ಇತಿಹಾಸ ಪುರಾಣ ದೇಹದಲ್ಲಿ ಇರುವ ಬಿಂಬ ರೂಪನಾದ ಪರಮಾತ್ಮನು ಇಂದ್ರಿಯಾಭಿಮಾನಿಗಳಾದ ಪರಿವಾರವು ದೋಷ ವರ್ಜಿತರಾಗಿ ಪವಿತ್ರರಾಗಿರುತ್ತಾರೆ. ಹಾಸ ಎನ್ನುವಲ್ಲಿ ಸತ್ಯವಾದ ಶಾಶ್ವತವಾದ ಸರ್ವೋತ್ತಮನ ಮಹಿಮೆ ಗುಣಗಳನ್ನು ಹಾಸುಹೊಕ್ಕಾಗಿ ಪುರ ಅಂದರೆ ಕ್ಷೇತ್ರ ದೇಹವನ್ನು ಪುಣ್ಯಕ್ಷೇತ್ರವನ್ನಾಗಿ ಮಾಡಿಕೊಳ್ಳಲು ಆಣ ಎಂದರೆ ಬರಮಾಡಿಕೊಳ್ಳುವುದು. ಇದು ಲೇಖಕರಾದ ಸಂಧ್ಯಾ ಟಿ ಅವರು ಹರಿ ಕಥಾಮೃತಸಾರ ಮಹತ್ವವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ನಾಹಂ ಕರ್ತಾ ಹರಿ: ಕರ್ತಾ
ಶ್ರೀ ಗುರುಭ್ಯೋ ನಮಃ ಶ್ರೀಹರಿ ಓಂ
ಶ್ರೀ ಹರಿಯೆಂಬ ಪರಮ ಆತ್ಮನಾದ ಎಲ್ಲದರಲ್ಲಿಯೂ ಓತಪ್ರೋತನಾಗಿ ತುಂಬಿರುವ ಭಗವಂತನ ಕಥಾವನ್ನು ನಿತ್ಯ ಶ್ರವಣ ಮನನ ಮಾಡುವದೆ ಒಂದು ವಿಶಿಷ್ಟವಾದ ಸುಕಾರ್ಯ. ಇದರಲ್ಲಿ ಶ್ರದ್ಧೆ ಭಕ್ತಿ ಪ್ರೀತಿ ತುಂಬಿದರೆ ನಾವು ಪರಮಾತ್ಮನ ಉಪಕಾರಣೆ (ಸೇವೆಗೆ ಸಲ್ಲುವ ಸಲಕರಣೆ) ಗಳಲ್ಲಿ ಒಂದಾಗಬಹುದು. ಅದೇ ಆಡಂಬರದಲಿ ಮಾಡಿದ್ದಾದರೆ ಅಪಕಾರದ ಸಾಧನೆಗಳಲ್ಲಿ ಒಂದಾಗಿ ಉನ್ಮತ್ತರಾಗಬಹುದು ಇವುಗಳನ್ನು ಮಾನವ ಜೀವಿಗಳು ವಿಚಾರಿಸಲೇಬೇಕು.
ಈ ಕಾಲದಲ್ಲಿ ಎಲ್ಲರೂ ಅಕ್ಷರ ಸಂಖ್ಯೆ ಕಾರ್ಯ ಇವುಗಳ ವಿದ್ಯೆ ಬಲ್ಲವರಾಗಿದ್ದಾರೆ. ಕಾಲವು ಯಾವ ರೂಪದಿಂದ ಯಾರಲ್ಲಿ ಪ್ರವೇಶಿಸುತ್ತದೆ ಗೊತ್ತಾಗುವುದಿಲ್ಲ. ಕಾರಣ ನಮ್ಮ ಸ್ವರೂಪವನ್ನು ಶುದ್ಧವಾಗಿಟ್ಟುಕೊಳ್ಳುವ ಯೋಚನೆಯಿರಬೇಕು. ಯಾವ ದುರಾಸೆಯಿಲ್ಲದೆ ನಮಗೆ ವಹಿಸಿದ ಕಾರ್ಯವನ್ನು ಸ್ವಾತ್ವಿಕವಾಗಿ ಪರಮಾತ್ಮನ ಸೇವೆಯೆಂದು ಚಿಂತನೆ ಮಾಡುತ್ತ ಮಾಡಿದರೆ ದೇವರು ಕೊಟ್ಟ ಸಾಧನ ಶರೀರಕ್ಕೆ ಉಪಕಾರ ಮಾಡಿದಂತೆ.ಇದು ಧರ್ಮ ಎನಿಸುವದು.

