ಎಲ್ಲ ಇಂದ್ರಿಯಗಳು ಕೆಲವು ಹಂತಗಳಲ್ಲಿ ವಿಶ್ರಾಂತಿ ಪಡೆಯುತ್ತವೆ. ಆದರೆ ಶ್ವಾಸವು ಕ್ಷಣ ಬಿಡದೆ ಕರ್ತವ್ಯವನ್ನು ಪಾಲಿಸುವುದು.ಶ್ವಾಸ ಇಲ್ಲವೆಂದರೆ ದೇಹ ಶವವಾಗಿ ಬಿಡುತ್ತದೆ. ಎಲ್ಲ ಪ್ರಾಕೃತ ಅಪ್ರಾಕೃತ ದೇಹಗಳ ಆತ್ಮವನ್ನು ಧಾರಣೆ ಮಾಡಿರುವ ಶಕ್ತಿಗೆ ಸರ್ವೋತ್ತಮನೆಂದು ಪರಮಾತ್ಮನೆಂದು ಜ್ಞಾನಿಗಳು ತಿಳಿದಿರುವರು. ಲೇಖಕರಾದ ಸಂಧ್ಯಾ ಟಿ ಅವರು ಹರಿ ಕಥಾಮೃತಸಾರ ಮಹತ್ವದಲ್ಲಿ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಹರಿ ಎನ್ನುವ ಶಬ್ದದಲ್ಲಿ ಸೃಷ್ಟಿ- ಸ್ಥಿತಿ- ಲಯ ಮೂರು ಅವಸ್ಥಾಗಳ ಸೂತ್ರವು ತುಂಬಿರುವ ಅಪರಿಮಿತವಾದ ಬ್ರಹ್ಮಾಂಡವು. ಭೂಮಿಯು ಕ್ಷಣ ಬಿಡದೆ ತಿರುಗುವುದು. ಆದರೆ ಒಳಗಡೆ ಇರುವ ನಾವು ಮಾತ್ರ ತಿರುಗುವದಿಲ್ಲ. ವಿಜ್ಞಾನಿಗಳು ಕಂಡು ಹಿಡಿದ ವಿಜ್ಞಾನದ ತತ್ವ ಇದನ್ನು ಎಲ್ಲರೂ ನಂಬಿದ್ದೇವೆ. ಇದು ಪರಿಪೂರ್ಣ ನಿಜ. ಅದರಂತೆ ಸೂರ್ಯೋದಯ ಸೂರ್ಯಾಸ್ತ ಇವೆರಡನ್ನೂ ನೋಡಿ ಹೇಳಬಹುದು. ಇವುಗಳನ್ನು ತಿಳಿಯಲು ಶ್ವಾಸ ಬೇಕು. ಆದಕಾರಣ ಹರಿ ಸರ್ವೋತ್ತಮ ವಾಯು ಜೀವೋತ್ತಮ ಎನ್ನುವುದು ಬದುಕಿಗೆ ತಾರಕ ಮಂತ್ರ ಎನಿಸುವದು. ತಾರಕ ಈ ಶಬ್ದವು ವಾಯು ರುದ್ರ ಬ್ರಹ್ಮ ಮೂರು ತತ್ವನೊಳಗೊಂಡ ಅಕ್ಷರ ಸಮೂಹ.
ಶ್ವಾಸವೇ ಬದುಕಿನ ಸಂಕೇತ. ಈ ಶ್ವಾಸೋಚ್ಛ್ವಾಸವನ್ನು ವಾಯು ದೇವರು ಹಂಸಮಂತ್ರವನ್ನಾಗಿ ಜಪಿಸುತ್ತಾರೆ. ಅದನ್ನು ಸಂಖ್ಯೆಗಳನ್ನು ಕಾಲನಿಯಮಿತವಾಗಿ ಜಪಿಸುತ್ತಾರೆ. ಸಂಖ್ಯೆಗಳಿಂದ ಕಾಲನಿಯಾಮಕನನ್ನು ಸ್ಮರಿಸುತ್ತಾರೆ. ಹೀಗೆ ಸಕಲ ಜೀವಿಗಳನ್ನು ಪಕ್ಷಪಾತವಿಲ್ಲದೆ ಸಮನಾಗಿ ಬದಕಿಸುವ ಅಪಾರವಾದ ಮಹಿಮೆಯ ಹಿರಿಮೆ ವಾಯುದೇವರದು.
ಎಲ್ಲ ಇಂದ್ರಿಯಗಳು ಕೆಲವು ಹಂತಗಳಲ್ಲಿ ವಿಶ್ರಾಂತಿ ಪಡೆಯುತ್ತವೆ. ಆದರೆ ಶ್ವಾಸವು ಕ್ಷಣ ಬಿಡದೆ ಕರ್ತವ್ಯವನ್ನು ಪಾಲಿಸುವುದು. ಕಣ್ಣು, ಕಾಲು, ಕೈ ಇರದಿದ್ದರೂ ಕುರುಡ ಕುಂಟ ಚೊಂಚಎಂದು ಬದುಕುತ್ತಾನೆ. ಶ್ವಾಸ ಇಲ್ಲವೆಂದರೆ ದೇಹ ಶವವಾಗಿ ಬಿಡುತ್ತದೆ. ಆ ಜಡ ದೇಹವನ್ನು ಯಾರೂ ಇಟ್ಟುಕೊಳ್ಳುವದಿಲ್ಲ. ಅದನ್ನು ಮುಟ್ಟಿದರೆ ಸ್ನಾನ ಮಾಡುವರು. ಆತ್ಮವು ಮಾತ್ರ ಯಾರಿಗೂ ಕಾಣದೆ ಕರ್ಮಸಾಕ್ಷಿ ಸಹಿತ ಪ್ರಾಕೃತ ದೇಹದಿಂದ ಹೊರಗೆ ಬರುವುದು. ಕೆಲವು ಕಾಲ ಮಾತ್ರ ಆತ್ಮ ಎಲ್ಲವನ್ನು ನೋಡುವುದು, ಆದರೆ ಮಾತು ಕ್ರಿಯೆ ಇರುವದಿಲ್ಲ. ನಂತರ ಅವರವರ ಕರ್ಮಗಳ ಯೋಗ್ಯತೆಗನುಸಾರವಾಗಿ ಆತ್ಮಕ್ಕೆ ಸಹಾಯ ಮಾಡುತ್ತ ವಾಯು ದೇವರು ಪರಮಾತ್ಮನಲ್ಲಿ ಬಿಡುತ್ತಾರೆ. ಅದಕ್ಕೆ ಯಾವ ದೇವತೆಗಳಿಗೆ ಪ್ರಾಕೃತದೇಹವಿಲ್ಲ.
ಎಲ್ಲ ಪ್ರಾಕೃತ ಅಪ್ರಾಕೃತ ದೇಹಗಳ ಆತ್ಮವನ್ನು ಧಾರಣೆ ಮಾಡಿರುವ ಶಕ್ತಿಗೆ ಸರ್ವೋತ್ತಮನೆಂದು ಪರಮಾತ್ಮನೆಂದು ಜ್ಞಾನಿಗಳು ತಿಳಿದಿರುವರು. ಹೀಗೆ ಜೀವಿಗಳು ಅವರಿಂದ ಪಡೆಯುವ ಉಪಕಾರ ಅಪಾರವಾದುದು. ಆದುದರಿಂದಲೇ ಹರಿ ಸರ್ವೋತ್ತಮ ವಾಯು ಜೀವೋತ್ತಮ ಎಂಬುದು ಸಾಧನಕೆ ತಾರಕ ಮಂತ್ರ ಆಯಿತು. ಈ ತತ್ವಗಳಲ್ಲಿಯ ಸೂಕ್ಷ್ಮ ರಹಸ್ಯವನ್ನು ತಿಳಿಯುವದು ನಮ್ಮಿಂದ ಅಸಾಧ್ಯ. ನಾವು ಕೇಳದೆ ಪಡೆದ ಈ ಸಾಧನ ಶರೀರಕ್ಕೆ ಎಲ್ಲ ಸಾಧನ ವಸ್ತುಗಳನ್ನು ಕೊಟ್ಟು ಭೂಮಿ ತತ್ತ್ವವನ್ನು ತಿಳಿದು ಮುಂದೆ ನಡೆಯಲು ವಾಯುದೇವರಿಂದ ಅವಕಾಶವನ್ನು ಮಾಡಿ ಕೊಟ್ಟನು ಸರ್ವೋತ್ತಮನು.

