ವಾಹನ ಬಳಸುವಾಗ ವಹಿಸಬೇಕಾದ ಜಾಗ್ರತೆ , ಕರ್ತವ್ಯ ಮತ್ತು ಸಾಮಾಜಿಕ ಜವಾಬ್ದಾರಿಯ ಕುರಿತು ಅಂಕಣಕಾರ್ತಿ ಮಂಗಳ ಎಂ ನಾಡಿಗ್ ಅವರ ‘ಅಂಗೈಯಲ್ಲಿ ಪ್ರಪಂಚ’ ಅಂಕಣದಲ್ಲಿ ‘ರಸ್ತೆಯಲ್ಲಿ ವಾಹನದ ಮೇಲಿರಲಿ ಜವಾಬ್ದಾರಿ’ ತಪ್ಪದೆ ಮುಂದೆ ಓದಿ…
ಇದೇನು ಎಲ್ಲರಿಗೂ ಗೊತ್ತಿರುವ ವಿಷಯವೇ, ಇದರಲ್ಲೇನಿದೆ ಅಂದುಕೊಳ್ಳುತ್ತೀರಾ. ನಿಜ ಎಲ್ಲರಿಗೂ ಗೊತ್ತಿದೆ, ಆದರೆ ಅನೇಕರು ಅನುಸರಿಸುವುದಿಲ್ಲ. ಉದಾಹರಣೆಗೆ ದಿನನಿತ್ಯ ಒಂದಲ್ಲಾ ಒಂದು ಕಡೆ ನಡೆಯುವ ಅಪಘಾತಗಳು, ಸಾವು ನೋವುಗಳು.
ರೇಖಾ ಯಾವಾಗಲೂ ಸ್ಟೈಲಿಶ್ ಆಗಿರಲು ಇಷ್ಟ ಪಡುವಂತಹ ಹುಡುಗಿ. ಹಾಗಾಗಿ ಅವಳಿಗೆ ಕೆಲವೊಮ್ಮೆ ಮನೆಯಲ್ಲಿ ಅಮ್ಮನಾಡುವ ಮಾತು ಹೆಚ್ಚು ಕಿರಿಕಿರಿ ಉಂಟು ಮಾಡುತ್ತಿತ್ತು. ಕಾಲೇಜಿಗೆ ಗಾಡಿಯಲ್ಲಿ ಹೋಗುವಾಗ ಕೂದಲು ಕೆದರುತ್ತದೆಂದು ಹೆಲ್ಮೆಟ್ ಧರಿಸುತ್ತಿರಲಿಲ್ಲ. ಅಮ್ಮ ಹೆಲ್ಮೆಟ್ ತಂದು ಕೈಗೆ ಕೊಟ್ಟರೂ ಹೋಗಮ್ಮ, ಹೇರ್ ಸ್ಟೈಲೆಲ್ಲಾ ಹಾಳಾಗುತ್ತೆ. ನಾನು ಹೋಗ್ತಿರೋದು ಕಾಲೇಜಿಗೆ ಎನ್ನುತ್ತಿದ್ದಳು. ಆ ಹೆಲ್ಮೆಟ್ಗೆ ಯಾವಾಗಲೂ ಢಿಕ್ಕಿಯಲ್ಲೇ ಸ್ಥಾನ. ಟ್ರಾಫಿಕ್ ಪೊಲೀಸ್ ಇರುವಲ್ಲಿ ಕೆಲವೆಡೆ ದಂಡ ತೆರದಿರಲು ಮಾತ್ರ ಅದರ ಉಪಯೋಗ.

ಫೋಟೋ ಕೃಪೆ : ಗೂಗಲ್
ಅಂದೂ ಸಹ ಇಯರ್ ಫೋನ್ ಹಾಕಿಕೊಂಡು, ಇಷ್ಟವಾದ ಹಾಡು ಕೇಳುತ್ತಾ ತುಸು ವೇಗವಾಗಿಯೇ ಗಾಡಿ ಓಡಿಸುತ್ತಿದ್ದಳು. ಆಗಾಗ ಕನ್ನಡಿಯಲ್ಲಿ ತನ್ನ ಮುಖ ನೋಡಿಕೊಂಡು ಮೆಚ್ಚುಗೆಯ ನಗೆಯೊಂದಿಗೆ ತನ್ನದೇ ಲೋಕದಲ್ಲಿ ವಿಹರಿಸುತ್ತಿದ್ದವಳು, ಇಂಡಿಕೇಟರ್ ಹಾಕದೆಯೇ ಅಭ್ಯಾಸಬಲದಂತೆ ಒಮ್ಮೆಲೇ ಬಲಕ್ಕೆ ಗಾಡಿ ತಿರುಗಿಸಿದ್ದಳು. ಬೈಕ್ನಲ್ಲಿ ಬರುತ್ತಿದ್ದ ಹೇಮಂತ್ ಮಾಡಿದ್ದ ಹಾರ್ನ್ ಅವಳಿಗೆ ಕೇಳಿಸಿಯೇ ಇರಲಿಲ್ಲ. ಸಡನ್ನಾಗಿ ಅಡ್ಡ ಬಂದವಳನ್ನು ಅಪಘಾತವಾಗದಂತೆ ತಪ್ಪಿಸಲು ಹರಸಾಹಸಪಟ್ಟಿದ್ದ. ಆದರೂ ಕ್ಷಣಮಾತ್ರದಲ್ಲಿ ಅಪಘಾತ ನಡೆದೇ ಹೋಗಿತ್ತು. ಸುತ್ತಮುತ್ತಲಿನ ಜನರೆಲ್ಲಾ ಅವಳದೇ ತಪ್ಪೆಂದು ಅವಳಿಗೆ ಬುದ್ಧಿ ಹೇಳಿ, ಬೈಯ್ಯಲು ಪ್ರಾರಂಭಿಸಿದ್ದರು. ಆದರೆ ಹೇಮಂತ್ ಇದು ಬೈಯ್ಯುವ ಸಮಯವಲ್ಲ ಎಂದು ಜನರನ್ನು ಚದುರಿಸಿ ರೇಖಾಳನ್ನು ಆಸ್ಪತ್ರೆಗೆ ಸೇರಿಸಿದ್ದ. ನಂತರ ಅವಳ ಮನೆಯವರಿಗೆ ವಿಷಯ ತಿಳಿಸಿ, ಅವರು ಬಂದ ನಂತರ ಮೇಡಮ್, ಇನ್ಮೇಲೆ ಹುಷಾರಾಗಿರಿ ಎಲ್ಲರೂ ನನ್ನ ತರಹದವರೇ ಇರುವುದಿಲ್ಲ ಎಂದು ಹೇಳಿ ಹೊರನಡೆದಿದ್ದ. ಸದ್ಯ, ಇಷ್ಟರಲ್ಲೇ ಎಲ್ಲಾ ಮುಗಿಯಿತಲ್ಲ ಎಂದು ದೇವರಿಗೆ ಕೈಮುಗಿದಿದ್ದ.
ಅಮ್ಮನನ್ನು ನೋಡಿದ ರೇಖಾಳಿಗೆ ಈಗ ಅಳು ತಡೆಯಲಾಗಲಿಲ್ಲ. ಪ್ರತೀದಿನ ಕಾಳಜಿಯಿಂದ ಅಮ್ಮ ಹೇಳುತ್ತಿದ್ದ ಮಾತುಗಳು ನನಗದೆಷ್ಟು ಕಿರಿಕಿರಿ ಉಂಟು ಮಾಡುತ್ತಿತ್ತು. ಎಷ್ಟೋ ಬಾರಿ ಅಮ್ಮನಿಗೆ ಬೇಸರವಾಗುವಂತೆ ಮಾತನಾಡಿದ್ದೇನೆ, ಸಿಟ್ಟಿನಿಂದ ಬೈದಿದ್ದೇನೆ. ಆದರೂ ಅಮ್ಮ ಹೇಳುವುದನ್ನು ಮಾತ್ರ ಬಿಟ್ಟಿರಲಿಲ್ಲ. ಕಣ್ತುಂಬಿಕೊಂಡು ನಿಂತಿದ್ದ ಅಮ್ಮನನ್ನು ಸಾರಿ ಅಮ್ಮಾ, ನಿನ್ನ ಮಾತು ಕೇಳಬೇಕಿತ್ತು ಎಂದಳು. ಒಂದೂ ಮಾತನಾಡದೇ ಆ ತಾಯಿ ಮಗಳನ್ನು ಬಾಚಿ ತಬ್ಬಿ , ಹಣೆಗೆ ಹೂಮುತ್ತನ್ನಿತ್ತಿದ್ದರು.
ಸಾಮ್ರಾಟ್ ಗೆ ವಿಪರೀತ ಬೈಕ್ ಹುಚ್ಚು. ರಾಯಲ್ ಎನ್ಫೀಲ್ಡ್ ಬೈಕೇ ಆಗಬೇಕೆಂಬ ಅವನ ಹಠಕ್ಕೆ ಮಣಿದು, ಇರುವ ಒಬ್ಬನೇ ಮಗ ಖುಷಿಯಾಗಿರಲೆಂದು ಸಾಲ ಮಾಡಿ ಬೈಕ್ ಕೊಡಿಸಿದ್ದರು. ಅಂದು ಸ್ನೇಹಿತರ ಜೊತೆ ಸೇರಿ ವ್ಹೀಲಿಂಗ್ ಮಾಡಲು ಹೋಗಿ ನಿಯಂತ್ರಣ ತಪ್ಪಿ ಅವನ ಪ್ರಾಣವೇ ಹೋಗಿತ್ತು.
ಇಂತಹ ಉದಾಹರಣೆಗಳು ಬೇಕಾದಷ್ಟು. ವಾಹನ ಬಳಸುವಾಗ ಸರ್ಕಾರದಿಂದ ಜಾರಿಗೊಳಿಸಿರುವ ಕ್ರಮಗಳನ್ನು ಖಂಡಿತಾ ಪಾಲಿಸಬೇಕು. ಏಕೆಂದರೆ, ಇಲ್ಲಿ ನಮ್ಮ ಜೀವದ ಜೊತೆಗೆ ನಮ್ಮಿಂದ ಬೇರೆಯವರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದೂ ಸಹ ನಮ್ಮ ಗುರುತರ ಜವಾಬ್ದಾರಿಯಾಗಿದೆ. ಒಂದು ಕ್ಷಣದ ಅಜಾಗರೂಕತೆ, ಸರಿಪಡಿಸಲಾಗದಂತಹ ತೊಂದರೆಯನ್ನು ಉಂಟು ಮಾಡಬಹುದು. ಎಷ್ಟೇ ಶ್ರೀಮಂತರಾದರೂ ಒಮ್ಮೆ ಹೋದ ಜೀವ ಮರಳಿ ತರಲು ಸಾಧ್ಯವಿಲ್ಲ. ಅವರನ್ನು ನಂಬಿದವರ ಬದುಕು ದಿಕ್ಕಾಪಾಲಾಗುವುದಂತೂ ಸತ್ಯ. ಇನ್ನು ಕೆಲವರಿಗೆ ಹಣದ ರೂಪದ ಪರಿಹಾರದಿಂದ ಅವರ ಆರ್ಥಿಕ ಪರಿಸ್ಥಿತಿ ಸುಧಾರಿಸಬಹುದು. ಆದರೆ ತಮ್ಮವರನ್ನು ಕಳೆದುಕೊಂಡ ನೋವು ಅವರಿರುವವರೆಗೂ
ಕಾಡುತ್ತಲೇ ಇರುತ್ತದೆ. ಮನೆಯ ಯಜಮಾನನನ್ನು ಕಳೆದುಕೊಂಡ ಕುಟುಂಬ ಬೀದಿಗೆ ಬರುತ್ತದೆ. ತಾಯಿಯನ್ನು ಕಳೆದುಕೊಂಡ ಮಕ್ಕಳು ಅನಾಥರಾಗುತ್ತಾರೆ. ಮಕ್ಕಳನ್ನು ಕಳೆದುಕೊಂಡ ಹೆತ್ತವರು ಬದುಕಿದ್ದೂ ಸತ್ತಂತೆ ನಿರಂತರ ಶೋಕಕ್ಕೆ ಒಳಗಾಗುತ್ತಾರೆ. ಈ ಎಲ್ಲಾ ನಿದರ್ಶನಗಳಲ್ಲಿಯೂ ಹೊಡೆತ ಬೀಳುವುದು ಭಾವನೆಗಳಿಗೆ, ಬದುಕುವ ಉತ್ಸಾಹಕ್ಕೆ.
ಇದು ಐದಾರು ವರ್ಷದ ಹಿಂದೆ ನಡೆದ ಘಟನೆ. ಮಧ್ಯಾಹ್ನ ಸ್ಕೂಲು ಬಿಟ್ಟ ನಂತರ ಒಬ್ಬರು ಮಗಳನ್ನು ಗಾಡಿಯಲ್ಲಿ ಹಿಂದೆ ಕೂರಿಸಿಕೊಂಡು ಹೋಗುತ್ತಿದ್ದರು. ಆರೇಳು ವರ್ಷದ ಮಗು ಕುಳಿತಲ್ಲೇ ತೂಕಡಿಸುತ್ತಿದ್ದುದನ್ನು ನೋಡಿ ಅವರಿಗೆ ತಿಳಿಸಿದೆ. ಆಮೇಲೆ ಇಳಿದು ಮಗುವನ್ನು ಸ್ವಲ್ಪ ಮಾತನಾಡಿಸಿ ಮುಂದೆ ಕೂರಿಸಿಕೊಂಡರು. ಬೆಳಿಗ್ಗೆ ಬೇಗ ಅರೆನಿದ್ದೆಯಲ್ಲೇ ಎದ್ದು ಶಾಲೆಗೆ ಹೊರಡುವ ಮಕ್ಕಳಿಗೆ ಮಧ್ಯಾಹ್ನದ ಹೊತ್ತಿಗೆ ಅದರಲ್ಲೂ ಪ್ರಯಾಣ ಮಾಡುವಾಗ ನಿದ್ದೆ ಬರಲು ಶುರುವಾಗುತ್ತದೆ. ಕೆಲವೊಮ್ಮೆ ಇದು ಹೆತ್ತವರ ಗಮನಕ್ಕೆ ಬಂದಿರುವುದಿಲ್ಲ. ಒಂದು ವೇಳೆ ಏನಾದರೂ ಅನಾಹುತವಾಗಿದ್ದರೆ ಆ ತಾಯಿ ಎಷ್ಟು ಪರಿತಾಪ ಪಡಬೇಕಿತ್ತು. ಚಿಕ್ಕ ಮಕ್ಕಳನ್ನು ಗಾಡಿಯಲ್ಲಿ ಕೂರಿಸಿಕೊಂಡಾಗ ಗಾಡಿ ಓಡಿಸುವುದರ ಜೊತೆಗೆ ಅವರ ಕಡೆಯೂ ಗಮನವಿರಲಿ.

ಫೋಟೋ ಕೃಪೆ : ಗೂಗಲ್
ಇನ್ನೊಬ್ಬರು ಆಟೋ ಓಡಿಸುವಾಗ ಕರೆ ಬಂತೆಂದು ಮಾತನಾಡಲು ಶುರು ಮಾಡಿದರು. ಸರ್, ಆಟೋ ಓಡಿಸುವಾಗ ಮೊಬೈಲ್ ಬಳಸಬೇಡಿ ಎಂದೆ. ಅದಕ್ಕೆ ಮನೆಯಿಂದ ಮಾಡಿರದು, ತೆಗೆಯದೇ ಇರಕ್ಕಾಗಲ್ಲ ಮೇಡಂ ಅಂದ್ರು. ಸರಿ ಹಾಗಾದ್ರೆ ಸೈಡಿಗೆ ನಿಲ್ಲುಸ್ಕೊಂಡು ಮಾತಾಡಿ ಎಂದೆ. ಅವರು ನನ್ನ ಮಾತನ್ನು ಕಿವಿಗೆ ಹಾಕಿಕೊಳ್ಳದೇ, ಒಂದು ಕೈಯ್ಯಲ್ಲಿ ಮೊಬೈಲ್ ಇನ್ನೊಂದು ಕೈಯ್ಯಲ್ಲಿ ಆಟೋ ಓಡಿಸುತ್ತಿದ್ದರು. ಅವರು ಮಾತನಾಡುತ್ತಿದ್ದ ರೀತಿ ನೋಡಿದರೆ ವಿಷಯ ಗಂಭೀರವಾಗೇನೂ ಇರಲಿಲ್ಲ ಎನಿಸಿತು. ಆಗುವ ಅನಾಹುತ ತಪ್ಪಿಸಲು ಎರಡು ಮೂರು ಬಾರಿ ಸಡನ್ನಾಗಿ ಬ್ರೇಕ್ ಹಾಕಿದರು. ಆಗ ಸ್ವಲ್ಪ ಜೋರಾಗಿಯೇ ಹೇಳಿದೆ. ಇಲ್ಲೇ ನಿಲ್ಸಿ, ಇಳೀತೀನಿ ಅಂತ. ಆಗ ಕರೆ ಕಡಿತಗೊಳಿಸಿದರು. ಏನ್ ಮಾಡದು ಮೇಡಂ, ಫೋನ್ ಎತ್ಲಿಲ್ಲಾಂದ್ರೆ ಸಿಟ್ಮಾಡ್ಕೊಳ್ತಾರೆ ಅಂದ್ರು. ಯಾರಾದ್ರು ಅಷ್ಟೆ, ನಿಜವಾಗ್ಲೂ ನಿಮ್ಮ ಬಗ್ಗೆ ಪ್ರೀತಿ, ಕಾಳಜಿ ಇದ್ರೆ ಖಂಡಿತಾ ಅರ್ಥ ಮಾಡ್ಕೊಳ್ತಾರೆ ಅಂದೆ. ಅಲ್ಲದೇ ನಿಮ್ಮದು ಅದೇ ಕೆಲಸವೆಂದು ತಿಳಿದಿದ್ದಾಗ ಅನವಶ್ಯಕ ಕರೆಗಳನ್ನು ಖಂಡಿತಾ ಮಾಡುವುದಿಲ್ಲ. ಈ ವಿಷಯದಲ್ಲಿ ಸಿಟ್ಟು ಮಾಡಿಕೊಳ್ಳುವುದರಲ್ಲಿ ಯಾವ ಅರ್ಥವೂ ಇಲ್ಲ ಎಂದೆ. ನಿಮ್ಮ ಜೊತೆ ಪ್ರಯಾಣಿಕರ ಜವಾಬ್ದಾರಿಯೂ ನಿಮಗೆ ಇರುತ್ತದೆ. ಅಲ್ಲದೇ ಆ ಸಮಯದಲ್ಲಿ ನಿಮ್ಮ ಹಿಂದೆ-ಮುಂದೆ, ಅಕ್ಕ-ಪಕ್ಕ ವಾಹನ ಚಲಾಯಿಸುವವರಿಗೆ ತೊಂದರೆಯಾಗದಂತೆ ನಡೆದುಕೊಳ್ಳುವುದೂ ಸಹ ನಿಮ್ಮ ಕರ್ತವ್ಯ ಎಂದೆ. ಅವರಿಗೆ ಏನನ್ನಿಸಿತೋ ಏನೋ, ನಿಜ ಮೇಡಂ ಅಂದ್ರು.
ಮತ್ತೆ ವಿಷಯಕ್ಕೆ ಬಂದರೆ, ಮೊದಲನೆಯದಾಗಿ ವಾಹನ ಚಲಾಯಿಸಲು ಹದಿನೆಂಟು ವರ್ಷ ಆಗಿರಬೇಕು. ಜೊತೆಗೆ ಡ್ರೈವಿಂಗ್ ಲೈಸೆನ್ಸ್, ರಿಜಿಸ್ಟ್ರೇಷನ್ ಸರ್ಟಿಫಿಕೇಟ್ (R C Book), ಎಮಿಷನ್ ಟೆಸ್ಟ್ ಸರ್ಟಿಫಿಕೇಟ್, ಇನ್ಶ್ಯೂ ರೆನ್ಸ್ ಕಾಪಿ ( Insurance copy) ಹೊಂದಿರಬೇಕು. ಕಮರ್ಶಿಯಲ್ ವೆಹಿಕಲ್ (yellow board) ಗಳನ್ನು ಚಲಾಯಿಸುವಾಗ ಇವುಗಳ ಜೊತೆಗೆ ಟೂರಿಸ್ಟ್ ಪರ್ಮಿಟ್ ಹಾಗೂ ಫಿಟ್ನೆಸ್ ಸರ್ಟಿಫಿಕೇಟ್ ಕೂಡ ಹೊಂದಿರಬೇಕಾಗುತ್ತದೆ.
ವಾಹನ ಚಾಲನೆ ಮಾಡುವಾಗ ಪಾಲಿಸಬೇಕಾದ ಇನ್ನೊಂದಷ್ಟು ಅಂಶಗಳೆಂದರೆ :
- ಎಡಬದಿಯಲ್ಲೇ (left side)ವಾಹನ ಚಲಾಯಿಸಬೇಕು ಹಾಗೂ ಓವರ್ಟೇಕ್ ಮಾಡುವವರಿಗೆ ಬಲಬದಿಯಲ್ಲಿ (right side)ಅವಕಾಶ ಮಾಡಿಕೊಡಬೇಕು.
- ಎಡಬದಿಗೆ ತಿರುಗುವಾಗ ಸ್ವಲ್ಪ ಮುಂಚೆಯಿಂದಲೇ ಎಡಭಾಗದಲ್ಲಿ ಚಲಿಸಲು ಪ್ರಾರಂಭಿಸಬೇಕು. ಏಕೆಂದರೆ, ಸಡನ್ನಾಗಿ ಎಡಬದಿಗೆ ತಿರುಗಿದರೆ ಬೇರೆ ವಾಹನಗಳಿಗೆ ಢಿಕ್ಕಿ ಹೊಡೆಯುವ ಸಾಧ್ಯತೆ ಹೆಚ್ಚು.
- ಬಲಬದಿಯಿಂದ ಮಾತ್ರ ಓವರ್ ಟೇಕ್ ಮಾಡಬೇಕು. ಬೇರೆಯವರು ಓವರ್ ಟೇಕ್ ಮಾಡಲು ಪ್ರಯತ್ನಿಸುತ್ತಿರುವಾಗ ವೇಗವನ್ನು ಹೆಚ್ಚಿಸಿ ಅವರಿಗೆ ತೊಂದರೆ ಕೊಡಬಾರದು.
- ಇಂಟರ್ಸೆಕ್ಷನ್ ನಲ್ಲಿ ಹುಷಾರಾಗಿ ಚಲಿಸಬೇಕು.
- ಆಂಬುಲೆನ್ಸ್ , ಫೈರ್ ಎಂಜಿನ್ ಮುಂತಾದ ಎಮರ್ಜೆನ್ಸಿ ಸರ್ವಿಸ್ ನೀಡುವವರಿಗೆ ಮೊದಲು ದಾರಿ ಮಾಡಿಕೊಡಬೇಕು. 6)ಪಾದಚಾರಿಗಳಿಗೆ ಜೀಬ್ರಾ (zebra crossing) ಕ್ರಾಸಿಂಗ್ ನಲ್ಲಿ ಅವಕಾಶ ಮಾಡಿಕೊಡಬೇಕು. ಟ್ರಾಫಿಕ್ ಜಾಮ್ ಎಂದು ಪಾದಾಚಾರಿ ಮಾರ್ಗದಲ್ಲೆಲ್ಲ ದ್ವಿಚಕ್ರ ವಾಹನ ಚಲಾಯಿಸಬಾರದು.
- ಯು-ಟರ್ನ್ ಮಾಡಬೇಕಾದರೆ ಬೇರೆಯವರಿಗೆ ಇಂಡಿಕೇಶನ್ ಕೊಡಬೇಕು. ಇಂಡಿಕೇಟರನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಬೇಕು. ಒಂದು ವೇಳೆ ಇಂಡಿಕೇಟರ್ ಮುರಿದಿದ್ದರೆ ಅಥವಾ ಸರಿಯಾಗಿ ಕೆಲಸ ಮಾಡುತ್ತಿಲ್ಲವಾದಲ್ಲಿ ಕೈ ಬಳಸಿ ನೀವು ಹೋಗುವ ದಾರಿಯನ್ನು ತೋರಿಸಬೇಕು. ನಂತರ ಆದಷ್ಟು ಬೇಗ ಇಂಡಿಕೇಟರ್ ಸರಿ ಮಾಡಿಸಿಕೊಳ್ಳಬೇಕು.
- ಬೇರೆಯವರಿಗೆ ತೊಂದರೆಯಾಗದಂತೆ ಪಾರ್ಕ್ ಮಾಡಬೇಕು. ಪಾರ್ಕಿಂಗ್ ಇರುವ ಜಾಗವನ್ನು ಮಾತ್ರ ಉಪಯೋಗಿಸಬೇಕು. ಪಾದಚಾರಿಗಳಿಗೆ ತೊಂದರೆಯಾಗದಂತೆ, ಬೇರೆಯವರ ಮನೆ ಮುಂದೆ, ಅವರು ತಮ್ಮ ಮನೆಯ ಗೇಟು, ವಾಹನ ತೆಗೆಯಲು ತೊಂದರೆಯಾಗದಂತೆ ಪಾರ್ಕ್ ಮಾಡಬೇಕು.
- ರಿಜಿಸ್ಟ್ರೇಷನ್ ನಂಬರ್ ಪ್ಲೇಟ್ ಎಲ್ಲರಿಗೂ ಕಾಣುವಂತಿರಲಿ. ಒಂದು ವೇಳೆ ಅದು ಡ್ಯಾಮೇಜ್ ಆಗಿದ್ದರೆ ತಕ್ಷಣ ಸರಿಪಡಿಸಿಕೊಳ್ಳಬೇಕು. ಅದು ಇಲ್ಲದಂತೆ ವಾಹನ ಚಲಾಯಿಸುವುದು ದೊಡ್ಡಮಟ್ಟದ ಅಪರಾಧ (Serious offence) ಎನಿಸಿಕೊಳ್ಳುತ್ತದೆ.
- ಒನ್ ವೇ (one way) ರೋಡಲ್ಲಿ ಆ ಮಾರ್ಗವಾಗಿ ಮಾತ್ರ ಚಲಿಸಬೇಕು.
- Stop lines (Zebra crossing) ಸಿಗ್ನಲ್ನಲ್ಲಿ ಅದಕ್ಕಿಂತ ಮೊದಲೇ ವೆಹಿಕಲ್ ನಿಲ್ಲಿಸಬೇಕು.
- ದ್ವಿಚಕ್ರ ವಾಹನ ಚಾಲನೆ ಮಾಡುವವರ ಜೊತೆಗೆ ಹಿಂಬದಿ ಕುಳಿತವರೂ ಸಹ ಹೆಲ್ಮೆಟ್ ಧರಿಸಬೇಕು. ಕಾರಲ್ಲಿ ಸೀಟ್ ಬೆಲ್ಟ್ ಕಡ್ಡಾಯವಾಗಿ ಬಳಸಬೇಕು.
- ಬೇರೆ ವಾಹನದಿಂದ ಅಂತರ ಕಾಯ್ದುಕೊಳ್ಳಬೇಕು. ಇದರಿಂದ ಇದ್ದಕ್ಕಿದ್ದಂತೆ ಬ್ರೇಕ್ ಹಾಕಿದಾಗ ಅಥವಾ ಬ್ರೇಕ್ ಫೇಲ್ ಆದಾಗ ಆಗುವ ಅನಾಹುತ ತಪ್ಪಿಸಬಹುದು.
- ಅನಗತ್ಯ ಶಬ್ಧ ಮಾಲಿನ್ಯ ಬೇಡ. ಸ್ಕೂಲ್, ಆಸ್ಪತ್ರೆ ಮುಂತಾದ ಕಡೆಗಳಲ್ಲಿ ಹಾರ್ನ್ ಮಾಡಬಾರದು.
- ಟ್ರಾಫಿಕ್ ರೂಲ್ಸ್, ಲೈಟ್ಸ್ ಜೊತೆಗೆ ಟ್ರಾಫಿಕ್ ಪೊಲೀಸ್ ಹೇಳುವ ಮಾತನ್ನು ಅನುಸರಿಸಬೇಕು.
- ರಸ್ತೆ ಸರಿಯಾಗಿ ಕಾಣಿಸುವಂತಿರಲಿ. ಕಾರನ್ನು ಬಳಸುವಾಗ ಅದರ ಮುಂಭಾಗದಲ್ಲಿ ಅನಗತ್ಯ ಸ್ಟಿಕ್ಕರ್ ಗಳನ್ನು ಹಾಕಬೇಡಿ. ಅದರಿಂದ ರಸ್ತೆ ಸರಿಯಾಗಿ ಕಾಣಿಸುವುದಿಲ್ಲ.
