“ಎಸ್ಕಲೇಟರ್ ಏರುತ್ತಾ… ಬದುಕು ಸಾಗುತ್ತಾ…”

ಮೆಜೆಸ್ಟಿಕ್‌ನಲ್ಲಿ ಪ್ರೀತಿ ಅರಳಲು ಉದ್ಯಾನವನ ಬೇಕಿಲ್ಲ. ಒಂದು ಎಸ್ಕಲೇಟರ್ ಸಾಕು. ಮೆಜೆಸ್ಟಿಕ್‌ನ ಎಸ್ಕಲೇಟರ್ ದಿನವಿಡೀ ಎಷ್ಟೊಂದು ಜನರನ್ನು ಹೊತ್ತು ಸಾಗುತ್ತಲೇ ಇರುತ್ತದೆ. ಲೇಖಕರಾದ ಎನ್.ವಿ.ರಘುರಾಮ್ ಅವರು ಎಸ್ಕಲೇಟರ್ ಕುರಿತು ಬರೆದ ಸುಂದರ ಲೇಖನವನ್ನು ತಪ್ಪದೆ ಓದಿ…

ಮೆಟ್ರೋ ಹತ್ತಲು ನಿಲ್ದಾಣಕ್ಕೆ ಹೋದಾಗಲೆಲ್ಲ ನನಗೆ ಮೊದಲು ಕಾಣುವುದು ಮೆಟ್ರೋ ರೈಲು ಅಲ್ಲ, ಎಸ್ಕಲೇಟರ್. ಅದು ಕೆಳಗಿನಿಂದ ಮೇಲಕ್ಕೆ, ಮೇಲಿನಿಂದ ಕೆಳಕ್ಕೆ ನಿರಂತರವಾಗಿ ಓಡಾಡುತ್ತಲೇ ಇರುತ್ತದೆ. ಅದರ ಮೇಲೆ ನಿಂತಿರುವ ಜನರಿಗೆ ಮಾತ್ರ ಅವಸರ. ಎಸ್ಕಲೇಟರ್‌ಗೆ ಮಾತ್ರ ಯಾವ ಅವಸರವೂ ಇಲ್ಲ.

ಒಬ್ಬರು ಎಡಬದಿಯಲ್ಲಿ ನಿಂತು ನಿಧಾನವಾಗಿ ಮೇಲಕ್ಕೆ ಹೋಗುತ್ತಿದ್ದರೆ, ಇನ್ನೊಬ್ಬರು ಬಲಬದಿಯಲ್ಲಿ ಮೆಟ್ಟಿಲುಗಳನ್ನು ಏರುತ್ತಾ, ಎಚ್ಚರಿಕೆಯ ಸಂದೇಶಗಳನ್ನು ಕಿವಿಯೊಳಗೆ ಹಾಕಿಕೊಳ್ಳದೇ ಎಸ್ಕಲೇಟರ್‌ಗಿಂತಲೂ ವೇಗವಾಗಿ ಹೋಗಲು ಪ್ರಯತ್ನಿಸುತ್ತಾರೆ.

ಆದರೆ ಮೆಜೆಸ್ಟಿಕ್‌ ನಿಲ್ದಾಣದಲ್ಲಿ ಮಾತ್ರ ಎಲ್ಲರೂ ಓಡುತ್ತಲೇ ಇರುತ್ತಾರೆ. ಬಸ್ ನಿಲ್ದಾಣದಿಂದ ಮೆಟ್ರೋ ಕಡೆಗೆ ಒಬ್ಬರ ಓಟ. ಮೆಟ್ರೋದಿಂದ ರೈಲು ಹಿಡಿಯಲು ಮತ್ತೊಬ್ಬರ ಓಟ. ಕೈಯಲ್ಲಿ ಬ್ಯಾಗ್, ಹೆಗಲ ಮೇಲೆ ಲ್ಯಾಪ್‌ಟಾಪ್, ಕಿವಿಯಲ್ಲಿ ಇಯರ್‌ಫೋನ್, ಕಣ್ಣಲ್ಲಿ ಮೊಬೈಲ್ ಪ್ರತಿಯೊಬ್ಬರಿಗೂ ತಮ್ಮದೇ ಆದ ಒಂದು ಗಮ್ಯಸ್ಥಾನದತ್ತ ಅವಸರದಿಂದ ಹೋಗುತ್ತಿರುತ್ತಾರೆ.

ಆದರೆ ನನಗೆ ಅವಸರವಿಲ್ಲ. ಈ ಗದ್ದಲದ ಮಧ್ಯೆ ಸ್ವಲ್ಪೇ ಗಮನವಿಟ್ಟು ನೋಡಿದರೂ ಸಾಕು, ಮೆಜೆಸ್ಟಿಕ್ ನಿಲ್ದಾಣ ನಮಗೆ ಇನ್ನೊಂದು ಅದ್ಭುತವಾದ ಪ್ರಪಂಚವನ್ನೇ ತೆರೆದಿಡುತ್ತದೆ.

ಬೆಳಿಗ್ಗೆ ಬೇಗ ಎದ್ದು, ಮನೆಯವರನ್ನು ಬಿಟ್ಟು, ಟ್ರಾಫಿಕ್ ಜೊತೆ ಹೋರಾಡಿ, ಬಸ್-ಮೆಟ್ರೋ ಬದಲಾಯಿಸಿ ಕೆಲಸಕ್ಕೆ ಹೋಗುವ ಈ ಜನರಿಗೆ ಜೀವನದ ಮೇಲೆ ಎಷ್ಟು ಪ್ರೀತಿ ಇರಬೇಕು!

“ಇವತ್ತು ಹೇಗಾದರೂ ಕೆಲಸ ಮುಗಿಸಬೇಕು”,

“ಸಂಬಳ ಬರಲು ಇನ್ನು ಎರಡು ದಿನ ಆಗಬೇಕು”, “ಮಗುವಿನ ಫೀಸ್ ಕಟ್ಟಬೇಕು”, “ಅಮ್ಮನಿಗೆ ಔಷಧಿ ತೆಗೆದುಕೊಂಡು ಹೋಗಬೇಕು”, “ಮಗಳ ಹುಟ್ಟು ಹಬ್ಬ, ಸಂಜೆ ಮನೆಗೆ ಬೇಗ ಹೋಗಬೇಕು”… ಹೀಗೆ ಪ್ರತಿಯೊಬ್ಬರ ಓಟದ ಹಿಂದೆ ಒಂದೊಂದು ಕಾರಣ. ಹೊರಗಿನಿಂದ ನೋಡಿದರೆ ಅದು ಜನಜಂಗುಳಿ. ಒಳಗಿನಿಂದ ನೋಡಿದರೆ ಸಾವಿರಾರು ಕನಸುಗಳ ಮೆರವಣಿಗೆ.

ಒಮ್ಮೆ ಎಸ್ಕಲೇಟರ್‌ನಲ್ಲಿ ನನ್ನ ಮುಂದೆ ಒಬ್ಬ ಯುವಕ ನಿಂತಿದ್ದ. ಕೈಯಲ್ಲಿ ಮೊಬೈಲ್ ಇತ್ತು ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಆತ ಮೊಬೈಲ್‌ನಲ್ಲಿ ಯಾರಿಗೋ ಸಂದೇಶ ಕಳುಹಿಸುತ್ತಿದ್ದ. ಕಳುಹಿಸಿದ ಕೂಡಲೇ ಮೊಬೈಲ್ ನೋಡುತ್ತಲೇ ನಕ್ಕ. ಅಷ್ಟರಲ್ಲಿ ಅವನ ಪಕ್ಕದಲ್ಲಿದ್ದ ಯುವತಿ ಅವನನ್ನು ನೋಡಿ ನಕ್ಕಳು. ಇಬ್ಬರೂ ಒಬ್ಬರನ್ನೊಬ್ಬರು ನೋಡಿಕೊಂಡರು. ಮತ್ತೆ ಮೊಬೈಲ್ ನೋಡಿದರು.

ಮತ್ತೆ ಒಬ್ಬರನ್ನೊಬ್ಬರು ನೋಡಿದರು. ಎಸ್ಕಲೇಟರ್ ಮೇಲಕ್ಕೆ ಹೋಗುತ್ತಿತ್ತು. ಅವರ ಪರಿಚಯ ಯಾವಾಗ ಪ್ರೀತಿಯಾಗಿ ಬದಲಾಗಿತ್ತೋ ಗೊತ್ತಿಲ್ಲ. ಆದರೆ ಆ ಕೆಲವು ಕ್ಷಣಗಳಲ್ಲಿ ಎಸ್ಕಲೇಟರ್ ಒಂದು ಚಿಕ್ಕ ಪ್ರೇಮಕಥೆಯನ್ನೇ ಮೇಲಕ್ಕೆ ಕರೆದೊಯ್ಯುತ್ತಿತ್ತು! ಮೆಜೆಸ್ಟಿಕ್‌ನಲ್ಲಿ ಪ್ರೀತಿ ಅರಳಲು ಉದ್ಯಾನವನ ಬೇಕಿಲ್ಲ. ಒಂದು ಎಸ್ಕಲೇಟರ್ ಸಾಕು!

ಆದರೆ ಎಸ್ಕಲೇಟರ್ ಮಾತ್ರ ಯಾರನ್ನೂ “ನಿಮ್ಮ ಸಂಬಂಧ ಏನು?”, “ಎಷ್ಟು ವರ್ಷದಿಂದ ಪರಿಚಯ?”, “ಎಲ್ಲಿ ಇಳಿಯುತ್ತೀರಿ?” ಎಂದು ಕೇಳುವುದಿಲ್ಲ. ಅದು ಎಲ್ಲರನ್ನೂ ಸಮಾನವಾಗಿ ಮೇಲಕ್ಕೆ ಕರೆದೊಯ್ಯುತ್ತದೆ. ಅದೇ ಎಸ್ಕಲೇಟರ್ ಸೊಗಸು.

ಮೆಟ್ರೋದೊಳಗೆ ಇನ್ನೊಂದು ಲೋಕವೇ ತೆರೆದುಕೊಳ್ಳುತ್ತದೆ. ದೊಡ್ಡ ಬಹುರಾಷ್ಟ್ರೀಯ ಕಂಪನಿಯ ಕಂಪ್ಯೂಟರ್ ಇಂಜಿನೀಯರ್, ಚಿಕ್ಕ ಪೇಟೆಯಲ್ಲಿ ದಿನಗೂಲಿ ಕೆಲಸದವನು, ಉದ್ಯೋಗಕ್ಕಾಗಿ ಸಂದರ್ಶನಕ್ಕೆ ಹೊರಟವನು ಕೂಡ ಮೆಟ್ರೋ ಬಾಗಿಲು ಮುಚ್ಚಿದ ತಕ್ಷಣ ಒಂದೇ ಆಗಿ ಬಿಡುತ್ತಾರೆ. ಹೌದು, ಅವರೆಲ್ಲಾ ಸಹ ಪ್ರಯಾಣಿಕರು ಮಾತ್ರ.

ಆದರೂ ನೋಡಿ, ಬಸ್ ನಿಲ್ದಾಣದಲ್ಲಿ ಪ್ರತಿದಿನ ಒಂದೇ ಸಮಯಕ್ಕೆ ಬಂದು ನಿಂತು ಪರಿಚಯ ಮಾಡಿಕೊಂಡಷ್ಟು ಸುಲಭವಲ್ಲ ಮೆಟ್ರೋದಲ್ಲಿ ನಿಲ್ದಾಣದಲ್ಲಿ ಪರಿಚಯ ಮಾಡಿಕೊಳ್ಳುವುದು. ನಿನ್ನೆ ಕಂಡ ಸುಂದರ ಮುಖವೊಂದನ್ನು ಈ ದಿನವೂ ಕಾಣಬಹುದೇನೋ ಎಂಬ ಸಣ್ಣ ಹುಡುಕಾಟ ಕಣ್ಣುಗಳು ಪ್ರತಿ ದಿನವೂ ಮಾಡುವುದು ಸಹಜ. ಆಕೆ ಕಂಡರೆ ಅಲ್ಲಿಂದ ಮುಂದೆ ಕಥೆ ಎಲ್ಲಿ ಹೋಗುತ್ತದೆ ಎನ್ನುವುದು ಅವರವರ ಅದೃಷ್ಟದ ಮೇಲೆ ನಿಂತಿರುತ್ತದೆ. ಕೆಲವರು ಮುಂದಿನ ನಿಲ್ದಾಣದಲ್ಲಿ ಇಳಿದು ಹೋದರೆ, ಕೆಲವರು ಐದಾರು ನಿಲ್ದಾಣಗಳು ಜೊತೆ ಆಗಬಹುದು. ಋಣಾನುಬಂಧವಿದ್ದರೆ ಜೀವನದ ಕೊನೆಯ ನಿಲ್ದಾಣದವರೆಗೂ ಜೊತೆಯಾಗಬಹುದು.

ಎಲ್ಲರೂ ನೇತಾಡುತ್ತಾ, ಸಾಗುತ್ತಿರುವಾಗ ಮೊಬೈಲ್ ಹಿಡಿದಿರುವ ನೂರಾರು ಕೈಗಳ ನಡುವೆ, ‘ಬ್ಲೂ ಮೂನ್’ ತರಹ ಅಪರೂಪಕ್ಕೆ ಒಬ್ಬನ ಕೈಯಲ್ಲಿ ಕನ್ನಡ ಪುಸ್ತಕ ಕಂಡರೆ ತಕ್ಷಣ ನನ್ನ ಕಣ್ಣು ಆ ಪುಸ್ತಕದ ಮುಖಪುಟದ ಕಡೆ ಹೋಗುತ್ತದೆ. ಅಂತೂ ಹೇಗೋ ಜಾಗ ಮಾಡಿಕೊಂಡು ಅವನ ಬಳಿ ಹೋಗಿ ನಿಂತುಕೊಂಡು, ಅವನಿಗೆ ಗೊತ್ತಾಗದಂತೆ ಹಣಕಿ ನೋಡುತ್ತೇನೆ. ‘ಅದು ಕಾದಂಬರಿಯೇ? ಯಾರದ್ದು? ನಾನು ಅದನ್ನು ಓದಿದ್ದೇನೆಯೇ?…’ ಅವನ ಕಥೆಯೂ ಮುಂದೆ ಸಾಗುತ್ತಿರುತ್ತದೆ. ನನ್ನ ಕುತೂಹಲವೂ ಮುಂದೆ ಸಾಗುತ್ತಿರುತ್ತದೆ. ಒಂದು ನಿಲ್ದಾಣದಲ್ಲಿ ಆತ ಪುಸ್ತಕ ಮುಚ್ಚಿ ಇಳಿದುಹೋಗುತ್ತಾನೆ.

ಒಂದು ಸೆಕೆಂಡಿನ ನಂತರ ನಾನೂ ಇಳಿಯುವ ಸ್ಟೇಶನ್ ನಿಂದ ಎರಡು ಸ್ಟೇಶನ್ ಮುಂದೆ ಬಂದಿರುವುದು ಅರಿತು, ಗಡಿಬಿಡಿಯಲ್ಲಿ ಇಳಿದು ಎದುರುಗಡೆ ಫ್ಲಾಟ್ ಫಾರಂಗೆ ಹೋಗಲು ಮತ್ತೆ ಎಸ್ಕಲೇಟರ್ ಹತ್ತುತ್ತೇನೆ. ಆಗ ನನ್ನ ಜೊತೆ ಬಂದ ಯುವಕನೊಬ್ಬ ಎಸ್ಕಲೇಟರ್ ಚಲಿಸುತ್ತಿದ್ದಂತೆಯೇ ಅದರ ಮೆಟ್ಟಿಲುಗಳನ್ನು ಏರುತ್ತಾ, ಬೇಗ ಬೇಗನೆ ಮೇಲಕ್ಕೆ ಧಾವಿಸಿದ. ಆದರೆ ಸೀರೆಯ ಸೆರಗನ್ನು ಭದ್ರವಾಗಿ ಹಿಡಿದು, ಎಸ್ಕಲೇಟರ್ ಮೇಲೆ ಕಾಲಿಡಲು ಹಿಂಜರಿಯುತ್ತಾ ನಿಂತಿದ್ದ ಅಜ್ಜಿಯೊಬ್ಬರು, ಅಂತೂ ಇಂತೂ ಅದರ ಮೇಲೆ ನಿಂತಾಗ, ಅವರ ಮುಖದಲ್ಲಿ ನೆಮ್ಮದಿ ಮೂಡಿತ್ತು. ಕಂಕುಳದಲ್ಲಿದ್ದ ಮಗುವೊಂದು ಬೆರಗಿನಿಂದ ಮೇಲೆ ಹೋಗುವುದನ್ನು ನೋಡುತ್ತಾ, ಕೈಯಲ್ಲಿದ್ದ ಲಾಲಿಪಾಪ್ ಚೀಪಲು ಮರೆತು, ಅಮ್ಮನಿಗೆ ಸ್ವಲ್ಪ ದೂರದಲ್ಲೇ ಕೆಳಗೆ ಹೋಗುತ್ತಿದ್ದ ಇನ್ನೊಂದು ಎಸ್ಕಲೇಟರ್ ತೋರಿಸುತ್ತಿತ್ತು. ಎಸ್ಕಲೇಟರ್ ಮಾತ್ರ ತನ್ನ ಪಾಡಿಗೆ ತಾನು ಮೂರು ತಲೆಮಾರುಗಳನ್ನೂ ಹೊತ್ತು ಸಾಗುತ್ತಿತ್ತು. ಆ ಯುವಕನಿಗೆ ಗುರಿ ಮುಟ್ಟುವ ಆತುರವಾದರೆ, ಅಜ್ಜಿಗೆ ಪ್ರತಿಯೊಂದು ಮುಂದಿನ ಹೆಜ್ಜೆ ಇಡಲೂ ಯೋಚಿಸುವಂತಾಗಿತ್ತು. ಆದರೆ ಮಗುವಿಗೆ ಮಾತ್ರ ಪ್ರಯಾಣವೇ ಒಂದು ಅಚ್ಚರಿ!

ಆದರೂ ಮೆಜೆಸ್ಟಿಕ್‌ನ ಎಸ್ಕಲೇಟರ್ ದಿನವಿಡೀ ಎಷ್ಟೊಂದು ಜನರನ್ನು ಹೊತ್ತು ಸಾಗುತ್ತಲೇ ಇರುತ್ತದೆ. ಕೆಳಗಿನಿಂದ ಒಂದಾಗಿ ಬರುವ ಮೆಟ್ಟಿಲುಗಳು ನಿಧಾನವಾಗಿ ಬಿಚ್ಚುಕೊಂಡು ಮೇಲಕ್ಕೆ ಸಾಗುತ್ತವೆ; ಕೊನೆಯಲ್ಲಿ ಮತ್ತೆ ಒಂದಾಗುತ್ತವೆ. ಪ್ರತಿ ಮೆಟ್ಟಿಲಿನ ಮೇಲೆ ಹಾಕಿರುವ ಹಳದಿ ಗೆರೆಯನ್ನು ದಾಟಿದರೆ ಅದರಲ್ಲಿ ಸಿಕ್ಕಿ ಹಾಕಿ ಕೊಳ್ಳಬಹುದು. ಅದರ ಕಂಬಿಯನ್ನು ಹಿಡಿದು ನಿಂತರೆ ಪ್ರಯಾಣ ಇನ್ನೂ ಸ್ವಲ್ಪ ಸುರಕ್ಷಿತ.

ಮೇಲೆ ನಿಂತು ಹಿಂತಿರುಗಿ ನೋಡಿದರೆ, ನಮ್ಮನ್ನು ಮೇಲೆ ಕರೆದುಕೊಂಡು ಬಂದ ಮೆಟ್ಟಿಲುಗಳು ಕಣ್ಣಿಗೆ ಕಾಣುವುದೇ ಇಲ್ಲ. ಅದರ ಜಾಗದಲ್ಲಿ ಮತ್ತೆ ಹೊಸ ಮೆಟ್ಟಿಲುಗಳು ಮೂಡುತ್ತಿರುತ್ತವೆ. ನಾವು ಬಂದೆವು, ಸ್ವಲ್ಪ ಹೊತ್ತು ನಿಂತೆವು, ಮುಂದೆ ಹೋದೆವು. ನಮ್ಮ ಜಾಗವನ್ನು ತುಂಬಲು ಮತ್ತೊಬ್ಬರು ಬಂದು ನಿಂತರು. ಎಸ್ಕಲೇಟರ್ ಮಾತ್ರ ತನ್ನ ಪಾಡಿಗೆ ತಾನು ಸಾಗುತ್ತಲೇ ಇತ್ತು. ನಮ್ಮ ಜೀವನ ಕೂಡ ಹೀಗೆ ಅಲ್ಲವೇ?.


  •  ಎನ್.ವಿ.ರಘುರಾಮ್ – ನಿವೃತ್ತ ಅಧೀಕ್ಷಕ ಅಭಿಯಂತ(ವಿದ್ಯುತ್), ಕ.ವಿ.ನಿ.ನಿ., ಬೆಂಗಳೂರು.

One thought on ““ಎಸ್ಕಲೇಟರ್ ಏರುತ್ತಾ… ಬದುಕು ಸಾಗುತ್ತಾ…””

Leave a Reply

Home
Search
Menu
Recent
About
×