ಶ್ರೀ ಹಾಸನಾಂಬೆ ದರ್ಶನಕ್ಕಾಗಿ ಗಣ್ಯರಿಂದ ಶ್ರೀಹಾಸನಾಂಬೆ ದರ್ಶನದ ಬಗ್ಗೆ ನಿವೃತ್ತ ಕೆಪಿಸಿಎಲ್ ಅಧಿಕಾರಿ ದೇವರಾಜ ಚಾರ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಸಾಮಾನ್ಯವಾಗಿ ಬಡವನಾದವನು ದೇವರ ದರ್ಶನ ಮಾಡಿ ತನಗೆ ಉಣ್ಣಲು ಅನ್ನ, ತೊಡಲು ಬಟ್ಟೆ, ವಿಶ್ರಮಿಸಲು ಮನೆ, ಆರೋಗ್ಯ? ಇತ್ಯಾದಿ ಕೇಳಿಕೊಳ್ಳಲು ಬರುತ್ತಾರೆ. ಈ ಸಾಮಾನ್ಯ ಜನರು ಕನಿಷ್ಠ ಐದು – ಆರು ಗಂಟೆಗಳ ಸಮಯ ಸರದಿ ಸಾಲಿನಲ್ಲಿ ನಿಂತು ಯಾವುದೇ ತರಹದ ಉಪಚಾರ ಅಂದರೆ ನೀರು, ಟೀ, ಬಿಸ್ಕತ್ ಇಲ್ಲದೆ ದೇವರ ಹತ್ತಿರ ಹೋಗುವಷ್ಟರಲ್ಲಿ ಪೊಲೀಸಿನವರು ಕಳ್ಳರನ್ನು ತಳ್ಳುವಂತೆ ಎಳೆದು ಆಚೆ ಹಾಕುತ್ತಾರೆ.
ಶ್ರೀಮಂತರನ್ನು ಅಂದರೆ ವಿಐಪಿಗಳು, ಜನಪ್ರತಿನಿಧಿಗಳು, ಅಧಿಕಾರಿ ವರ್ಗದವರು, ಸೆಲೆಬ್ರಿಟಿಗಳು ಇಂತಹವರನ್ನು ಐ. ಬಿ ಯಿಂದ ಕರೆದುಕೊಂಡು ಬಂದು ಅವರಿಗೆ ಉಪಹಾರ, ಪ್ರಸಾದ, ದೇವಸ್ಥಾನಕ್ಕೆ ಹೋಗಲು ವಾಹನದ ವ್ಯವಸ್ಥೆ, ಜೊತೆಗೆ ಸೆಕ್ಯೂರಿಟಿ ವ್ಯವಸ್ಥೆಯಲ್ಲಿ ಬಂದು ದೇವರ ದರ್ಶನ ಮಾಡಿ ಪುನೀತರಾಗುತ್ತಾರೆ. ಮನಸ್ಸಿಗೆ ತೃಪ್ತಿಯಾಗುವಷ್ಟು ಸಮಯ ದೇವರನ್ನು ಕಣ್ತುಂಬಿ ಕೊಳ್ಳುತ್ತಾರೆ. ಇದು ವಿಪರ್ಯಾಸ.

ಗಣ್ಯರು ತಮ್ಮ ಕುಟುಂಬ ಸಮೇತ ದೇವರ ಸನ್ನಿಧಿಯಲ್ಲಿ ಕೂತು ದೀರ್ಘ ಸಮಯ ಪ್ರಾರ್ಥನೆ ಸಲ್ಲಿಸಿದರೆಂದು ಜಾಲತಾಣದಲ್ಲಿ reels ಮೂಲಕ ಹರಿದಾಡುತ್ತಿತ್ತು. ಮುಕ್ಕೋಟಿ ಕನ್ನಡಿಗರು ಸಂತೋಷದಿಂದ ಇರಲಿ ಎಂದು ಬೇಡಿಕೊಂಡಿರಬೇಕು!ಜೊತೆಗೆ ಇನ್ನು ಕೆಲವಾರು ವರ್ಷ ಯಾವುದೇ ಅಡೆತಡೆ ಇಲ್ಲದೆ ಮುಖ್ಯಮಂತ್ರಿ ಆಗಿ ವಿಜೃಂಭಿಸಬೇಕು ಅಂತ ಇರಬೇಕು.
ಸಾಲಿನಲ್ಲಿ ನಿಂತಿದ್ದ ಸಾಮಾನ್ಯ ಭಕ್ತರು ಎಲ್ಇಡಿ ಸ್ಕ್ರೀನ್ ನಲ್ಲಿ ಬರುತ್ತಿದ್ದ ನೇರ ಪ್ರಸಾರದಲ್ಲಿ ಮುಖ್ಯಮಂತ್ರಿ ದೇವರ ಸನ್ನಿಧಿಯಲ್ಲಿ ಕುಂತಿರುವ ದೃಶ್ಯ ನೋಡಿ ಆಘಾತ ಉಂಟಾಗಿ, ತಾಳ್ಮೆಯನ್ನು ಕಳೆದುಕೊಂಡು ಚಪ್ಪಲಿಯನ್ನು ಎಲ್ಇಡಿ ಸ್ಕ್ರೀನ್ ಗೆ ಎಸೆಯುತ್ತಿದ್ದ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ reels ನೋಡಿ ಆಘಾತವಾಯಿತು.
ಗಣ್ಯರು ಬರುವವರೆಗೆ ಸಾಲಿನಲ್ಲಿ ನಿಂತಿರಬೇಕಲ್ಲ ಎನ್ನುವ ಕಾರಣದಿಂದ ಸಾಮಾನ್ಯ ಜನರು ಅಕ್ರೋಶಬರಿತರಾಗಿ ಹೀಗೆ ನಡೆದುಕೊಂಡಿರುವುದು ಮೆಚ್ಚಿನ ವಿಷಯ. ಅಲ್ಲಲ್ಲಿ ಇಂತಹ ಪ್ರತಿಭಟನೆಗಳು ಆಗಬೇಕು. ಆದರೂ ಸಹ ಗಣ್ಯರು ಅನ್ನಿಸಿಕೊಂಡವರು,ಸೆಲೆಬ್ರಿಟಿ ಆದವರು,ಈ ಯಾವುದನ್ನು ಮನಸ್ಸಿಗೆ ಹಚ್ಚಿಕೊಳ್ಳದೆ ತಮಗೆ ಸರಿ ಬಂದಂತೆನಡೆದುಕೊಳ್ಳುತ್ತಾರೆ.
ಗಣ್ಯರಿಗೆ ಈ ಸಂದರ್ಭದಲ್ಲಿ ದೇವರ ನೆನಪಾಗಿ ಎಲ್ಲಿದ್ದರೂ ಸರಿ ಹಾಜರಾಗುತ್ತಾರೆ. ರಾಜ ಮರ್ಯಾದೆ ಸಿಗುತ್ತಲ್ಲ ಅದಕ್ಕೆ.ಗಣ್ಯರು ಅಂದರೆ ಸಾಮಾನ್ಯವಾಗಿ ಎಲ್ಲ ಉಳ್ಳವರು. ಕಾರು,ಬಂಗಲೇ, ದುಡ್ಡು, ಅಧಿಕಾರ ಇರುವವರೇ. ಇವರು ಏನನ್ನು ಕೇಳಲು ಬರುತ್ತಾರೆ? ತಾವು ನಡೆಸುತ್ತಿರುವ ದಂಧೆಗಳು ಸಾರಾಗವಾಗಿ ಇನ್ನು ಮುಂದೆ ಸಹ ನಡೆಯಲಿ ಎಂದಿರಬೇಕು.
ರಾಜಕೀಯ ವ್ಯಕ್ತಿಗಳು ಒಂದು ಕಡೆ ಆದರೆ,ಇನ್ನೊಂದು ಕಡೆ ಸೆಲಿಬ್ರಿಟಿಗಳಂತೆ.ಟಿವಿಯಲ್ಲಿ ಕಾಣಿಸಿಕೊಳ್ಳುವವರೇ ಸೆಲಿಬ್ರಿಟಿಗಳು. ಇಂತಹ ಜನಗಳಿಗೆ ನಾಚಿಕೆಯಾಗಬೇಕು.
ಈ ಶಿಷ್ಟಚಾರ ಬಿಡಬೇಕು. ಶಿಷ್ಟಾಚಾರದಲ್ಲಿ ಹಾಲಿ ಜನಪ್ರತಿನಿಧಿಗಳಿಗೆ ಜಾಗ ಇರಲಿ ಅಂದುಕೊಂಡರೆ, ಶಿಷ್ಟಾಚಾರದ ನೆಪದಲ್ಲಿ ಮಾಜಿ ಜನ ಪ್ರತಿನಿಧಿಗಳು, ಅವರ ಕುಟುಂಬ, ಅವರ ಶಿಷ್ಯ ಬಣ, ನಿವೃತ್ತ ಅಧಿಕಾರಿ ವರ್ಗ, ಪೊಲೀಸ್ ಸಿಬ್ಬಂದಿಯವರ ಕುಟುಂಬ, ಹೀಗೆ ಎಲ್ಲಾ ತರಹದ ಜನ. ಈ ಸಂದರ್ಭದಲ್ಲಿ ಎಲ್ಲಿದ್ದರೂ ಹಾಜರಾಗುತ್ತಾರೆ.ಈ ವ್ಯವಸ್ಥೆ ಹೋಗುವವರಿಗೆ ಸಾಮಾನ್ಯನಿಗೆ ಅನುಕೂಲವಿಲ್ಲ.
- ದೇವರಾಜ ಚಾರ್ – ನಿವೃತ್ತ ಕೆಪಿಸಿಎಲ್ ಅಧಿಕಾರಿ, ಮೈಸೂರು.