- ವಾಹನದಲ್ಲಿ ಓವರ್ಲೋಡಿಂಗ್ (ಜನರು ಅಥವಾ ವಸ್ತುಗಳು) ಮಾಡುವುದು ತೊಂದರೆಯ ಜೊತೆಗೆ ಅಪರಾಧವೂ ಹೌದು.
- ರಿವರ್ಸ್ ತೆಗೆದುಕೊಳ್ಳುವಾಗ ರಸ್ತೆಯಲ್ಲಿರುವ ಬೇರೆಯವರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು.
- ವೇಗದ ಬಗ್ಗೆ , ರೋಡ್ ಸೇಫ್ಟಿ , ಒನ್ ವೇ ಗಳ ಬಗ್ಗೆ ತಿಳಿದಿರಬೇಕು.
- ವಾಹನದಲ್ಲಿರುವ ಮಕ್ಕಳು ತಲೆ, ಕೈ ಆಚೆ ಹಾಕಬಾರದು. (ಉದಾಹರಣೆಗೆ ಬಸ್, ಸ್ಕೂಲ್ ಬಸ್, ಆಟೋ,ಕಾರ್ ,ಇತ್ಯಾದಿಗಳಲ್ಲಿ)
- ಸೈಕಲ್ ಓಡಿಸುವವರು ಅವರಿಗೆಂದೇ ಇರುವ ದಾರಿಯಲ್ಲಿ ಚಲಿಸಬೇಕು.
- ಸೇಫ್ ಸೈಡಿಂದ ವಾಹನ ಹತ್ತಿ ಇಳಿದೂ ಮಾಡಿ. ಕಾರ್ ಬಾಗಿಲು ತೆಗೆಯುವಾಗ ಬೇರೆ ವಾಹನ ಬರುತ್ತಿದೆಯಾ ಎಂದು ಗಮನಿಸಿ ನಂತರ ತೆಗೆಯಿರಿ. ಹಾಗೆಯೇ ಬಾಗಿಲು ಹಾಕುವಾಗಲೂ ಕಾರಲ್ಲಿ ಕುಳಿತಿರುವವರ ಕೈ, ಬೆರಳು, ಬಟ್ಟೆ ಸಿಕ್ಕಿಹಾಕಿಕೊಳ್ಳದಂತೆ ನೋಡಿಕೊಳ್ಳಿ.
- ಕಾರನ್ನು ಚಲಾಯಿಸುವಾಗ ಸೀಟ್ ಬೆಲ್ಟ್ ಧರಿಸುವುದರ ಜೊತೆಗೆ ರಸ್ತೆಯ ಕಡೆಗೆ ಮಾತ್ರ ಗಮನವಿರಲಿ. ಡ್ರಿಂಕ್ ಅಂಡ್ ಡ್ರೈವ್ ಖಂಡಿತಾ ಬೇಡ. ಅಲ್ಲದೇ ಸ್ಪೀಡ್ ಲಿಮಿಟ್ ಸಹ ಫಾಲೋ ಮಾಡಬೇಕು.
- ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ಟನ್ನು ಸರಿಯಾಗಿ ಧರಿಸಬೇಕು. ಚಿಕ್ಕ ಚಿಕ್ಕ ಜಾಗದಲ್ಲಿ ನುಸುಳಬಾರದು. ಸಿಗ್ನಲ್ ಜಂಪ್ ಮಾಡಬಾರದು. ಹೊಂಡ-ಗುಂಡಿಯ ಕಡೆ ಗಮನವಿರಲಿ. ಮೊಬೈಲ್, ಇಯರ್ಫೋನ್ ಬಳಕೆ ಬೇಡ.
- ಸರಿಯಾಗಿ ಕಣ್ಣು ಕಾಣಿಸದಿದ್ದಾಗ, ಕನ್ನಡಕ ಹಾಳಾಗಿದ್ದಾಗ, ಆರೋಗ್ಯ ಸರಿಯಿಲ್ಲದಿದ್ದಾಗ, ತಲೆಸುತ್ತು ,ಜ್ವರ, ವಿಪರೀತ ಸುಸ್ತು ಇತ್ಯಾದಿ ದೈಹಿಕ ಲಕ್ಷಣಗಳು ಇದ್ದಾಗ ವಾಹನ ಚಲಾಯಿಸಬೇಡಿ.
- ಕಣ್ಣು ಟೆಸ್ಟ್ ಮಾಡಿಸಲು ಹೋದಾಗ ಹಾಕುವ ಡ್ರಾಪ್ಸ್ ನಿಂದ ಅನೇಕ ಗಂಟೆಗಳವರೆಗೆ ಕಣ್ಣು ಮಂಜಾಗಿ ಇರುತ್ತದೆ. ಆಗ ವಾಹನ ಚಲಾಯಿಸಬೇಡಿ.
- ಪಾದಚಾರಿ ಮಾರ್ಗದಲ್ಲಿ ವಾಹನ ನಿಲ್ಲಿಸಬೇಡಿ. ಇದರಿಂದ ಓಡಾಡುವವರಿಗೆ ತೊಂದರೆಯಾಗುವುದರ ಜೊತೆಗೆ ದಂಡವನ್ನೂ ತೆರಬೇಕಾಗುತ್ತದೆ.
ರಸ್ತೆ ನಿಯಮಗಳನ್ನು ಪಾಲಿಸುತ್ತಾ ಆದಷ್ಟು ಸುರಕ್ಷಿತವಾಗಿರೋಣ. ಬೇರೆಯವರಿಗೂ ಸುರಕ್ಷಿತವಾಗಿರಲು ಅವಕಾಶ ಮಾಡಿಕೊಡೋಣ. ನಮ್ಮ ರಕ್ಷಣೆ ನಮ್ಮ ಕೈಯ್ಯಲ್ಲೇ, ಒಳಿತಾಗಲಿ.
- ಕೃಪೆ : ಸುತ್ತ ಮುತ್ತ ಲೇಖನಗಳ ಸಂಕಲನ
- ಹಿಂದಿನ ಸಂಚಿಕೆಗಳು :
- ಅಂಗೈಯಲ್ಲಿ ಪ್ರಪಂಚ (ಭಾಗ-೧)
- ಅಂಗೈಯಲ್ಲಿ ಪ್ರಪಂಚ (ಭಾಗ-೨)
- ಅಂಗೈಯಲ್ಲಿ ಪ್ರಪಂಚ ‘ಗಂಡು ಮಕ್ಕಳ ಮೇಲೆ ಉಂಟಾಗುವ ಲೈಂಗಿಕ ದೌರ್ಜನ್ಯ’ (ಭಾಗ-೩)
- ಅಂಗೈಯಲ್ಲಿ ಪ್ರಪಂಚ ‘ನಾನು… ನಿಮ್ಮ ದಿಂಬು’ (ಭಾಗ-೪)
- ಅಂಗೈಯಲ್ಲಿ ಪ್ರಪಂಚ ‘ಆಡಿಕೊಳ್ಳುವುದು’ (ಭಾಗ- ೫)
- ಅಂಗೈಯಲ್ಲಿ ಪ್ರಪಂಚ ‘ಕ್ರಿಯೆ ಇದ್ದ ಮೇಲೆ ಪ್ರತಿಕ್ರಿಯೆ’ (ಭಾಗ- ೬)
- ಅಂಗೈಯಲ್ಲಿ ಪ್ರಪಂಚ ‘ಹೈಸ್ಕೂಲ್, ಕಾಲೇಜು ಮಕ್ಕಳಲ್ಲಿ ಹೆಚ್ಚುತ್ತಿರುವ ಮಾದಕ ದ್ರವ್ಯಗಳ ವ್ಯಸನ’ (ಭಾಗ- ೭)
- ಅಂಗೈಯಲ್ಲಿ ಪ್ರಪಂಚ ‘ನಾನ್ರೀ ನಿಮ್ ದಾರಿ’ (ಭಾಗ- ೮)
- ಅಂಗೈಯಲ್ಲಿ ಪ್ರಪಂಚ ‘ಸಾಮಾಜಿಕ ಜವಾಬ್ದಾರಿ’ (ಭಾಗ- ೯)
- ಅಂಗೈಯಲ್ಲಿ ಪ್ರಪಂಚ ‘ಹರೆಯ ಉಕ್ಕಿ’ (ಭಾಗ- ೧೦)
- ಅಂಗೈಯಲ್ಲಿ ಪ್ರಪಂಚ ‘ಏನೇನೋ ಅಂದುಕೊಳ್ಳುವ ಮುನ್ನ’ (ಭಾಗ- ೧೧)
- ಅಂಗೈಯಲ್ಲಿ ಪ್ರಪಂಚ ‘ಮಗುವಿನ ಕಾಳಜಿ ಜೊತೆಗೆ ಜಾಗೃತಿ’ (ಭಾಗ- ೧೨)
- ಅಂಗೈಯಲ್ಲಿ ಪ್ರಪಂಚ ‘ವಯಸ್ಸಾದಂತೆ ಜೀವನ ಒಂದು ಬೋನಸ್ ’(ಭಾಗ- ೧೩)
- ಅಂಗೈಯಲ್ಲಿ ಪ್ರಪಂಚ ‘ವೃದ್ಧಾಶ್ರಮ ’ (ಭಾಗ- ೧೪)
- ಅಂಗೈಯಲ್ಲಿ ಪ್ರಪಂಚ ‘ಮಧ್ಯಮ ವರ್ಗದ ಬದುಕು’ (ಭಾಗ- ೧೫)
- ಅಂಗೈಯಲ್ಲಿ ಪ್ರಪಂಚ ‘ಕಣ್ಣೀರು’ (ಭಾಗ- ೧೬)
- ಅಂಗೈಯಲ್ಲಿ ಪ್ರಪಂಚ ‘ನಾನ್ರೀ…ನಿಮ್ ಮನೆ’ (ಭಾಗ- ೧೭)
- ಮಂಗಳ ಎಂ ನಾಡಿಗ್