ವಾಯುದೇವರು ಪರಮಾತ್ಮನ ಆಜ್ಞೆಯಲ್ಲಿ ಆನಂದ ಕಾಣುತ್ತಾನೆ. ಉಸಿರು ಸಹಿತ ಜನಿಸಿದ ಮಗು, ಅಮ್ಮಾ… ಎಂದು ಅಳುತ್ತ ಕಣ್ಣು ಬಿಟ್ಟು ನೋಡುತ್ತಾ ಕೈ ಕಾಲುಗಳಿಂದ ಚಟುವಟಿಕೆ ಪ್ರಾರಂಭಿಸುತ್ತದೆ. ಆ ಮಗುವಿಗೆ ಯಾರು ಹೇಳುವರು. ಅಮ್ಮಾ… ಎನ್ನುವ ಶಬ್ದದಲ್ಲಿ ಅಕ್ಷರ ಪುರುಷಳೆನಿಸಿಕೊಂಡ ಲಕ್ಷ್ಮೀಯ ಸನ್ನಿಧಾನ ತುಂಬಿರುವದು. ಅಳುವಿನಲ್ಲಿ ಶುದ್ಧವಾದ ಮಂಗಳಕರವಾದ ಶಿವನ ಸನ್ನಿಧಾನ ತುಂಬಿರುವುದು. ಇವು ಭೂಮಿ ತತ್ವದ ಪ್ರಕೃತಿಯ ಧನ್ಯತೆಯ ಸಂಕೇತ. ಅನ್ನ ಮತ್ತು ಮನಸ್ಸಿಗೆ ರುದ್ರದೇವರು ಅಭಿಮಾನಿ. ಇಲ್ಲಿ ಅನ್ನ ಎಂದರೆ ಆಹಾರ ಪದಾರ್ಥಗಳು. ಜಲ ಮತ್ತು ಪ್ರಾಣಕ್ಕೆ ವಾಯು ದೇವರು ಅಭಿಮಾನಿ ದೇವತೆ ಗಳೆನಿಸುವರು.
ಅನ್ನ ನೀರು ಇವು ಭೌತಿಕ ಪದಾರ್ಥಗಳು. ದೇಹ ಜಠರಾಗ್ನಿ ಇವು ಸಾಧನೆಗೆ ಬೇಕಾದ ಸಾಧನಗಳು. ಪದಾರ್ಥಗಳು ಜಠರಾಗ್ನಿಯಲ್ಲಿ ಜೀರ್ಣವಾಗಿ ದೇಹದಲ್ಲಿ ತೇಜೋರೂಪದಿಂದ ವ್ಯಕ್ತವಾಗಿ ಶ್ರೀ ಹರಿಯ ಪ್ರೀತಿಗೆ ಕಾರಣವಾಗುವದು. ಅದರಂತೆ ಮನಸ್ಸು ಪ್ರಾಣ ಮಾತು ತೇಜಸ್ಸಿನ ರೂಪದಲ್ಲಿ ಹರಿಯ ಪ್ರೀತಿಯ ಯಜ್ಞವೆಂದು ಈ ತತ್ವಗಳ ಸ್ಪಷ್ಟನೆ. ಈ ಮೂರು ಸತ್ಯವಾದ ತತ್ವಗಳನ್ನು ತಿಳಿದು ಲೌಕಿಕ ವ್ಯವಹಾರಗಳಲ್ಲಿ ಸಮತ್ವದ ಮಹತ್ವವನ್ನು ಅಕ್ಷರ ಮತ್ತು ಸಂಖ್ಯೆಗಳ ಹುಟ್ಟಿನಲ್ಲಿ ಮಾನವನು ಅಧ್ಯಾಯ ಮುಗಿಸುವುದೆ ಮಾನವೀಯತೆ.
ಕೆಲವರು ಸ್ತ್ರೀ ಪುರುಷ ಎರಡು ಜಾತಿಗಳು. ಮಾನವೀಯತೆಯೇ ಧರ್ಮ ಎನ್ನುವರು. ಶಿವ ಶಕ್ತಿಯ ಉಪಾಸನೆಯಿಂದ ಪಂಚ ತತ್ವಗಳನ್ನು ತಿಳಿದು ಪರಮಾತ್ಮನ ಮಹಿಮೆ ಗುಣಗಳನ್ನು ಕೊಂಡಾಡುತ್ತ ಲೋಕೋದ್ಧಾರದ ಸಾಧನೆಯಿಂದ ಪರಮಾತ್ಮನಿಗೆ ಕೃತಜ್ಞತೆ ಸಮರ್ಪಿಸಲು ಬಂದ ದೈವೀ ಪ್ರಕೃತಿಯ ಜೀವಿಗಳು. ಅವು ಜಾತಿಯಲ್ಲ. ಇವೆಲ್ಲವುಗಳ ಮೌಲ್ಯ ತಿಳಿದು ಮಾಡುವ ಕ್ರಿಯೆಯು ಧರ್ಮ ಎನಿಸುವದು. ಕರ್ಮ ಮಾಡದೇ ಇರುವದು ಮಾನವನಿಗೆ ಅಸಾಧ್ಯ. ನಿರ್ವಂಚನೆಯ ಕರ್ಮವು ಧರ್ಮವೆನಿಸುವದು. ಇದನ್ನೆ ಜ್ಞಾನಿಗಳು ದೇವತೆಗಳ ಮೂಲಕ ಧರ್ಮದ ಹಾಗೂ ಕರ್ತವ್ಯದ ಪಾಲನೆಯ ರೀತಿಯನ್ನು ತಿಳಿಸಿರುವರು. ಈ ರೀತಿಯಾಗಿ ಮಹಾಲಕ್ಷ್ಮಿಯನ್ನು,ವಾಯುದೇವರನ್ನು ರುದ್ರದೇವರನ್ನು ಭಕ್ತಿ ಪೂರ್ವಕವಾಗಿ ಉಪಾಸನೆಯಿಂದ ಸರ್ವೋತ್ತಮ ನನ್ನು ಪೂಜಿಸಬೇಕು.
ಮನಷೋತ್ತಮರು ಎನಿಸಿಕೊಂಡವರಿಗೆ ವೈಕುಂಠದ ಪೂರ್ವ ದ್ವಾರದಿಂದ ಪ್ರವೇಶ ಅಲ್ಲಿ ಸೂರ್ಯ ಮತ್ತು ಪತ್ನಿಯಾದ ಸಂಜ್ಞಾದೇವಿಯ ಮುಖಾಂತರ ಆತ್ಮವನ್ನು ಭಾರತೀ ದೇವಿ ಮತ್ತು ವಾಯು ದೇವರು ಲಕ್ಷ್ಮೀ ನಾರಾಯಣರ ಬಳಿಗೆ ತಲುಪಿಸುವರು. ದಕ್ಷಿಣ ದ್ವಾರವು ಪಿತೃಗಳ ಮೋಕ್ಷ ದ್ವಾರ ಅಲ್ಲಿ ಚಂದ್ರ ಮತ್ತು ರೋಹಿಣಿ ಮುಖಾಂತರ ಭಾರತೀ ಮತ್ತು ವ್ಯಾನ ನಾಮಕ ವಾಯು ದೇವರು ಪರಮಾತ್ಮನ ಬಳಿಗೆ ತಲುಪಿಸುವರು. ಪಶ್ಚಿಮ ದ್ವಾರವು ಋಷಿಗಣದ ಮೋಕ್ಷ ದ್ವಾರ ಅಲ್ಲಿ ಸ್ವಾಹಾ ಮತ್ತು ಅಗ್ನಿ ದೇವರ ಮುಖಾಂತರ ಭಾರತೀ ದೇವಿ ಮತ್ತು ಅಪಾನ ನಾಮಕ ವಾಯು ದೇವರು ಪರಮಾತ್ಮನ ಬಳಿಗೆ ತಲುಪಿಸುವರು.
ಉತ್ತರ ದ್ವಾರವು ಗಂಧರ್ವರ ಮೋಕ್ಷ ದ್ವಾರ. ಅಲ್ಲಿ ಇಂದ್ರ ಮತ್ತು ಶಚಿದೇವಿ ಇರುವರು. ಅವರ ಮುಖಾಂತರ ಭಾರತೀದೇವಿ ಮತ್ತು ಸಮಾನ ನಾಮಕ ವಾಯುದೇವರು ಪರಮಾತ್ಮನ ಬಳಿಗೆ ತಲುಪಿಸುವರು. ವೈಕುಂಠದ ಊರ್ಧ್ವ ದ್ವಾರವು ಗರುಡಾದಿ ಎಲ್ಲ ದೇವತೆಗಳ ಮೋಕ್ಷ ದ್ವಾರ. ಅಲ್ಲಿ ಭಾರತೀ ಮತ್ತು ಉದಾನ ನಾಮಕ ವಾಯು ದೇವರು ಹಾಗೂ ಗರುಡ ಶೇಷಾದಿ ದೇವತೆಗಳ ಸಮೂಹ ಸೇರಿ ಅಲ್ಲಿರುವ ವಾಸುದೇವ ಮತ್ತು ಮಾಯಾದೇವಿ ನಾಮಕ ಲಕ್ಷ್ಮೀ ನಾರಾಯಣರನ್ನು ಸ್ತೋತ್ರ ಮಾಡುವರು.ಹೀಗೆ ವಾಯು ದೇವರು ಜೀವಿಗಳಲ್ಲಿದ್ದು ಅವರವರ ಸಾಧನೆಯ ಯೋಗ್ಯತೆಯ ಮೂಲಕ ಸ್ವರ್ಗ ನರಕಗಳ ಫಲದ ಅನುಭವವನ್ನು ಪರಮಾತ್ಮನಿಂದ ಕೊಡಿಸುವರು.
ವಾಯು ದೇವರ ಶ್ವಾಸ ಕ್ರಮ
ಒಂದು ಘಳಿಗೆ ಅಂದರೆ ೨೪ ನಿಮಿಷಕ್ಕೆ=೩೬೦
ಒಂದು ತಾಸಿಗೆ=೯೦೦
ಮೂರು ತಾಸಿಗೆ=೨,೭೦೦
ಈ ರೀತಿ ಒಂದು ದಿನಕ್ಕೆ=೨೧,೬೦೦
ಈ ಪ್ರಕಾರ ಒಂದು ವರ್ಷಕ್ಕೆ ೭೭,೭೬,೦೦೦ ಶ್ವಾಸೋಚ್ಛ್ವಸವನ್ನು ಕ್ರಮವಾಗಿ ಮಾಡುವರು.
ಹರಿ ಸರ್ವೋತ್ತಮ ವಾಯು ಜೀವೋತ್ತಮ ಹರೇ ಶ್ರೀನಿವಾಸ.
*
ವಾಯು ಪುತ್ರನೇ ಜೀವಿಯ ಮುಖ್ಯಪ್ರಾಣ
ಆಯು ಭಾರಕೆ ನೀವೆ ಜಗತ್ರಾಣ
ಆರೋಗ್ಯ ನೀಡಿ ಕಾಯೋ ಭಾರತೀ ರಮಣ
ಪಿತೃಗಣಕೆ ಸಾಕ್ಷಿ ನೀವೆ ವಾಯು ವ್ಯಾನ
ಯಜ್ಞಾಗ್ನಿಯ ಕೃತಿ ಫಲಕೆ ನೀವೆ ಅಪಾನ
ಸಪ್ತ ಸ್ವರಗಳಿಗೆ ಆಗಿರುವಿ ಸಮಾನ
ಸಾಯುಜ್ಯ ಮುಕ್ತಿಗೆ ನೀವೆ ಭಾರತೀ ಉದಾನ
ನೀಡು ಶ್ರವಣ ಭಕ್ತಿಗೆ ಜ್ಞಾನ ಸಾಧನ
ಮಾತರಿಶ್ವಾಂತರ್ಗತ ಶ್ರೀಹರಿಯನ್ನ
ಅಂತರಂಗದಿ ನಿಲ್ಲಿಸಿ ಕಾಯೋ ನೀ ಎನ್ನ
ಪರಮಾತ್ಮನ ಸಾಕ್ಷಿ ದೂತ ಜೈ ಹನುಮಾನ್
(“ಶ್ರೀ ಭಾರತೀ ರಮಣ ಮುಖ್ಯಪ್ರಾಣಾಂತರ್ಗತ ಶ್ರೀ ಲಕ್ಷ್ಮೀ ಪ್ರೀತ್ಯರ್ಥಮ್ ಶ್ರೀ ಕೃಷ್ಣಾರ್ಪಣ ಮಸ್ತು)”
- ಸಂಧ್ಯಾ ಟಿ – ಕವಿಗಳು, ಹರಿ ಕಥಾಮೃತಸಾರ ಲೇಖಕರು, ಬೆಂಗಳೂರು.
