ಕನ್ನಡದಿ ಅರಳಿದ ಜಪಾನಿ ಕಾವ್ಯ ಕನ್ನಿಕೆ ‘ಚೋಕಾ-ಕಾವ್ಯಧಾರೆ’

ಡಾ. ಮಲ್ಲಿಕಾರ್ಜುನ ಎಸ್ ಅಲಮೇಲರವರು ವೃತ್ತಿಯಿಂದ ವ್ಯಾಪಾರಿಯಾಗಿದ್ದು, ಕಲಬುರ್ಗಿಯ ಯಡ್ರಾಮಿ ಊರಿನವರು. ‘ಚೋಕಾ-ಕಾವ್ಯಧಾರೆ’ ಸಂಕಲನವನ್ನು ಹೊರಗೆ ತಂದಿದ್ದಾರೆ. ಕವಿಗಳಾದ ಹರಿನರಸಿಂಹ ಉಪಾಧ್ಯಾಯ ಅವರು ಮುನ್ನಡಿಯನ್ನು ಬರೆದಿದ್ದಾರೆ, ತಪ್ಪದೆ ಮುಂದೆ ಓದಿ…

ಅಂಬುಧಿಯ ಆಳಗಲ ಆಗಸದ ವಿಸ್ತಾರ
ಕಾವ್ಯ ಕನ್ನಿಕೆ ಚೆಲುವ ಅಳೆಯಲುಂಟೇನು?
ದೂರದೃಷ್ಟಿಯ ಬೀರಿ ಚಿತ್ತವನು ಹರಿಸಿದೊಡೆ
ಜಗವೊಂದು ಹಿಡಿ ತಾನೆ? ಚಕ್ರಪಾಣಿ ||

ಸಾಗರದ ಆಳ ಅಗಲ ಅಳೆದಷ್ಟೂ ಅಗಾಧ, ಆಗಸವನ್ನು ಶೋಧಿಸಿದಷ್ಟೂ ವಿಸ್ತಾರಗೊಳ್ಳುವಂತೆ ಸಾಹಿತ್ಯದಲ್ಲಿ ಕಾವ್ಯ ಕನ್ನಿಕೆಯ ಚೆಲುವನ್ನು ಬಣ್ಣಿಸಲು ಸಾಧ್ಯವಿಲ್ಲ. ದೂರದೃಷ್ಟಿಯಿಂದ ತನ್ನ ಚಿತ್ತವನ್ನು ಅತ್ತ ಹರಿಸಿದ್ದೇ ಆದರೆ ಆಗ ಅವೆಲ್ಲವೂ ಹಿಡಿ ಗಾತ್ರದಂತೆ ಭಾಸವಾಗದೆ ಇರದು. ಆದರೆ ಅದಕ್ಕೆ ಉದಾತ್ತತೆಯ ಗುಣ ನಮ್ಮಲ್ಲಿರಬೇಕು ಎಂಬ ಸಾರಾಂಶ ಹೊಂದಿರುವ ಮೇಲಿನ ರಚನೆ ಡಾ. ಮಲ್ಲಿಕಾರ್ಜುನ ಎಸ್ ಅಲಮೇಲ ರವರ ಚೋಕಾ ಸಾಹಿತ್ಯ ಪ್ರಕಾರವನ್ನು ಕಂಡಾಗ ನನ್ನಲ್ಲಿ ಉದಿಸಿಬಂದದ್ದು ಸತ್ಯ.

ಇತ್ತೀಚೆಗೆ ಅಂತರ್ಜಾಲದ ಪ್ರಭಾವದಿಂದ ನಮ್ಮ ಕನ್ನಡ ಸಾಹಿತ್ಯದ ಹಲವಾರು ಕವಿಮಿತ್ರರು ದೇಶೀಯ ಸಾಹಿತ್ಯ ಪ್ರಕಾರಗಳಲ್ಲದೆ ವಿದೇಶಿ ಸಾಹಿತ್ಯದಲ್ಲೂ ಆಸಕ್ತಿ ತೋರುತ್ತಿರುವುದು ಒಂದು ವಿಶೇಷವೇ ಸರಿ. ಸಾಹಿತ್ಯ ನಿಂತ ನೀರಲ್ಲ, ಸದಾ ಹರಿಯುವ ತೊರೆಯಾಗಿ ಇರುವಾಗ ಸಾಹಿತ್ಯ ತನ್ನನ್ನು ತಾನು ವಿಸ್ತಾರಗೊಳಿಸಿಕೊಂಡು ಹೊಸ ಹೊಸ ಪ್ರಯತ್ನಗಳಿಗೆ ದಾರಿ ಮಾಡಿಕೊಡುತ್ತಿದೆ. ಇದಕ್ಕೆ ಕಾರಣ ಇಲ್ಲದಿಲ್ಲ. ಮೊದಲೇ ಹೇಳಿದಂತೆ ಮೊದಲನೆಯದಾಗಿ ಅಂತರ್ಜಾಲ. ಹಾಗೆಯೇ ಕವಿಗಳ ಆಸಕ್ತಿ, ಹೊಸತನ್ನು ಕಲಿಯುವ, ಅದರ ಬಗ್ಗೆ ತಿಳಿಯುವ ಮತ್ತು ಅದನ್ನು ಅಳವಡಿಸಿಕೊಂಡು ತಮ್ಮ ಕೃಷಿಯನ್ನು ವಿಸ್ತರಿಸಿಕೊಳ್ಳುವ ಹಂಬಲವೇ ಇಂದು ಜಪಾನಿ ಸಾಹಿತ್ಯ, ಪರ್ಷಿಯನ್ ಸಾಹಿತ್ಯ ಪ್ರಕಾರಗಳು ಕನ್ನಡಕ್ಕೆ ಇಳಿದು ಬರಲು ಸಾಧ್ಯವಾಗಿದೆ. ಜಪಾನಿ ಸಾಹಿತ್ಯ ಪ್ರಕಾರಗಳಲ್ಲಿ ಹಾಯ್ಕು, ತಾಂಕಾ, ಚೋಕ ಇತ್ಯಾದಿ ಪುಟ್ಟ ಪ್ರಕಾರಗಳು ಹೆಚ್ಚಿನ ಅರ್ಥ ಕೊಡುವಲ್ಲಿ ಮಹತ್ತರ ಪಾತ್ರ ವಹಿಸಿವೆ. ಇದು ನಮ್ಮವರನ್ನು ತನ್ನತ್ತ ಆಕರ್ಷಿಸಿ ಅದಕ್ಕೆ ಹೊಸ ರೂಪ ಕೊಡಲು ಪ್ರೇರಣೆ ನೀಡಿರುವುದರಿಂದ ಇಂದು ಕನ್ನಡದಲ್ಲಿಯೂ ಹಾಯ್ಕು, ಚೋಕಾಗಳು ಚಿಗುರೊಡೆಯುತ್ತಿವೆ. ಇವುಗಳು ಮೂಲದಲ್ಲಿ ಸಿಲಬಲ್ ಗಳಿಂದ ರಚನೆಗೊಂಡಿರುವುದಾದರೂ ಕನ್ನಡದಲ್ಲಿ ಅಕ್ಷರಗಳ ಸಂಖ್ಯೆಗಳ ಅಳತೆಯಿಂದ ರಚನೆಗೊಳ್ಳುತ್ತಿವೆ. ಹಾಗೆಯೇ ಚೋಕಾ ಪ್ರಕಾರದ ಕಾವ್ಯಾತ್ಮಕ ಅಳತೆಯು ೫/೭/೫/೭/೫/೭/೫/೭/೭ ಎಂದು ಪರಿಗಣಿಸಲ್ಪಟ್ಟಿದೆ. ಇದರಂತೆ ಡಾ. ಮಲ್ಲಿಕಾರ್ಜುನ ರವರು ತಮ್ಮ ಚೋಕಾ ರಚನೆಗಳನ್ನು ಒಳಗೊಂಡ ತಮ್ಮ ಕೃತಿಯನ್ನು ಹೊರ ತರುವ ಈ ಸಂದರ್ಭದಲ್ಲಿ ಅವರ “ಚೋಕಾ- ಕಾವ್ಯಧಾರೆ” ಕೃತಿಯು ಕನ್ನಡ ಸಾಹಿತ್ಯದಲ್ಲಿ ಮೊದಲ ಚೋಕಾ ಕೃತಿ ಎಂಬ ಹಿರಿಮೆಗೆ ಪಾತ್ರವಾಗುತ್ತದೆ.

ಶ್ರೀಯುತ ಡಾ. ಮಲ್ಲಿಕಾರ್ಜುನ ಎಸ್ ಅಲಮೇಲರವರು ವೃತ್ತಿಯಿಂದ ವ್ಯಾಪಾರಿಯಾಗಿದ್ದು, ಕಲಬುರ್ಗಿಯ ಯಡ್ರಾಮಿ ಊರಿನವರು. ಸಣ್ಣವರಿದ್ದಾಗ ನಡೆದ ಒಂದು ಘಟನೆ ಇವರನ್ನು ಬರೆವಣಿಗೆ ಕೃಷಿಗೆ ಕರೆತಂದಿತು. ಆ ಘಟನೆಯಿಂದ ನೊಂದ ಇವರು ಸತ್ಯಾಂಶವನ್ನು ಜನತೆಗೆ ತಿಳಿಸುವ ಸಲುವಾಗಿ ಬರೆಯತೊಡಗಿದರು. ಮುಂದೆ ಇದು ಹವ್ಯಾಸವಾಗಿ ಬೆಳೆದು ನಿಂತಿತು. ಶ್ರೀಯುತರ ಹವ್ಯಾಸಕ್ಕೆ ಈಗ ಎರಡು ದಶಕಗಳ ಸಂಭ್ರಮ.

ಕನ್ನಡ ಸಾಹಿತ್ಯ ಸಂಘಟನೆಗಳಲ್ಲಿ ಸಕ್ರಿಯರಾಗಿ ಕಾರ್ಯ ನಿರ್ವಹಿಸಿದ ಇವರನ್ನು ಗೌರವ ಡಾಕ್ಟರೇಟ್ ಕೂಡ ಅರಸಿ ಬಂದಿದೆ. ಅಲ್ಲದೆ ಚುಟುಕು ರತ್ನ, ಸಾಹಿತ್ಯ ಕೇಸರಿ, ಸ್ವರ್ಣಭೂಮಿ ಸೇವಾರತ್ನ, ಕಾವ್ಯ ಕಣಜ, ನುಡಿಚೇತನ ಮೊದಲಾದ ಹಲವಾರು ಪ್ರಶಸ್ತಿ ಪುರಸ್ಕಾರಗಳು ದೊರೆತಿವೆ.

ಚೋಕಾ ಕಾವ್ಯಧಾರೆ ಕೃತಿಗೆ ಮುನ್ನುಡಿ ಬರೆದುಕೊಡಬೇಕು ಎಂದು ನನ್ನಲ್ಲಿ ಕೇಳಿಕೊಂಡಾಗ ಇದೊಂದು ಸಾಹಿತ್ಯ ಸೇವೆ ಎಂದು ಪರಿಗಣಿಸಿ ಶ್ರೀಯುತ ಮಲ್ಲಿಕಾರ್ಜುನ ರವರ ಈ ಕೃತಿಯ ಕುರಿತು ನನ್ನ ಒಂದಿನಿತು ಅನಿಸಿಕೆಗಳನ್ನು ಹಂಚಿಕೊಳ್ಳುವ ಸಣ್ಣ ಪ್ರಯತ್ನ ಮಾಡುತ್ತಿದ್ದೇನೆ.

ವಸ್ತು ವಿಷಯಗಳಲ್ಲಿ ವೈವಿಧ್ಯತೆಯನ್ನು ತೋರುವ ಚೋಕಾಗಳು ಇಲ್ಲಿ ಏಕತಾನತೆಗೆ ಅವಕಾಶ ನೀಡದೆ ಓದುಗರನ್ನು ಎಲ್ಲ ದಿಕ್ಕಿನಿಂದಲೂ ಚಿಂತಿಸುವಂತೆ ಮಾಡುತ್ತವೆ ಆ ನಿಟ್ಟಿನಲ್ಲಿ ಲೇಖಕರ ಶ್ರಮ ಬಹುತೇಕ ಸಾರ್ಥಕವಾಗಿದೆ ಎಂದು ಮೊದಲೇ ಹೇಳಲು ಇಚ್ಛಿಸುತ್ತೇನೆ.

ಗುರುಚರಣ ಎಂಬ ಚೋಕಾದಲ್ಲಿ…

ಮುನಿದರೇನು/ ದೇವಗಣ; ಗುರುವು/ ಕಾಯುವವನು/ ಗುರುವೇ ಮುನಿದರೆ/
ನರಮಾನವ/ ನಿನ್ನಾರು ಕಾಯುವರು/
ಗುರುಚರಣ/ ಅನುದಿನ ಪೂಜಿಸು/
ನೀನೇ ಶ್ರೇಷ್ಠನಾಗುವೆ//

ಮೇಲಿನ ರಚನೆಯು ದೇವರು ಮುನಿದರೆ ಗುರುವು ಕಾಯಲು ಇದ್ದಾರೆ, ಆದರೆ ಗುರುವೇ ಮುನಿಸಿಕೊಂಡರೆ ಗುರಿ ತೋರುವವರು ಇಲ್ಲದೆ ನಿನ್ನನ್ನು ಕಾಪಾಡಲು ಯಾರೂ ಇರಲಾರರು. ಆದ್ದರಿಂದ ನಿತ್ಯ ಗುರುಚರಣ ಸೇವಿಸಿದಲ್ಲಿ ಶ್ರೇಷ್ಟನಾಗಬಹುದು, ವಿಶೇಷನಾಗಬಹುದು ಎಂಬ ಸುಂದರ ವಿಚಾರ ಇಲ್ಲಿ ತಿಳಿಸಿದ್ದಾರೆ. ಇದನ್ನೇ ಅಲ್ಲವೇ ದಾಸರು ಹೇಳಿದ್ದು, “ಗುರುವಿನ ಗುಲಾಮನಾಗುವ ತನಕ ದೊರೆಯಣ್ಣ ಮುಕುತಿ” ಎಂದು.

ಇನ್ನೊಂದು ರಚನೆ: ನಾ ಹೇಗೆ ಹೋರಾಡಲಿ….

ಅಂಧಕಾರವೇ/ ತುಂಬಿರೋ ಬದುಕಲ್ಲಿ/ ಹೊಂಬೆಳಕನ್ನು / ನಾನೆಲ್ಲಿ ಹುಡುಕಲಿ/
ಸತ್ಯದ ಸಾವು/ ಸಂಭವಿಸಿರುವಾಗ/
ಸದ್ಧರ್ಮಕ್ಕಾಗಿ/ ನಾ ಹೇಗೆ ಹೋರಾಡಲಿ/
ಹೇಳು ನೀ ಸೃಷ್ಟಿಕರ್ತ //

ಇಲ್ಲಿ ಬದುಕಿನ ತೊಳಲಾಟವನ್ನು ಮಾರ್ಮಿಕವಾಗಿ ಚಿತ್ರಿಸಲಾಗಿದೆ. ಬದುಕಿನಲ್ಲಿ ಅಂಧಕಾರ ತುಂಬಿರುವಾಗ ಉಜ್ವಲವಾಗುವುದಾದರೂ ಹೇಗೆ? ಲೋಕದಲ್ಲಿ ಸತ್ಯಕ್ಕೆ ಜಯ ಸಿಗದೆ ಸುಳ್ಳು ಮೆರೆದಾಡುತ್ತಿದೆ. ಹೀಗಿರುವಾಗ ಧರ್ಮಕ್ಕಾಗಿ, ನ್ಯಾಯಕ್ಕಾಗಿ ಹೋರಾಡುವುದಾದರೂ ಹೇಗೆ? ಹೇ ಭಗವಂತ ನೀನೇ ಇದಕ್ಕೆ ಉತ್ತರಿಸಬೇಕು ಎಂಬ ಆರ್ತನಾದ ಇಲ್ಲಿ ವ್ಯಕ್ತವಾಗಿದೆ.

ಮಾನವೀಯತೆ/ ಮಣ್ಣಲ್ಲಿ ಮಣ್ಣಾದಾಗ/ ಕರುಣೆಯೆಂಬ/ ಕಡಲು ಬತ್ತಿದಾಗ/ ಅಧರ್ಮಗಳು/ ಅಟ್ಟಹಾಸ ಗೈದಾಗ/ ಅಂತಿಮವಾಗಿ / ಸದ್ಧರ್ಮ ಸ್ಥಾಪನೆಗೆ/
ಧರ್ಮಯುದ್ಧವೇ ಅಸ್ತ್ರ//

ಭಗವದ್ಗೀತೆಯ ಸಾಲು ಇಲ್ಲಿ ನೆನಪಿಗೆ ಬರುತ್ತದೆ. ಧರ್ಮಗ್ಲಾನಿ ಉಂಟಾದಾಗ ಮತ್ತೆ ಧರ್ಮ ಸ್ಥಾಪನೆಗಾಗಿ ಭಗವಂತ ಅವಿರ್ಭವಿಸುತ್ತಾನೆ ಎಂಬ ಮಾತಿನಂತೆ ಲೋಕದಲ್ಲಿ ಮಾನವೀಯತೆ, ಕರುಣೆ ನಾಶವಾಗಿ ಅಧರ್ಮವೇ ತಾಂಡವವಾಡುತ್ತಿರುವ ಸಂದರ್ಭದಲ್ಲಿ ಧರ್ಮ ಸ್ಥಾಪನೆಗೆ ಧರ್ಮಯುದ್ಧವೇ ಪ್ರಬಲವಾದ ಅಸ್ತ್ರ. ಅದನುಳಿದು ಬೇರೆ ಇಲ್ಲ ಎಂಬ ತೀರ್ಮಾನ ಇಲ್ಲಿ ವ್ಯಕ್ತವಾಗಿದೆ.

ಬೆಳದಿಂಗಳ/ ಬೆಳ್ಳಿ ಬೆಳಕಿನಲ್ಲಿ/ ಅರಳಿ ನಿಂತ/ ಸುಕೋಮಲ ಪುಷ್ಪವೇ/ ಲಲಿತಾಂಗಿಯೇ/ ಏನೆಂದು ಬಣ್ಣಿಸಲಿ/ ಆಶಕ್ಯವಿದೆ/ ನಿನ್ನಂದಕೆ ಸಾಟಿಯೇ/ ಶಶಿ ಕರಗಿದನು//

ಇಲ್ಲಿ ಕವಿಯ ಅಲಂಕಾರ ಭಾವ ವ್ಯಕ್ತವಾಗಿದೆ. ಒಂದು ಕಡೆಯಿಂದ ಬೆಳದಿಂಗಳ ಬೆಳಕಿನಲ್ಲಿ ಹೂವು ಸೊಗಸಾಗಿ ಅರಳಿ ನಿಂತ ಪರಿಯನ್ನು ಬಣ್ಣಿಸಲು ಪದಗಳೇ ಸಿಗುತ್ತಿಲ್ಲ ಎಂಬುದಾಗಿಯೂ ಮತ್ತೊಂದು ದೃಷ್ಟಿಯಿಂದ ಅದೇ ಬೆಳದಿಂಗಳ ಛಾಯೆಯಲ್ಲಿ ಸುಕೋಮಲೆಯಾದ ಹೆಣ್ಣು ಮೈ ತುಂಬಿ ನಿಂತಾಗ ಆ ಸೊಬಗಿಗೆ ಸೋತ ಗಂಡು ಆಕೆಯ ಸೌಂದರ್ಯವನ್ನು ಹೊಗಳಲು ಪದಗಳಿಗೆ ಪರದಾಡುವ ಸ್ಥಿತಿಯಲ್ಲಿ ಇದ್ದಾಗ, ತಾನೇನು, ಈ ಚೆಲುವಿಗೆ ಶಶಿಯೇ ಸೋತು ಕರಗಿದನು ಎಂದು ವರ್ಣಿಸುವ ಕಾವ್ಯಾತ್ಮಕ ಪರಿ ಅತ್ಯಂತ ಸೊಗಸಾಗಿದೆ.

ಸ್ತ್ರೀ ಅಂದರೇನು/ ಕೇವಲ ಅವಳೊಂದು/ ಹೆಣ್ಣಾಗಿಹಳೇ/ ಕೂಸುಗಳನ್ನು ಮಾತ್ರ/ ಹೆತ್ತು ಕೊಡುವ/ ಸಾಧನವಾಗಿಹಳೇ / ಕಾಮ ತೀರಿಸೋ/ ಭೋಗ ವಸ್ತುವೇ?; ಅಲ್ಲ/ ಜಗದ್ದಾತ್ರಿಯವಳು//

ಹಿಂದಿನ ಚೋಕಾದಲ್ಲಿ ಹೆಣ್ಣಿನ ಸೌಂದರ್ಯವನ್ನು ಹೊಗಳಿದ ಕವಿಯು ಇಲ್ಲಿ ಹೆಣ್ಣಿನ ಘನತೆಯನ್ನು ಎತ್ತಿ ಹಿಡಿದಿದ್ದಾರೆ. ಸಮಾಜವು ಇಂದು ಯಾವ ರೀತಿ ಹೆಣ್ಣನ್ನು ನೋಡುತ್ತಿದೆ ಎನ್ನುವುದನ್ನು ಅರಿತು ಅದರ ವಿರುದ್ಧ ಧ್ವನಿ ಎತ್ತಿರುವುದನ್ನು ಇಲ್ಲಿ ಕಾಣಬಹುದು. ಆಕೆ ಕೇವಲ ಭೋಗವಸ್ತು ಎಂದು ತಿಳಿಯದೆ, ಅವಳೊಂದು ಶಕ್ತಿ, ಜಗದ್ಧಾತ್ರಿ ಎನ್ನುವುದನ್ನು ತಿಳಿದು ಅಕೆಯನ್ನು ಗೌರವದಿಂದ ಕಾಣುವ ದೃಷ್ಟಿ ಹೊಂದಬೇಕು ಎಂದು ಪ್ರತಿಪಾದಿಸಿದ್ದಾರೆ. ಇದು ಇಂದಿನ ದಿನಮಾನಕ್ಕೆ ಹೆಚ್ಚು ಪ್ರಸ್ತುತವೆನಿಸುತ್ತದೆ.

ಇನ್ನು ಬೇರೆಯವರ ದುಡ್ಡು ತಿಂದು ಎಷ್ಟು ದಿನ ಸುಖವಾಗಿ ಇರಬಹುದು ಎನ್ನುವುದರ ಬಗ್ಗೆ ಹೀಗೆ ಹೇಳುತ್ತಾರೆ.

ಪರ ದುಡ್ಡಲ್ಲಿ/ ಮೋಜು ಮಸ್ತಿಯ ಮಾಡಿ/ ತಮ್ಮ ಬೇಳೆಯ/ ಬೇಯಿಸಿಕೊಳ್ಳುವಂತ/ ನರಾಧಮರು/ ಜಗದ ತುಂಬೆಲ್ಲವೂ/ ತುಂಬಿರುವಾಗ / ಸುಜನರ ಏಳ್ಗೆಯು/ ಬುವಿಯಲ್ಲಿ ಆದೀತೇ//

ಸ್ವಾರ್ಥವೇ ತುಂಬಿರುವ ಜನರು ಇಂದು ಸುಲಿಗೆ ಮೋಸ ವಂಚನೆಯಲ್ಲಿ ತೊಡಗಿರುವಾಗ ಅಂಥ ನರಾಧಮರು ತಮ್ಮ ಮೋಜು ಮಸ್ತಿಗಾಗಿ ಬೇರೆಯವರ ದುಡ್ಡು ತಿಂದು ಮೋಸ ಮಾಡುವುದನ್ನು ಕಾಣುತ್ತವೆ. ಇಂಥ ನೀಚರೇ ಎಲ್ಲೆಲ್ಲೂ ತುಂಬಿ ಹೋಗಿದ್ದಾರೆ. ಹೀಗಿರುವಾಗ ಲೋಕ ಹೇಗೆ ಉದ್ದಾರ ಆದೀತು ಎಂಬ ಕಳವಳ ಕವಿಯಲ್ಲಿ ಮಾತ್ರವಲ್ಲ , ನಮ್ಮಲ್ಲೂ ಮೂಡದೆ ಇರಲು ಸಾಧ್ಯವೇ ಹೇಳಿ.

ದೇಶಪ್ರೇಮ ಇರದವನು ದೇಶಿಗನು ಆಗಲು ಸಾಧ್ಯವಿಲ್ಲ. ಹಾಗೆಯೇ ಇಲ್ಲೊಂದು ದೇಶಪ್ರೇಮ ಮೆರೆವ ಯೋಧರ ಕುರಿತಾದ ರಚನೆ ನೋಡೋಣ.

ಭಾರತಾಂಬೆಯ / ಮುಕುಟದಿ ಶೌರ್ಯದಿ / ನಿಂತ ಯೋಧರು/ ಹಿಮವನ್ನೇ ಹಾಸಿಗೆ/ ಮಾಡಿಕೊಂಡರು/ ಕೊರೆವ ಚಳಿಯನ್ನೇ/ ಹೊದ್ದುಕೊಂಡರು / ಕೆಚ್ಚೆದೆಯಿಂದ ವೈರಿ/ ನಾಶಕ್ಕೆ ಕಾದಿಹರು//

ಇಂದು ನಾವು ಮನೆಯಲ್ಲಿ ನೆಮ್ಮದಿಯಿಂದ ನಿದ್ದೆ ಮಾಡುತ್ತಿದ್ದೇವೆ ಎಂದಾದರೆ ಅದು ಗಡಿಯಲ್ಲಿ ಕಾಯುವ ಯೋಧರ ಕೊಡುಗೆ. ನಾವು ಬೆಚ್ಚಗೆ ಮಲಗಿದ್ದರೆ ಅಲ್ಲಿ ಯೋಧರು ಹಿಮವನ್ನೇ ಹೊದ್ದುಕೊಂಡು ವೈರಿಗಳ ನುಸುಳುವಿಕೆಯನ್ನು ತಡೆಯಲು ಕಾಯುತ್ತಿದ್ದಾರೆ ಅಲ್ಲವೇ. ಅವರ ದೇಶ ಪ್ರೇಮ, ಸೇವಾ ನಿಷ್ಠೆ, ಕಾರ್ಯ ತತ್ಪರತೆಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ ಅಲ್ಲವೇ.. ಕವಿಯ ದೇಶಪ್ರೇಮ ಇಲ್ಲಿ ಉತ್ಕಟವಾಗಿದೆ.

ಇಷ್ಟೇ ಅಲ್ಲದೆ ಕವಿಯ ಚಿತ್ತ ದಶದಿಕ್ಕುಗಳಿಗೂ ಹರಿದು, ದೃಷ್ಟಿಗೆ ಗೋಚರಿಸಿದ ಬಹಳಷ್ಟು ವಿಚಾರಗಳನ್ನು ತಮ್ಮ ಲೇಖನಿಯ ಮೂಲಕ ಇಳಿಸಿದ್ದಾರೆ. ಕರುನಾಡಿನ ಕುರಿತು, ಕನ್ನಡದ ಕುರಿತು ಬರೆಯದ ಕವಿ ಕನ್ನಡಿಗನು ಹೇಗಾದಾನು. ಅಂತೆಯೆ ಕನ್ನಡ ನಾಡು ನುಡಿಯ ಬಗ್ಗೆಯೂ ಇಲ್ಲಿ ನಾವು ನೋಡಬಹುದಾಗಿದೆ. ಇನ್ನು ಗುರುಗಳು, ಶರಣರು, ಮಹಾತ್ಮರ ಕುರಿತಾದ ಚೋಕಾಗಳು ಮನಸೆಳೆಯುತ್ತವೆ. ಭಾರತದ ನೆಲದಲ್ಲಿ ಅಧ್ಯಾತ್ಮಕ್ಕೆ ಮಹತ್ವದ ಸ್ಥಾನ ಇದೆ. ಅಂತೆಯೇ ಇಲ್ಲಿ ಕವಿಗಳ ಭಗವಂತನ ಕುರಿತು, ರಾಮನ ಕುರಿತು ಬರೆದ ರಚನೆಗಳು ಭಕ್ತಿ ಭಾವದಿಂದ ಓದುವಂತೆ ಮಾಡಿವೆ. ಕವಿಯಾದವನಿಗೆ ಪ್ರಕೃತಿ ನೀಡಿದಷ್ಟು ಪ್ರೋತ್ಸಾಹ ಮತ್ತೆಲ್ಲೂ ಸಿಗಲಾರದು. ಅಂದ ಮೇಲೆ ಪ್ರಕೃತಿ ಸೌಂದರ್ಯ ಇಲ್ಲೂ ನಳನಳಿಸಿದೆ, ಒಲವಿನ ಸುಧೆ ಹರಿಸಿದೆ. ಹಾಗೆಯೇ ಬದುಕಿನ ನೋವು ನಲಿವುಗಳು ಪ್ರತಿದ್ವನಿಸಿವೆ. ಆದರೆ ಇವೆಲ್ಲವುಗಳನ್ನು ಓದಿ ಮನನಮಾಡಿಕೊಳ್ಳುವ ಹೃದಯ ಇರಬೇಕು ಅಷ್ಟೇ.

ಒಟ್ಟಿನಲ್ಲಿ “ಚೋಕಾ- ಕಾವ್ಯಧಾರೆ” ಕೃತಿಯು ತನ್ನ ಪ್ರತಿ ಪುಟದಲ್ಲೂ ಓದುಗನ ಹೃದಯಕ್ಕೆ ನಾಟುವಂತಹ ವಿಶಿಷ್ಟ ಜಪಾನಿ ಸಾಹಿತ್ಯದ ಕನ್ನಡ ಪ್ರಕಾರದಿಂದ ಪ್ರಕಾಶಿತಗೊಳ್ಳುತ್ತಿರುವುದು ಕನ್ನಡ ಸಾಹಿತ್ಯ ಕಿರೀಟಕ್ಕೆ ಮತ್ತೊಂದು ಗರಿ ಇಟ್ಟಂತೆ ಎನ್ನಬಹುದು. ಕವಿ ಡಾ. ಮಲ್ಲಿಕಾರ್ಜುನ ಎಸ್ ಅಲಮೇಲರವರ ಈ ಕೃತಿಯು ಓದುಗರ ಜ್ಞಾನದಾಹವನ್ನು ತಣಿಸಲಿ. ಕೃತಿಕಾರರಿಗೆ ಯಶಸ್ಸು ಕೀರ್ತಿ ಅರಸಿ ಬರಲಿ. ಮತ್ತಷ್ಟು ಅಧ್ಯಯನದೊಂದಿಗೆ ಬರೆವಣಿಗೆ ಮುಂದುವರೆಯುವ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಮನೆಮಾತಾಗಲಿ ಎಂದು ಹಾರೈಸುತ್ತೇನೆ.

ಸಿರಿಗನ್ನಡಂ ಗೆಲ್ಗೆ


  • ಹರಿನರಸಿಂಹ ಉಪಾಧ್ಯಾಯ – ಕವಿಗಳು, ಶಂಭೂರು, ಬಂಟ್ವಾಳ ತಾಲ್ಲೂಕು. ದ.ಕ.ಜಿಲ್ಲೆ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading