ಆಲೂಗಡ್ಡೆ ಸಂಡಿಗೆ ಹೀಗೆ ಮಾಡಿದರೆ ತಿನ್ನಲ್ಲು ಮಜಾವಾಗಿರುತ್ತದೆ. ಮಕ್ಕಳಿಗಂತೂ ಈ ಸಂಡಿಗೆ ಇಷ್ಟವಾಗಿ ಬಿಡುತ್ತದೆ. ನಳಪಾಕ ಪ್ರವೀಣೆ ಶಕುಂತಲಾ ಅವರು ಮಾಡುವ ವಿಧಾನವನ್ನು ಹಂಚಿಕೊಂಡಿದ್ದಾರೆ. ನೀವು ಮನೆಯಲ್ಲಿ ಮಾಡಿ ನೋಡಿ…
ಬೇಕಾಗುವ ಪದಾರ್ಥಗಳು :
- ಆಲೂಗೆಡ್ಡೆ – 2
- ಸೀಮೆ ಅಕ್ಕಿ – 1 ಕಪ್
- ಉಪ್ಪು – ರುಚಿಗೆ ತಕ್ಕಷ್ಟು
- ಹಸಿಮೆಣಸಿನಕಾಯಿ – ಪೇಸ್ಟ್
- ಜೀರಿಗೆ – ಸ್ವಲ್ಪ
- ಕರಿ ಜೀರಿಗೆ – ಸ್ವಲ್ಪ
- ಓಂ ಕಾಳು – ಸ್ವಲ್ಪ
- ಎಳ್ಳು – ಸ್ವಲ್ಪ

ಮಾಡುವ ವಿಧಾನ :
ಮೊದಲಿಗೆ 2 ಗಂಟೆಗಳ ಕಾಲ ಸೀಮೆ ಅಕ್ಕಿಯನ್ನೂ ತೊಳೆದು ಮುಳುಗುವಷ್ಟು ನೀರು ಹಾಕಿ ನೆನೆಸಿಡಿ. ಆಲೂಗೆಡ್ಡೆ ಸಿಪ್ಪೆ ತೆಗೆದು ತೊಳೆದು ತುರಿದು ಇಟ್ಟು ಕೊಳ್ಳಿ. ಒಂದು ಬಾಣಲಿಗೆ ನೀರು ಹಾಕಿ ಕುದಿಯುವಾಗ ಆಲೂಗೆಡ್ಡೆ ತುರಿ ಹಾಕಿ ಒಂದು ಕುದಿ ಬರಿಸಿ ಸೋಸಿಕೊಂಡು ತಣ್ಣೀರು ಹಾಕಿ ಸೋಸಿಕೊಳ್ಳಿ.
ಈಗ ಸೀಮೇ ಅಕ್ಕಿಯನ್ನು ನೀರು ಹಾಕದೆ ಆವಿಯಲ್ಲಿ ಬೇಯಿಸಿಕೊಳ್ಳಿ.
ಈಗ ಬೆಂದ ಸೀಮೆ ಅಕ್ಕಿಯನ್ನು ಆಲೂಗಡ್ಡೆ ಗೆ ಸೇರಿಸಿ, ಉಪ್ಪು, ಖಾರ, ಎಳ್ಳು,ಜೀರಿಗೆ ಎಲ್ಲವನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಒಂದು ಪ್ಲಾಸ್ಟಿಕ್ ಹಾಳೆ ಮೇಲೆ ಬೇಕಾದ ಸೈಜ್ ಗೆ ಸಂಡಿಗೆ ಇಟ್ಟು ಬಿಸಿಲಿನಲ್ಲಿ ಒಣಗಿಸಿ. ಈಗ ಒಣಗಿದ ಸಂಡಿಗೆಯನ್ನು ಸಂಜೆ ತಿರುಗಿಸಿ ಹಾಕಿ ಮರುದಿನ ಪುನಃ ಬಿಸಿಲಿನಲ್ಲಿ ಇಟ್ಟು ಒಣಗಿಸಿ. .ಹೀಗೆ 2, 3 ದಿನ ಚೆನ್ನಾಗಿ ಬಿಸಿಲಿನಲ್ಲಿ ಒಣಗಿಸಿ ಗಾಳಿ ಆಡದ ಡಬ್ಬದಲ್ಲಿ ಹಾಕಿ ಬೇಕಾದಾಗ ಎಣ್ಣೆಯಲ್ಲಿ ಕರಿಯಿರಿ.
- ಶಕುಂತಲಾ, ಮೈಸೂರು.
