ಗಂಡನನ್ನು ಕಳೆದುಕೊಂಡ ಮಹಿಳೆಯೋರ್ವಳು ಬಿದನೂರನ್ನು ಆಳುತ್ತಿರುವ ವಿಷಯ ಹೈದರಾಲಿಗೆ ತಿಳಿದಿದ್ದ ಕಾರಣ ಸುಲಭವಾಗಿ ಸೋಲಿಸಿ ವಶಪಡಿಸಿಕೊಳ್ಳಬಹುದೆಂಬುದು ಅವನ ಭಾವನೆಯಿತ್ತು.ಮುಂದೇನಾಯಿತು ಡಾ.ಲಕ್ಷ್ಮಣ ಕೌಂಟೆ ಅವರ ‘ಬಿದನೂರು ವೀರರಾಣಿ ವೀರಮ್ಮಾಜಿ’ ಕೃತಿಯ ಕುರಿತು ಆಶ್ರಿತಾ ಕಿರಣ್ ಅವರ ವಿಮರ್ಶೆಯನ್ನು ಪೂರ್ತಿಯಾಗಿ ಓದಿ.
ಪುಸ್ತಕ : ಬಿದನೂರು ವೀರರಾಣಿ ವೀರಮ್ಮಾಜಿ
ಲೇಖಕರು : ಡಾ.ಲಕ್ಷ್ಮಣ ಕೌಂಟೆ
ಪ್ರಥಮ ಮುದ್ರಣ : 2026
ಪ್ರಕಾಶಕರು : ಪುಸ್ತಕಾಗಾರ Pustakagara Bly
ಪುಟಗಳು :304
ಬೆಲೆ : 425/-
ಕಾಲದ ಗರ್ಭದಲ್ಲಿ ಅದೆಷ್ಟೋ ಕಥೆಗಳು ಹುದುಗಿಹೋಗಿವೆ. ಕೆಲವು ಇತಿಹಾಸದ ಪುಟಗಳಲ್ಲಿ ದಾಖಲಾಗಿದ್ದರೆ, ಇನ್ನು ಕೆಲವು ಓದುಗರ ಮನದಲ್ಲಿ ಅಚ್ಚಳಿಯದೆ ಉಳಿಯುತ್ತವೆ. ಕೆಲವು ಅಷ್ಟಾಗಿ ಬೆಳಕಿಗೆ ಬಂದಿರುವುದಿಲ್ಲ. ಅಂತಹುದೇ ಒಂದು ಚರಿತ್ರೆ ಬಿದನೂರು ಸಂಸ್ಥಾನವನ್ನು ಆಳಿದ ವೀರಮ್ಮಾಜಿಯದು. ಅವಳ ಬದುಕು, ಬವಣೆ, ಭರವಸೆ, ಹೋರಾಟದ ಹಾದಿಯ
ಜೊತೆಗೆ ಕೆಳದಿ ಸಂಸ್ಥಾನದ ಸಂಪೂರ್ಣ ಆಳ್ವಿಕೆಯ ಚಿತ್ರಣ ಇಲ್ಲಿದೆ.
ಸ್ವತಂತ್ರವಾಗಿ ಒಂದು ರಾಜ್ಯವನ್ನು ಸ್ಥಾಪಿಸಿ ಅದನ್ನು ಆಳುವ ಕನಸನ್ನು ಕಂಡಿದ್ದ ಹೈದರಾಲಿಗೆ ತನ್ನದೇ ಆದ ಸುಭದ್ರ ರಾಜ್ಯಧಾನಿ ಸ್ಥಾಪಿಸಿ ಅಲ್ಲುಳಿದು ರಾಜ್ಯವನ್ನು ಆಳಬೇಕು ಎನ್ನುವ ಇಚ್ಛೆ ಹೊಂದಿದ್ದನು. ಮೈಸೂರು ಅರಸರ ಕೈಕೆಳಗಿರಲು ಅವನ ಮನಸ್ಸು ಒಪ್ಪುತ್ತಿರಲಿಲ್ಲ. ತರ್ಕದಿಂದ ಯೋಚಿಸಿದವನಿಗೆ ತನ್ನ ಸ್ವತಂತ್ರ ರಾಜ್ಯಕ್ಕೆ ರಾಜಧಾನಿಯಾಗಲು ಬಿದನೂರು ಸೂಕ್ತವೆನಿಸಿತು. ಕೆಳದಿ ಅರಸರಿಂದ ಬಿದನೂರನ್ನು ವಶಪಡಿಸಿಕೊಳ್ಳಲು ಸಂಚು ರೂಪಿಸುತ್ತಾನೆ. ಗಂಡನನ್ನು ಕಳೆದುಕೊಂಡ ಮಹಿಳೆಯೋರ್ವಳು ಬಿದನೂರನ್ನು ಆಳುತ್ತಿರುವ ವಿಷಯ ಅವನಿಗೆ ತಿಳಿದಿದ್ದ ಕಾರಣ ಸುಲಭವಾಗಿ ಸೋಲಿಸಿ ವಶಪಡಿಸಿಕೊಳ್ಳಬಹುದೆಂಬುದು ಅವನ ಭಾವನೆಯಾಗಿತ್ತು.

