ಆಪ್ಕಿ ಇಜ್ಜತ್ ಧಾರಾವಾಹಿ ಸುತ್ತ

ಮರ್ಯಾದೆ ಕೇವಲ ಗಂಡಿನ ಸ್ವತ್ತಲ್ಲ, ಅದು ಹೆಣ್ಣಿನದೂ ಕೂಡಾ ಹೌದು, ಅದಕ್ಕೆ ಧಕ್ಕೆ ಒದಗಿದಾಗ ಅವಳು ಯಾವ ಹಂತಕ್ಕೂ ಹೋಗಬಲ್ಲಳು. ಹೆಣ್ಣಿಗೆ ಬೇಕಾದ್ದು ಪ್ರೀತಿ ಮಾತ್ರವಲ್ಲ ಮರ್ಯಾದೆ ಮತ್ತು ಪರಸ್ಪರ ನಿಷ್ಠೆ ಎಂಬುದನ್ನು ‘ಆಪ್ಕಿ ಇಜ್ಜತ್’ ಧಾರಾವಾಹಿಯಲ್ಲಿ ವಸ್ತುನಿಷ್ಠೆಯಾಗಿ ತೋರಿಸಿದ್ದಾರೆ. ಈ ಧಾರಾವಾಹಿಯ ಕುರಿತು ರಘುನಾಥ್ ಕೃಷ್ಣಮಾಚಾರ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಹೀಗೊಂದು ಮುಸ್ಲಿಂ ಸಾಮಾನ್ಯ ಕುಟುಂಬ. ಅಪ್ಪ ಇಲ್ಲ. ವಿಧವೆ ತಾಯಿ ತನ್ನ ಒಬ್ಬ ಹರೆಯದ ಮಗ ಮತ್ತು ಇಬ್ಬರು ಹೆಣ್ಣು ಮಕ್ಕಳ ಜೊತೆಗೆ, ಬಾಡಿಗೆ ಮನೆಯಲ್ಲಿ ಪಡಿಪಾಟಲು ಪಡುತ್ತಾ ಬದುಕು ನಡೆಸುತ್ತಿರುತ್ತಾಳೆ. ಆ ಹದಿ ಹರೆಯದ ಹುಡುಗನಿಗೆ ಶೋಕಿ. ಶಾಲೆಗೆ ಹೋಗುವ ಹುಡುಗಿಯರನ್ನು ರೇಗಿಸುತ್ತಾ, ಗೆಳೆಯನೊಂದಿಗೆ ಬೈಕ್ ನಲ್ಲಿ ತಿರುಗುವುದು ಅವನ ಹವ್ಯಾಸ. ಹೀಗೆ ತಿರುಗುತ್ತಿರುವಾಗ ಅವನ ಕಣ್ಣಿಗೆ ಒಬ್ಬಳು ಚಂದದ ಶಾಲಾ ಬಾಲಕಿ ಕಣ್ಣಿಗೆ ಬೀಳುತ್ತಾಳೆ. ಅವಳನ್ನು ನೋಡುವ ಭರದಲ್ಲಿ ಬೈಕ್ ನಿಂದ‌ ಕೆಳಗೆ ಬಿದ್ದು ತರಚು ಗಾಯಗಳಾಗುತ್ತವೆ. ಆದರೂ ಅವನು ಅವಳ ಬೆನ್ನುಹತ್ತುವುದನ್ನು ಮಾತ್ರ ಬಿಡುವುದಿಲ್ಲ. ಅವಳು ಅವನಿಗೆ ಅವಳ ಬೆನ್ನಹಿಂದೆ ಬಿದ್ದುದಕ್ಕೆ ಬೈದರೂ , ಅವನು ಅವಳ ಮನೆಯನ್ನು ಪತ್ತೆ ಮಾಡಿ ಅವಳನ್ನು ತಾನು ಮದುವೆಯಾಗುವುದಾಗಿ, ಆದರೆ ಅವಳು ಅವನಿಗಾಗಿ ಐದು ವರ್ಷಗಳು ಕಾಯಬೇಕೆಂದು, ಅವಳನ್ನು ಪೀಡಿಸುತ್ತಾನೆ. ಅಲ್ಲಿಯವರೆಗೆ ತಾನಾಗಲಿ ತನ್ನ ಮನೆಯವರಾಗಲಿ ಕಾಯುವುದು ಸಾಧ್ಯವಿಲ್ಲ ಎಂದು ಅವಳು ಹೇಳಿದಾಗ, ಅವನು ತನ್ನ ತಾಯಿಯನ್ನು ಓಲೈಸುತ್ತಾನೆ. ಅವಳು ಬೇರೆ ದಾರಿಯಿಲ್ಲದೆ, ಅವರ ಮನೆಗೆ ಹೆಣ್ಣು ಕೇಳಲು ಹೋಗುತ್ತಾಳೆ. ಅವರು ಸರಿಯಾಗಿ ಕೆಲಸವಿಲ್ಲದ ಅವನಿಗೆ ಮದುವೆ ಮಾಡಿ ಕೊಡುತ್ತಾಳೆ. ಅವಳಿಗೆ ಕೂಡ ತಾಯಿಯಲ್ಲದೆ ಒಬ್ಬ ಅಣ್ಣ ಮತ್ತು ತಂಗಿ ಇರುತ್ತಾರೆ.

