ಅಂತರಾಷ್ಟ್ರೀಯ ಅನುವಾದ ದಿನ

ಪ್ರತಿವರ್ಷ ಸೆಪ್ಟೆಂಬರ್ ಮೂವತ್ತನೆಯ ತಾರೀಕಿನ ದಿನ ‘ಅಂತಾರಾಷ್ಟ್ರೀಯ ಅನುವಾದ ದಿನ’ ಎಂದು ಆಚರಿಸಲಾಗುತ್ತದೆ. ಜೆರೋಮ್ ಇಟಾಲಿಯನ್ ಪಾದ್ರಿಯಾಗಿದ್ದು ಹೊಸ ಒಡಂಬಡಿಕೆಯನ್ನು ಗ್ರೀಕ್ ಹಸ್ತ ಪ್ರತಿಗಳಿಂದ ಲ್ಯಾಟಿನ್ ಭಾಷೆಗೆ ಭಾಷಾಂತರಿಸುವ ಪ್ರಯತ್ನಕ್ಕೆ ಹೆಸರಾಗಿದ್ದರು. ಅವರ ಸ್ಮರಣಾರ್ಥವಾಗಿ ಈ ದಿನವನ್ನು ಆಚರಿಸಿಲಾಗುತ್ತದೆ. ಈ ವಿಶೇಷ ದಿನದ ಕುರಿತು ಲೇಖಕರಾದ ಸುಜಾತಾ ರವೀಶ್ ಅವರ ಈ ಲೇಖನವನ್ನು ಪೂರ್ತಿಯಾಗಿ ಓದಿ…

ಅನುವಾದ ಎಂದರೆ ಒಂದು ಭಾಷೆಯಿಂದ ಮತ್ತೊಂದು ಭಾಷೆಗೆ ಮೂಲ ಭಾಷೆಯ ಅರ್ಥ ಮತ್ತು ಭಾವವು ವ್ಯತ್ಯಾಸವಾಗದಂತೆ ತಿಳಿಸುವುದಾಗಿದೆ. ಅನುವಾದದ ಅಗತ್ಯ ಇತ್ತೀಚಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಾಗಿದೆ ಸಾಮಾಜಿಕ ಹಾಗೂ ಅಂತರ್ಜಾಲ ಜಾಗತಿಕ ತಾಣಗಳು ವಿಶ್ವವನ್ನು “ಗ್ಲೋಬಲ್ ವಿಲೇಜ್” ನ್ನಾಗಿ ಮಾಡಿರುವ ಸಂದರ್ಭದಲ್ಲಿ ಆಯಾ ಪ್ರಾದೇಶಿಕ ಭಾಷೆಗಳ ತಿಳಿವು ಅತ್ಯಂತ ಅಗತ್ಯವಾಗುತ್ತದೆ .ಬರವಣಿಗೆಯ ಕ್ಷೇತ್ರದಲ್ಲಿ ಉತ್ತಮ ಸಾಹಿತ್ಯ ಕೃತಿಗಳು ಬೇರೆ ಭಾಷೆಯಿಂದ ತಮ್ಮ ಮಾತೃಭಾಷೆ ಅಥವಾ ಇಂಗ್ಲಿಷ್ ಗೆ ಅನುವಾದವಾದರೆ ಅದರ ಸಾರ ಎಲ್ಲರೂ ಗ್ರಹಿಸಲು ಸಾಧ್ಯ . ಪತ್ರಿಕಾರಂಗದಲ್ಲಿಯಂತೂ ಇದರ ಪ್ರಾಮುಖ್ಯತೆ ಹೇಳುವುದೇ ಬೇಡ . ರಾಜಕೀಯವಾಗಿ ಬೇರೆ ದೇಶಗಳಿಗೆ ಭೇಟಿ ಕೊಡುವಾಗ ನಿಯೋಗಗಳ ಮಧ್ಯೆ ಸಂವಹನ ಸಾಧಿಸಲು ಅನುವಾದದ ಅಗತ್ಯ ಬಿದ್ದೇ ಬೀಳುತ್ತದೆ. ಸರಕಾರಿ ಕಚೇರಿಗಳಲ್ಲಿಯೂ ಅಷ್ಟೆ ತ್ರಿಭಾಷಾ ಸೂತ್ರ ಜಾರಿಯಲ್ಲಿರುವುದರಿಂದ 3 ಭಾಷೆಯ ಜ್ಞಾನ ಅನುವಾದ ಸಮಯಕ್ಕೆ ಒದಗಿಸಲೇಬೇಕು. ಇತ್ತೀಚೆಗಂತೂ ಪ್ರಧಾನಮಂತ್ರಿಯವರು ಶಿಕ್ಷಣ ಕ್ರಾಂತಿಯ ಮುಖಾಂತರ ಎಲ್ಲಾ ಭಾಷೆಯಲ್ಲೂ ಉನ್ನತ ಶಿಕ್ಷಣದ ಪಠ್ಯಗಳು ದೊರೆಯಬೇಕು ಎಂದು ಹೇಳಿರುವುದು ಅನುವಾದದ ಕಾರ್ಯಕ್ಕೆ ಹೆಚ್ಚಿನ ಉತ್ಸಾಹ ಪ್ರಾಮುಖ್ಯತೆ ಹುಟ್ಟುಹಾಕಿದೆ.

ಇತಿಹಾಸ :

ಎಫ್ ಐಟಿ (ಇಂಟರ್ ನ್ಯಾಶನಲ್ ಫೆಡರೇಶನ್ ಆಫ್ ಟ್ರಾನ್ಸ್ ಲೇಟರ್ಸ್) ೧೯೫೩ರಲ್ಲಿ ಸ್ಥಾಪಿಸಲಾಯಿತು. ೧೯೯೧ ರಲ್ಲೀ ಅಧಿಕೃತವಾಗಿ ಮಾನ್ಯತೆ ಪಡೆದ ಈ ಸಂಸ್ಥೆಯು ಅಂತಾರಾಷ್ಟ್ರೀಯ ಭಾಷಾಂತರ ದಿನದ ಕಲ್ಪನೆಯನ್ನು ವಿಶ್ವದಾದ್ಯಂತ ಅನುವಾದ ಸಮುದಾಯದ ಒಗ್ಗಟ್ಟನ್ನು ತೋರಿಸಲು ಮತ್ತು ಅನುವಾದವನ್ನು ಉತ್ತೇಜಿಸಲು ಆರಂಭಿಸಿತ್ತು ಮೇ 24, 2017 ರಂದು ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿ ಸೆಪ್ಟೆಂಬರ್ ಮೂವತ್ತನ್ನು ಅಂತಾರಾಷ್ಟ್ರೀಯ ಅನುವಾದ ದಿನವನ್ನಾಗಿ ಘೋಷಿಸುವ ನಿರ್ಣಯ 71/288 ಅನ್ನು ಅಂಗೀಕರಿಸಿತು . ಸೆಪ್ಟೆಂಬರ್ ಮೂವತ್ತು ಈ ದಿನಾಂಕದ ವಿಶೇಷತೆಯೇನೆಂದರೆ ಅದು ಸೆಂಟ್ ಜೆರೋಮ್ ಹಬ್ಬದ ಆಚರಣೆಯ ದಿನ.

ಜೆರೋಮ್ ಇಟಾಲಿಯನ್ ಪಾದ್ರಿಯಾಗಿದ್ದು ಹೊಸ ಒಡಂಬಡಿಕೆಯನ್ನು ಗ್ರೀಕ್ ಹಸ್ತ ಪ್ರತಿಗಳಿಂದ ಲ್ಯಾಟಿನ್ ಭಾಷೆಗೆ ಭಾಷಾಂತರಿಸುವ ಪ್ರಯತ್ನಕ್ಕೆ ಹೆಸರಾಗಿದ್ದರು. ಅವರ ಸ್ಮರಣಾರ್ಥವಾಗಿ ಈ ದಿನವನ್ನು ಆಚರಿಸಿಲಾಗುತ್ತದೆ. 2014 ರಿಂದ ಸತತವಾಗಿ ಪ್ರತಿವರ್ಷ ವಿಶಿಷ್ಟ ಥೀಮ್ ಅನ್ನು ಕೊಟ್ಟು ಈ ದಿನವನ್ನು ಆಚರಿಸಲಾಗುತ್ತದೆ.

  • ೨೦೧೪ : ಭಾಷಾ ಹಕ್ಕುಗಳು ಎಲ್ಲಾ ಮಾನವ ಹಕ್ಕುಗಳಿಗೆ ಅತ್ಯಗತ್ಯ.
  • ೨೦೧೫ : ಅನುವಾದ ಮತ್ತು ವ್ಯಾಖ್ಯಾನದ ಬದಲಾಗುತ್ತಿರುವ ಮುಖ್ಯ.
  • ೨೦೧೬ :  ಅನುವಾದ ಮತ್ತು ವ್ಯಾಖ್ಯಾನಗಳು ಪ್ರಪಂಚವನ್ನು ಒಗ್ಗೂಡಿಸುತ್ತಿದೆ.
  • ೨೦೧೭: ಅನುವಾದ ಮತ್ತು ವೈವಿಧ್ಯತೆ.
  • ೨೦೧೮ : ಬದಲಾಗುತ್ತಿರುವ ಸಮಯದಲ್ಲಿ ಅನುವಾದ ಸಾಹಿತ್ಯ ಮತ್ತು ಸಂಸ್ಕೃತಿಯ ಪರಂಪರೆಯನ್ನು ಪ್ರೋತ್ಸಾಹಿಸುತ್ತದೆ.
  • ೨೦೧೯ : ಅನುವಾದ ಮತ್ತು ಸ್ವದೇಶೀ ಭಾಷೆಗಳ ಥೀಮ್
  • ೨೦೨೦ : ವಿಶ್ವದ ಸಂಕಷ್ಟಕ್ಕೆ ಪದವನ್ನು ಹುಡುಕುವುದು
  • ೨೦೨೧ : ಅನುವಾದದಲ್ಲಿ ಒಗ್ಗೂಡಿಕೆ
  • ೨೦೨೨ : ತಡೆಗೋಡೆಗಳಿಲ್ಲದ ಜಗತ್ತು.ಸಂಸ್ಕೃತಿಯನ್ನು ನಿರ್ಮಿಸುವಲ್ಲಿ ಭಾಷಾ ವೃತ್ತಿಪರರ ಪಾತ್ರ ತಿಳಿವಳಿಕೆ ಮತ್ತು ಶಾಶ್ವತ ಶಾಂತಿ .
  • ೨೦೨೩ : ಅನುವಾದವು ಮಾನವೀಯತೆಯ ಹಲವು ವಿಷಯಗಳನ್ನು ಅನಾವರಣಗೊಳಿಸುತ್ತದೆ.
  • ೨೦೨೪ : ಅನುವಾದ ಸಂರಕ್ಷಿಸಲು ಯೋಗ್ಯವಾದ ಕಲೆ
  • ೨೦೨೫ : ಶಾಂತಿ ಮತ್ತು ವಿಶ್ವಾಸದ ವರ್ಷ
  • ೨೦೨೬ : ಭಾಷಾ ವೈವಿಧ್ಯತೆ ಮತ್ತು ಭಾಷಾ ಹಕ್ಕುಗಳು

ಇದರ ಉಪಶೀರ್ಷಿಕೆ “ಅರ್ಥಮಾಡಿಕೊಳ್ಳಲ್ಪಡುವ ಶಕ್ತಿ” ಎಂದಾಗಿದೆ.

ಇಂಟರ್ನ್ಯಾಷನಲ್ ಫೆಡರೇಶನ್ ಆಫ್ ಟ್ರಾನ್ಸ್‌ಲೇಟರ್ಸ್ (FIT) ಘೋಷಿಸಿರುವ ಈ ವರ್ಷದ ಧ್ಯೇಯ ವಾಕ್ಯವು, ಜಾಗತಿಕವಾಗಿ ಭಾಷಾ ವೈವಿಧ್ಯತೆಯನ್ನು ಗೌರವಿಸುವುದು ಮತ್ತು ಪ್ರತಿಯೊಬ್ಬರಿಗೂ ತಮ್ಮದೇ ಭಾಷೆಯಲ್ಲಿ ಮಾಹಿತಿಯನ್ನು ಪಡೆಯುವ ಹಕ್ಕನ್ನು ಎತ್ತಿಹಿಡಿಯುವುದನ್ನು ಒತ್ತಿಹೇಳುತ್ತದೆ. ಶಿಕ್ಷಣ, ಆರೋಗ್ಯ, ನ್ಯಾಯ ಮತ್ತು ಸಾರ್ವಜನಿಕ ಸೇವೆಗಳು ಎಲ್ಲರಿಗೂ ಅವರು ಅರ್ಥಮಾಡಿಕೊಳ್ಳುವ ಭಾಷೆಯಲ್ಲೇ ಸಿಗುವಂತೆ ಮಾಡುವಲ್ಲಿ ಅನುವಾದ ಹಾಗೂ ದುವಾಷಿಗಳ ಪಾತ್ರ ಎಷ್ಟು ಮುಖ್ಯ ಎಂಬುದನ್ನು ಇದು ನೆನಪಿಸುತ್ತದೆ.

ಅಂತರಾಷ್ಟ್ರೀಯ ಅನುವಾದ ದಿನದ ಮಹತ್ವ

ಭಾಷಾಂತರಕಾರ ಮತ್ತು ವ್ಯಾಖ್ಯಾನಕಾರರು ಜನರ ನಡುವೆ ಸಂವಹನವನ್ನು ಸುಗಮ ಗೊಳಿಸುವ ಕಾರ್ಯದಲ್ಲಿ ನಿರತರಾಗಿರುವ ವೃತ್ತಿಪರರು. ಇವರ ಕೆಲಸ ವ್ಯಾಪಾರ ವಿಜ್ಞಾನ ಔಷಧ ತಂತ್ರಜ್ಞಾನ ಅಂತಾರಾಷ್ಟ್ರೀಯ ಕಾನೂನು ರಾಜಕೀಯ ಮತ್ತು ಇತರ ಪ್ರದೇಶಗಳ ಅಭಿವೃದ್ಧಿಯ ಮೇಲೆ ಪ್ರಭಾವ ಬೀರುತ್ತದೆ .ವಿಶ್ವದ ಪ್ರತಿಯೊಬ್ಬರಿಗೂ ಸಮಾನ ಒಟ್ಟಾರೆಯಾಗಿ ಸಮಾಜದ ಪ್ರಯೋಜನಕ್ಕಾಗಿ ಪರಸ್ಪರ ಕಲಿಯುವ ಕಲಿಸುವ ಸಾಮರ್ಥ್ಯವನ್ನು ಒದಗಿಸುತ್ತದೆ. ಯುನೆಸ್ಕೊ ಪ್ರಕಾರ ಸಾಂಸ್ಕೃತಿಕ ಪರಂಪರೆ ಎನ್ನುವುದು ಬರೀ ಸ್ಮಾರಕ ಮತ್ತು ವಸ್ತುಗಳ ಸಂಗ್ರಹಗಳಿಗೆ ಸೀಮಿತವಾಗುವುದಿಲ್ಲ ಇದು ಜ್ಞಾನ ನಂಬಿಕೆಗಳು ಮತ್ತು ಜನರು ಪ್ರಕೃತಿ ಮತ್ತು ಬ್ರಹ್ಮಾಂಡದೊಳಗಿನ ನಮ್ಮ ಸಂಬಂಧಗಳಿಗೆ ಸಂಬಂಧಿಸಿದ ಅಭ್ಯಾಸಗಳಂತಹ ಅಮೂರ್ತ ಸಾಂಸ್ಕೃತಿಕ ಪರಂಪರೆಯನ್ನು ಒಳಗೊಂಡಿದೆ. ಹೀಗಾಗಿ ಇದನ್ನೆಲ್ಲ ಸಾಧಿಸುವ ತಿಳುವಳಿಕೆಯನ್ನು ಮತ್ತು ಸಹಾಯ ಮಾಡುವ ಪ್ರವೃತ್ತಿಯನ್ನು ಒಳಗೊಂಡ ಅನುವಾದದ ಪಾತ್ರವನ್ನು ಇಂದಿನ ದಿನದ ಆಚರಣೆಯು ಹೆಮ್ಮೆಯಿಂದ ಎತ್ತಿ ಹಿಡಿಯುತ್ತದೆ.

ಹರಿವಂಶ್ ರಾಯ್ ಬಚ್ಚನ್ ಅವರ ಹಿಂದಿ ಕವಿತೆಯ ನನ್ನ ಅನುವಾದದೊಂದಿಗೆ ಈ ಲೇಖನ ಮುಗಿಸುವೆ . ಅಂತರರಾಷ್ಟ್ರೀಯ ಅನುವಾದ ದಿನದ ಪ್ರಯುಕ್ತ ನನ್ನ ಕಾಣಿಕೆ

Harivansh Rai Bachhan’s poem on friendship: …..

मै यादों का किस्सा खोलूँ तो,
कुछ दोस्त बहुत याद आते हैं….

मै गुजरे पल को सोचूँ तो,
कुछ दोस्त बहुत याद आते हैं….

अब जाने कौन सी नगरी में,
आबाद हैं जाकर मुद्दत से….

मै देर रात तक जागूँ तो ,
कुछ दोस्त बहुत याद आते हैं….

कुछ बातें थीं फूलों जैसी,
कुछ लहजे खुशबू जैसे थे,

मै शहर-ए-चमन में टहलूँ तो,
कुछ दोस्त बहुत याद आते हैं.

सबकी जिंदगी बदल गयी,
एक नए सिरे में ढल गयी,

किसी को नौकरी से फुरसत नही
किसी को दोस्तों की जरुरत नही….

सारे यार गुम हो गये हैं…
“तू” से “तुम” और “आप” हो गये है….

मै गुजरे पल को सोचूँ तो,
कुछ दोस्त बहुत याद आते हैं….

धीरे धीरे उम्र कट जाती है…
जीवन यादों की पुस्तक बन जाती है,

कभी किसी की याद बहुत तड़पाती है
और कभी यादों के सहारे ज़िन्दगी कट जाती है …

किनारो पे सागर के खजाने नहीं आते,
फिर जीवन में दोस्त पुराने नहीं आते…

जी लो इन पलों को हस के दोस्त,
फिर लौट के दोस्ती के जमाने नहीं आते …

हरिवंशराय बच्चन

ಮೈತ್ರಿ ಕಾಲ

ನನ್ನ ನೆನಪಿನ ಕಥೆಗಳ ಗಂಟು ಬಿಚ್ಚುವಾಗಲೆಲ್ಲಾ
ಪ್ರೀತಿಯ ಹಳೆಯ ಸ್ಣೇಹಿತರ ನೆನಪಾಗುವುದಲ್ಲಾ
ಕಳೆದ ಸಂತಸದ ಕ್ಷಣಗಳ ನೆನೆದಾಗಲೆಲ್ಲ
ನಲ್ಮೆಯ ಮಿತ್ರರೇ ಸದಾ ನೆನಪಾಗುವರಲ್ಲ

ಈಗ ಅವರೆಲ್ಲಿರುವರೋ ಹೇಗಿರುವರೋತಿಳಿಯದು
ತಮ್ಮದೇ ಲೋಕದಲಿ ವ್ಯಸ್ತ ಸಂತೃಪ್ತರಿರಬಹುದು
ನಟ್ಟಿರುಳ ರಾತ್ರಿಯಲಿ ಎಚ್ಚರವಾಗಿರುವಾಗೆಲ್ಲ
ಪ್ರೀತಿಯ ಹಳೆಯ ಮಿತ್ರರ ನೆನಪಾಗುವುದಲ್ಲ

ಕೆಲ ವಿಷಯಗಳೇ ಹಾಗೆˌ ಹೂಗಳ ಹಾಗೆ
ನೆನೆದಾಗಲೆಲ್ಲಾ ಮನದ ತುಂಬಾ ಪರಿಮಳದ ಬುಗ್ಗೆ
ನೆನಪಿನ ನಗರಿಯ ಸಂಚಾರ ಹೊರಟಾಗಲೆಲ್ಲ
ಪ್ರೀತಿಯ ಮಿತ್ರರದೇ ನೆನಹು ಎದುರಾಗುವುದಲ್ಲ

ಎಲ್ಲರ ಜೀವನದಿ ಆಗಿದೆ ಬದಲಾವಣೆ
ಎಲ್ಲರಿಗೂ ಅವರವರದೇ ಜವಾಬ್ದಾರಿ ಹೊಣೆ
ಕೆಲವರಿಗೆ ನೌಕರಿಯಿಂದ ಪುರುಸೊತ್ತು ಇಲ್ಲ
ಹಲವರಿಗೆ ಗೆಳೆಯರ ಅವಶ್ಯಕತೆಯೇ ಇಲ್ಲ

ಮಿತ್ರರ ನಡುವೆಯಿಂದು ಆವರಿಸಿದೆ ಮೌನದ ತೆರೆ
ಕಳಚಿಹೋಗಿದೆ ಈಗ ಆ ಆತ್ಮೀಯತೆಯ ಪೊರೆ
ಕಳೆದ ಆ ಕ್ಷಣಗಳ ನೆನೆದಾಗಲೆಲ್ಲಾ
ಹಳೆಯ ಮಿತ್ರರೆಲ್ಲರ ನೆನಪಾಗುವುದಲ್ಲ.

ನಿಧಾನವಾಗಿ ವಯಸ್ಸು ಮಾಗುತ್ತಾ ಬಂದಿದೆ
ಜೀವನ ನೆನಪಿನ ಪುಸ್ತಕ ಬರೆಯುತಿದೆ
ಒಮ್ಮೊಮ್ಮೆ ಕೆಲವರ ನೆನಪು ತುಂಬಾ ಕಾಡಿದರೆ
ಹಲವೊಮ್ಮೆ ಆ ನೆನಪುಗಳೇ ಈ ಜೀವಕಾಸರೆˌ

ಸಾಗರದ ಸಂಪತ್ತು ತೀರಕೆಂದೂ ತೇಲಿ ಬಾರದು
ಮತ್ತೆ ಹಳೆಯ ಮಿತ್ರರ ಸಂಗ ಮತ್ತೆಂದೂ ಸಿಗದು
ಸಿಕ್ಕ ಸ್ನೇಹ ಸವಿ ಕ್ಷಣಗಳ ನಿಮ್ಮದಾಗಿಸಿ ಜತನದಿ
ಮರಳಿಬಾರದು ಮುಂದೆ ಈ ಮೈತ್ರಿಕಾಲ ಜೀವನದಿ.

(ಹರಿವಂಶರಾಯ್ ಬಚನ್ ಅವರ ಕವಿತೆಯ ಅನುವಾದ)


  • ಸುಜಾತಾ ರವೀಶ್ – ಲೇಖಕರು, ಕವಿ,  ಮೈಸೂರು.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading