ಎಲ್ಲ ಇದ್ದರೂ ಮನೋ ನೆಮ್ಮದಿ ಬೇಕಲ್ಲ ? ಅದೆಲ್ಲಿಂದ ತರುವುದು? ಅದಕ್ಕೆಂದೇ ಇರುವುದು ಸುಂದರ ಹವ್ಯಾಸಗಳು. ಸಂಗೀತ, ಸಾಹಿತ್ಯದಂಥ ಕಲೆಗಳು. ತಾಯಿ ಶಾರದೆಯ ವರಗಳು. ಒಲಿಸಿಕೊಳ್ಳುವ ಏಕಾಗ್ರತೆ, ಛಲ, ಬಲವಿದ್ದರೆ ಸಾಕು. ಜೀವನದ ಕುರಿತು ಬರೆದ ಅರುಣಾ.ಜಿ.ಭಟ್ ಅವರು ಬರೆದ ಲೇಖನವನ್ನು ತಪ್ಪದೆ ಮುಂದೆ ಓದಿ…
“ನೋವು ಮತ್ತು ನಲಿವನ್ನು ಸಮಾನವಾಗಿ ಸ್ವೀಕರಿಸ ಬೇಕು” ಎಷ್ಟೋ ಕಾಲದಿಂದ ಕೇಳುತ್ತ ಬಂದಿರುವ ಮಾತುಗಳಿವು. ಆದರೆ ಅವೆರಡೂ ಸಮವಾಗಿ ಪಾಲು ಮಾಡಿ ಬರುವುದಿಲ್ಲ. ನೋವು ಬಂದ ಮೇಲೆ ನಲಿವೇ ಬರುತ್ತದೆಂಬುದೇನಿಲ್ಲ! ಅದೊಂದು ಭರವಸೆ. ನೋವಿನಲ್ಲಿ ನರಳುತ್ತ ಇರುವವರಿಗೆ, ನರಳುತ್ತಲೇ ಹಲವು ವರುಷ ಉರುಳಿದವರಿಗೊಂದು ಸಾಂತ್ವನದ ನುಡಿಯದು.
ಸಣ್ಣ, ಪುಟ್ಟ ನೋವಾದರೆ ಸಹಿಸಲು ಸುಲಭ. ಬೇಗನೆ ಆ ದಿನಗಳನ್ನು ಮರೆಯಲೂ ಸಾಧ್ಯ. ನಲಿವು ಬಂದೇ ಬಿಡುತ್ತದೆ. ಸಿಹಿ, ಕಹಿಯಂತೆ ಸಮಭಾವದಲಿ, ಸಮ ಚಿತ್ತದಲಿ ಸ್ವೀಕರಿಸಲು ಸಾಧ್ಯ. ಬದುಕು ಸರಳ ಎನಿಸುತ್ತದೆ.
ನಲಿವೇ ಹೆಚ್ಚಾಗಿದ್ದು, ಅದರ ಅಮಲು ನೆತ್ತಿಗೆ ಏರುವ ಹಾಗಾದರೆ ಹೇಗೆ ? ಹಾಗೂ ಇರ ಬಹುದು. ನನ್ನಷ್ಟು ಪುಣ್ಯವಂತರು ಜಗದಲ್ಲಿ ಇನ್ನಿಲ್ಲವೆಂಬ ಒಂದು ಸಣ್ಣ ಅಹಂ ಮನದ ಮೂಲೆಯಲ್ಲಿ ಹುಟ್ಟಿದರೆ ಸಾಕು. ಇತರರ ನೋವಿಗೆ ಸ್ಪಂದಿಸುವುದು ಕಡಿಮೆಯಾಗಿ ಬಿಡುವ ಸಾಧ್ಯತೆಯಿದೆ. ಕಣ್ಣಿಗೆ ಬೆರಳು ಹಾಕಿದಂತೆ ಮಾತುಗಳು. ನಡೆ, ನುಡಿಯಲ್ಲಿ ಗತ್ತು, ಆಕೃತಿಕನ್ನಡ, ಕನ್ನಡ, ಸಾಹಿತ್ಯ, ಜೀವನ, ಜೀವನದ ಸ್ಫೂರ್ತಿ, ನೋವು ನಲಿವು, ಬದುಕಿಗೊಂದು ಸ್ಫೂರ್ತಿ, aakrutikannada, kannada, Aruna G Bhat, jeevana, ದೇವಲೋಕದಿಂದಿಳಿದು ಬಂದ ಹಾಗೇ…ವರ್ತನೆ. ಅತಿ ಸಿರಿವಂತಿಕೆ ಮತ್ತು ನಲಿವು ಒಂದೇ ಕಡೆ ಸೇರಿದಾಗ ಕೆಲವೊಮ್ಮೆ ಈ ರೀತಿ ಆಗಿ ಬಿಡುತ್ತದೆ. ತಾನು ನಡೆದದ್ದೇ ದಾರಿ ಎನ್ನುವ ಹಾಗಾಗುತ್ತದೆ. ದಯೆ, ಕರುಣೆ, ಮಮತೆ, ವಾತ್ಸಲ್ಯಗಳು ಕಡಿಮೆಯಾಗುತ್ತದೆ. ಸ್ವಾರ್ಥ ಒಂದೇ ಮೆರೆಯುತ್ತದೆ. ಉಳಿದವರ ಚಿಂತೆ, ಕಷ್ಟ, ನೋವು ಎಲ್ಲವನ್ನು ಅದು ಮರೆ ಮಾಚಿ ಬಿಡುತ್ತದೆ. ಕುರುಡು ಕಾಂಚಾಣ ಕುಣಿಯುತಲಿತ್ತು ಅನ್ನುವ ಹಾಡು ನೆನಪಾಗುತ್ತದೆ.
ಜೀವನದಲ್ಲಿ ನೋವನ್ನೇ ಉಂಡವರು, ಇನ್ನೂ ಅದನೇ ಉಣ್ಣುತ್ತಿರುವವರ ಪಾಡೇನು ಹಾಗಾದರೆ ? ದೇವರಿತ್ತ ಆಯಸ್ಸೆಲ್ಲವನ್ನೂ ಮುಗಿಸಬೇಕು. ಆತ್ಮಹತ್ಯೆ ಸರಿ ದಾರಿ ಎಂದಿಗೂ ಅಲ್ಲ. ಅದು ಸಲ್ಲದು. ಯಾವ ಕಷ್ಟಕ್ಕೂ ಹೆದರದೆ, ಜಗ್ಗದೇ, ಕುಗ್ಗದೇ ಇರುವವರೇ ಜಾಣರು. ಬದುಕಲು ಕಲಿತವರವರು. ಆ ನೋವಿನ ಹಾದಿಯಲ್ಲೂ ಹಲವು ಸಾಧನೆ ಮಾಡಿ, ಉಳಿದವರಿಗೆ ಮಾದರಿಯಾಗಿರುವವರು ನಮ್ಮ ನಡುವೆ ಇದ್ದಾರೆ. ಯಾರ ಕಣ್ಣಿಗೂ ಕಾಣಿಸದೆ ಎಲೆ ಮರೆಯ ಕಾಯಿಯಂತೆಯು ಇರಬಹುದು ಹಲವರು. ತನ್ನ ನೋವನ್ನಾಗಲಿ, ತನ್ನ ಸಾಧನೆಯನ್ನಾಗಲಿ ಅವರು ಬಣ್ಣಿಸುವ ಗೋಜಿಗೆ ಹೋಗುವುದಿಲ್ಲ. ಅಂಥವರನ್ನು ನೋಡಿ ಉರಿದು ಕೊಳ್ಳುವ ಮಂದಿಯೂ ಇದ್ದಾರು ಬಿಡಿ. ನೂರು ಜನ, ನೂರು ಗುಣ ಅನ್ನುವ ಹಾಗೇ.
ಬಾಳುವ ಕಲೆ ಬಾಯಲ್ಲಿ ಹೇಳಲು ಬಲು ಸುಲಭ. ಅಳವಡಿಸಿಕೊಂಡು ಬಾಳುವುದು ಒಂದು ಕಲೆ.
ನಲಿವಿದ್ದಾಗ ಸಂಭ್ರಮ, ಸಂತಸ ಸಹಜ. ಆದರೆ ನಮ್ಮ ಸುತ್ತ ಮುತ್ತ ಇರುವವರನ್ನು ಗಮನಿಸಬೇಕು. ಕಷ್ಟದಲ್ಲಿರುವವರ ಮುಂದೆ ಮಾತನಾಡುವಾಗ, ಮಾತಿನ ಮೇಲೆ ಹಿಡಿತ ಬೇಕು. ಎಚ್ಚರವಿರಬೇಕು. ಗತ್ತಿನಿoದ ಬಂದ ಒಂದು ಮಾತು ಬೇರೊಬ್ಬರ ಬದುಕಿಗೆ ಕುತ್ತಾಗಬಹುದು. ನಲಿವು ದೇವನಿತ್ತ ವರವೆಂದು ನಂಬಿ ಬಾಳಬೇಕು. ಇತರರಿಗೆ ಸಹಾಯ ಮಾಡದಿದ್ದರೂ ಪರವಾಗಿಲ್ಲ. ಕಾಟ ಕೊಡದಿದ್ದರೆ ಸಾಕು. ದೇವರ ಆಟ ಬಲ್ಲವರಾರು ? ಅಲ್ಲವೇ?
ನೋವೇ ಜೀವನವಾದವರಿಗೆ ಸಂಸಾರದ ಸದಸ್ಯರ ಪ್ರೀತಿ, ವಾತ್ಸಲ್ಯವೇ ವರ. ಕತ್ತಲ ಹಾದಿಗೆ ಬೆಳಕು. ನಾಳೆಯ ದಿನಕೆ ಭರವಸೆ. ನಂಬಿದ ದೇವರು ಎಂದಿಗೂ ಕೈ ಬಿಡಲಾರ ಎನ್ನುವ ಧೃಢ ವಿಶ್ವಾಸ ಬೇಕು. ಇಷ್ಟೆಲ್ಲ ಇದ್ದರೂ ಮನೋ ನೆಮ್ಮದಿ ಬೇಕಲ್ಲ? ಅದೆಲ್ಲಿಂದ ತರುವುದು? ಅದಕ್ಕೆಂದೇ ಇರುವುದು ಸುಂದರ ಹವ್ಯಾಸಗಳು. ಸಂಗೀತ, ಸಾಹಿತ್ಯದಂಥ ಕಲೆಗಳು. ತಾಯಿ ಶಾರದೆಯ ವರಗಳು. ಒಲಿಸಿಕೊಳ್ಳುವ ಏಕಾಗ್ರತೆ, ಛಲ, ಬಲವಿದ್ದರೆ ಸಾಕು. ಇನ್ನು ಪ್ರಕೃತಿಯಲ್ಲೂ ನಮ್ಮ ಮನದ ನೆಮ್ಮದಿಗೆ ಕೊಡುಗೆಗಳಿವೆ. ಸೂಕ್ಷ್ಮವಾಗಿ ಗಮನಿಸುವ ಒಳಗಣ್ಣಿರ ಬೇಕಷ್ಟೇ. ಕೊಂಕು ನುಡಿಗಳು ಕೇಳಿದಾಗ ತಲೆ ಮೇಲೆ ಬೆಟ್ಟ ಹೊತ್ತ ಭಾವದಲ್ಲಿ ಕುಳಿತರೆ ಪ್ರಯೋಜನವಿಲ್ಲ. ಆಡಿದವರು ಆ ಮಾತು ಮರೆತು ಬಿಡುತ್ತಾರೆ. ಅದನ್ನು ನೆನೆದು ಕೊರಗುವವರು,ಮರುಗುವವರು ಮೂರ್ಖರಾಗುತ್ತಾರೆ.
ಬೇವು, ಬೆಲ್ಲದ ತಟ್ಟೆಯಿಂದ ಸಿಹಿ ಬೆಲ್ಲವನು ಹೆಕ್ಕಿ ತೆಗೆಯ ಬಹುದು. ಆದರೆ ಬಾಳ ತಟ್ಟೆಯಲ್ಲಿ ಆ ದೇವನಿತ್ತುದೇ ಪ್ರಸಾದ. ಸ್ವೀಕರಿಸಲೇ ಬೇಕು. ಆಯ್ಕೆಯ ಮಾತೇ ಇಲ್ಲ.
ಅದೇನೇ ಇರಲಿ. ಮಾನವ ಜನ್ಮ ಬಲು ದೊಡ್ಡದು ಎಂದರಲ್ಲವೇ ಬಲ್ಲವರು. ನಗು,ಸ್ನೇಹ,ಪ್ರೀತಿಯನ್ನು ಹಂಚುತ್ತ…ಬಾಳುವುದು ಚoದ ತಾನೇ? ಏನಂತೀರಿ ನೀವೆಲ್ಲಾ? ಬರೆದಷ್ಟೂ ಮುಗಿಯೋದೇ ಇಲ್ಲವಲ್ಲ ಈ ನೋವು,ನಲಿವಿನ ಸಂಗತಿ.! ದೀರ್ಘವಾದರೆ ಕ್ಷಮಿಸಿ ಎಂಬ ವಿನಂತಿ.
- ಅರುಣಾ.ಜಿ.ಭಟ್ – ಬದಿಕೋಡಿ.