ಮದುವೆಯಾಗಿ ಬಂದ ಅವಳು, ಮನೆಯ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಾಳೆ. ಅವಳ ಅತ್ತೆಗೆ, ಎಲ್ಲಿ ಮಗ ಅವಳ ಕೈಗೊಂಬೆಯಾಗಿ, ತನ್ನನ್ನು ನಿರ್ಲಕ್ಷಿಸುತ್ತಾನೋ ಎಂಬ ಆತಂಕದಲ್ಲಿ, ಅವರ ಮೇಲೆ ಸದಾ ಕಣ್ಣಿಟ್ಟು, ಅವರ ಮಧ್ಯೆ ಬರುತ್ತಾಳೆ. ಈ ನಡುವೆ ಅವನ ತಂಗಿಯೊಬ್ಬಳನ್ನು ನೋಡಲು ಬಂದವರು, ಅವಳ ಸೌಂದರ್ಯಕ್ಕೆ ಮರುಳಾಗಿ, ಮದುವೆಗೆ ಒಪ್ಪಿಗೆ ಸೂಚಿಸಿದರೂ, ಹದಿನೈದು ದಿನಗಳಲ್ಲಿ ಮದುವೆ ಮಾಡಿಕೊಡಬೇಕೆಂದು ಷರತ್ತು ವಿಧಿಸಿದಾಗ, ಅವರು ಕಂಗಾಲಾಗುತ್ತಾರೆ. ಅವನಂತೂ ಅಸಾಧ್ಯ ಎಂದು ಕೈ ಚೆಲ್ಲಿಬಿಡುತ್ತಾನೆ. ಆಗ ಅವರ ನೆರವಿಗೆ ಬಂದವಳು ಅವನ ಹೆಂಡತಿ. ತಾನು ತವರು ಮನೆಯಿಂದ ತಂದಿದ್ದ ಎಲ್ಲವನ್ನೂ ಮಧುಮಗಳಿಗೆ ಒಪ್ಪಿಸುತ್ತಾಳೆ. ಆಗ ಅವಳ ಔದಾರ್ಯಕ್ಕೆ ಅವಳನ್ನು ಕೊಂಡಾಡುತ್ತಾರೆ. ಅಂತೂ ಮದುವೆಯನ್ನು ಮಾಡಿ ಕಳಿಸುತ್ತಾರೆ.

ಮುಂದೆ ಬರಿಗೈಯವನಾದ ಅವನು, ವ್ಯಾಪಾರ ಮಾಡಲು ಹೊರಟಾಗ, ಅವನಿಗೆ ನೆರವಾಗಲು ಅವಳು ತನ್ನ ತವರು ಮನೆಯಿಂದ ಹಣ ತಂದು ಕೊಡುತ್ತಾಳೆ. ಅವನಿಂದ ಹಣ ಪಡೆದವರು, ಅವನಿಗೆ ಮೋಸಮಾಡಿದಾಗ ಏನುಮಾಡುವುದು ಎಂದು ತಿಳಿಯದೆ ಮತ್ತೆ ಕಂಗಾಲಾಗುತ್ತಾನೆ. ಆಗ ಅವಳಲ್ಲಿ ಉಳಿದಿದ್ದ ಏಕೈಕ ಅಭರಣವನ್ನು ಕೂಡಾ ಅವನಿಗೆ ಒಪ್ಪಿಸುತ್ತಾಳೆ. ಅವನು ಹಿಂಜರಿದರೂ, ಅವಳೆ ಅವನಿಗೆ ಅದನ್ನಿಟ್ಟುಕೊಂಡು ಏನು ಮಾಡುವುದು ಎಂದು ಬಲವಂತವಾಗಿ ಕೊಡುತ್ತಾಳೆ. ಅವನು ಅದನ್ನು ತಾನು ಮಾರುವುದಿಲ್ಲವೆಂದು, ಒತ್ತೆಯಿಟ್ಟು ಹಣಪಡೆದು ಬಂದ ಕೂಡಲೆ ಅದನ್ನು‌ ಅವಳಿಗೆ ಮರಳಿಸುವುದಾಗಿ ವಚನ ಕೊಡುತ್ತಾನೆ. ಅದರಂತೆ ಅವನು ನಡೆದುಕೊಂಡಾಗ, ಅವಳಿಗೆ ಸಹಜವಾಗಿಯೆ ಸಂತೋಷವಾಗುತ್ತದೆ. ವ್ಯಾಪಾರ ಕುದುರಿ ಮೊದಲ ಬಾರಿಗೆ ಒಂದು ಲಕ್ಷ ಸಂಪಾದನೆ ಮಾಡಲು ಸಾಧ್ಯವಾದಾಗ , ಅದನ್ನು ತಂದು ಅವಳ ಕೈಗೆ ಕೊಡಲು ಹೋದಾಗ , ಅವಳು ಅದನ್ನು ನಿರಾಕರಿಸಿ, ಅದನ್ನು ತೆಗೆದುಕೊಂಡು ಅವನಮ್ಮನಿಗೆ ಕೊಡಲು ಒತ್ತಾಯ ಮಾಡುತ್ತಾಳೆ. ಅವರಮ್ಮನಿಗೆ ಕೊಡಲು ಅವರು ಅದನ್ನು ನಿರಾಕರಿಸಿದರೂ, ಅವನ ಅವರ ಕಾಲ ಬಳಿ ಇಟ್ಟಾಗ, ಬೇರೆ ದಾರಿಯಿಲ್ಲದೆ ಮಗ ಬದಲಾಗಿಲ್ಲ ಎಂದು ಸಂತೋಷಪಡುತ್ತಾರೆ.

ಮುಂದೆ ಅವನ ವ್ಯಾಪಾರ ಏರುಗತಿಯಲ್ಲಿ ಸಾಗಿ ಹಣ ಬರಲು ತೊಡಗಿದಾಗ, ಅವರಿದ್ದ ಬಾಡಿಗೆ ಮನೆಯನ್ನು ಬಿಟ್ಟು ಸ್ವಂತದ ದೊಡ್ಡ ಮನೆಗೆ ಬದಲಾಯಿಸುತ್ತಾರೆ. ಕೆಲಸಕ್ಕೆ ಮೂರು ಜನರನ್ನು ನೇಮಿಸಿಕೊಳ್ಳುತ್ತಾರೆ. ಎಲ್ಲದರ ಉಸ್ತುವಾರಿ ಮಾತ್ರ ಅವಳದೆ. ಅವನಲ್ಲಿ‌ ಸಂಪತ್ತು ಕ್ರೋಡೀಕರಿಸಿದಂತೆ ಅವನು ಮತ್ತು ಅಮ್ಮ ಇಬ್ಬರೂ ಬದಲಾಗುತ್ತಾರೆ. ಅವರಿಗೀಗ ಇಬ್ಬರು ಮಕ್ಕಳು. ಅವಳು ಹೆಚ್ಚು ಓದಿಲ್ಲ ಎಂದು, ಪೆದ್ದಿಯೆಂದು, ತಾನು ಸಮಾಜದಲ್ಲಿ ಪ್ರತಿಷ್ಟಿತ ವ್ಯಕ್ತಿಯಾಗಿ, ರಾಜಕೀಯದಲ್ಲಿ ತೊಡಗಲು, ಅವಳು ತನಗೆ ಸರಿಯಾದ ಜೋಡಿಯಲ್ಲವೆಂದು ಭ್ರಮಿಸಿದ ಅವನು, ತನಗಿಂತ ಅರೆವಯಸ್ಸಿನ ಓದಿದ ಹುಡುಗಿಗೆ ಮರುಳಾಗಿ, ಅವನು ಅವಳನ್ನು ಮದುವೆಯಾಗಲು ಗುಟ್ಟಾಗಿ ಸಿದ್ದಳಾಗುತ್ತಾನೆ. ಅದನ್ನು ತಿಳಿದ ಅವನ ಬಾಲ್ಯಕಾಲದ ಗೆಳೆಯ ಬಂದು ಅವನಿಗೆ ತಪ್ಪು ಮಾಡುತ್ತಿರುವುದಾಗಿ ಹೇಳಿದರೂ, ಅದು ಅವನ ತಲೆಗೆ ಹೋಗುವುದಿಲ್ಲ. ಅವಳು ಇದ್ದಕಿದ್ದಂತೆ ಒಂದು ದಿನ ಕಣ್ಮರೆಯಾದಾಗ, ಅವರಿಗೆ, ಅವಳು ಯಾರೋ ತರಕಾರಿ ಮಾರುವವನಿಗೆ ಮಾರುಹೋಗಿ, ಮನೆಯ ಒಡವೆ ಕದ್ದು ಅವ ಜೊತೆಗೆ ಓಡಿಹೋಗಿದ್ದಾಳೆ. ತನ್ನ ಮಾನ ಹರಾಜಹಾಕಿದ್ದಾಳೆಂದು, ಅವಳನ್ನು ಹುಡುಕಿ ಅವಳನ್ನು ಕೊಲ್ಲುವುದಾಗಿ ಬೊಬ್ಬೊ ಹೊಡೆಯುತ್ತಾನೆ ಮತ್ತು ಅವಳನ್ನು ಹುಡುಕಿಕೊಂಡು ಹೊರಡುತ್ತಾನೆ.

ತರಕಾರಿ ಮಾರುವವನ ಮಾತಿಗೆ ಮರುಳಾಗಿ, ಅವನ ಜೊತೆಗೆ ಹೋದ ಅವಳು, ರೈಲಿನಲ್ಲಿ ಹೋಗುವಾಗ, ಅವನು ಅವಳನ್ನು ಕೊಲ್ಲಲು ಬಂದೂಕು ತೆಗೆವಾಗ, ಅವನೆಂತಹ ವಂಚಕನೆಂದು ಅವಳಿಗೆ ಅರಿವಾಗುತ್ತದೆ. ಅವಳ ಗಂಡ ಅವಳು ಕಾಣೆಯಾಗಿದ್ದಾಳೆಂದು, ಪೊಲೀಸ್ ಸ್ಟೇಷನ್ ನಲ್ಲಿ ದೂರು ದಾಖಲಿಸಿದಾಗ, ಪೊಲಿಸರು ಅವನ ಬೆನ್ನುಹತ್ತಿ, ಅವನು ಅವಳನ್ನು‌ ಕೊಲ್ಲುವ ಮೊದಲೆ, ಅವನ ಮೇಲೆ ಗುಂಡುಹಾರಿಸಿ ಗಾಯಗೊಳಿಸಿ, ಅವರಿಬ್ಬರನ್ನೂ ಸೆರೆಹಿಡಿದು ತಂದು‌, ಸೆರೆಮನೆಗೆ ತಳ್ಳಿ ಅವಳ ಗಂಡನಿಗೆ ಸುದ್ದಿ ಮುಟ್ಟಿಸುತ್ತಾರೆ. ಅವನು ಕೋಪದಿಂದ‌ ಕುದಿಯುತ್ತಾ, ಅವಳನ್ನು ಕೊಲ್ಲುವ ಯೋಚನೆಯಿಂದ ಹೊರಟಾಗ,. ಅವನ ಬಾಲ್ಯಕಾಲದ ಗೆಳೆಯ ಅವನಿಗೆ ಜೊತೆಯಾಗಿ, ಅವನಿಗೆ ಬುದ್ದಿಹೇಳುತ್ತಾನೆ. ಅವಳಿಗೆ ಬೇಕಾದರೆ ವಿಚ್ಛೇದನ ಕೊಡು , ಕೊಲ್ಲುವುದು ಸರಿಯಲ್ಲ,_ ಎಂದು. ಗೊಣಗುತ್ತಲೆ ಅವನ ಜೊತೆಗೆ ಪೊಲೀಸ ಠಾಣೆಗೆ ಹೋದ ಅವನು, ಅವಳನ್ನು ಭೇಟಿಯಾಗಬೇಕು, ಎಂದು ಅವನು ಕೋರಿದಾಗ, ಅವಳು ಮೊದಲು ನಿರಾಕರಿಸಿದರು ಕಡೆಗೆ ಒಪ್ಪುತ್ತಾಳೆ.

ಅವರಿಬ್ಬರ ಭೇಟಿಯಾಗಿ , ಅವನು ಅವಳಿಗೆ ಯಾಕೆ ಹೀಗೆ ಮಾಡಿ ನನ್ನ ಮಾನ ಹರಾಜು ಹಾಕಿದೆ ಎಂದು ಕೇಳಿದಾಗ, ಅವಳು ಅವನಿಗೆ ತಕ್ಕ ಉತ್ತರ ಹೇಳುತ್ತಾಳೆ. ಅವರ ಮನೆಯಲ್ಲಿ ಅವಳಿಗೆ‌ ಯಾವುದೆ ಮರ್ಯಾದೆ ಇರಲಿಲ್ಲವೆಂದು, ಮೇಲಾಗಿ ಇನ್ನೊಬ್ಬಳನ್ನು ಮದುವೆಯಾಗಲಿರುವ ಅವನಿಗೆ, ಅವಳನ್ನು ಕೇಳುವ ಅಧಿಕಾರ ಇಲ್ಲವೆಂದು ಹೇಳಿದಾಗ, ಅದಕ್ಕೆ ತಮ್ಮ ಧರ್ಮದಲ್ಲಿ ಅದಕ್ಕೆ ಅವಕಾಶ ಇದೆಯೆಂದು ಅವನು ಉತ್ತರಿಸಿದಾಗ , ನಿಮಗೆ ಬೇಕಾದಂತೆ ಧರ್ಮವನ್ನು ದುರುಪಯೋಗ ಪಡಿಸಿಕೊಳ್ಳುವಂತೆ ಇಲ್ಲವೆಂದು, ಕೊರಾನನ್ನು ಎಂದೂ ಓದದ ಅವನು, ಅವಳಿಗೆ ಧರ್ಮದ‌ ಕುರಿತು ಹೇಳುವ ನೈತಿಕ‌ಹಕ್ಕು ಇಲ್ಲ, ಎಂದು ಅವನಿಗೆ ಮಾರುತ್ತರ ಕೊಡುತ್ತಾಳೆ. ಅದಕ್ಕೆ ಅವನ ಬಳಿ ಯಾವ ಉತ್ತರವೂ ಇರುವುದಿಲ್ಲ. ಆಗ ಅವನಿಗೆ ತಾನು ಮಾಡಿದ ತಪ್ಪಿನ ಅರಿವಾಗುತ್ತದೆ. ಅವಳು ತನ್ನನ್ನು ಕ್ಷಮಿಸಬೇಕೆಂದು ಬೇಡಿಕೊಳ್ಳುತ್ತಾನೆ. ಆದರೆ ಅವಳು ಅವನಿಗೆ ಬಾಗದೆ , ತನಗೆ ಅವನಿಂದ ಬಿಡುಗಡೆ ಬೇಕೆಂದು ಹಟ ಹಿಡಿಯುತ್ತಾಳೆ. ತನಗೆ ಐದು ಸಾವಿರ ಬೇಕೆಂದು ಅವನಿಗೆ ಹೇಳಿ ಪಡೆದುಕೊಂಡು, ಅದನ್ನು ಪೊಲೀಸ್ ರಿಗೆ ಕೊಟ್ಟು ತನಗೆ ವಿಷ ತಂದು ಕೊಡಬೇಕೆಂದು ಹೇಳಿದಾಗ. ಅವರು ಆಗಲಿ ಎಂದು ಹೇಳಿ ,ಅದನ್ನು ಅವನಿಗೆ ತಿಳಿಸಿದಾಗ, ಅವನು ಅವಳ ಉದ್ದೇಶವನ್ನು ತಿಳಿದು ,ಅವರಿಗೆ ಅವಳಿಗೆ ನೀರನ್ನು ಕೊಡುವಂತೆ ಸೂಚಿಸುತ್ತಾನೆ. ಆ ಮೇರೆಗೆ ಅವರು ಒಂದು ಚಿಕ್ಕ ಬಾಟಲಿಯಲ್ಲಿ ನೀರನ್ನು ಹಾಕಿ ತಂದು ಕೊಟ್ಟು, ಅವಳಿಂದ ತಾನಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಬರೆದುಕೊಟ್ಟು, ಕುಡಿಯಲು ಹೇಳುತ್ತಾರೆ. ಅದರಂತೆ ಅವಳು ಬರೆದುಕೊಟ್ಟು, ಕುಡಿದಾಗ ಅವಳಿಗೆ ಏನೂ ಆಗುವುದಿಲ್ಲ. ಅಲ್ಲಿಯೆ ಇದ್ದ ಅವನು ಅದು ವಿಷ ಅಲ್ಲ ನೀರು ಎಂದು ಹೇಳುತ್ತಾನೆ. ಈಗ ತನ್ನ ಜೊತೆಗೆ ಮನೆಗೆ ಬರಲು ಅವನು ಕೇಳಿಕೊಂಡಾಗ , ಅವಳು ಮೂರು ತಿಂಗಳಲ್ಲಿ ತನಗೆ ವಿಚ್ಚೇದನೆ ಕೊಡುವುದಾದರೆ ಮಾತ್ರ, ತಾನು ಬರುವುದಾಗಿ ಷರತ್ತು ಹಾಕುತ್ತಾಳೆ. ಅವನು ಅದಕ್ಕೆ ಒಪ್ಪಿ‌ ಕರೆತರುತ್ತಾನೆ. ಇದನ್ನು ನೋಡಿದ ಅವನ ಗೆಳೆಯ ಅವನಿಗೆ ಅಭಿನಂದನೆ ಸಲ್ಲಿಸುತ್ತಾನೆ.

ಮನೆಗೆ ಬಂದ ಮೇಲೆ, ಅವಳ ಅತ್ತೆ , ತಾನು ಮಗ ಅವಳಿಗೆ ಅವಮಾನ ಮಾಡಿದಾಗ ತಡೆಯದೆ ತಪ್ಪುಮಾಡಿದೆ ಎಂದು ಕ್ಷಮೆ ಕೋರಿದರೆ, ಅವಳ ಮಗಳು ,ತಾನು ಅವಳ ಜೊತೆಗೆ ಒರಟಾಗಿ ನಡೆದುಕೊಂಡಿದ್ದಕ್ಕೆ ಕ್ಷಮೆ ಕೇಳುತ್ತಾಳೆ.

ಅವನು ಮನೆಯಲ್ಲಿ ತಾನು ಇದ್ದರೆ ಅವಳಿಗೆ ಮುಜುಗರವಾಗದಿರಲೆಂದು, ತಾನು ದುಬೈಗೆ ಹೋಗಿ ನೆಲೆಸುವುದಾಗಿ, ಅವಳ ಹೆಸರಿಗೆ ಮನೆಯನ್ನು ಬರೆದಾಗ ಅವಳು ಅದು ತನಗೆ ಬೇಡ ಎಂದು, ತಾನು ಈ ಮನೆಯ ಅತಿಥಿ ಎಂದಾಗ ,ಅವನು ತಾನೇ ಈ ಮನೆಗೆ ಅತಿಥಿ ಎಂದೂ, ಅವಳು ಮಕ್ಕಳು ಮತ್ತು ಅಮ್ಮನನ್ನು ನೋಡಿಕೊಂಡು ,ಇರಬೇಕೆಂದು ಅವಳ ಕೈಗೆ ಚೆಕ್ ಬುಕ್ ಕೊಡುತ್ತಾನೆ. ಅವನು ಅವರಮ್ಮನಿಗೆ ಈ ವಿಷಯ ತಿಳಿಸಿದಾಗ, ಅದಕ್ಕೆ ತನಗೆ ಒಪ್ಪಿಗೆ ಇಲ್ಲವೆಂದು ಅವರು ತಿಳಿಸಿದಾಗ, ತನಗೆ ಅದನ್ನು ನಡೆಸಲು ಸಾದ್ಯವಿಲ್ಲ, ಎಂದು ಮೊದಲ ಬಾರಿಗೆ ತನ್ನ ತಾಯಿಯ ಮಾತನ್ನು ಮೀರುತ್ತಾನೆ.

ಅವನು ಹೊರಟು ನಿಂತಾಗ ,ಅವನನ್ನು ಮೇಲಿನಿಂದ ನೋಡುತ್ತಿದ್ದ ಅವಳು, ದಡ ದಡನೆ ಮೆಟ್ಟಿಲಿನಿಂದ ಇಳಿದು ಓಡಿ ಬಂದು, ಅವನನ್ನು ಹಿಂದಿನಿಂದ ಅಪ್ಪಿಕೊಂಡು , ಅವನನ್ನು ಬಿಟ್ಟಿರಲು ತನಗೆ ಸಾಧ್ಯವಿಲ್ಲವೆಂದು ಅಳುತ್ತಾಳೆ. ಆಗ ಅಲ್ಲಿಗೆ ಬಂದ ಅವರಮ್ಮ, ಅದನ್ನು ನೋಡಿ , ನಾಚಿಕೆ ಇಲ್ಲದವರು ಎಂದಾಗ, ಅವರಿಬ್ಬರೂ ಗಹಗಹಿಸಿ ನಗುವುದರೊಂದಿಗೆ ,ಈ ಧಾರಾವಾಹಿ ಮುಗಿಯುತ್ತದೆ. ಅಂದಹಾಗೆ ಈ ಧಾರಾವಾಹಿಯ ನಾಯಕ ನಾಯಕಿಯರ ಹೆಸರು ತಬ್ಬಿಷ್ ಮತ್ತು ಬೀನಾ .

ಈ ಮಧ್ಯೆ ತಾನು ಚುನಾವಣೆಗೆ ಸ್ಪರ್ಧಿಸುವುದಿಲ್ಲವೆಂದು, ತನಗೆ ಮನಯೆ‌ ಮುಖ್ಯವೆಂದು , ಪತ್ರಿಕೆಯವರ ಎದುರು ಘೋಷಿಸುತ್ತಾನೆ . ಮತ್ತೆ ಅವನನ್ನು ಪೀಡಿಸಲೆಂದು, ಅವನು ಮದುವೆಯಾಗಲೆಂದು ಹೊರಟಿದ್ದ ಹುಡುಗಿ ಬಂದಾಗ, ತಾನು ಅವಳನ್ನು ಮದುವೆಯಾಗುವುದಿಲ್ಲವೆಂದು ಧೃಡವಾಗಿ ಹೇಳಿ, ಅವಳನ್ನು ಹೊರಗಟ್ಟುತ್ತಾನೆ.

ಮುಸ್ಲಿಂ ಧರ್ಮದಲ್ಲಿ ಹೆಣ್ಣಿನ ದುಃಸ್ಥಿತಿಯ ಕುರಿತು, ಈಗಾಗಲೆ ನಮ್ಮಲ್ಲಿ ಮುಸ್ಲಿಂ ಲೇಖಕ ಲೇಖಕಿಯರು ತಮ್ಮ ಕತೆ ಕಾದಂಬರಿಗಳ ಮೂಲಕ ಅದನ್ನು ಬತ್ ಗೊಳಿಸಿದ್ದಾರೆ ಆದರೆ ಇದು ಪಾಕಿಸ್ಥಾನದ ಧಾರಾವಾಹಿ. ಇಲ್ಲಿ ಆ ಧರ್ಮಕ್ಕೆ ಸೇರಿದ ಸಾಮಾನ್ಯ ಹೆಣ್ಣೊಬ್ಬಳು , ಅದರ ವಿರುದ್ದ ಸಿಡಿದೇಳುವುದಲ್ಲದೆ, ತನ್ನನ್ನು ಆಟಿಕೆಯೆಂದು ಪರಿಗಣಿಸುವ ಪ್ರತಿಷ್ಟಿತ ಕುಟುಂಬದ ವ್ಯಕ್ತಿಗೆ, ತನ್ನನ್ನು ಗೌರವಿಸುತ್ತಾನೆಂದು ತಪ್ಪಾಗಿ ತಿಳಿದ ತರಕಾರಿ ಮಾರುವವನೊಂದಿಗೆ ಓಡಿಹೋಗಿ , ಇವನಿಗೆ ತಕ್ಕ ಪಾಠಕಲಿಸಿ ,ತನ್ನ ಮುಂದೆ ಮೊಣಕಾಲೂರುವಂತೆ ಮಾಡಿ, ಧರ್ಮವನ್ನು ತಮ್ಮ ಇಷ್ಟಕ್ಕೆ ಅನುಗುಣವಾಗಿ ವ್ಯಾಖ್ಯಾನಿಸಿ, ಅದನ್ನು ದುರುಪಯೋಗ ಪಡಿಸಿಕೊಳ್ಳುವವರಿಗೆ ತಕ್ಕ ಬುದ್ದಿ ಕಲಿಸುವುದು ಮುಖ್ಯ . ‌‌ ‌ ಇದನ್ನು ಪಾಕಿಸ್ಥಾನದಲ್ಲಿ ಮಾತ್ರ ನಡೆಯುತ್ತದೆಂದು, ಮುಸ್ಲಿಂ ಧರ್ಮಕ್ಕೆ ಮಾತ್ರ ಸೀಮೀತವೆಂದು ನೋಡದೆ, ನಮ್ಮಲ್ಲು ಅನೇಕ ಪ್ರತಿಷ್ಠಿತರು, ಇಂತಹ ಉಚ್ಛೃಂಖಲ ಪ್ರವೃತ್ತಿಯನ್ನು ತೋರಿಸುವವರಿಗೂ , ಇದೊಂದು ಕಲಿಯಬೇಕಾದ ಪಾಠವಾಗಿದೆ.‌ ಏಕೆಂದರೆ ಅವರಂತೆ ಇವರು , ಅಧಿಕೃತವಾಗಿ ಇನ್ನೊಂದು ಮದುವೆಯಾಗಿ ಹೆಣ್ಣನ್ನು ಕರೆತರದಿದ್ದರೂ, ಮರೆಯಲ್ಲಿ ಅವರು ಅನ್ಯಾನ್ಯ ಹೆಣ್ಣುಮಕ್ಕಳೊಂದಿಗೆ, ಆಡುವ ಆಟಗಳಿಗೆ‌ ಕೊನೆಯಿಲ್ಲ.

ಮರ್ಯಾದೆ ಕೇವಲ ಗಂಡಿನ ಸ್ವತ್ತಲ್ಲ, ಅದು ಹೆಣ್ಣಿನದೂ ಕೂಡಾ ಹೌದು, ಅದಕ್ಕೆ ಧಕ್ಕೆ ಒದಗಿದಾಗ ಅವಳು ಯಾವ ಹಂತಕ್ಕೂ ಹೋಗಬಲ್ಲಳು, ಅಲ್ಲದೆ ರಾಜಕೀಯ ಸ್ಥಾನಮಾಗಳಿಗಿಂತ‌ ಮನೆ ಮತ್ತು ಕುಟುಂಬ ಮುಖ್ಯ ಎಂಬುದನ್ನು ಗ್ರಹಿಸಿದಾಗ ಮಾತ್ರ, ಇಂತಹ‌ ಧಾರಾವಾಹಿಗಳ ಸಾರ್ಥಕತೆ. ಹೆಣ್ಣಿಗೆ ಬೇಕಾದ್ದು ಪ್ರೀತಿ ಮಾತ್ರವಲ್ಲ ಮರ್ಯಾದೆ ಮತ್ತು ಪರಸ್ಪರ ನಿಷ್ಠೆ ಎಂಬುದನ್ನು ಈ ಧಾರಾವಾಹಿ ಪ್ರಸ್ತುತ ಪಡಿಸುವುದರಿಂದ ಇದು ಎಂದಿಗೂ ಎಲ್ಲರಿಗೂ ಸಮಕಾಲೀನ ಅಂದರೆ ಉತ್ಪೇಕ್ಷೆಯಲ್ಲ


  • ರಘುನಾಥ್ ಕೃಷ್ಣಮಾಚಾರ್ – ಲೇಖಕರು, ಚಿಂತಕರು, ರಾಮನಿರಂಜನ್ ಝುನ್ಝುನ್ವಾಲ ಕಾಲೇಜು ಉಪನ್ಯಾಸಕರು.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading