ರೀ ಸ್ವಲ್ಪ ಬನ್ನಿ ಇಲ್ಲಿ ! ಸಣ್ಣಕತೆ

ಒಂದು ಗಿಡ ಮನುಷ್ಯನ ಉಸಿರನ್ನು ಜೀವಂತವಾಗಿಸುತ್ತದೆ ಎನ್ನುವ ಕತೆ ‘ರೀ ಸ್ವಲ್ಪ ಬನ್ನಿ ಇಲ್ಲಿ’ ಕತೆಗಾರರರಾದ ಲಕ್ಷ್ಮಣ ಗೊರ್ಲಕಟ್ಟೆ ಅವರ ಸಣ್ಣಕತೆಯನ್ನು ಪೂರ್ತಿಯಾಗಿ ಓದಿ…

ನನ್ನ ಶ್ರೀಮತಿ “ರೀ ಸ್ವಲ್ಪ ಬನ್ನಿ ಇಲ್ಲಿ” ಎಂದು ಕರೆದಳು.

ನಿತ್ಯವೂ ಮುಂಜಾನೆ ನಾನು ನನ್ನ ಶ್ರೀಮತಿ ವಾಯು ವಿಹಾರಕ್ಕೆ ತಪ್ಪದೆ ಹೋಗುವುದು ವಾಡಿಕೆ. ಹೊರಡುವಾಗ ಇಬ್ಬರೂ ಒಟ್ಟಿಗೆ ಹೋರಟರೂ ನನ್ನದು ದಾಪುಗಾಲು (ಹಾಗಂತ ಅವಳು ಅಂಬೋಣ ) ಆದ್ದರಿಂದ ಅವಳನ್ನು ಹಿಂದಿಕ್ಕಿ ನಾನು ಮುಂದೆ ಸಾಗುವುದು, ನಾನು ಮತ್ತೆ ನಿಂತು ಅವಳು ನನ್ನ ಜೊತೆ ಸೇರುವುದು, ಮತ್ತೆ ಪುನಃ ನಾನು ಮುಂದಾಗುವುದು, ನಿಂತು ಅವಳು ಬರುವವರೆಗೂ ಕಾಯುವುದು ವಾಡಿಕೆ.

ಹಾಂ ನಾನು ಹೇಳಲು ಹೊರಟಿದ್ದು ನನ್ನ ಶ್ರೀಮತಿ ರೀ ಬನ್ನಿ ಇಲ್ಲಿ ಎಂದು ಕರೆದಳು ಎಂದಲ್ಲವೇ? ಅವಳು ನನ್ನನ್ನು ಹಿಂದೆ ಬರುವಂತೆ ಹೇಳಿದ್ದು ಕೇಳಿ ಮುಖ ಸಿಂಡರಿಸಿಕೊಂಡು ಹಿಂದೆ ಹೋಗಿ “ಯಾಕೆ ಏನಾಯ್ತು” ಎಂದದ್ದಕ್ಕೆ ಅವಳು “ರೀ ಅಲ್ಲಿ ನೋಡಿ, ರಸ್ತೆ ಬದಿಯ ಗಿಡದಲ್ಲಿ” ಎಂದು ಬೊಟ್ಟು ಮಾಡಿ ತೋರಿಸಿದಳು. ನಾನು ಇಷ್ಟವಿಲ್ಲದೆ ಅವಳು ಬೆಟ್ಟು ಮಾಡಿ ತೋರಿದ ಗಿಡ ನೋಡಿ “ಅಯ್ಯೋ ಆ ಮುಳ್ಳು ಗಿಡ, ಅದರಲ್ಲೇನು ಹಾವು ಕಾಣಿಸಿತೇನು” ಎಂದು ಮೂದಲಿಸಿ ಮತ್ತೆ ತಿರುಗಿ ಹೊರಟೆ. ಈಗ ಅವಳು ನನ್ನ ಕೈ ಹಿಡಿದು ತಡೆದು “ತಮಾಷೆ ಗಿಮಾಷೆ ಬೇಡ, ನೋಡಿ ಆ ಗಿಡದ ಒಳಗೆ ಎಷ್ಟು ಚೆಂದದ ಹೂವು” “ರೀ please ನನಗೆ ಆ ಹೂವಿನ ಬಳ್ಳಿ ಬೇಕು, ನಮ್ಮ ಮನೆ ಅಂಗಳದಲ್ಲಿ ನೆಡಬೇಕು, ಅದನ್ನು ಕೀಳಿ ತನ್ನಿ ಅಂದ್ರೆ” ಎಂದು ದುಂಬಾಲು ಬಿದ್ದಳು.

ಅವಳ ಬೇಡಿಕೊಂಡ ಪರಿ ಮಹಾಭಾರತದಲ್ಲಿ ದ್ರೌಪದಿ ಸೌಗಂಧಿಕ ಪುಷ್ಪ ಬೇಕೆಂದು ಭೀಮನ ಬಳಿ ಅಂಗಲಾಚಿದ್ದು ನೆನಪಾಯಿತು. ಸರಿ ಎಂದವನೇ ಆ ಮುಳ್ಳಿನ ಗಿಡದ ಒಳಗೆ ಇದ್ದ ಹೂ ಬಳ್ಳಿಗೆ ಕಣ್ಣು ಹಾಯಿಸಿದೆ. ಅದನ್ನು ಕೀಳಲು ಸರಿಸುಮಾರು ಎರಡು ಅಡಿಗೂ ಹೆಚ್ಚು ಅಗಲದ ಕೆಸರು ತುಂಬಿದ ಚರಂಡಿ ಯನ್ನು ದಾಟಬೇಕಿತ್ತು. ಹಿಂದಿನ ರಾತ್ರಿ ಮುಂಗಾರು ಮಳೆ ಜೋರಾಗಿ ಬಿದ್ದು ಚರಂಡಿ ಕೆಸರು ರಾಡಿ ಆಗಿತ್ತು. ಇದೂ ಅಲ್ಲದೆ ಹೂ ಬಳ್ಳಿಯ ರಕ್ಷಣೆಗೋ ಎಂಬಂತೆ ಮೈತುಂಬಾ ಚೂಪಾದ ಮುಳ್ಳನ್ನು ಹೊದ್ದು ಕೈ ಇಟ್ಟರೆ ಜೋಕೆ ಎಂಬಂತೆ ಮುಳ್ಳಿನ ಗಿಡ ನನ್ನನ್ನು ಅಣಕಿಸುವಂತೆ ಚಾಚಿಕೊಂಡಿತ್ತು. ನನಗೆ ಆಗ ಅರಿವಾಯಿತು ಹೂ ಬಳ್ಳಿ ಕೀಳುವುದು ಹೂವಿನಷ್ಟು ಹಗುರವಲ್ಲ ಎಂದು. ನನ್ನವಳು ನನ್ನನ್ನು ಕರೆದದ್ದು ಯಾಕೆ ಎಂದು!
ನನ್ನವಳದೊಂದು ಚಿಕ್ಕ ಬೇಡಿಕೆ ಅದಕ್ಕೆ ಒಂದು ಕಾಸೂ ಖರ್ಚಿಲ್ಲ. ಚಿನ್ನದ ಒಡವೆ ಅಥವಾ ಜರತಾರೀ ಸೀರೆ ಬೇಡಿದ್ದರೆ ನನಗೆ ಬರುವ ಕಿಂಚಿತ್ ಪಿಂಚಣಿಯಿಂದ ಪೂರೈಸಲು ಸಾಧ್ಯವಿಲ್ಲ ಎಂದು ಅಂದುಕೊಂಡು ಮುಂದೆ ಹೆಜ್ಜೆ ಇಟ್ಟೆ.

ಏಳು ದಶಕ ದಾಟಿದರೂ ಯುವಕನಂತೆ ಚರಂಡಿ ದಾಟಲು ಅಥವಾ ಜಿಗಿಯಲು ನೋಡಿದೆ. ನನ್ನ ಜಿಗಿಯುವ ಹವಣಿಕೆ ನೋಡಿ ನನ್ನವಳು “ರೀ ಬೇಡ ಬಿಡಿ, ನಿಮಗೆ ಆಗದಿದ್ದರೆ” ಎಂದು ಎಚ್ಚರಿಸಿದಳು. ಅದನ್ನು ಒಂದು ಸವಾಲಾಗಿಯೇ ಸ್ವೀಕರಿಸಿ ಒಂದು ಕಾಲು ಚಾಚಿ ಚರಂಡಿಯ ಆಚೆ ಇಟ್ಟೆ. ಸ್ವಲ್ಪ ಬಾಗಿ ನನ್ನ ಉದ್ದ ಕೈ ಸ್ವಲ್ಪ ಬಾಗಿಸಿ ಕೈ ಚಾಚಿ ಗಿಡದೊಳಗೆ ಇಡುತ್ತಿದಂತೆಯೇ ಚೂಪಾದ ಮುಳ್ಳುಗಳು ಚುಚ್ಚಿ ಕೈ ಗಾಯ ವಾದರೂ ಲೆಕ್ಕಿಸದೆ ಹೂ ಬಳ್ಳಿಯನ್ನು ಪ್ರಯಾಸಪಟ್ಟು ಕಿತ್ತೆ. ನನ್ನವಳು ಓಡಿ ಬಂದು ನನ್ನ ಕೈ ಹಿಡಿದು ಚರಂಡಿಯಿಂದ ಆಚೆ ಬರಲು ಸಹಾಯ ಹಸ್ತ ನೀಡಿದಳು. ಹೂ ಬಳ್ಳಿ ಅವಳ ಕೈಗೆ ಇಡುತ್ತಿದ್ದಂತೆಯೇ “ ತುಂಬಾ thanks” ಎಂದು ಬೆನ್ನು ತಟ್ಟಿ “ಬನ್ನಿ ಮನೆಗೆ ಹೋಗೋಣ, ಈ ಬಳ್ಳಿಯನ್ನು ಮನೆಯ ತೋಟದಲ್ಲಿ ನೆಡಬೇಕು” ಎಂದು ವಾಯು ವಿಹಾರಕ್ಕೆ ಬ್ರೇಕ್ ಹಾಕಿ ನನಗೂ ಬರುವಂತೆ ಸನ್ನೆ ಮಾಡಿ ಹೊರಟೆಯೇ ಬಿಟ್ಟಳು. “ ಸರಿ, ಹೋಗೋಣ” ಎನ್ನುತ್ತಾ ಅವಳನ್ನು ಹಿಂಬಾಲಿಸಿದೆ. ಅದು ಹೇಗೋ ಅವಳು ಎಂದಿಗಿಂತ ಜೋರಾಗಿ ನನ್ನನ್ನೂ ಹಿಂದಿಕ್ಕಿ ಮನೆ ತಲುಪಿದಳು. ನಾನು ಮನಸ್ಸಿನಲ್ಲಿಯೇ ‘ಹೂವೊಂದು ಬಳಿ ಬಂದು ತಾಕಿತು ಎನ್ನೆದೆಯಾ, ಏನೆಂದು ಕೇಳಲು, ಹೇಳಿತು ಜೇನಂತ ಸಿಹಿ ನುಡಿಯ’ ಎಂಬ ಸಿನಿಮಾ ಹಾಡನ್ನು ಗುಣಿಗುಣಿಸುತ್ತ ಅವಳ ಹಿಂದೆಯೇ ಮನೆ ಸೇರಿದೆ.

ಇದೀಗ ಆ ಹೂ ಬಳ್ಳಿಯನ್ನು ನೆಡಲು ನನ್ನ ಮೊಮ್ಮಗನನ್ನೂ ಜೊತೆಗೆ ಸೇರಿಸಿಕೊಂಡು ಖುಷಿ ಖುಷಿಯಿಂದ ನೆಟ್ಟು ಅದಕ್ಕೆ ನೀರುಣಿಸಿ ಒಳಗೆ ಬಂದವಳೇ “ರೀ ನಿಮಗೆ ಗೊತ್ತಾ”? ಎಂದವಳೇ ನಾನು ತೋರಿದ ನಿರುತ್ಸಾಹವನ್ನು ನಿರ್ಲಕ್ಷಿಸಿ “ಅದು ಶಂಖ ಪುಷ್ಪ. ಚೆಂದ ಚೆಂದದ ಹೂವುಗಳು, ಆಯುರ್ವೇದದಲ್ಲಿ ತುಂಬಾನೇ ಒಳ್ಳೆ ಔಷಧಿ ಕೂಡ”! ಅದಕ್ಕೂ ನಾನು ತೋರಿದ ಉದಾಸೀನ ನೋಡಿ “ಅಯ್ಯೋ, ಕೋಣನ ಮುಂದೆ ಕಿನ್ನರಿ ಬಾರಿಸಿದ ಹಾಗೆ” ಎಂದು ಅಣಕವಾಡಿ ಅಡುಗೆ ಮನೆ ಸೇರಿದಳು. “ಏನೂ ಏನಂದೆ” ಎಂದು ಗಟ್ಟಿ ಧ್ವನಿಯಲ್ಲಿ ನಾನು ಗದರಿದ್ದು ಕೇಳಿ, ಕೇಳಿಯೂ ಕೇಳದಂತೆ ನಟನೆ ಮಾಡಿದಳು ಎಂದು ಅನುಮಾನ ಆಯಿತು. ಸರಿ ನಾನೂ ಸಹ ಕೇಳಿಲ್ಲ ಎಂದು ನಟಿಸುವುದೇ ಒಳ್ಳೆಯದು ಎಂದುಕೊಂಡು, ಕೋಣ ಎನಿಸಿಕೊಳ್ಳಲು ಒಪ್ಪದೇ ಸುಮ್ಮನಾದೆ.

ಒಂದೆರಡು ದಿನಗಳಲ್ಲಿ ಬಳ್ಳಿ ಬೆಳೆದು ಎದೆ ಎತ್ತರ ಬೆಳೆದು ಹೂವುಗಳು ದಂಡಿಯಾಗಿ ಬಿಡತೊಡಗಿದವು. ಅಜ್ಜಿ ಮೊಮ್ಮಗ ಇವರ ಸಂಭ್ರಮವೋ ಸಂಭ್ರಮ. ನಾನೂ ಸಹ ಪದೇ ಪದೇ ಮನೆಯ ಒಳಗಡೆ ಕಿಟಕಿಯಿಂದಲೇ ಆ ಹೂವುಗಳನ್ನು ನೋಡಿ ನೋಡಿ ಒಳಗೊಳಗೇ ಖುಷಿ ಪಟ್ಟೆ. ಅದರೆ ಅಭಿಮಾನ ಧಕ್ಕೆ ಆಗುವುದೆಂದು ಹೊರಗೆ ತೊರ್ಪಡಿಸಲಿಲ್ಲ.

ಇದಾದ ಕೆಲವೇ ದಿನಗಳಲ್ಲಿ ಕೋವಿಡ್ ಮಹಾಮಾರಿ ನನಗೂ ಮತ್ತು ನನ್ನವಳಿಗೂ ಬಂದು ಅಪ್ಪಳಿಸಿತು. ಇಬ್ಬರೂ ಒಟ್ಟಿಗೆ ಒಂದೇ ಆಸ್ಪತ್ರೆಯ ವಾರ್ಡ್ ನಲ್ಲಿ ದಾಖಲಾಗಬೇಕಾಗಿ ಬಂತು. ಎಲ್ಲಾ ಕಡೆ ಮೃತ್ಯು ದೇವತೆ ನರ್ತನ ಸಾಲು ಸಾಲು ಮರಣಗಳು. ನಾಲ್ಕು ದಿನಗಳ ನಂತರ ನನ್ನ ಪತ್ನಿಯ ಅರೋಗ್ಯ ಏರುಪೇರಾಗಲು ಅವಳನ್ನು I C U (Intensive Care Unit) ಗೆ ತಳ್ಳು ಖುರ್ಚಿಯಲ್ಲಿ ಕರೆದುಕೊಂಡು ಹೋದರು. ಆ ದೃಶ್ಯ ನೋಡಲು ನನ್ನ ಹೃದಯ ಬಾಯಿಗೆ ಬಂದಂತೆ ಅನಿಸಿತು. ಈಗ ವಾರ್ಡ್ ನಲ್ಲಿ ನಾನೊಬ್ಬನೇ ಒಬ್ಬಂಟಿಯಾದೆ. ನಂತರದ ಎರಡು ದಿನಗಳಲ್ಲಿ ನಾನು ಸಂಪೂರ್ಣ ಗುಣಮುಖನಾದೆ. ನನ್ನ ಶ್ರೀಮತಿ ಗುಣಮುಖವಾಗುವವರೆಗೂ ನಾನು ವಾರ್ಡ್ ನಲ್ಲಿಯೇ ಮುಂದುವರೆಯುತ್ತೇನೆ ಎಂದು ಅಂಗಲಾಚ್ಚಿದರೂ ಸಹ, ನನ್ನ ಚಿಕಿತ್ಸೆ ಮಾಡಿದ ಡಾಕ್ಟರ್ ನನ್ನನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿದರು. ನನ್ನ ವ್ಯಾಕುಲ ಮನಸ್ಥಿತಿ ನೋಡಿಯೊ ಏನೋ, ನನ್ನ ಪತ್ನಿಯನ್ನು ನೋಡಲು ICU ವಾರ್ಡ್ ಗೆ ಹೋಗಲು ಅನುಮತಿಸಿದರು. ಉದ್ವೇಗದಿಂದ ICU ವಾರ್ಡ್ ಒಳಗೆ ಹೋಗಿ ನೋಡಲಾಗಿ ನನ್ನ ಪತ್ನಿ ಕಣ್ಣು ಮುಚ್ಚಿ ನಿದ್ರಿಸುವಂತೆ ತೋರಿತು. ಅವಳ ಬಾಯಿಗೆ ಗಟ್ಟಿಯಾಗಿ ventilator ಅಳವಡಿಸಿ, ಅವಳ ಎದೆ, ಕೈ ಕಾಲುಗಳಿಗೆ ಕೇಬಲ್ ಗಳನ್ನು ಹಾಕಿ ಯಾವುದೊ ಒಂದು ವೈದ್ಯಕೀಯ ಸಾಧನಕ್ಕೆ ಅಳವಡಿಸಿದ್ದರು. ಏನೋ ಒಂದು ಬಗೆಯ ಭಯ ಹುಟ್ಟಿಸುವ ರೀತಿ ಆ ‘ಮಷೀನ್’ ನಿಂದ ಶಬ್ದ ಬರುತ್ತಿತ್ತು. ನಾನು ಬಗ್ಗಿ ಪತ್ನಿಗೆ ಕಿವಿಯಲ್ಲಿ ಏನೋ ಹೇಳಲು ಪ್ರಯತ್ನಿಸಿದ್ದನ್ನು ನೋಡಿ ಅಲ್ಲಿ ಇದ್ದ ನರ್ಸ್ ‘ಬೇಡ, ಬೇಡ’ ಎಂದು ಕೈ ಸನ್ನೆ ಮಾಡಿದಳು. ನನ್ನ ಕೈಯನ್ನು ಹೆಂಡತಿಯ ಹಣೆಯ ಮೇಲೆ ಇಟ್ಟು ಹಾಗೆ ನಿಂತೆ. ಮತ್ತೊಮ್ಮೆ ನರ್ಸ್ ಹೊರಡುವಂತೆ ಸೂಚಿಸಿದಾಗ ಉಪಾಯವಿಲ್ಲದೆ ತಿರುಗಿ ಹೊರಟು ಬಾಗಿಲ ಬಳಿ ಬಂದಾಗ ಮತ್ತೊಮ್ಮೆ ತಿರುಗಿ ನೋಡಿ ಭಾರವಾದ ಹೆಜ್ಜೆ ಹೊರಗೆ ಇಟ್ಟೆ.

ನಾನು ಮನೆಗೆ ಮರಳಿ ಬಂದ ಎರಡು ದಿನಗಳ ತರುವಾಯ ಆಸ್ಪತ್ರೆಯಿಂದ ನನ್ನ ಪತ್ನಿಯನ್ನು ನೋಡಲು ಫೋನ್ ಬಂತು. ಕೋವಿಡ್ ರೋಗಿಗಳ ಆಸ್ಪತ್ರೆಗೆ ಭೇಟಿ ನಿಶಿದ್ಧವಿದ್ದರೂ ನನಗೆ ಬರುವಂತೆ ಕರೆ ಬಂದದ್ದು ವಿಚಿತ್ರ, ಸಂದೇಹಾಸ್ಪದ ಎನಿಸಿತು. ಆಸ್ಪತ್ರೆಗೆ ಧಾವಿಸಿ ಹೋಗಲು ಸ್ವಾಗತಕಾರಿಣಿ ಒಬ್ಬರು “ನಿಮ್ಮ ಪತ್ನಿಗೆ ಸಾಧವಿದ್ದಷ್ಟು ಚೆನ್ನಾದ ಚಿಕಿತ್ಸೆ ನೀಡಿದ್ದೇವೆ..” ಎನ್ನಲು ನನ್ನ ಕುತೂಹಲಕಾರಿ ಮುಖಭಾವವನ್ನು ನೋಡಿ ಮೆಲುದನಿಯಲ್ಲಿ ಹೇಳಿದ್ದು “ ಎಷ್ಟೇ ಪ್ರಯತ್ನ ಪಟ್ಟರೂ ಅವರನ್ನು ಉಳಿಸಿಕೊಳ್ಳಲು ಆಗಲಿಲ್ಲ. She is no more ಎಂದಳು.
ಇತ್ತ ಅವಳು ನೆಟ್ಟಿದ್ದ ಹೂವು ಬಳ್ಳಿಯೂ ಒಣಗಿ ಹೋಗಿತ್ತು.

ವರ್ಷ ಕಳೆದು ಮತ್ತೆ ಮಳೆಗಾಲ ಬಂತು. ಒಂದು ದಿನ ನನ್ನ ಮೊಮ್ಮಗ ನನ್ನ ಬಳಿ ಓಡೋಡಿ ಬಂದು ತಾತಾ ತಾತಾ ಬನ್ನಿ ಬನ್ನಿ ಎಂದು ನನ್ನ ಕೈ ಹಿಡಿದು ನಮ್ಮ ಮನೆಯ ಕೈ ತೋಟಕ್ಕೆ ಕರೆದೊಯ್ದ. “ತಾತಾ ತಾತಾ ಅಲ್ಲಿ ನೋಡಿ, ಶಂಖ ಪುಷ್ಪ! ಅಜ್ಜಿ ನಾನು ನೆಟ್ಟಿದ್ದು!” ಎಂದು ಅವನು ತೋರಿಸಿದ ಗಿಡ ನೋಡಿ ನನಗೂ ಆಶ್ಚರ್ಯ. ಒಣಗಿ ಹೋಗಿದ್ದ ಶಂಖ ಪುಷ್ಪ ಬಳ್ಳಿ ಚಿಗುರಿ ಒಂದು ಹೂವು ಅರಳಿ ನಿಂತಿದೆ! ಮೊಮ್ಮಗ ಆ ಹೂವನ್ನು ಕಿತ್ತು ತಂದು “ಅಜ್ಜೀ ಅಜ್ಜಿ ನಿಮ್ಮ ಶಂಖ ಪುಷ್ಪ ಇದೋ ” ಎಂದು ಹೇಳುತ್ತಾ ನನ್ನ ಶ್ರೀಮತಿ ಪೋಟೋ ಮುಂದೆ ಇಟ್ಟು ನಮಸ್ಕರಿಸಿ ನಿಂತ.

ನಾನು ವಿಸ್ಮಿತನಾಗಿ ಶ್ರೀಮತಿ ಪೋಟೋ ನೋಡುತ್ತಾ ನಿಂತೆ. ಆಗ ನನ್ನ ಕಿವಿಯಲ್ಲಿ ಒಂದು ಮೆಲ್ಲನೆ ಧ್ವನಿ “ರೀ ಸ್ವಲ್ಪ ಬನ್ನಿ ಇಲ್ಲಿ”! ಎಂದು ಕೇಳಿಸಿತು.


  • ಲಕ್ಷ್ಮಣ ಗೊರ್ಲಕಟ್ಟೆ – 

Leave a Reply

Home
Search
Menu
Recent
About
×