ಉಪ ಎಂದರೆ ಹತ್ತಿರ ಕಾರ ಎಂದರೆ ಒಳ್ಳೆಯ ಶಕ್ತಿ ಅಥವಾ ವಸ್ತುವಿನ ಹತ್ತಿರ ಹೋಗಲು ಮಾಡುವ ಕಾರ್ಯವು ಉಪಕಾರ ಎನಿಸುವದು. ಅಹಂನಲ್ಲಿ ಯೋಚಿಸದೇ ಆಸೆಗೆ ಬಲಿಯಾಗಿ ಮಾಡುವ ಕ್ರಿಯೆಯು ಅಪಕಾರ ಎನಿಸಿ ಇದ್ದ ಸಂಬಂಧಗಳು ದೂರಾಗಿ ಇದ್ದ ನಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುತ್ತೇವೆ. ಇದರಂತೆ ಎಲ್ಲ ಅಕ್ಷರಗಳ ಮಹತ್ವವನ್ನು ಅವುಗಳ ಸಾಧನೆಯನ್ನು ಯೋಚಿಸಿ ಮಾಡುವ ಕ್ರಿಯೆಯು ಉಪಕಾರ. ಇತಿಹಾಸ ಪುರಾಣ ದೇಹದಲ್ಲಿ ಇರುವ ಬಿಂಬ ರೂಪನಾದ ಪರಮಾತ್ಮನು ಇಂದ್ರಿಯಾಭಿಮಾನಿಗಳಾದ ಪರಿವಾರವು ದೋಷ ವರ್ಜಿತರಾಗಿ ಪವಿತ್ರ ರಾಗಿರುತ್ತಾರೆ. ನಾವು ದೇಹವನ್ನು ಶುದ್ಧಮಾಡಿಕೊಳ್ಳಲು ಕಾಯಾ ವಾಚಾ ಮನಸಿನಿಂದ ಮಾಡುವ ಕರ್ಮಗಳನ್ನು ದೇವರಿಗೆ ಸಮರ್ಪಿಸಬೇಕಾದಾಗ ಇತಿ ಎನ್ನುವ ಶಬ್ದ ಉಪಯೋಗಿಸುವರು. ಹಾಸ ಎನ್ನುವಲ್ಲಿ ಸತ್ಯವಾದ ಶಾಶ್ವತವಾದ ಸರ್ವೋತ್ತಮನ ಮಹಿಮೆ ಗುಣಗಳನ್ನು ಹಾಸುಹೊಕ್ಕಾಗಿ ಪುರ ಅಂದರೆ ಕ್ಷೇತ್ರ ದೇಹವನ್ನು ಪುಣ್ಯಕ್ಷೇತ್ರವನ್ನಾಗಿ ಮಾಡಿಕೊಳ್ಳಲು ಆಣ ಎಂದರೆ ಬರಮಾಡಿಕೊಳ್ಳುವುದು. ದೇಹ ಶುದ್ಧವಾಗಲು ಪ್ರೀತಿ ಭಕ್ತಿ ರಸ ತುಂಬಿದ ಅಕ್ಷರಗಳ ಶ್ರವಣ ಮನನ ಮಾಡಿದರೆ ಉಪಕಾರದ ರೀತಿ ಮಹಿಮೆ ಅರ್ಥವಾಗುವದು.ಯೋಚಿಸದೆ ಮೋಹಕ್ಕೆ ಬಲಿಯಾಗಿ ಅಕ್ಷರಗಳನ್ನು ಕೆಟ್ಟ ರೀತಿಯಲ್ಲಿ ಉಪಯೋಗಿಸಿ ಕಾರ್ಯ ಮಾಡಿದ್ಧಾದರೆ ಅಕ್ಷರಗಳಿಗೂ ಪರಮಾತ್ಮನಿಗೂ ಯಾವ ತೊಂದರೆಯಿಲ್ಲ. ನಮ್ಮ ಆತ್ಮಕ್ಕೆ ದೇಹಕ್ಕೆ ತೊಂದರೆ. ಹೀಗೆ ಉಪಕಾರ ಅಪಕಾರ ಇತಿಹಾಸ ಪುರಾಣ ಎಲ್ಲ ಅಕ್ಷರಗಳನ್ನು ಯೋಚಿಸಿ ಶುದ್ಧ ಮನಸ್ಸಿನಿಂದ ಆಪತ್ತು ಹಾಗೂ ಪರಿಹಾರಗಳಿಗೆ ನಮ್ಮಿಂದ ಏನಾದರೂ ಸಹಾಯವಾಗುವಂತೆ ಇದ್ದಲ್ಲಿ ಮಾಡುವುದು ಉಪಕಾರ. ಸಾತ್ವಿಕ ಯೋಚನೆಯಿಂದ ಕ್ರಿಯೆ ಮಾಡುತ್ತ “ಸರ್ವೇ ಜನಾ: ಸುಖಿನೋ ಭವಂತು”ಎಂದು ಹೇಳುವ ಅಧಿಕಾರ ಹೊಂದಬೇಕು. ಇದು ಒಂದು ಸಾಧನೆಗೆ ಉಪಕಾರ ಆಗುವುದು.
ರಾಮಾಯಣದಲ್ಲಿ ರಾಮನು ರಾವಣನ ಜೊತೆಗೆ ಯುದ್ಧ ಮಾಡುವ ಸಂದರ್ಭದಲ್ಲಿ “ನಾನು ಮಾನವನ ಜೊತೆಯಲ್ಲಿ ಯುದ್ಧ ಮಾಡುತ್ತಿಲ್ಲ ಮಾನವನ ಶತೃವಿನ ಜೊತೆಗೆ ಅಂದರೆ ರಾವಣನ ಉಸಿರಿನಲ್ಲಿ ಅಸುರ ಶಕ್ತಿ ತುಂಬಿತ್ತು.ಅದಕ್ಕೆ ರಾವಣನಿಗೆ ರಾಕ್ಷಸ ಎನ್ನುವ ಶಬ್ದ ಬಂದಿತು.ರಾಮನು ತನ್ನಿಂದ ಎಲ್ಲವೂ ಆಗುತ್ತಿದ್ದರೂ ನಿಷ್ಠೆಯಿಂದ ಇರುವ ಹನುಮಂತನ ಸಹಾಯ ತೆಗೆದುಕೊಥಳ್ಳುತ್ತಾನೆ.ಆದರೆ ಇದು ಮಾನವರಿಗೆ ನಿಷ್ಟಾವಂತ ಸ್ವಭಾವ ಉಪಕಾರದ ಮಹಿಮೆ ತಿಳಿಸಲು ಇರುವ ದೃಶ್ಯಾಂತ.ಇದನ್ನು ಇತಿಹಾಸ ಪುರಾಣ ಎಂದು ಸುಮ್ಮನೆ ಬಿಡುವಹಾಗಿಲ್ಲ.ಅಕ್ಷರಗಳು ಪರಮಾತ್ಮನಿಂದ ಉದ್ಭವವಾಗಿರುವವು.ತನ್ನ ಹತ್ತಿರ ಕರೆದುಕೊಳ್ಳಲು ನಮಗೆ ಸಹಾಯವಾಗಲೆಂದು ಮಾಡಿದ ಪರಮಾತ್ಮನ ಉಪಕಾರ.ಅಲ್ಲದೆ ಭೂಮಿ ಸೂರ್ಯ ಚಂದ್ರ ಅಗ್ನಿ ವಾಯು ಆಕಾಶ ಜಲ ಜೀವ ಈ ಅಷ್ಟ ತತ್ವಗಳ ಮಹತ್ವವನ್ನು ಪ್ರಕೃತಿಯಲ್ಲಿ ಕಂಡು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮಹತ್ವಪೂರ್ಣವಾದ ವಿಶ್ವದ ಮೂಲ ತತ್ವವನ್ನು ಸ್ಮರಿಸುತ್ತ ನಮ್ಮ ಕರ್ಮ ಉಪಕಾರ ರೂಪದಲ್ಲಿ ಇನ್ನೊಬ್ಬರಿಗೆ ಸಹಾಯ ಆಗುವ ರೀತಿಯಲ್ಲಿ ಆಗಲೆಂದು ಪರಮಾತ್ಮನಲ್ಲಿ ಪ್ರಾರ್ಥಿಸಿ ಸಮರ್ಪಿಸೋಣ.
ಯಾರೋ ಎಲ್ಲಿಂದಲೋ ಬಂದು ದುರಾಸೆಯ ದಾಹವನ್ನು ತೀರಿಸಲು ನಾವು ಬಂದಿಲ್ಲ.ಪರಮಾತ್ಮನ ಉಪಕಾರವನ್ನು ಸ್ಮರಿಸುತ್ತ ಶಾಂತಿ ನೆಮ್ಮದಿ ಪ್ರೀತಿಯಿಂದ ಮಾನಸ ಸರೋವರವನ್ನು ಹರಿಸಿ ವಿಶ್ವದ ಸ್ವರೂಪವನ್ನು ತಿಳಿಯಲು ಬಂದವರು.ಭಗವದ್ಗೀತೆಯಲ್ಲಿ ಘೋರ ಯುದ್ಧದ ಸಮಯದಲ್ಲಿ ಶ್ರೀ ಕೃಷ್ಣನು ಅರ್ಜುನನಿಗೆ ದೈವೀ ಸ್ವರೂಪವೆಂದರೆ “ಅಭಯ ಅಸ್ತಿತ್ವದ ಶುದ್ಧಿ ಜ್ಞಾನ ಪಡೆಯುವದು ದಾನ ಆತ್ಮಸಂಯಮ ಯಜ್ಞ ವೇದಾಧ್ಯಯನ ತಪಸ್ಸು ಸರಳತೆ ಅಹಿಂಸೆ ಸತ್ಯ ತ್ಯಾಗ ಶಾಂತತೆ ಈ ದೈವೀ ವಾತಾವರಣದಲ್ಲಿ ಕರ್ಮ ಮಾಡುವುದು ಉಪಕಾರ ಎನಿಸುವುದು.ನಂಬಿದ ಪರಮಾತ್ಮನು ಕೈ ಬಿಡುವದಿಲ್ಲ.
ಸರ್ವೇ ಜನಾ: ಸುಖಿನೋ ಭವಂತು
ಶ್ರೀ ಭಾರತೀ ರಮಣ ಮುಖ್ಯಪ್ರಾಣಾಂತರ್ಗತ ಶ್ರೀ ಲಕ್ಷ್ಮೀ ಪ್ರೀತ್ಯರ್ಥಮ್ ಶ್ರೀ ಕೃಷ್ಣಾರ್ಪಣ ಮಸ್ತು.ಹರಿ ಸರ್ವೋತ್ತಮ ವಾಯು ಜೀವೋತ್ತಮ ಹರೇ ಶ್ರೀನಿವಾಸ.
ಶ್ರೀಹರಿ ನಿನ್ನ ಕರುಣೆಯು ನಮಗಿರಲಿ
ನನ್ನ ಮನಸ್ಸು ನಿನ್ನಲ್ಲಿ ತುಂಬಿರಲಿ
ಜಡ ದೇಹದಲ್ಲಿರುವ ನಿನ್ನ ಪರಿವಾರ
ನೀಡಲಿ ನನಗೆ ಸತ್ಯದ ಸ್ಫೂರ್ತಿಕಾರ
ಬೇಡುವೆ ನಿಜ ಜ್ಞಾನವ ನಿನ್ನಲ್ಲಿ
ನೀಡು ನಿನ್ನ ಉಪಕಾರ ಸ್ಮೃತಿ ನನ್ನಲಿ
ಇರಲಿ ಅಕ್ಷರ ಶಕ್ತಿಯ ಅನುಗ್ರಹ
ಅದರಲಿ ಕರಗಲಿ ಈ ಕ್ಷರ ದೇಹ
ಮಾತರಿಶ್ವಾಂತರ್ಗತ ಶ್ರೀ ಹರಿಯಲಿ
ಬೇಯಲಿ ಈ ಮನ ಉಪಕಾರದಲಿ
ಹರಿ ಕಥಾಮೃತಸಾರ ಹಿಂದಿನ ಸಂಚಿಕೆಗಳು:
- ಹರಿ ಕಥಾಮೃತಸಾರ (ಭಾಗ – ೧)
- ಹರಿ ಕಥಾಮೃತಸಾರ (ಭಾಗ – ೨)
- ಹರಿ ಕಥಾಮೃತಸಾರ (ಭಾಗ – ೩)
- ಹರಿ ಕಥಾಮೃತಸಾರ (ಭಾಗ – ೪)
- ಹರಿ ಕಥಾಮೃತಸಾರ (ಭಾಗ – ೫)
- ಹರಿ ಕಥಾಮೃತಸಾರ (ಭಾಗ – ೬)
- ಹರಿ ಕಥಾಮೃತಸಾರ (ಭಾಗ – ೭)
- ಹರಿ ಕಥಾಮೃತಸಾರ (ಭಾಗ – ೮)
- ಹರಿ ಕಥಾಮೃತಸಾರ (ಭಾಗ – ೯)
- ಹರಿ ಕಥಾಮೃತಸಾರ (ಭಾಗ – ೧೦)
- ಹರಿ ಕಥಾಮೃತಸಾರ (ಭಾಗ – ೧೧)
- ಹರಿ ಕಥಾಮೃತಸಾರ (ಭಾಗ – ೧೨)
- ಹರಿ ಕಥಾಮೃತಸಾರ (ಭಾಗ – ೧೩)
- ಸಂಧ್ಯಾ ಟಿ – ಲೇಖಕರು, ಕವಿಗಳು, ಬೆಂಗಳೂರು.
