‘ಜೈಗಾರ್ನಿಕ್ ಎಫೆಕ್ಟ್’ ಎಂದರೇನು?

ಪೂರ್ಣಗೊಂಡ ಕೆಲಸಗಳಿಗಿಂತ ಅಪೂರ್ಣವಾಗಿ ಅಥವಾ ಅರ್ಧಕ್ಕೆ ನಿಂತಿರುವ ಕೆಲಸಗಳನ್ನು ಹೆಚ್ಚು ಸ್ಪಷ್ಟವಾಗಿ ನೆನಪಿಸಿಕೊಳ್ಳುವ ಮಾನಸಿಕ ವಿದ್ಯಮಾನಕ್ಕೆ ಸೈಕಾಲಜಿಯಲ್ಲಿ ‘ಜೈಗಾರ್ನಿಕ್ ಎಫೆಕ್ಟ್’ ಎನ್ನುತ್ತಾರೆ ಈ ಕುರಿತು ಲೇಖಕರಾದ ಅಶ್ವಿನಿ ರಾಮಾನುಜಂ ಅವರು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ… 

ರೆಡಿಮೇಡ್ ಡ್ರೆಸ್ ಕೊಂಡುಕೊಳ್ಳುವ ಫ್ಯಾಷನ್ ಮುಗಿದು ಡ್ರೆಸ್ ಮೆಟೀರಿಯಲ್ ಕೊಂಡು ಹೊಲಿಸುವ ಕಾಲ ಅದು. ಬಹುಶ: ನಾನು ಮೊದಲನೇ ವರ್ಷದ ಡಿಗ್ರಿಯಲ್ಲಿದ್ದಿರಬೇಕು. ಅಮ್ಮನ ಜೊತೆ, ಹೀಗೇ ಶಾಪಿಂಗ್ ಅಂತ ಗಾಂಧಿ ಬಜಾರ್ ಸರ್ಕಲ್ ಹತ್ತಿರ ಇರುವ ಒಂದು ಅಂಗಡಿಯಲ್ಲಿ ಡ್ರೆಸ್ ಮೆಟೀರಿಯಲ್ ಗಳ ಮೇಲೆ ಕಣ್ಣು ಆಡಿಸುತ್ತಿದ್ದಾಗ ಒಂದು ತುಂಬಾನೇ ಇಷ್ಟವಾಗಿ ಹೋಯಿತು. ಹಾಗಂತ ಇಷ್ಟವಾದ ಕೂಡಲೇ ಕೊಳ್ಳಲು ಸಾಧ್ಯವೇ ‘ಸಿನಿಮಾಗಳಲ್ಲಿ ತೋರಿಸುವಂತೆ, ವಿಪರೀತ ಶ್ರೀಮಂತ ಹೀರೋಯಿನ್ ಶೋರೂಮ್ ನಲ್ಲಿರುವ ಎಲ್ಲಾ ಬಟ್ಟೆಗಳ ಮೇಲೆ ಒಮ್ಮೆ ಕಣ್ಣಾಡಿಸಿ, ಹಾಂ.. ಅದೊಂದಿರ್ಲಿ.. ಇದೊಂದಿರ್ಲಿ… ಮ್…. ಅಲ್ಲಿದೆಯಲ್ಲಾ! ಅದನ್ನೂ ಪ್ಯಾಕ್ ಮಾಡಿಬಿಡಿ’ ಎಂದು ಹೇಳಲು? ತಕ್ಷಣ ಜಾಗೃತವಾಗಿಬಿ ಡುತ್ತೆ ನಮ್ಮ ಮಿಡ್ಲ್ ಕ್ಲಾಸ್ ಇನ್ಸ್ಟಿಂಕ್ಟ್! ಮೊದಲಿಗೆ ಬೆಲೆ ನೋಡೋದು! ಡ್ರೆಸ್ಸೇನೋ ನಮ್ಮ ಬಜೆಟ್ ಗಿಂತ ಸ್ವಲ್ಪ ಜಾಸ್ತಿನೇ ಅನಿಸಿತು. ಅಮ್ಮ ಬಜೆಟ್ ಮೀರಿ ಕೊಡಿಸುವವಳಲ್ಲ. ಆದರೆ ಒಂದ್ ಚೂರ್ ಚೌಕಾಸಿ ಮಾಡಿದರೆ ನಮ್ಮ ಬಜೆಟ್ ಅಲ್ಲೇ ಬರಬಹುದು ಅಂತ ಅಂದಾಜು ಮಾಡಿದೆ. ಬತ್ತಳಿಕೆಯಲ್ಲಿದ್ದ ಒಂದೊಂದೇ ಬಾರ್ಗೈನ್ ಬಾಣಗಳನ್ನು ಬಿಡತೊಡಗಿದೆ. ಉಹುಂ.. ಪಟ್ಟು ಸಡಿಸಲೇ ಇಲ್ಲ ಆಸಾಮಿ. ‘ಇಲ್ಲ ಮೇಡಂ. ಆ ಪ್ರೈಸ್ ಗೆ ನಮಗೇ ಸಿಗಲ್ಲ’ ಎಂದು ಹರಕು ಮುರುಕು ಮಾರ್ವಾಡಿ ಮಿಶ್ರಿತ ಕನ್ನಡದಲ್ಲಿ ಹೇಳುತ್ತಲೇ ಇದ್ದ.

ಫೋಟೋ ಕೃಪೆ : ಅಂತರ್ಜಾಲ

ಅದಾಗಲೇ ಆ ಡ್ರೆಸ್ ನನ್ನ ಮನಸ್ಸಿನ ಆಳಕ್ಕೆ ಇಳಿದುಬಿಟ್ಟಿತ್ತು. ‘ಹೇಗೆ ಹೊಲೆಸಿಕೊಳ್ಳಬಹುದು, ಯಾವ ಪ್ಯಾಟ್ರನ್ ಇಟ್ರೆ ಚೆನ್ನಾಗಿರುತ್ತೆ, ಈ ಬಣ್ಣ ನಂಗೆ ಚೆನ್ನಾಗ್ ಒಪ್ಪುತ್ತಲ್ವಾ!’ ಎಂದೆಲ್ಲ ಊಹಿಸಿಬಿಟ್ಟಿದ್ದೆ. ಇನ್ನು ಬಿಡುವ ಮಾತೇ ಇಲ್ಲ…. ಕೊನೇ ಬಾಣ ಬಿಟ್ಟೆ, “ಸರಿ ಬಿಡಮ್ಮ, ಬೇರೆ ಕಡೆ ನೋಡೋಣ ಬಾ!” ಅಂದೆ. ಅಂಗಡಿಯವನು ಆಗಲಾದರೂ, “ಹೋಗ್ಲಿ ಬಿಡಿ, ಇಷ್ಟೊತ್ತು ಬೇಪಾರ್ ಮಾಡ್ಬಿಟ್, ಸಾಯಂಕಾಲ ಕಸ್ಟಮರ್ ನ ಯಾಕೆ ಹಂಗೇ ಕಳಿಸೋದು! ಅಂತ ಕೊಡ್ತಾ ಇದೀನಿ” ಅಂತ ಹೇಳ್ತಾನೆ ಅಂದ್ಕೊಂಡೆ. ಇಲ್ಲ! “ನಮಗೇನೆ ಬರಲ್ಲ, ಹೇಳಿದ್ನಲ್ಲ, ಅಷ್ಟ್ ಕಮ್ಮೀಗ್ ಕೊಟ್ರೆ, ಸೇಟ್ಗೆ ಬಂದ್ರೆ ನಮಗೆ ಬೈತಾರೆ. ಆಗೋದೇ ಇಲ್ಲ” ಅಂದುಬಿಟ್ಟ. ಛೆ! ಗಿಳಿ ಹಸಿರಿನ ಬಟ್ಟೆಯ ಮೇಲೆ ಕೆನೆ, ಹಳದಿ,ಕೆಂಪು ಬುಟ್ಟಾಗಳಿದ್ದ ಟಾಪ್, ಅದಕ್ಕೊಪ್ಪುವ ಕೆಂಪು ಬಾಟಮ್, ಕೆಂಪು ಹಸಿರಿನ ದುಪ್ಪಟ್ಟಾ! ಅಲ್ಲೇ ಟೇಬಲ್ ಮೇಲೆ ಇರಿಸಿದ್ದ ಆ ಹ್ಯಾಂಡ್ಲೂಮ್ ಕಾಟನ್ ಡ್ರೆಸ್ ಮೆಟೀರಿಯಲ್ ನನ್ನನ್ನೇ ನೋಡುತ್ತಿದ್ದಂತೆ ಭಾಸವಾಗುತ್ತಿತ್ತು. ನಾನು ಅದನ್ನೇ ತಿರುಗಿ ತಿರುಗಿ ನೋಡುತ್ತಾ ಅಂಗಡಿಯ ಮೆಟ್ಟಿಲು ಇಳಿಯುತ್ತಾ ಬಂದೆ.

ಅಮ್ಮ ನನ್ನ ಕಂದಿದ ಮುಖ ನೋಡಿ, “ಹೋದ್ರೆ ಹೋಗ್ಲಿ, ನಿಂಗಷ್ಟೊಂದ್ ಇಷ್ಟವಾಗಿದ್ರೆ ದುಡ್ಡು ಏನು ದೊಡ್ಡದಲ್ಲ, ಬಾ ಕೊಡಿಸ್ತೀನಿ!” ಅಂದ್ಲು. ಮೊದಲೇ ನನ್ನ ಬಾರ್ಗೆನಿಂಗ್ ಸ್ಕಿಲ್ಸ್ ಕೈ ಹಿಡೀಲಿಲ್ಲ ಅಂತ ಬೇಜಾರಾಗಿತ್ತು. ಮತ್ತೆ ಅವನ ಹತ್ರ ಹೋಗಿ, ಅವನು ಹೇಳಿದ ಮೊತ್ತ ತೆತ್ತು, ಆ ಡ್ರೆಸ್ ಕೊಳ್ಳಲು ಸ್ವಾಭಿಮಾನ ಅಡ್ಡ ಬಂತು.

ಈ ವಿಷಯ ನಡೆದು ಎಷ್ಟೋ ವರ್ಷಗಳು ಕಳೆದಿವೆ. ನಂತರ, ಎಷ್ಟೋ ಬಗೆಯ, ಆಕರ್ಷಕ ಬಣ್ಣಗಳ, ಸುಂದರವಾದ ಡ್ರೆಸ್ ಗಳನ್ನ ಕೊಂಡಿದ್ದೇನೆ. ಕೆಲವೊಮ್ಮೆ, ಬೆಲೆಯ ಕಡಿವಾಣದ ಅದೇ ಮಿಡ್ಲ್ ಕ್ಲಾಸ್ ಮೆಂಟಾಲಿಟಿಯನ್ನೂ ಮೀರಿ ದುಬಾರಿಯದ್ದೂ ಕೊಂಡದ್ದಿದೆ. ಯಾವ ಯಾವ ಡ್ರೆಸ್ಸು ನನ್ನ ಹತ್ರ ಇತ್ತು ಅಂತ ಪೂರಾ ನೆನಪಿಲ್ಲ, ಹಳೆಯ ಫೋಟೋಗಳು ನೆನಪಿಸದ ಹೊರತು! ಆದರೆ ಈ ಕೊಳ್ಳದ ಗಿಳಿ ಹಸಿರಿನ ಡ್ರೆಸ್ ಮಾತ್ರ ಸ್ಮೃತಿ ಪಟಲದ ಮೇಲೆ ಅಚ್ಚಳಿಯದೆ ಉಳಿದಿದೆ. ಇದಕ್ಕೆ ಸೈಕಾಲಜಿಯಲ್ಲಿ ‘ಜೈಗಾರ್ನಿಕ್ ಎಫೆಕ್ಟ್ (Zeigarnik effect)’ ಅನ್ನುತ್ತಾರೆ.

