“ಕಾಕುತ್ಸ ವರ್ಮನ ” ಕೃತಿ ಪರಿಚಯ

ಸದ್ಯದಲ್ಲೇ ಬಿಡುಗಡೆಯಾಗಲಿರುವ ಐತಿಹಾಸಿಕ ಕಾದಂಬರಿಕಾರರಾದ ​ಸಂತೋಷ್ ಕುಮಾರ್ ಮೆಹಂದಳೆ ಅವರ ‘ಕಾಕುತ್ಸ ವರ್ಮನ’ ಕುರಿತು ಲೇಖಕರಾದ ಸಿದ್ದೇಶ್ ಸಿದ್ದನ ಮಠ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಪುಸ್ತಕ : ಕಾಕುತ್ಸ ವರ್ಮನ
ಲೇಖಕರು : ಸಂತೋಷ್ ಕುಮಾರ್ ಮೆಹಂದಳೆ
ಪ್ರಕಾಶನ : ಸಾಹಿತ್ಯಲೋಕ

ಮಹಾರಾಜ ಮಯೂರವರ್ಮನ ಬಗ್ಗೆ ಈಗಾಗಲೇ ಖ್ಯಾತ ಐತಿಹಾಸಿಕ ಕಾದಂಬರಿಕಾರರಾದ ​ಸಂತೋಷ್ ಕುಮಾರ್ ಮೆಹಂದಳೆ ಅವರ ‘ವೈಜಯಂತೀಪುರ’ ಕಾದಂಬರಿ ಮೂಲಕ ಓದಿದ ಪ್ರತಿಯೊಬ್ಬ ಕನ್ನಡಿಗನ ನರ ನಾಡಿಗಳಲ್ಲಿಯೂ ಕನ್ನಡದ ಕೆಚ್ಚೆದೆ ಮೂಡುವಂತೆ ನೈಜ ಇತಿಹಾಸವನ್ನು ದಾಖಲೆಗಳ ಸಮೇತ ಕಾದಂಬರಿಯಲ್ಲಿ ಪ್ರಸ್ತುತ ಪಡಿಸಿದ್ದನ್ನು ಕಂಡಿದ್ದೇವು ಓದಿದ್ದೇವು.

ಈಗ ಅದರ ಮುಂದುವರೆದ ಭಾಗ 2 ಮಯೂರವರ್ಮನ ನಂತರದ ಅರಸ “ಕಾಕುತ್ಸ ವರ್ಮನ ” ( ವೈಜಯಂತೀಪುರ ಭಾಗ – ೨)ನ ರೋಚಕ ಇತಿಹಾಸವಿರುವ ಹಿಂದೆಂದೂ ಓದಿರದ ಮತ್ತು ಇತಿಹಾಸ ಪುಟಗಳಲ್ಲಿ ಮರೆಮಾಡಿದ ನಮ್ಮದೇ ಕೆಚ್ಚೆದೆಯ ಕನ್ನಡದ ಅರಸನೊಬ್ಬನ ಸುವರ್ಣಯುಗದ ಇತಿಹಾಸವನ್ನು ಓದುಗ ಪ್ರಭುಗಳಿಗೆ ಉಣಬಡಿಸಲು ತಯಾರಾಗಿರುವುದು. ನಿಜಕ್ಕೂ ಶ್ಲಾಘನೀಯ ಹಾಗೂ ವೈಜಯಂತೀಪುರ ಭಾಗ ೨ ಪ್ರೀ ರೀಡಿಂಗ್ ಸಿಕ್ಕಿರುವುದು ಕೂಡ ನನ್ನ ಭಾಗ್ಯ.
​
​ಮಯೂರವರ್ಮನ ಸ್ವಾಭಿಮಾನದ ಕಿಚ್ಚಿನಿಂದ ಜನ್ಮತಾಳಿದ ಕದಂಬ ಸಾಮ್ರಾಜ್ಯಕ್ಕೆ ಸುವರ್ಣ ಯುಗದ ಮೆರುಗು ನೀಡಿದ ಶ್ರೇಯಸ್ಸು ಕಾಕುತ್ಸವರ್ಮನಿಗೆ ಸಲ್ಲುತ್ತದೆ. ಬನವಾಸಿಯ ಸಿಂಹಾಸನವನ್ನೇರಿ ಆಳಿದ ಈ ರಾಜ, ಕೇವಲ ಕತ್ತಿ ಹಿಡಿದು ಯುದ್ಧ ಗೆದ್ದ ಯೋಧನಷ್ಟೇ ಆಗಿರಲಿಲ್ಲ; ದಕ್ಷಿಣ ಭಾರತದ ರಾಜಕೀಯ ಭೂಪಟದಲ್ಲಿ ಕನ್ನಡಿಗರ ಪ್ರಭಾವವನ್ನು ಮುಗಿಲೆತ್ತರಕ್ಕೆ ಏರಿಸಿದ ಮುತ್ಸದಿಯಾಗಿದ್ದ.

​ರಾಜತಾಂತ್ರಿಕತೆಯ ಚಾಣಕ್ಯ

​ಕಾಕುತ್ಸವರ್ಮನ ಕಾಲದ ಅತ್ಯಂತ ರೋಚಕ ಸಂಗತಿಯೆಂದರೆ ಆತನ ರಾಜತಾಂತ್ರಿಕ ಜಾಣ್ಮೆ. ಆ ಕಾಲದಲ್ಲಿ ಉತ್ತರ ಭಾರತದಲ್ಲಿ ಪ್ರಬಲರಾಗಿದ್ದ ಗುಪ್ತರು ಮತ್ತು ದಕ್ಷಿಣದ ವಾಕಾಟಕರು ಅಗಾಧ ಶಕ್ತಿಯನ್ನು ಹೊಂದಿದ್ದರು. ಕಾಕುತ್ಸವರ್ಮ ತನ್ನ ಸಾಮ್ರಾಜ್ಯದ ಭದ್ರತೆಗಾಗಿ ವಿವಾಹ ಸಂಬಂಧಗಳನ್ನು (Matrimonial Alliances) ಅತ್ಯಂತ ಚಾಣಾಕ್ಷತನದಿಂದ ಬಳಸಿಕೊಂಡ.

​ತನ್ನ ಮಗಳನ್ನು ಉತ್ತರ ಭಾರತದ ಪ್ರಸಿದ್ಧ ಗುಪ್ತ ಸಾಮ್ರಾಜ್ಯದ ರಾಜಕುಮಾರನಿಗೆ (ಸಾಮ್ರಾಟ್ ವಿಕ್ರಮಾದಿತ್ಯ ಅಥವಾ ಎರಡನೇ ಚಂದ್ರಗುಪ್ತನ ಮೊಮ್ಮಗನಿಗೆ) ಮದುವೆ ಮಾಡಿಕೊಟ್ಟಿದ್ದಲ್ಲದೆ, ಮತ್ತೊಬ್ಬ ಮಗಳನ್ನು ವಾಕಾಟಕ ರಾಜವಂಶಕ್ಕೆ ನೀಡಿದ. ಇಷ್ಟೇ ಅಲ್ಲ, ನಳ ಮತ್ತು ಗಂಗ ವಂಶದ ರಾಜರೊಂದಿಗೂ ಬೀಗತನ ಬೆಳೆಸಿದ. ಅಂದರೆ, ಅಂದಿನ ಕಾಲದ ಬಲಿಷ್ಠ ಸಾಮ್ರಾಜ್ಯಗಳೆಲ್ಲವೂ ಕದಂಬರ ಬಂಧುಗಳಾಗಿದ್ದವು. ಈ ಮೂಲಕ ಯುದ್ಧಗಳಿಲ್ಲದೆಯೇ ತನ್ನ ಸಾಮ್ರಾಜ್ಯಕ್ಕೆ ಅಭಯಕವಚ ತೊಡಿಸಿದ ಧೀರ ಆತ. ಮಹಾಕವಿ ಕಾಳಿದಾಸ ಬನವಾಸಿಯ ಆಸ್ಥಾನಕ್ಕೆ ಭೇಟಿ ನೀಡಿದ್ದ ಎಂಬ ಉಲ್ಲೇಖಗಳೂ ಈ ವೈಭವದ ದಿನಗಳಿಗೇ ಸಾಕ್ಷಿ.

​ತಾಳಗುಂದ ಶಾಸನ ಮತ್ತು ಇತಿಹಾಸದ ಬೆಳಕು

​ಕಾಕುತ್ಸವರ್ಮನ ಸಾಧನೆಯನ್ನು ಇಂದಿಗೂ ಸಾರುತ್ತಿರುವುದು ಆತನ ಮಗ ಶಾಂತಿವರ್ಮ ಕೆತ್ತಿಸಿದ ಪ್ರಸಿದ್ಧ ತಾಳಗುಂದದ ಶಾಸನ. ಕವಿ ಕುಬ್ಜನಿಂದ ರಚಿತವಾದ ಈ ಶಾಸನವು ಸಂಸ್ಕೃತ ಕಾವ್ಯ ಶೈಲಿಯಲ್ಲಿದ್ದು, ಕಾಕುತ್ಸವರ್ಮನ ವ್ಯಕ್ತಿತ್ವವನ್ನು ಮನೋಜ್ಞವಾಗಿ ಬಣ್ಣಿಸುತ್ತದೆ.

​”ಕಾಕುತ್ಸವರ್ಮನು ಶತ್ರುಗಳೆಂಬ ಅಂಧಕಾರವನ್ನು ಓಡಿಸುವ ಸೂರ್ಯನಂತಿದ್ದನು. ಆತನ ದಾನ ಮತ್ತು ಕರುಣೆಯು ಬಡವರ ಮತ್ತು ದೀನರ ಕಣ್ಣೀರನ್ನು ಒರೆಸುತ್ತಿತ್ತು…”
​ಈ ಸಾಲುಗಳು ಆತನ ಶೌರ್ಯಕ್ಕೆ ಮಾತ್ರವಲ್ಲ, ಪ್ರಜಾಹಿತ ಆಡಳಿತಕ್ಕೂ ಹಿಡಿದ ಕೈಗನ್ನಡಿ. ಪ್ರಜೆಗಳ ಹಿತಕ್ಕಾಗಿ ಕೆರೆ-ಕಟ್ಟೆಗಳನ್ನು ನಿರ್ಮಿಸಿ, ಕೃಷಿಗೆ ನೀರಾವರಿ ಒದಗಿಸಿ ನಾಡನ್ನು ಸುಭಿಕ್ಷಗೊಳಿಸಿದ ಶ್ರೇಷ್ಠ ಆಡಳಿತಗಾರ ಆತ.

​ಕನ್ನಡ ಮಣ್ಣಿನ ಕೀರ್ತಿ
​
ಇಂದು ನಾವು “ಕರ್ನಾಟಕ” ಎಂದು ಹೆಮ್ಮೆಯಿಂದ ಎದೆ ತಟ್ಟಿ ಹೇಳಿಕೊಳ್ಳುವ ಈ ಮಣ್ಣಿಗೆ, ತನ್ನದೇ ಆದ ಅಸ್ತಿತ್ವ, ರಾಜಕೀಯ ಗೌರವ ಮತ್ತು ಸ್ವತಂತ್ರ ಗುರುತನ್ನು ತಂದುಕೊಟ್ಟವರಲ್ಲಿ ಕಾಕುತ್ಸವರ್ಮ ಮುಂಚೂಣಿಯಲ್ಲಿ ನಿಲ್ಲುತ್ತಾನೆ. ದಕ್ಷಿಣದ ಸಣ್ಣ ರಾಜ್ಯವಾಗಿದ್ದ ಕದಂಬ ಸಾಮ್ರಾಜ್ಯವನ್ನು ಆರ್ಯಾವರ್ತದ ಮಹಾರಾಜರೂ ಗೌರವದಿಂದ ನೋಡುವಂತೆ ಮಾಡಿದ ಕೀರ್ತಿ ಆತನದ್ದು.

​ಇತಿಹಾಸ ಎಂಬುದು ಕೇವಲ ಗತಿಸಿದ ಕಾಲದ ಕಥೆಯಲ್ಲ; ಅದು ನಮ್ಮ ಮೂಲದ ಹುಡುಕಾಟ. ಬನವಾಸಿಯ ಹಸಿರಿನ ಮಡಿಲಲ್ಲಿ ಕುಳಿತು ಕಾಕುತ್ಸವರ್ಮ ಕಟ್ಟಿದ ಆಡಳಿತದ ಸೌಧ, ಇಂದಿಗೂ ಕನ್ನಡಿಗರ ನರನರಗಳಲ್ಲೂ ಸ್ವಾಭಿಮಾನದ ರಕ್ತವನ್ನು ಹರಿಸುವಂತೆ ಮಾಡುತ್ತದೆ. ಮುಂದಕ್ಕೆ ಓದಬೇಕೇ ಮತ್ತೇಕೆ ತಡ ಇಂದೇ ಕಾಯ್ದಿರಿಸಿ ಕಾಕುತ್ಸವರ್ಮ ಕಾದಂಬರಿ. ನಾನು ಕಾಯ್ದಿರಿಸಿರುವೆ. ಜೈ ಕನ್ನಡಾಂಬೆ ಮತ್ತೊಮ್ಮೆ ಅಭೂತಪೂರ್ವ ಗೆಲುವು ದಾಖಲಿಸುವತ್ತಾ ಹೆಜ್ಜೆ ಇಟ್ಟಿರುವ ಶ್ರೀ ಸಂತೋಷ್ ಕುಮಾರ್ ಮೆಹಂದಳೇ ಸರ್ ಅವರಿಗೆ ಕನ್ನಡಾಂಬೆ ಹರಸಿ ಹಾರೈಸಲಿ. ಇನ್ನೂ ಹೆಚ್ಚು ಹೆಚ್ಚು ಕಾದಂಬರಿಗಳು ಅವರ ಲೇಖನಿಗಳಿಂದ ಮೂಡಿಬರಲಿ ಓದುವ ಬಾಗ್ಯ ನಮ್ಮದಾಗಲಿ…


  • ಸಿದ್ದೇಶ್ ಸಿದ್ದನ ಮಠ – ಸಹಾಯಕ ಸಂಚಾರ ಅಧೀಕ್ಷಕರು, ಲೇಖಕರು, ದಾವಣಗೆರೆ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading