಂಚ ‘ನಾನ್ರೀ ನಿಮ್ ದಾರಿ’ (ಭಾಗ- ೮)
- ಅಂಗೈಯಲ್ಲಿ ಪ್ರಪಂಚ ‘ಸಾಮಾಜಿಕ ಜವಾಬ್ದಾರಿ’ (ಭಾಗ- ೯)
- ಅಂಗೈಯಲ್ಲಿ ಪ್ರಪಂಚ ‘ಹರೆಯ ಉಕ್ಕಿ’ (ಭಾಗ- ೧೦)
- ಅಂಗೈಯಲ್ಲಿ ಪ್ರಪಂಚ ‘ಏನೇನೋ ಅಂದುಕೊಳ್ಳುವ ಮುನ್ನ’ (ಭಾಗ- ೧೧)
- ಅಂಗೈಯಲ್ಲಿ ಪ್ರಪಂಚ ‘ಮಗುವಿನ ಕಾಳಜಿ ಜೊತೆಗೆ ಜಾಗೃತಿ’ (ಭಾಗ- ೧೨)
- ಅಂಗೈಯಲ್ಲಿ ಪ್ರಪಂಚ ‘ವಯಸ್ಸಾದಂತೆ ಜೀವನ ಒಂದು ಬೋನಸ್ ’(ಭಾಗ- ೧೩)
- ಅಂಗೈಯಲ್ಲಿ ಪ್ರಪಂಚ ‘ವೃದ್ಧಾಶ್ರಮ ’ (ಭಾಗ- ೧೪)
- ಅಂಗೈಯಲ್ಲಿ ಪ್ರಪಂಚ ‘ಮಧ್ಯಮ ವರ್ಗದ ಬದುಕು’ (ಭಾಗ- ೧೫)
- ಅಂಗೈಯಲ್ಲಿ ಪ್ರಪಂಚ ‘ಕಣ್ಣೀರು’ (ಭಾಗ- ೧೬)
- ಅಂಗೈಯಲ್ಲಿ ಪ್ರಪಂಚ ‘ನಾನ್ರೀ…ನಿಮ್ ಮನೆ’ (ಭಾಗ- ೧೭)
- ಅಂಗೈಯಲ್ಲಿ ಪ್ರಪಂಚ ‘ರಸ್ತೆಯಲ್ಲಿ ವಾಹನದ ಮೇಲಿರಲಿ ಜವಾಬ್ದಾರಿ’ (ಭಾಗ- ೧೮)
- ಅಂಗೈಯಲ್ಲಿ ಪ್ರಪಂಚ ‘ವಿಘ್ನ ಸಂತೋಷಿಗಳುಶ್ರೀಲಕ್ಷ್ಮಿ ಬಹಳ ಮುದ್ದಾದ ಹುಡುಗಿ’ (ಭಾಗ- ೧೯)
- ಅಂಗೈಯಲ್ಲಿ ಪ್ರಪಂಚ ‘ಮನಸ್ಥಿತಿ’ (ಭಾಗ- ೨೦)
- ಅಂಗೈಯಲ್ಲಿ ಪ್ರಪಂಚ ‘ಮೂಡ್ ಇಲ್ಲ’ (ಭಾಗ- ೨೧)
- ಅಂಗೈಯಲ್ಲಿ ಪ್ರಪಂಚ ‘ಭಾವನಾತ್ಮಕ ಸಂಬಂಧ’ (ಭಾಗ- ೨೨)
- ಅಂಗೈಯಲ್ಲಿ ಪ್ರಪಂಚ ‘ನಗುವಿನ ಮಹತ್ವ’ (ಭಾಗ- ೨೩)
- ಅಂಗೈಯಲ್ಲಿ ಪ್ರಪಂಚ ಅಮ್ಮನೆಂಬ ಅಮೃತ (ಭಾಗ- ೨೪)
- ಅಂಗೈಯಲ್ಲಿ ಪ್ರಪಂಚ ‘ಕಾಡುವ ಶಾಪ’ (ಭಾಗ- ೨೬)
- ಅಂಗೈಯಲ್ಲಿ ಪ್ರಪಂಚ ‘ಇರಲಿ ನಿಮ್ಮ ಸ್ಪಂದನೆ’ (ಭಾಗ- ೨೮)
- ಹಿಂದಿನ ಸಂಚಿಕೆಗಳು :
- ಮಂಗಳ ಎಂ ನಾಡಿಗ್