ಪೂರ್ಣಗೊಂಡ ವಿಷಯಗಳನ್ನು, ಕೆಲಸಗಳನ್ನು ಬೇಗ ಮರೆಯುವ ಸಾಧ್ಯತೆ ಹೆಚ್ಚು. ಆದರೆ, ಅರ್ಧಕ್ಕೆ ನಿಂತ, ಪೂರ್ತಿಯಾಗದ ವಿಷಯಗಳು ನಮ್ಮನ್ನು ಸದಾ ಕಾಡುತ್ತವೆ. ನಮ್ಮ ಮೆದುಳೂ ಸಹ ಈ ನಿಟ್ಟಿನಲ್ಲಿ ಸದಾ ಸಿಗ್ನಲ್ಸ್ ಕೊಡುತ್ತಲೇ ಇರುವುದರಿಂದ, ಆ ವಿಷಯ ನಮ್ಮ ನೆನಪಿನ ಸಾಗರದ ಮೇಲ್ಮೈ ಮೇಲೆ ಪದೇ ಪದೇ ಎದ್ದು ಬರುತ್ತಿರುತ್ತದೆ. ಅದು ಆಡದೇ ಉಳಿದ ಮಾತಿರಬಹುದು, ಬಗೆಹರಿಯದ ಜಗಳ ಇರಬಹುದು, ಕೈಗೂಡದ ಆಸೆ, ನೆರವೇರದ ಕನಸು, ಹಿಂಪಡೆಯಲಾಗದ ಹಣ, ಕೊಡಲಾಗದೆ ಉಳಿದುಹೋದ ಸಾಲ, ಇವೆಲ್ಲವೂ ಸಮುದ್ರದ ಅಲೆಗಳು ತಮ್ಮೊಳಗಿರುವ ರಾಡಿಯನ್ನು ದಡಕ್ಕೆ ತಂದು ಎಸೆಯುವಂತೆ, ಈ ಪೂರ್ಣಗೊಳ್ಳದ ವಿಷಯಗಳು ಮೇಲೆದ್ದೆದ್ದು ಬಂದು ಕಾಡುತ್ತದೆ. ಕೆಲವೊಮ್ಮೆ, ಇದು ಪಾಪಪ್ರಜ್ಞೆಯಾಗಿ ಉಳಿದುಹೋಗಬಹುದು.

ಈ ಥರ ಅನ್ ಫಿನಿಶ್ಡ್ ಬಿಸಿನೆಸ್ ಇದ್ರೆ, ಎಷ್ಟೇ ಹಳೆಯದಾದ್ರೂ ಪ್ರಸ್ತುತ ಅದಕ್ಕೊಂದು ತಾರ್ಕಿಕ ಅಂತ್ಯ ಕೊಡುವ ಅವಕಾಶವಿದ್ದಲ್ಲಿ, ಆದಷ್ಟೂ ಅದನ್ನು ಪೂರ್ಣಗೊಳಿಸುವತ್ತ ಒಮ್ಮೆ ಗಮನ ಹರಿಸಿ! ಮಾತು ಬಿಟ್ಟಿದ್ರೆ ಮಾತಾಡಿಸಲು ಪ್ರಯತ್ನಿಸಿ. ನೋಯಿಸಿದ್ದರೆ ಒಂದು ಸಾರಿ ಕೇಳಿನೋಡಿ.

ಉಪಕೃತರಾಗಿದ್ದರೆ ಒಂದು ಥ್ಯಾಂಕ್ಸ್ ಹೇಳಿನೋಡಿ! ಹಳೆಯ ಕನಸು ಸಾಕಾರವಾಗದಿದ್ದಲ್ಲಿ ಮತ್ತೊಮ್ಮೆ ಬೆನ್ನುಹತ್ತಿ ನೋಡಿ. ಏನಂತೀರಾ? ಜಸ್ಟ್ ಥಿಂಕ್…


  • ಅಶ್ವಿನಿ ರಾಮಾನುಜಂ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading