ಚಿಲಿ ದೇಶದ ಇಸಬೆಲ್ ಅಯೆಂದೆಯ ಆತ್ಮಕಥನ ‘ಜೀವದನಿ’ಯನ್ನು ಕನ್ನಡಕ್ಕೆ ತಂದಿದ್ದಾರೆ ಖ್ಯಾತ ಲೇಖಕಿ ಎಂ.ಆರ್. ಕಮಲಾ ಅವರು. ಈ ಕೃತಿಯ ಕುರಿತು ಮತ್ತೊಬ್ಬ ಖ್ಯಾತ ಲೇಖಕಿ ಡಾ.ಗಿರಿಜಾ ಶಾಸ್ತ್ರಿ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…
ಪುಸ್ತಕ : ಜೀವದನಿ
ಲೇಖಕಗಳು : ಎಂ ಆರ್. ಕಮಲಾ
ಪ್ರಕಾರ : ಆತ್ಮಹತ್ಯೆ
ಜೀವಮಾನ ಪೂರ್ತಿ ನಮಗೆ ನಾವೇ ಒಂದು ಇಮೇಜನ್ನು ಕಟ್ಟಿಕೊಂಡು ಜತನದಿಂದ ಅದನ್ನು ಬೆಳೆಸಿಕೊಂಡು ಸಮಾಜದ ಎದುರಿಗೆ ಹೀರೋಯಿನ್ ಗಳಾಗಿ ಕಾಣಿಸಿಕೊಳ್ಳುತ್ತೇವೆ. ಅದರಲ್ಲಿ ಒಂದು ಕಪ್ಪು ಚುಕ್ಕಿಯೂ ಇರಬಾರದು, ಅಪ್ಪಟ ಬಿಳಿ. ನಮಗೆ ಒಂದು ಕೊರಗು, ಯಾರೇನಾದರೂ ನಮ್ಮ ಬಗ್ಗೆ ಕೀಳಾಗಿ ಮಾತನಾಡಿ ಬಿಟ್ಟರೆ? ಜತನದಿಂದ ಕಾಪಿಟ್ಟುಕೊಂಡು ಬಂದ ಕೋಶ ಒಡೆದುಹೋಗುತ್ತದಲ್ಲ? ನನ್ನ ಮಟ್ಟಿಗೆ, ನಾನು ಏನಾಗಿದ್ದೇನೆಯೋ ಅದನ್ನು ನಿರ್ಭಿಡೆಯಿಂದ ತೋರಿಸಿಕೊಳ್ಳುವುದೇ ನಿಜವಾದ ನಿರ್ವಾಣ. ನನ್ನ ಬಗೆಗೆ ನಾನೇ ಇಟ್ಟುಕೊಂಡಿರುವ ಭ್ರಮೆಗಳನ್ನು ಒಂದೊಂದಾಗಿ ಈರುಳ್ಳಿ ಸಿಪ್ಪೆಯಂತೆ ಸುಲಿದು ಕೊನೆಗೆ ಏನೂ ಇಲ್ಲವಾಗುವುದೇ ನಿರ್ವಾಣ.
ನಿರ್ವಾಣವೆಂದರೆ ಸಮಾಜದ ಎದುರಿಗೆ ನನ್ನ ನಿಜಸ್ವರೂಪವನ್ನು ಬಯಲಾಗಿಸುವುದು. ಇದು ಆತ್ಮಕತೆಯಲ್ಲಿ ಸಾಧ್ಯ. ಅದನ್ನು ಬರೆಯಲು ಧೈರ್ಯವಿಲ್ಲದಾಗ ಕತೆ – ಕಾದಂಬರಿಗಳ ಒಳಗೆ ಕೊಲಾಜ್ ಮಾಡಿ ಅದನ್ನು ಬಚ್ಚಿಡುತ್ತೇವೆ. ಇಷ್ಟೆಲ್ಲಾ ಹೇಳುವುದಕ್ಕೆ ಕಾರಣವೆಂದರೆ ಚಿಲಿ ದೇಶದ ಇಸಬೆಲ್ ಅಯೆಂದೆಯ ಆತ್ಮಕಥನ ‘ಜೀವದನಿ’. ಇದನ್ನು ಗೆಳತಿ ಕಮಲ ಅನನ್ಯವಾಗಿ ಕನ್ನಡಕ್ಕೆ ತಂದಿದ್ದಾರೆ. ಆತ್ಮಕತೆ ಬರೆದರೆ ಹೀಗೆ ಬರೆಯಬೇಕು ಎನಿಸುವಂತೆ.

ಚಿಕ್ಕವಳಿದ್ದಾಗಿನಿಂದಲೂ ಅಯೆಂದೆ ಕ್ರಾಂತಿಕಾರಿ ಹುಡುಗಿ. ಹೆಣ್ಣಾಗಿರುವುದರ ಅನನುಕೂಲತೆಗಳನ್ನು, ಸಂಕಷ್ಟಗಳನ್ನು ತನ್ನ ತಾಯಿಯ ಜೀವನ ಕ್ರಮದಿಂದಲೇ ಬಲ್ಲವಳು. “ಜಗತ್ತಿನಲ್ಲಿ ಎಷ್ಟೊಂದು ನೋವಿದೆ, ಒಂದಿಷ್ಟಾದರೂ ನಿವಾರಿಸಲು ಸಾಧ್ಯವೇ ಎಂದು ಹತಾಶ”ಳಾಗುತ್ತಿದ್ದವಳು. ಅವಳೇ ಹೇಳಿಕೊಳ್ಳುವಂತೆ “ತನ್ನ ಹೃದಯದ ಗುಟ್ಟಿನ ಕೋಣೆಗಳಲ್ಲಿ ನಡೆದ ಬದುಕಿನ ಮುಖ್ಯಸಂಗತಿಗಳನ್ನು ಬಯಲುಗೊಳಿಸುವ” ಈ ಕೃತಿ ಕನ್ನಡಕ್ಕೆ ಅಪರೂಪವಾದುದು.
ಕನ್ನಡದಲ್ಲಿ ಮಹಿಳೆಯರ ಆತ್ಮಕಥನಗಳು ಬಂದಿವೆ. ಬಹಳ ನಿರ್ಭಿಡೆಯಿಂದಲೇ ಅಲ್ಲಿ ಅವರು ‘ ಬತ್ತಲಾಗಿದ್ದಾರೆ’ ಆದರೆ ಅಯೆಂದೆಯ ನಿರ್ವಾಣ ಬಹಳ ಬೆರಗುಗೊಳಿದುವಂತಹದು.
“ಶಿಶು ವಿಹಾರದಲ್ಲಿಯೇ ನಾನು ಸ್ತ್ರೀವಾದಿಯಾಗಿದ್ದೆ” ಎನ್ನುವ ಅಯೆಂದೆ ಮುಂದೆ ಬಹಳ ದೊಡ್ಡ ಸ್ತ್ರೀವಾದೀ ಚಿಂತಕಿಯಾಗಿ ಪತ್ರಕರ್ತೆಯಾಗಿ ಬೆಳೆಯುವ ಕತೆಯೇ ಜೀವದನಿ.
ನನಗೆ ಬಹಳ ಮುಖ್ಯವಾಗಿ ಕಾಣಿಸಿದ ಅಂಶವೆಂದರೆ “ಸರಿಯಾದ ಉದ್ದೇಶವಿಲ್ಲದೆ ಕೋಪಮಾಡಿಕೊಳ್ಳುವುದು ವ್ಯರ್ಥ ಮತ್ತು ಹಾನಿಕಾರಕ, ಬದಲಾವಣೆ ತರಲು ಹೆಚ್ಚು ಕ್ರಿಯಾತ್ಮಕ” ವಾಗಬೇಕು ಎನ್ನುವ ಅವಳ ಮಾತುಗಳಲ್ಲಿ ಕಾಣುವ ಜಿಜ್ಞಾಸೆಯೇ ಅವಳ ಜೀವದನಿಯನ್ನು ರೂಪಿಸುತ್ತದೆ. ಇಂದಿನ ಮಹಿಳಾ ಸಂಘಟನೆಗಳಿಗೆ, ಸಂಘರ್ಷವನ್ನು ನಿಭಾಯಿಸುವುದಕ್ಕೆ ಒಂದು ಸ್ಟ್ರಾಟಜಿಯಾಗಿ ನನಗೆ ಇದು ಕಂಡಿತು. ಅವಳು ಪತ್ರಕರ್ತೆಯಾಗಿ, ಒಬ್ಬ ಆಕ್ಟಿವಿಸ್ಟ್ ಆಗಿ, ಲೇಖಕಿಯಾಗಿ, ಲೈಂಗಿಕತೆ, ಹಣ, ಅಸಮಾನತೆಯ ಕಾನೂನುಗಳು, ಮಾದಕದ್ರವ್ಯಗಳು,ಕನ್ಯತ್ವ,ಮೆನೊಪಾಸ್, ಗರ್ಭ ನಿರೋಧಕ, ಕುಡಿತ, ಗರ್ಭಪಾತ, ವೇಶ್ಯಾವಾಟಿಕೆ, ಕೌಟುಂಬಿಕ ಹಿಂಸೆ, ದಾಂಪತ್ಯ ದ್ರೋಹ ಮುಂತಾದ ಸವಾಲುಗಳನ್ನು ಎದುರಿಸಿದ ಬಗೆಯನ್ನು ಈ ಕೃತಿ ಬಹಳ ವಿಶಿಷ್ಟವಾಗಿ ತೆರೆದು ತೋರಿಸುತ್ತದೆ.

ಮದುವೆಯ ಬಗ್ಗೆ ಕ್ರಾಂತಿಕಾರೀ ವಿಚಾರಗಳನ್ನು ಹೊಂದಿದ ವಿಚ್ಛೇದಿತ ಅಯೆಂದೆ ತನ್ನ ಎಪ್ಪತ್ತೈದನೇ ವರುಷದಲ್ಲಿ ಮರುಮದುವೆಯಾಗುತ್ತಾಳೆ. ಅವರನ್ನು ಬಿಟ್ಟು ಇವರನ್ನು ಬಿಟ್ಟು ಮತ್ತೊಬ್ಬರನ್ನು ಮದುವೆಯಾಗುವ ಸಂಕೀರ್ಣ ಸಂಬಂಧಗಳ ಗೋಜಲುಗಳು, ಲೈಂಗಿಕತೆಯ ಸೂಕ್ಷ್ಮ ವಿವರಗಳು, ಹೆಣ್ಣಿನ ಸೌಂದರ್ಯ ಮುಂತಾದ ವೈಯಕ್ತಿಕ ಬದುಕಿಗೆ ಸಂಬಂಧ ಪಟ್ಟ ವಿವರಗಳಿದ್ದರೆ, ಸಾಮಾಜಿಕ ನೆಲೆಯಲ್ಲಿ ಹೋರಾಟ, ಚಳವಳಿ, ಚರ್ಚೆಗಳು, ಸಂಘರ್ಷಗಳು,ಆರ್ಥಿಕ ಬಿಕ್ಕಟ್ಟು, ಪ್ರಸಿದ್ಧ ಸ್ತ್ರೀವಾದಿಗಳ ಉಲ್ಲೇಖಗಳು, ಈವ್ ಎನ್ಸಲರಳ ವಜೀನಾ ಮೊನಲಾಗ್ಸ್ ( ಇದರ ಬಗ್ಗೆ ನಾನು ಒಂದು ಲೇಖನವನ್ನು ಬರೆದಿದ್ದೆ) ಮುಂತಾದ ಅನೇಕ ವಿಚಾರಗಳಿಂದ ಅವಳ ವ್ಯಕ್ತಿತ್ವ ಪಾಕಗೊಂಡ ಕತೆಯನ್ನು ಈ ಕೃತಿ ಹೇಳುತ್ತದೆ.
ಒಂದು ಕಡೆಯಂತೂ ಹದಿ ಹರೆಯದ ಹುಡುಗಿಗೆ ಗುಟ್ಟಾಗಿ ಗರ್ಭಪಾತ ಮಾಡಿಸುವ ಸಂದರ್ಭ ಮನ ಕಲಕುವ ದೃಶ್ಯವಾಗಿದೆ – ಅದೂ ಗರ್ಭಪಾತ ಒಂದು ಅಪರಾಧವಾಗಿರುವ ನೆಲದಲ್ಲಿ!
ನನಗಂತೂ ಯಮುನಕ್ಕಳೇ ನೆನಪಾದಳು ( ಘಟಶ್ರಾದ್ಧ).
ಯಾವ ದೇಶವಾದರೇನು? ಹೆಣ್ಣು ಹಾಯ್ದು ಬರುವ ಅಗ್ನಿದಿವ್ಯದ ಹಾದಿಗಳೆಲ್ಲ ಒಂದೇ ತೆರನಾದುದು -ಅಲ್ಪಸಲ್ವ ಕಾಸ್ಮೆಟಿಕ್ ಬದಲಾವಣೆಗಳನ್ನು ಬಿಟ್ಟರೆ! ಆದುದರಿಂದಲೇ ಈ ಕೃತಿ ಜೊತೆಗೆ ಜಗತ್ತಿನ ಎಲ್ಲ ಹೆಣ್ಣುಮಕ್ಕಳೂ ಸಂವಾದಿಸುವಂತಿದೆ. ಈ ಪಾಶ್ಚಾತ್ಯ ಕೃತಿಯಲ್ಲಿ ಕನ್ನಡ ಉಸಿರಾಡುತ್ತದೆ. ಕನ್ನಡದ ಜಾಯಮಾನಕ್ಕೆ ಒಗ್ಗಿಕೊಂಡು ಅಪ್ಪಟ ಕನ್ನಡ ಕೃತಿಯೊಂದನ್ನು ಓದಿದ ಅನುಭವವನ್ನು ಕೊಡುತ್ತದೆ. ಇಂತಹ ಒಂದು ಅದ್ಭುತ ಕೃತಿಯನ್ನು ಕನ್ನಡಕ್ಕೆ ಕೊಟ್ಟ ಕಮಲಾಗೆ ಅಭಿನಂದನೆಗಳು ಶುಭಾಶಯಗಳು.
- ಡಾ. ಗಿರಿಜಾ ಶಾಸ್ತ್ರಿ – ಖ್ಯಾತ ಲೇಖಕರು, ಬೆಂಗಳೂರು.
