ನನ್ನ ಪ್ರೀತಿಯ ಮೈಸೂರು

ಮೈಸೂರು ಎಂದರೆ ಇಷ್ಟದ ಊರು. ಅಲ್ಲಿ ಕೆಲ್ಸಕ್ಕೆ ಹೋಗಬೇಕು ಅಂದುಕೊಂಡಿದ್ದೆ, ಅದು ಸಾಧ್ಯವಾಗದೆ ಇದ್ದಾಗ ಮೈಸೂರು ಕನಸ್ಸಲ್ಲೇ ನೋಡಿ ಸಂಭ್ರಮಿಸಿದ್ದೆ. ಆದರೆ ಮೊನ್ನೆ ಮೈಸೂರು ಸುತ್ತುವ ಸುಸಂದರ್ಭ ಒಲಿದು ಬಂತು. ಸಂತಶಿಶು ಅವರು ಮೈಸೂರಿನ ಮೇಲಿನ ಪ್ರೇಮದ ಬಗ್ಗೆ ಬರೆದ ಲೇಖನವನ್ನು ತಪ್ಪದೆ ಮುಂದೆ ಓದಿ…

ಮೈಸೂರಿನಲ್ಲಿ ಮೋಜು-ಮಸ್ತಿ ಬದುಕಿನಲ್ಲಿ ಎಲ್ಲವೂ ಆಕಸ್ಮಿಕ. You can’t imagine what is going to happen next. ಆದರೂ ಬದುಕು ಎಂದರೇನು ಅಂತ ಕೇಳಿದರೆ, A fascinating asthetic experience ಎಂದೇ ನಾನು ಹೇಳುತ್ತೇನೆ. ಇದೆಲ್ಲ ಯಾಕೆ ಹೇಳ್ತಿದ್ದೀನಿ ಅಂದ್ರೆ, ನಾನು ಮತ್ತೆ ಮೈಸೂರಿಗೆ ಹೋಗಿದ್ದೆ. ಒಂದೆರಡು ತಿಂಗಳ ಹಿಂದೆಯಷ್ಟೆ 3 ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನಕ್ಕೆ ಹೋಗಿ ಮರಳಿದ್ದೆ.

ನನಗೆ ಮೈಸೂರು ಎಂದರೆ ಇಷ್ಟಾನೆ. ನನ್ನ ವರ್ಗಾವಣೆಯ ಸಂದರ್ಭದಲ್ಲಿ ಮೈಸೂರು ಆಯ್ಕೆ ಮಾಡ್ಕೋಬೇಕು ಅಂದುಕೊಂಡಿದ್ದೆ. ಕೊನೆ ಕ್ಷಣದಲ್ಲಿ ಆ ಯೋಚನೆ ಕೈಬಿಟ್ಟು ನನ್ನ ಊರಿಗೆ ಸಮೀಪ ಇರ್ಬೇಕು ಅಂತ ಬಯಸಿ, ಸಮೀಪದ ಆಯ್ಕೆಯಾಗಿ ಸಿಕ್ಕ ನನ್ನೂರಿನಿಂದ 200 ಕಿ. ಮೀ ದೂರದ ಶಿಗ್ಗಾಂವ ಆಯ್ದುಕೊಂಡೆ. ಅದಿರಲಿ, ಕಳೆದ ಸಲ ಮೈಸೂರಗೆ ಹೋದಾಗ ಒಂದಿಡೀ ದಿನ ಗೆಳೆಯ ಆನಂದನೊಂದಿಗೆ ಆನಂದವಾಗಿ ಮೈಸೂರು ಸುತ್ತಿದ್ದೆ. ಮತ್ತೊಂದು ಸಾಯಂಕಾಲ ನಾವಿಬ್ಬರೂ ಬೋಗಾದಿಯಿಂದ ಮುಖ್ಯ ಬಸ್ ನಿಲ್ದಾಣದ ವರೆಗೆ ಸುಮಾರು 8 ರಿಂದ 10 ಕಿ.ಮೀ. ನಡೆದಿದ್ದೆವು. ಅಂದು ದಣಿದು ಸುಸ್ತಾಗಿ ಒಂದೆಡೆ ನಿಂತು what ever it may be, but I LOVE YOU ಮೈಸೂರು ಎಂದಿದ್ದೆ. ಮೈಸೂರು ನನ್ನ ಪ್ರೇಮದ proposal ಸ್ವೀಕರಿಸಿತು ಅನಿಸುತ್ತದೆ. ಹಾಗಲ್ಲದಿದ್ದರೆ ಇಷ್ಟು ಬೇಗ ನನ್ನನ್ನು ಮತ್ತೆ ಕರೆಸಿಕೊಳ್ಳುವುದಕ್ಕೆ ಇನ್ನೇನು ಕಾರಣ ಇದ್ದೀತು.

ಅಂದಹಾಗೆ ಈ ಸಲ ಒಂದು ವಾರದ MDP TRAININGS (Managemant Development Programme, 1.06.2026 ರಿಂದ 06. 06. 2026) ಅಂತ ATI (ADMINISTATIVE TRAINING INSTITUTE) ಮೈಸೂರಿಗೆ ಹೋಗಬೇಕಾಯಿತು. ಈ ತರಬೇತಿಗೆ ನನ್ನ ಆಯ್ಕೆ ಸಂಪೂರ್ಣವಾಗಿ Unexpected ಆಗಿತ್ತು. Events are uncertain ಅನ್ನುತ್ತಾರಲ್ಲ ಹಾಗೆ. ಇರಲಿ, ನಾನೋ ಸಂತೋಷದಿಂದ ಕಣ್ಣರಳಿಸಿಕೊಂಡೇ ಮೈಸೂರಿಗೆ ಹೋದೆ.

ಕಳೆದ ಸಲ ಆನಂದ ಜೊತೆಯಾದಂತೆ ಈ ಸಲ ಗೆಳೆಯ ಜಯಣ್ಣ ಜೊತೆಯಾದರು. ಸಾಯಂಕಾಲದ ಬಿಡುವಿನಲ್ಲಿ ಜಯಣ್ಣನೊಂದಿಗೆ ಇಡೀಯಾಗಿ ಮೈಸೂರು ಸುತ್ತಿ ಜಯಘೋಷ ಮೊಳಗಿಸಬೇಕು ಅಂದುಕೊಂಡಿದ್ದೆ. ಆದರೆ ದಿನವಿಡೀ ಬಿಡುವಿಲ್ಲದ ಕ್ಲಾಸುಗಳು ನಮ್ಮನ್ನು ಸುಸ್ತಾಗಿಸುತ್ತಿದ್ದವು. ಹೊರಗಡೆ ಹೋಗಲು ಮನಸ್ಸಾಗುತ್ತಿರಲಿಲ್ಲ. ನನಗೋ ರೂಮಿನಲ್ಲಿ ಕೂತಿರಲು ಆಗದು. ನಾನು ತಿರುಗುತ್ತಿರಬೇಕು, ಅದೇ ನನ್ನ ಸ್ವಭಾವ.

ಅಂತೂ ಮೊದಲನೇ ದಿನದ ಕ್ಲಾಸ್ ಮುಗಿಸಿ ಗೆಳೆಯ ಜಯಣ್ಣನನ್ನು ಕರೆದುಕೊಂಡು ಮೈಸೂರು ಸುತ್ತಲು ಕಾಲ್ನಡುಗೆಯಿಂದ ಹೋದೆ. ಜಯಣ್ಣ ಒಂದು ದಿನ ಬಂದು ಮರುದಿನ ಮರೆಯಾದರು. ಸುಮ್ಸುಮ್ನೆ ಸುತ್ತಾಡಿ ಸುಸ್ತಾಗುವುದು ಅವರಿಗೆ ಸರಿ ಬಂದಿಲ್ಲ ಅನಿಸುತ್ತೆ ಅಥವಾ ಇಡೀ ದಿನದ ಕ್ಲಾಸಗಳು ಹಿಂಡಿ ಹಿಪ್ಪೆ ಮಾಡಿದ್ದಲ್ಲದೇ ನನ್ನದೊಂದು additional ಕಾಟ ಬೇಡ ಅನಿಸಿರಬಹುದು. ಅದೇನೋ, ಅಂತೂ ದಿನವಿಡೀ ದುಡಿದು ಸಾಯಂಕಾಲ ಕರಗಿ ಇಲ್ಲವಾಗುವ ಸೂರ್ಯನಂತೆ ನನ್ನ ಜಯಣ್ಣ ಕರಗಿ ನಾಪತ್ತೆಯಾಗಿದ್ದರು. ಆ ದಿನ ನಾನು ಒಬ್ಬನೇ ಹೋಗಬೇಕಾಯಿತು. ಮರುದಿನ ಬೆಳಿಗ್ಗೆ ಜಯಣ್ಣ ತನ್ನ ಆರೋಗ್ಯದಲ್ಲಿ ಸ್ವಲ್ಪ ಏರುಪೇರು ಆಗಿತ್ತು ಎಂದರು. ಹಾಗಾಗಿಯೇ ಅವರು ಬಂದಿರಲಿಲ್ಲ ಎಂದುಕೊಂಡು ಸುಮ್ಮನಾದೆ.
ಒಂದೆರಡು ದಿನ ಮೀರಾಜ್ ಪಾಷಾ ಜೊತೆಯಾದರು. ಒಮ್ಮೆ ಅವರನ್ನು ಪುಸಲಾಯಿಸಿಕೊಂಡು ಲಲಿತ್ ಮಹಲ್ ಸುತ್ತಿದೆ. ಮರುದಿನ ಅವರೂ ನಾಪತ್ತೆಯಾದರು.

ಎರಡು ದಿನಗಳ ನಂತರ ಗೆಳೆಯ ಶಿವಕುಮಾರ್ ಭೇಟಿಯಾದರು. ಅವರು ಅದೇ ಟ್ರೈನಿಂಗಿಗೆ ಬಂದಿದ್ದು, ಬೇರೆ ಬ್ಯಾಚಿನಲ್ಲಿದ್ದರು. ನಾನು ಮತ್ತು ಶಿವಕುಮಾರ 2018ರ ಜನವರಿಯಲ್ಲಿ ಹೈದ್ರಾಬಾದನಲ್ಲಿ ಒಂದು ತಿಂಗಳು orientation course ನಲ್ಲಿ ಜೊತೆಯಾಗಿದ್ದೆವು. ಭೌತಶಾಸ್ತ್ರದ ಮೇಸ್ಟ್ರು ಶಿವಕುಮಾರನೊಂದಿಗೆ ಹೈದ್ರಾಬಾದನಲ್ಲಿ ರಾಮೋಜಿ ಫಿಲಂ ಸಿಟಿ , ಸಲಾರ್ಜಂಗ್ ವಸ್ತುಸಂಗ್ರಹಾಲಯ, ಕೋಟೆಗಳು,ಉದ್ಯಾನವನಗಳು, ಮಾಲ್ ಗಳು ಅಂತ ತುಂಬಾನೇ ಸುತ್ತಿದ್ದೆ. ನನ್ನ ಸ್ವಭಾವ ಅವರಿಗೆ ತುಂಬಾ ಚನ್ನಾಗಿ ಗೊತ್ತಿತ್ತು. ಮೈಸೂರಿನಲ್ಲಿ ಅವರು ಸಿಕ್ಕಿದ್ದರಿಂದ ನನ್ನ ತಿರುಗಾಟಕ್ಕೆ ಸೂಕ್ತ company ಸಿಕ್ಕಂತಾಗಿತ್ತು. ಉಳಿದ 3ದಿನನೂ ಬೆಳಗ್ಗೆಯ ವಾಕ್ ಗೆ 7 ಕಿ.ಮೀ ದೂರವಿರುವ ಚಾಮುಂಡಿ ಬೆಟ್ಟಕ್ಕೆ ಹೋಗಿ ಬರುತ್ತಿದ್ದೆವು.

ಚಾಮುಂಡಿ ಬೆಟ್ಟ, ಅಬ್ಬಾ! ಅದನ್ನು ಹತ್ತುವುದು ಸವಾಲೇ ಸರಿ. ಶಿವಕುಮಾರ ಮೈಸೂರಿನವರೇ ಆಗಿದ್ದರಿಂದ ಬೆಟ್ಟ ಹತ್ತಿ ಇಳಿದು ಅನುಭವ ಹೊಂದಿದ್ದರು. ಅವರು ಸಲೀಸಾಗಿ ಆ ಬೆಟ್ಟ ಹತ್ತಿ ಇಳಿಯುತ್ತಿದ್ದರು. ನಾನು ಅದೇ ಮೊದಲ ಪ್ರಯತ್ನ ಮಾಡಿದ್ದೆ. ಆ ದಿನ 1000 ಮೆಟ್ಟಿಲು ಹತ್ತಿ ಬೆಟ್ಟದ ಮೇಲೆ ಬಂದು ನಿಂತಾಗ ನನಗಾದ ಭವ್ಯತೆಯ ಅನುಭವ ನಾನು ಪದಗಳಲ್ಲಿ ಬಣ್ಣಿಸಲರಿಯೆ. ತಿಳಿ ಬೆಳಕು ಚೆಲ್ಲಿದ ಸೂರ್ಯೋದಯ, ಸುತ್ತಲೂ ಆವರಿಸಿದ ಮಂಜು, ಎಲ್ಲೆಲ್ಲೂ ಕವಿದ ಮೌನ. ನಾನು ಸ್ವರ್ಗದಲ್ಲಿ ಇದ್ದೆನೋ ಎನಿಸಿತು. ಒಂದುಕ್ಷಣದ ಭ್ರಮೆ (illusion) ಮನಸ್ಸಿನ ಸಂವೇದನಾ ಲೋಕವನ್ನು ಕದಡಿತು. ಪ್ರಯಾಸಪಟ್ಟು ಬೆಟ್ಟ ಹತ್ತಿದ್ದಕ್ಕೆ ನನಗಾದ ದಣಿವೋ ಏನೋ ನಾನರಿಯೆ. ಮನಸ್ಸು ಶಾಂತವಾಗಿತ್ತು. ನಾನು ಕಣ್ಮುಚ್ಚಿ ಅಲ್ಲೇ ಒಂದು ಕಲ್ಲಿನ ಮೇಲೆ ಕುಳಿತು ಧ್ಯಾನಸ್ಥನಾದೆ.

ನನ್ನ ದೇಹ ಉಣ್ಣೆಯಂತೆ ಹಗುರಾಗಿ ತೇಲುತ್ತಿತ್ತು. ನಾನು ಆಕಾಶದಲ್ಲಿ ಹಕ್ಕಿಯಂತೆ ಹಾರುತ್ತಿದ್ದೆ. ಶುಭ್ರ ಮತ್ತು ಸ್ಪಷ್ಟವಾದ ಲೋಕವೊಂದನ್ನು ನಾನು ಪ್ರವೇಶಿಸಿದ್ದೆ. ನೀಲಾಗಸದಲ್ಲಿ ನನ್ನ ಬಿಟ್ಟು ಬೇರೆ ಯಾರೂ ಇರಲಿಲ್ಲ. ಆ ಭ್ರಮೆಯ ಲೋಕದಲ್ಲಿ ನಾನು ಅಕ್ಕಪಕ್ಕ ಅಪ್ಸರೆಯರು ಇದ್ದಾರೆಯೇ ಎಂದು ಹುಡುಕಿದೆ. ಯಾರೂ ಇರಲಿಲ್ಲ, ನಿರಾಸೆಯಾಯಿತು. ಅಪ್ಸರೆಯರಿಲ್ಲದ ಸ್ವರ್ಗವೂ ಸ್ವರ್ಗವೇ! ಕಣ್ಣು ತೆರೆದೆ. ನನ್ನ ಭ್ರಮೆ ಅಳಿದಿತ್ತು, ವಾಸ್ತವ ಉಳಿದಿತ್ತು. ಬೆಟ್ಟದ ಕೆಳಗೆ ಮೈವೆತ್ತ ಮೈಸೂರು ಯಾರೋ ಚಿತ್ರಕಾರ ಬಿಡಿಸಿದ ರಮ್ಯ ಚಿತ್ರದಂತೆ ಕಾಣುತ್ತಿತ್ತು.
ಮೈಸೂರಿನ ATI ನಲ್ಲಿ ನನ್ನ ಅನುಭವಗಳು ತೀರ ವಿಶೇಷವಾಗಿದ್ದವು. ನನ್ನ ACADEMIC ಬದುಕಿನ ಅತ್ಯಂತ ಸುಂದರ ಅನುಭವಗಳು ಅವು. “A” GRADE ಸರ್ಕಾರಿ ನೌಕರ ಅಂದರೆ ಏನು ಎಂಬುದು ಅಲ್ಲಿ ಹೋಗಿ ಅನುಭವಿಸಿದೆ. ಅಲ್ಲಿನ ವ್ಯವಸ್ಥೆ, ಶಿಸ್ತುಬದ್ಧ ತರಗತಿಗಳ ಆಯೋಜನೆ ನನ್ನಲ್ಲಿ ಬದುಕನ್ನು ನೋಡುವ ಹೊಸ ದೃಷ್ಟಿಕೋನ ನೀಡಿತು. ಆಡಳಿತ ನಿರ್ವಹಣೆ ಎಂದರೇನು, ನಮ್ಮ ಜವಾಬ್ದಾರಿಗಳೇನು, Colleagues ಗಳೊಂದಿಗೆ ಹೇಗೆ ವರ್ತಿಸಬೇಕು, Public ನೊಂದಿಗೆ ನಮ್ಮ ವ್ಯವಹಾರ ಹೇಗಿರಬೇಕು ಎಂದೆಲ್ಲ ತಿಳಿಸಿಕೊಟ್ಟರು. ತುಂಬಾ ಅಮೂಲ್ಯವಾದ, ಮಹತ್ವಪೂರ್ಣವಾದ ತರಗತಿಗಳನ್ನು ನಮಗಾಗಿ ಆಯೋಜಿಸಿದ ATI ಗೂ ನನ್ನನ್ನು ಆ ತರಬೇತಿಗೆ ಆಯ್ಕೆ ಮಾಡಿದ ನನ್ನ ಇಲಾಖೆಗೂ ಮತ್ತು ತರಬೇತಿಯಲ್ಲಿ ಪಾಲ್ಗೊಳ್ಳಲು ಕರ್ತವ್ಯದಿಂದ ಬಿಡುಗಡೆಗೊಳಿಸಿದ ಕಾಲೇಜಿನ ಪ್ರಾಂಶುಪಾಲರಿಗೂ ಧನ್ಯವಾದಗಳನ್ನು ಅರ್ಪಿಸಿದೆ.

ಈ ಸಲ ಮೈಸೂರು ಖುಷಿ ಕೊಟ್ಟರೂ, ಅಲ್ಲಿಂದ ಮರಳುವಾಗ ಐ ಲವ್ ಯೂ ಮೈಸೂರು… ಅಂತ ಮಾತ್ರ ಹೇಳಲಿಲ್ಲ. ಮತ್ತೆ ಬೇಗನೆ ಬರುವ ಆಲೋಚನೆ ಇರಲಿಲ್ಲ ಅದಕ್ಕೆ ಬದಲಾಗಿ ನಾನು ಎಂದು ಮೈಸೂರನ್ನು ಮರೆಯುವುದಿಲ್ಲ ಸಾಧ್ಯವಿಲ್ಲ ಅಂತ ಹೇಳಿ ಬಂದೆ.

ಒಂದು ಮಾತಂತು ನಿಜ ಗೆಳೆಯರೇ, Life is celebration, you must celebrate it ಅಂತಾರೆ ನೋಡಿ ಅದು ಸತ್ಯ. INFACT I MUST SAY “LIFE IS REALLY BEAUTIFUL, ONLY IF YOU HAVE A BEAUTIFUL HEART TO FEEL IT”.

ನಾನಂತೂ ಬದುಕಿನ ಪ್ರತಿಯೊಂದು ಕ್ಷಣವೂ ಬದುಕಬೇಕು ಎಂದೇ ಬಯಸಿದವನು. ಏನು ಸಿಗುತ್ತದೋ ಬಿಡುತ್ತದೋ ಅದು ನನಗೆ ಯಾವತ್ತೂ ಮುಖ್ಯ ಅನಿಸಸಿಲ್ಲ. ನಮ್ಮ ಬದುಕಿನಲ್ಲಿ ಸಾವಿರ ನೋವುಗಳು ಇರಬಹುದೆನೋ. ಅದರ ನಡುವೆಯೂ ಸಂತೋಷ ಹುಡುಕುವುದು ಜಾಣತನ ಅಲ್ಲವೆ! ಆ ಜಾಣತನ ಎಲ್ಲರೂ ಕಲಿಯಬೇಕು. ಬದುಕಿನಲ್ಲಿ ಸಂತೋಷಕ್ಕೆ ಕಾರಣವಿರುವುದಿಲ್ಲ, ಕಾರಣ ಹುಡುಕಬೇಕಷ್ಟೆ.


  • ಸಂತಶಿಶು

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading