‘ಅಕ್ಷರೋಪಾಯನ’ ಅಕ್ಷರೋಪಾಯನ

ಮೈಸೂರಿನ ಕವಯಿತ್ರಿ ಕೆ ಟಿ ಶ್ರೀಮತಿಯವರ “ಅಕ್ಷರೋಪಾಯನ” ಕಾವ್ಯ ಸಂಕಲನದ ಕುರಿತು ಲೇಖಕರಾದ ದೀಪಾಲಿ ಸಾಮಂತ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಕೃತಿ : ಅಕ್ಷರೋಪಾಯನ
ಲೇಖಕರು : ಕೆ ಟಿ ಶ್ರೀಮತಿ
ಪ್ರಕಾಶನ : ಸಂಸ್ಕೃತಿ ಬುಕ್ ಏಜೆನ್ಸೀಸ್ ಮೈಸೂರು. 
ಪ್ರಕಾರ : ಕಾವ್ಯ ಸಂಕಲನ (ಚೌಪದಿಗಳು)

ಇತ್ತೀಚೆಗೆ ಶಿರಸಿಯಲ್ಲಿ ನಡೆದ ಕವಯತ್ರಿ ಕೆ ಟಿ ಶ್ರೀಮತಿಯವರ “ಅಕ್ಷರೋಪಾಯನ” ಕಾವ್ಯ ಸಂಕಲನದ ಅವಲೋಕನ ಕಾರ್ಯಕ್ರಮದಲ್ಲಿ ಈ ಕೃತಿಯು ನನ್ನ ಕೈಸೇರಿತು. ಕೆ ಟಿ ಶ್ರೀಮತಿಯವರು  ಕಳೆದ ಮೂರ್ನಾಲ್ಕು ವರ್ಷಗಳಿಂದ ಸಾಹಿತ್ಯಿಕ ಬಳಗದ ಮೂಲಕ ನನಗೆ ಪರಿಚಿತರಾದವರು.  ಸಾವಿರಾರು ಮುಕ್ತಕ ರಚಿಸಿ ನಾಡಿನಾದ್ಯಂತ ಚಿರಪರಿಚಿತರಾಗಿದ್ದಾರೆ.

ಇವರ ಈ “ಅಕ್ಷರೋಪಾಯನ” ಕೃತಿಯ ಬಗ್ಗೆ ನನ್ನ ಅನಿಸಿಕೆಯನ್ನು ವ್ಯಕ್ತಪಡಿಸುತ್ತಿದ್ದೇನೆ. ಈ ಕೃತಿಯು ನಾನೂರು ಚೌಪದಿಗಳ ಗುಚ್ಛವಾಗಿದ್ದು ಆದಿಪ್ರಾಸದಲ್ಲಿ  ಗಣಮಾತ್ರೆಗಳ ನಿಯಮಾನುಸಾರ ‘ಗುರುವೆಪರದೈವ’ ಎಂಬ ಅಂಕಿತನಾಮದೊಂದಿಗೆ  ಗುರು ಕರುಣೆ, ಗುರು ಸ್ಮರಣೆ, ಗುರುವಿನ ಮಹಿಮೆ ಕೊಂಡಾಡುವ, ಅವರ ಕಾಯಕಕ್ಕೊಂದು ಅರ್ಥ ಕಲ್ಪಿಸುವ ಮೂಲಕ ಗುರು ನಮನ ಸಲ್ಲಿಸುವ ಕಾರ್ಯ ಮಾಡಿದ್ದಾರೆ.  ಶಿಷ್ಯನ ಜೀವನಕ್ಕೆ ಬೆಳಕಾಗಿ  ಸರಿದಾರಿ ತೋರಿಸಿ ಮಾರ್ಗದರ್ಶನ ನೀಡುವ ಗುರುವು ದೈವ ಸಮಾನವೆಂಬುದು ನಿತ್ಯ ಸತ್ಯ. ಅಂತಹ  ಗುರುವಿನ ಸಹನೆ, ಕರುಣೆ ಹಾಗೂ ಕಾಲಕಾಲಕ್ಕೆ ತಿದ್ದಿ ತೀಡುವ ಗುಣವನ್ನು  ಜಗಕ್ಕೆ ಸಾರುವ ಅದ್ಭುತ ಪ್ರಯತ್ನ ಈ  ಚೌಪದಿಗಳಲ್ಲಿ ಲೇಖಕರು ಮಾಡಿದ್ದಾರೆ.

ಪ್ರತಿಯೊಂದು ಚೌಪದಿಯು ಉತ್ತಮ ಸಾರ ಹೊಂದಿದ್ದು ವಿಶಿಷ್ಟ ಪದಗಳ ಭಂಡಾರವಾಗಿದೆ. ಯಕ್ಷಗಾನ ಅರ್ಥಧಾರಿಗಳಾದ ದಿವಾಕರ ಹೆಗಡೆ  ಕೆರೆಹೊಂಡರವರು ಬರೆದ ಮುನ್ನುಡಿ ಹಾಗೂ ಮುಕ್ತಕ ಕವಿ ಕೃಷ್ಣ ಪದಕಿಯವರ ಬೆನ್ನುಡಿಯಿಂದ ಕೃತಿಗೊಂದು ಮೆರುಗು ತಂದರೆ ವಿದ್ಯಾದಾನ ಮಾಡಿದ ಗುರು ಆರ್ ರಾಮಕೃಷ್ಣರವರ ಆಶಯ ನುಡಿಯಿಂದಾಗಿ ಕೃತಿ ಸಂಪೂರ್ಣವೆನಿಸಿದೆ.

