ಅಳಿದು ಉಳಿದ ಕೂದಲು ಬಾಚಲು ಹೋದರೆ ಬಾಚಣಿಕೆಯಿಂದ ನನ್ನ ತಲೆ ಬುರುಡೆಗೆ ಗೀರಿ ಗೀರಿ ಇರಿಸು ಮುರಿಸು. ಸಲೂನ್ ಗೆ ಮುಹೂರ್ತ ಯಾವಾಗ? ಕತೆಗಾರರರಾದ ಲಕ್ಷ್ಮಣ ಗೊರ್ಲಕಟ್ಟೆ ಅವರ ಸಣ್ಣಕತೆಯನ್ನು ಪೂರ್ತಿಯಾಗಿ ಓದಿ…
“ ವಿಜೀ, ನಾನು ಬೆಳಿಗ್ಗೆ ಸಲೂನ್ ಗೆ ಹೋಗಬೇಕು” ಬೆಡ್ ರೂಮಿನಿಂದ ಅಡುಗೆ ಮನೆಯಲ್ಲಿದ್ದ ನನ್ನ ಮಡದಿಯನ್ನು nickname ನಿಂದ ಕರೆದು, ಕೂಗಿ ಹೇಳಿದೆ. ರಾತ್ರಿ ಹತ್ತು ಆದರೂ ಇನ್ನೂ ಅಡುಗೆ ಮನೆಯಲ್ಲೇ ಇದ್ದ ಅವಳು “ಸ್ವಲ್ಪ ಇರಿ ಬಂದೆ” ಎಂದದ್ದು ಕೇಳಿಸಿತು.
ನನ್ನ ತಲೆಯಲ್ಲಿ ಇನ್ನು ಕೊಂಚ ಕೂದಲುಗಳು ಬೋಳು ಗುಡ್ಡದ ಮೇಲೆ ಅಲ್ಲಲ್ಲಿ ಒಣಗಿದ ಕುರುಚಲು ಗಿಡದ ಹುಲ್ಲು ಕಡ್ಡಿಗಳಂತೆ ಅತ್ತ ಇತ್ತ ಹರಡಿಕೊಂಡಿವೆ. ಹಲವು ಬಿಳಿ ಬಿಳಿ ಕೆಲವು ಇನ್ನು ಮಾಸಲು ಕಪ್ಪು, ಒಟ್ಟಾರೆ ಆಂಗ್ಲ ಭಾಷೆಯಲ್ಲಿ “pepper salt” ಅಂದರೆ ಬಿಳಿ ಉಪ್ಪು, ಕರಿ ಮೆಣಸು ಬೆರೆತ ರೀತಿ. ಕೂದಲು ಡೈ ಮಾಡೋಣ ಅಂದುಕೊಂಡಾಗ ಹೆಂಡತಿ ಅಡ್ಡ ಬಾಯಿ ಹಾಕಿ “ಏನು ಶೋಕಿ ಈ ಇಳಿ ವಯಸ್ಸಿನಲ್ಲಿ” ಎಂದು ಅಣಕಿಸಿದಾಗ “dying” ಯೋಚನೆ ಕೈ ಬಿಟ್ಟೆ. ಅಳಿದು ಉಳಿದ ಕೂದಲು ಬಾಚಲು ಹೋದರೆ ಬಾಚಣಿಕೆಯಿಂದ ನನ್ನ ತಲೆ ಬುರುಡೆಗೆ ಗೀರಿ ಗೀರಿ ಇರಿಸು ಮುರಿಸು. ಬಾಚಣಿಕೆ ಬಿಟ್ಟು ನನ್ನ ಕೈ ಬೆರಳುಗಳನ್ನು ಬಾಚಣಿಕೆಯಂತೆ ಉಪಯೋಗಿಸಿ, ಅಡ್ಡ ದಿಡ್ಡಿ ಓಲಾಡುವ ಕೂದಲುಗಳನ್ನು ನನ್ನ ತಲೆ ಬುರುಡೆಯ ಬೋಳು ಪ್ರದೇಶವನ್ನು ಮುಚ್ಚಿ ಕೂದಲನ್ನು ಒಪ್ಪ ಮಾಡುವುದಕ್ಕೆ ಕನ್ನಡಿಯ ಮುಂದೆ ನಿಂತು ಹರ ಸಾಹಸ ಪಡುತ್ತಿರುತ್ತೇನೆ.
ನೋಡುವವರ ಕಣ್ಣಿಗೆ ಸ್ವಲ್ಪವಾದರೂ ಒಪ್ಪುವಂತೆ ಕಾಣಲು ಈ ರೀತಿಯ ಪ್ರಯತ್ನ ನನ್ನದು. ಕನ್ನಡಿಯ ಮುಂದೆ ನಿಂತು ನನ್ನ ಹರ ಸಾಹಸ ಕಂಡು ನನ್ನ ಮೊಮ್ಮಗ “ಅಯ್ಯೋ ತಾತಾ ಹಾಗೆ ಇರಲಿ ಬಿಡಿ ನೀವು ಥೇಟ್ ಆಲ್ಬರ್ಟ್ ಐನ್ ಸ್ಟೀನ್ ಥರಾ ಕಾಣಿಸ್ತಾ ಇದೀರ” ಎಂದ. ನನ್ನವಳು “ಒಹೋ with brain or without brain?” ಎಂದು ಮೂದಲಿಸಿದಾಗ “ ಹೌದು without brain, ಅದಕ್ಕೇ ನಿನ್ನನ್ನು ಮದುವೆ ಆಗಿದ್ದು!” ಎಂದು ತಿರುಗು ಬಾಣ ಬಿಟ್ಟೆ. ಆದರೆ ಅವಳು ನನ್ನ ಬಾಣದ ರೇಂಜ್ ನಿಂದ ದೂರ ಇದ್ದು ನನ್ನ ಮಾತು ಕೇಳಿಸಿಕೊಳ್ಳಲೇ ಇಲ್ಲ. ಅದು ನನಗೂ ಕ್ಷೇಮಕರವೇ.
ಹೊರಗೆ ಹೋದಾಗ ಎಲ್ಲರೂ ನನ್ನನ್ನು ನೋಡಿದವರ ದೃಷ್ಟಿ ನನ್ನ ತಲೆಯ ಮೇಲೆಯೇ ಇರುವುದನ್ನು ನೋಡಿ ಏನೋ ಮುಜುಗರ, ಕಸಿವಿಸಿ. ಅದಕ್ಕೇನೆ ನನ್ನ ಅಳಿದುಳಿದ ಕೂದಲನ್ನು ಒಪ್ಪ ಓರಣ ಮಾಡಲಿಕ್ಕೆ ನನ್ನ ಹಳೆಯ ಕೇಶ ವಿನ್ಯಾಸಕನ ಮೊರೆ ಹೋಗುತ್ತೇನೆ.
ಹಾಂ ನಾನು ಹೇಳಬೇಕೆಂದಿದ್ದ ವಿಷಯಕ್ಕೆ ಬರುತ್ತೇನೆ. ಸಲೂನ್ ಗೆ ಹೋಗುವ ನನ್ನ ಯೋಜನೆಯನ್ನು ಹಿಂದಿನ ರಾತ್ರಿಯೇ ನನ್ನ ಹೆಂಡತಿಗೆ ತಿಳಿಸುವುದು ಮೊದಲಿಂದಲೂ ನಾನು ಅನುಸರಿಸುತ್ತಿರುವ ಪರಿಪಾಠ. ನಾನೇನು ಅಮ್ಮಾವ್ರ ಗಂಡ ಅಂದುಕೊಳ್ಳಬೇಡಿ. ಬೆಳಿಗ್ಗೆ ಸಲೂನ್ಗೆ ಬೇಗ ಹೋಗಬೇಕು. ಅದಕ್ಕೇ ನನಗೆ ಎಂದಿಗಿಂತಲೂ ಬೇಗ ಒಂದು ಲೋಟ ಫಿಲ್ಟರ್ ಕಾಫಿ ಬೇಕು ಎಂಬುದಕ್ಕೆ ಅದು ಪೀಠಿಕೆ. ಕಾಫಿ ಹೀರಿದ ನಂತರ ದೇಹದಲ್ಲಿ ಶಕ್ತಿ ಸಂಚಾರ ನಂತರ ಸಲೂನ್ ದಾರಿ ಹಿಡಿಯುವುದು ನನ್ನ ಯೋಜನೆ.
ನನ್ನವಳು ಅಡುಗೆ ಮನೆಯಲ್ಲಿ ತನ್ನ ಕೆಲಸ ಮುಗಿಸಿ ಬಂದವಳೇ “ರೀ ನಾಳೆ ಸಲೂನ್ ಗೆ ಹೋಗುವ ಹಾಗಿಲ್ಲ” ಎಂದವಳೇ ನನ್ನ ಪೆಚ್ಚು ಮುಖವನ್ನು ನೋಡಿಯೂ ನೋಡದಂತೆ “ನಾಳೆ ಅಮಾವಾಸ್ಯೆ” ಎಂದು ಎಚ್ಚರಿಸಿದಳು. “ಓಹೋ ಅಮಾವಾಸ್ಯೆ ಹೌದಲ್ವಾ, ಮರೆತೇ ಇದ್ದೆ” ಎಂದು ಅಮಾವಾಸ್ಯೆ ದಿನ ಸಲೂನ್ ಭೇಟಿ ನಿಷಿದ್ಧ ಎಂದು ನನ್ನ ಯೋಜನೆಯನ್ನು ಮುಂದಕ್ಕೆ ಹಾಕಿದೆ. ಎರಡು ದಿನ ಬಿಟ್ಟು ಮತ್ತೆ ರಾತ್ರಿ ಅದೇ ರಾಗ ಹಾಡಿದೆ. ಅದಕ್ಕೆ ನನ್ನವಳು “ರೀ ನಾಳೆ ನನ್ನ ತಮ್ಮ ಬರುತ್ತಿದ್ದಾನೆ, ರಾತ್ರಿ ಬಸ್ ನಲ್ಲಿ ಬಂದು ಬೆಳಿಗ್ಗೆ ಆರು ಗಂಟೆಗೆಲ್ಲಾ ಮನೆಗೆ ಬರುತ್ತಾನೆ. ಅಪರೂಪಕ್ಕೆ ಬರುತ್ತಿದ್ದಾನೆ. ಅವನು ಬಂದಾಗ ನೀವು ಸಲೂನ್ ನಲ್ಲಿ ಇರುವುದೇ?” ಎಂದು ಮೂತಿ ಸೊಟ್ಟ ಮಾಡಿದ್ದು ನೋಡಿ, ಅಯ್ತು ಬಿಡು ಸಲೂನ್ ಗೆ ಇನ್ನೊಮ್ಮೆ ಹೋದರಾಯಿತು ಎಂದು ತಲೆಗೂದಲನ್ನು ಬೆರಳಿನಿಂದ ಸವರಿಕೊಂಡು,ರಾಜಿ ಮಾಡಿಕೊಂಡೆ. ಅದಾದ ಎರಡು ದಿನದ ನಂತರ ಮತ್ತೆ ರಾತ್ರಿ ಪೀಠಿಕೆ ಹಾಕಿ “ಬೆಳಿಗ್ಗೆ ಕಾಫಿ ಬೇಗ ಕೊಡುತ್ತೀಯಾ ತಾನೇ” ಎಂದೆ. “ಸರಿ ಹೋಯ್ತು ನಿಮ್ಮನ್ನು ಕಟ್ಟಿಕೊಂಡು, ನಿಮಗೆ ಅಷ್ಟೂ ನೆನಪಿಲ್ಲವೇ” ಎಂದವಳೇ ತನ್ನ ಕಣ್ಣಲ್ಲಿ ಮುತ್ತಿನಂತಹ ಎರಡು ಕಣ್ಣೀರು ಹನಿ ಸುರಿಸಲು ಮುಂದಾದಳು. ನಾನು ಅವಾಕ್ಕಾಗಿ “ನಾಳೆ ಏನು, ನಿನ್ನ ತವರಿನವರು ಯಾರಾದ್ರೂ ಒಕ್ರಿಸ್ತಾರ?” ಎಂದು ಬಾಯಿ ತಪ್ಪಿ ಅಂದುಬಿಟ್ಟೆ. “ಒಕ್ರಿಸೋರು ನಮ್ಮ ಮನೆಯವರಲ್ಲ, ಅದೆಲ್ಲ ನಿಮ್ಮ ಕಡೆಯವರು”! “ಅಯ್ಯೋ sorry ಕಣೆ, ನಮ್ಮ ಮನೆಯವರು ಅನ್ನೋದನ್ನ ಬಾಯಿ ತಪ್ಪಿ ನಿಮ್ಮೋರು ಅಂದುಬಿಟ್ಟೆ” ಅಂತ ಸ್ವಲ್ಪ ನಾಟಕ ಆಡಿದ್ದು ಆಯಿತು. “ನಾಳೆಗೆ ನಿಮ್ಮನ್ನು ಕಟ್ಟಿಕೊಂಡು 40 ವರ್ಷ ಆಯಿತು, ನೆನಪಿದೆ ತಾನೇ”? ಎನ್ನುತ್ತಲೇ, ನಾನು “ಹೌದು, ನನಗೂ ನಾಳೆ ಖಂಡಿತ ನೆನಪು ಆಗುತ್ತಿತ್ತು ಎಂದು 40 ನೆಯ ಸಲ ಸುಳ್ಳು ಹೇಳಿದೆ. “ಸರಿ ಬೆಳಿಗ್ಗೆ ಇಬ್ಬರೂ ದೇವ ಸ್ಥಾನಕ್ಕೆ ಹೋಗಿ ಬರೋಣ, ನಿನ್ನ ಹೆಸರಲ್ಲಿ ಅಷ್ಟೋತ್ತರ ಪೂಜೆ ಮಾಡಿಸೋಣ”, ಎಂದಿದ್ದಕ್ಕೆ ಅವಳಿಗೆ ಕೊಂಚ ಸಮಾಧಾನ ಆದಂತೆ ತೋರಿತು. ಅಂತೂ ನನ್ನ ಸಲೂನ್ ಸವಾರಿ ಮತ್ತೆ ಮುಂದಕ್ಕೆ ಸರಿಯಿತು.
ಇದೆಲ್ಲ ಆದ ಮೇಲೆ ಮತ್ತೊಂದು ದಿನ ನನ್ನ ಸಲೂನ್ plan ಗೆ ಅವಳು “ರೀ ನಾಳೆ…ಹಬ್ಬ ಆಲ್ವಾ ನೀವು ಸಲೂನ್ ಗಿಲೂನ್ ಮಾತೆತ್ತಬೇಡಿ” ಎಂದು ಎಚ್ಚರಿಸಿದಳು. ಈ ಹಬ್ಬಗಳು ಹಿಂದಿ ಭಾಷೆಯಲ್ಲಿ ಹೇಳುವ ಹಾಗೆ “ವಾರ್ ಸಾತ್, ತ್ಯಾವ್ಹಾರ್ ಆಟ್ “ ಅಂದರೆ ಒಂದು ವಾರಗಳಲ್ಲಿ ದಿನಗಳು ಏಳು, ಆದರೆ ವಾರದಲ್ಲಿ ಬರುವ ಹಬ್ಬಗಳು ಎಂಟು! ಹಬ್ಬ ಇಲ್ಲದ ದಿನ ಯಾವುದು? ಇನ್ನು ಸಲೂನ್ಗಳು ಪ್ರತಿ ಮಂಗಳವಾರ ರಜೆ, ಮುಚ್ಚಿರುತ್ತವೆ. ಭಾನುವಾರ ಮತ್ತು ಎಲ್ಲಾ ರಜಾ ದಿನಗಳಲ್ಲಿ ಎಲ್ಲ ಸಲೂನಗಳಲ್ಲಿ ವಿಪರೀತ ಸಂದಣಿ. ಎಷ್ಟು ಬೇಗ ಹೋದರೂ ಸಲೂನ್ ನಲ್ಲಿ ಕುರ್ಚಿಗಳು ಆಗಲೇ ಭರ್ತಿ. ನನಗೋ ಸರತಿಯಲ್ಲಿ ಕಾಯುವುದು ಅಂದರೆ ತಲೆನೋವು! ಒಟ್ಟಾರೆ ವರ್ಷದಲ್ಲಿ, 12 ಅಮಾವಾಸ್ಯೆ, 52 ಮಂಗಳವಾರ 52 ಭಾನುವಾರ, ಲೆಕ್ಕವಿಲ್ಲದಷ್ಟು ಹಬ್ಬಗಳು, ಬರ್ತ್ ಡೇ,ಆನಿವರ್ಸರಿ ಡೇ, ಅತಿಥಿಗಳ ಆಗಮನ, ಹೀಗೆ ಎಲ್ಲವು ಒಟ್ಟುಗೂಡಿ 365 ಕ್ಕೂ ಹೆಚ್ಚು. ಆದರೆ ವರ್ಷದಲ್ಲಿ ಇರುವುದೋ 365 ದಿನಗಳು ಮಾತ್ರ! ಇನ್ನು ಸಲೂನ್ ಗೆ ಮುಹೂರ್ತ ಯಾವಾಗ? ನನ್ನ ತಲೆ ಆದಷ್ಟು ಬೇಗ ಬೋಳು ಆಗಬಾರದೆ ಎಂದು ಅಗಾಗ ಅನಿಸಿದ್ದೂ ಉಂಟು. ಸಲೂನ್ಗೆ ಕೊಡುವ ಹಣವೂ ಉಳಿದೀತು ಎಂಬ ಲೆಕ್ಕಾಚಾರ!
ಎಂದಿನಂತೆ ಒಂದು ದಿನ ಬೆಳಿಗ್ಗೆ ಅವಳು ಕೊಟ್ಟ ಫಿಲ್ಟರ್ ಕಾಫಿ ಹೀರುತ್ತಾ ಅವಳ ಕಡೆ ಓರೆ ನೋಟ ಬೀರಿದೆ. ಬಿಸಿ ಬಿಸಿ ಕಾಫಿ ಸವಿಯುವಾಗ, ನ್ಯೂಸ್ ಪೇಪರ್ನಲ್ಲಿನ ಬಿಸಿ ಬಿಸಿ ಸುದ್ದಿ ಓದುವುದು ನನ್ನ ಒಂದು ಹಾಬಿ. ನ್ಯೂಸ್ ಪೇಪರ್ ತುದಿಯಿಂದ ಅವಳ ಕಡೆಗೆ ನಾನು ಕಳ್ಳ ನೋಟ ಬೀರಿದ್ದನ್ನು ಗಮನಿಸಿ, “ಆಯ್ತಲ್ಲ ಕಾಫಿ ಸಮಾರಾಧನೆ, ಏಳಿ ವಾಕ್ ಹೊರಡಿ” ಎಂದು ಆಜ್ಞಾಪಿಸಿದಳು. ನನ್ನ ಬಗ್ಗೆ ಅವಳಿಗೆ ಇರುವ ಒಂದೇ ಕಾಳಜಿ ಎಂದರೆ ನನ್ನ ಆರೋಗ್ಯದ ಬಗ್ಗೆ. ನಾನು ಮುಂಜಾನೆ ವಾಯು ವಿಹಾರ ತಪ್ಪಿಸುವಂತಿಲ್ಲ.
“ಓಕೆ ಇದೋ ಹೊರಟೆ ” ಎಂದು ಕುರ್ಚಿಯಿಂದ ಛಂಗನೆ ಮೇಲೆದ್ದು ಕಾಲ್ಕಿತ್ತೆ. ವಾಕಿಂಗ್ ಮಾಡುತ್ತಾ ಮಾಡುತ್ತಾ ಸೀದಾ ಸಲೂನ್ ಸೇರಿದೆ. ಕೇಶ ವಿನ್ಯಾಸ ಆದ ಮೇಲೆ ಮನೆಗೆ ಸೇರಲು ಎಂದಿಗಿಂತ ತಡವಾಗಿತ್ತು. “ಯಾಕೆ ಇಷ್ಟು ಲೇಟ್.. “ ಎಂದು ಎನನ್ನೋ ಹೇಳಲು ಹೋದ ನನ್ನ ಪತ್ನಿ “ಹಾಂ ನೀವು ಬೆಳಿಗ್ಗೆ ಕಾಫಿ ಸವಿಯುವಾಗ ಬೀರಿದ ವಕ್ರ ನೋಟ ಯಾಕೆಂದು ಈಗ ಗೊತ್ತಾಯ್ತು !” ಎಂದು ನನ್ನ ತಲೆಯಲ್ಲಿ ಉಳಿದ ಅಲ್ಪ ಸ್ವಲ್ಪ ಕೂದಲನ್ನೇ ದಿಟ್ಟಿಸಿ ಹೇಳಿದಳು. ನಾನು ಹುಸಿ ನಕ್ಕು “ಒಂದು ಲೋಟ ಬಿಸಿ ಬಿಸಿ ಕಾಫಿ!” ಎಂದು ಅದೇನೋ ಇಂಗ್ಲಿಷ್ ನಲ್ಲಿ ‘ಸೆಕೆಂಡ್ ಸರ್ವಿನ್ಗ್’ ಅಂತಾರಲ್ಲ ಹಾಗೆ ಅಂಗಲಾಚಿದೆ. “ಮೊದಲು ನಡೆಯಿರಿ ಸ್ನಾನಕ್ಕೆ, ಕಾಫಿ ಗೀಫಿ ಎಲ್ಲ ಆಮೇಲೆ” ಎಂದು ಅಪ್ಪಣೆ ಮಾಡಿದಳು. ನಾನು ನನ್ನ ತಲೆ ಸವರಿ ಕೊಳ್ಳುತ್ತಾ ವಿಜಯದ ನಗೆ ಬೀರುತ್ತಾ ಬಚ್ಚಲು ಮನೆ ಒಳಗೆ ಸೇರಿ “ಟವೆಲ್ please” ಎಂದು ಕೂಗಿ ಕೇಳಿದೆ.
ಲಕ್ಷ್ಮಣ್ ಗೊರ್ಲಕಟ್ಟೆ ಅವರ ಹಳೆ ಲೇಖನಗಳು :
- ಲಕ್ಷ್ಮಣ್ ಗೊರ್ಲಕಟ್ಟೆ – ಮೈಸೂರು.