ಇದು ಈ ಕಾದಂಬರಿಯ ಓದಿಗಾಗಿ ನಮಗಿರುವ ಪೀಠಿಕೆ. ಐತಿಹಾಸಿಕ ಕಾದಂಬರಿಗಳಲ್ಲಿ ಕುತೂಹಲ ಮೂಡಿಸುವ ಅಂಶವನ್ನು ಆರಂಭದಿಂದಲೇ ಕಟ್ಟಿಕೊಡುವುದು ಅಷ್ಟು
ಸುಲಭವಲ್ಲ. ಇಲ್ಲಿ ಹೈದರಾಲಿಯ ಆಕಾಂಕ್ಷೆಯ ಮೂಲಕ ಬಿದನೂರಿನ ಪ್ರಯಾಣಕ್ಕೂ ಮುನ್ನ ಕೆಳದಿ ಸಂಸ್ಥಾನದ ಪರಿಚಯ ಮಾಡಿಕೊಡಲಾಗಿದೆ. ನಿರೂಪಣೆ ಅದ್ಭುತವಾಗಿದ್ದು
ನಮ್ಮನ್ನು ಕಾದಂಬರಿಯ ಭಾಗವನ್ನಾಗಿಸುತ್ತದೆ.
ಕೆಳದಿ ಸಂಸ್ಥಾನದ ಸ್ಥಾಪನೆಯ ಹಾದಿ, ನಿಷ್ಠೆ, ನಿಯತ್ತು, ಧೈರ್ಯ ಶೌರ್ಯದಿಂದ ಆಳ್ವಿಕೆ ಮಾಡಿದ ನಾಯಕರ ಕಥೆಗಳು ಮೈನವಿರೇಳಿಸುವಂತಿದೆ. ಲೋಭ ಮೋಹ ಮದ ಮಾತ್ಸರ್ಯಗಳು ಒಂದು ಸಂಸ್ಥಾನಕ್ಕೆ ಹೇಗೆ ಮುಳುವಾಯಿತು ಎನ್ನುವ ನೋವಿನ ವಿಚಾರಗಳು ಇಲ್ಲಿವೆ.
ವೀರಮ್ಮಾಜಿ ಅಧಿಕಾರದ ಚುಕ್ಕಾಣಿಯನ್ನು ಹಿಡಿಯುವ ಮೊದಲು ಅವಳ ಕುಟುಂಬದ ಇನ್ನೋರ್ವ ಧೈರ್ಯವಂತ ಮಹಿಳೆ ಚೆನ್ನಮ್ಮಾಜಿಯ ಕಥೆ ಅವಳನ್ನು ಪ್ರೇರೇಪಿಸಿದಂತಿದೆ. ಓದುವಾಗ ನಮ್ಮ ಹಿರಿಯರು ನಮಗೆ ಹೇಗೆ ಸ್ಪೂರ್ತಿಯಾಗಿರುತ್ತಾರಲ್ಲವೇ ಎನ್ನುವ ಉದ್ಗಾರ ಮೂಡದಿರದು.
ವೀರಮ್ಮಾಜಿ ಯಾರು? ಸಂಸ್ಥಾನದ ಅಧಿಕಾರ ಅವಳ ಕೈಗೆ ಹೇಗೆ ಬಂತು? ಅದನ್ನು ಸಮರ್ಥವಾಗಿ ನಿಭಾಯಿಸುವಾಗ ನಡೆದ ಅಚಾತುರ್ಯವೇನು?ಹೆಣ್ಣೊಬ್ಬಳು ಏನು ತಾನೇ ಮಾಡಬಲ್ಲಳು ಎನ್ನುವ ಮಾತಿಗೆ ಸವಾಲೊಡ್ಡಿ ಧೀರತನದಿಂದ ಹೋರಾಡಿದ ವೀರಮ್ಮಾಜಿಯ ಬದುಕು ಹೂವನ್ನು ಎತ್ತಿದಷ್ಟು ಸುಲಭವಾಗಿರಲಿಲ್ಲ. ತವರಲ್ಲಿ ನೆಮ್ಮದಿಯಿಂದ ಬದುಕಿದವಳು ದೊಡ್ಡ ಸಂಸ್ಥಾನಕ್ಕೆ ಸೊಸೆಯಾಗಿ ಬಂದು ಗಂಡನ ಪ್ರೀತಿಯ ಜೊತೆ ಪ್ರೋತ್ಸಾಹ ಪಡೆದು ಅಧಿಕಾರಕ್ಕೆ ಏರಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಅವಳ ತಳಮಳ ಆತಂಕದ ಜೊತೆಗೆ ಅವಳ ಧೈರ್ಯವನ್ನು ಸೊಗಸಾಗಿ ಇಲ್ಲಿ ನಿರೂಪಿಸಲಾಗಿದೆ. ಸಂತಾನವಿಲ್ಲದ ವೀರಮ್ಮಾಜಿ ದತ್ತು ಪುತ್ರ ಮುಮ್ಮಡಿ ಸೋಮಶೇಖರ ನಾಯಕನ ಹೆಸರಿನಲ್ಲಿ ರಾಜ್ಯವನ್ನು ಸಮರ್ಥವಾಗಿ ಆಳಿದ ವೀರವನಿತೆ. ಈ ಹಾದಿಯ ಏಳು ಬೀಳು ಈ ಕಾದಂಬರಿಯ ತಿರುಳು.
ಅವಳ ಬದುಕಿನಲ್ಲಿ ಬಿರುಗಾಳಿಯಾಗಿ ಬರಲು, ಅವಳ ಸಂಸ್ಥಾನವನ್ನು ವಶಪಡಿಸಿಕೊಳ್ಳಲು ಹೈದರಾಲಿ ಸಂಚು ರೂಪಿಸಿದ. ಹೊರ ಶತ್ರುಗಳ ಜೊತೆ ಕಾದಾಡಿ ಗೆದ್ದ ವೀರಮ್ಮಾಜಿಗೆ ಒಳ ಶತ್ರುಗಳ ಸುಳಿವು ಸಿಗಲೇ ಇಲ್ಲ. ಸಿಗುವಷ್ಟರಲ್ಲಿ ಸಮಯ ಮೀರಿತ್ತು. ದಾಳಿಗೆ ಹೆದರದೆ ಹೋರಾಡಿದಳು. ಹೈದರಾಲಿಯ ಸೈನಿಕರನ್ನು ಹೊಡೆದೋಡಿಸಿದಳು. ಯುದ್ಧ ಗೆದ್ದರೂ ಸೋಲುವಂತಾಯಿತು.ಯಾಕೆ ಹೇಗೆ ಎನ್ನುವುದು ಕುತೂಹಲದಿಂದ ಓದಿಸಿಕೊಂಡು ಹೋಗುತ್ತದೆ.
ಕಣ್ಣಿಗೆ ಕಟ್ಟುವಂತಹ ನಿರೂಪಣೆ ಪ್ರತಿಯೊಂದು ಘಟನೆ ಹಾಗೂ ಸನ್ನಿವೇಶಗಳನ್ನು ಕಲ್ಪಿಸಿಕೊಳ್ಳಲು ಅನುಕೂಲವಾಗುವಂತಿದೆ. ಇತಿಹಾಸದ ಪುಟಗಳಲ್ಲಿ ಅಡಗಿರುವ ಗೆದ್ದು ಸೋತ. ಸೋಲೊಪ್ಪದೆ ಗೆದ್ದ ವೀರವನಿತೆಯ ಕಥೆ ಇದೆ. ಚರಿತ್ರೆಯಲ್ಲಿ ಶಾಶ್ವತವಾಗಿರುವ ಬಿದನೂರು ರಾಣಿ ವೀರಮ್ಮಾಜಿಯ ಜೀವನ ಸ್ಪೂರ್ತಿ ತುಂಬುವುದರಲ್ಲಿ ಸಂಶಯವಿಲ್ಲ.
ವೀರಮ್ಮಾಜಿಯ ನಿಲುವುಗಳು, ಅವಳು ದಿಟ್ಟ ಹೆಜ್ಜೆ, ಅವಳನ್ನು ಮಾನಸಿಕವಾಗಿ ಕುಗ್ಗಿಸುವ ಪ್ರಯತ್ನ ನಡೆಯುವಾಗಲು ಅವಳು ಧೃತಿಗೆಡದೆ ತಾಳ್ಮೆಯಿಂದ ತನ್ನನ್ನು ಕುಗ್ಗಿಸುವ ಪ್ರಯತ್ನ ಮಾಡುತ್ತಿರುವವರ ಜಾಡು ಹಿಡಿದು ಅವರನ್ನು ದಂಡಿಸುವ ರೀತಿ ಅಚ್ಚರಿ ಮೂಡಿಸುತ್ತದೆ. ಪರಿಸ್ಥಿತಿಯ ಅನಿವಾರ್ಯತೆ ಮನುಷ್ಯನನ್ನು ಹೇಗೆಲ್ಲಾ ಬದಲಾಯಿಸುತ್ತದೆ ಎನ್ನುವುದಕ್ಕೆ ಸಾಲು ಸಾಲು ಉದಾಹರಣೆಗಳು ಇಲ್ಲಿವೆ.

ಪುಸ್ತಕದಲ್ಲಿನ ಈ ಸಾಲುಗಳು ಇಷ್ಟ ಆದ್ವು. ಪ್ರಯಾಣದ ಅಂತ್ಯದ ಬಗ್ಗೆ ವೀರಮ್ಮಾಜಿ ಮಾತುಕುತೆ ನಡೆಸುವ ಸಂದರ್ಭವೊಂದಿದೆ.”ಎಲ್ಲ ಜೀವಿಯ ಪ್ರಯಾಣವೂ ಅಲ್ಲಿಯವರೆಗೆ. ಆದರೆ ಅದು ಬರುವವರೆಗಾದರೂ ಒಂದೆಡೆ ನೆಲೆ ನಿಲ್ಲಬೇಕಲ್ಲ” ಎನ್ನುವ ಸಾಲು ಭರವಸೆಯನ್ನು ಎತ್ತಿಹಿಡಿಯುತ್ತದೆ.
“ನಂಬಿಕೆ ಹಾಲು ಇದ್ದ ಹಾಗೆ. ಅದರೊಳಗೆ ಒಂದಿಷ್ಟು ಅಪನಂಬಿಕೆ ಎಂಬ ಹುಳಿ ಹಿಂದಿದರೂ ಸಾಕು ಕ್ರಮೇಣ ಎಲ್ಲವೂ ಒಡೆದು ಮೂಲಗುಣಧರ್ಮವನ್ನು ಕಳೆದುಕೊಂಡು ವಿಕೃತ ರೂಪ ತಳೆದು ನಿಲ್ಲುತ್ತದೆ.” ನಂಬಿಕೆ ದ್ರೋಹದ ಘಟನೆಯೊಂದು ಮನಕಲುಕಿಸುವಂತಹ ಸಂದರ್ಭದಲ್ಲಿ ಈ ಸಾಲಿದೆ.
“ಜನರು ಒಳ್ಳೆಯ ಸುದ್ದಿಗಳಿಗಿಂತ ಕೆಟ್ಟ ಸುದ್ದಿಗಳಿಗೆ ಹೆಚ್ಚು ಮಹತ್ವ ಕೊಡುತ್ತಾರೆ ಮತ್ತು ಅಂತಹ ಸುದ್ದಿಗಳನ್ನು ಬಹಳ ವೇಗವಾಗಿ ಪ್ರಚಾರಗೊಳಿಸುತ್ತಾರೆ”. ಮಾತುಗಳು ಮನವನ್ನು ಕುಗ್ಗಿಸುವ ಘಟನೆಯನ್ನು ವೀರಮ್ಮಾಜಿ ನೊಂದರೂ ಕುಗ್ಗದೆ ಹೋರಾಡುವ ಈ ಸನ್ನಿವೇಶ ಮೈನವಿರೇಳಿಸುವಂತಿದೆ.
ಆಕರ್ಷಕ ಮುಖಪುಟ ಹಾಗೂ ಪುಟ ವಿನ್ಯಾಸ. ಅಕ್ಷರದ ಗಾತ್ರ ತಾಳ್ಮೆಯನ್ನು ಪರೀಕ್ಷಿಸುವಂತಿಲ್ಲ. ಇತಿಹಾಸದ ಪುಟವೊಂದು ಬಾಯಿತೆರೆದಾಗ ಉಂಟಾಗುವ ಅದ್ಭುತವಾದ ರೋಮಾಂಚನವನ್ನು ಈ ಓದು ಖಂಡಿತ ನೀಡುತ್ತದೆ. ವೀರಮ್ಮಾಜಿಯ ಧೈರ್ಯ ಪ್ರತಿ ಮನೆಗೂ ಸ್ಫೂರ್ತಿಯಾಗುವುದರಲ್ಲಿ ಸಂಶಯವಿಲ್ಲ.
- ಆಶ್ರಿತಾ ಕಿರಣ್ – ವಿಮರ್ಶಕರು, ಲೇಖಕರು, ಬೆಂಗಳೂರು.