ಲಾಳದಲಿ ಬಂಧಿಸಿದ ತುರಗವೋಡುವ ತೆರದಿ/
ಕಾಳಮನವಿದನೊಗೆದ ಕೊಳೆ ಝಾಡಿಸಿ /
ಬೋಳು ಬಂಡೆಯ ಕೊರೆದು ಹೋಳನಾಗಿ‌ಸಿದಂತೆ /
ಜಾಳು ಮನ ತೊಳೆದಿಹನು ಗುರುವೆಪರದೈವ//

ಈ ಚೌಪದಿಯಲ್ಲಿ  ಕುದುರೆಯನ್ನು ಹೇಗೆ ಲಾಳದಲ್ಲಿ ಬಿಗಿದು  ಸರಿದಾರಿಯಲ್ಲಿ ಹೋಗುವಂತೆ ಮಾಡುವರೋ ಹಾಗೆಯೇ ಶಿಷ್ಯನ ಅಥವಾ ವಿದ್ಯಾರ್ಥಿಯ ಮನದಲ್ಲಿ ಅಡಗಿದ ಕಲ್ಮಶವನ್ನು ತೆಗೆದು ಸನ್ಮಾರ್ಗದಲ್ಲಿ ಸಾಗುವಂತೆ ಮಾಡುವವನೇ ಗುರು. ಹೇಗೆ ಹಿರಿದಾದ ಬಂಡೆಯನ್ನು ಕೊರೆದು ಚಿಕ್ಕ ಚಿಕ್ಕ ತುಂಡುಗಳನ್ನಾಗಿ ವಿಂಗಡಿಸಿ ಉಪಯುಕ್ತವಾಗಿಸುವಂತೆ   ನಮ್ಮ ಮನದ ಕೊಳೆ ತೊಳೆದು  ಸಮಾಜಕ್ಕೆ ಉಪಕಾರಿಯಾಗುವಂತೆ ಮಾಡುವ ಗುರುವೆ ಪರದೈವವೆಂದು ಕೊಂಡಾಡಿದ್ದಾರೆ.

ಊರ ಮಕ್ಕಳ ಮುಂದೆ ಜಾರಿ ಬಿದ್ದಿರಲಂದು,ತೋರಿದನು ಮಾರ್ಗವನು ಸರಿದಾರಿ ಹಿಡಿಸಿ,ಭಾರವಾಗಿಹ ಮನದ ತೋರಣದ ತೆರೆಸರಿಸಿ, ಧೀರನಾಗಿಸುತೆನ್ನ – ಗುರುವೆಪರದೈವ ಎಂಬ ಸಾಲುಗಳು ತುಂಬಾ ಮಾರ್ಮಿಕವಾದ ವಿಚಾರವನ್ನು ಪ್ರಚುರಪಡಿಸುತ್ತವೆ. ಊರ ಜನರ ಮುಂದೆ ಜಾರಿ ಬಿದ್ದಾಗ ಅವರು ಮಾಡುವ ಅಪಹಾಸ್ಯದಿಂದ ಮನಸ್ಸು ಭಾರವಾಗುವುದು. ಅಂತಹ ಸಂದರ್ಭದಲ್ಲಿ ಸರಿಯಾದ ಮಾರ್ಗದರ್ಶನ ನೀಡಿ ಮುನ್ನುಗ್ಗುವ ಧೈರ್ಯ ಬೆಳೆಸಿದ ಗುರುವು ದೇವರಿಗೆ ಸಮಾನವೆಂಬ ಮಾತು ಧ್ವನಿಸುತ್ತವೆ.

ಕಲಿತ ವಿದ್ಯೆಯ ಅಳವು ಸಾಗರದ ವೈಶಾಲ್ಯ, ಬಲಿತು ಹೆಮ್ಮರವಾಗೆ ಸಂದಣಿಸಿ ಬಾಳ, ಚಲನೆಯಲಿ ಸಂಚಲನ ಮೂಡಿಸಲು ಮನ ಹಗುರ, ಬಲವ ಕುಂದಿಸದೆಂಬ ಗುರುವೆ ಪರದೈವ ಈ ಚೌಪದಿಯಲ್ಲಿ  ಕಲಿತ ವಿದ್ಯೆಯು ಸಾಗರದಷ್ಟು ವಿಶಾಲವಾಗಿದ್ದು ಕರಗತ ಮಾಡಿಕೊಂಡು ಬೆಳೆದರೆ ಹೆಮ್ಮರದಂತೆ ಗಟ್ಟಿಯಾಗಿ ನಿಂತು ಗಾಳಿ ಬೀಸಿದರೂ ಸಂಚಲನ ಮೂಡಿಸುವ ಶಕ್ತಿಯನ್ನು ಹೊಂದಬಹುದು. ಆ ಶಕ್ತಿಯನ್ನು ಎಂದೆಂದೂ ಕುಂದಿಸದೇ  ಬಾಳನ್ನು ಹಸನಾಗಿಸುವುದು ಎಂದು ಮನವರಿಕೆ ಮಾಡಿಕೊಟ್ಟ ಗುರುವಿಗೆ ಗೌರವ ಸಲ್ಲಿಸುವೆನು ಎಂಬರ್ಥದಲ್ಲಿ ಕವಯತ್ರಿ ವಿದ್ಯೆಯ ಮಹತ್ವವನ್ನು  ಹಾಗೂ ವಿದ್ಯಾದಾನ ಮಾಡುವ  ಗುರುವಿನ ಮಹತ್ವವನ್ನೂ ಲೋಕಕ್ಕೆ ಸಾರಿದ್ದಾರೆ.

ಅರಿವ ನೀಡುವ ಗುರುವು ತೆರೆದು ತನ್ನೆದೆಯೊಲವ /
ಬರೆವ ಶಿಷ್ಯನ ಶಿರದೆ ಮುಡಿಸಿ ಅಕ್ಷರವ /
ಹರಿವ ನೀರಿನ ತೆರದಿ ಸರಸರನೆ ಹರಿಯುತಿರು /
ಸರಿದು ಹಿಮ್ಮೆಟ್ಟದಿರು- ಗುರುವೆಪರದೇವ //

ಈ ಚೌಪದಿಯಲ್ಲಿ ಗುರುವಾದವನು ತನ್ನ ಎದೆಯಲ್ಲಿ ಅಡಗಿದ ಪ್ರೀತಿಯ ಧಾರೆ ಹರಿಸಿ ಶಿಷ್ಯನ ತಲೆಯಲ್ಲಿ ಅಕ್ಷರವೆಂಬ ಜ್ಞಾನದ ಬೀಜ ಬಿತ್ತಿ ಸಸಿಯಾಗಿ,ಮರವಾಗಿ ಬೆಳೆಯುವಂತೆ ಮಾಡಲು ಶ್ರಮಿಸುತ್ತಾನೆ ಎನ್ನುತ್ತ ಹೇಗೆ ಹರಿಯುವ ನೀರು ಅಡ್ಡಲಾಗಿ ಬಂದ ಕಲ್ಲು ಮುಳ್ಳುಗಳನ್ನು ಎದುರಿಸಿ ಸರಸರನೆ ಹರಿಯುವುದೊ ಹಾಗೆಯೇ ತಮ್ಮ ಜೀವನದಲ್ಲಿ ಬರುವ ಕಷ್ಟಗಳಿಗೆ ಹೆದರಿ ಹಿಂದೆ ಸರಿಯದೇ ಮುನ್ನುಗ್ಗುತಿರಬೇಕು ಎಂಬ ಸದಾಶಯ ಕಾಣಬಹುದು. ಇಂತಹ ಹತ್ತು ಹಲವು ವಿಚಾರಗಳನ್ನು ಕಾವ್ಯವಸ್ತುವಾಗಿಸಿದ ಈ ಕೃತಿಯು ಓದುಗನ ಜ್ಞಾನದ ಹರಿವನ್ನು ಹೆಚ್ಚಿಸುವಲ್ಲಿ ಫಲಕಾರಿಯಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ.

ಕವಯತ್ರಿ ಕೆ ಟಿ ಶ್ರೀಮತಿಯವರು ಮುಕ್ತಕ,ಕವನ ಲೇಖನ ಹಾಗೂ ಚೌಪದಿಗಳ ಕೃತಿಗಳನ್ನು ರಚಿಸಿ ಸಾಹಿತ್ಯ ಲೋಕಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಇವರ ಸಾಹಿತ್ಯ ಕೃಷಿ ಹೀಗೆಯೇ ನಿರಂತರವಾಗಿ ಸಾಗಲಿ ಹಾಗೂ ಇನ್ನೂ ಹತ್ತಾರು ಕೃತಿಗಳು ಕನ್ನಡ ಸಾರಸ್ವತ ಲೋಕಕ್ಕೆ ದೊರಕಲಿ ಎಂದು ಹಾರೈಸುತ್ತ

ಅಕ್ಷರೋಪಾಯನದಿ ಕಾವ್ಯರಸ ಪಾಕಗಳು /
ಶಿಕ್ಷಕನ ಮಹತಿಯನು ಸಾರುತಿವೆ ಜಗಕೆ /
ರಕ್ಷಕನ ಕಾಯಕವ ಮನದಾಳದಿಂ ನೆನೆವ /
ಸಕ್ಷಮತೆ ಬರಹದಲಿ ಪೂರ್ಣತನಯೆ //

ಎಂದು ಈ  ಸಂಕಲನದ ಕುರಿತು ಮುಕ್ತಕ ನಮನ ಸಲ್ಲಿಸುತ್ತೇನೆ.


  • ದೀಪಾಲಿ ಸಾಮಂತ, ದಾಂಡೇಲಿ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading